ಕಾರ್ಖಾನೆ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೃಹತ್ ಘಟಕಗಳಲ್ಲಿ ಕೇಂದ್ರೀಕರಣಗೊಂಡ ಕೈಗಾರಿಕಾ ವ್ಯವಸ್ಥೆ (ಫ್ಯಾಕ್ಟರಿ ಸಿಸ್ಟೆಂ). 18ನೆಯ ಶತಮಾನದಲ್ಲಿ, ಶಕ್ತಿಚಾಲಿತ ಮಗ್ಗ ಮತ್ತು ಉಗಿಯಂತ್ರದ ಬೆಳೆವಣಿಗೆಯೊಂದಿಗೆ ಈ ಪ್ರವೃತ್ತಿ ಆರಂಭವಾಯಿತು. ಉತ್ಪಾದನ ವ್ಯವಸ್ಥೆಯ ವಿಕಾಸದ ಸರಣಿಯಲ್ಲಿ ಕುಟುಂಬ ಉತ್ಪಾದನ ವ್ಯವಸ್ಥೆಯ ಅನಂತರದ ಫಟ್ಟವಿದು.

ಇತಿಹಾಸ[ಬದಲಾಯಿಸಿ]

ಕಾರ್ಖಾನೆ ವ್ಯವಸ್ಥೆ ಜಾರಿಗೆ ಬರುವುದಕ್ಕೆ ಮುಂಚೆ ಕಾರ್ಖಾನೆಗಳಿರಲಿಲ್ಲವೆಂದಲ್ಲ. ಪ್ರಾಚೀನ ಈಜಿಪ್ಟ್. ಅಸ್ಸಿರಿಯ ಮತ್ತು ಫಿನಿಷಿಯಗಳಲ್ಲಿಯ ಬಟ್ಟೆಯ ಉತ್ಪಾದನ ವಿಧಾನದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ ಅದು ಕುಟುಂಬ ವ್ಯವಸ್ಥೆಯ ಉತ್ಪಾದನ ವಿಧಾನವನ್ನು ದಾಟಿ ಬೆಳೆದಿತ್ತು ಎಂದು ತಿಳಿದುಬರುತ್ತದೆ. 18ನೆಯ ಶತಮಾತಕ್ಕೂ ಹಿಂದೆ ಯೂರೋಪಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಅಲ್ಲಿಯ ದೊರೆಗಳೂ ಶ್ರೀಮಂತರೂ ಕಾರ್ಖಾನೆಗಳ ಸ್ಥಾಪನೆ ಮತ್ತು ಬೆಳೆವಣಿಗೆಗಳಿಗೆ ಪ್ರೋತ್ಸಾಹ ನೀಡಿದ್ದುಂಟು. ಕಾನ್‍ಸ್ಟಾಂಟಿನೋಪಲಿನ ರೇಷ್ಮೆ ಕಾರ್ಖಾನೆಗಳ 14ನೆಯ ಲೂಯಿಯ ಕಾಲದ ಅವಧಿಯ ಕಾರ್ಖಾನೆಗಳು, ರೋಮನ್ ಚಕ್ರಾಧಿಪತ್ಯದಲ್ಲಿದ್ದ ಗಾಜಿನ ಮತ್ತು ಮಣ್ಣಿನ ವಸ್ತುಗಳ ಕಾರ್ಖಾನೆಗಳು, ಫ್ರಾನ್ಸಿನಲ್ಲಿ ಕೋಲ್‍ಬರ್ಟ್ ಅವಧಿಯ ಕಾರ್ಖಾನೆಗಳು-ಇವು ಇದಕ್ಕೆ ನಿದರ್ಶನ. ಇಷ್ಟೇ ಅಲ್ಲದೆ ಮಾನವನ ಶ್ರಮದಲ್ಲಿ ಮಿತವ್ಯಯ ಸಾಧಿಸುವ ದೃಷ್ಟಿಯಿಂದ ಬಹಳ ಹಿಂದಿನಿಂದಲೂ ಅಶ್ವಶಕ್ತಿ ಮತ್ತು ಜಲಶಕ್ತಿಗಳನ್ನು ಬಳಸಿಕೊಂಡು ಉತ್ಪಾದನೆ ನಡೆಸಿರುವುದನ್ನು ಕಾಣಬಹುದು. ಉದಾಹರಣೆಗೆ 14ನೆಯ ಶತಮಾನದಷ್ಟು ಹಿಂದೆಯೇ, ಬೊಲೋನದಲ್ಲಿ ನೂಲಿನ ಉತ್ಪಾದನೆಗೂ ನ್ಯೂರೆಂಬರ್ಗಿನಲ್ಲಿ ಕಾಗದದ ಉತ್ಪಾದನೆಗೂ ಜಲಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿತ್ತು. ಬಂಡವಾಳ ಮತ್ತು ಮಾರುಕಟ್ಟೆಗಳ ಕೊರತೆಯಿಂದಾಗಿ ಮತ್ತು ಮಿತವಾದ ಶಕ್ತಿಸಾಧನಗಳಿಂದಾಗಿ ಈ ಕಾರ್ಖಾನೆಗಳು ದೊಡ್ಡವಾಗಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಕಾರ್ಖಾನೆ ವ್ಯವಸ್ಥೆ ಎಂಬ ಶಬ್ದವನ್ನು ಬಳಸುವುದು ಮೇಲೆ ಬಳಸುವುದು ಮೇಲೆ ಹೇಳಿದ ವಿಶಿಷ್ಟಾರ್ಥದಲ್ಲಿ.[೧]

ಕುಟುಂಬ ಉತ್ಪಾದನ ವ್ಯವಸ್ಥೆ[ಬದಲಾಯಿಸಿ]

ಕಾರ್ಖಾನೆ ವ್ಯವಸ್ಥೆ ಬರುವುದಕ್ಕೆ ಮುನ್ನ ಇದ್ದ ಕುಟುಂಬ ಉತ್ಪಾದನ ವ್ಯವಸ್ಥೆಯಲ್ಲಿ ಕಾರ್ಮಿಕರು ತಂತಮ್ಮ ಮನೆಗಳಲ್ಲೇ ಉತ್ಪಾದನೆಯ ಕಾರ್ಯದಲ್ಲಿ ತೊಡಗಿರುತ್ತಿದ್ದರು. ಎಂಥ ಪದಾರ್ಥ ಬೇಕು, ಎಷ್ಟು ಬೇಕು-ಎಂಬುದನ್ನು ಇವರಿಗೆ ತಿಳಿಸುತ್ತಿದ್ದವರು ವರ್ತಕರು. ಅವರೇ ಕಾರ್ಮಿಕರಿಗೆ ಉತ್ಪಾದನೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಯನ್ನೊದಗಿಸುತ್ತಿದ್ದರು; ಉತ್ಪಾದನೆಯಾದ ಸರಕನ್ನು ಅವರಿಂದ ಸಂಗ್ರಹಿಸುತ್ತಿದ್ದರು. ಆಗ ಉತ್ಪಾದನೆಗೆ ಅವಶ್ಯವಾಗಿದ್ದ ಉಪಕರಣಗಳು ಸಾಮಾನ್ಯವಾಗಿ ಸಣ್ಣವು; ಅವು ಅಧಿಕ ಬೆಲೆಯುವುಗಳಾಗಿರಲಿಲ್ಲ. ಉತ್ಪಾದನೆಯಾಗುತ್ತಿದ್ದ ಪದಾರ್ಥವೂ ಹೆಚ್ಚಾಗಿರುತ್ತಿರಲಿಲ್ಲ. ಈ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದಾಗ, ಮಾರುಕಟ್ಟೆ ವಿಸ್ತರಿಸತೊಡಗಿದಾಗ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯ ಒದಗಿ ಬಂತು. ಜಲಶಕ್ತಿಯಿಂದಲೂ ಉಗಿಶಕ್ತಿಯಿಂದಲೂ ನಡೆಯುವ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿಕೊಳ್ಳುವುದು ಸಾಧ್ಯವಾದಾಗ ಈ ಯಂತ್ರಗಳನ್ನು ಸ್ಥಾಪಿಸಿ ನಡೆಸುವುದಕ್ಕೂ ಇವಕ್ಕೆ ಅವಶ್ಯವಾದ ಶಕ್ತಿಯನ್ನೊದಗಿಸಿಕೊಳ್ಳುವುದಕ್ಕೂ ದೊಡ್ಡ ಕಟ್ಟಡಗಳನ್ನು ಕಟ್ಟುವುದು ಅನಿವಾರ್ಯವಾಯಿತು. ಇವಕ್ಕೆ ಬೇಕಾಗಿದ್ದ ಬಂಡವಾಳವೂ ಅಗಾಧವೇ. ಸಾಮಾನ್ಯವಾಗಿ ಸ್ವಂತ ಉಪಕರಣಗಳಿಂದ ತಂತಮ್ಮ ಮನೆಗಳಲ್ಲೆ ದುಡಿಯುತ್ತಿದ್ದ ಕಾರ್ಮಿಕರಿಗೆ ಇಷ್ಟೊಂದು ಬಂಡವಾಳ ಒದಗಿಸಿಕೊಳ್ಳುವ ಶಕ್ತಿ ಇರಲಿಲ್ಲ. ಇದಕ್ಕೆ ಬಂಡವಾಳ ಇದ್ದುದ ವರ್ತಕರಲ್ಲಿ. ಅವರೇ ಕಾರ್ಖಾನೆವ್ಯವಸ್ಥೆಯ ಪ್ರವರ್ತಕರು. ಕಾರ್ಮಿಕರು ತಂತಮ್ಮ ಮನೆಗಳಲ್ಲಿ ದುಡಿಯುವ ಬದಲು ಕಾರ್ಖಾನೆಯಲ್ಲಿ ನಿಗದಿಯಾದ ವೇಳೆಗಳಲ್ಲಿ ಕೆಲಸ ಮಾಡಲಾರಂಭಿಸಿದರು. ಕಾರ್ಖಾನೆಯಲ್ಲಿ ಉತ್ಪಾದನೆಯಾದ್ದು ಅವರ ಮಾಲೀಕನ ಸ್ವತ್ತು. ಅದಕ್ಕೆ ಬೇಕಾದ ಸಾಮಗ್ರಿಯನ್ನೊದಗಿಸುವವನೂ ಉತ್ಪತ್ತಿಯಾದ ಪದಾರ್ಥಕ್ಕೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುವವನೂ ಅವನೇ. ಕಾರ್ಮಿಕರಿಗೆ ಅವರು ಮಾಡಿದ ಕೆಲಸಕ್ಕೆ ಅನುಗುಣವಾಗಿ ಕೂಲಿ ದೊರಕಲಾರಂಭವಾಯಿತು. ಉತ್ಪಾದನೆ ಸ್ವಂತ ಅನುಭೋಗಕ್ಕಾಗಿಯಲ್ಲ, ವಿಶಾಲವಾದ ಮಾರುಕಟ್ಟೆಗಾಗಿ, ಸಮಾನ ಗುಣಗಳುಳ್ಳ ಸರಕುಗಳ ಭೂರಿ ಉತ್ಪಾದನೆ, ನಾನಾ ಹಂತಗಳಾಗಿ ಉತ್ಪಾದನಕಾರ್ಯದ ವಿಂಗಡಣೆ, ಪ್ರತಿಯೊಂದು ಹಂತಕ್ಕೂ ವಿಶಿಷ್ಟವಾದ ಯಂತ್ರದ ಅಳವಡಿಕೆ ಮತ್ತು ವಿಶೇಷ ಪ್ರಾವೀಣ್ಯದ ಸಾಧನೆ-ಇವು ಕಾರ್ಖಾನೆ ಉತ್ಪಾದನೆ ವ್ಯವಸ್ಥೆಯ ಕೆಲವು ಮುಖ್ಯ ಲಕ್ಷಣಗಳು. ಉತ್ಪಾದನಾಂಗಗಳ ಸಂಘಟನೆ ಮತ್ತು ಅನುಕೂಲತಮ ಬಳಕೆಯ ಪ್ರಯೋಗಗಳು ನಡೆದುವು.

ಕಾರ್ಖಾನೆ ಉತ್ಪಾದನ ವ್ಯವಸ್ಥೆ[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ಆರಂಭವಾಗಿ ವಿಶ್ವದ ಇತರ ದೇಶಗಳಿಗೂ ಕ್ರಮೇಣ ಹಬ್ಬಿದ ಕಾರ್ಖಾನೆ ಉತ್ಪಾದನ ವ್ಯವಸ್ಥೆಯಿಂದಾಗಿ ಆ ದೇಶಗಳ ಆರ್ಥಿಕ ಸಾಮಾಜಿಕ ವ್ಯವಸ್ಥೆಗಳಲ್ಲಿ ಅನೇಕ ಬದಲಾವಣೆಗಳಾದುವು. ನಿರ್ಜೀವಿ ಶಕ್ತಿಯನ್ನೇ ಅಧಿಕವಾಗಿ ಅವಲಂಬಿಸಿದ ಕೈಗಾರಿಕೆಗಳು ಈ ಶಕ್ತಿಮೂಲಗಳಿರುವೆಡೆಯಲ್ಲಿ ಕೇಂದ್ರೀಕೃತವಾಗಲಾರಂಭಿಸಿದುವು. ಕಚ್ಚಾಸಾಮಗ್ರಿ, ಮಾರುಕಟ್ಟೆ, ಕಾರ್ಮಿಕರ ಸರಬರಾಯಿ-ಇವು ಕೈಗಾರಿಕೆಗಳ ಕೇಂದ್ರೀಕರಣಕ್ಕೆ ಇತರ ಕಾರಣಗಳು ಇದರಿಂದ ಹೊಸ ನಗರಗಳು ಬೆಳೆದುವು.ಕಾರ್ಖಾನೆ ವ್ಯವಸ್ಥೆ ಮೂಲತಃಭೂರಿ ಉತ್ಪಾದನೆಗೆ ಎಡೆ ಮಾಡಿ, ಪಾಶ್ಚಾತ್ಯ ದೇಶಗಳ ರಾಷ್ಟ್ರೀಯ ವರಮಾನ ವೃದ್ಧಿಯಾಗಲು ಕಾರಣವಾಯಿತು. ಭೂಮಿಯನ್ನೆ ಅವಲಂಬಿಸಿದ್ದ ರೈತರನ್ನೂ ತಲತಲಾಂತರದಿಂದ ತಂತಮ್ಮ ವೃತ್ತಿಗಳಿಗೆ ಅಂಟಿಕೊಂಡಿದ್ದ ಕಾರ್ಮಿಕರನ್ನೂ ಅದು ತನ್ನಲ್ಲಿಗೆ ಆಕರ್ಷಿಸಿ ಉತ್ತಮ ಮಟ್ಟದ ಜೀವನವನ್ನು ನಡೆಸುವ ಅನುಕೂಲವನ್ನು ಅವರಿಗೆ ಒದಗಿಸಿಕೊಟ್ಟಿತು. ಕಾರ್ಖಾನೆ ವ್ಯವಸ್ಥೆಯ ಆರಂಭಕಾಲದಲ್ಲಿ ಅನೇಕ ಕಠಿಣ ಪರಿಸ್ಥಿತಿಗಳು ಉದ್ಭವಿಸಿದರೂ ಕಾಲಕ್ರಮೇಣ ಅತ್ಯದ್ಭುತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಸಾಮಥ್ರ್ಯವನ್ನು ಇದು ಪಡೆದುಕೊಂಡಿತು. ಮಾನವ ತಾನು ಕಂಡರಿಯದ ಪ್ರಮಾಣದಲ್ಲಿ ವಸ್ತುಗಳನ್ನು ಉತ್ಪಾದಿಸುವುದಕ್ಕೆ, ಅವುಗಳ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಈ ವ್ಯವಸ್ಥೆ ದಾರಿ ಮಾಡಿಕೊಟ್ಟಿತು. ಇಂದು ಆರ್ಥಿಕವಾಗಿ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಜೀವನಮಟ್ಟ ಹೆಚ್ಚಿದ್ದರೆ, ಆರ್ಥಿಕವಾಗಿ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿನ ಜೀವನ ಮಟ್ಟ ಹೆಚ್ಚುವ ಆಶೆಯಿದ್ದರೆ ಅದು ಈ ಉತ್ಪಾದನ ಕ್ರಮದಿಂದಲೇ. ಒಂದೇ ಕಡೆಯಲ್ಲಿ ಅಧಿಕ ಸಂಖ್ಯೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಸುಸಂಘಟಿತರಾಗಿ ತಮ್ಮ ಹಿತರಕ್ಷಣೆಯ ಕ್ರಮ ಕೈಕೊಂಡರು. ಉತ್ಪಾದನ ಕಾರ್ಯ ಅಕುಂಠಿತವಾಗಿಯೂ ಪ್ರಗತಿಪರವಾಗಿಯೂ ಸಾರುವುದಕ್ಕೆ ಕಾರ್ಮಿಕ-ಮಾಲೀಕ ಸೌಹಾರ್ದ ಒಂದು ಮುಖ್ಯ ಅಗತ್ಯವೆಂಬುದು ಈಗ ಬಹುತೇಕ ಮನವರಿಕೆಯಾಗಿದೆ.

ಅರ್ಥವ್ಯವಸ್ಥೆಯ ಕ್ರಾಂತಿ[ಬದಲಾಯಿಸಿ]

ಕಾರ್ಖಾನೆ ವ್ಯವಸ್ಥೆ ಕೇವಲ ಉತ್ಪಾದಿ ವಸ್ತುಗಳ ಮತ್ತು ಅನುಭೋಗಿ ವಸ್ತುಗಳ ಉತ್ಪಾದನೆಯಲ್ಲಿ ಮಾತ್ರ ಕ್ರಾಂತಿಯನ್ನುಂಟುಮಾಡಲಿಲ್ಲ. ಅರ್ಥವ್ಯವಸ್ಥೆಯ ವಿವಿಧ ರಂಗಗಳಲ್ಲಿಯ ಕ್ರಾಂತಿಗೆ ಇದು ಪೂರಕವಾಯಿತು. ಉದಾಹರಣೆಗೆ ಕೃಷಿರಂಗ, ಸಾರಿಗೆ ರಂಗ, ವಾಣಿಜ್ಯ ರಂಗಗಳಲ್ಲಿಯ ಕ್ರಾಂತಿಗೂ ಇದು ಪೋಷಕವಾಯಿತು. ಜನರು ಹೆಚ್ಚು ಸಂಖ್ಯೆಯಲ್ಲಿ ಪಟ್ಟಣಗಳಿಗೆ ವಲಸೆ ಹೋದುದರಿಂದ ಕೃಷಿರಂಗದಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಯಿತು. ಬೃಹದ್ಗಾತ್ರದಲ್ಲಿ ಕೃಷಿಕಾರ್ಯ ನಡೆಸಲು ಅಗತ್ಯವಾದ ಯಂತ್ರೋಪಕರಣಗಳು ಬಂದವು. ಕಾರ್ಖಾನೆಗಳಲ್ಲಿ ನಡೆಯುತ್ತಿದ್ದ ಭೂರಿ ಉತ್ಪಾದನೆಗೆ ಅಗತ್ಯವಾದ ಕಚ್ಚಾಸಾಮಗ್ರಿಗಳ ಮತ್ತು ಪಟ್ಟಣಗಳ ಜನಕ್ಕೆ ಬೇಕಾದ ಆಹಾರಪದಾರ್ಥಗಳ ಅಧಿಕೋತ್ಪಾದನೆಯ ಆವಶ್ಯಕತೆಯಿಂದಾಗಿ ಕೃಷಿ ಕೂಡ ಒಂದು ಉದ್ಯಮವಾಗಿ ಬೆಳೆಯಿತು. ಕಚ್ಚಾಸಾಮಗ್ರಿಗಳನ್ನೂ ಉತ್ಪಾದಿತ ವಸ್ತುಗಳನ್ನೂ ದೂರ ದೂರ ಶೀಘ್ರವಾಗಿ ಸಾಗಿಸಬೇಕಾಗಿ ಬಂದುದರಿಂದ ಸಾರಿಗೆಯಲ್ಲಿ ಕ್ರಾಂತಿ ಉಂಟಾಯಿತು. ಬೆಳೆಯುತ್ತಿದ್ದ ಮಾರುಕಟ್ಟೆಯ ಫಲವಾಗಿ ಇಡೀ ವಾಣಿಜ್ಯ ವ್ಯವಸ್ಥೆಯಲ್ಲೇ ಮೂಲಭೂತ ವ್ಯತ್ಯಾಸಗಳಾದುವು. 18 ನೆಯ ಶತಮಾನದ ಕೊನೆಯ ಭಾಗದಲ್ಲಿ ಹಾಗೂ 19 ನೆಯ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡಿನ ಪ್ರಜಾಸಂಖ್ಯೆ ಬೆಳೆಯುತ್ತಿತ್ತು. ಆರ್ಥಿಕ ಚಿಂತಕರು ನಿರಾಶಾವಾದದ ಸಿದ್ಧಾಂತಗಳನ್ನು ಮಂಡಿಸುತ್ತಿದ್ದರು. ಆಗ ಅಸ್ತಿತ್ವಕ್ಕೆ ಬಂದ ಕಾರ್ಖಾನೆ ವ್ಯವಸ್ಥೆ ಒಂದು ಕಡೆ ಉದ್ಯೋಗ ಸೃಷ್ಟಿಯನ್ನೂ ಮತ್ತೊಂದು ಕಡೆ ಕೃಷಿರಂಗದಲ್ಲಿಯ ಉತ್ಪಾದನೆಯ ಹೆಚ್ಚಳಕ್ಕೆ ದಾರಿಯನ್ನೂ ಮಾಡಿಕೊಟ್ಟು ಆರ್ಥಿಕ ಬೆಳೆವಣಿಗೆಯ ಹಾದಿಯನ್ನು ಸುಗಮ ಮಾಡಿತು.

ಸಾಮಾಜಿಕ ಪರಿಣಾಮ[ಬದಲಾಯಿಸಿ]

ಕಾರ್ಖಾನೆ ವ್ಯವಸ್ಥೆ ಕಾಲಕ್ರಮದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮತ್ತೊಂದು ಗಮನಾರ್ಹವಾದ ಸಾಮಾಜಿಕ ಪರಿಣಾಮವನ್ನುಂಟುಮಾಡಿತು. ಪುರುಷರಂತೆ ಸ್ತ್ರೀಯರೂ ಕಾರ್ಖಾನೆಗಳಲ್ಲಿ ದುಡಿಯತೊಡಗಿದ್ದರಿಂದ ಕುಟುಂಬದ ಮೌಲ್ಯಗಳಲ್ಲಿ ವ್ಯತ್ಯಾಸವುಂಟಾಯಿತು. ಜೀವನಕ್ರಮದಲ್ಲಿ ಅಗಾಧ ಪರಿವರ್ತನೆಗಳಾದುವು.

ಕಾರ್ಖಾನೆ ವ್ಯವಸ್ಥೆಯ ದುಷ್ಪರಿಣಾಮ[ಬದಲಾಯಿಸಿ]

ಕಾರ್ಖಾನೆ ವ್ಯವಸ್ಥೆಯ ದುಷ್ಪರಿಣಾಮಗಳೂ ಇಲ್ಲದಿಲ್ಲ. ಕಾರ್ಮಿಕವರ್ಗ ಮತ್ತು ಬಂಡವಾಳವರ್ಗ ಇವೆರಡೂ ಪರಸ್ಪರ ಭಿನ್ನ ಹಿತಾಶಕ್ತಿಗಳೆಂಬಂತೆ ಇವುಗಳ ನಡುವಣ ಅಂತರ ಬೆಳೆಯಿತು. ಹಿಂದಿನ ವ್ಯವಸ್ಥೆಯಲ್ಲಿ ಉತ್ಪಾದನೆಯ ಘಟಕದ ಯಜಮಾನನೂ ಕಾರ್ಮಿಕನಾಗಿ ತನ್ನ ಅಧೀನರೊಡನೆ ಕೆಲಸ ಮಾಡುತ್ತಿದ್ದ. ಅವರ ಹಿತಾಸಕ್ತಿಗಳ ರಕ್ಷಣೆ ತನ್ನ ಕರ್ತವ್ಯವೆಂದೇ ಅವನು ಸಾಮಾನ್ಯವಾಗಿ ಭಾವಿಸಿದ್ದ. ಆದರೆ ಕಾರ್ಖಾನೆ ವ್ಯವಸ್ಥೆಯಲ್ಲಿ ಇವರಿಬ್ಬರ ನಡುವೆ ಒಂದು ಬೃಹದ್ರೇಖೆಯನ್ನು ಎಳೆಯಲಾಯಿತು. ಮಾಲೀಕ ಉತ್ಪಾದನೆಗೆ ಅಗತ್ಯವಾದ ಎಲ್ಲ ಸಾಧನ ಸಂಪತ್ತುಗಳನ್ನೂ ಒದಗಿಸಿದರೆ ಕಾರ್ಮಿಕ ತನ್ನ ದೇಹಶ್ರಮವನ್ನು ಮಾರಿ ವಸ್ತುಗಳನ್ನು ಉತ್ಪಾದಿಸುವುದು ಆಚರಣೆಗೆ ಬಂತು. ವರ್ಗಹೋರಾಟ ತೀವ್ರವಾದ್ದು ಕಾರ್ಖಾನೆ ವ್ಯವಸ್ಥೆಯಿಂದಲೇ. ಕಾರ್ಖಾನೆ ವ್ಯವಸ್ಥೆಯ ಆರಂಭಕಾಲದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಕಾರ್ಮಿಕರ ಶೋಷಣೆ ಮೇರೆ ಮೀರಿ ಬೆಳೆದಿತ್ತು. ಅವರ ಕೆಲಸದ ವೇಳೆಗೆ ಮಿತಿಯೇ ಇರಲಿಲ್ಲ. ಹೆಂಗಸರು ಮಕ್ಕಳನ್ನೂ ಅತಿಯಾಗಿ ದುಡಿಸಲಾಗುತ್ತಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ತನಗೆ ತೋರಿದಂತೆ ಕರಾರು ಮಾಡಿಕೊಳ್ಳುವ ಹಕ್ಕುಂಟೆಂಬ ತತ್ತ್ವದ ಅತಿರೇಕದ ಅನ್ವಯದಿಂದಾಗಿ ಕಾರ್ಖಾನೆ ವ್ಯವಸ್ಥೆ ಸಾಮೂಹಿಕ ಸಂಕಟದ ಸಂಕೇತವಾಗಿ ಪರಿಣಮಿಸಿತ್ತು. ನಿರುದ್ಯೋಗ ಅಧಿಕವಾಗಿತ್ತು. ಯಂತ್ರಶಕ್ತಿ ಮಾನವಶ್ರಮವನ್ನು ತೀವ್ರವಾಗಿ ಅನಗತ್ಯವನ್ನಾಗಿ ಮಾಡಬಹುದೇನೋ ಎನ್ನುವ ಶಂಕೆ ಇದರ ಜೊತೆಯಲ್ಲಿಯೇ ಮೂಡಿತು. ಕಾರ್ಖಾನೆ ವ್ಯವಸ್ಥೆಯ ಆಗಮನದೊಂದಿಗೆ ಬಂದ ಈ ಸಂಕಟಗಳನ್ನು ನಿವಾರಿಸಲು ಸರ್ಕಾರಗಳು ತಮ್ಮ ನಿರ್ಲಿಪ್ತತೆಯನ್ನು ತ್ಯಾಗಮಾಡಿ, ಕಾನೂನುಗಳ ಮೂಲಕ ಕಾರ್ಮಿಕರ ಹಿತಗಳನ್ನು ರಕ್ಷಿಸಬೇಕಾಯಿತು.

ಕಾರ್ಖಾನೆ ವ್ಯವಸ್ಥೆಯ ಒಂದು ಮುಖ್ಯ ಪರಿಣಾಮ[ಬದಲಾಯಿಸಿ]

ಉತ್ಪಾದನೆ ಸುತ್ತುಬಳಸಿನದಾದ್ದು ಕಾರ್ಖಾನೆ ವ್ಯವಸ್ಥೆಯ ಒಂದು ಮುಖ್ಯ ಪರಿಣಾಮ. ಪದಾರ್ಥದ ಉತ್ಪಾದನೆಯ ಕಾರ್ಯದಲ್ಲಿ ತೊಡಗುವುದಕ್ಕೂ ಅದು ಕಾರ್ಖಾನೆಯಿಂದ ಹೊರಬಿದ್ದು ಅನುಭೋಗಿಯ ಕೈ ಸೇರುವುದಕ್ಕೂ ನಡುವಣ ಕಾಲಾವಧಿ ಬಲು ದೊಡ್ಡದಾಗುತ್ತ ಬಂತು. ಪೂರ್ವಯೋಜನೆಯಿಲ್ಲದ ಉತ್ಪಾದನ ಕಾರ್ಯದಿಂದಾಗಿ ಆಗಿಂದಾಗ್ಗೆ ಬೇಡಿಕೆ ಮತ್ತು ಸರಬರಾಯಿಗಳ ಸಮತೋಲ ತಪ್ಪಿ ಆರ್ಥಿಕತೆಯೇ ಅಸ್ತವ್ಯಸ್ತವಾದ ಸಂದರ್ಭಗಳುಂಟು, ಬೆಲೆಗಳ ಕುಸಿತ, ಉತ್ಪಾದನೆಯ ಕಡಿತ ಮತ್ತು ಸಾಮೂಹಿಕ ನಿರುದ್ಯೋಗಗಳು ಪದೇ ಪದೇ ಸಂಭವಿಸಿದುವು. ಆದರೆ ಇದು ಕಾರ್ಖಾನೆ ವ್ಯವಸ್ಥೆಯ ದೋಷವೆನ್ನುವುದಕ್ಕಿಂತ, ಕ್ರಾಂತಿಕಾರಿ ಉತ್ಪಾದನ ವಿಧಾನಗಳಿಗೆ ತಕ್ಕಂತೆ ಅರ್ಥವ್ಯವಸ್ಥೆಯನ್ನು ಹೊಂದಿಸಿಕೊಳ್ಳುವ ಕಾರ್ಯ ನಡೆಯದಿದ್ದುದರ ದ್ಯೋತಕವೆನ್ನಬೇಕು.ಕಾರ್ಖಾನೆ ವ್ಯವಸ್ಥೆ ಪ್ರಾರಂಭವಾದಾಗ ಉತ್ಪಾದನೆಯ ಎಲ್ಲ ಘಟ್ಟಗಳೂ ಒಂದೇ ಕಡೆ ಕೇಂದ್ರೀಕೃತವಾಗಿ, ಉತ್ಪಾದನೆ ಒಂದೇ ಸೂರಿನ ಕೆಳಗೆ ನಡೆಯುವುದು ಸಾಮಾನ್ಯವಾಗಿತ್ತು. ಆದರೆ ಇಂದು ಇಂಥ ವ್ಯವಸ್ಥೆ ಸಹ ತೀವ್ರವಾದ ಬದಲಾವಣೆಗಳಿಗೆ ಒಳಗಾಗಿದೆ. ಈಗ ಉತ್ಪಾದನೆಯ ವಿವಿಧ ಘಟ್ಟಗಳು ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುತ್ತವೆ. ಇದು ಮಿತವ್ಯಯದ ದೃಷ್ಟಿಯಿಂದ ಬಹಳ ಲಾಭದಾಯಕವೆಂದು ಕಂಡುಬಂದಿದೆ. ಆದ್ದರಿಂದ ಇಂದಿನ ಕಾರ್ಖಾನೆ ಇಡೀ ಉತ್ಪಾದನ ವ್ಯವಸ್ಥೆಯ ಒಂದು ಅಂಗ. ತನ್ನ ಪಾಲಿನ ಉತ್ಪಾದನೆಯನ್ನು ಅತ್ಯಂತ ನಿಖರವಾಗಿ, ವೈಜ್ಞಾನಿಕವಾಗಿ ಮಾಡುವುದು ಸರ್ವೇಸಾಮಾನ್ಯವಾಗಿದೆ. ಎರಡನೆಯ ಮಹಾಯುದ್ಧದ ಬಳಿಕ ಕಾರ್ಖಾನೆಗಳ ಸ್ವರೂಪದಲ್ಲಿ ಸಹ ಬಹಳ ಬದಲಾವಣೆಗಳಾಗಿವೆ. ಸ್ವಯಂಕ್ರೀಯ ಯಂತ್ರಗಳ ಬಳಕೆ, ಹೆಚ್ಚು ವೈಜ್ಞಾನಿಕ ರೀತಿಯ ಉತ್ಪಾದನೆ, ಆದರ್ಶರೂಪದ ಸಂಘಟನೆ-ಇವು ಈ ಬದಲಾವಣೆಗಳಲ್ಲಿ ಮುಖ್ಯವಾದವು.ಕಾರ್ಖಾನೆ ವ್ಯವಸ್ಥೆ ಸರ್ವದಾ ಪರಿವರ್ತನ ಸ್ವರೂಪವುಳ್ಳದ್ದು. ಉತ್ಪಾದನ ಕಾರ್ಯಕ್ಕೆ ಒದಗಿ ಬರುತ್ತಿರುವ ಹೊಸಹೊಸ ಉಪಜ್ಞೆಗಳೂ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳೂ ಅದರ ಈ ಗುಣಕ್ಕೆ ಕಾರಣ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: