ಕಾಸ್ಯಾಕರು
ಕಾಸ್ಯಾಕರು ಮಧ್ಯಯುಗದಲ್ಲಿ ಕಪ್ಪುಸಮುದ್ರದ ಉತ್ತರಕ್ಕಿರುವ ಹುಲ್ಲುಗಾವಲು ಪ್ರದೇಶಗಳಲ್ಲಿ, ಮಧ್ಯ ಏಷ್ಯ-ತುರ್ಕಿ ಪ್ರಾಂತ್ಯಗಳಲ್ಲಿ ವಾಸ ಮಾಡುತ್ತಿದ್ದ ಅಲೆಮಾರಿ ಜನಾಂಗ.
ಪದ ಉತ್ಪತ್ತಿ
[ಬದಲಾಯಿಸಿ]ಕಾಸ್ಯಾಕ್ ತುರ್ಕಿ ಭಾಷೆಯಿಂದ ಬಂದ ಪದ. ಅದರ ಅರ್ಥ ಸಾಹಸಿ, ದಂಗೆಕೋರ ಮತ್ತು, ಸಾಮಾನ್ಯವಾಗಿ, ಸ್ವತಂತ್ರ ಮನುಷ್ಯ ಎಂದು.
ಭೌಗೋಳಿಕ ಹರಡುವಿಕೆ
[ಬದಲಾಯಿಸಿ]ರಷ್ಯದ ಉಕ್ರೇನ್ ಪ್ರಾಂತ್ಯದಲ್ಲಿ ಕಾಸ್ಯಾಕರು ತಮ್ಮ ಪ್ರಭಾವ ಹರಡಿದ್ದರು. ಉಕ್ರೇನಿಯನರಿಗೆ ಮೊದಲು ಕಾಸ್ಯಾಕರು ಎಂಬ ಹೆಸರು ಬಂದಿದ್ದರೂ ಎಲ್ಲ ಕಾಸ್ಯಾಕರೂ ಉಕ್ರೇನಿಯನರಾಗಿರಲಿಲ್ಲ. ಕಾಸ್ಯಾಕ್ ಜನಾಂಗದ ಬಹುಮಂದಿ ತುರ್ಕಿ ಜನಾಂಗಕ್ಕೂ ಇನ್ನು ಹಲವರು ಮಿಶ್ರಬುಡಕಟ್ಟುಗಳಿಗೂ ಸೇರಿದ್ದರು. 15ನೆಯ ಶತಮಾನದಲ್ಲಿ ಪೂರ್ವ ಯೂರೋಪಿನ ನೀಪರ್, ಡಾನ್ ಮತ್ತು ಅವುಗಳ ಉಪನದಿಗಳ ತೀರಪ್ರದೇಶಗಳಲ್ಲಿ ಇವರು ಪ್ರಾಬಲ್ಯ ಪಡೆದರು. ಇವರ ಸಾಮಾಜಿಕ ಜೀವನ ಅಮೆರಿಕದ ಅನಾಗರಿಕ ಪಶ್ಚಿಮ ಜನಾಂಗಗಳ ಜೀವನವನ್ನು ಹೋಲುತ್ತಿತ್ತು.
ಇತಿಹಾಸ
[ಬದಲಾಯಿಸಿ]15ನೆಯ ಶತಮಾನದಲ್ಲಿ ಕ್ರಿಮಿಯದ ಖಾನರೂ ರಷ್ಯದ ಅಧಿಪತಿಗಳೂ ಕಾಸ್ಯಾಕರನ್ನು ತಮ್ಮ ಗಡಿಕಾವಲಿಗೆ ನೇಮಿಸಿದ್ದರು. 16ನೆಯ ಶತಮಾನದಲ್ಲಿ ಪೋಲೆಂಡಿನ ದೊರೆಗಳು ತಮ್ಮ ರಾಜ್ಯದ ಮೇರೆಗಳನ್ನು ಟಾರ್ಟರರ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಶೂರರಾದ ಕಾಸ್ಯಾಕರನ್ನು ತಮ್ಮ ಸೇನೆಗೆ ಸೇರಿಸಿಕೊಂಡರು. 17ನೆಯ ಶತಮಾನದಲ್ಲಿ ಉಕ್ರೇನ್ ಪ್ರಾಂತ್ಯ ರಷ್ಯ ಮತ್ತು ಪೋಲೆಂಡುಗಳ ನಡುವೆ ಹಂಚಿ ಹೋದಾಗ ರಷ್ಯನರು ಕಾಸ್ಯಾಕರನ್ನು ಗಡಿ ಕಾವಲಿಗೆ ಉಪಯೋಗಿಸಿಕೊಂಡರಲ್ಲದೆ, ಯೂರಲ್ ಪರ್ವತಾವಳಿಗೆ ಆಚೆ ತಮ್ಮ ರಾಜ್ಯವನ್ನು ವಿಸ್ತರಿಸಲೂ ಈ ಯೋಧ ಜನಾಂಗದ ಉಪಯೋಗ ಪಡೆದರು. ಇರ್‍ಮಾಕ್ ಟಿಮೋಫೀವಿಚ್ ಎಂಬ ಕಾಸ್ಯಾಕ್ ಯೋಧ ರಷ್ಯಕ್ಕೆ ಸೈಬೀರಿಯವನ್ನು ಸೇರಿಸಲು ಬಹಳ ಸಹಾಯ ಮಾಡಿದ. ಆದರೆ, ರಷ್ಯದ ಝಾರ್ ಪ್ರಭುಗಳಾಗಲಿ ಅವರ ಮಾಂಡಲಿಕರಾಗಲಿ ಜಮೀನುದಾರರಾಗಲಿ ಸ್ವಾತಂತ್ರ್ಯಪ್ರಿಯರಾದ ಕಾಸ್ಯಾಕರ ಹಕ್ಕು ಬಾಧ್ಯತೆಗಳಿಗೆ ಕುಂದುಂಟು ಮಾಡಿದ ಸಂದರ್ಭಗಳಲ್ಲಿ ಅವರ ವಿರುದ್ಧ ದಂಗೆ ಎದ್ದಿದ್ದೂ ಉಂಟು. 17 ಮತ್ತು 18ನೆಯ ಶತಮಾನಗಳಲ್ಲಿ ಅಂಥ ದಂಗೆಗಳು ನಡೆದುವು. ಸ್ಟೀಫನ್ ರಾಜಿನ್, ಕೊಂದ್ರಾತಿ ಬುಲಾವಿನ್, ಇಮಿಲಿಯನ್ ಪುಗಜೆದೇವ್ ಮೊದಲಾದವರು ಇಂಥ ಹೋರಾಟಗಳ ನಾಯಕರಾಗಿದ್ದರು.
ಕಾಸ್ಯಾಕ್ ಜನಾಂಗದವರು ಹಲವು ವಿಶೇಷ ಹಕ್ಕು ಬಾಧ್ಯತೆಗಳನ್ನು ಪಡೆದಿದ್ದರು. ಇವಕ್ಕೆ ಪ್ರತಿಫಲವಾಗಿ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. 18-20 ವರ್ಷಗಳಿಗೆ ಮೇಲ್ಪಟ್ಟ ಎಲ್ಲ ಕಾಸ್ಯಾಕರಿಗೂ ಸೈನ್ಯದ ತರಬೇತಿ ಕಡ್ಡಾಯವಾಗಿತ್ತು.
ಇತ್ತೀಚಿಗಿನ ಇತಿಹಾಸ
[ಬದಲಾಯಿಸಿ]20ನೆಯ ಶತಮಾನದ ಮೊದಲ ಭಾಗದಲ್ಲಿ ರಷ್ಯದಲ್ಲಿ ಕಾಸ್ಯಾಕರೇ ಪ್ರಧಾನವಾಗಿ ವಾಸಿಸುತ್ತಿದ್ದ 12 ಪ್ರದೇಶಗಳಿದ್ದುವು. 2,30,000 ಚ.ಮೈ.ಗಳ ಪ್ರದೇಶದಲ್ಲಿ 1,20,00,000 ಕಾಸ್ಯಾಕರಿದ್ದರು. ಅವರಲ್ಲಿ 50,00,000 ಕಾಸ್ಯಾಕರು ವಿಶೇಷ ರೀತಿಯ ಸ್ಥಾನಮಾನಗಳನ್ನು ಪಡೆದಿದ್ದವರು. ಶಾಂತಿಕಾಲದಲ್ಲಿ 55,000 ಕಾಸ್ಯಾಕರು ಆಯುಧಧಾರಿಗಳಾಗಿದ್ದರೆ, ಯುದ್ಧಕಾಲದಲ್ಲಿ 1,80,000 ಕಾಸ್ಯಾಕರು ಆಯುಧ ಧರಿಸುತ್ತಿದ್ದರು.
1917ರ ಕ್ರಾಂತಿಯ ಅನಂತರ ಕಾಸ್ಯಾಕರು ತಮ್ಮ ಪ್ರದೇಶಗಳನ್ನು ರಷ್ಯದ ಒಕ್ಕೂಟದಲ್ಲಿ ಸೇರಿದ ಸಣ್ಣ ಗಣರಾಜ್ಯಗಳನ್ನಾಗಿ ಮಾರ್ಪಡಿಸಿಕೊಂಡರು. ರಷ್ಯದ ಎಲ್ಲ ಕಾಸ್ಯಾಕರನ್ನೊಳಗೊಂಡ ಒಂದು ಒಕ್ಕೂಟವನ್ನು ಡಾನ್ ನಾಯಕ (ಅಟಮನ್) ಕಲೇಡಿನನ ನೇತೃತ್ವದಲ್ಲಿ ಸ್ಥಾಪಿಸಿಕೊಂಡರು. ರಷ್ಯದಲ್ಲಿ 1918-20ರ ನಡುವೆ ನಡೆದ ಆಂತರಿಕ ಯುದ್ಧದಲ್ಲಿ ಕಾಸ್ಯಾಕರು ಎರಡು ಪಂಗಡಗಳಾಗಿ ಒಡೆದು ಬೊಲ್ಷೆವಿಕರ ಮತ್ತು ಅವರ ವಿರೋಧಿಗಳ ಪರ ಸೇರಿಕೊಂಡು ತಮ್ಮತಮ್ಮಲ್ಲಿಯೇ ಕಾದಾಡಿದರು. ರಷ್ಯನ್ ಬಿಳಿ ಸೇನೆಗಳು ಸೋಲನ್ನೊಪ್ಪಿದಾಗ 30,000 ಕಾಸ್ಯಾಕರು ಪರದೇಶಗಳಿಗೆ ವಲಸೆ ಹೋದರು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕಾಸ್ಯಾಕರ ಸೇನೆಯೊಂದನ್ನು ಪುನರ್‍ರಚಿಸಲಾಯಿತು. ಅನಂತರ ಅವರು ಹಿಂದಿನಿಂದ ನಡೆದುಕೊಂಡು ಬಂದಿದ್ದ ಪಂಗಡಗಳನ್ನು ರದ್ದುಗೊಳಿಸಿ, ಅವುಗಳನ್ನು ಹೊಸ ಆಡಳಿತ ಪ್ರಾಂತ್ಯಗಳಾಗಿ ವಿಂಗಡಿಸಿ, ಸೋವಿಯತ್ ಒಕ್ಕೂಟದೊಳಗೆ ಸೇರಿಸಲಾಯಿತು.
ಜೀವನ
[ಬದಲಾಯಿಸಿ]ಕಾಸ್ಯಾಕರ ಜೀವನವನ್ನೂ ಅವರ ಸಾಹಸ ಕಾರ್ಯಗಳನ್ನೂ ಕುರಿತ ಸಾಹಿತ್ಯ ಸಾಕಷ್ಟಿದೆ. ಅಂಥ ಕಾದಂಬರಿಗಳ ಸಾಲಿನಲ್ಲಿ ಎನ್. ವಿ. ಗೋಗೋಲನ ತಾರಾಸ್ ಬುಲ್ಬ, ಟಾಲ್ಸ್‍ಟಾಯನ ಕೋಸಾಕಿ ಮತ್ತು ಹೆಚ್. ಸಿನ್‍ಕಿವಿಜ್‍ನ ವಿತ್ ಫೈರ್ ಅಂಡ್ ಸ್ಟೋರ್ಡ್-ಇವು ಕೆಲವು ಮುಖ್ಯ ಕೃತಿಗಳು.
ಛಾಯಾಂಕಣ
[ಬದಲಾಯಿಸಿ]-
Cossack Mamay – the ideal image of Cossack in Ukrainian folklore.
-
A Zaporozhian Cossack, 17th-18th century traditional clothing.
-
Victorious Zaporozhian Cossack with the head of a Tatar, 1786 print
-
An officer of the Zaporozhian Cossacks in 1720
ಉಲ್ಲೇಖಗಳು
[ಬದಲಾಯಿಸಿ]- ↑ Serhii Plokhy (2001). The Cossacks and Religion in Early Modern Ukraine. OUP Oxford. p. 4. ISBN 0-19-924739-0. Retrieved 1 August 2015.
- ↑ Wilson, Andrew (2002). The Ukrainians: Unexpected Nation. Yale University Press. pp. 62, 143. ISBN 978-0-300-09309-4. Retrieved 1 August 2015.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Cossacks during the Napoleonic Wars
- Zaporizhian Cossacks
- History of Ukrainian Cossacks at Encyclopedia of Ukraine
- Soviet Cossacks – an issue of the propaganda journal USSR in Construction which presents numerous images of Cossack life in Soviet Russia.
- Cossack Nation Livejournal
- Cossack Nation – The Social Network of Ethnic Cossacks
- The Congress of Cossacks in America
- Pirate, Rebel, Freedom Fighter, Champion of the Poor