ಕಾರ್ಲ್ ಝೀಗ್ಲರ್
ಕಾರ್ಲ್ ಝೀಗ್ಲರ್ (1898-1973). ಜರ್ಮನಿಯ ಕಾರ್ಬನಿಕ/ಜೈವಿಕ ರಸಾಯನವಿಜ್ಞಾನಿ. ಇಂದು ಪಾಲಿಥೀನ್ ಎಂಬ ಹೆಸರಿನಿಂದ ಜಗತ್ಪ್ರಸಿದ್ಧವಾಗಿರುವ ಪ್ಲಾಸ್ಟಿಕ್ಕನ್ನು ಸುಲಭವಾಗಿ ತಯಾರಿಸುವ ಒಂದು ವಿಧಾನದ ಉಪಜ್ಞೆಕಾರ. ಇದಕ್ಕಾಗಿ ಈತನಿಗೆ 1963ರಲ್ಲಿ ಇಟಾಲಿಯನ್ ವಿಜ್ಞಾನಿ ಗಿಯುಲಿಯೊ ನಟ್ಟ ಎಂಬಾತನೊಂದಿಗೆ ನೊಬೆಲ್ ಪಾರಿತೋಷಿಕ ದೊರೆಯಿತು. ಈತನ ಇತರ ಗಮನಾರ್ಹ ಸಂಶೋಧನೆಗಳು ಲೋಹದ ಆಲ್ಕೈಲುಗಳ ಹಾಗೂ ಅಧಿಕಸಂಖ್ಯೆಯ ಪರಮಾಣುಗಳಿರುವ ಚಕ್ರೀಯ ಸಂಯುಕ್ತಗಳ ಕ್ಷೇತ್ರಗಳಲ್ಲಿವೆ.
ಬದುಕು
[ಬದಲಾಯಿಸಿ]1898ರ ನವೆಂಬರ್ 26ರಂದು ಜರ್ಮನಿಯ ಕಾಸ್ಸೆಲ್ ಬಳಿಯ ಹೆಲ್ಸಾ ಎಂಬಲ್ಲಿ ಪ್ರಾಟೆಸ್ಟಂಟ್ ಪಾದ್ರಿಯೊಬ್ಬನ ಮಗನಾಗಿ ಜನಿಸಿದ ಝೀಗ್ಲರ್, ಮಾರ್ಬರ್ಗ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ, 1920ರಲ್ಲಿ ರಸಾಯನವಿಜ್ಞಾನದಲ್ಲಿ ಡಾಕ್ಟರೇಟ್ ಡಿಗ್ರಿಯನ್ನು ಪಡೆದ, ಐದು ವರ್ಷ ಕಾಲ ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದು ಅನಂತರ ಫ್ರಾಂಕ್‍ಫರ್ಟ್ ವಿಶ್ವವಿದ್ಯಾಲಯದಲ್ಲೂ ಕೆಲಕಾಲದ ಮೇಲೆ ಹೈಡಲ್‍ಬರ್ಗ್ ವಿಶ್ವವಿದ್ಯಾಲಯದಲ್ಲೂ ಕೆಲಸ ಮಾಡಿದ. 1927ರಿಂದ 1936ರವರೆಗೆ ಹೈಡಲ್‍ಬರ್ಗಿನಲ್ಲಿ ಪ್ರಾಧ್ಯಾಪಕನಾಗಿದ್ದು, ತರುವಾಯ ಹಾಲ್ ವಿಶ್ವವಿದ್ಯಾಲಯದ ಕೆಮಿಕಲ್ ಇನ್‍ಸ್ಟಿಟ್ಯೂಟಿನ ನಿರ್ದೇಶಕನಾದ (1943). ಅಲ್ಲಿಂದ ರೂರ್ ಪ್ರಾಂತದಲ್ಲಿರುವ ಮುಲ್‍ಹೈಮಿಗೆ ತೆರಳಿ ಕೈಸರ್ ವಿಲ್‍ಹೆಲ್ಮ್ ಇನ್‍ಸ್ಟಿಟ್ಯೂಟ್ (ಅದು ಆ ಮೇಲೆ ಮ್ಯಾಕ್ಸ್ ಪ್ಲಾಂಕ್ ಇನ್‍ಸ್ಟಿಟ್ಯೂಟ್ ಆಯಿತು) ಫಾರ್ ಕೋಲ್ ರಿಸರ್ಚ್ ಸಂಸ್ಥೆಯ ನಿರ್ದೇಶಕನಾದ. 1947ರಿಂದ ಆಖೆನ್ ನಗರದ ಟೆಕ್ನಿಕಲ್ ಹೈಸ್ಕೂಲಿನಲ್ಲಿ ಗೌರವ ಪ್ರಾಧ್ಯಾಪಕನಾಗಿಯೂ ಕೆಲಸ ಮಾಡುತ್ತಿದ್ದ. 1973ರ ಆಗಸ್ಟ್ 12ರಂದು ಮುಲ್‍ಹೈಮಿನಲ್ಲಿ ತನ್ನ ಎಪ್ಪತ್ತಾರನೆಯ ವಯಸ್ಸಿನಲ್ಲಿ ನಿಧನ ಹೊಂದಿದ.
ಸಾಧನೆಗಳು
[ಬದಲಾಯಿಸಿ]ಫ್ರೆಂಚ್ ರಸಾಯನ ವಿಜ್ಞಾನಿ ವಿಕ್ಟರ್ ಗ್ರಿನ್ಯಾರ್ಡ್ ಪರಿಶೋಧಿಸಿದ ಮೆಗ್ನೇಸಿಯಂ ಆಲ್ಕೈಲ್ ಸಂಯುಕ್ತಗಳು ಝೀಗ್ಲರನ ಆಸಕ್ತಿಯನ್ನು ಕೆರಳಿಸಿದುವು. ಇನ್ನೂ ಉತ್ತಮವಾದ ಆ ಬಗೆಯ ಕಾರ್ಬನಿಕ ಲೋಹ ಸಂಯುಕ್ತಗಳಿಗಾಗಿ ಸಂಶೋಧನೆ ನಡೆಸುತ್ತಿದ್ದ ಝೀಗ್ಲರ್ ಒಂದು ಉಪಯುಕ್ತ ವಿಷಯವನ್ನು ಶೋಧಿಸಿದ. ಅಲ್ಯೂಮಿನಿಯಮ್ ಟ್ರೈಆಲ್ಕೈಲುಗಳಿಗೆ ಎಥಿಲೀನನ್ನು ಸಂಕಲನ ಮಾಡಿ ಇನ್ನೂ ಹೆಚ್ಚು ಅಣು ತೂಕದ ಅಲ್ಯೂಮಿನಿಯಮ್ ಆಲ್ಕೈಲುಗಳನ್ನು ತಯಾರಿಸಬಹುದೆಂಬುದನ್ನು ಕಂಡುಕೊಂಡ. ಒಂದು ದಿನ ತನ್ನ ವಿದ್ಯಾರ್ಥಿ ಹಾಲ್ಸ್ ಕ್ಯಾಂಪ್ ಎಂಬಾತನೊಡನೆ ಆ ಪ್ರಯೋಗವನ್ನು ನಡೆಸುತ್ತಿದ್ದಾಗ ಒಂದು ಆಕಸ್ಮಿಕ ಜರಗಿತು. ಎಥಿಲೀನ್ ಅಲ್ಯೂಮಿನಿಯಮ್ ಟ್ರೈಆಲ್ಕೈಲಿಗೆ ಸಂಕಲನವಾಗುವ ಬದಲು ಎರಡು ಎಥಿಲೀನ್ ಅಣುಗಳು ಒಂದಕ್ಕೊಂದು ಸೇರಿಕೊಂಡು ಬ್ಯೂಟೀನ್ ಎಂಬ ಹೈಡ್ರೊಕಾರ್ಬನ್ ಉತ್ಪತ್ತಿಯಾಯಿತು. ಇದಕ್ಕೆ ಕಾರಣವೇನೆಂದು ಪರೀಕ್ಷಿಸಿ ನೋಡಲಾಗಿ ಆ ಪಾತ್ರೆಯಲ್ಲಿ ಹಿಂದೆ ಉಪಯೋಗಿಸಿದ್ದ ಕಲಿಲ ನಿಕಲ್ (ಕಲ್ಲಾಯಿಡಲ್ ನಿಕಲ್) ಸ್ವಲ್ಪ ಉಳಿದಿದ್ದುದು ಅವರ ಲಕ್ಷ್ಯಕ್ಕೆ ಬಂತು. ಅದು ಕ್ರಿಯಾವರ್ಧಕವಾಗಿ ವರ್ತಿಸಿತ್ತೆಂಬುದು ಸ್ಪಷ್ಟವಾಯಿತು ಈ ಸುಳಿವನ್ನೇ ಹಿಡಿದು ಸಂಶೋಧನೆಯನ್ನು ಮುಂದುವರಿಸಲಾಗಿ ಅಲ್ಯೂಮಿನಿಯಮ್ ಟ್ರೈಈಥೈಲ್ ಮತ್ತು ಟೈಟೇನಿಯಮ್ ಕ್ಲೋರೈಡುಗಳ ಮಿಶ್ರಣ ಅತ್ಯಂತ ಪರಿಣಾಮಕಾರಿಯಾದ ಕ್ರಿಯಾವರ್ಧಕವಾಗಿ ವರ್ತಿಸಿ, ನೂರಾರು ಎಥಿಲೀನ್ ಅಣುಗಳನ್ನು ಒಂದಕ್ಕೊಂದು ಪೋಣಿಸಿ ಪಾಲಿಎಥಿಲೀನನ್ನು (ಎಥಿಲೀನಿನ ಪಾಲಿಮರ್) ನೀಡುವುದೆಂಬುದು ಪತ್ತೆಯಾಯಿತು. ಈ ಕ್ರಿಯೆಯಲ್ಲಿ ಕೆಲವು ಗಮನಾರ್ಹವಾದ ಅಂಶಗಳಿವೆ. ಇದಕ್ಕೆ ಹೆಚ್ಚಿನ ಒತ್ತಡ ಬೇಡ ; ವಾತಾವರಣದ ಒತ್ತಡದಲ್ಲೇ ಕ್ರಿಯೆ ನಡೆಯುತ್ತದೆ. ಹೆಚ್ಚಿನ ಉಷ್ಣತೆ ಬೇಡ ; 150º-200º ಅ ಉಷ್ಣತೆ ಸಾಕು. ಎಥಿಲೀನ್ ಅಣುಗಳು ಒಂದರೊಡನೊಂದು ಸೇರಿಕೊಳ್ಳುವಾಗ ಉಷ್ಣಸರಣಿಗಳು ಉಂಟಾಗುವುದಿಲ್ಲ ; ನೇರವಾದ ಸರಣಿಯ ಪಾಲಿಎಥಿಲೀನ್ ಉತ್ಪತ್ತಿಯಾಗುವುದು. ಉಷ್ಣಸರಣಿಗಳಿಲ್ಲಿರುವ ಈ ಪಾಲಿಮರ್ ಹೆಚ್ಚು ದೃಢವಾಗಿರುತ್ತದೆ ಮತ್ತು ಅದರ ದ್ರವನಬಿಂದುವೂ ಉನ್ನತವಾಗಿರುತ್ತದೆ. ಇದೇ ಪಾಲೀಥೀನ್. ಜೀóಗ್ಲರ್ ಕ್ರಿಯಾವರ್ಧಕಗಳು ಎಂದು ಪ್ರಸಿದ್ಧವಾಗಿರುವ ಈ ಬಗೆಯ ಕಾರ್ಬನಿಕ ಲೋಹ ಮಿಶ್ರ ಕ್ರಿಯಾವರ್ಧಕಗಳು (ಆಗ್ರ್ಯಾನೋ ಮೆಟಾಲಿಕ್ ಮಿಕ್ಸೆಡ್ ಕೆಟಾಲಿಸ್ಟ್ಸ್) ಇನ್ನೂ ಇತರ ಬಹ್ವಂಗೀಕರಣ ಕ್ರಿಯೆಗಳಲ್ಲೂ ಉಪಯುಕ್ತವಾದವೆಂದು ಕಂಡುಬಂದಿದೆ. ಅವುಗಳಲ್ಲಿ 1:4 ಸಿಸ್-ಪಾಲಿ-ಐಸೊಪ್ರೀನ್ ಎಂಬ ಬಹ್ವಂಗಿಯನ್ನು ಹೆಸರಿಸಬಹುದು. ಐಸೊಪ್ರೀನಿನ ಬಹ್ವಂಗೀಕರಣದಿಂದ ಉತ್ಪತ್ತಿಯಾಗುವ ಈ ಬಹ್ವಂಗಿಗೂ ನೈಸರ್ಗಿಕ ರಬ್ಬರಿಗೂ ಯಾವ ವ್ಯತ್ಯಾಸವೂ ಇಲ್ಲ ; ಎರಡೂ ಒಂದೇ.
ಗ್ರಿನ್ಯಾರ್ಡ್ ಅಭಿಕರ್ಮಕಗಳಂಥವೇ (ರೀಏಜೆಂಟ್ಸ್) ಆಗಿದ್ದು , ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ಲಿಥಿಯಮ್ ಆಲ್ಕೈಲುಗಳನ್ನು ಶೋಧಿಸಿದ ಕೀರ್ತಿಯೂ ಜೀóಗ್ಲರನಿಗೆ ಸಲ್ಲುವುದು. ಅಷ್ಟೇ ಅಲ್ಲದೆ, ಅಧಿಕ ಸಂಖ್ಯೆಯ ಪರಿಮಾಣುಗಳಿರುವ ಚಕ್ರೀಯ ಸಂಯುಕ್ತಗಳ ವಿವಿಧ ಸಂಶ್ಲೇಷಣೆಗಳನ್ನೂ ಆತ ಸಾಧಿಸಿದ್ದಾನೆ ನೈಸರ್ಗಿಕ ಕಸ್ತೂರಿಯ ಪರಿಮಳವನ್ನೇ ಹೋಲುವ ಕೃತಕ ಸುಗಂಧ ಸಂಯುಕ್ತಗಳು ಅವುಗಳಲ್ಲಿ ಕೆಲವು.
ಕಾರ್ಲ್ ಝೀಗ್ಲರ್ | |
---|---|
ಜನನ | ಕಾರ್ಲ್ ಝೀಗ್ಲರ್ ೧೮೬೬ ಏಪ್ರಿಲ್ ೧೭ ಜರ್ಮನಿ |
ರಾಷ್ಟ್ರೀಯತೆ | ಜರ್ಮನಿ |
ಕಾರ್ಬನ್ ಪರಮಾಣುಗಳ ದೊಡ್ಡ ಉಂಗುರಗಳನ್ನು ಹೊಂದಿರುವ ಸಂಯುಕ್ತಗಳನ್ನು ತಯಾರಿಸುವ ವಿಧಾನವನ್ನು ಝೀಗ್ಲರ್ರವರು 1933ರಲ್ಲಿ ಕಂಡುಹಿಡಿದರು. ಮುಂದೆ ಸುವಾಸನಾಯುಕ್ತ ಪರಿಮಳದ್ರವ್ಯಗಳನ್ನು ಬೇಕಾದ ಕಸ್ತೂರಿಗಳನ್ನು ಸಂಶ್ಲೇಷಿಸಲು ಆ ವಿಧಾನವನ್ನು ಬಳಸಲಾಯಿತು. 1945ರಲ್ಲಿ ಅಂದರೆ ಎರಡನೆಯ ವಿಶ್ವಸಮರದ ನಂತರ ಅವರು ಅಲ್ಯೂಮಿನಿಯಂನ ಜೈವಿಕ ಸಂಯುಕ್ತಗಳ ಬಗ್ಗೆ ತಮ್ಮ ಸಂಶೋಧನೆಯನ್ನು ಆರಂಭಿಸಿ, ಅಲ್ಯೂಮಿನಿಯಂ ಲೋಹದಿಂದ ಅಲ್ಯೂಮಿನಿಯಂ ಟ್ರೈ-ಆಲ್ಕೈಲ್ ಎಂಬ ಸಂಯುಕ್ತವನ್ನು ಸಂಶ್ಲೇಷಿಸುವ ವಿಧಾನವನ್ನು ಕಂಡುಹಿಡಿದರು. ಶುದ್ಧಿಕಾರಕಗಳನ್ನು (detergents) ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವುದಕ್ಕೆ ಇಂತಹ ಸಂಯುಕ್ತಗಳನ್ನು ಆಲ್ಕಹಾಲ್ ಗಳಾಗಿ ಪರಿವರ್ತಿಸಿ ಉಪಯೋಗಿಸಲಾಗುತ್ತದೆ. ವಿದ್ಯುತ್-ರಾಸಾಯನಿಕ (electro-chemical) ವಿಧಾನಗಳನ್ನು ಉಪಯೋಗಿಸಿ ಅಲ್ಯೂಮಿನಿಯಂನ ಅನೇಕ ಇತರ ಲೋಹಗಳ ಆಲ್ಕೈಲ್ಗಳನ್ನು ಅವರು ತಯಾರಿಸಿದರು. ಪೆಟ್ರೋಲಿಗೆ ವಿಸ್ಪೋಟ ವಿರೋಧಕ ಸಂಕಲ್ಯಗಳಾಗಿ (anti-knock additive) ಉಪಯೋಗಿಸಲಾಗುವ ಟೆಟ್ರಾಇಥೈಲ್ ಲೆಡ್ ಎಂಬ ಸಂಯುಕ್ತ ಅವುಗಳ ಮುಖ್ಯ ಸಂಶೋಧನೆಗಳಲ್ಲಿ ಒಂದಾಗಿದೆ.
1953ರಲ್ಲಿ ಝೀಗ್ಲರ್ ಮತ್ತು ಗಿಯುಲಿಯೊ ನಟ್ಟಾರವರು (1903-1979) ಅನೇಕ ಪಾಲಿಮರ್ಗಳಿಗೆ (polymer) ಸಮರ್ಪಕವಾದ ರಚನೆಯನ್ನು ನೀಡಲು ಸಹಾಯಕವಾಗುವ ನ-ವಿಶಿಷ್ಟ ಕ್ರಿಯಾವರ್ಧಕಗಳ (stereo-specific catalysts) ಕುಟುಂಬವನ್ನು (ಗುಂಪನ್ನು) ಕಂಡುಹಿಡಿದರು. ಅಂತಹ ಕ್ರಿಯಾವರ್ಧಕಗಳಲ್ಲಿ ಒಂದಾದ ಟ್ರೈಈಥೇಲ್ ಅಲ್ಯೂಮಿನಿಯಂನನ್ನು ಟೈಟಾನಿಯಂ ಟೆಟ್ರಾಕ್ಲೋರೈಡ್ ಜೊತೆ ಸಂಯೋಜಿಸಿ ಐಸೋಪ್ರಿನ್ನನ್ನು (isoprene) ಪಾಲಿಮರೀಕರಿಸಬಹುದು ಎಂಬುದಾಗಿ ಝೀಗ್ಲರ್ರವರು ಕಂಡುಹಿಡಿದರು. ಅವರ ಈ ಸಂಶೋಧನೆ ಮುಂದೆ ಮಾನವ-ನಿರ್ಮಿತ ಪ್ಲಾಸ್ಟಿಕ್ಗಳು, ತಂತುಗಳು, ರಬ್ಬರ್ಗಳ ತಯಾರಿಕೆಗೆ ಸಹಕಾರಿಯಾಯಿತು. ಝೀಗ್ಲರ್ರವರು ಝೀಗ್ಲರ್ರವರು 1963ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಗಿಯುಲಿಯೊ ನಟ್ಟ ರವರ ಜೊತೆ ಹಂಚಿಕೊಂಡರು.[೧]