ವಿಷಯಕ್ಕೆ ಹೋಗು

ಕಾಳಿಂಗರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸುದೀರ್ಘ ಜನಪದ ಕಾವ್ಯಗಳಲ್ಲಿ ಒಂದು. ಆಂಧ್ರ ಹಾಗೂ ಕರ್ನಾಟಕದ ಎರಡು ರಾಜ್ಯಗಳಲ್ಲೂ ಈ ಕಥೆ ಪ್ರಚಲಿತವಾಗಿದೆ. ಜನಪದ ಪುಣ್ಯಕಥೆಗಳ ಸಾಲಿನಲ್ಲಿ ಇದಕ್ಕೆ ಅಗ್ರಸ್ಥಾನ. ತ್ರಿಪದಿ ಛಂದಸ್ಸಿನಲ್ಲಿ ಲಭ್ಯವಾಗುವ ಈ ಕಾವ್ಯ ಕಂಠಸ್ಥ ಸಂಪ್ರದಾಯದಲ್ಲಿ ಉಳಿದು ಬಂದ ಒಂದು ಸುಸಂಬದ್ಧ ರಚನೆಯಾಗಿದೆ. ಇದರ ಆರಂಭ ಅಂತ್ಯಗಳನ್ನು ಗಮನಿಸಿದಾಗ ಶಿಷ್ಟ ಸಂಪ್ರದಾಯದ ಮಾರ್ಗಕಾವ್ಯಗಳ ಸ್ವರೂಪವನ್ನೇ ಕಾಣಬಹುದಾಗಿದೆ. ಪೀಠಿಕಾ ಪ್ರಕರಣದಲ್ಲಿ ದೇವಾಸ್ತುತಿ, ಕಾವ್ಯವನ್ನು ಹಾಡಿಸಿದವರ ಸ್ಮರಣೆ, ಅದನ್ನೂ ಕೇಳುವವರಲ್ಲಿ ಇರಬೇಕಾದ ಶ್ರದ್ಧೆ, ಆಸಕ್ತಿ-ಈ ಎಲ್ಲ ವಿವರಗಳನ್ನೂ ಪ್ರಸ್ತಾಪಿಸಲಾಗುತ್ತದೆ.

ಕಾಳಿಂಗರಾಯ, ಜನಪದ ಕಾವ್ಯ

[ಬದಲಾಯಿಸಿ]

ಆತಗಿನ್ನ ಮೊದಲು ಈಕೀಯ ನೆನೆದೇವೆ

ಸುತ್ತೇಳು ಹೊಂಡದ ಗಿರಿಯಳ-ಮೇಲುದುರುಗಾದ

ಸತ್ಯಕ್ಕನ ಮೊದಲು ಬಲಗೊಂಡೆ

ಶರಣರ ಕತೆಯ ಈಗ್ಯಾರು ಕರೆಸ್ಯಾರೆ

ಸಾಲು ಮಾಳಿಗೆ ಮನೆಯೋರು-ತಿಪ್ಪೇಸ್ವಾಮಿ

ಸತ್ಯಕಾರ ಕತೆಯ ತಗಿಸ್ಯಾರು

ತಾಯಿ ತಂದೆಯ ತೋರಿಟ್ಟು ಹೇಳೇನೆ

ಲಿಂಗದ ಗುಡಿಯಾಗೆ ನೆನೆದೇನೆ-ಈ ಹಾಡ

ಕೆಂಚವ್ವ ಜಾಣೆ ಕಲಿಸ್ಯಾಳೆ

ಕಾವ್ಯದ ಅಂತ್ಯದಲ್ಲಿಯೂ ಕತೆಗಾರ್ತಿ ಕತೆಯನ್ನು ಹಾಡಿಸಿದವರಿಗೆ, ಕೇಳಿದವರಿಗೆ, ಸೊಲ್ಲು ಕೊಟ್ಟವರಿಗೆ ತನ್ನ ಕೃತಜ್ಞತೆಯನ್ನು ಅರ್ಪಿಸುತ್ತಾಳೆ.

ಹಾಡಿದಕ್ಕಗಿನ್ನ ಕೇಳಿದಕ್ಕಗಿನ್ನ

ಸೋಯೆಂದ ಅಕ್ಕಗಳೆ ಸುಖಿಬಾಳು- ನಿಮ್ಹೊಟ್ಟೀಯಲಿ

ಕಾಳಿಂಗನೆಂಬೊ ಮಗಬರಲಿ

ಕಂಚಿನುಂಗುರದ ಕೆಂಚೆಣ್ಣು ಕೇಳೆ

ಅಂತರಿಸಿ ಧ್ವನಿಯ ನಿಲಹೊಯ್ಯಿ-ಉತ್ತದಾಳ

ಸಂನ್ನರ ಕತೆಯ ಮುಗಿದಾವೆ

ಹೀಗೆ ಕಾಳಿಂಗರಾಯನ ವೃತ್ತಾಂಶ ಅತ್ಯಂತ ಶ್ರದ್ಧೆ, ನಿಷ್ಠೆಗಳಿಂದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಹಾಡಬಹುದಾದ ಕತೆಯಾದುದರಿಂದ ಅದರ ಸ್ವರೂಪ ಕೆಡದಂತೆ ಉಳಿದು ಬಂದಿದೆ. ನಾಲ್ಕಾರು ಅಧ್ಯಾಯಗಳಲ್ಲಿ ಕತೆಯನ್ನು ವಿಸ್ತರಿಸಿಕೊಳ್ಳುವಾಗ ಕಂಠಸ್ಥ ಸಂಪ್ರದಾಯಕ್ಕೆ ಅನುಗುಣವಾಗಿ, ಸ್ಮರಣೆಯಲ್ಲಿಟ್ಟುಕೊಳ್ಳುವ ಅನುಕೂಲಕ್ಕಾಗಿ ಬೇರೆ ಬೇರೆ ಪಲ್ಲವಿಗಳನ್ನು ಒಂದೊಂದು ಅಧ್ಯಾಯಕ್ಕೂ ಬದಲಿಸಿಕೊಂಡು ವೈವಿಧ್ಯಮಯ ಮಟ್ಟುಗಳಲ್ಲಿ ಹಾಡಲಾಗುತ್ತದೆ. ಎಲ್ಲ ಸಂಪ್ರದಾಯದ ಜನಪದಗಾಯಕರಲ್ಲೂ ಹಾಡುಗಾರಿಕೆಯ ಸೊಗಸನ್ನು ಮೆರೆಯಲು, ಏಕತಾನತೆಯನ್ನು ನಿವಾರಿಸಿಕೊಳ್ಳಲು ಸುದೀರ್ಘ ರಚನೆಗಳಲ್ಲಿ ಈ ತಂತ್ರವನ್ನೇ ಅಳವಡಿಸಿಕೊಳ್ಳುವುದು ಗಮನಾರ್ಹ ಅಂಶವಾಗಿದೆ.

ಗಾಯಕರು

[ಬದಲಾಯಿಸಿ]

ಕರ್ನಾಟಕದ ಪುರುಷ ಗಾಯಕರಲ್ಲಿ ನೀಲಗಾರರು, ದೇವರ ಗುಡ್ಡರು, ಚೌಡಿಕೆಯವರು, ದೊಂಬಿದಾಸರು ಮುಂತಾದ ವೃತ್ತಿಗಾಯಕರು ಅನೇಕ ಜನಪದ ಪುಣ್ಯ ಕಥೆಗಳನ್ನು ವಾದ್ಯವಿಶೇಷದೊಡನೆ ಸಮಗ್ರರಾತ್ರಿ ಹಾಡುವ ವಿಶಿಷ್ಟ ಸಂಪ್ರದಾಯಗಳಂತೆಯೇ ಸ್ತ್ರೀ ಗಾಯಕರು ಯಾವ ವಾದ್ಯವಿಶೇಷವನ್ನೂ ಬಳಸದೆ ಹಾಡುವ ಸುದೀರ್ಘಕತೆಗಳೂ ಅನೇಕ. ಗೊತ್ತಾದ ಸಂದರ್ಭಗಳಲ್ಲಿ ಉಡುಗೊರೆಗಳನ್ನು ನೀಡಿಹಾಡಿಸುವ ವ್ಯಾಪಕವಾದ ಕತೆಗಳಿವು.

ಕಾಳಿಂಗರಾಯ, ಮಧ್ಯ ಕಣಾರ್ಟಕದ ಕತೆ

[ಬದಲಾಯಿಸಿ]

ಗುಣಸಾಗರಿ[], ಅಣಜಿ ಹೊನ್ನಮ್ಮ, ಹುಳಿಯೂರು ಕೆಂಚಮ್ಮ, ಬಾಲನಾಗಮ್ಮ[] ಮುಂತಾದ ಕತೆಗಳು ಈ ವರ್ಗಕ್ಕೆ ಸೇರುತ್ತವೆ. ಕಾಳಿಂಗರಾಯ ಮಧ್ಯ ಕಣಾರ್ಟಕದ ಒಂದು ಶ್ರೇಷ್ಠ ಸಂಪ್ರದಾಯದಲ್ಲಿ ಅತ್ಯಂತ ಜನಪ್ರಿಯ ಕತೆಯಾಗಿದೆ.

ಮಕ್ಕಳಿಲ್ಲದ ಮದರಂಬೆ ಶಿವನ ಕರುಣೆಯಿಂದ ತನ್ನ ಇಳಿವಯಸ್ಸಿನಲ್ಲಿ ಗಂಡು ಮಗುವೊಂದನ್ನು ಪಡೆಯುತ್ತಾಳೆ. ಹುಟ್ಟುವಂಥ ಕಂದ ಹೆಚ್ಚುಕಾಲ ಬದುಕಲಾರ ಎಂದು ಹೇಳಿದರೂ ಕೇಳದೆ ಪಡೆದ ಮಗುವಿಗೆ ಕಾಳಿಂಗರಾಯನೆಂದು ಹೆಸರಿಡುತ್ತಾಳೆ. ಕಾಳಿಂಗರಾಯ ಓದಿನಲ್ಲಿ ಅತಿ ಜಾಣನಾಗಿ ಒಂದು ಬರೆಯೆಂದರೆ ಎಂಬತ್ತು ಬರೆದು, ಗುರುವಿಗೆ ಆಶ್ಚರ್ಯವನ್ನುಂಟು ಮಾಡುತ್ತಾನೆ. ಎಲ್ಲರ ಮೆಚ್ಚಿನ ಶಿಶುವಾಗಿ ಬೆಳೆದು, ಗೆಳೆಯರೊಡನೆ ಒಮ್ಮೆ ಚೆಂಡಾಡುವಾಗ ಕಾಳಿಂಗರಾಯ ವಿಧಿಮಾಯೆಯ ದೃಷ್ಠಿಗೆ ಬೀಳುತ್ತಾನೆ. ಮರುದಿನ ಹುಲಿಯ ಬೇಟೆಯಲ್ಲಿ ವಿಧಿ ಅವನ ಮರಣವನ್ನು ಬರೆದು ಮಾಯವಾಗುತ್ತಾಳೆ. ಕಾಳಿಂಗರಾಯ ಯಾರ ಮಾತನ್ನೂ ಲೆಕ್ಕಿಸದೆ ಮರುದಿನ ಹುಲಿಯ ಬೇಟೆಗೆ ಹೋಗಿ ಘೋರ ವ್ಯಾಘ್ರಕ್ಕೆ ಬಲಿಯಾಗುತ್ತಾನೆ. ಮಗನ ಮರಣದಿಂದ ಕಡುದುಃಖಕ್ಕೊಳಗಾದ ಮದರಂಬೆ ಸತ್ತ ಮಗನಿಗೆ ಮದುವೆ ಮಾಡುವ ನಿರ್ಧಾರಕ್ಕೆ ಬರುತ್ತಾಳೆ. ಮುದ್ದು ಚೆನ್ನವ್ವನೊಡನೆ ಸತ್ತ ಕಾಳಿಂಗನ ಲಗ್ನವಾಗುತ್ತದೆ. ಸುಡುಗಾಡಿನಲ್ಲಿ ತನ್ನಪತಿಯ ಶವವನ್ನು ಬಿಟ್ಟು ಬರಲಾರದೆ, ಚೆನ್ನವ್ವ ಒಬ್ಬಳೇ ಅಲ್ಲಿ ಉಳಿಯುತ್ತಾಳೆ. ನಾನಾ ಬಗೆಯಲ್ಲಿ ಅವಳ ದೃಢವನ್ನು ಪರಿಕಿಸಿದ ಶಿವ, ಕೊನೆಗೆ ಕಾಳಿಂಗನನ್ನು ಬದುಕಿಸುತ್ತಾನೆ. ಶಿವರಾಯನೊಡನೆ ಎಲ್ಲರೂ ಕೈಲಾಸಕ್ಕೆ ತೆರಳುತ್ತಾರೆ.

ಇದಿಷ್ಟು ಕತೆಯ ಚೌಕಟ್ಟು. ಮಗನನ್ನು ಪಡೆಯುವ ಮುನ್ನ ತಾಯಿಯ ಹಂಬಲ, ಪಡೆದ ಮಗನನ್ನು ಬೆಳೆಸಿದ ಬಗೆ, ಚೆಂಡಾಟದ ಸನ್ನಿವೇಶ, ಬೇಟೆ, ತಾಯಿಯ ದುಃಖ, ಚೆನ್ನವ್ವನನ್ನು ತಂದ ಬಗೆ, ಚೆನ್ನವ್ವನ ಪತಿಭಕ್ತಿ, ದೃಢನಿಷ್ಠೆ-ಮುಂತಾದುವು ಅತ್ಯಂತ ಉಜ್ಜ್ವಲವಾಗಿ ಈ ಕಾವ್ಯದಲ್ಲಿ ಮೂಡಿಬಂದಿವೆ. ಜಾನಪದ ಕತೆಗಳ ಪ್ರಸಿದ್ಧ ಆಶಯಗಳು ಈ ಕತೆಯಲ್ಲಿ ಕೂಡಿಬಂದು ಸುಂದರ ಕಥಾಶಿಲ್ಪವನ್ನು ಮೂಡಿಸಿವೆ. ಕನ್ನಡ ಸಾರಸ್ವತಲೋಕದ ಒಂದು ಉತ್ಕøಷ್ಟ ಕೃತಿಯಾಗಿ ಜನಪದ ಕಾವ್ಯಗಳ ಘನತೆಯನ್ನು ಎತ್ತಿಹಿಡಿಯುವ ಅತ್ಯುತ್ತಮ ಮಾದರಿಯಾಗಿ ಈ ಕೃತಿ ಉಳಿಯುತ್ತದೆ.

ಉಚ್ಚಂಗಿದುರ್ಗದ ಪ್ರಸಿದ್ಧ ಜನಪದ ಗಾಯಕಿ ಎಲಿಸವ್ವ ಹಾಡಿದ ಈ ಕತೆಯ ಒಂದು ಪಾಠ ಈಗಾಗಲೇ ಕೃತಿರೂಪದಲ್ಲಿ ಪ್ರಕಟವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]