ಕುಮಾರ ಕಂಪಣ್ಣ
ಕುಮಾರ ಕಂಪಣ್ಣ ವಿಜಯನಗರದ ಸಂಗಮ ವಂಶದ ಎರಡನೆಯ ಚಕ್ರವರ್ತಿ ಬುಕ್ಕರಾಯ ಮತ್ತು ರಾಣಿ ದೇವಾಯಿಯರ ಪುತ್ರ. ವಿಜಯನಗರ ಸಾಮ್ರಾಜ್ಯ ತಮಿಳು ದೇಶದಲ್ಲಿ ವಿಸ್ತರಿಸಲು ಈತ ಮುಖ್ಯ ಕಾರಣ. ಆ ಕಾಲದ ಹಲವಾರು ಶಾಸನಗಳಿಂದಲೂ ಈತನ ಪತ್ನಿಯರಲ್ಲೊಬ್ಬಳಾದ ಕವಯಿತ್ರಿ ಗಂಗಾ ದೇವಿಯಿಂದ ರಚಿತವಾದ ಮಧುರಾವಿಜಯಮ್ ಅಥವಾ ವೀರಕಂಪಣರಾಯ ಚರಿತೆಯಿಂದಲೂ ಇವನ ಜೀವನವೃತ್ತಾಂತ ದೊರಕುತ್ತದೆ.
ಆಡಳಿತ
[ಬದಲಾಯಿಸಿ]ಸುಶಿಕ್ಷಿತನಾಗಿದ್ದ ಕುಮಾರ ಕಂಪಣ್ಣನನ್ನು ಬುಕ್ಕರಾಯ ಮುಳಬಾಗಿಲು ಪ್ರದೇಶದ ಅಧಿಕಾರಿಯನ್ನಾಗಿ ನೇಮಿಸಿದ್ದ. ಸಾಮ್ರಾಜ್ಯಕ್ಕೆ ಕಿರುಕುಳ ಕೊಡುತ್ತಿದ್ದ ತೊಂಡಮಂಡಲದ ಸಾಂಬುವ ರಾಯರ ವಿರುದ್ಧ 1362ರಲ್ಲಿ ಯುದ್ಧಕ್ಕೆ ಹೋಗುವಂತೆ ಆಜ್ಞಾಪಿಸಿದ. ಚೆಂಗಲ್ ಪೇಟೆಯನ್ನೂ ಉತ್ತರ ಮತ್ತು ದಕ್ಷಿಣ ಆರ್ಕಾಟು ಪ್ರದೇಶಗಳನ್ನೂ ರಾಜಧಾನಿಯಾದ ಕಂಚಿಯಿಂದ ಅಳುತ್ತಿದ್ದ ಸಾಂಬುವರಾಯ ಮನೆತನದ ಆಗಿನ ದೊರೆ ರಾಜ ಗಂಭೀರ ರಾಜನಾರಾಯಣ. ಉತ್ತರ ಆರ್ಕಾಟು ಜಿಲ್ಲೆಯಲ್ಲಿದ್ದ ಇವನ ಬಲಯುತವಾದ ಪಡೈವೀಡು ಕೋಟೆಯನ್ನು ಕುಮಾರ ಕಂಪಣ್ಣ ಗೆದ್ದ. ಅನಂತರ ರಾಜ ಗಂಭೀರನ್ ಮಲೈಕೋಟೆಯನ್ನೂ ಕಂಚಿಯನ್ನೂ ವಶಪಡಿಸಿಕೊಂಡು ರಾಜ ನಾರಾಯಣನನ್ನು ಕೊಂದುಹಾಕಿದ. ಕಂಚಿ ಮುಳುಬಾಗಿಲು ವಶಪಡಿಸಿಕೊಂಡು ರಾಜ ನಾರಾಯಣನನ್ನು ಕೊಂದುಹಾಕಿದ. ಕಂಚಿ ಮುಳುಬಾಗಿಲು ರಾಜ್ಯಕ್ಕೆ ಸೇರಿಸಿತು.
ರಾಜ್ಯ ವಿಸ್ತಾರ
[ಬದಲಾಯಿಸಿ]ಹಿಂದೂಧರ್ಮ ಮತ್ತು ಪ್ರಚೆಗಳ ವಿರುದ್ದ ಅತ್ಯಾಚಾರಗಳನ್ನೆಸಗುತ್ತಿದ್ದ ಮಧುರೆಯ ಮುಸ್ಲಿಮರ ವಿರುದ್ಧ ಕಂಪಣ್ಣ ದಾಳಿ ಮಾಡಿದ; ಮಧುರೆಯ ಮಾರ್ಗದಲ್ಲಿ ತಂಜಾವೂರು ಮತ್ತು ತಿರುಚ್ಚಿ ಪ್ರದೇಶಗಳನ್ನು ವಶಪಡಿಸಿಕೊಂಡು ಮಧುರೆಯ ಸುಲ್ತಾನನಾದ ಫಕ್ರುದ್ದೀನ ಮುಬಾರಕ್ ಷಾನನ್ನು ಪ್ರಾಯಶಃ 1370ರಲ್ಲಿ ಎದುರಿಸಿದ. ಈ ಕದನದಲ್ಲಿ ಕುಮಾರ ಕಂಪಣ್ಣನ ಸೇನಾಪತಿಯಾದ ಸಾಳುವ ಮಂಗು ಬಹು ಧೈರ್ಯ ಸಾಹಸಗಳಿಂದ ಹೋರಾಡಿ ಸುಲ್ತಾನನ ಮರಣಕ್ಕೂ ಹಿಂದೂಗಳ ವಿಜಯಕ್ಕೂ, ಕಾರಣನಾದ. ಅನಂತರ ವಿಜಯನಗರದಲ್ಲಿ ಸಾಳುವ ವಂಶದ ಅಧಿಕಾರ ಸ್ಥಾಪಿಸಿದ ಸಾಳುವ ನರಸಿಂಹನ ಮೂಲಪುರುಷನೇ ಈ ಮಂಗು ದಳಪತಿ. ಈ ವಿಜಯದಿಂದ ಕುಮಾರ ಕಂಪಣ್ಣ ಮುಸ್ಲಿಮರ ಅಡಳಿತವನ್ನು ಕೊನೆಗೊಳಿಸಿ ಕನ್ಯಾಕುಮಾರಿಯಿಂದ ತುಂಗಭದ್ರೆಯವರೆಗೂ ವಿಜಯನಗರದ ಆಡಳಿತವನ್ನು ನೆಲೆಗೊಳಿಸಿದ. ಮುಸ್ಲಿಮರ ದಾಳಿಯ ಸಮಯದಲ್ಲಿ ಶ್ರೀರಂಗದ ರಂಗನಾಥಸ್ವಾಮಿಯ ವಿಗ್ರಹವನ್ನು ತಿರುಪತಿಗೆ ಸಾಗಿಸಲಾಗಿತ್ತು. ಆ ವಿಗ್ರಹವನ್ನು ಮರಳಿ ತರಬೇಕೆಂದು ಜಿಂಜಿಯ ಸಾಮಂತನೂ ವಿಜಯನಗರದ ದಳಪತಿಯೂ ಆಗಿದ್ದ ಗೋಪಣಾರ್ಯನಿಗೆ ಕುಮಾರ ಕಂಪಣ್ಣ ಆಜ್ಞಾಪಿಸಿದ. ಆತ ಅದನ್ನು ತಂದು ಕೆಲವು ದಿನ ಜಿಂಜಿಯಲ್ಲಿರಿಸಿಕೊಂಡಿದ್ದು ಅನಂತರ ಶ್ರೀರಂಗದಲ್ಲಿ ಪುನಃ ಪ್ರತಿಷ್ಠಾಪಿಸಿದ. ಕುಮಾರ ಕಂಪಣ್ಣ ಆ ಸಮಯದಲ್ಲಿ ಸ್ವತಃ ಹಾಜರಿದ್ದು ದೇವಾಲಯಕ್ಕೆ ಅನೇಕ ದತ್ತಿಗಳನ್ನು ಬಿಟ್ಟುದಾಗಿ ಶಾಸನಗಳು ತಿಳಿಸುತ್ತವೆ. ತಮಿಳು ದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಜನಾಗಿದ್ದುಕೊಂಡು ಶಾಂತಿಯುತ ಸುಭದ್ರ ಆಡಳಿತವನ್ನು ಸ್ಥಾಪಿಸಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಕಾರಣನಾದ ಇವನ ಆಳ್ವಿಕೆಯನ್ನು ತಮಿಳು ದೇಶದ ಇತಿಹಾಸದಲ್ಲಿ ಒಂದು ಉಜ್ಜ್ವಲ ಯುಗವೆಂದು ವರ್ಣಿಸಲಾಗಿದೆ. ಕುಮಾರ ಕಂಪಣ್ಣ 1374ರಲ್ಲಿ ತೀರಿಕೊಂಡ. ಇವನ ಮಗ ಹೇಮಣ್ಣ ಉಡೈಯರ್ ಮತ್ತು ಅಳಿಯ ಪೊರ್ಕಾಸು ಉಡೈಯರ ಇವರು 1402 ರ ವರೆಗೂ ಈ ಪ್ರಾಂತ್ಯದಲ್ಲಿ ಸಾಮಂತರಾಗಿದ್ದರು.