ವಿಷಯಕ್ಕೆ ಹೋಗು

ಕಾದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾದಿ ಎಂದರೆ ಶರಿಯಾ ನ್ಯಾಯಾಲಯದ ನ್ಯಾಯಾಧಿಪತಿ ಅಥವಾ ನ್ಯಾಯಾಧೀಶ. ಇವನು ಮಧ್ಯಸ್ಥಿಕೆ, ಅನಾಥರು ಮತ್ತು ಅಪ್ರಾಪ್ತವಯಸ್ಕರ ಮೇಲೆ ಪಾಲಕಾಧಿಕಾರ, ಮತ್ತು ಲೋಕೋಪಯೋಗಿ ಕಾರ್ಯಗಳ ಮೇಲ್ವಿಚಾರಣೆ ಹಾಗೂ ಲೆಕ್ಕ ಪರಿಶೋಧನೆಯಂತಹ ನ್ಯಾಯಾತಿರಿಕ್ತ ಕಾರ್ಯಗಳನ್ನು ಕೂಡ ಚಲಾಯಿಸುತ್ತಾನೆ.[೧]

ಕಾದಿಯು ಇಸ್ಲಾಮೀ ಧನಾತ್ಮಕ ಕಾನೂನಿನ (ಫ಼ಿಖ್) ಅನ್ವಯಕ್ಕೆ ಜವಾಬ್ದಾರನಾದ ನ್ಯಾಯಾಧೀಶ. ಮೊದಲ ಉಮಯ್ಯದ್ ಕಲೀಫರ (ಕ್ರಿ.ಶ. ೬೬೧-೭೦೫) ಆಳ್ವಿಕೆಯಲ್ಲಿ, ಈ ಹೊಸದಾಗಿ ಸೃಷ್ಟಿಯಾದ ಇಸ್ಲಾಮೀ ಸಾಮ್ರಾಜ್ಯದ ಪ್ರಾಂತಾಧಿಪತಿಗಳು ತಮ್ಮ ಪ್ರಾಂತಗಳೊಳಗೆ ಇದ್ದ ಮುಸ್ಲಿಮರಲ್ಲಿ ಹುಟ್ಟಿಕೊಂಡ ಅನೇಕ ವ್ಯಾಜ್ಯಗಳನ್ನು ನಿರ್ಣಯಿಸಲು ಸಾಧ್ಯವಾಗದೇ, ಈ ಕಾರ್ಯವನ್ನು ಇತರರಿಗೆ ನಿಯೋಜಿಸಲು ಆರಂಭಿಸಿದಾಗ, ಈ ಅಧಿಕಾರಸ್ಥಾನವು ಹುಟ್ಟಿಕೊಂಡಿತು. ಇಸ್ಲಾಮೀ ಇತಿಹಾಸದ ಈ ಮುಂಚಿನ ಅವಧಿಯಲ್ಲಿ, ಆಗ ಇನ್ನೂ ಇಸ್ಲಾಮೀ ಧನಾತ್ಮಕ ಕಾನೂನಿನ ಯಾವುದೇ ನಿಕಾಯವು ಅಸ್ತಿತ್ವಕ್ಕೆ ಬಂದಿರಲಿಲ್ಲ, ಮತ್ತು ಹಾಗಾಗಿ ಮೊದಲ ಕಾದಿಗಳು ಪ್ರಕ್ರರಣಗಳನ್ನು ತಮಗೆ ಲಭ್ಯವಿದ್ದ ಏಕಮಾತ್ರ ಮಾರ್ಗದರ್ಶನ ಸೂತ್ರಗಳ ಆಧಾರದ ಮೇಲೆ ನಿರ್ಣಯಿಸುತ್ತಿದ್ದರು: ಅವೆಂದರೆ ಅರಬ್ ಸಾಂಪ್ರದಾಯಿಕ ಕಾನೂನು, ವಶಪಡಿಸಿಕೊಂಡ ಪ್ರಾಂತಗಳ ಕಾನೂನುಗಳು, ಕುರಾನ್‍ನ ಸಾಮಾನ್ಯ ಆಜ್ಞೆಗಳು, ಮತ್ತು ತಮ್ಮ ಸ್ವಂತದ ನೀತಿಪ್ರಜ್ಞೆಯಿಂದ.

ನಂತರದ ಉಮಯ್ಯದ್ ಅವಧಿಯಲ್ಲಿ (ಕ್ರಿ.ಶ. ೭೦೫-೭೫೦), ಕಾದಿಗಳಿಂದ ಬೇರೆಯಾದ ಮುಸ್ಲಿಮ್ ನ್ಯಾಯ ವಿದ್ವಾಂಸರ ಬೆಳೆಯುತ್ತಿರುವ ವರ್ಗವು, ಅಗತ್ಯವಿದ್ದ ಕಾನೂನು ನಿಯಮಗಳ ಸಂಗ್ರಹವನ್ನು ಪೂರೈಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿತು, ಮತ್ತು ೭೫೦ರಲ್ಲಿ ಅಬ್ಬಾಸಿದ್ ವಂಶವು ಅಧಿಕಾರಕ್ಕೆ ಗದ್ದುಗೆ ಹಿಡಿಯುವ ಹೊತ್ತಿಗೆ, ಅವರ ಕೆಲಸವು ಮೂಲಭೂತವಾಗಿ ಮುಗಿದಿತ್ತು ಎಂದು ಹೇಳಬಹುದು. ತಮ್ಮ ಕಾನೂನು ಸಿದ್ಧಾಂತವನ್ನು ರಚಿಸುವಲ್ಲಿ, ಈ ನ್ಯಾಯ ವಿದ್ವಾಂಸರು ಕಾದಿಗಳು ಆಗಲೇ ಸ್ಥಾಪಿಸಿದ ನಿದರ್ಶನಗಳನ್ನು ನಿರ್ಗಮನ ಬಿಂದುವಾಗಿ ತೆಗೆದುಕೊಂಡರು. ಇವುಗಳಲ್ಲಿ ಕೆಲವನ್ನು ಅವರು ಇಸ್ಲಾಮೀ ತತ್ವಗಳೊಂದಿಗೆ ಅಸಮಂಜಸವೆಂದು ಪರಿಗಣಿಸಿದರು ಏಕೆಂದರೆ ಅವನ್ನು ಆಗತಾನೇ ಅರ್ಥಮಾಡಿಕೊಳ್ಳಲಾಗುತ್ತಿತ್ತು ಮತ್ತು ಇವುಗಳನ್ನು ತಿರಸ್ಕರಿಸಿದರು, ಆದರೆ ಬಹುತೇಕ ನಿದರ್ಶನಗಳನ್ನು ಅವರು ಮಾರ್ಪಾಡು ಮಾಡಿ ಅಥವಾ ಮಾಡದೇ ಅಳವಡಿಸಿಕೊಂಡರು. ಹಾಗಾಗಿ, ವಾಸ್ತವಿಕವಾಗಿ ಮೊದಲ ಕಾದಿಗಳು ಇಸ್ಲಾಮೀ ಧನಾತ್ಮಕ ಕಾನೂನಿನ ಅಡಿಪಾಯಗಳನ್ನು ಹಾಕಿದರು. ಆದರೆ, ಒಮ್ಮೆ ಈ ಕಾನೂನಿನ ರಚನೆಯಾದ ಮೇಲೆ, ಕಾದಿಯ ಪಾತ್ರವು ಆಳವಾದ ಬದಲಾವಣೆಗೆ ಒಳಗಾಯಿತು. ಮೇಲೆ ತಿಳಿಸಲಾದ ಮಾರ್ಗದರ್ಶಕ ಸೂತ್ರಗಳನ್ನು ಇನ್ನು ಮುಂದೆ ಅನುಸರಿಸಲು ಮುಕ್ತವಾಗಿರದ ಕಾದಿಯು ಈಗ ಕೇವಲ ಹೊಸ ಇಸ್ಲಾಮೀ ಕಾನೂನಿಗೆ ಬದ್ದವಾಗಿರಬೇಕೆಂದು ನಿರೀಕ್ಷಿಸಲಾಗುತ್ತಿತ್ತು, ಮತ್ತು ಆಗಿನಿಂದ ಈ ಅನುಸರಣೆಯು ಈ ಅಧಿಕಾರಸ್ಥಾನದ ಮುಖ್ಯ ಲಕ್ಷಣವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. B. Hallaq, Wael (2009). An Introduction to Islamic law. Oxford University Press. pp. 175–6. ISBN 9780521678735.
"https://kn.wikipedia.org/w/index.php?title=ಕಾದಿ&oldid=886491" ಇಂದ ಪಡೆಯಲ್ಪಟ್ಟಿದೆ