ಕಾವಿಮಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವಿಮಣ್ಣು ಕಬ್ಬಿಣದ ಹೈಡ್ರಸ್ ಆಕ್ಸೈಡುಗಳ (ಲೈಮೊನೈಟ್ ಹಿಮಟೈಟ್, ಅಪೂರ್ವವಾಗಿ ಮ್ಯಾಗ್ನಟೈಟ್) ಮತ್ತು ಜೇಡುಮಣ್ಣಿನ ಚೆನ್ನಾಗಿ ಕಲೆತ ಮಿಶ್ರಣ (ಓಕರ್). ಇದರಲ್ಲಿ ಕಬ್ಬಿನದ ಆಕ್ಸೈಡ್ ಪರಿಶುದ್ದ ಪ್ರಮಾಣ 15%-80% ವರೆಗೂ ಇರುತ್ತದೆ. ಸ್ವಾಭಾವಿಕ ಖನಿಜ ಬಣ್ಣಗಳಲ್ಲಿ ಕಬ್ಬಿಣದ ಹೈಡ್ರಸ್ ಆಕ್ಸೈಡ್ ಪರಿಶುದ್ದವಾಗಿಯೋ ಅಥವಾ ಜೇಡುಮಣ್ಣಿನೊಂದಿಗೆ ಬೆರೆತು ಹೇರಳವಾಗಿ ದೊರಕುವುದು. ಕಾವಿಮಣ್ಣು ಎರಡನೆಯ ಜಾತಿಗೆ ಸೇರಿದುದು.

ಆಕರ : ನೀರಿನಿಂದ ಸಾಗಣೆಗೊಂಡು ಪ್ರಸ್ತರಿಸಿದ ಮಡ್ಡಿಯಿಂದ ಉತ್ಪತ್ತಿಯಾದ ನಿಕ್ಷೇಪವಾಗಿಯೂ ಕಬ್ಬಿಣದ ಅದುರುಗಳು, ಪದರಶಿಲೆ, ಸುಣ್ಣಶಿಲೆ ಇವುಗಳ ರಾಸಾಯನಿಕ ಶೈಥಿಲ್ಯದಿಂದ ಉಂಟಾದ ಸ್ಥಳೀಯ ಶೇಷವಸ್ತು ನಿಕ್ಷೇಪವಾಗಿಯೂ ಕಾವಿ ದೊರೆಯಬಹುದು. ರಾಸಾಯನಿಕ ವಸ್ತುಗಳ ಸಂಯೋಗದಿಂದ ಕಾವಿಮಣ್ಣು ಅನೇಕ ವರ್ಣಗಳಲ್ಲಿ ದೊರೆಯುತ್ತದೆ. ಬಣ್ಣದಲ್ಲಿ ನಾನಾ ಛಾಯೆಯ ಹಳದಿಯಲ್ಲಿಯೂ ಕಂದು ಕೆಂಪು ಬಣ್ಣಗಳಲ್ಲಿಯೂ ಇರುವುದು. ಕೆಲವು ವಿಧವಾದ ಕಾವಿಮಣ್ಣುಗಳು ಹಸುರಾಗಿ ಸಹ ಇರುವುದುಂಟು. ಹಳದಿ ಬಣ್ಣದ ಕಾವಿಮಣ್ಣನ್ನು ಗೋಪಿ ಎಂದೂ ಕಂದು ಬಣ್ಣದ್ದನ್ನು ಕಾವಿ ಎಂದೂ ಕರೆಯುವುದು ರೂಢಿ.

ಉಪಯೋಗ: ಕಾವಿಮಣ್ಣುಗಳನ್ನು ಅವು ದೊರೆಯುವ ವಿಧಾನದಲ್ಲಿಯಾಗಲೀ ಸಂಸ್ಕರಿಸಿದ ಮೇಲಾಗಲೀ ಬಣ್ಣ ಬಳಿಯುವುದಕ್ಕೂ ಜಲವರ್ಣ ಮತ್ತು ತೈಲವರ್ಣಗಳನ್ನು ತಯಾರಿಸುವುದಕ್ಕೂ ಉಪಯೋಗಿಸುತ್ತಾರೆ.

ಹಳದಿ ಕಾವಿಮಣ್ಣು: ಇದು ಮುಖ್ಯವಾಗಿ ಲೈಮೊನೈಟ್ ಮತ್ತು ಜೇಡು ಮಣ್ಣು ಕಲೆತ ಮಿಶ್ರಣ. ಇದನ್ನು ಕಾಯಿಸಿದಾಗ ಉಷ್ಣತೆಯ ಪ್ರಕಾರ ಕಂದು ಬಣ್ಣದ ವಿವಿಧ ಛಾಯೆಗಳು ಬರುತ್ತವೆ. ಅಲ್ಪಪ್ರಮಾಣದಲ್ಲಿ ಮ್ಯಾಂಗನೀಸ್ ಬೆರೆತಿದ್ದರೆ ಸೀಯನ್ನ ಎಂಬ ಹಳದಿ ಮಿಶ್ರಿತ ಕಂದು ಬಣ್ಣವಾಗುವುದು. ಹೆಚ್ಚಿನ ಪ್ರಮಾಣದಲ್ಲಿ ಅಂದರೆ 10%-25% ಭಾಗದಷ್ಟು ಮ್ಯಾಂಗನೀಸ್ ಆಕ್ಸೈಡ್ ಬೆರೆತಿದ್ದರೆ ಅಂಬರ್ ಎಂಬ ಕಂದು ಬಣ್ಣದ ಪದಾರ್ಥವಾಗುವುದು.

ಕೆಂಪು ಕಾವಿಮಣ್ಣು: ಇದರಲ್ಲಿ ಮುಖ್ಯವಾಗಿ ಕಬ್ಬಿಣದ ಕೆಂಪು ಆಕ್ಸೈಡ್ (ಹಿಮಟೈಟ್) ಮತ್ತು ಮಣ್ಣು ಪದಾರ್ಥಗಳು ವಿವಿಧ ಪ್ರಮಾಣದಲ್ಲಿ ಬೆರೆತಿರುತ್ತವೆ. ಬಣ್ಣದಲ್ಲಿ ಕೇಸರಿ ಬಣ್ಣದಿಂದ ರಕ್ತಕೆಂಪು ಮತ್ತು ಊದಾಕೆಂಪು ಬಣ್ಣಗಳವರೆಗೆ ವ್ಯತ್ಯಾಸವಾಗಬಹುದು.

ಹಸಿರು ಕಾವಿಮಣ್ಣು: ಇದು ಮುಖ್ಯವಾಗಿ ಎಪಿಡೋಟ್ ಕ್ಲೋರೈಟ್ ಹಾರ್ನ್ ಬ್ಲೆಂಡ್ ಮುಂತಾದ ಕಬ್ಬಿಣ-ಮೆಗ್ನೀಸಿಯಂ-ಸಿಲಿಕೇಟ್ ಸಂಯೋಜಿತ ಖನಿಜಗಳ ರಾಸಾಯನಿಕ ಬದಲಾವಣೆ ಶೈಥಿಲ್ಯಗಳಿಂದ ಉಂಟಾಗುತ್ತದೆ.

ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಿವಿಧ ಛಾಯೆಯ ಹಳದಿ ಮತ್ತು ಕಂದು ಬಣ್ಣದ ಕಾವಿಮಣ್ಣುಗಳು ಕಬ್ಬಿಣದ ಅದುರು, ಮ್ಯಾಂಗನೀಸ್ ಅದುರು ಮತ್ತು ಸುಣ್ಣಶಿಲೆಗಳೊಂದಿಗೆ ಮಿಶ್ರವಾಗಿ ಸಿಕ್ಕುತ್ತದೆ. ಹಸಿರು ಬಣ್ಣದ ಕಾವಿಮಣ್ಣು ತುಮಕೂರು ಜಿಲ್ಲೆಯ ಗೊಲ್ಲಹಳ್ಳಿ ಪ್ರದೇಶದಲ್ಲಿ ಅಲ್ಪಪ್ರಮಾಣದಲ್ಲಿ ದೊರೆಯುವುದು. ಕೆಂಪು ಬಣ್ಣದ ಸ್ವಚ್ಛ ರೆಡ್ ಆಕ್ಸೈಡ್ (ಹಿಮಟೈಟ್) ಕಾವಿಯ ವಿಶಾಲ ನಿಕ್ಷೇಪಗಳು ಮತ್ತು ಕೆಂಪು ಕಾವಿಮಣ್ಣು ಹೇರಳವಾಗಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳಲ್ಲಿ ಇವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: