ಕಾರ್ಲ್ ಜೈಸ್
ಕಾರ್ಲ್ ಜೈಸ್ (1816-1888)-ದೃಗ್ಯಂತ್ರ ಸಲಕರಣೆಗಳ ತಯಾರಿಕೆ ಮತ್ತು ಅವುಗಳ ಅಭಿವೃದ್ಧಿಯಲ್ಲಿ ಯಶಸ್ವಿಯಾದ ಲೋಕವಿಖ್ಯಾತ ಜರ್ಮನ್ ಕೈಗಾರಿಕೆಗಾರ.
ಬದುಕು, ಸಾಧನೆ
[ಬದಲಾಯಿಸಿ]ಚಿಕ್ಕ ಮಯಸ್ಸಿನಲ್ಲಿಯೇ ಕೈಗಾರಿಕೋದ್ಯಮದಲ್ಲಿ ತೊಡಗಿ 1840ರಲ್ಲಿ ಸೂಕ್ಷ್ಮದರ್ಶಕ ಯಂತ್ರಗಳ ಮತ್ತು ಇತರ ದರ್ಶಕೋಪರಣಗಳ ಕಾರ್ಖಾನೆಯೊಂದನ್ನು ಸ್ಥಾಪಿಸಿದ. ಪಾರದರ್ಶಕಗಳನ್ನು ಒಳಗೊಂಡ ಯಂತ್ರಗಳ ಸುಧಾರಣೆ ವಿಜ್ಞಾನ ಸಂಶೋಧನೆಯನ್ನು ಅವಲಂಬಿಸಿದೆ ಎಂದು ಮುಂಚಿತವಾಗಿಯೇ ಮನಗಂಡದ್ದರಿಂದ ಇವನು ಅರ್ನೆಸ್ಟ ಅಬ್ಬೆ ಎಂಬ ಭೌತ ಮತ್ತು ಗಣಿತವಿಜ್ಞಾನಿಯನ್ನು ಪಾಲುದಾರನ್ನಾಗಿ ಮಾಡಿಕೊಂಡು ಅವನ ನೆರವಿನಿಂದ ದರ್ಶಕಯಂತ್ರರಚನಾಕ್ರಮದಲ್ಲಿ ಸರ್ವತೋಮುಖ ಸುಧಾರಣೆಗಳನ್ನು ಆಚರಣೆಗೆ ತಂದ, ಇವರಿಬ್ಬರೂ ಸೇರಿ ಗಾಜುರಸಾಯನ ವಿಜ್ಞಾನಿ ಆಟೋಷಾಟ್ ಎಂಬಾತನನ್ನು ನೇಮಿಸಿಕೊಂಡು ಅವನ ಮೂಲಕ ಅನೇಕ ವಿಧವಾದ ಹೊಸ ಮಾದರಿ ಬಲಯುತ ಮತ್ತು ಉಷ್ಣನಿರೋಧೀ ಪಾರದರ್ಶಕಗಳನ್ನು ತಯಾರಿಸಿದರು. ಇವರ ಕಾರ್ಖಾನೆಯಿಂದ ಹೊರಬಿದ್ದ ಪಾರದರ್ಶಕಗಳನ್ನು ಒಳಗೊಂಡ ಯಂತ್ರಗಳು ಪ್ರಪಂಚದಲ್ಲಿಯೇ ಸಾಟಿಯಿಲ್ಲದೆ ಅತ್ಯುತ್ಕೃಷ್ಟ ಸಾಧನಗಳೆಂದು ಖ್ಯಾತವಾದವು. 1888ರ ಡಿಸೆಂಬರಿನಲ್ಲಿ ಜೈಸ್ ಮರಣಹೊಂದಿದ. ಆದರೆ ಆತನ ಉದ್ಯಮ ಇಂದು ಜಗತ್ಪ್ರಸಿದ್ದ ಪಡೆದು ವಿಶಾಲವಾಗಿ ಬೆಳೆದಿದೆ.