ಕಿವುಡರ ಶಿಕ್ಷಣ
ಕಿವುಡಿನ ವಿಷಯವಾಗಿ ಜನಕ್ಕೆ ಹೆಚ್ಚು ಅಜ್ಞಾನವಿದೆ. ಕಿವಿ ಕೇಳುವುದು ಮಂದವಾಗಿರುವುವನನ್ನು ತಿಳಿಗೇಡಿ, ಗರ್ವಿ, ಅಸಡ್ಡೆಯವ-ಎನ್ನುವರು. ಕಿವಿಗೆ ಏನೂ ಕೇಳಿಸದ ಮಕ್ಕಳ ವಿಷಯದಲ್ಲಂತೂ ಇದು ಇನ್ನೂ ವಿಪರೀತ. ಮಕ್ಕಳಲ್ಲಿ ಕಿವುಡತನ ಒಂದು ದೊಡ್ಡ ವಿಕಲತೆ ; ಮಿದುಳಿಗೆ ಆಗುವ ಹಾನಿ, ಬುದ್ಧಿ ಮಾಂದ್ಯಗಳನ್ನು ಬಿಟ್ಟರೆ, ಕಿವುಡೇ ಮಕ್ಕಳಲ್ಲಿನ ದೊಡ್ಡತೊಡಕು, ಬಾಳಿನುದ್ದಕ್ಕೂ ಕುರುಡರಿಗಾಗಿ ದುಡಿದ. ಹೆಸರಾಂತ ಹೆಲನ್ ಕೆಲರ್ (ನೋಡಿ- ಕೆಲರ್,-ಹೆಲನ್-ಆಡಮ್ಸ್) ತಾನು ಕಿವುಡಿ ಕುರುಡಿ ಎಂಬುದನ್ನು ಮರೆಯದೆ ಇನ್ನೊಮ್ಮೆ ತಾನು ಮರುಹುಟ್ಟು ಪಡೆಯುವುದಾದರೆ ಕುರುಡರಿಗಿಂತಲೂ ಕಿವುಡರಿಗಾಗೇ ದುಡಿಯುವುದಾಗಿ ತನ್ನ ಇಳಿ ವಯಸ್ಸಿನಲ್ಲಿ ಹೇಳಿದಳು. ಕುರುಡು ಮತ್ತು ಇತರ ಅಂಗವಿಕಲತೆಗಳ ಹಾಗೆ ಕಿವುಡತನ ಕಣ್ಣಿಗೆ ಕಾಣದಿರುವುದೇ ತೊಂದರೆ. ಜನಸಾಮಾನ್ಯರಿಗೆ ಗೊತ್ತಾಗದ ಹಲವಾರು ವಿಶೇಷ ತೊಡಕುಗಳನ್ನು ವ್ಯಕ್ತಿಗೆ ಇದು ತಂದೊಡ್ಡುತ್ತದೆ.
ಮೂಕೂ
[ಬದಲಾಯಿಸಿ]ಕಿವಿ ಕೇಳದ ಮಗು ಕಿವುಡಾಗಿರುವಂತೆ ಮೂಕೂ ಆಗುತ್ತದೆ. ಕೇಳಿ ಕೇಳಿ ಮಗು ಸರಿಯಾಗಿ ಮಾತನಾಡುವುದನ್ನು ಅಭ್ಯಾಸ ಮಾಡಬೇಕು. ಬಲು ಮುಖ್ಯವಾದ ಈ ಹೆದ್ದಾರಿ ಇಲ್ಲವಾದರೆ, ಅದರ ಸುತ್ತಲೂ ಆಡಿದ್ದನ್ನು ಕೇಳಿಸಿಕೊಳ್ಳದು ; ತಾನೂ ಆಡಿದ್ದೂ ತನಗರಿವಿಲ್ಲವಾಗುವುದು. ಅಂಥ ಮಗುವನ್ನು ಮೂಗ ಎನ್ನುವುದು ನಿಜವಾಗಿ ಸರಿಯಿಲ್ಲ. ಕಿವುಡ ಮಗು ಕೂಡ ಮಾತಾಡಬಲ್ಲುದು. ಅದರ ಮಾತಿನ ಅಂಗಗಳೂ ಚೆನ್ನಾಗೇ ಇರುತ್ತವೆ. ಮಾತಾನಾಡವುದಕ್ಕೆ ಅದಕ್ಕೆ ಗೊತ್ತಾಗುವ ಹಾಗೆ ಹೇಳಿಕೊಡಬೇಕಷ್ಟೆ. ಆದ್ದರಿಂದ ಆ ಮಗುವನ್ನು ಕಿವುಡ ಎಂದು ಮಾತ್ರ ಹೇಳಬಹುದು. ಮಾತಿಲ್ಲದ ಈ ತೊಡಕು ಮುಂದೆ ಮಗುವಿನ ಮನೋಭಾವನೆಯ ವಿಕಾಸಕ್ಕೂ ಕಲಿಕೆಗೂ ಅಡ್ಡಿಯಾಗುವುದು.ಕಿವುಡ, ಮಂದಗಿವಿಯವ ಎಂಬ ಮಾತುಗಳಿಗೆ ವಿವರಣೆ ಅಗತ್ಯ. ತನ್ನ ಮನದಲ್ಲಿರುವುದನ್ನು ಇನ್ನೊಬ್ಬರಿಗೆ ತಿಳಿಸಿಕೊಡಲಾಗದಷ್ಟು ಕಿವುಡು ಕೂರಾಗಿದ್ದರು ಕೇಳುವ ಸಾಧನವನ್ನು (ಹಿಯರಿಂಗ್ ಎಯ್ದ್) ಹಾಕಿಕೊಂಡೋ ಇಲ್ಲದೆಯೋ ಸಮಾಜದಲ್ಲಿ ಹಾಗೂ ನಡೆದುಕೊಳ್ಳುತ್ತಿರುವವ ಮಂದಗಿವಿಯವ. ಈತ ಕೇಳುವ ಸಾಧನದ ನೆರವಿನಿಂದ ಚೆನ್ನಾಗಿ ಮಾತಾಡುತ್ತ, ವಿದ್ಯೆ ಕಲಿತು ಕಸಬು ಹಿಡಿದು ಉಳಿದವರೊಂದಿಗೆ ಸಂಪರ್ಕ ಬೆಳಸಬಲ್ಲ. ಕಿವುಡರಿಗೆ ಕಿವುಡು ಇನ್ನೂ ಜೋರಾಗಿರುತ್ತದೆ. ಕೇಳು ಸಾಧನವನ್ನು ಹಾಕಿಕೊಂಡರೂ ಆಳವಾದ ವಿಶೇಷ ಕಲಿಕೆಯಿಲ್ಲದೆ ಜನರಲ್ಲಿ ಹೆಚ್ಚಾಗಿ ಬೆರೆಯಲಾರರು.ಹುಟ್ಟು ಕಿವುಡರಿಗೂ ಇಲ್ಲವೇ ಮಾತಾಟ ಮತ್ತು ನುಡಿಗಳನ್ನು ಕಲಿವ ಮೊದಲೇ ಎಳೆತನದಲ್ಲೇ ಕಿವಿ ಕೇಳದಂತಾದವರಿಗೂ ವಯಸ್ಸಾದ ಮೇಲೆ ಕಿವುಡಾಗುವವರಿಗೂ ವ್ಯತ್ಯಾಸಗಳು ಇದ್ದೇ ಇವೆ. ಯಾರೂ ಪೂರಾ ಕಿವುಡರಲ್ಲ. ಎಂಥ ಕಿವುಡಿದ್ದರೂ ಮಗುವಿಗೆ ಇನಿತಾದರೂ ಕೇಳಿಸುವಂತಿರುತ್ತದೆ. ಪೂರಾ ಕಿವುಡು ಬಲು ಅಪರೂಪ. ಅಂಥವರು ತಮಗೆ ಕೇಳಿಸದಿದ್ದರೂ ಸದ್ದುಗಳನ್ನು ಹಿಡಿಯಬಲ್ಲರು. ಗುಡುಗಿನಂಥ ಕೆಲವು ಸದ್ದುಗಳನ್ನು ಕಿವುಡ ಮಕ್ಕಳೂ ಕೇಳಬಲ್ಲುವೆಂದು ಗೊತ್ತಾಗಿದೆ.
ಕಿವುಡರ ಕಲಿಕೆ
[ಬದಲಾಯಿಸಿ]ಕಿವುಡರ ಕಲಿಕೆಯಲ್ಲಿ ಮುಖ್ಯವಾದ ಅಂಶವೆಂದರೆ ಅವರಲ್ಲಿ ಇರುವ ಅಲ್ಪ ಶ್ರವಣ ಶಕ್ತಿಯನ್ನು ಬಳಸಿಕೊಳ್ಳುವ ವಿಷಯ, ಇದಕ್ಕೋಸ್ಕರವೇ ಎಲ್ಲ ಕಿವುಡ ಮಕ್ಕಳಿಗೂ ಕೇಳುವ ಸಾಧನವನ್ನು ಹಾಕಿಕೊಳ್ಳುವಂತೆ ನಿಯಮಿಸುವುದು.ತನ್ನ ಸುತ್ತಲ ಪ್ರಪಂಚದಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ವ್ಯಕ್ತಿಯನ್ನು ಪ್ರೋತ್ಸಾಹಿಸುವುದೇ ಈ ಶಿಕ್ಷಣದ ಧ್ಯೇಯ. ಮಾತಾಡುತ್ತ, ಕೆಲಸ ಗೇಯುತ್ತ, ಬಾಳುತ್ತ, ಅವನು ಉಳಿದವರೆಲ್ಲರೊಂದಿಗೆ ಸೇರುವಂತಾಗಬೇಕು. ಆದರೆ ಈಗಿರುವ ಹಣದ ಮುಗ್ಗಟ್ಟು ಮತ್ತು ಶಾಲೆಗಳ ಸ್ಥಿತಿಗತಿಗಳನ್ನು ನೋಡಿದರೆ ಎಲ್ಲ ಕಿವುಡು ಮಕ್ಕಳಿಗೂ ಯುಕ್ತ ಶಿಕ್ಷಣ ಕೊಡುವುದು ಅಸಾಧ್ಯವೆನಿಸುತ್ತದೆ.ಪ್ರಪಂಚದ ಬೇರೆಡೆಗಳಲ್ಲಿ ಹೇಗೊ ಹಾಗೆ ಭಾರತದಲ್ಲೂ ಕಿವುಡರ ಶಿಕ್ಷಣ ಬಹು ಹಿಂದಿನಿಂದಲೂ ನಡೆದಿದೆ. ಕ್ರಿ.ಶ. 1555ರ ಸುಮಾರಲ್ಲಿ ಯೂರೋಪಿನಲ್ಲಿ ಈ ಬಗ್ಗೆ ಕೆಲಸ ನಡೆದಂತೆ ದಾಖಲೆಗಳಿವೆ. ಅರಿಸ್ಟಾಟಲ್ ಕೂಡಾ ಕಿವುಡರ ಕಲಿಕೆಯ ಬಗ್ಗೆ ವಿವೇಚಿಸಿ ಅವರಿಗೆ ಶಿಕ್ಷಣ ಆಗದು ಎಂದಿದ್ದ. ಭಾರತದಲ್ಲಿ ಸುಮಾರು 80 ವರ್ಷಗಳ ಹಿಂದೆ ಈ ಕೆಲಸಕ್ಕಾಗಿ ಶಾಲೆಗಳನ್ನು ತೆರೆದರು. ಇದಕ್ಕೂ ಮುಂಚೆ, ಕಿವುಡರ ಕಲಿಕೆಗಾಗಿ ಅಲ್ಲೊಂದಿಲ್ಲೊಂದು ಯತ್ನಗಳಾಗಿರಬೇಕು. 19ನೆಯ ಶತಮಾನದ ನಡುವೆ ಮೈಸೂರು ಸಂಸ್ಥಾನದಲ್ಲಿ ಒಂದು ಕಡೆ ಒಬ್ಬ ಶಿಕ್ಷಕ ಕಿವುಡ ಮಗುವಿಗೆ ಮಾತು ಕಲಿಸಲು ಯತ್ನಿಸಿದ್ದನ್ನು ಕೇಳಿದ್ದುಂಟು. ಹಿಂದೆ ಕಿವುಡ ಮೂಗ ದೊರೆಯೊಬ್ಬ ಮೈಸೂರು ಸಂಸ್ಥಾನವನ್ನು ಆಳಿದ್ದ. ಚಿಕ್ಕದೇವರಾಯನ ಮಗನಾದ ಕಂಠೀರವ ಒಡೆಯರ್ ಹುಟ್ಟು ಕಿವುಡನಾಗಿದ್ದರೂ ಮೈಸೂರನ್ನಾಳುತ್ತಿದ್ದ ( 1704-1713). ಅವನನ್ನು ಮೂಕರಸು ಎನ್ನುತ್ತಿದ್ದರಂತೆ. ಇಂಥ ಸಾಧನೆ ಮತ್ತೆಲ್ಲೂ ಇದ್ದಿರಲಾರದು.[೧]
ಕಿವುಡರ ಶಾಲೆ
[ಬದಲಾಯಿಸಿ]ಭಾರತದ ಕಿವುಡರ ಶಾಲೆಗಳಲ್ಲಿ ಬಹುವಾಗಿ ಕಲಿಸಲು ಕೈಸನ್ನೆಯ ಭಾಷೆಯನ್ನು ಬಳಸುತ್ತಿದ್ದಾರೆ. ಕಿವುಡರಿಗೆ ಕಲಿಸಲು ಕೈಸನ್ನೆ ಭಾಷೆಯನ್ನು ಬಳಸಬೇಕೇ ಬೇಡವೇ ಎಂಬ ವಿವಾದ ಹಳೆಯದಾದರೂ ಇನ್ನೂ ಬಗೆಹರಿದಿಲ್ಲ. ಕಿವುಡರಿಗೆ ಈ ಭಾಷೆ ಬಲುಚೆನ್ನಾಗಿ ಹಿಡಿಸುತ್ತದೆಂದು ಕೆಲವರ ಅನಿಸಿಕೆ. ಬರಿಯ ಕೈಸನ್ನೆಯ ಭಾಷೆಯನ್ನು ಕಲಿತವರು ಇತರರೊಂದಿಗೆ ಹೊಂದಿಬಾಳುವುದು ಬಹು ಕಷ್ಟವೆಂದು ಇತರ ಕೆಲವರ ಅನಿಸಿಕೆ. ಅಲ್ಲದೆ ಕೈಸನ್ನೆಯ ಭಾಷೆಯನ್ನೆ ನೆಚ್ಚಿದಾಗ ವ್ಯಕ್ತಿಯಲ್ಲಿರುವ ಅಲ್ಪ ಸ್ವಲ್ಪ ಶ್ರವಣಶಕ್ತಿಯೂ ಅಭಿವ್ಯಕ್ತಿಶಕ್ತಿಯೂ ನಾಶವಾಗಬಹುದು ಎಂಬುದೂ ಇನ್ನೊಂದು ಅಂಶ.ಕಿವುಡು ಮಗುವಿಗೆ ಮೊದಲಿಂದಲೆ ಕೇಳುವ ಮತ್ತು ಮಾತನಾಡುವ ಅವಕಾಶಗಳನ್ನು ಹೆಚ್ಚು ಹೆಚ್ಚಾಗಿ ಒದಗಿಸಬೇಕೆಂದು ತಜ್ಞರ ಅಭಿಪ್ರಾಯ. ಒಳ್ಳೊಳ್ಳೆಯ ಕೇಳು ಸಾಧನಗಳೂ ಸುಧಾರಿತ ಕಲಿಕೆಯ ಉಪಕರಣಗಳೂ ಸಿಗುತ್ತಿರುವ ಈಗಿನ ಕಾಲದಲ್ಲಿ ಮಗುವಿನ ಕಿವಿಯ ಶಕ್ತಿಯನ್ನೂ ನಾಲಗೆಯ ಶಕ್ತಿಯನ್ನೂ ಪೂರ್ತಿಯಾಗಿ ಬಳಸಿಕೊಳ್ಳುವ ಅವಕಾಶವಿದೆ. ಕಿವುಡ ಮಕ್ಕಳಿಗೆ ಮುಖ್ಯವಾಗಿ ಕಿವಿಯ ಮೂಲಕ ಮಾತ್ರವೇ ಕಲಿಸಬೇಕೆಂದು ಈಗಲೂ ನಂಬಿರುವ ಜನರಿದ್ದಾರೆ. ತುಟಿಯೋದುವುದನ್ನು (ಲಿಪ್ ರೀಡಿಂಗ್) ಕಲಿಸಲೂ ಅವರು ಒಪ್ಪರು.ಎಳೆಯ ಮಕ್ಕಳಿಗೆ ಕೈಸನ್ನೆಯ ಭಾಷೆಯನ್ನು ಮೊದಲು ಹೇಳಿಕೊಟ್ಟು ಬರ ಬರುತ್ತ ಅದಕ್ಕೆ ಬದಲಾಗಿ ಮಾತನಾಡುವುದನ್ನು ಕಲಿಸಬೇಕೆಂಬ ಹೊಸ ತಂಡವೊಂದು ಹುಟ್ಟಿಕೊಳ್ಳುತ್ತಿದೆ. ಈ ವಿಚಾರವಾಗಿ ಯಾವ ಇತ್ಯರ್ಥವೂ ಆಗದಿರುವುದರಿಂದ ಈ ಬೇಡಿಕೆಗಳ ಆಗುಹೋಗುಗಳನ್ನು ಮುಂದಿನ ಸಂಶೋಧನೆಯೇ ನಿರ್ಧರಿಸಬೇಕು.[೨]
ಕಿವುಡರ ಶಿಕ್ಷಣ
[ಬದಲಾಯಿಸಿ]ಇಷ್ಟಾದರೂ ತೀರ ಎಳೆತನದಲ್ಲೇ ಕಿವುಡರ ಶಿಕ್ಷಣ ಮೊದಲಾಗಬೇಕು ಎನ್ನುವುದರಲ್ಲಿ ಬಹುಮಟ್ಟಿನ ಒಮ್ಮತವಿರುವಂತಿದೆ. ಹಲವು ಕಾರಣಗಳಿಂದ ಇದು ಮುಖ್ಯವೆನಿಸಿದೆ. ಇಂತಿಷ್ಟೆಂದು ವಯಸ್ಸನ್ನು ಖಚಿತವಾಗಿ ಹೇಳಲು ಬಾರದಿದ್ದರೂ ಮಗುವಿನ ಜೀವದಲ್ಲಿ ಅದರ ಮನಸ್ಸು ಭಾಷೆಯ ಕಲಿಕೆಯ ಕಡೆಗೆ ವಾಲುವ ಒಂದು ಹಂತವಿದೆ. ಆಗ ಅದರ ಸಕಲ ಇಂದ್ರಿಯಗಳೂ ಮನಸ್ಸೂ ಭಾಷೆಯತ್ತ ಕೆಲಸ ಮಾಡುತ್ತಿರುತ್ತವೆ. ಈ ವಯಸ್ಸಿನಲ್ಲಿ ಮಗುವಿಗೆ ಕಲಿಸದಿದ್ದರೆ ಮಿದುಳಿನಲ್ಲಿ ಭಾಷೆಗೆ ಸಂಬಂಧಿಸಿದ ಈ ಭಾಗಗಳು ಸರಿಯಾಗಿ ವಿಕಾಸವಾಗದೆಂಬ ಶಂಕೆಯೂ ಇದೆ. ಎಳೆತನದಲ್ಲೇ ಕಲಿಕೆ ಮೊದಲಾಗುವುದು ಮುಖ್ಯ. ಆರೋಗ್ಯವಂತ ಮಕ್ಕಳು ಎಳೆಯ ವಯಸ್ಸಲ್ಲೇ ಕಲಿಯುತ್ತಿರುವರು. ಕಿವುಡ ಮಗುವಿಗೆ ಈ ಎಳೆಯ ವಯಸ್ಸಿನಲ್ಲೇ ತರಬೇತು ದೊರೆಯದಾದರೆ ಆರೋಗ್ಯವಂತ ಮಕ್ಕಳಿಗಿಂತ ಅದು ಹಿಂದೆ ಬೀಳುತ್ತದಾಗಿ ಮುಂದಿನ ಕಲಿಕೆಗೆ ಇನ್ನೂ ಕಷ್ಟವಾಗುತ್ತದೆ. ಆದ್ದರಿಂದ ಕಿವುಡಿನ ಶಂಕೆ ಎದ್ದಕೂಡಲೇ ಮಗುವಿನ ಶಿಕ್ಷಣಕ್ಕಾಗಿ ವಿಶೇಷವಾಗಿ ಏರ್ಪಾಡು ಮಾಡಬೇಕು. ತೀರ ಎಳೆಮಗುವಿಗೂ ಕೇಳುವ ಸಾಧನವನ್ನು ಒದಗಿಸಬೇಕು. ಕಿವುಡ ಮಗುವಿಗೆ ಬೇಗನೆ ಶಿಕ್ಷಣ ಕೊಡುವ ಬಲು ದೊಡ್ಡ ಜವಾಬ್ದಾರಿ ಹೆತ್ತವರದು. ಮೊದಲು ಅವರು ಒಬ್ಬ ಶ್ರವಣ ಪರಿಣತನ, ಕಿವಿ ಮೂಗು ಗಂಟಲು ವೈದ್ಯನ (ಇಎನ್‍ಟಿ ಸ್ಪೆಷಲಿಸ್ಟ್) ಸಲಹೆ ಪಡೆಯಬೇಕು. ಮಗುವನ್ನು ಚೆನ್ನಾಗಿ ಪರೀಕ್ಷಿಸಿ, ಕೇಳುವ ಸಾಧನವನ್ನು ಆರಿಸಿಕೊಟ್ಟು ಮನೆಯಲ್ಲಿ ಮಗುವಿಗೆ ಈ ದಿಸೆಯಲ್ಲಿ ತಂದೆ ತಾಯಿಗಳು ಹೇಗೆ ನೆರವಾಗಬಹುದೆಂದೂ ಇವರು ಸೂಚಿಸುತ್ತಾರೆ. ಕೇಳುವ ಸಾಧನವನ್ನು ಮಗು ಯಾವಾಗಲೂ ಹಾಕಿಕೊಂಡಿರಬೇಕಲ್ಲದೆ, ಮಗುವಿನೊಂದಿಗೆ ಮನೆಯವರು ಬಹಳ ಮಾತಾಡುತ್ತಿರಬೇಕು. ಹೆಚ್ಚೆಚ್ಚಾಗಿ ಮಾತಾಡಿದಷ್ಟೂ ಮಕ್ಕಳಿಗೆ ಭಾಷೆ ಚೆನ್ನಾಗಿ ತಿಳಿದು ಮುಂದೆ ಅವರ ವಿದ್ಯಾಭ್ಯಾಸ ಸುಗಮವಾಗುವುದು. ಈ ಮಾತು ಕೇವಲ ಕಿವುಡು ಮಕ್ಕಳಿಗೆ ಮಾತ್ರ ಅನ್ವಯವಾಗಬೇಕಾದ್ದಿಲ್ಲ. ಹೆಚ್ಚು ಹೆಚ್ಚು ಮಾತಿನಿಂದ ಇತರ ಮಕ್ಕಳೂ ಸಂಪುಷ್ಟವಾಗಿ ಬೆಳೆಯುತ್ತವೆ. ವಾಕ್ ಮತ್ತು ಶ್ರವಣ ಚಿಕಿತ್ಸಾಲಯಗಳೂ ಅಖಿಲಭಾರತ ವಾಕ್‍ಶ್ರವಣ ಸಂಸ್ಥೆಗಳಂಥವೂ ಕಿವುಡರ ಶಿಕ್ಷಣದ ವಿಚಾರವಾಗಿ ಹೆತ್ತವರಿಗೆ ಮೇಲಿಂದ ಮೇಲೆ ಸಲಹೆ ನೀಡುತ್ತಿರುವರು. ಎಳೆಯ ವಯಸ್ಸಿನಲ್ಲಿ ಶಿಕ್ಷಣ ಆರಂಭಿಸಿ ಬಲವಾದ ತಳಹದಿ ಹಾಕಿದಲ್ಲಿ, ಕಿವುಡ ಮಕ್ಕಳು ವಿಶೇಷ ಶಾಲೆಗಳ ಬದಲಾಗಿ ಸಾಧಾರಣ ಶಾಲೆಗಳಿಗೇ ಹೋಗಬಹುದು. ಮೈಸೂರು ನಗರದಲ್ಲೇ ಎಷ್ಟೋ ಕಿವುಡ ಮಕ್ಕಳು ಕೇಳುವ ಸಾಧನವನ್ನು ಹಾಕಿಕೊಂಡು ಈಗ ಸಾಧಾರಣ ಶಾಲೆಗಳಿಗೇ ಹೋಗುತ್ತಿರುವರು.
ಕಿವುಡರ ಶಿಕ್ಷಣ ಯೋಜನೆಯಲ್ಲಿ ಮುಖ್ಯ ವಿಚಾರಗಳು ಈ ಕೆಳಗೆ ಕಂಡಂತಿವೆ
[ಬದಲಾಯಿಸಿ]1 ಕೇಳುವ ಸಾಧನ : ಮಗುವಿನಲ್ಲಿ ಶ್ರವಣಶಕ್ತಿಯನ್ನು ಪೂರ್ಣ ಬಳಸಲು ಇದು ನೆರವಾಗುತ್ತದೆ. ಇದರಿಂದ ಮಗುವಿಗೆ ಎಲ್ಲ ಸದ್ದುಗಳೂ ಕೇಳಿಸದಿರಬಹುದು. ಆದರೂ ಎಂದಿಗಿಂತಲೂ ಹೆಚ್ಚು ಸದ್ದುಗಳು ಕೇಳಿಸುವುದಂತೂ ದಿಟ. 2 ತರಬೇತು : ಕೇಳು ಸಾಧನವನ್ನು ಮಗುವಿಗೆ ತೊಡಗಿಸಿದರೆ ಸಾಲದು. ಮಗು ಅದನ್ನು ಬಳಸಬೇಕು. ಸದ್ದುಗಳನ್ನು ಆಲಿಸುವುದನ್ನೂ ಒಂದು ಸದ್ದಿಂದ ಇನ್ನೊಂದರ ವ್ಯತ್ಯಾಸ ಹಿಡಿವುದನ್ನೂ ಸದ್ದುಗಳಿಗೆ ಅರ್ಥ ಕೊಡುವುದನ್ನೂ ತಿಳಿಸಿ ಕೊಡಬೇಕು. ಬೇರೆ ಬೇರೆ ಸದ್ದುಗಳ ಆಟಗಳನ್ನು ಯೋಜಿಸಬೇಕು. ಸ್ವರ, ನಾದಗಳನ್ನು ಗುರುತಿಸುವಂತೆ ಸರಳ ಸಂಗೀತವನ್ನೂ ಹೇಳಿ ಕೊಡಬೇಕು. ಮುಂದೆ ಅವರು ಮಾತಾಡುವಂತಾದಾಗ ಸರಿಯಾದ ಲಯವೂ ಸ್ವರವೂ ಮಾತಿನಲ್ಲಿ ಮೂಡುತ್ತವೆ. 3 ಭಾಷೆ : ಕಿವುಡಿನ ಬಲು ದೊಡ್ಡ ವಿಕಲತೆ ಎಂದರೆ ಭಾಷೆ. ಆದ್ದರಿಂದ ಭಾಷೆಯನ್ನು ಕಲಿಸುವುದರಲ್ಲಿ ಕಿವುಡ ಮಗುವಿಗೆ ಹೆಚ್ಚಿನ ನೆರವು ನೀಡುವುದು ಮುಖ್ಯ. ಕಿವುಡ ಮಕ್ಕಳಿಗೆ ಭಾಷೆಯನ್ನು ಕಲಿಸಲು ಹಲವು ದಾರಿಗಳಿದ್ದರೂ ಸಾಮಾನ್ಯವಾಗಿ ಸುತ್ತಮುತ್ತ ನಡೆವವನ್ನು ವಿವರಿಸುವ ಮಾತುಗಳನ್ನು ಬಳಸುವುದು ಒಳ್ಳೆಯ ಮಾರ್ಗ, ಕಣ್ಣೆದುರಿನ ಅನುಭವದೊಂದಿಗೆ ನುಡಿಯನ್ನು ಕೂಡಿಸಿದರೆ ಕಲಿಕೆ ಇನ್ನೂ ಸುಲಭ. ಆದ್ದರಿಂದ ಭಾಷೆ ಕಲಿಸಲು ಬಲು ಮುಖ್ಯ ಶಿಕ್ಷಕರೆಂದರೆ ಹೆತ್ತವರೇ. ಯಾವಾಗಲೂ ಮಗುವಿನೊಂದಿಗೆ ಅವರು ಮಾತಾಡುತ್ತಿರಬೇಕು. ಮಕ್ಕಳಿಗೆ ಅರ್ಥವಾಗುವ ಹಾಗೆ ಪದಗಳನ್ನೂ ವಾಕ್ಯಗಳನ್ನೂ ಮತ್ತೆ ಮತ್ತೆ ಹೇಳುತ್ತಿರಬೇಕು. ಮಗು ತಾನಾಗೇ ಮಾತಾಡಿ ಭಾಷೆ ಬಳಸುವಂತೆ ಒತ್ತಾಸೆ ಕೊಡಬೇಕು. ಕಿವುಡ ಮಕ್ಕಳಿಗೆ ಮಾತುಕಲಿಯಲು ಬಲು ಕಷ್ಟವಾಗುತ್ತದೆ. ಆದರೂ ಅವು ಕಲಿತೇ ಕಲಿಯುತ್ತದೆ ಎನ್ನುವುದನ್ನು ಮರೆಯಬಾರದು. ಭಾಷೆಗಾಗಿ ಎಲ್ಲ ಇಂದ್ರಿಯಗಳ ಅರಿವನ್ನೂ ಬಳಸಿಕೊಂಡು ಮಗುವಿನ ಕುತೂಹಲ, ಆಸಕ್ತಿಗಳನ್ನು ಹೆಚ್ಚಿಸುವ ಯಾವ ಸಂದರ್ಭವನ್ನೂ ಬಿಡಬಾರದು. 4 ಮಾತಾಡುವುದು : ಕಿವಿ ಕೇಳಿಸದ್ದರಿಂದ ಮಗುವಿಗೆ ಮಾತು ಬರುವುದಿಲ್ಲವೆಂಬುದನ್ನು ಮರೆಯಬಾರದು. ಕಿವುಡರಿಗೆ ಮಾತಾಡುವುದನ್ನು ಕಲಿಸುವಾಗ ಇತರ ಇಂದ್ರಿಯಗಳ ಪಾತ್ರ ನಮ್ಮ ಅರಿವಿಗೆ ಬರುವುದು. ಒಂದು ಗೊತ್ತಾದ ಶಬ್ದವನ್ನು ಬಾಯಿಂದ ಹೇಳುವುದು ಹೇಗೆಂದು ಮಗು ತಿಳಿಯಬೇಕು. ಇದಕ್ಕಾಗೇ ಕಿವುಡರಿಗೆ ಕಲಿಸುವವರು ಅನೇಕರು ಕನ್ನಡಿಗಳ ಮುಂದೆ ಮಾತಾಡುತ್ತಾರೆ. ಕನ್ನಡಿಯನ್ನು ಮಗು ನೋಡುತ್ತದೆ. ಕಲಿಸುವವನು ಆಡುವುದನ್ನು ಕಂಡು. ಅದನ್ನು ಅನುಕರಿಸಲು ಯತ್ತಿಸುತ್ತದೆ. ಕೇಳುವ ಸಾಧನದ ಮೂಲಕ ಕಲಿಸುವವನ ಮಾತೂ ತನ್ನದೂ ಮಗುವಿಗೆ ಕೇಳಿಸುತ್ತದೆ. ಬೇಕೆಂದಾಗೆಲ್ಲ ಗಂಟಲು, ಮೂಗುಗಳ ಕಂಪನಗಳನ್ನೂ ತನ್ನ ಬಾಯಿಂದ ಹೊರಬೀಳುವ ಉಸಿರನ್ನೂ ತನ್ನ ಕೈಗಳಿಂದ ಮುಟ್ಟಿ ತಿಳಿಯಬಹುದು. ಕಿವಿ ಮಂದವಾಗಿದ್ದರೂ ಹೀಗೆ ಅದು ಮಾತಾಡುವುದನ್ನು ಕಲಿಯುತ್ತದೆ. ಶಬ್ದಗಳನ್ನು ಮಗು ನೋಡುವಂಥ ನೋಟದ ಚಿತ್ರಗಳನ್ನೂ ಮಗು ಮುಟ್ಟಿ ತಿಳಿವ ಬೇರೆ ಬೇರೆ ಪೆಟ್ಟಿಗೆಗಳ ಕಂಪನಗಳಾಗಿ ಮಾರ್ಪಡಿಸುವ ಇನ್ನೂ ಕೆಲವು ಸಲಕರಣೆಗಳನ್ನು ಇಂದಿನ ತಂತ್ರಗಳಲ್ಲಿ ಬಳಸುವುದುಂಟು. ಹೀಗೆ ತನಗೆ ಕಲಿಸುವವ ಮಾತಾಡಿದಾಗ ತಾನು ಕಂಡಿದ್ದನ್ನೂ ಅರಿತಿದ್ದನ್ನೂ ತನ್ನ ಮಾತಿನೊಂದಿಗೆ ಮಗು ಹೋಲಿಸಿ ನೋಡುತ್ತದೆ. ಶಬ್ದಗಳ ಬೇರೆ ಬೇರೆ ಭಾಗಗಳು ಇನ್ನೂ ಜೋರಾಗಿ ಕೇಳುವಂತೆ ಮಾಡುವ ವಿಶೇಷ ಹೇಳುವ ಸಾಧನಗಳನ್ನು ಕೆಲವು ಪರಿಣತರು ಬಳಸುತ್ತಿದ್ದಾರೆ.
5 ತುಟಿಯೋದು
[ಬದಲಾಯಿಸಿ]ಕಲಿಸುವವನ ತುಟಿಗಳ ಚಲನೆಯನ್ನು ಮೊಗದ ಚಹರೆಯನ್ನೂ ಗಮನಿಸುತ್ತ ಮಗು ನುಡಿಯನ್ನು ಕಲಿವ ವಿಧಾನವಿದು. ಕಿವಿ ಚೆನ್ನಾಗಿ ಕೇಳುವವರು ಕೂಡ ಕೊಂಚಮಟ್ಟಿಗೆ ತುಟಿಯೋದುವರು. ಆದರೆ ಕಿವುಡ ಮಗುವಿಗಂತೂ ಇದರಿಂದ ಹೆಚ್ಚಿನ ಪ್ರಯೋಜನವಿದೆ. ಅಷ್ಟೂ ಇಷ್ಟು ಕಿವಿಗೆ ಕೇಳಿಸಿದ್ದಕ್ಕೆ ತುಟಿಯೋದು ಇನ್ನಷ್ಟು ಅರ್ಥ ಕೊಡುವುದರಿಂದ ಮಗುವಿನ ಕಲಿಕೆ ಇನ್ನೂ ಚೆನ್ನಾಗುವುದು. ಇತ್ತೀಚೆಗೆ ಶಿಕ್ಷಕರು ತುಟಿಯೋದಿಗೆ ಅಷ್ಟು ಪ್ರಾಮುಖ್ಯ ಕೊಡುತ್ತಿಲ್ಲ.ಬೋಧನೆ, ಓದು, ಬರವಣಿಗೆ ಮತ್ತಿತರ ವಿಷಯಗಳೇ ಅಲ್ಲದೆ ಇವೆಲ್ಲ ವಿಚಾರಗಳನ್ನೂ ಕಿವುಡರ ಶಾಲೆಗಳಲ್ಲಿ ತಿಳಿಸಿಕೊಡುವರು.ಬಡಗಿ ಕೆಲಸ, ದರ್ಜಿಕೆಲಸ ಮೊದಲಾದ ಕಸಬಿನ ಶಿಕ್ಷಣಕ್ಕೆ ಅನೇಕ ಶಾಲೆಗಳಲ್ಲಿ ಅವಕಾಶವಿದೆ. ತೀರ ಎಳೆತನದಲ್ಲಿ ಸರಿಯಾದ ರೀತಿಯಲ್ಲಿ ತರಬೇತಿ ಕೊಡಲು ಮೊದಲು ಮಾಡಿದರೆ ಕಿವುಡರು ಸಮಾಜದಲ್ಲಿ ಸ್ವತಂತ್ರವಾಗಿ ಬದುಕು ನಡೆಸುವಷ್ಟು ಸಮರ್ಥರಾಗುತ್ತಾರೆ. ಮೈಸೂರಿನ ಅಖಿಲಭಾರತ ವಾಕ್‍ಶ್ರವಣ ಸಂಸ್ಥೆಯಲ್ಲಿ ಹೆತ್ತವರಿಗೆ ನೆರವಾಗಿ ಅವರ ಮಕ್ಕಳಿಗೆ ದಾರಿ ತೋರಲು ಎಲ್ಲ ಅನುಕೂಲಗಳೂ ಇವೆ. ಮೈಸೂರು, ಗುಲ್ಬರ್ಗಗಳಲ್ಲಿ ಕಿವುಡರಿಗಾಗಿ ಮೈಸೂರು ಸರ್ಕಾರದ ಶಾಲೆಗಳಿವೆ. ಕಿವುಡರ ನೆರವಿಗಾಗಿರುವ ಸಂಘವೊಂದು ಬೆಂಗಳೂರಿನಲ್ಲಿ ಖಾಸಗಿಯಾಗಿ ಶಾಲೆಯೊಂದನ್ನು ಚೆನ್ನಾಗಿ ನಡೆಸುತ್ತಿದೆ. ವಯಸ್ಕ ಕಿವುಡರ ತರಬೇತಿಗಾಗಿ ಹೈದರಾಬಾದಿನಲ್ಲಿ ಭಾರತ ಸರಕಾರ ಒಂದು ಶಾಲೆಯನ್ನು ನಡೆಸುತ್ತಿದೆ.ಮುಂಬಯಿ, ಲಕ್ನೊ, ಕಲ್ಕತ್ತಗಳಲ್ಲಿ ಕಿವುಡರ ಶಿಕ್ಷಕರ ತರಬೇತುವನ್ನು ಕೊಡುತ್ತಿದ್ದಾರೆ. ಅಖಿಲಭಾರತ ವಾಕ್‍ಶ್ರವಣ ಸಂಸ್ಥೆಯ ವತಿಯಿಂದ ಮೈಸೂರಿನಲ್ಲೂ ಇಂಥ ಏರ್ಪಾಡು ಆಗಲಿದೆ.ಭಾರತ ಸರ್ಕಾರದ ಸಮಾಜ ಏಳಿಗೆ ಶಾಖೆಯ ವತಿಯಿಂದ ಅಂಗವಿಕಲರ ಶಿಕ್ಷಣದ ರಾಷ್ಟ್ರೀಯ ಸಲಹಾಮಂಡಲಿ 1955ರಿಂದಲೂ ಕೆಲಸ ಮಾಡುತ್ತಿದೆ. ಅಂಗವಿಕಲರ, ಕಿವುಡರ ಶಿಕ್ಷಣ, ತರಬೇತು, ಮರುವಸತಿ, ನೌಕರಿ, ಏಳಿಗೆಗಳ ವಿಚಾರವಾಗಿ ಆಗಿಂದಾಗ್ಗೆ ಸರ್ಕಾರಕ್ಕೆ ಇದು ಸಲಹೆಗಳನ್ನು ನೀಡುತ್ತದೆ.ಕಿವುಡರ ಅಖಿಲಭಾರತ ಒಕ್ಕೂಟ 1955ರಲ್ಲಿ ಸ್ಥಾಪನೆಯಾಯಿತು. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಕಿವುಡರಲ್ಲಿ ಒಗ್ಗಟ್ಟು, ಅವರ ಹಿತಸಾಧನೆ ಅಭಿಪ್ರಾಯಗಳ ಪ್ರಚಾರ ಇದರ ಧ್ಯೇಯಗಳು. ಪ್ರತಿವರ್ಷ ಬಾವುಟ ದಿನವನ್ನು ಆಚರಿಸಿ ಕಿವುಡ ಮೂಕರ ಏಳಿಗೆಗಾಗಿ ಹಣ ಕೂಡಿಹಾಕಿ, ಕಿವುಡರಿಗಾಗಿ ಅಚ್ಚುಕೂಟ ಭಾವಚಿತ್ರಣ ಸಂಸ್ಥೆ, ಕಲಿಸುವ ಶಾಲೆ, ತಾಂತ್ರಿಕ ಶಾಲೆಗಳನ್ನು ತೆರೆಯಲಾಗುವುದು, ಸರ್ಕಾರ ಮತ್ತಿತರಡೆಗಳಿಂದ ಬರುವ ಚಂದಾ ದತ್ತಿ, ಪುದುವಟ್ಟು, ಇಡಿಗಂಟುಗಳೇ ಇದರ ಮುಖ್ಯ ವರಮಾನ.
ಕಿವುಡರ, ಮಂದಗಿವಿಯವರ ತರಬೇತು ಮತ್ತು ಏಳಿಗೆ-ಪಾಶ್ಚತ್ಯ ದೇಶ
[ಬದಲಾಯಿಸಿ]ಹುಟ್ಟಿನಿಂದಲೊ ಎಳೆಯ ವಯಸ್ಸಲ್ಲೊ ಕಿವಿ ಕೇಳದಂತಾದವರಿಗೆ, ಕಿವಿ ಮಂದವಾದವರಿಗೆ ಇಲ್ಲವೆ ವಯಸ್ಸಾದ ಮೇಲೆ ಕಿವುಡಾದವರಿಗೆ ಕಲೆ, ವಿದ್ಯೆಗಳನ್ನು ಕಲಿಸುವಿಕೆ, ಮತ್ತವರ ಏಳಿಗೆಯ ಸಾಧನೆಗಳ ಬಗ್ಗೆ ಹೊರದೇಶಗಳಲ್ಲಿ ಸಾಕಷ್ಟು ಕೆಲಸ ನಡೆದಿದೆ. ಹುಟ್ಟಿನಿಂದಲೇ ಹೀಗಾದವರ ತರಬೇತೇ ಬೇರೆ, ಕಿವುಡಾದ ವಯಸ್ಕನಿಗೆ ಮತ್ತೆ ಕಲಿಸುವುದೇ ಬೇರೆ. ಮುಂದುವರಿದ ನಾಡುಗಳಲ್ಲೂ ಹುಟ್ಟು ಕಿವುಡರಿಗೆ ಏನನ್ನೂ ಕಲಿಸುವುದು ಸಾಧ್ಯವೇ ಇಲ್ಲವೆಂಬ ನಂಬಿಕೆ 16ನೆಯ ಶತಮಾನದ ತನಕ ಇತ್ತು. ಪೂರ್ವಿಕರಲ್ಲಿ ಈ ನಂಬಿಕೆಗೆ ಎರಡು ಕಾರಣಗಳಿದ್ದುವು. ವಿದ್ಯೆಯನ್ನು ಕಲಿಸುವುದೆಲ್ಲ ಮುಖ್ಯವಾಗಿ ಬಾಯಿ ಮಾತಿನಿಂದ ನಡೆಯುತ್ತಿದ್ದುದರಿಂದ ಕಿವುಡರಿಗದು ದಕ್ಕದಂತಾಗಿತ್ತು. ಅಲ್ಲದೆ. ಮಾತಿನ ಅಂಗಗಳಿಗೂ ಕಿವಿಗೂ ಏನೋ ನೇರಸಂಬಂಧ ಇದೆಯೆಂದು ನಂಬಿದ್ದ ಕಾಲವದು. ಆದ್ದರಿಂದ ಮಾತನ್ನು ಕೇಳಿಸಿಕೊಂಡು ಅರ್ಥ ಮಾಡಿಕೊಂಡು ಮಾತನಾಡಲಾಗದ್ದಕ್ಕೆ, ಮಾತಿನ ಅಂಗವೇ ಊನವಾದಂತೆ ತಿಳಿದು. ಮೂಕತನ ಸರಿಪಡಿಸಲಾಗದ ವಿಕಲತೆ ಎಂದು ಆ ಜನ ಭಾವಿಸಿದ್ದರು. ಹುಟ್ಟು ಕಿವುಡಿನ ಪರಿಣಾಮವೇ ಮೂಕತನ, ಕಿವುಡು ಕೂಸಿಗೆ ಮಾತುಗಳು ಕೇಳಿಸಲಾಗದ್ದರಿಂದಲೇ ಮೂಕತನ ತೋರುವುದೆಂದು ವೈದ್ಯರಿಗೂ ಶಿಕ್ಷಕರಿಗೂ ಅರಿವಾದ ಮೇಲೇ ಕಿವುಡರಿಗೂ ವಿದ್ಯೆ ಕಲಿಸುವ ನಿಜವಾದ ಯತ್ನಗಳು ಮೊದಲಾದುವು.16ನೆಯ ಶತಮಾನದಲ್ಲಿ ಮೊಟ್ಟಮೊದಲಾಗಿ. ಕಿವುಡರಿಗೆ ಮಾತಾಡಲು, ಓದಲು ಬರೆಯಲು ಕಲಿಸಲು ಎದೆಗುಂದದೆ ಹೆಣಗಾಡಿದವ ಸ್ವೇನಿನ ಸಂನ್ಯಾಸಿ ಷಿಡ್ರೊಪಾನ್ಸ್ ಡಿ ಲಿಯೋನ್. ಇವನ ಮುಂಚೆಯೇ ಹೆಕ್ಲಾಮಿನ ಪಾದ್ರಿಯೊಬ್ಬ ಕಿವುಡ ಹುಡುಗನಿಗೆ ಬಾಯಿಂದ ಉಚ್ಚರಿಸುವುದನ್ನು ಹೇಳಿಕೊಟ್ಟಿದ್ದನ್ನೂ ಜಿರೊನಿಮೊ ಕಾರ್ಡೆನೊ (1501-76) ತನ್ನ ಪುಸ್ತಕದಲ್ಲಿ ಹುಟ್ಟಾಕಿವುಡಮೂಕನಾಗಿದ್ದವನೊಬ್ಬ ಓದಿ ಬರೆವುದನ್ನು ಕಲಿತು, ಮನದಲ್ಲಿದ್ದುದನ್ನು ಹೇಳುವಂತಾದುದನ್ನೂ ಪಿಡ್ರೊಪಾನ್ಸ್ ಕೇಳಿದ್ದಿರಬಹುದು.
ಜುವನ್ ಪಾಬ್ಲೊ ಬೋನೆ
[ಬದಲಾಯಿಸಿ]ಸ್ವೇನಿಗನಾದ ಜುವನ್ ಪಾಬ್ಲೊ ಬೋನೆ ಕಿವುಡರ ಶಿಕ್ಷಣದ ಮೇಲಿನ ಮೊದಲ ಪುಸ್ತಕವನ್ನು ತನ್ನ ತಾಯ್ನುಂಡಿಯಲ್ಲಿ ಬರೆದ (1620). ಇದೇ ವಿಚಾರವಾಗಿ ಇಂಗ್ಲಿಷ್‍ನಲ್ಲಿ ಮೊದಲ ಪುಸ್ತಕ ಬರೆದವ ಜಾನ್ ಬುಲ್ವರ್ (1648). ಕೆಲವೇ ವರ್ಷಗಳಲ್ಲಿ ಆಕ್ಸ್‍ಫರ್ಡಿನ ವೈದ್ಯ ವಿಲಿಯಂ ಹೋಲ್ಡರೂ ಗಣಿತಜ್ಞ ಜಾನ್ ವಾಲಿಸನೂ ಕಿವುಡರಿಗೆ ಕಲಿಸುತ್ತ, ತಮ್ಮ ವಿಧಾನಗಳ ವಿಚಾರಗಳನ್ನು ಬರೆದಿಟ್ಟರು. ಇಕ್ಕೈಸನ್ನೆಯ ಅಕ್ಷರಮಾಲೆಯ ನೆರವಿನಿಂದ ಬರೆದು ಓದುವುದನ್ನು ಕಲಿಸುವ ರೀತಿಗಳನ್ನು ಜಾರ್ಚ್‍ಡಲ್ಗಾರ್ನೋ ಪ್ರಕಟಿಸಿದ (1680). ಹೀಗೆ ಕಿವುಡರಿಗೆ ಕಲಿಸುವುದರಲ್ಲಿ ಯೂರೋಪಿನಲ್ಲೂ ಆಸಕ್ತಿ ಹುಟ್ಟಿತು.18ನೆಯ ಶತಮಾನದಲ್ಲಿ ಬೇರೆ ಬೇರೆ ತೆರೆನ ಎರಡು ಶಿಕ್ಷಣ ಪದ್ಧತಿಗಳು ತಲೆಹಾಕಿದುವು. ಕೈಸನ್ನೆಗಳಿಂದ ಕಿವುಡರಿಗೆ ವಿದ್ಯೆ ಕಲಿಸುವ ಫ್ರಾನ್ಸಿನ ಪದ್ಧತಿಯನ್ನು ಚಾರಲ್ಸ್ ಮೈಕೇಲ್ ಜಾರಿಗೆ ತಂದ. ಸ್ವಾಮ್ಯುಅಲ್ ಹೀನಿಕೆ ಜಾರಿಗೆ ತಂದ ತುಟಿಯೋದಿನ (ಲಿಪ್ ರೀಡಿಂಗ್) ಜರ್ಮನಿಯ ಪದ್ಧತಿಯನ್ನು ಮೋರಿಟ್ಚ್ ಹಿಲ್ (1805-74) ಇನ್ನಷ್ಟು ಸುಧಾರಿಸಿದ. ಇವರಿಬ್ಬರಲ್ಲಿ, ಚಾರಲ್ಸ್ ಮೈಕೇಲ್ ಕಿವುಡರಲ್ಲಿ ತೋರುತ್ತಿದ್ದ ದಯಾಪರತೆ, ದಾನಶೀಲತೆ, ಹೇರಾಸಕ್ತಿಗಳು ಬ್ರಿಟನ್, ಅಮೆರಿಕಗಳ ಎಷ್ಟೋ ಶಿಕ್ಷಕರ ಮೆಚ್ಚುಗೆ ಪಡೆದುವು. ಅವರಲ್ಲಿ ಕೆಲವರು ಪ್ಯಾರಿಸ್ಸಿನಲ್ಲಿದ್ದ ಅವನ ಶಾಲೆಗೆ ಭೇಟಿಯಿತ್ತು, ಸದ್ದಿಲ್ಲದೆ ತಿಳಿಸಿಕೊಡುವ ಅವನ ಪದ್ಧತಿಯನ್ನು ಒಪ್ಪಿಕೊಂಡರು. ವಾಡಿಕೆಯ ಕೈಸನ್ನೆಗಳಿಂದ ತಮ್ಮ ಅನಿಸಿಕೆಗಳನ್ನು ತಿಳಿಸುವ ಒಂದು ಪದ್ಧತಿಯನ್ನು ಆತ ಕಂಡುಹಿಡಿದು ಸುಧಾರಿಸಿದ. ತಮಗೆ ಕಲಿಸಿಕೊಟ್ಟವರೊಂದಿಗೂ ಕೈಸನ್ನೆಗಳನ್ನು ಅರಿತು ಬಳಸುವ ಸಾಮಾನ್ಯರೊಂದಿಗೂ ಕಿವುಡರು ಚೆನ್ನಾಗಿ ಬೆರೆತು, ಬದುಕಿ ಬಾಳುವಂತಾಗಬೇಕೆಂದೇ ಅವನ ಗುರಿಯಾಗಿತ್ತು. ಇದರೆದುರಾಗಿ, ಜರ್ಮನಿಯಲ್ಲಿ ಜಾರಿಯಲ್ಲಿದ್ದ ತುಟಿಯೋದಿನ ಪದ್ಧತಿಯ ಗುರಿ ಸಾಮಾನ್ಯ ಜನರೊಂದಿಗೇ ಹೆಚ್ಚೂ ಕಡಿಮೆ ಸರಾಗವಾಗಿ ಮಾತಾಡುವಾಗ ತುಟಿಯಾಡುವುದನ್ನು ಗಮನಿಸುತ್ತ ಅರಿತುಕೊಳ್ಳವಂತೆ ತುಟಿಯೋದೆ ಮಾತಾಡುವುದನ್ನು ಕಲಿಸುವುದಾಗಿತು. ಇವೆರಡು ಪದ್ಧತಿಗಳೂ ಯೂರೋಪು, ಅಮೆರಿಕಗಳಲ್ಲಿ ಆಗಿಂದಲೂ ರೂಢಿಯಲ್ಲಿವೆ.
ಥಾಮಸ್ ಬ್ರೆಯ್ಡ್‍ವುಡ್ ಎಡಿನ್‍ಬರೋ
[ಬದಲಾಯಿಸಿ]ಥಾಮಸ್ ಬ್ರೆಯ್ಡ್‍ವುಡ್ ಎಡಿನ್‍ಬರೋದಲ್ಲಿ ಕಿವುಡರಿಗಾಗಿ ತೆರೆದುದೇ ಬ್ರಿಟನ್ನಿನಲ್ಲಿ ಮೊದಲನೆಯ ಶಾಲೆ. 1785ರಲ್ಲಿ ಇದನ್ನು ಲಂಡನ್ನಿಗೆ ವರ್ಗಾಯಿಸಲಾಯಿತು. ತುಟಿಯೋದಿನ ಪದ್ಧತಿಯನ್ನಿಲ್ಲಿ ಅನುಸರಿಸಲಾಗುತ್ತಿತ್ತು 6-7 ವರ್ಷಗಳಲ್ಲಿ ಮೊದಲನೆಯ ಸರ್ಕಾರಿ ಶಾಲೆಯೊಂದು ಆರಂಭವಾಯಿತು. ಮುಂದಿನ ಶತಮಾನದಲ್ಲಿ ಕೊನೆಯ ಪಕ್ಷ ಇಪ್ಪತ್ತಾದರೂ ಕಿವುಡ ಮೂಗರ ಪಾಲನಾಲಯಗಳು ತಲೆಯೆತ್ತಿದುವು. ಬಹುಪಾಲು ಇವಲ್ಲಿ ಸದ್ದಿಲ್ಲದೆ ತಿಳಿಸಿಕೊಡುವ ಪದ್ಧತಿಯೇ ಚಾಲ್ತಿಯಲ್ಲದ್ದು ರೂಢಿಯಾಯಿತು. ಇಷ್ಟಾದರೂ ತುಟಿಯೋದಿನ ಮೂಲಕ ಹೇಳಿಕೊಡುವುದರಲ್ಲಿ ಆಸಕ್ತರಾದ ಕೆಲವರು ಶಿಕ್ಷಕರೂ ಇದ್ದರು.ಕಿವುಡರಿಗೆ ಸಂಬಂಧಿಸಿದ ಇನ್ನೂ ಎಷ್ಟೋ ವಿಚಾರಗಳೊಂದಿಗೆ, ಇವೆರಡೂ ಪದ್ಧತಿಗಳ ಅಗುಹೋಗುಗಳನ್ನೂ ಚರ್ಚಿಸಿ ವಿಮರ್ಶಿಸಲು, ಕಿವುಡರಿಗೆ ಕಲಿಸುವವರ ಮೊದಲನೆಯ ಅಂತರರಾಷ್ಟ್ರೀಯ ಕೂಟ (1880) ಮಿಲಾನಿನಲ್ಲಿ ಸೇರಿತ್ತು. ಅಲ್ಲಿ ಫ್ರಾನ್ಸಿನ ಪದ್ಧತಿಗಿಂತ ಜರ್ಮನಿಯವರ ಗುರಿ, ಪದ್ಧತಿಗಳ ಕಡೆಗೇ ಬಹುಮತವೂ ಹೆಚ್ಚು ಒಲವೂ ತೋರಿಬಂತು. ಇಂಗ್ಲೆಂಡಲ್ಲಿ ಈ ಪದ್ಧತಿಯಲ್ಲಿ ನಿರತರಾಗಿದ್ದವರಲ್ಲಿ ಮುಖ್ಯನಾದವ ಥಾಮಸ್ ಆರ್ನಲ್ಡ್. ಮಾಡಿತೋರಿಸಿಕೊಡುವ ಇವನ ಕಲಿಕೆ ಪದ್ಧತಿ, ವಿಧಾನ, ರೀತಿಗಳು ಈಗಲೂ ಹೆಸರಾಗಿವೆ.
ಇತಿಹಾಸ
[ಬದಲಾಯಿಸಿ]ಬ್ರಿಟನ್ನಿನಲ್ಲಿ ಕಿವುಡ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವ ಪಾರ್ಲಿಮೆಂಟಿನ ಮೊಟ್ಟಮೊದಲಿನ ಮಸೂದೆ 1893ರಲ್ಲಿ ಕಾಯಿದೆಯಾಯಿತು. 7-16 ವಯಸ್ಸಿನ ಕಲಿಸಬಲ್ಲ ಎಲ್ಲ ಕಿವುಡ ಮಕ್ಕಳಿಗೂ ಶಿಕ್ಷಣ ಕೊಡಲು ಈ ಕಾಯಿದೆ ಕಡ್ಡಾಯಪಡಿಸಿದ್ದರಿಂದ ಕಿವುಡರಿಗಾಗಿ ಎಷ್ಟೋ ಶಾಲೆಗಳು ತೆರೆದವು. ಇವೆಲ್ಲ ತುಟಿಯೋದಿನ ಪದ್ಧತಿ ಅನುಸರಿಸಿದುವು. ಪ್ರಪಂಚದ ಎರಡು ಮಹಾಯುದ್ಧಗಳ ನಡುವೆ ಕಿವುಡಮಕ್ಕಳಿಗೆ ಎಳೆಯದರಲ್ಲೆ ಶಿಕ್ಷಣ ದೊರೆತು, ಒಂದಿಷ್ಟು ಕಿವಿ ಕೇಳಿಸುವವರಿಗಾಗಿ ಗುಂಪಿನಲ್ಲಿ ಕೇಳುವ ಸಾಧನಗಳು (ಹಿಯರಿಂಗ್ ಎಯ್ಡ್‍ಸ್) ಶಾಲೆಗಳಿಗೆ ದೊರೆತವು.ಇಂಗ್ಲೆಂಡಿನ 1944ರ ವಿದ್ಯಾಭ್ಯಾಸ ಕಾಯಿದೆಯಂತೆ, ಹೆತ್ತವರು ಇಷ್ಟಪಟ್ಟರೆ, ಕಿವುಡಾಗಿ ವಿಕಲರಾದ ಮಕ್ಕಳಿಗೆ ಎರಡನೆಯ ವಯಸ್ಸಿನಿಂದಲೇ ಕಲಿಸುವ ಏರ್ಪಾಡನ್ನು ಸ್ಥಳೀಯ ವಿದ್ಯಾಧಿಕಾರಿಗಳು ಮಾಡುವುದು ಅವರ ಕರ್ತವ್ಯ. ಐದನೆಯ ವರ್ಷದಿಂದ ಶಿಕ್ಷಣ ಕಡ್ಡಾಯವಾಗುತ್ತದೆ. ವಿದ್ಯಾಮಂತ್ರಿ ಬೇರೆ ಏರ್ಪಾಡುಮಾಡದಿದ್ದಲ್ಲಿ ಕಿವುಡರೆನಿಸಿಕೊಂಡ ಎಲ್ಲ ಮಕ್ಕಳಿಗೂ ವಿಶೇಷ ಶಾಲೆಯಲ್ಲಿ ಕಲಿಸಬೇಕು. 5ರಿಂದ 16 ವರ್ಷಗಳ ತನಕ ಪೂರಾ ಶಿಕ್ಷಣ ಕಡ್ಡಾಯ. 19-19 ವರ್ಷಗಳ ಕಿವುಡರಿಗೂ ಮಂದಗಿವಿಯವರಿಗೂ ಇನ್ನೂ ಮುಂದಿನ ಶಿಕ್ಷಣ ಕೊಡಲೂ ವಿದ್ಯಾಧಿಕಾರಿಗಳಿಗೆ ಅಧಿಕಾರವಿದೆ. ಈ ಕಲಿಕೆ ಒಂದು ಹೊತ್ತಿನದಾಗಿರಬಹುದು. ಇಲ್ಲವೇ ಹೆತ್ತವರು ಇಷ್ಟಪಟ್ಟರೆ, ವಿಶೇಷ ಇಲ್ಲವೇ ತಾಂತ್ರಿಕ ಶಾಲೆಯಲ್ಲಿ ಎರಡು ಹೊತ್ತೂ ಪಾಠ ನಡೆಸಬಹುದು. ಸರ್ಕಾರಿ ಶಾಲೆಯಲ್ಲಿನ ಶಿಕ್ಷಣಕ್ಕೆ ಶುಲ್ಕವಿಲ್ಲ. ಆದರೆ ಹೆತ್ತವರು ಖಾಸಗಿ ಶಾಲೆಗಳಲ್ಲೂ ಶುಲ್ಕ ತೆತ್ತು ಓದಿಸಬಹುದು.
ಕಿವುಡಿನ ಪತ್ತೆ
[ಬದಲಾಯಿಸಿ]5 ವರ್ಷಗಳ ಕೆಳಗಿರುವ ಮಕ್ಕಳಲ್ಲಿ ಕಿವಿ ಮಂದವಾಗಿರುವುದನ್ನು ತಿಳಿಯಲು ಹೆತ್ತವರ, ಹೆರಿಗೆಯ, ಮಕ್ಕಳ ಪಾಲನೆಯ ಕೇಂದ್ರಗಳವರು, ಎಳೆಯ ಮಕ್ಕಳ ಶಾಲೆಗಳವರೂ ಮನೆ ವೈದ್ಯರು, ಕಿವಿವೈದ್ಯರು, ಮಕ್ಕಳ ವೈದ್ಯರೊಂದಿಗೆ ಬೆರೆತು ನೆರವಾಗಬೇಕು. ಮಾತಾಡುವ ವಯಸ್ಸಿಗೆ ಬರುವ ಮುಂಚೆಯೇ ಸದ್ದುಮಾಡಿದರೆ ಮಗು ಪ್ರತಿಕ್ರಿಯೆ ತೋರದ್ದನ್ನು ಗಮನಿಸಬೇಕು. ಹಸುಗೂಸುಗಳು ಮತ್ತು ಎಳೆಯ ಮಕ್ಕಳ ಕಿವುಡನ್ನು ಪರೀಕ್ಷಿಸಲು ಒಂದು ವಿಶೇಷ ವಿಧಾನವಿದೆ.5-7 ವಯಸ್ಸಿನ ಮಕ್ಕಳಿಗೂ ಅವರವರ ಆಳವಿಗೆ ತಕ್ಕಂತೆ ಇದೇ ವಿಧಾನ ಆಗಬಹುದು; ಇಲ್ಲವೇ ಎಷ್ಟೋ ಬಾರಿ ಆಡಿಯೊಮೀಟರಿನಿಂದ ಪರೀಕ್ಷಿಸಬಹುದು. ಈ ಮೀಟರಿನಲ್ಲಿ ಎರಡು ಬಗೆಗಳಿವೆ. ಆಡಿದ ಮಾತು ಕೇಳಿಸುವುದನ್ನು ಒಂದು ಪರೀಕ್ಷಿಸಿದರೆ, ಇನ್ರ್ನೆಂದು ಶ್ರುತಿಕವಲಿನಿಂದ ಏಳುವ ಅಚ್ಚ ದನಿಗಳನ್ನು ಕೇಳಿಕೆಯನ್ನು ಪರೀಕ್ಷಿಸುತ್ತದೆ. ದನಿಯ ಏರನ್ನು ಎರಡರಲ್ಲೂ ಚೆನ್ನಾಗಿ ಹತೋಟಿಯಲ್ಲಡಬಹುದು. ಅವಕಾಶ ಇಲ್ಲವಾದ್ದರಿಂದ ಇನ್ನೂ ಬಳಕೆಗೆ ಬಾರದಿರುವ ಆಲಿಸುವ ಒಳಬಲವನ್ನು ಐದು ವರ್ಷ ಮೀರದವರಲ್ಲಿ ಅಳೆಯಬೇಕು. ಆಲಿಸುವ ಬಲವನ್ನು ಶಾಲಾಮಕ್ಕಳ ಎಂದಿನ ವೈದ್ಯ ಪರೀಕ್ಷೆಯಲ್ಲೋ ಪಾಠಗಳಲ್ಲಿ ಹಿಂದೆ ಬೀಳುವ್ಯದರಿಂದಲೋ ಗುರಿತಿಸಿ ಗಮನಿಸಬಹುದು.
ಶಾಲೆ ಸೇರುವ ಮುಂಚಿನ ವಯಸ್ಸಿನ ಕಿವುಡು ಮಕ್ಕಳನ್ನು ಮುಖ್ಯವಾಗಿ 3 ತಂಡಗಳಲ್ಲಿ ವಿಂಗಡಿಸಬಹುದು. 3 ಅಡಿಗಳು ಇಲ್ಲವೇ ಇನ್ನೂ ದೂರದಿಂದ ಬರುವ ಸುಮಾರು ಗಟ್ಟಿಯಾದ ದನಿಯನ್ನು ಕೇಳಿಸಿಕೊಳ್ಳುವವು, ಒಂದು ಅಡಿಯೊಳಗೆ ಮಾತ್ರ ಗಟ್ಟಿಸದ್ದನ್ನು ಆಲಿಸಬಲ್ಲವರು, ಬರೀ ಕಿವಿಯಿಂದ ಏನೂ ಕೇಳದವರು- ಹೀಗೆ. ಐದರೊಳಗಿನವರು ಮಾತು ಕೇಳಿಸಿಕೊಳ್ಳಬಲ್ಲರೆಂಬುದನ್ನು ಕಂಡುಕೊಂಡರೆ, ಮನೆಯಲ್ಲೂ ಕೂಸುಗಳ ಶಾಲೆಯಲ್ಲೂ ತರಬೇತೊಂದಿಗೆ ತೀರ ಎಳೆಯ ವಯಸಿಂದಲೇ ತುಟಿಯೋದಿಂದ ಕಲಿವುದನ್ನೂ ರೂಢಿಸಿಕೊಳ್ಳಬಹುದು. ಉಳಿದಿರುವ ಕೇಳಿಕೆಯ ಬಲ, ಕಿವುಡಾದ ವಯಸ್ಸು ಕಲಿಕೆಯ ಮಟ್ಟಗಳಿಗೆ ತಕ್ಕಂತೆ, ಶಾಲೆಗೆ ಹೋಗುವೆ ಮಕ್ಕಳ ಶಿಕ್ಷಣವನ್ನು ರೂಪಿಸಬೇಕು.ಕಿವಿ ಮಂದವಾಗಿರುವ ಮಕ್ಕಳನ್ನು ಹೀಗೆ ವಿಂಗಡಿಸಬಹುದು: ಸಾಮಾನ್ಯ ಶಾಲೆಯಲ್ಲಿ ಚೆನ್ನಾಗಿ ಮುಂದುವರಿಯಲು ತೊಡಕಾಗದಷ್ಟು ಕೊಂಚವೇ ಕಿವುಡಾದ ಮಕ್ಕಳು, ತರಗತಿಯಲ್ಲಿ ಕೂರಲು ಸರಿಯಾದ ಜಾಗ ಕೊಟ್ಟು, ತುಟಿಯೋದುವುದರಲ್ಲಿ ವಿಶೇಷ ತರಬೇತಿನ ನೆರವನ್ನೋ ಕೇಳುವ ಸಾಧನವನ್ನೋ ಇಲ್ಲವೇ ಇವೆರಡನ್ನೋ ಪಡೆದು, ಅರೆಬರೆ ಕಿವುಡಾಗಿದ್ದರೂ ಎಂದಿನ ಸಾಮಾನ್ಯ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು; ಪೂರಾ ಕಿವುಡಾಗದಿದ್ದರೂ ಕಿವುಡ ಎನಿಸಿಕೊಂಡು ಕಿವುಡರಿಗಾಗಿರುವ ವಿಶೇಷ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು.
ಕಿವುಡರ ಶಾಲೆಗಳು
[ಬದಲಾಯಿಸಿ]ಕಿವುಡರಿಗಾಗಿ ಬ್ರಿಟನ್ನಿನಲ್ಲಿ ಸರ್ಕಾರದ ವಿಶೇಷ ಶಾಲೆಗಳಿವೆ. ದಿನದ ಶಾಲೆಗಳು ಸರ್ಕಾರದವು. ಅನ್ನವಸತಿಗಳೂ ದೊರೆವ ವಿದ್ಯಾಶಾಲೆಗಳು ಖಾಸಗಿಯವು. ಖಾಸಗಿಯವರು ನಡೆಸುವ ದಿನದ ಶಾಲೆಗಳೂ ಇವೆ. ಎಲ್ಲ ಖಾಸಗಿ ಶಾಲೆಗಳಿಗೂ ಸರ್ಕಾರ ಮನ್ನಣೆಯಿತ್ತು ಒಬ್ಬ ವಿದ್ಯಾರ್ಥಿಗೆ ಇಷ್ಟೆಂದು ಕೊಡುಗೆ ಕೊಡುತ್ತದೆ. ಬ್ರಿಟನ್ನಲ್ಲಿ ಬಾಯ್ದೆರೆಯದೇ ಅಲ್ಲದೆ ಸದ್ದಿಲ್ಲದ ಕೈಸನ್ನೆಯ ವಿಧಾನಗಳೆರಡರಲ್ಲೂ ಕಲಿಸುತ್ತಿರುವರು. ಕಿವಿಯಿಂದ ಕೇಳಿಸಿಕೊಳ್ಳಲಾರದ ಮಕ್ಕಳು ಇಂಗ್ಲಿಷನ್ನು ಅರಿತು ಚೆನ್ನಾಗಿ ಬಳಸುವಂತಾಗಲೆಂಬುದೇ ಮುಖ್ಯ ಗುರಿ. ಆದರೆ ಮಾನಸಿಕ ಹಾಗೂ ಸಾಮಾಜಿಕ ಗುರಿಗಳಲ್ಲಿ ಇವೆರಡೂ ಒಂದಕ್ಕೊಂದು ಭಿನ್ನವೆನಿಸಿವೆ.ಸಾಮಾನ್ಯವಾಗಿ, ಯೋಚಿಸುವುದರಲ್ಲಿ ಪದಗಳ ಪಾತ್ರ, ಜನಸಾಮನ್ಯರೊಂದಿಗೆ ವಿಚಾರ ವಿನಿಮಯ ನಡೆಸಲೋಸುಗ ತುಟಿಯೋದುವುದರ, ಮಾತಿನ ಪಾತ್ರ, ಇವುಗಳ ಹೆಚ್ಚಳಿಕೆಯನ್ನು ತುಟಿಯೋದಿನ ವಿಧಾನ ಒತ್ತಿಹೇಳುತ್ತದೆ. ಅವನ ಕಲಿಕೆಯೂ ಇನ್ನೊಬ್ಬರಿಗೆ ತಿಳಿಸುವ ರೀತಿಯೂ ಕೇವಲ ಬೆರಳಿನ ಕಾಗುಣಿತ, ಕೈಸನ್ನೆಳು. ಬರವಣಿಗೆಗಳಿಗೆ ಮಿತಿಗೊಂಡಿರುವುದಕ್ಕಿಂತಲೂ ತುಟಿಯೋದಿನ ವಿಧಾನ ಚೆನ್ನಾಗಿ ಕೈಗೂಡಿರುವ ವಿದ್ಯಾರ್ಥಿ ತನ್ನ ಮನೆಯಲ್ಲೂ ಕೆಲಸಮಾಡುವ ಪರಿಸರದಲ್ಲೂ ಸಾಮಾಜಿಕವಾಗಿ ತುಂಬುಜೀವನ ನಡೆಸಬಲ್ಲನೆಂಬುದು ನಿಜ. ಆದ್ದರಿಂದ ಮೂಲತಃ ಕಿವುಡು, ಮೂಕತನದ ವಿಕಲತೆಯ ವಿಚಾರವಾಗಿ ಯೋಚಿಸುವುದರಲ್ಲಿ ತುಟಿಯೋದಿನ ಹಾಗೂ ಸದ್ಧಿಲ್ಲದೆ ವಿಧಾನಗಳು ಎರಡೂ ಬೇರೆ ಬೇರೆ ಬಗೆಗಳನ್ನು ಸೂಚಿಸುವುವು. ಆಲಿಸುವ ಪ್ರಪಂಚದಲ್ಲಿ ಕಿವುಡ ಮಗು ಬದುಕಿ ಬಾಳಿ ಅದರೊಂದಿಗೆ ಸಂಪರ್ಕ ಬೆಳೆಸಿ ಎಂದಿನ ಸಮಾಜದಲ್ಲಿ ಎಷ್ಟೇ ಮಿತವಾದರೂ ತನ್ನ ಪಾತ್ರವನ್ನು ವಹಿಸುವಂತೆ ಮಾಡುವ ಗುರಿ ತುಟಿಯೋದಿನ ವಿಧಾನಕ್ಕಿದೆ.ಕಿವುಡ ಮಗುವಿಗೆ ಸದ್ದಿಲ್ಲದೆ ವಿಧಾನದ ಕಲಿಕೆಯಲ್ಲಿ ಎಷ್ಟೇ ತರಬೇತು ಕೊಟ್ಟರೂ ಅದರ ಸಮಾಜ ಬಾಳುವೆ, ಚಟುವಟಿಕೆಗಳು ಬೆರಳಿಂದ ಕಾಗುಣಿತ ಬಿಡಿಸುವವರ, ಕೈಸನ್ನೆ ಅರಿತವರು ಮಾತ್ರ ಇರುವ ಸಮಾಜಕ್ಕೆ ಮಿತಿಗೊಂಡಿರುತ್ತದೆ. ಸಾಧಾರಣ ಮಕ್ಕಳಲ್ಲಿ ಇರುವ ಹಾಗೇ ಕಿವುಡ ಮಕ್ಕಳಲ್ಲೂ ಅವುಗಳ ಬುದ್ದಿಶಕ್ತಿ, ಅಳವು, ಇಷ್ಟ. ಹಿಂದಿನ ಅನುಭವ. ಪರಿಸರ-ಇವೆಲ್ಲ ಒಬ್ಬೊಬ್ಬನಲ್ಲೂ ಬೇರೆ ಬೇರೆ. ಆದುದರಿಂದ ತುಟಿಯೋದುವುದರಲ್ಲೂ ಮಾತಾಡುವುದರಲ್ಲೂ ಎಲ್ಲರೂ ಅಷ್ಟೇ ಚೆನ್ನಾಗಿ ಕಲಿಯಲಾರದಾದರೆ, ಸದ್ದಲ್ಲದೆ ವಿಧಾನದಿಂದ ಕಲಿಸುವ ತರಗತಿಗೆ ವರ್ಗವಾಗುವುದು.ಒಳ್ಳೆಯ ಕೇಳುವ ಸಾಧನವಿರುವ, ಚೆನ್ನಾಗಿ ಮುಂದುವರಿಸಿ ಕಿವುಡರ ಶಾಲೆಗಳಲ್ಲಿ ಕೊಂಚವಾದರೂ ಕಿವಿಕೇಳುವ ಮಕ್ಕಳು ಆಲಿಸುವುದರೊಂದಿಗೆ ತುಟಿಯೋದಿ ಮಾತಾಡಲು ಯತ್ನಿಸುವುವು.ತೀರ ಕಿವುಡಾದ ಮಗು ಕೇವಲ ತುಟಿಯೋದಿ ತಿಳಿದುಕೊಳ್ಳುತ್ತದೆ. ಹೆಜ್ಜೆ ಹೆಜ್ಜೆಯಾಗಿ, ತುಟಿಗಳ ಮೇಲೆ ಪದಗಳು ಮೂಡುವುದನ್ನು ನೋಡಲು ಅವಕಾಶ ಕೊಡುತ್ತ ಬರುವುದರಿಂದ, ಕಿವುಡ ಮಗುವಿನ ಯೋಜನೆ, ಅದರ ಸಮಾಜ ಜೀವನ, ತಿಳಿವಳಿಕೆಯ ಗಳಿಕೆಗಳಲ್ಲಿ ಅದರ ಪಾತ್ರ ಮುಖ್ಯವಾಗಬಹುದು. ಕಿವಿ ಸರಿಯಾಗಿ ಕೇಳಿಸುವ ಮಗುವಿನಷ್ಟು ಬೇಗನೆ ಈ ಮಗು ಕಲಿಯಲಾರದು. ಏಕೆಂದರೆ, ಕಿವಿ ಕೇಳುವ ಮಗು ಶಾಲೆಗೆ ಬರುವ ಹೊತ್ತಿಗೇ ಅರ್ಥವಾಗುವ ರೂಪದಲ್ಲಿ ಬಳಕೆಯ ಮಾತುಗಳನ್ನು ತಿಳಿದು ಬಳಸುವಂತಿರುವುದು. ಆದರೆ, ಕಿವುಡ ಮಗು ಶಾಲೆಗೆ ಕಾಲಿಟ್ಟಮೇಲೇ ಮಾತಾಡಲು ಕಲಿಯಬೇಕಾಗುತ್ತದೆ. ತುಟಿಯೋದು. ಜೊತೆಗೆ ಉಚ್ಚಾರ-ಇವೆರಡನ್ನೂ ಹೊಚ್ಚ ಹೊಸದಾಗಿ ಕಲಿಯಲೇಬೇಕು. ಗೊತ್ತಾದ ನೆರವೂ ವಿಶೇಷ ತರಬೇತೂ ಇಲ್ಲದೆ ತನಗೆ ತಾನೇ ಇವೆರಡನ್ನೂ ಇದು ಕಲಿವಂತಿಲ್ಲ. ಇನ್ನೊಬ್ಬರಿಗೆ ಕೇಳಿಸುವ ಅರ್ಥವಿರುವ, ಉಚ್ಚರಿಸುವ ಮಾತನ್ನು ಆಡಲು, ಮಗುವಿನ ಮುಟ್ಟಿ ತಿಳಿವ ಅರಿವು ತಾಳಗತಿಯನ್ನು ಗಮನಿಸುವ ಒಳಬಲವೂ ಮುಖ್ಯವಾದುವು. ಕಿವುಡು ಮಗು ಕೊಂಚವಾದರೂ ಅಲಿಸಬಹುದಾದರೆ, ಅದಕ್ಕೆ ಅರ್ಥವಾಗುವ ಮಾತನ್ನು ಕೇಳುವುದರ ಜೊತೆಗೇ ತುಟಿಯೋದುತ್ತಿದ್ದರೆ, ನುಡಿ ಬೇಗನೆ ಹತ್ತುತ್ತದೆ. ಅದರ ಮಾತಿನ ಮಟ್ಟವೂ ಮೇಲಾಗುತ್ತದೆ. ಬರುಬರುತ್ತ ಬಾಯ್ದೆರೆಯ ಶಿಕ್ಷಣಕ್ಕೆ ತಕ್ಕನಾಗುವ ಕಿವುಡ ಮಗು ಮಾತಿಲ್ಲದ ಗತಿಯಿಂದ ಮಾತುಗಳು ತುಂಬಿ ಬರುತ್ತವೆ. ಬೇರೆಯವರು ಸರಿಯಾಗಿ ಉಚ್ಚರಿಸಿ ಆಡಿದ ಮಾತನ್ನು ತಿಳಿವಂತಾಗುತ್ತದೆ.
ತುಟಿಯೋದುವುದು
[ಬದಲಾಯಿಸಿ]ಕಿವುಡ ಮಗುವಿನ ಕಲಿಕೆಯ ಮೊದಲ ಹಂತಗಳಲ್ಲಿನ ತುಟಿಯೋದಿನ ಪಾತ್ರ ಮುಂದೆಂದಾದರೂ ಕಿವುಡಾದ ವಯಸ್ಕನದಕ್ಕಿಂತ ಬೇರೆ ಆಗಿರುವುದು. ಕಿವುಡ ಮಗು ತಿಳಿದುಕೊಂಡು ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ತುಟಿಯೋದುವುದೇ ಮುಖ್ಯ ದಾರಿ. ಆದರೆ ವಯಸ್ಕನಿಗೂ ಮಾತು ಕಲಿತಮೇಲೆ ಕಿವುಡಾದ ಮಗುವಿಗೂ ತನಗಾಗಲೇ ಗೊತ್ತಿರುವ ನುಡಿಯನ್ನು ಅರಿಯಲು ತುಟಿಯೋದುವುದು ಒಂದು ಹೊಸದಾರಿ ಅಷ್ಟೆ.ತನ್ನೊಂದಿಗೋ ಬೇರೆಯವರೊಂದಿಗೋ ಜನ ಕೇಳಿಸುವ ದೂರದಲ್ಲಿ ಮಾತಾಡುತಿರುವಾಗ ಕಿವಿ ಚೆನ್ನಾಗಿ ಕೇಳುವ ಮಗು ಪದಗಳು, ವಾಕ್ಯಗಳ ಪೂರ್ತಿ ಪಾಠವನ್ನು ಆಲಿಸುವುದು. ಆದರೆ ಅದೇ ಕಿವುಡ ಮಗು ತುಟಿಯೋದುತ್ತಿರುವಾಗ ಪದಗಳ ವಾಕ್ಯಗಳ ಪೂರ್ತಿ ಪಾಠವನ್ನು ಅಲ್ಲೊಂದಿಲ್ಲೊಂದು ಮಾತ್ರ ತಿಳಿದುಕೊಳ್ಳಬಲ್ಲುದು. ಓದಿಸುವುದರಿಂದ ಪೂರ್ತಿ ಪಾಠಗಳನ್ನು ತಿಳಿಸಿಕೊಡಬಹುದು. ಈ ಕಾರಣದಿಂದಲೇ ತುಟಿಯೋದುವುದನ್ನು ಆರಂಭಿಸಿದ ಮೇಲೆ, ಅದರ ಜೊತೆಗೆ ಓದುವುದನ್ನೂ ಕಲಿಸುತ್ತ ಬಂದರೆ ಒಳ್ಳೆಯದು. ಒಟ್ಟಿನಲ್ಲಿ ಕಿವಿಕೇಳುವಷ್ಟು ಆಲಿಸುತ್ತ ತುಟಿಯೋದುತ್ತ ಮಾತಾಡುತ್ತ, ಓದುವುದಾದರೆ ಮಾತ್ರ ಕಿವುಡ ಮಗುವಿಗೆ ಹೇಳಿಕೊಟ್ಟಿದ್ದು ಚೆನ್ನಾಗಿ ಹತ್ತಿ ನಿಲ್ಲುತ್ತದೆ.
ಬೆರಳು ಕಾಗುಣಿತ
[ಬದಲಾಯಿಸಿ]ಬ್ರಿಟನ್ನಿನಲ್ಲಿ ಇಕ್ಕೈಸನ್ನೆಯ ಅಕ್ಷರಮಾಲೆಯೂ ಅಮೇರಿಕ ಮತ್ತಿತರ ದೇಶದಲ್ಲಿ ಒಂಟಿಕೈಸನ್ನೆಯದೂ ಚಾಲ್ತಿಯಲ್ಲಿವೆ. ಪುರಾತನ ಕಾಲದಿಂದಲೂ ಅಂಕಿಗಳನ್ನು ಬೆರಳುಗಳಲ್ಲಿ ಸನ್ನೆಮಾಡಿ ತೋರುವ ವಾಡಿಕೆಯಿದೆ. ಮೂಕನುಡಿಯಾಗಿ ಬೆರಳುಗಳಿಂದ ಕಾಗುಣಿತ ಬಿಡಿಸುವ ಒಂದು ಬಗೆ ಮಧ್ಯಯುಗದಲ್ಲಿ ಬಳಕೆಯಲ್ಲಿದ್ದಂತೆ ತೋರುತ್ತದೆ. ಮೂರು ಒಂಟಿಕೈ ಅಕ್ಷರಮಾಲೆಗಳನ್ನು ಕಾಸ್ಮಾಸರ್ ಕೊನೆಲ್ಲಿಯಸ್ (1579) ವಿವರಿಸಿದ್ದ. ಇವನ್ನು ಅನುಸರಿಸಿ ಬೋನೆ ಒಂಟಿ ಕೈಬೆರಳು ಅಕ್ಷರ ಮಾಲೆಯನ್ನು ಬಣ್ಣಸಿದ. ಗಲ್ಲಾಡೆಟ್ ಇದನ್ನೇ ಫ್ರಾನ್ಸಿಗೂ ಆಮೇಲೆ ಅಮೆರಿಕಕ್ಕೂ ತಂದ. ಬ್ರಿಟನ್ ಒಂದನ್ನು ಬಿಟ್ಟರೆ, ಉಳಿದೆಲ್ಲ ನಾಡುಗಳಲ್ಲೂ ಈಗ ಜಾರಿಯಲ್ಲಿರುವ ಬೆರಳು ಕಾಗುಣಿತ ಈ ವಿಧಾನವೇ; ಇಕ್ಕೈಸನ್ನೆಯ ಇಂಗ್ಲಿಷ್ ಕಾಗುಣಿಯ ಬ್ರಿಟಿನ್ನಿನಲ್ಲಿ ಜಾರಿಯಲ್ಲಿದೆ.ಬೆರಳು ಕಾಗುಣಿತದಲ್ಲಿ ಇಂಗ್ಲಿóಷ್ ಅಕ್ಷರಮಾಲೆಯ ಒಂದೊಂದು ಅಕ್ಷರವನ್ನೂ ಬಿಡಿಸಬೇಕು. ಕೈಸನ್ನೆ ಅಕ್ಷರಮಾಲೆಯಿಂದ ಕಲಿತ ನುಡಿ ಬಾಯ್ದೆರೆಯಿಂದ ಕಲಿತ ಹಾಗೇ ಇರುವುದು. ಮಾತಾಡುವುದನ್ನು ಬಿಟ್ಟರೆ, ಬೆರಳು ಕಾಗುಣಿತದಿಂದಲೋ ಬರೆದ ಇಂಗ್ಲಿಷಿಂದಲೋ ಕಿವುಡ ತನ್ನ ಮನದಲ್ಲಿರುವುದನ್ನು ಹೊರಪಡಿಸುವನು. ಬೆರಳು ಕಾಗುಣಿತ ತಿಳಿದು ಬಳಸುವವರೊಂದಿಗೆ ಮಾತ್ರ ಇದು ಫಲಕಾರಿ. ಆದರೆ ದೂರದಿಂದ ತುಟಿಯೋದುವುದು ಕಷ್ಟ. ಚೂರದಿಂದಲೇ ಕಂಡು ತಿಳಿಯಬಹುದಾದ್ದರಿಂದ ಹುಟ್ಟು ಕಿವುಡರ ಕೂಟಗಳಲ್ಲಿ ಕೈಸನ್ನೆ ವಿಧಾನ ಹೆಚ್ಚು ಬಳಕೆಗೆ ಬರುತ್ತದೆ.
ಸನ್ನೆಗಳು
[ಬದಲಾಯಿಸಿ]ತಮಗೆ ತಾವೆ ಮಾತನಾಡುವುದು ಅಭ್ಯಾಸವಾಗುವ ಮೊದಲೇ ಕಿವಿ ಕೇಳಲಿ ಕೇಳದಿರಲಿ, ಎಲ್ಲ ಎಳೆಯ ಮಕ್ಕಳೂ ಹೆಚ್ಚು ಕಡಿಮೆಯಾಗಿ ತೋರುವ ಹಾವಭಾವಗಳಿಗೆ ಈ ಪದವನ್ನು ಬಳಸುವುದಿಲ್ಲ. ವಾಡಿಕೆಯಲ್ಲಿರುವ ಹಾವಭಾವ ಸನ್ನೆಗಳನ್ನು ಕಿವುಡರೂ ಎಷ್ಟೋ ಬಾರಿ ತಂತಮ್ಮಲ್ಲೇ ಬಳಸುತ್ತಾರೆ. ವಾಡಿಕೆಯಲ್ಲಿರುವವನ್ನೇ ತಮ್ಮ ಸನ್ನೆಗಳನ್ನಾಗಿ ರೂಪಿಸಿಕೊಂಡಿರುವು. ಒಂದೊಂದು ಸನ್ನೆಗೂ ಅವರದೇ ಬೇರೆ ಅರ್ಥವಿದೆ. ಸದ್ದಿಲ್ಲದೆ ಸನ್ನೆ ಪದ್ಧತಿಯೊಂದಿಗೆ ಇವೂ ಉಳಿದು ಬಂದಿವೆ. ಇವುಗಳಲ್ಲಿ ಬಹುಪಾಲು ಪದಗಳನ್ನು ಸೂಚಿಸದೆ, ಮನೋಭಾವನೆಗಳನ್ನು ತೋರಿಸುವುವು. ಇದರ ಬಳಕೆಯಲ್ಲಿ ಯಾವ ವ್ಯಾಕರಣ ಸೂತ್ರಗಳೂ ಇಲ್ಲ. ಆದರೆ ಈ ಪದ್ಧತಿಯ ಮೂಲಕರ್ತರು ಇದಕ್ಕೆ ವ್ಯಾಕರಣ ಸೂತ್ರಗಳನ್ನೂ ಹೇಳಬಹುದೆನ್ನುವರು. ಸರ್ ರಿಚರ್ಡ್ ಪೇಜೆಟ್ ಇಂದಿನ ಹಾವ ಭಾವ ಸನ್ನೆಗಳ ಪದ್ಧತಿಯನ್ನು ರೂಪಿಸಿದ್ದಾನೆ.
ಕಸಬು ತರಬೇತು
[ಬದಲಾಯಿಸಿ]ಶಾಲೆ ಕಲಿಕೆ ಮುಗಿದ ಮೇಲೆ ಹೊಟ್ಟೆಪಾಡಿಗಾಗಿ ಮುಂದೆ ಇವರೆಲ್ಲ ಒಂದು ಕಸಬನ್ನು ಹಿಡಿಯುವುದರಿಂದ, ಕಿವುಡರಿಗೆ ಕಲಿಸುವಾಗಲೆಲ್ಲ ಕಸಬಿಗಾಗಿ ತರಬೇತು ಕೊಡುವುದು ಮುಖ್ಯ. ಕೈಯಿಂದ ಮಾಡಲಾಗದ ಕಸಬನ್ನು ಹಿಡಿಯುವವರು ಅಪರೂಪ. ಎಲ್ಲ ಕಿವುಡರ ಶಾಲೆಗಳಲ್ಲೂ ಕೈಕೆಲಸದ ಕಸಬುಗಳನ್ನು ಕಲಿಸುವ ಏರ್ಪಾಡುಗಳಿರುತ್ತವೆ. ಇನ್ನೂ ಕೆಲವಲ್ಲಿ ಕಸಬು ಹಿಡಿಯಲು ಕುಶಲ ಕಲೆಗಳನ್ನೂ ಓದಿನ ಜೊತೆಗೋ ಕೊನೆಯ 3 ವರ್ಷಗಳಲ್ಲೋ ಕಲಿಸುವರು.
ಗಳಿಸಿದ ಕಿವುಡತನ
[ಬದಲಾಯಿಸಿ]ಕಿವುಡರು, ಮಂದಗಿವಿಯವರು ಎಂದರೆ ಯಾವ ತೆರನ ವೈದ್ಯ ಚಿಕಿತ್ಸೆ ಇಲ್ಲವೇ ಶಸ್ತ್ರಕ್ರಿಯೆಯಿಂದಲೂ ಸರಪಡಿಸಲಾಗದ ಕಿವುಡು ಅನುಭಿಸುತ್ತಿರುವವರು. ಇದಕ್ಕೆ ಎರಡು ಪರಿಹಾರಗಳಿವೆ. ತುಟಿಯೋದುವುದು ಒಂದು; ತಕ್ಕನಾದ ಕೇಳುವ ಸಾಧನವನ್ನು ಹಾಕಿಕೊಂಡು ಬಳಸುವುದು ಎರಡನೆಯದು. ಆದರೆ ಬಹು ಮಟ್ಟಿಗೆ ಇವೆರಡೂ ಸೇರಿದರೇ ಅನುಕೂಲ ಹೆಚ್ಚು. ತುಟಿಯೋದುವುದನ್ನು ಕೆಲವು ಶಾಲೆಗಳಲ್ಲಿ ಮಾತ್ರ ಕಲಿಸುವರು. ಕೆಲವೆಡೆ ಇವರಿಗಾಗಿ ಮಿತ್ರ ಮಂಡಲಿಗಳೂ ಇವೆ.
ಉಲ್ಲೇಖಗಳು
[ಬದಲಾಯಿಸಿ]- ↑ http://www.kannadaprabha.com/districts/chikkamagalur/%E0%B2%B6%E0%B3%8D%E0%B2%B0%E0%B2%B5%E0%B2%A3%E0%B2%AE%E0%B2%BE%E0%B2%82%E0%B2%A7%E0%B3%8D%E0%B2%AF%E0%B2%B0%E0%B2%BF%E0%B2%97%E0%B3%86-%E0%B2%86%E0%B2%B6%E0%B3%8D%E0%B2%B0%E0%B2%AF-%E0%B2%95%E0%B2%B2%E0%B3%8D%E0%B2%AA%E0%B2%BF%E0%B2%B8%E0%B2%BF/114919.html[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.sahilonline.net/ka/dumduff-association