ಕಾಪ್ಟಿಕ್ ಕಲೆ
ಈಜಿಪ್ಟ್‍ನಲ್ಲಿ ಕ್ರೈಸ್ತಮತ ಹರಡಿದ ಮೇಲೆ ಬಳಕೆಗೆ ಬಂದ ಕ್ರೈಸ್ತಪಂಥೀಯರ ಕಲೆ. ಆರನೆಯ ಶತಮಾನದಲ್ಲಿ ಅರಬರು. ಈಜಿಪ್ಟನ್ನು ಗೆದ್ದಾಗ ಅಲ್ಲಿನ ಕ್ರೈಸ್ತ ಪಂಗಡವದವರನ್ನು ಕಾಪ್ಟರೆಂದು ಕರೆದಿದ್ದುರಿಂದ ಇವರ ಕಲೆ ಕಾಪ್ಟಿಕ್ ಕಲೆ ಎನ್ನಿಸಿದೆ. ಇಲ್ಲಿನ ಕ್ರೈಸ್ತರ ಚರ್ಚು, ಮಠಗಳಲ್ಲಿ ಬೆಳೆದು ಬಂದ ವಾಸ್ತುಶೈಲಿಯಾಗಲಿ, ಶಿಲ್ಪಶೈಲಿಯಾಗಲಿ, ಚಿತ್ರಕಲೆಯಾಗಲಿ, ದಂತದ ಕಲೆ, ನೆಯ್ಗೆಯ ಕಲೆ ಅಥವಾ ಇತರ ಕಲೆಗಳೇ ಆಗಲಿ ವಿಭಿನ್ನ ಪರಂಪರೆಗಳಿಂದ ಪ್ರಭಾವಿತಗೊಂಡವು ರೋಮನ್ನರ ಆಳ್ವಿಕೆಯಲ್ಲಿ ಮೆಡಿಟರೇನಿಯನ್ ತೀರದ ಹೆಲೆನಿಸ್ಟಿಕ್ ಕಲೆಯನ್ನು ಅವರು ಪ್ರಚಾರಕ್ಕೆ ತಂದಿದ್ದರೂ ಅದು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮೇಲ್ಮಟ್ಟದ ಜನಗಳ ಅಭಿರುಚಿಗನುಗುಣವಾಗಿ ಬೆಳೆದಿತ್ತು. ಇದೇ ಕಾಲದಲ್ಲಿ ಈಜಿಪ್ಟಿನಲ್ಲಿ ನೆಲೆಸಿದ್ದ ಮೂಲ ಮತದ ಅನೇಕ ಆಚರಣೆಗಳು ಅರ್ಥವಿಹೀನವಾಗಿ ಪರಿಣಮಿಸಿದ್ದು ಅದರ ಅವನತಿ ಆರಂಭವಾಗಿತ್ತು. ಆಗ ಕ್ರೈಸ್ತಮತ ಇಲ್ಲಿ ಪ್ರಚಾರಗೊಂಡು ಸಾಮಾನ್ಯ ಜನತೆಯನ್ನು ಆಕರ್ಷಿಸಿತು. ಮೇಲ್ಮಟ್ಟದ ಜನತೆಯಂತಲ್ಲದೆ ಇವರು ರೂಢಮೂಲವಾದ ತಮ್ಮ ಹಳೆಯ ಸಂಪ್ರದಾಯ, ಸಂಸ್ಕøತಿ, ಕಲೆಗಳನ್ನು ಹೊಸ ಪಂಥಕ್ಕೆ ಸೇರಿದ ಮೇಲೂ ಉಳಿಸಿಕೊಂಡು ಬಂದರು. ಹೀಗೆ ಹೊಸ ಪಂಥದ ಹೆಲೆನಿಸ್ಟಿಕ್ ಕಲೆ ಮತ್ತು ಪ್ರಾಚೀನ ಈಜಿಪ್ಟ್ ಕಲೆಗಳ ಸಮ್ಮಿಲನದಿಂದ ನೂತನ ಕಾಪ್ಟಿಕ್ ಕಲೆ ಆವಿರ್ಭವಿಸಿತು. ಈ ಕಲೆಯ ಆರಂಭವನ್ನು ರೋಮನ್ ಆಳ್ವಿಕೆಯಲ್ಲಿಯೇ ಗುರುತಿಸಿಬಹುದಾದರೂ ಅದು ಪೂರ್ಣ ವಿಕಾಸಗೊಂಡುದು. 5-6ನೆಯ ಶತಮಾನದಲ್ಲಿಯೇ, ಇವುಗಳೊಂದಿಗೆ ಬಿಜಾóಂಟಿನ್, ಸಿರಿಯಾ ಮುಂತಾದ ಕಲೆಗಳ ಪ್ರಭಾವವನ್ನೂ ಕಾಣಬಹುದು.[೧]
ಇತಿಹಾಸ
[ಬದಲಾಯಿಸಿ]ಆರನೆಯ ಶತಮಾನದಿಂದಾಚೆಗೆ ಅರಬರ ದಾಳಿಯಿಂದಾಗಿ ಕಾಪ್ಟಿಕ್ ಕಲೆಯ ಬಹು ಭಾಗ ನಾಶ ಹೊಂದಿದರೂ ಅಲ್ಲಲ್ಲೇ ಉಳಿದ ಕಾಪ್ಟರು ಅದನ್ನು ಖಿಲವಾದ ರೂಪದಲ್ಲಿಯಾದರೂ ಉಳಿಸಿಕೊಂಡು ಬಂದರು. ಮುಸ್ಲಿಂ ಶೈಲಿಯ ಪ್ರಭಾವ ಈ ಕಾಲದ ಕಲೆಯ ಮೇಲೆ ಸಾಕಷ್ಟಾಗಿದೆ.ಕ್ರೈಸ್ತಮತ ಹರಡುತ್ತಿದ್ದಂತೆ ಹೆಲೆನಿಸ್ಟಿಕ್ ಕಲೆ ಅಲೆಕ್ಸಾಂಡ್ರಿಯದಲ್ಲಿ ಮಾತ್ರ ಉಳಿದು ಅಲ್ಲಿಂದ ಒಳನಾಡಿಗೆ ಹೋದಂತೆ ಅದರ ಪ್ರಭಾವ ಕಡಿಮೆಯಾಗಿ ದೇಶೀಯ ಪರಂಪರಾಗತ ಕಲೆಯನ್ನೇ ಹೆಚ್ಚು ಉಳಿಸಿಕೊಂಡಿರುವುದು ವೇದ್ಯವಾಗುತ್ತದೆ. ಅಲೆಕ್ಸಾಂಡ್ರಿಯದಂಥ ಕೆಲವು ಮುಖ್ಯ ಕೇಂದ್ರಗಳಲ್ಲಿ ಇಂಥ ದೇಶೀಯ ಪದ್ಧತಿಯನ್ನು ತಡೆಯಲು ಪ್ರಯತ್ನ ನಡೆದರೂ ಕಾಪ್ಟಿಕ್ ಶೈಲಿ ತನ್ನತನವನ್ನು ಬೆಳೆಸಿಕೊಳ್ಳುತ್ತಲೇ ಹೋಯಿತು. ಇದಕ್ಕೆ ಮುಖ್ಯ ಕಾರಣರಾದವರೂ ಈಜಿಪ್ಟಿನ ಮಠಗಳಲ್ಲಿ ನೆಲೆಸಿದ ಕ್ರೈಸ್ತ ಸನ್ಯಾಸಿಗಳು. ಇವರು ಸಾಮಾನ್ಯ ಜನತೆಯಿಂದ ಬಂದವರಾಗಿದ್ದು ಹೆಲೆನಿಸ್ಟಿಕ್ ಕಲೆ ಮತ್ತು ಶ್ರೀಮಂತಿಕೆಯ ವಿರೋಧಿಗಳಾಗಿದ್ದರು. ಕಾಪ್ಟರು ಏಕ ಪ್ರಕೃತಿವಾದಿ (ಮಾನೋ ಫಿಸೈಟಿಸಂ) ಪಂಥವನ್ನಳವಡಿಸಿಕೊಂಡು ತಮ್ಮದೇ ಸ್ವತಂತ್ರವಾದ ಚರ್ಚುಗಳನ್ನು ಸ್ಥಾಪಿಸಿಕೊಂಡರು; ಮತ, ಭಾಷೆ, ಕಲೆಗಳನ್ನು ಬೆಳೆಸಿದರು. ಕಾಪ್ಟಿಕ್ ಕಲೆ ಹೀಗೆ 500ರ ಹೊತ್ತಿಗೆ ಪೂರ್ಣವಾಗಿ ಬೆಳೆದು ಆ ಮತಕ್ಕೆ ಸಂಬಂಧಿಸಿದ ಶಿಲ್ಪ, ವಾಸ್ತು, ಚಿತ್ರ ಮುಂತಾದವುಗಳಿಂದ ತುಂಬಿದ ಅನೇಕ ಮಠ,-ಚರ್ಚುಗಳನ್ನು ನಿರ್ಮಿಸಿದರು. ಅರಬರ ದಾಳಿಯ ಹೊತ್ತಿಗೆ ಈ ಸಂಸೃತಿ ವಿಕಾಸಹೊಂದಿ ತನ್ನ ಪ್ರೌಢಾವಸ್ಥೆಯಲ್ಲಿತ್ತು; ಆದರೆ ದಾಳಿಯಲ್ಲಿ ಹೆಚ್ಚು ಭಾಗ ನಾಶವಾಗಿ ಮತ್ತೆ ಚೇತನ ಪಡೆಯದಾಯಿತು.[೨]
ಹೆಲೆನಿಸ್ಟಿಕ್ ಕಲೆ
[ಬದಲಾಯಿಸಿ]ಹೆಲೆನಿಸ್ಟಿಕ್ ಕಲೆಯ ಪ್ರಜ್ಞೆ ಪ್ರಾಚೀನ ಕಲೆಯ ಮೇಲೆ ತನ್ನ ಪ್ರಭಾವವನ್ನು ಬೀರಿದ್ದರೂ ಮೂಲಕಲೆಯ ಬಹು ಅಂಶ ಕಾಪ್ಟಿಕ್ ಕಲೆಯಲ್ಲಿ ಉಳಿದು ಬಂದು ರೋಮನ್ ಆಳ್ವಿಕೆಯಲ್ಲಿ ನಿಲುಗಡೆ ಒಂದಿದ್ದ ಈಜಿಪ್ಟಿನ ಪ್ರಾಚೀನ ಕಲೆ ಪುನರುಜ್ಜೀವನಗೊಂಡಂತೆ ತೋರುತ್ತದೆ.ಕಾಪ್ಟಿಕ್ ಕಲೆ ತನ್ನ ಕೆಲವು ವಿಶಿಷ್ಟ ಗುಣಗಳನ್ನು ಮೊದಲಿನಿಂದಲೂ ಉಳಿಸಿಕೊಂಡು ಬಂದಿತ್ತು. ಹೆಲೆನಿಸ್ಟಿಕ್ ಶೈಲಿಯ ನವಿರು ಇದರಲ್ಲಿಲ್ಲ. ಅದಕ್ಕೆ ಬದಲು ಎದ್ದು ಕಾಣುವ ಭಾವನಾತ್ಮಕ ರಚನೆಯ ರೂಪರೇಖೆಗಳಿರುವುದು ಇದರ ವೈಶಿಷ್ಟ್ಯ. ಜೊತೆಗೆ ಸಾಂಪ್ರದಾಯಿಕ ಆಕೃತಿಗಳು ಉದ್ದೇಶಪೂರ್ವವಾಗಿ ಇಲ್ಲಿ ಅಳವಟ್ಟಿವೆ. ಕಾಪ್ಟಿಕ್ ಕಲೆ ವಾಸ್ತುವಾಗಲೀ ಶಿಲ್ಪವಾಗಲೀ ಚಿತ್ರವಾಗಲೀ ಹೆಲೆನಿಸ್ಟಿಕ್ ಕಲೆಯನ್ನು ಸಾಧ್ಯವಾದಷ್ಟು ತಡೆಗಟ್ಟಿ ಪರಂಪರೆಯ ಪ್ರಾಚೀನ ಕಲೆಯ ಸತ್ತ್ವಕ್ಕೆ ಹೆಚ್ಚು ಅಂಟಿಕೊಂಡಿದೆ. ಕಾಪ್ಟಿಕ್ ಕಟ್ಟಡಗಳ ರಚನೆ ತುಂಬ ಸರಳ ಮತ್ತು ಸ್ಥೂಲ; ಹೊರಗೋಡೆಗಳು ನಿರಾಡಂಬರ; ಒಳಗೋಡೆಗಳು ಸಂತರ, ಸೆಡೆತು ಎದುರು ಮುಖವಾಗಿ ನಿಂತಿರುವ ಪೆಡಸು ಮೂರ್ತಿಗಳ ಚಿತ್ರಗಳಿಂದ ತುಂಬಿವೆ. ಈಜಿಪ್ಟಿನ ಮಧ್ಯ ಮತ್ತು ಉತ್ತರ ಭಾಗಗಳಲ್ಲಿರುವ ಅನೇಕ ಕ್ರೈಸ್ತಮಠಗಳು ಹೆಲೆನಿಸ್ಟಿಕ್ ಶೈಲಿಯಿಂದ ಭಿನ್ನವಾಗಿವೆ. ಸೊಹಾಗ್ ಬಳಿ ಇರುವ ಇಂಥ ಕಟ್ಟಡಗಳಲ್ಲಿ ಉದ್ದೇಶಪೂರ್ವಕವಾಗಿ ದೇಶಿಯ ವಾಸ್ತುರೀತಿಯನ್ನು ಬಳಸಿರುತ್ತಾರೆ. ದೇರ್-ಎಲ್-ಅಹಮರ್ ನ ಆರಾಧನಾ ಮಂದಿರ ಮತ್ತು ಸೊಹಾಗ್ ಸುತ್ತಮುತ್ತಲಿನ ಕಟ್ಟಡಗಳು ಪ್ರಾಚೀನ ಈಜಿಪ್ಟ್‍ನ ದೇವಾಲಯಗಳ ಅನೇಕ ಮೂಲಾಂಶಗಳನ್ನನುಕರಿಸಿವೆ. ಸಕ್ಕರದ ಮಂದಿರದಲ್ಲಿ ಗಜಪೃಷ್ಠಾಕಾರದ ಪೂಜಾ ಗೃಹವಿದ್ದು ಅದಕ್ಕೆ ಹೊಂದಿಕೊಂಡಂತೆ ಅಕ್ಕಪಕ್ಕಗಳಲ್ಲಿ ಗೂಡುಗಳಿವೆ. ಕಾಪ್ಟಿಕ್ ರೀತಿಯ ಶಿಲ್ಪಗಳ ಅಲಂಕರಣಗಳಿಂದವು ತುಂಬಿಹೋಗಿವೆ. ಇಲ್ಲಿಯೂ ಇತರ ಕಡೆಗಳಲ್ಲಿಯೂ ಅನೇಕ ಸಂತರ ಮೂರ್ತಿಗಳು ಇವೆ. ಕೆಂಪು ಸಮುದ್ರದ ಸುತ್ತಮುತ್ತಲಿರುವ ಕೆಲವು ಮಂದಿರಗಳು ತಮ್ಮದೇ ಆದ ಮೂರ್ತಿಗಳು, ಶಿಲ್ಪಶೈಲಿಗಳನ್ನು ಅಳವಡಿಸಿಕೊಂಡಿದ್ದವು.ಈಗ ಉಳಿದು ಬಂದಿರುವ ಚರ್ಚುಗಳಲ್ಲಿ ಅನೇಕವು ಆರನೆಯ ಶತಮಾನಕ್ಕಿಂತ ಈಚಿನವು. ಇಂಥ ಈಚಿನ ಕಾಪ್ಟಿಕ್ ಚರ್ಚುಗಳಿಗೆ ಕೈರೋದಲ್ಲಿರುವ ಮು ಅಲ್ಲಾಕ ಚರ್ಚು ಮಾದರಿಯಾಗಿದೆ. ನಿಟ್ರಿಯಾ ಮರಳುಗಾಡಿನ ಚರ್ಚುಗಳಲ್ಲಿ ಮುಸ್ಲಿಂ ಶೈಲಿಯನ್ನು ಗುರುತಿಸಬಹುದು.
ಶಿಲ್ಪಾಲಂಕಾರ
[ಬದಲಾಯಿಸಿ]ಶಿಲ್ಪಾಲಂಕಾರಗಳಲ್ಲಿಯೂ ಹೆಲೆನಿಸ್ಟಿಕ್ ಕಲೆಯನ್ನು ತಿರಸ್ಕರಿಸಿ ಮೂಲ ದೇಶೀಯ ಕಲೆಯಲ್ಲಿ ಇದು ಹೆಚ್ಚು ಆಸಕ್ತಿ ತೋರಿದೆ. ಆಕ್ಸರಿಂಕಸ್, ಅಹ್ನಾಸ್, ಸಕ್ಕರ ಮುಂತಾದ ಕಡೆ ಅಲೆಕ್ಸಾಂಡ್ರಿಯದ ಹೆಲೆನಿಸ್ಟಿಕ ಕಲೆಯ ಪ್ರಭಾವ ಕಂಡುಬಂದರೂ ಬಾವಿತ್, ಸೊಹಾಗ್ ಮುಂತಾದೆಡೆಗಳಲ್ಲಿ ಹೆಚ್ಚು ದೇಶಿಯತೆ ಉಳಿದುಬಂದಿದೆ. ಮೂರ್ತಿಗಳಲ್ಲಿ ಹೆಚ್ಚು ಸಾಂಪ್ರದಾಯಿಕತೆ, ಧ್ರುವೀಕರಣ ಎದ್ದು ಕಾಣುವಲ್ಲಿ ಮೂಲದೇಶೀಯ ಶಿಲ್ಪಗಳ ಛಾಯೆ ಸ್ಪಷ್ಟವಾಗಿದೆ. ಬಾವಿತ್ ಮೊದಲಾದ ಕಡೆಗಳಲ್ಲಿರುವ ಮೊದಲಿನ ಕ್ರೈಸ್ತಮಂದಿರಗಳಲ್ಲಿ ಕಂಬಗಳ ಬೋದಿಗೆಗಳು, ಗೋಡೆಗಳ ಅಲಂಕರಣಪಟ್ಟಿಕೆಗಳು, ಇತರ ಉಬ್ಬು ಶಿಲ್ಪಾಲಂಕಾರಗಳು ಬಿಜಾóಂಟಿನ್ ಕಲೆಯ ಪ್ರಭಾವಕ್ಕೆ ಒಳಗಾಗಿವೆ. ಕೈರೋದ ಚರ್ಚುಗಳಲ್ಲಿನ ಮರದ ಕೆತ್ತನೆಗಳು, ದೇರ್-ಎಲ್-ಸುಯಾಣ ಮಂದಿರದ ತಿಳಿಗಚ್ಚಿನ ಶಿಲ್ಪಾಲಂಕರಣಗಳು ಮುಂತಾದ ಈಚಿನ ಕಾಪ್ಟಿಕ್ ಕೆಲಸಗಳಲ್ಲಿ ಇಸ್ಲಾಮಿಕ್ ಕಲೆಯ ಪ್ರಭಾವ ಹೆಚ್ಚಾಗಿದೆ.
ಕಾಪ್ಟಿಕ್ ಶಿಲ್ಪ ಬೆಳೆವಣಿಗೆ
[ಬದಲಾಯಿಸಿ]ಕಾಪ್ಟಿಕ್ ಶಿಲ್ಪ ಬೆಳೆವಣಿಗೆ ಹೊಂದಿದಂತೆ ಅಲಂಕರಣದ ರೀತಿಯಲ್ಲೂ ನವುರು ಕಡಿಮೆಯಾಗಿ ಸ್ಪಷ್ಟವಾದ, ಆಳವಾದ, ದೃಢವಾದ ಕಡೆತ ಆರಂಭವಾಗುತ್ತದೆ. ಸೊಹಾಗಿನ ಮಂದಿರಗಳಲ್ಲಿರುವ ಎಲೆ, ಬಳ್ಳಿ ಸುರುಳಿ, ಬೋದಿಗೆಯ ಅಲಂಕರಣಗಳಲ್ಲೆಲ್ಲ ಇದನ್ನು ನೋಡಬಹುದು. ಮೂರ್ತಿಶಿಲ್ಪದಲ್ಲಿ ಗುಂಡನೆಯ, ಆಳವಾಗಿ ಕಡೆದ ದೊಡ್ಡ ಕಣ್ಣುಗಳು, ಧ್ರುವೀಕರಿಸಿದ ಆಕೃತಿ, ಅಡಕವಾದ ರೂಪರೇಖೆ-ಇವೆಲ್ಲವೂ ಕಾಪ್ಟಿಕ್ ಮೂಲದ ಶಿಲ್ಪಕಲೆಯ ವೈಶಿಷ್ಟ್ಯ.ಕಾಷ್ಟಿಕ್ ಮತದ ಪ್ರತಿಮೆಗಳು ಬಿಜಾóಂಟಿನ್ ಪ್ರತಿಮೆಗಳಿಗಿಂತ ಭಿನ್ನ. ಏಕ ಪ್ರಕೃತಿ ವಾದಕ್ಕನುಗುಣವಾಗಿ ಹಳೇ ಒಡಂಬಡಿಕೆಯ ಸಂದಿಗ್ದ ಕಥೆಗಳನ್ನನುಸರಿಸಿ, ಗ್ರೀಕ್ ಪುರಾಣದ ಕಥೆಗಳನ್ನವಲಂಬಿಸಿ ಯೇಸುವಿನ ಮೂರ್ತಿಯನ್ನು ಚಿತ್ರಿಸಿರುತ್ತಾರೆ. ಇವುಗಳಲ್ಲಿ ದೇವದೂತರಿಂದ ಸುತ್ತುವರಿದು ಸಿಂಹಾಸನಾರೂಢನಾಗಿರುವ ಯೇಸು ಮತ್ತು ಆತನ ಜೀವನದಿಂದ ಆರಿಸಿದ ಸನ್ನಿವೇಶಗಳು, ಮಾತೃದೇವತೆ ಐಸಿಸ್‍ಳನ್ನು ನೆನಪಿಗೆ ತರುವಂತೆ ಮಗುವಿಗೆ ಹಾಲೂಡಿಸುವ ಮೇರಿ, ಸಾಧುಗಳು, ಸಂತರು, ಮಠಗಳ ಸ್ಥಾಪಕರು ಮುಂತಾದವರ ಮೂರ್ತಿಗಳ ಸಾಲುಗಳು, ವಿಧರ್ಮೀಯ ಸಂಪ್ರದಾಯದ ಪ್ರಾಣಿ ಚಿತ್ರಗಳು, ಸಂತರಾದ ಯೋಧರ ಮೂರ್ತಿಗಳ-ಮುಂತಾದವನ್ನು ನೋಡಬಹುದು.
ಕಾಪ್ಟಿಕ್ ಚಿತ್ರಕಲೆ
[ಬದಲಾಯಿಸಿ]ಕಾಪ್ಟಿಕ್ ಚಿತ್ರಕಲೆ ಬಹುಮಟ್ಟಿಗೆ ನಾಶವಾಗಿರುವುದರಿಂದ ಅದರ ಬೆಳೆವಣಿಗೆಯನ್ನು ಗುರುತಿಸುವುದು ಕಠಿಣ. ಉಳಿದು ಬಂದಿರುವ ಚಿತ್ರಗಳು ತುಂಬ ಶಿಥಿಲವಾಗಿವೆ. ಬಾವಿಟ್, ಸಕ್ಕರ, ಸೇಂಟ್ ಸಿಮಿಯನ್, ಸೊಹಾಗ್ ಮುಂತಾದೆಡೆ ಇರುವ ಮಠ ಚರ್ಚುಗಳಲ್ಲಿ ಇಂಥ ಭಿತ್ತಿ ಚಿತ್ರಗಳ ಅವಶೇಷಗಳ ಉಳಿದು ಬಂದಿವೆ. ಕೈರೋದಲ್ಲಿರುವ ಕಾಪ್ಟಿಕ್ ಮ್ಯೂಸಿಯಂನಲ್ಲಿ ಇಂಥ ಭಿತ್ತಿಚಿತ್ರಗಳು ಕೆಲವನ್ನು ರಕ್ಷಿಸಿಡಲಾಗಿದೆ.ತಮಗೆ ಬೇಕಾದ ಆಯ್ದ ಸನ್ನಿವೇಶಗಳನ್ನೇ ಮತ್ತೆ ಮತ್ತೆ ಹಲವು ಏಕಪ್ರಕೃತಿವಾದಿ ಚರ್ಚುಗಳಲ್ಲಿ ಚಿತ್ರಿಸಿರುವುದರಿಂದ ಇವುಗಳಲ್ಲಿ ಬಹುಮಟ್ಟಿಗೆ ಏಕತೆಯನ್ನು ಕಾಣಬಹುದು. ಮುಖ್ಯವಾಗಿ ದೈವ ಸಾಕ್ಷಾತ್ಕಾರವನ್ನು ಸೂಚಿಸುವ ದೇವ ಶಿರಸ್ಸುಗಳು. ಜಕಾರಿಯಾಸ್, ಸೇಂಟ್ ಜಾನರ ಮೂರ್ತಿಗಳು, ದಾವೂದನ ಕಥೆಗಳು, ಮುಂತಾದವು ಈ ಚಿತ್ರದಲ್ಲಿ ಎದ್ದು ಕಾಣುತ್ತವೆ. ದೇರ್-ಅಬು-ಹೆನಿಸ್ನ ಭಿತ್ತಿಚಿತ್ರಗಳು ಸರಳ ವರ್ಣಸಂಯೋಜನೆಯಿಂದ ಕೂಡಿದ್ದು ಕಾಪ್ಟಿಕ್ ಚಿತ್ರಗಳಲ್ಲಿ ಪುರಾತನವಾದುದಾಗಿವೆ. ಬಾವಿಟ್‍ನ ಚಿತ್ರಕಲೆಯಲ್ಲಿ ಹೆಲೆನಿಸ್ಟಿಕ್ ಕಲೆಯ ಕಡೆಯ ಅವಶೇಷಗಳನ್ನು ಕಾಣಬಹುದಾದರೆ ಉಳಿದ ಅನೇಕವು ಆರನೆಯ ಶತಮಾನಕ್ಕೆ ಸೇರಿದ್ದು, ಅವುಗಳಲ್ಲಿ ಪೂರ್ಣ ಕಾಪ್ಟಿಕ್ ಶೈಲಿ ಸ್ಪಷ್ಟವಾಗಿದೆ. ಇವುಗಳಲ್ಲಿ ಕಾಣುವ ವ್ಯಕ್ತಿಚಿತ್ರಗಳು ಎದುರು ಮುಖವಾಗಿರುವುದು, ಅವುಗಳ ಸಾಂಪ್ರದಾಯಿಕ ನಿಲುವು ಮತ್ತು ಶುದ್ಧವರ್ಣಗಳ ಸ್ಪಷ್ಟ ರೂಪರೇಖೆಗಳು ಕಾಪ್ಟಿಕ್ ಕಲೆಯ ಮುಖ್ಯ ಗುಣಗಳು. ಅವುಗಳಲ್ಲಿ ಜಡಸ್ವಭಾವ ಎದ್ದುಕಾಣುತ್ತದೆ. ಚಿತ್ರಗಳು ಚಪ್ಪಟೆಯಾಗಿವೆ. ಸಕ್ಕರದ ಚಿತ್ರಗಳು ಇದನ್ನು ಹೆಚ್ಚಾಗಿ ಗಮನಿಸಬಹುದು. ಏಳು ಎಂಟನೆಯ ಶತಮಾನಗಳ ವ್ಯಕ್ತಿಚಿತ್ರಗಳಲ್ಲಿ ಕೆಲಮಟ್ಟಿಗೆ ಅವನತಿ ಕಂಡರೂ ಅರಬ್ಬೀ ದಾಳಿಯಿಂದ ಕಾಪ್ಟಿಕ್ ಚಿತ್ರಕಲೆ ನಿಲುಗಡೆಯನ್ನೇನೂ ಹೊಂದಲಿಲ್ಲ. ಅದರ ಬದಲು ಸಿರಿಯ ಮುಂತಾದ ಕಲೆಗಳಿಂದ ಪ್ರಭಾವಿಗೊಂಡು ವೈವಿಧ್ಯವನ್ನು ಪಡೆಯಿತು.
ಮಣ್ಣಿನ ಮತ್ತು ಗಾಜಿನ ಸಾಮಾನು
[ಬದಲಾಯಿಸಿ]ಅನೇಕ ರೀತಿಯ ದಿನಬಳಕೆಯ ವಸ್ತುಗಳಲ್ಲಿ, ಅದರಲ್ಲಿಯೂ ಮುಖ್ಯವಾಗಿ ಮಣ್ಣಿನ ಮತ್ತು ಗಾಜಿನ ಸಾಮಾನುಗಳಲ್ಲಿ, ಬಟ್ಟೆಗಳಲ್ಲಿ ಕಾಪ್ಟಿಕ್ ಕಲೆಯ ಗುಣಗಳನ್ನು ನೋಡಬಹುದು. ಚರ್ಚುಗಳಲ್ಲಿ, ಮಠಮಂದಿರಗಳಲ್ಲಿ, ಸಮಾಧಿಗಳಲ್ಲಿ ಉಳಿದು ಬಂದಿರುವ ಪಾತ್ರೆಗಳು, ಬೋಗುಣಿಗಳು, ಹಣತೆಗಳು, ಧೂಪದಾನಿಗಳು ಮುಂತಾದುವುಗಳಲ್ಲಿ ಮೊದಲು ಅಲೆಕ್ಸಾಂಡ್ರಿಯದ ಹೆಲೆನಿಸ್ಟಿಕ್ ರೀತಿಯನ್ನನುಸರಿಸಿರುವುದು ಕಂಡುಬಂದರೂ ಮುಂದೆ ದೇಶೀಯ ರೀತಿಯಲ್ಲಿಯೇ ಇವನ್ನು ರಚಿಸಿರುವುದು ಸ್ಪಷ್ಟವಿದೆ. ಮಣ್ಣಿನ, ಲೋಹದ ಪಾತ್ರೆಗಳ ಮೇಲೆ, ಹಣತೆಗಳ ಮೇಲೆ ಕ್ರೈಸ್ತಮತಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಉಬ್ಬುಚಿತ್ರದಲ್ಲಾಗಲೀ ಗೀರುಚಿತ್ರಗಳಲ್ಲಾಗಲೀ ಇರುತ್ತವೆ. ಇದರೊಂದಿಗೆ ಅರಬ್ಬೀ ದಾಳಿಯ ಅನಂತರ ಬಣ್ಣದ ಚಿತ್ರಗಳನ್ನುಳ್ಳ ಮಣ್ಣಿನ ಪಾತ್ರೆಗಳು ತಯಾರಾದುವು.ನೇಯ್ಗೆಯಲ್ಲಿ ಕಾಪ್ಟಿಕ್ ಕಲೆಯನ್ನು ಸುಂದರವಾಗಿ ಮೂಡಿಸಿರುವುದನ್ನು ಆ ಕಾಲದ ಅನೇಕ ರೀತಿಯ ಬಟ್ಟೆಗಳಲ್ಲಿ ನೋಡಬಹುದು. ಮುಖ್ಯವಾಗಿ ಹಲವು ಸಮಾಧಿಗಳಲ್ಲಿ ಉಪಯೋಗಿಸಿದ್ದ ಹೊದಿಕೆಗಳು, ದಿಂಬುಗಳು, ಹಾಸುಗಂಬಳಿಗಳು, ಇನ್ನೂ ಹಲವು ಬಗೆಯ ವಸ್ತ್ರಗಳ ಮೇಲೆ ನೆಯ್ದಿರುವ ಆಕೃತಿಗಳು, ಪ್ರಾಣಿ ಪಕ್ಷಿಗಳು, ಅಲಂಕರಣ ಪಟ್ಟಿಕೆಗಳು, ಕಾಪ್ಟಿಕ್ ಕಲೆಯ ಮಾದರಿಗಳಾಗಿದ್ದು ಅನೇಕ ವಸ್ತು ಸಂಗ್ರಹಾಲಯಗಳಲ್ಲಿ ಉಳಿದುಬಂದಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-01-03. Retrieved 2016-10-31.
- ↑ http://m.varthabharati.in/article/2016_04_11/16948