ವಿಷಯಕ್ಕೆ ಹೋಗು

ಕಾಪ್ಟಿಕ್ ಭಾಷೆ ಮತ್ತು ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದು ಮೃತ ಭಾಷೆಗಳ ವರ್ಗಕ್ಕೆ ಸೇರಿಹೋಗಿರುವ ಈಜಿಪ್ಟಿನ ಭಾಷೆಗಳಲ್ಲಿ ಕಾಪ್ಟಿಕ್ ಭಾಷೆಯೂ ಒಂದು. ಇದು ಪ್ರಾಚೀನ ಈಜಿಪ್ಷಿಯನ್ ಭಾಷೆಯಿಂದ ಉದಿಸಿದ ಭಾಷೆಗಳಲ್ಲೊಂದಾಗಿದೆ. ಭಾಷೆಯ ವರ್ಗೀಕರಣದ ದೃಷ್ಟಿಯಿಂದ ಹ್ಯಾಮಿಟೊ ಭಾಷಾವರ್ಗಕ್ಕೆ ಸೇರಿರುವ ಭಾಷೆ ಇದು. ಈಜಿಪ್ಟಿನವರು ಎಂಬ ಅರ್ಥವನ್ನು ಸೂಚಿಸುವ ಗ್ರೀಕ್ ಭಾಷೆಯ ಐಗುಪ್ತೊಯ್ ಎಂಬುದರಿಂದ ನಿಷ್ಪನ್ನವಾದ ಕುಬ್ತ್ ಅಥ ಕುóಬ್ತ್ ಎಂಬ ಅರಬ್ಬೀ ಶಬ್ದದ ಐರೋಪ್ಯ ರೂಪವೇ ಕಾಪ್ಟ್ ಇರಬೇಕೆಂದು ವಿದ್ವಾಂಸರು ಭಾವಿಸಿದ್ದಾರೆ. ಮತ್ತೆ ಕೆಲವರು ಇದು ಉತ್ತರ ಈಜಿಪ್ಟಿನಲ್ಲಿದ್ದ ಕಾಪ್ಪೋಸ್ ಎಂಬ ಪ್ರಾಚೀನ ನಗರಕ್ಕೆ ಸಂಬಂಧಪಟ್ಟಿರುವ ಭಾಷೆ. ಈ ಭಾವನೆಯೇ ಕಾಪ್ಟ್ ಎನ್ನುವ ಶಬ್ದ ರೂಪಗೊಳ್ಳಲು ಕಾರಣವಾಗಿರಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಕಾಪ್ಟ್ ಎಂಬುದು ಏಕಪ್ರಕೃತಿವಾದಿ ಜಾಕೊಬೈಟ್ ಪಂಥದ ಈಜಿಪ್ಟಿನ ಕ್ರೈಸ್ತರನ್ನೂ ಕಾಪ್ಟಿಕ್ ಎಂಬುದು ಅವರ ಭಾಷೆಯನ್ನೂ ಸೂಚಿಸುತ್ತದೆ. ಕ್ರಿ.ಪೂ. 14 ರಿಂದ 12ನೆಯ ಶತಮಾನದ ವರೆಗಿನ ಅವಧಿಯಲ್ಲಿ ಪ್ರಚುರವಾಗಿದ್ದ ಪ್ರಾಚೀನ ಈಜಿಪ್ಟ್ ಭಾಷೆಯ ಕೊನೆಯ ಹಂತ ಇದು ಎಂದು ಕೆಲವು ವಿದ್ವಾಂಸರು ಭಾವಿಸಿದ್ದಾರೆ. ಆದರೆ ಆಧುನಿಕ ಭಾಷಾವಿಜ್ಞಾನಿಗಳೂ ಇತಿಹಾಸಜ್ಞರೂ ಇಷ್ಟೊಂದು ಪ್ರಾಚೀನತೆಯನ್ನು ಇದಕ್ಕೆ ಆರೋಪಿಸಲು ಸಿದ್ಧರಾಗಿಲ್ಲ. ಕ್ರಿ.ಶ. ಮೂರನೆಯ ಶತಮಾನದಿಂದ ಈಜಿಪ್ಟಿನ ಕ್ರೈಸ್ತರ ಭಾಷೆಯಾಗಿದ್ದಿತೆಂದು ನಂಬಲು ಆಧಾರಗಳಿವೆ.[]

ಇತಿಹಾಸ

[ಬದಲಾಯಿಸಿ]

ಪ್ರಾಚೀನ ಕಾಪ್ಟಿಕ್ ಭಾಷೆ ಈಜಿಪ್ಷಿಯನ್ನರ ಪ್ರಾಚೀನ, ಪವಿತ್ರ ಭಾಷೆಯಿಂದ ನೇರವಾಗಿ ನಿಷ್ಪನ್ನವಾದ ಭಾಷೆಯಾದುದರಿಂದ ಛಾಂಪೋಲಿಯನ್, ಯಂಗ್ ಮುಂತಾದವರಿಗೆ ಈಜಿಪ್ಟಿನ ಚಿತ್ರಲಿಪಿ (ಹೀರೊಗ್ಲಿಫಿಕ್) ಶಾಸನಗಳನ್ನು ಓದಿ ಅರ್ಥೈಸುವುದಕ್ಕೆ ಅಗತ್ಯವಾಗಿದ್ದ ಕೀಲಿಕೈಯನ್ನು ಇದು ಒದಗಿಸಿತು ಎಂದು ಹೇಳಲಾಗಿದೆ. ಮುಂದೆ ಅಪ್ರಾಚುರ್ಯದಿಂದ ಶಬ್ದಗಳು ಮೂಲೆ ಗುಂಪಾಗಿಬಿಟ್ಟಿದ್ದರಿಂದಲೂ ವಾಕ್ಯರಚನೆ ತೀವ್ರವಾದ ಬದಲಾವಣೆಗಳಿಗೆ ಒಳಗಾಗಿಬಿಟ್ಟಿದ್ದರಿಂದಲೂ ಭಾಷೆಯ ಸ್ವರೂಪ ಬಹಳವಾಗಿ ಮಾರ್ಪಟ್ಟು ಪ್ರಾಚೀನ ಭಾಷೆಯ ಸ್ವರೂಪವನ್ನು ತಿಳಿಯುವುದು ಕಷ್ಟವಾಯಿತು. ಕ್ರಿ.ಶ. 640-646 ರಲ್ಲಿ ನಡೆದ ಮುಸ್ಲಿಮರ ದಾಳಿಯಿಂದಾಗಿ ಕ್ರಮೇಣ ಅರಬ್ಬೀ ಭಾಷೆ ಪ್ರಬಲವಾಗಿ ಕಾಪ್ಟಿಕ್ ಭಾಷೆ ಹಿನ್ನೆಲೆಗೆ ಹೋಯಿತು; ಹದಿನೈದನೆಯ ಶತಮಾನದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದ್ದಂತೆ ಕಂಡುಬರುತ್ತದೆಯಾದರೂ ಹದಿನೇಳನೆಯ ಶತಮಾನದ ಹೊತ್ತಿಗೆ ನಾಮಾವಶೇಷವಾಯಿತೆಂದೇ ಹೇಳಬೇಕು. ಹದಿನೈದನೆಯ ಶತಮಾನದ ಅರಬ್ಬೀ ಭಾಷಾಲೇಖಕ ಮಾಜ್óರೀಜಿ ಕಾಪ್ಟಿಕ್ ಭಾಷೆ ತನ್ನ ಕಾಲದಲ್ಲಿ ತುಂಬ ಪ್ರಚುರವಾಗಿತ್ತೆಂದು ತಿಳಿಸಿದ್ದಾನೆ. ಆದರೆ, ಸುಮಾರು ಇನ್ನೂರು ವರ್ಷಗಳ ಅನಂತರ ಅದೇ ನಾಡಿಗೆ ಭೇಟಿಕೊಟ್ಟ ಐರೋಪ್ಯ ಪ್ರವಾಸಿ ಪಿ.ವ್ಯಾನ್ ಸ್ಲೆಬ್ ಎಂಬಾತ ಲಕ್ಸರ್‍ಗೆ ಕೊಂಚ ಉತ್ತರಕ್ಕಿರುವ ಜೆನಿಯಾ ಎಂಬ ಹಳ್ಳಿಯಲ್ಲಿ ಒಂದೇ ಒಂದು ಕುಟುಂಬಕ್ಕೆ ಈ ಭಾಷೆ ತಿಳಿದಿತ್ತೆಂದೂ ಮುದುಕನೊಬ್ಬ ಮಾತ್ರ ಈ ಭಾಷೆಯಲ್ಲಿ ಮಾತನಾಡಬಲ್ಲವನಾಗಿದ್ದನೆಂದೂ ಹೇಳಿದ್ದಾನೆ. ಉತ್ತರ ಈಜಿಪ್ಟಿನ ಕೆಲವೊಂದು ಭಾಗಗಳಲ್ಲಿ ಇದರ ಕೆಲವು ಕುರುಹುಗಳು 19ನೆಯ ಶತಮಾನದಲ್ಲಿಯೂ ಕಾಣದೊರೆಯುತ್ತಿದ್ದುವು ಎಂದು ಹೇಳಲಾಗಿದೆ. ಉಪಭಾಷಾ ರೂಪದಲ್ಲಿ ಚರ್ಚಿನ ಭಾಷೆಯಾಗಿ ಬಳಕೆಯಲ್ಲಿತ್ತು. ಎಂಬುದಕ್ಕೇನೋ ಆಧಾರಗಳಿವೆ. ಇಂದಿಗೂ ಈಜಿಷ್ಟಿನ ಕ್ರೈಸ್ತರ ಧಾರ್ಮಿಕ ಬರೆಹಗಳಲ್ಲಿ ಈ ಭಾಷೆಯನ್ನು ಬಳಸಲಾಗುತ್ತಿದೆಯಾದರೂ ಅದರೊಡನೆ, ಅನಿವಾರ್ಯವೋ ಎಂಬಂತೆ, ಅರಬ್ಬೀ ಭಾಷಾಂತರ ಇದ್ದೇ ತೀರುತ್ತದೆ. ಶಾಲೆಗಳಲ್ಲಿಯೂ ಬೈಬಲ್ಲಿನ ಹೊಸ ಒಡಂಬಡಿಕೆಯ ಸುವಾರ್ತೆ ಮತ್ತು ಸಂವಾದಗಳನ್ನು ಕಾಪ್ಟಿಕ್ ಮತ್ತು ಅರಬ್ಬೀ ಭಾಷೆಗಳಲ್ಲಿ ಕಲಿಸಿಕೊಡುತ್ತಾರಾದರೂ ವ್ಯಾಕರಣ ಬದ್ಧವಾಗಿ ಕಾಪ್ಟಿಕ್ ಭಾಷೆಯನ್ನೇನೂ ಹೇಳಿಕೊಡುವುದಿಲ್ಲ. ಕಾಪ್ಟಿಕ್ ಭಾಷೆಯ ಎಲ್ಲ ಧ್ವನಿಗಳಿಗೂ ಸಂವಾದಿಯಾದ ಅಕ್ಷರಗಳು ಗ್ರೀಕ್ ಲಿಪಿಯಲ್ಲಿ ಇಲ್ಲವಾದ ಕಾರಣ ಡೆಮೊಪಿಲಿಟಿಕ್‍ಯಿಂದ ಎರವಲು ಪಡೆಯಲಾದ ಆರು ಅಥವಾ ಏಳು ಅಕ್ಷರಗಳನ್ನು ಬಳಸಿಕೊಳ್ಳುತ್ತಾರೆ. ಖ, ಹ, ಫ, ಜಿ ಮತ್ತು ಶಕಾರದ ಎರಡು ರೂಪಗಳು-ಇವೇ ಬಹುವಾಗಿ ಬಳಕೆಗೆ ಡೆಮೊಟಿಕ್ ಅಕ್ಷರಗಳು. ಈ ಎಲ್ಲ ಬದಲಾವಣೆಗಳು ಉಂಟಾಗುವ ಹೊತ್ತಿಗೆ ಕಾಪ್ಟಿಕ್‍ಭಾಷೆಯ ಸ್ವರೂಪ ಬಹುಮಟ್ಟಿಗೆ ಬದಲಾಗಿತ್ತು. ಪ್ರಾಚೀನ, ಪವಿತ್ರ, ಭಾಷೆಗಿಂತ ಭಿನ್ನವಾಗಿ ಪರಿಣಮಿಸಿದ್ದರೂ ತನ್ನ ಈಜಿಷ್ಟಿನ್ ಲಕ್ಷಣಗಳನ್ನಿದು ಉಳಿಸಿಕೊಂಡಿತ್ತು. ಈ ಪದ್ಧತಿಯನ್ನು ಅನುಸರಿಸಿ ಕಾಪ್ಟಿಕ್ ಭಾಷೆಯನ್ನು ಬರೆಯುವುದಕ್ಕೆ ತೊಡಗಿದವರಲ್ಲಿ ಜ್ಯೋತಿಷ್ಯರು ಮತ್ತು ಮಾಂತ್ರಿಕರು ಮೊದಲಿಗರಾಗಿದ್ದರೆಂದು ಹೇಳಲಾಗಿದೆಯಾದರೂ ಭಾಷೆ, ಉಚ್ಚಾರಣೆ ಮತ್ತು ಕಾಗುಣಿತಕ್ಕೆ ನಿರ್ದಿಷ್ಟ ಸ್ವರೂಪವನ್ನು ಇತ್ತವರೆಂದರೆ ಬೈಬಲ್ಲಿನ ಭಾಷಾಂತರಕಾರರು. ಕಾಪ್ಟಿಕ್ಕಿನ ಎಲ್ಲ ಉಪಭಾಷೆಗಳಲ್ಲೂ ಬೈಬಲ್ಲಿನ ಭಾಷಂತರವನ್ನು ನೀಡಿದ ಈ ಭಾಷಾಂತರಕಾರರು ಅದಕ್ಕೆ ಒಂದು ಶಿಷ್ಟರೂಪವನ್ನು ನೀಡಿದರೆಂದೇ ಹೇಳಬೇಕು. ಆಧುನಿಕ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳ ಮೇಲೆ ಆಗಿರುವಂತೆಯೇ ಕಾಪ್ಟಿಕ್ ಉಪಭಾಷೆಗಳ ಮತ್ತು ಅವುಗಳ ಸಾಹಿತ್ಯಿಕ ಶೈಲಿಯ ಮೇಲೆ ಬೈಬಲ್ಲಿನ ಭಾಷಾಂತರಗಳು ಆಳವಾದ ಪ್ರಭಾವವನ್ನು ಬೀರಿವೆ.[]

 ಉಪಭಾಷೆಗಳ ಬಳಕೆ

[ಬದಲಾಯಿಸಿ]

ಅನೇಕ ಉಪಭಾಷೆಗಳು ಬಳಕೆಯಲ್ಲಿದ್ದುದರಿಂದ ಕಾಪ್ಟಿಕ್‍ನ ಉಪಭಾಷೆಗಳ ಹೆಸರುಗಳ ಮತ್ತು ಸಂಖ್ಯೆಯ ವಿಷಯದಲ್ಲಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. 19ನೆಯ ಶತಮಾನದ ವಿದ್ವಾಂಸರ ಬರೆಹಗಳನ್ನು ಪರಿಶೀಲಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಥೆಬನ್, ಮೆಂಫಿಕ್ ಮತ್ತು ಬಶ್ಮೂರಿಕ್ ಎಂಬುವೇ ಆ ಮೂರು ಉಪಭಾಷೆಗಳು. ಇವುಗಳಲ್ಲಿ ಮೊದಲನೆಯದಾದ ಥೆಬನ್ ಉತ್ತರ ಈಜಿಪ್ಟಿನಲ್ಲಿ ಬಳಕೆಯಲ್ಲಿತ್ತು, ಬಶ್ಮೂರಿಕ್ ಪ್ರಸ್ಥಭೂಮಿಯಲ್ಲಿ ಬಳಕೆಯಲ್ಲಿತ್ತು ಎಂದು ಒಬ್ಬರು ಅಭಿಪ್ರಾಯಪಟ್ಟರೆ ಮತ್ತೊಬ್ಬರು ಐದು ಉಪಭಾಷೆಗಳಿದ್ದುವೆಂದು-ಫಯ್ಯೂಮ್ ಪ್ರದೇಶದಲ್ಲಿ ಫಯ್ಯೂಮಿಕ್, ನೈಲ್ ಪ್ರಾಂತ್ಯದ ಅಖ್ಮಿಮ್ ಪ್ರದೇಶದಲ್ಲಿ ಅಖ್ಮಿಮಿಕ್, ಅಸ್ಯುಟ್ ಪ್ರದೇಶದಲ್ಲಿ ಉಪ ಅಖ್ಮಿಮಿಕ್, ಪ್ರಾಚೀನ ಥೆಬ್ಸ್ ಅಥವಾ ಇಂದಿನ ಲಕ್ಸರ್ ಪ್ರದೇಶದಲ್ಲಿ ಸಾಹಿದಿಕ್ (ಈ ವಿಚಾರದಲ್ಲಿ ಮಿಲಿಯಮ್ ಎಚ್. ವೋರಲ್ ಅವರ ಅಭಿಪ್ರಾಯ ಬೇರೆಯಾಗಿದೆ. ಅವರು ಕೈರೊ ಮತ್ತು ಫಯೂಮ್ ನದೀಮುಖಜಭೂಮಿಯ ಪ್ರದೇಶದಲ್ಲಿ ಬಳಕೆಯಲ್ಲಿದ್ದ ಉಪಭಾಷೆಯೇ ಸಾಹಿದಿಕ್ ಎನ್ನುತ್ತಾರೆ.) ಪಶ್ಚಿಮ ಪ್ರಸ್ಥಭೂಮಿಯಿಂದ ಮುಂದಕ್ಕೆ ಇರುವ ಪ್ರದೇಶದಲ್ಲಿ ಬೊಹೈರಿಕ್-ವಿಲಿಯಮ್ ಎಫ್. ಎಜರ್‍ಟನ್ ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಬ್ಬ ವಿದ್ವಾಂಸರು ಇವುಗಳ ಸಂಖ್ಯೆಯನ್ನು ನಾಲ್ಕಕ್ಕೆ ಸೀಮಿತಗೊಳಿಸಿದ್ದಾರೆ : ಸಾಹಿದಿಕ್ ಅಥವಾ ಥೆಬೈಕ್, ಅಖ್ಮಿಮಿಕ್, ಬೊಹೈರಿಕ್ (ಮೊದಲಿಗ ಇದನ್ನೇ ಮೆಂಫಿಕ್ ಎಂದು ಕರೆಯುತ್ತಿದ್ದರೆಂದು ಇವರು ಅಭಿಪ್ರಾಯಪಟ್ಟಿದ್ದಾರೆ) ಮತ್ತು ಫಯ್ಯೂಮಿಕ್. ಇನ್ನೊಬ್ಬ ವಿದ್ವಾಂಸರು ಇವುಗಳ ಸಂಖ್ಯೆಯನ್ನು ಆರಕ್ಕೆ ಏರಿಸಿದ್ದಾರೆ. ಅವರ ಅಭಿಪ್ರಾಯದ ಪ್ರಕಾರ ಅವುಗಳಲ್ಲಿ ಎರಡು ಕೆಳ ಅಥವಾ ದಕ್ಷಿಣ ಈಜಿಷ್ಟಿನಲ್ಲೂ ನಾಲ್ಕು ಮೇಲುಭಾಗದ ಅಥವಾ ಉತ್ತರ ಈಜಿಷ್ಟಿನಲ್ಲೂ ಬಳಕೆಯಲ್ಲಿದ್ದವು. ಇವು ಯಾವುವೆಂದರೆ, ಬಶ್ಮೂರಿಕ್, ಬೊಹೈರಿಕ್, ಫಯ್ಯೂಮಿಕ್ ಅಸ್ಯುಟಿಕ್, (ಉಪ-ಅಖ್ಮಿಮಿಕ್), ಅಖ್ಮಿಮಿಕ್ ಮತ್ತು ಸಾಹಿದಿಕ್. ಇವುಗಳಲ್ಲಿ ಬಶ್ಮೂರಿಕ್ ಇಂದು ಭಾಷ್ಯ ಅಥವಾ ವ್ಯಾಖ್ಯಾನ ಗ್ರಂಥಗಳಲ್ಲಿ ಮಾತ್ರ ಕಾಣಬರುತ್ತದೆ. ಕಾಪ್ಟಿಕ್ ಅಥವಾ ಈಜಿಪ್ಟಿಯನ್ ಮತ್ತು ಗ್ರೀಕ್ ಭಾಷಿಗಳ ವಿಕೃತ ಮಿಶ್ರ ಭಾಷೆಯಾದ ಈ ಉಪಭಾಷೆ ನೈಲ್ ಪ್ರಸ್ಥಭೂಮಿಯ ಪೂರ್ವವಲಯದಲ್ಲಿ ಪ್ರಚುರವಾಗಿತ್ತು. ಎರಡನೆಯದಾದ ಬೊಹೈರಿಕ್ ಅಲೆಕ್ಸಾಂಡ್ರಿಯ, ವಡಿ-ಎಲ್-ನ್ಯಾಟ್ರೊನ್ ಮತ್ತು ಮೆಂಫಿಸ್ ಪ್ರದೇಶಗಳೂ ಸೇರಿದಂತೆ ದಕ್ಷಿಣ ಈಜಿಪ್ಟಿನ ಉಪಭಾಷೆಗಳು. ಫೆಯ್ಯೂಮಿಕ್ ನೈಲ್ ಕಣಿವೆಯಲ್ಲಿ, ಅದರಲ್ಲೂ ವಿಶೇಷವಾಗಿ ನೈಲ್‍ನದಿಯ ಪಶ್ಚಿಮದಂಡೆಯಲ್ಲಿ ಬಳಕೆಯಲ್ಲಿತ್ತು. ಅಖ್ಮಿಮಿಕ್ ಉಪಭಾಷೆ ಅಖ್ಮಿಮ್ ನಗರ ಮತ್ತು ಅದರ ಸುತ್ತಮುತ್ತ ಬಳಕೆಯಲ್ಲಿತ್ತು. ಸಾಹಿದಿಕ್ ಉಪಭಾಷೆ ಉತ್ತರ ಈಜಿಪ್ಟಿನ ಆಂಟಿನೋ, ಹೆರ್ಮೊಪೊಲಿಸ್ ಮತ್ತು ಥೆಬಾಯ್ಡ್ ವಲಯದಲ್ಲಿ ಪ್ರಚುರವಾಗಿತ್ತು. ಈ ಮೂರು ಉತ್ತರ ಈಜಿಪ್ಟಿನಲ್ಲಿ ಬಳಕೆಯಲ್ಲಿದ್ದ ಉಪಭಾಷೆಗಳು. ಇವುಗಳಲ್ಲಿ ತುಂಬ ಪ್ರಾಚೀನವಾದ ಉಪಭಾಷೆಯೆಂದರೆ ಬಹುಶಃ ಸಾಹಿದಿಕ್. ಸಾಹಿದಿಕ್ ಉಳಿದ ಮೂರು ಉಪಭಾಷೆಗಳನ್ನು-ಫಯ್ಯೂಮಿಕ್, ಅಖ್ಮಿಮಿಕ್ ಮತ್ತು ಅಸ್ಯುಟಿಕದ ಉಪಭಾಷೆಗಳನ್ನು-ಸುಲಭವಾಗಿ ಹಿಂದೆ ಹಾಕಿತಾದರೂ ಮುಂದೆ ಬೊಹೈರಿಕ್ ಭಾಷೆಗೆ ತನ್ನ ಸ್ಥಾನವನ್ನು ತೆರವು ಮಾಡಿಕೊಡಬೇಕಾಯಿತು. ಬೊಹೈರಿಕ್ ಕೊನೆಯದಾಗಿ ರೂಪು ತಳೆದ ಉಪಭಾಷೆಯಾದರೂ ಮುಂದೆ ತುಂಬ ಪ್ರಮುಖವಾದ ಸ್ಥಾನವನ್ನು ಗಳಿಸಿ, ಇತರ ಉಪಭಾಷೆಗಳನ್ನು ಕ್ರಮೇಣ ಮೂಲೆಗುಂಪಾಗಿಸುತ್ತ ಬಂದು, ಕೊನೆಗೆ ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಅವುಗಳನ್ನು ಹೊಡೆದಟ್ಟಿತೆಂದೇ ಹೇಳಬೇಕು. ಕಾಪ್ಟಿಕ್-ಚರ್ಚಿನ ಪೂಜಾವಿಧಾನ ಮತ್ತಿತರ ಸಂಸ್ಕಾರಗಳ ಅಧಿಕೃತ ಭಾಷೆಯಾಗಿ, ಧಾರ್ಮಿಕ ಭಾಷೆಯಾಗಿ ಈಜಿಪ್ಟಿನಾದ್ಯಂತ ಅದಕ್ಕೆ ಮಾನ್ಯತೆ ದೊರಕಿದ್ದೇ ಇದಕ್ಕೆ ಕಾರಣ.

ಧ್ವನಿಶಾಸ್ತ್ರ ಮತ್ತು ಶಬ್ಧಕೋಶ

[ಬದಲಾಯಿಸಿ]

ಕಾಪ್ಟಿಕ್‍ನ ಉಪಭಾಷೆಗಳಲ್ಲಿ ಭೇಧ ಕಂಡುಬರುವುದು ಪ್ರಮುಖವಾಗಿ ಧ್ವನಿಶಾಸ್ತ್ರ ಮತ್ತು ಶಬ್ಧಕೋಶಗಳ ದೃಷ್ಟಿಯಿಂದ. ರೂಪಿಮ ಶಾಸ್ತ್ರದ ದೃಷ್ಟಿಯಿಂದ ಪರಿಶೀಲಿಸಿದಾಗ ಈ ಭೇದ ಇಷ್ಟು ಪ್ರಮುಖವಾಗಿ ಎದ್ದುಕಾಣುವುದಿಲ್ಲ. ವಾಕ್ಯರಚನೆಯ ದೃಷ್ಟಿಯಿಂದ ನೋಡಿದಾಗಲಂತೂ ಈ ಭೇದ ಅಷ್ಟಾಗಿ ಗೂೀಚರಿಸುವುದೇ ಇಲ್ಲ. ಅತ್ಯಂತ ಪ್ರಬಲ ಘಾತಲಕ್ಷಣವನ್ನುಳ್ಳ ಭಾಷೆ ಇದಾಗಿದ್ದುದರಿಂದ ಘಾತ ರಹಿತ ಸ್ವರಗಳು ಮತ್ತು ಶಬ್ದಗಳು ದುರ್ಬಲಗೊಳ್ಳಲು ಮತ್ತು ಬಹುಮಟ್ಟಿಗೆ ಕಾಣೆಯಾಗಲು ದಾರಿಯಾಯಿತು. ಇದರಲ್ಲಿ ವಚನಗಳು ಎರಡು, ಲಿಂಗಗಳು ಎರಡು. ಬಹುಮಟ್ಟಿಗೆ ನಾಮಪದಗಳಿಗೆ ವಿಶಿಷ್ಟ ಬಹುವಚನ ರೂಪಗಳು ಇವೆಯಾದರೂ ಅವುಗಳಲ್ಲಿ ಅನೇಕ ಶಬ್ದಗಳನ್ನು ಏಕವಚನ ಮತ್ತು ಬಹುವಚನಗಳಲ್ಲಿ ಸಮಾನರೂಪದಲ್ಲಿ ಬಳಸಬಹುದು. ಅರಬ್ಬೀ ಭಾಷೆಯಲ್ಲಿ ಕಾಣುವಂತೆ, ಇಲ್ಲಿಯೂ ವಿಶಿಷ್ಟ ಬಹುವಚನರೂಪಗಳನ್ನು ರೂಪಿಸುವ ವಿಧಾನ ಅಶ್ಚರ್ಯವನ್ನುಂಟುಮಾಡುವಷ್ಟರ ಮಟ್ಟಿನ ವೈವಿಧ್ಯವನ್ನು ಹೊಂದಿದೆ. ಹೀಗೆ ಸೇರುವ ಇತರ ಏಕಾಕ್ಷರ ಶಬ್ದಗಳು ಲಿಂಗ, ವಚನ, ಪುರುಷ ಮತ್ತು ಕಾಲಸೂಚಕವಾಗಿರುತ್ತವೆ. ಪುಲ್ಲಿಂಗಶಬ್ದದ ಸ್ವರವನ್ನು ಮಾರ್ಪಡಿಸುವುದರ ಮೂಲಕ ಕೆಲಮೊಮ್ಮೆ ಸ್ತ್ರೀಲಿಂಗ ಶಬ್ದಗಳು ರೂಪುಗೊಳ್ಳತ್ತವೆ. ನಿರ್ದೇಶಕ ಮತ್ತು ಅನಿರ್ದೇಶಕ ಸರ್ವನಾಮಗಳು ಪ್ರತ್ಯೇಕ ಅಥವಾ ಭಿನ್ನ ಏಕವಚನ ಮತ್ತು ಬಹುವಚನ ರೂಪಗಳನ್ನು ಹೊಂದಿವೆ. ನಿರ್ದೇಶಕ ಸರ್ವನಾಮ ಏಕವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗಗಳ ಭೇದವನ್ನೂ ತೋರುತ್ತದೆ. ಗುಣವಾಚಕಗಳು ಅಷ್ಟಾಗಿ ಇಲ್ಲ. ನ್ ಪ್ರತ್ಯಯವನ್ನು ಸೇರಿಸುವುದರ ಮೂಲಕ ನಾಮಪದಗಳನ್ನೇ ಈ ಭಾಷೆ ಗುಣವಾಚಕವನ್ನಾಗಿ ಪರಿವರ್ತಿಸಿಕೊಳ್ಳುತ್ತದೆ. ಪೂರ್ವ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಕ್ರಿಯಾಪದಗಳನ್ನು ನಡೆಸಲಾಗುತ್ತದೆ. ಈ ಪೂರ್ವಪ್ರತ್ಯಯಗಳು ಪುರುಷ, ವಚನ, ಕಾಲ ಮುಂತಾದ ವಿವರಗಳನ್ನೂ ಸೂಚಿಸುತ್ತವೆ. ಕ್ರಿಯಾ ವಿಶೇಷಣ, ಸಂಬಂಧ ಸೂಚಕ ಮತ್ತು ಸಮುಚ್ಚಯಗಳನ್ನು ಬಹಳವಾಗಿ ಬಳಸಲಾಗುತ್ತದೆ. ಗ್ರೀಕ್‍ನಿಂದ ಅನೇಕ ಶಬ್ದಗಳನ್ನು ಎರವಲು ಪಡೆಯಲಾಗಿದೆ. ಈ ಭಾಷೆಯ ಶಬ್ದಗಳ ಮೂಲರೂಪ ಬಹುಮಟ್ಟಿಗೆ ಏಕಾಕ್ಷರ, ಬಹು ಅಕ್ಷರಗಳಿಂದ ಕೂಡಿದ ಶಬ್ದಗಳು ಎದುರಾದಲ್ಲಿ ಅವು ನಿಷ್ಪನ್ನ ಶಬ್ದಗಳು, ಇಲ್ಲವೆ ಸಮಾಸಶಬ್ದಗಳು ಎಂದು ಧೈರ್ಯವಾಗಿ ಹೇಳಬಹುದು. ಶಬ್ದ ರೂಪದಲ್ಲಿ ಪರಿವರ್ತನೆ ಅದಾಗ ಅರ್ಥದಲ್ಲಿಯೂ ಪರಿವರ್ತನೆಯಾಗುತ್ತದೆ. ಕಾಪ್ಟಿಕ್ ಭಾಷೆಯ ಧಾತುಗಳ ಅಂತ್ಯದಲ್ಲಿರುವ ವ್ಯಂಜನಗಳು ವಾಸ್ತವವಾಗಿ ಧಾತುವಿನ ಅಂಶವಾಗಿರುವುದಿಲ್ಲ. ಇವನ್ನು ಪದಾಂತ್ಯ ಅಧಿಕ ವ್ಯಂಜನ ಎನ್ನುತ್ತಾರೆ. ಇವನ್ನು ಉಚ್ಚಾರಣೆಯಲ್ಲಿನ ದೃಷ್ಟಿಯಿಂದ ಶಬ್ದದ ಭಾಗವಾಗಿದ್ದು ಮುಂದೆ ಉಚ್ಚಾರಣೆಯಲ್ಲಿ ಬಿದ್ದುಹೋಗಿ ಬರೆವಣಿಗೆಯಲ್ಲಿ ಮಾತ್ರ ಆ ಅಂಶ ಉಳಿದುಕೊಂಡಿದೆ ಎಂದು ವಿವರಿಸಬೇಕಾಗುತ್ತದೆ. ಈ ಕಾರಣಗಳಿಂದಾಗಿ ಶ್ವಾಟ್ರ್ಜ್ ಎಂಬ ಜರ್ಮನ್ ಭಾಷಾ ವಿಜ್ಞಾನಿ ಕಾಪ್ಟಿಕ್ ಭಾಷೆ ವ್ಯಾಕರಣದ ದೃಷ್ಟಿಯಿಂದ ಸಮಿಟಿಕ್ ಭಾಷಾವರ್ಗಕ್ಕೂ ಶಬ್ದಗಳ ಮೂಲರೂಪಗಳ ದೃಷ್ಟಿಯಿಂದ ಭಾರೋಪೀಯ ಭಾಷಾವರ್ಗಕ್ಕೂ ಸಂವಾದಿಯಾಗಿದೆ ಎಂದು ಹೇಳುವ. ಬುನ್‍ಸೆನ್, ಮೆಯರ್, ಬೊಟ್ಟಿಶರ್ ಮೊದಲಾದವರು ಈ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ಆದರೆ, ಪಾಟ್, ಎವಾಲ್ಡ್, ವೆನರಿಚ್ ಮತ್ತು ರೆನನ್ ಈ ಅಭಿಪ್ರಾಯವನ್ನು ಒಪ್ಪಿಲ್ಲ.

ಮೌಲಿಕ ಸಾಹಿತ್ಯ ಸೃಷ್ಟಿ

[ಬದಲಾಯಿಸಿ]

ಇಷ್ಟೊಂದು ಪ್ರಾಚೀನ ಭಾಷೆಯಾಗಿದ್ದರೂ ಕಾಪ್ಟಿಕ್ ಸಾಹಿತ್ಯದಲ್ಲಿ ಮೌಲಿಕ ಸಾಹಿತ್ಯ ಸೃಷ್ಟಿಯಾಗಿರುವುದು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಧಾರ್ಮಿಕೇತರ ಸಾಹಿತ್ಯ ಅಷ್ಟಾಗಿ ಉಳಿದುಬಂದಿಲ್ಲ. ತಂತ್ರಮಂತ್ರಗಳಿಗೆ ಸಂಬಂಧಿಸಿದ ಕೆಲವು ಗ್ರಂಥಭಾಗಗಳು, ವೈದ್ಯಕೀಯ ಗ್ರಂಥವೊಂದರ ಕೆಲವು ಭಾಗಗಳು ಮಾತ್ರ ದೊರೆತಿವೆ. ಧಾರ್ಮಿಕ ಕ್ಷೇತ್ರದಲ್ಲಿನ ಮೌಲಿಕ ಸಾಹಿತ್ಯವನ್ನು ಪರಿಶೀಲಿಸ ಹೊರಟರೆ, ಈ ದಿಕ್ಕಿನಲ್ಲಿ ನಮ್ಮ ಗಮನ ಸೆಳೆಯುವುದು ಶೆನುತೆ ಅಥವಾ ಸಂತ ಸಿನೂಥಿಯಸ್ ಎಂಬ ಏಕೈಕ ಲೇಖಕ. ಈತ ಅರುವತ್ತು ವರ್ಷಗಳಿಗೂ ಹೆಚ್ಚು ಕಾಲ ಕ್ರೈಸ್ತ ಧರ್ಮಾಧಿಕಾರಿಯಾಗಿದ್ದ. ಅಖ್ಮಿಮ್‍ನ ಪಶ್ಚಿಮಕ್ಕಿರುವ ಮರಳುಗಾಡಿನ ಅಂಚಿನಲ್ಲಿರುವ ಬಿಳಿಯರ ಮಹಾ ಮಠದ (ಮೊನಾಸ್ಟರಿ) ಧರ್ಮಾಧಿಕಾರಿಯಾಗಿ ತುಂಬ ಚಟುವಟಿಕೆಯ ಜೀವನವನ್ನು ನಡೆಸಿ ತನ್ನ ಇಳಿವಯಸ್ಸಿನಲ್ಲಿ ಕ್ರಿ.ಶ. ಸುಮಾರು 452ರ ಹೊತ್ತಿಗೆ ಈತ ಮೃತನಾದಂತೆ ತಿಳಿದುಬರುತ್ತದೆ. ಸಾಹಿದಿಕ್, ಉಪಭಾಷೆಯಲ್ಲಿರುವ ಈತನ ಪತ್ರಗಳು, ಉಪದೇಶಗಳು ಮತ್ತಿತರ ಬರೆವಣಿಗೆಗಳೇ ಬಹುಶಃ ಮೌಲಿಕವೆಂದು ಹೇಳಬಹುದಾಗಿರುವ ಈ ಭಾಷೆಯಲ್ಲಿನ ಸಾಹಿತ್ಯ. ತನ್ನ ಕಾಲದ ಧಾರ್ಮಿಕ ಹಾಗೂ ಸಮಾಜಿಕ ಜೀವನದಲ್ಲಿ ಈತ ವಹಿಸಿದ ಪ್ರಭಾವ ಪೂರ್ಣ ಪಾತ್ರಕ್ಕೆ ಸಂವಾದಿಯಾಗಿದೆಯೋ ಎಂಬಂತೆ ಈತನ ಸಾಹಿತ್ಯ ಶಕ್ತಿಪೂರ್ಣವಾಗಿದೆ. ಅತ್ಯಂತ ವೈಯಕ್ತಿಕವೆನ್ನಬಹುದಾದ, ಈತನಿಗೇ ವಿಶಿಷ್ಟವಾದ ಸಾಹಿತ್ಯಿಕ ಶೈಲಿಯಲ್ಲಿ ರಚಿತವಾಗಿದೆ. ಕ್ರಿ.ಶ. 10ನೆಯ ಶತಮಾನದಲ್ಲಿ ಜನಪ್ರಿಯ ಧಾರ್ಮಿಕ ಕಾವ್ಯದ ಹೊಸ ಅಲೆಯೊಂದು ಎದ್ದಂತೆ ಕಾಣುತ್ತದೆ. ಈ ರಚನೆಗಳೂ ಸಾಹಿದಿಕ್ ಉಪಭಾಷೆಯಲ್ಲಿಯೇ ಇವೆ. ಇವೆಲ್ಲ ಅನಾಮಿಕ ಕವಿಗಳ ಜಾನಪದ ರಚನೆಗಳು. ಇದು ಬಹುಶಃ ಅರಬ್ಬೀ ಭಾಷೆ ಮತ್ತು ಇಸ್ಲಾಮ್ ಧರ್ಮದ ಹೇಳಿಕೆಯನ್ನು ವಿರೋಧಿಸಿ ಕ್ರೈಸ್ತರೂ ಈಜಿಪ್ಷಿಯನ್ನರೂ ರಚಿಸಿದ ಸಾಹಿತ್ಯವೆಂಬಂತೆ ತೋರುತ್ತದೆ. ಕಾರಣ: ಈ ಬಗೆಯ ಸಾಹಿತ್ಯದ ವಸ್ತು ಬೈಬಲ್ಲಿನಲ್ಲಿ ಉಕ್ತವಾಗಿರುವ ಸಂಗತಿಗಳು. ಬಹು ಮಟ್ಟಿಗೆ ಬಿಜಾóಂಟಿನ್ ಧಾರ್ಮಿಕ ಕಾವ್ಯದ ಮಾದರಿಯನ್ನು ಅನುಸರಿಸಿ ಈ ಕಾವ್ಯ ರೂಪಗಳೆಲ್ಲ ಮೈದಳೆದಿವೆ. ಈ ಅನಾಮಿಕ ಕವಿಗಳ ಸಾಹಿತ್ಯದಲ್ಲಿ ಕಾಣಬರುವ ಹೊಸತನ ಮತ್ತು ಜೀವಂತಿಕೆ ಕಾಪ್ಟಿಕ್ ಸಾಹಿತ್ಯದ ಇತಿಹಾಸದಲ್ಲಿಯೇ ಅಪೂರ್ವವಾಗಿರುವಂಥದು. ಅಂತ್ಯಪ್ರಾಸದ ಬಂಧನ ಇಲ್ಲಿಲ್ಲ. ಸ್ವರಾಘಾತ ಕ್ರಮವನ್ನು ಅನುಸರಿಸಿರುವ ಛಂದೋ ವಿಧಾನದಲ್ಲಿ ಕವಿಗಳು ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯ ವಹಿಸಿರುವುದೂ ಕಂಡುಬರುತ್ತದೆ.

ಶುದ್ದ ಧಾರ್ಮಿಕ ಸ್ವರೂಪ

[ಬದಲಾಯಿಸಿ]

ಇವನ್ನು ಬಿಟ್ಟರೆ ಕಾಪ್ಟಿಕ್ ಸಾಹಿತ್ಯ ಬಹುಮಟ್ಟಿಗೆ ಶುದ್ದ ಧಾರ್ಮಿಕ ಸ್ವರೂಪದ್ದಾಗಿದೆ. ಹಳೆಯ ಮತ್ತು ಹೊಸ ಒಡಂಬಡಿಕೆಯ ಕೆಲವು ಭಾಗಗಳು, ನೀತಿಬೋಧೆ, ಸುವಾರ್ತೆಗಳು, ಧರ್ಮೋಪದೇಶ ಭಾಷಣಗಳು, ಧರ್ಮಕ್ಕಾಗಿ ಬಲಿದಾನಮಾಡಿದ ಧರ್ಮವೀರರ ಚರಿತ್ರೆಗಳು-ಇವೆಲ್ಲ ಇಲ್ಲಿ ಕಾಣದೊರೆಯುತ್ತವೆ. ಬಹುಮಟ್ಟಿನ ಭಾಷಾಂತರವೆಲ್ಲ ಗ್ರೀಕ್ ಭಾಷೆಯಿಂದಲೇ ಆಗಿದೆ. ಹೀಗೆಂದ ಮಾತ್ರಕ್ಕೆ ಧಾರ್ಮಿಕ ಸಾಹಿತ್ಯವೆಲ್ಲ ಕ್ರೈಸ್ತಧರ್ಮಕ್ಕೆ ಸಂಬಂಧಪಟ್ಟಿದೆ ಎಂದಲ್ಲ. ಮೊದಲ ಹಂತದಲ್ಲಿ ಕ್ರೈಸ್ತಧರ್ಮವಿರೋಧವನ್ನು ಎದುರಿಸಬೇಕಾಗಿ ಬಂದುದು ಆಧ್ಯಾತ್ಮರಹಸ್ಯಜ್ಞಾನವಾದಿಗಳೆಂದು ಹೇಳಿಕೊಳ್ಳುತ್ತಿದ್ದ ಆದಿಕ್ರೈಸ್ತಪಾಷಂಡಿಗಳ ಪಂಥ (ಗ್ನಾಸ್ಟಿಸಿಮ್) ಮತ್ತು ದೇವರೊಡನೆ ಸೈತಾನನ ಶಾಶ್ವತ ಸಹ-ಅಸ್ತಿತ್ವವನ್ನು ಮಾನ್ಯಮಾಡುವ ದ್ವಿತತ್ತ್ವವಾದಿಗಳ (ಮೆನಿಕಿಯಾನಿಸಮ್) ಪಂಥಗಳಿಂದ. ಈ ಪಂಥಗಳಿಗೆ ಸೇರಿದ ಪಿಸ್ಟಿಸ್ ಸೊಫಿಯಾ ಮತ್ತು ಬ್ರೂಸ್ ಕೋಡೆಕ್ಸ್ ಕ್ರಮಶಃ ಬ್ರಿಟಿಷ್ ಮ್ಯೂಸಿಯಮ್ ಮತ್ತು ಬೋಡ್ಲಿಯನ್ ಗ್ರಂಥಾಗಾರದಲ್ಲಿ ಕಾಣದೊರೆಯುತ್ತವೆ. ಇವು ಕ್ರಿ.ಶ. 3ನೆಯ ಶತಮಾನದ ರಚನೆಗಳಾಗಿದ್ದಿರಬೇಕೆಂದು ನಂಬಲಾಗಿದೆ. ಕಾಪ್ಟಿಕ್ ಭಾಷೆಯಲ್ಲಿರುವ ಹಳೆಯ ಒಡಂಬಡಿಕೆಯ ಕೆಲವು ಭಾಗಗಳ ಮತ್ತು ಸುವಾರ್ತೆಗಳ ಭಾಷಾಂತರ ರೋಮಿನಲ್ಲಿ ಪ್ರಕಟವಾಗಿದೆ. ಶ್ವಾಟ್ರ್ಜ್ ಮತ್ತು ಸ್ಟರ್ನ್ ಅವರ ಕಾಪ್ಟಿಕ್ ವ್ಯಾಕರಣಗಳಲ್ಲಿಯು ಪೇರೋನ್ ಮತ್ತು ಪಾರ್ತೆಯವರ ಕಾಪ್ಟಿಕ್ ಕೋಶಗಳಲ್ಲಿಯೂ ಕಾಪ್ಟಿಕ್ ಭಾಷೆಯ ಅಧ್ಯಯನಕ್ಕೆ ಸಂಬಂಧ ಪಟ್ಟ ಸಾಮಾಗ್ರಿ ದೊರೆಯುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2017-07-09. Retrieved 2016-10-31.
  2. http://bayalu.weebly.com/32563272320232393253-3245326232553270-32463236327732363265-3250326332423263.html