ಕುರು

ವಿಕಿಪೀಡಿಯ ಇಂದ
Jump to navigation Jump to search

ಕುರು ಎಂದರೆ ಕೀವಿನ ಸ್ಥಳಿಕ ಶೇಖರಣೆಯಿಂದ ಆಗುವ ಗುಳ್ಳೆ. ಗಾತ್ರದಲ್ಲಿ ಸಣ್ಣವಾದ ಕೀವು ಕುರುವಿಗೆ ಕೀವುಗುಳ್ಳೆ (ಪೂಶ್ಚೂಲ್) ಎನ್ನುತ್ತಾರೆ. ತೀರ ಆಳವಾಗಿ ಹಾಳುಗೆಡಿಸುವ ಹಲಕಡೆ ತೂತುಗಳಾಗಿ ಹರಡಿರುವುದು ರಾಜಕುರು (ಕಾರ್ಬಂಕಲ್), ಎಲ್ಲೆಲ್ಲೂ ಹರಡಿದಂತೆ ಕೀವಾಡುವುದು ವಿಸರ್ಪಿ (ಎರಿಸಿಪೆಲಾಸ್). ಚರ್ಮದ ವಿಸರ್ಪಿ, ಅಳಿಗೊಳಿಪಿನ (ಗ್ಯಾಂಗ್ರೀನಸ್) ವಿಸರ್ಪಿಗಳು ಉದಾಹರಣೆಗಳು. ಕೊದಲಿನ ಕೋಶಿಕಗಳ (ಪಾಲಿಕಲ್ಸ್) ಬೆವರು ಗ್ರಂಥಿಗಳ ಸೋಂಕಿನಿಂದ, ಕೀವುಗುಳ್ಳೆಯಂತಿರುವ ಮಿಟ್ಟೆದದ್ದು (ಪ್ಯಾಷ್ಯೂಲ್) ಎದ್ದಿರುವುದಕ್ಕೆ ಮೊಡವೆ ಅಥವಾ ಕಜ್ಜಿ (ಅಕ್ನಿ) ಎಂದು ಹೆಸರು. ಕುರು ಮೇಲ್ಮೇಲೊ ಆಳವಾಗೋ ಕೂರಾಗೋ ಬೀರೂರಿಯೇ ಇರಬಹುದು.

ಕೂರಾದ ಕೀವುಕುರು: ಬೇಗನೆ ರೂಪಗೊಂಡು, ಒಂದೆರಡು ದಿನಗಳಲ್ಲಿ ಮೂತಿತೋರಿ ಕೊನೆಗೆ ಒಡೆಯಬಹುದು. ಇಲ್ಲವೇ ಹಾಗೆಯೇ ಇಂಗಿ ಹೋಗಬಹುದು. ಸಾಮಾನ್ಯವಾಗಿ ಇದು ವಾಸಿಯಾಗಲು 7-10 ದಿವಸಗಳು ಹಿಡಿಯುವುವು. ಇದು ಎದ್ದಾಗ ಬಿಸಿ, ನೋವು, ಕೆಂಪೇರಿಕೆ, ಹೊಳಪಿನ ಊದು, ಕೆಲವೇಳೆ ತುಸು ಜ್ವರ ಇರುವುವು.

ಕಾರಣಗಳು : ಏಕಾಣುಜೀವಿ ಸೋಂಕುಗಳು ನೇರವಾದ ಕಾರಣಗಳು. ಗುತ್ತಿಕಾಯ್ಜೀವಿ (ಸ್ಟೆಫೈಲೊಕಾಕಸ್), ಸರಕಾಯ್ಜೀವಿ (ಸ್ಟ್ರೆಪ್ಟೊಕಾಕಸ್), ಕೀವುಜನಕ ಕದಿರುಜೀವಿ (ಕ್ಲಾಸ್ಟ್ರಡಿಯಂ ಪಯೊಜಿನಸ್), ಕ್ಷಯದ ಅಣಬೆ ಏಕಾಣುಜೀವಿ (ಮೈಕೋಬ್ಯಾಕ್ಟೀರಿಯಂ) ಉದಾರಣೆಗಳು. ಇವಲ್ಲದೆ ಮುಳ್ಳುಸಿಬರು, ಲೋಹಹ ಚೂರುಗಳು ಬಂದೂಕಿನ ಗುಂಡುಗಳು, ಇತ್ಯಾದಿ ಊತಕದಲ್ಲಿ ಸೇರಿಕೊಂಡು ಕೆರಳಿಸಬಹುದು. ಅದೇ ಹೊತ್ತಿನಲ್ಲಿ ಪ್ರಾಣಿಯ ಬಲುಗುಂದಿಕೆ, ಒಂದು ಅಂಗದಲ್ಲಿ ಊತಕದ ಬಲಗುಂದಿರುವುದು. ಮೈಯ ಸೋಂಕು ತಡೆವ ಬಲದೆದುರಾಗಿ ನೆಲೆಯೂರುವಷ್ಟು ಏಕಾಣುಜೀವಿಗಳು ಇರುವಿಕೆ. ಕೆಲವೇಳೆ ಕೀವುಗೂಡಿಸುವ ಜೀವಾಣುಗಳಿಂದ ಸೋಂಕುಹತ್ತುವಂತೆ ಗೊತ್ತಾದ ವಿಷಕಣಗಳು ಮಾಡುವುದೂ ಕೀವುಕುರುಗಳು ಏಳಲು ನೆರವಾಗುತ್ತವೆ.

ಸಾಮಾನ್ಯವಾಗಿ, ಗಾಯ ಬಲಗುಂದಿದ ಇಲ್ಲವೇ ಉರಿತವಾದ ಧರ್ಮ, ಬೆವರಿನ ಗ್ರಂಥಿ ಇಲ್ಲವೇ ಹೊರಗಣ ಪರಿಸರದೊಂದಿಗೆ ನಿಕಟವಾಗಿ ತಾಕುವ ಉಸಿರಾಟದ, ಜಠರಕರುಳಿನ ನಾಳಿಯ (ಟ್ರಾಕ್ಸ್) ಬಲಗುಂದಿದ ಲೋಳೆಪೊರೆಗಳ ಮೂಲಕ ಕೀವುಕುರು ಏಳಿಸುವ ಏಕಾಣುಜೀವಿಗಳು ಮೈ ಒಳಹೊಗುತ್ತವೆ. ಒಳನಯಗ್ಗಿದ ಏಕಾಣುಜೀವಿಗಳನ್ನು ಮೇಲಿಂದ ಮೇಲೆ ಬಿಳಿಯ ರಕ್ತಕಣಗಳೂ ರೋಧವಸ್ತುಗಳೂ (ಆಂಟಿ ಬಾಡೀಸ್) ಹಾಳುಮಾಡುತ್ತವೆ. ಕೆಲವೇಳೆ ದುರ್ಬಲವಾಗಿ ರೋಗ ತಡೆವ ಬಲಗುಂದಿರುವ ಊತಕದಲ್ಲಿ ಏಕಾಣುಜೀವಿಗಳು ತಳವೂರುತ್ತವೆ. ಹೀಗೆ ನೆಲೆಸಿದ ಸೋಂಕಿನ ಪದಾರ್ಥದ ಬಿಳಿಯ ರಕ್ತಕಣಗಳ ನಡುವೆ ಜರುಗುವ ಕದನದಲ್ಲಿ ಏಕಾಣುಜೀವಿಗಳೂ ಬಿಳಿಯ ರಕ್ತಕಣಗಳೂಸಾಯುತ್ತವೆ. ಜೀವಿವಿಷಗಳಿಂದ (ಟಾಕ್ಸಿನ್ಸ್) ಸತ್ತ ಊತಕಗಳು ಹಾಳಾದ ಬಿಳಿಯ ರಕ್ತರಸದಲ್ಲಿ (ಪ್ಲಾಸ್ಮ) ಬೆಳ್ಳಗೆ ಹಾಲಿನಂತಿರುವುದು. ಅದೇ ಕೀವು. ಕೀವುಗೂಳಿಕ ಜೀವಾಣು ಬೇರೆಡೆಗೆ ಪಸರಿಸದಂತೆ ಕೀವಿನ ಸುತ್ತಲೂ ಬಿಳಿಯ ರಕ್ತಕಣಗಳ ದಪ್ಪ ಪದರು ತಡೆಗಟ್ಟುತ್ತದೆ. ಹೀಗೆ ಸರಾಗವಾಗಿ ಹಬ್ಬಿಕೊಳ್ಳುತ್ತದೆ. ಒಳಗಿರುವ ಕೀವುಕುರು ಚರ್ಮದ ಮೇಲೆಮೂತಿ ತೋರಿ ಆಮೇಲೆ ಒಡೆದು ಕೀವು ಸುರಿಸುವುದೂ ಹೀಗೇ. ಬೆಚ್ಚಾರ (ಪೋಲ್ಟೀಸ್) ಕೊಡುವುದರಿಂದ ಬೇಗ ಗುಣವಾಗಬಹುದು.

ಲಕ್ಷಣಗಳು : ಕೀವುಕುರು ಎದ್ದಕಡೆ ಮುಖ್ಯವಾಗಿ ಕೆಂಪಗೆ ಉಬ್ಬಿರುವುದು, ಮುಟ್ಟಿದರೆ ಬೆಚ್ಚಗಿರುವುದು, ಒತ್ತಿದರೆ ನೋವು ಕಾಣುವುದು, ಅಲ್ಲದೆ ಮೈಯಲ್ಲಿ ಕೊಂಚ ಜ್ವರ ಇರಬಹುದು. ಇದು ಒಡೆದುಕೊಳ್ಳುವ ಕಡೆ ಒತ್ತಿದರೆ ಒಳಗೆ ಕೀವು ತುಂಬಿರುವುದು ಗೊತ್ತಾಗುವುದು. ಕೆಲವೇಳೆ ಕೀವುಕುರು ಇನ್ನೂ ಆಳಕ್ಕೆ ತೋಡಿಕೊಂಡು ನುಗ್ಗಿ ಕುರುಡು ದೊಗರಾಗುತ್ತದೆ (ಸೈನಸ್). ಕೀವುಕುರು ಎದ್ದಕಡೆಗೆ ಹತ್ತಿರದ ಹಾಲುರಸ ಗ್ರಂಥಿಗೂ ಸೊಂಕು ಸಾಗಿ ಅದರಲ್ಲೂ ಉರಿತವೆದ್ದು ಅಲ್ಲೂ ಕೀವುಕುರು ಒಡೆದುಕೊಂಡರೆ, ಶಸ್ತ್ರಕ್ರಿಯೆಯಿಂದ ಕೊಯ್ದರೆ, ನೋವು ಕಳೆದು, ಊತವಿಳಿದು, ಮೈಕಾವು ಕುಗ್ಗಿ, ಸುತ್ತು ಮುತ್ತಣ ಊತರ ಎಂದಿನಂತೆ ಚೆನ್ನಾಗುವುದು.

ಚಿಕಿತ್ಸೆ: ಸಲ್ಫ ಮದ್ದುಗಳು, ಜೀವಿವಿರೋಧಕಗಳನ್ನು ಕೊಡುವುದರಿಂದ ಕೀವುಕುರು ಏಳದಂತೆ ಮಾಡಬಹುದು. ಕೀವುಕರು ಬೇಗನೆ ವಾಸಿಯಾಗುವಂತೆ ಬೆಚ್ಚಾರ ಕೊಡಬೇಕು. ಆಮೇಲೆ ಮೇಲಕ್ಕೆ ಮೂತಿ ಇಡುವೆಡೆಯನ್ನು ಗುರುತಿಸಿ ಕೊಯ್ದು ಕೀವನ್ನು ಹೊರಡಿಸಬಹುದು. ಕೀವು ಸುರಿದುಹೋಗಿ ಮತ್ತೆ ಸೊಂಕು ಹತ್ತದಂತೆ ಮುದ್ದುಗಳನ್ನು ಹಾಕಿ ಗಾಯಪಟ್ಟಿ ಕಟ್ಟಬೇಕು. ಮೊಗ, ಕೀಲಿನ ಬಳಿ, ಎದೆ ಹೊಟ್ಟೆಗಳ ಮೇಲೆ, ಕೊರಳು ಈ ತಾವುಗಳಲ್ಲಿ ಕೀವುಕುರು ಎದ್ದರೆ ಕೂಡಲೇ ಚಿಕಿತ್ಸೆ ಮಾಡಿ ಜೀವಾಳದ ಅಂಗಗಳಿಗೆ ಹರಡುವುದನ್ನು ತಪ್ಪಿಸಬೇಕು.

ಬೇರೂರಿದ ಕೀವಿಕುರು : ಇದು ನಿಧಾನವಾಗಿ ಏಳುವುದಲ್ಲದೆ, ಮೇಲಕ್ಕೆ ಮೂತಿ ಇಟ್ಟುಕೊಂಡು ಅದಕ್ಕದೇ ಒಡೆದುಕೊಳ್ಳದು. ಸುತ್ತಲೂ ತಂತುಕ ಊತಕ (ಫೈಬ್ರಸ್ ಟಿಷ್ಯೂ) ಸೇರಿಕೊಳ್ಳುವುದು. ಬೇರೂರಿದ ತಣ್ಣನೆಯ ಕೀವು ಕುರುವಿದ್ದಲ್ಲಿ ಒಳಗಡೆ ಕೀವು ಒಣಗಿ ಗಟ್ಟಿ ಮೊಸರಂತಿರುತ್ತದೆ. ಇನ್ನೂ ಬೇರೂರಿದ್ದರೆ, ಕಲ್ಲಿನಂತಾಗಿರುತ್ತದೆ.

ಹೊರಕ್ಕೆ ಕಾಣಿಸಿಕೊಂಡ ಹೊರತು ಇದನ್ನು ಗುರುತಿಸುವುದು ಕಷ್ಟ. ಕೆಲವೇಳೆ ಕಟುಕಶಾಲೆಯಲ್ಲಿ ಮಾಂಸವನ್ನು ಪರೀಕ್ಷಿಸುವಾಗಲೋ ಸತ್ತ ಪ್ರಾಣಿಯನ್ನು ಕೊಯ್ದ ನೋಡುವಾಗಲೋ ಕಾಣಲೂಬಹುದು. ಮೈಮೇಲೆ ಕಂಡುಬಂದರೆ ಆಗ ಇದು ಗಟ್ಟಿಯಾಗಿ ತಣ್ಣಗೆ ತುಸು ನೋವೋಂದಿಗೆ ಬೇಗನೆ ದೊಡ್ಡದಾಗದಿರುವುದು. ನುಂಗಣೆ, ಉಸಿರಾತ, ನಡಿಗೆಯೇ ಮುಂತಾದ ಯಾವುದಾದರೂ ಜೀವಾಳದ ಅಂಗದ ಕೆಲಸಕ್ಕೆ ಆತಂಕವಾದ ಹೊರತು, ಪ್ರಾಣಿಯ ಆರೋಗ್ಯ ಕೆಟ್ಟಿರದು.

ಕೂರಾದ ಕೀವುಕುರುವಿನ ಚಿಕಿತ್ಸೆಯೇ ಇದಕ್ಕೂ ಸಲ್ಲುತ್ತದೆ. ಕೀವುಕುರು ಮಾಯುವಂತೆ ಇಲ್ಲವೇ ಮೂತಿ ಇಡುವಂತೆ ಮಾಡಲು ಮದ್ದು, ಲೇಪಗಳನ್ನು ಹಚ್ಚಬೇಕಾಗಬಹುದು. ಆಮೇಲೆ ಶಸ್ತ್ರಕ್ರಿಯೆಯಿಂದ ಕೊಯ್ದ ಕೀವು ಹೊರಡಿಸಿ, ಬಾಯಿಬಿಟ್ಟ ಹುಣ್ಣಿನ ಹಾಗೆ ಚಿಕಿತ್ಸೆ ಆಗಬೇಕು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕುರು&oldid=889811" ಇಂದ ಪಡೆಯಲ್ಪಟ್ಟಿದೆ