ಕಾಗೆಮಾಂಬಳ್ಳಿ
ಕಾಗೆಮಾಂಬಳ್ಳಿ- ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಅನಾಮಿರ್ಟ ಕಾಕ್ಯುಲಸ್ ಎಂಬ ಶಾಸ್ತೀಯ ಹೆಸರನ್ನುಳ್ಳ ದೊಡ್ಡ ಬಳ್ಳಿ.
ಎಲ್ಲೆಲ್ಲಿ
[ಬದಲಾಯಿಸಿ]ಸಾಮಾನ್ಯವಾಗಿದು ಭಾರತದಲ್ಲಿ ಬಂಗಾಳ, ಖಾಸಿ ಬೆಟ್ಟಗಳು, ಮತ್ತು ದಕ್ಷಿಣ ಭಾರತಗಳಲ್ಲೂ ಸಿಂಹಳ, ಬರ್ಮ, ಮಲಯಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ.
ವಿವರಣೆ
[ಬದಲಾಯಿಸಿ]ಬೇರೆ ಆಸರೆ ಸಸ್ಯಗಳನ್ನು ಸುತ್ತುವರಿದು ಹಬ್ಬಿ ಬೆಳೆಯುವ ದೊಡ್ಡ ಬಳ್ಳಿ ಇದು. ಎಲೆಗಳು ಸರಳ; ಮರ್ಯಾಯವಾಗಿ ಜೋಡಣೆಯಾಗಿವೆ. ಹೂಗೊಂಚಲು ಸಂಕೀರ್ಣ ಮಾದರಿಯವು; ವಯಸ್ಸಾದ ಕಾಂಡದ ಗಿಣ್ಣುಗಳಿಂದ ಹುಟ್ಟುತ್ತವೆ. ಹೂಗಳು ಚಿಕ್ಕ ಗಾತ್ರದವು ಮತ್ತು ಭಿನ್ನ ಹೂವಿನಲ್ಲಿ 6 ಕೇಸರಗಳೂ ಹೆಣ್ಣಿನಲ್ಲಿ 3 ಕಾರ್ಪೆಲುಗಳಿಂದಾದ ಉಚ್ಚಸ್ಥಾನದ ಅಂಡಾಶಯವೂ ಇದೆ. ಒಂದೊಂದು ಕಾರ್ಪೆಲಿಗೊಂದರಂತೆ 3 ಅಂಡಕಗಳಿವೆ. ಕಾಯಿ ಅಷ್ಟಿಫಲ (ಡ್ರೂಪ್) ಮಾದರಿಯದು.
ಉಪಯೋಗ
[ಬದಲಾಯಿಸಿ]ಕಾಯಿಯಲ್ಲೂ ಬೀಜಗಳಲ್ಲೂ ಹಲವಾರು ಬಗೆಯ ಸಂಯುಕ್ತ ವಸ್ತುಗಳಿವೆ. ಇವುಗಳಲ್ಲಿ ಪಿಕ್ರೋಟಾಕ್ಸಿನ್ (), ಕಾಕ್ಯುಲಿನ್ ಅಥವಾ ಅನಾಮಿರ್ಟಿನ್ ಎಂಬ ರುಚಿರಹಿತ ವಸ್ತು ಮತ್ತು ಮೆನಿಸ್ಪರ್ಮಿನ್ ಎಂಬ ಸಸ್ಯಕ್ಷಾರಗಳು (ಆಲ್ಕಲಾಯಿಡ್) ಮುಖ್ಯವಾದುವು. ಪಿಕ್ರೋಟಾಕ್ಸಿನ್ ಎಂಬುದು ಕಹಿರುಚಿಯುಳ್ಳದ್ದೂ ಬಲು ವಿಷಪೂರಿವಾದುದೂ ಆಗಿದೆ. ಅತಿಸ್ವಲ್ಪ ಪ್ರಮಾಣದಲ್ಲೂ ಅಪಾಯಕಾರಿ; ಸುಮಾರು 20 ಮಿಗ್ರಾಂ. ನಷ್ಟು ಪಿಕ್ರೋಟಾಕ್ಸಿನ್‍ಗೆ ಮನುಷ್ಯನನ್ನೂ ಕೊಲ್ಲುವ ಶಕ್ತಿಯಿದೆ ಎಂದು ಹೇಳುವುದಿದೆ. ಇದರ ಸೇವನೆಯಿಂದ ಮನುಷ್ಯನಲ್ಲಿ ಹೊಟ್ಟೆ ಶೂಲೆ, ವಾಂತಿ ಕೆಲವೊಮ್ಮೆ ಚಿತ್ತಭ್ರಮೆ ಮುಂತಾದ ವಿಕಾರಗಳುಂಟಾಗಿ ಕೊನೆಗೆ ಸಾವು ಸಂಭವಿಸುತ್ತದೆ. ಈ ವಿಶವಸ್ತುವಿರುವುದರಿಂದ ಕೆಲವೆಡೆ ಮೀನು, ಕಾಗೆ ಮುಂತಾದ ಪ್ರಾಣಿಗಳನ್ನು ಕೊಲ್ಲಲು ಇದರ ಕಾಯಿಗಳನ್ನು ಬಳಸುವುದುಂಟು. ಈ ವಸ್ತು ಇಷ್ಟು ವಿಷಪೂರಿತವಾದರೂ ಇದನ್ನು ಕಾಯಿಗಳಿಂದ ಪ್ರತ್ಯೇಕಿಸಿ ಕೆಲವು ರೋಗಗಳಿಗೆ, ಸೊಂಕುಗಳಿಗೆ ಔಷಧಿಯಾಗಿ ಉಪಯೋಗಿಸುವುದೂ ಉಂಟು. ಕ್ಷಯ ರೋಗಿಗಳು ರಾತ್ರಿ ಬೆವರುವುದನ್ನು ತಡೆಯಲು, ಗಜಕರ್ಣಕ್ಕೆ ಮತ್ತು ಹೇನು ನಿವಾರಕ ಮುಲಾಮುಗಳಲ್ಲಿ ಈ ವಸ್ತುವನ್ನು ಉಪಯೋಗಿಸುತ್ತಾರೆ. ಒಣಗಿಸಿದ ಹಣ್ಣುಗಳಿಗೆ ಕಾಕ್ಯುಲಸ್ ಇಂಡಿಕಸ್ ಅಥವಾ ಕಾಕ್ಯುಲಸ್ ಫ್ರಕ್ಟಸ್ ಎಂಬ ವಾಣಿಜ್ಯ ನಾಮವಿದೆ. ಔಷಧೀಯ ಮಹತ್ತ್ವದಿಂದಾಗಿ ಕಾಗೆಮಾಂಬಳ್ಳಿಯ ಕಾಯಿಗಳು ಇತ್ತೀಚಿಗೆ ವಿದೇಶಗಳಿಗೆ ನಿರ್ಯಾತವಾಗುತ್ತಿದೆ.