ಕಾಂತ ವಿಘಟನೆ
ಕಾಂತ ವಿಘಟನೆ[೧]
ಕಾಂತಗಳ ಉಪಯೋಗದಿಂದ ಕಬ್ಬಿಣ ಮುಂತಾದ ಕಾಂತಾಕರ್ಷಿತ ವಸ್ತುಗಳನ್ನು ಒಂದು ಮಿಶ್ರಣದಿಂದ ಬೇರ್ಪಡಿಸುವ ಕ್ರಿಯೆ (ಮ್ಯಾಗ್ನೆಟೆಕ್ ಸೆಪರೇಷನ್). ಕೈಗಾರಿಕೆಯಲ್ಲಿ ಅನೇಕ ಘನಪದಾರ್ಥಗಳನ್ನು ಜಜ್ಜಿ ಪುಡಿಮಾಡಿ ಪದಾರ್ಥದ ಉಪಯುಕ್ತತೆಯನ್ನು ಹೆಚ್ಚಿಸುವ ಸಂದರ್ಭಗಳಿರುತ್ತವೆ. ಇದಕ್ಕಾಗಿ ನಿರ್ಮಿತವಾದ, ಜಜ್ಜಿ ಪುಡಿಮಾಡುವ ಯಂತ್ರಗಳು ಉಪಯೋಗದಲ್ಲಿವೆ. ಪುಡಿಮಾಡಲಿರುವ ಘನಪದಾರ್ಥದಲ್ಲಿ ಕಬ್ಬಿಣದ ಚೂರುಗಳು ಸೇರಿಹೋಗಿದ್ದರೆ ಅವು ಯಂತ್ರಗಳ ಭಾಗಗಳನ್ನು ಹಾಳುಮಾಡಬಹುದು: ಬೆಂಕಿ ಕೂಡ ಉದ್ಭವಿಸಿ ಅಪಾಯ ಒದಗಬಹುದು. ಆದ್ದರಿಂದ ಕಬ್ಬಿಣದ ಚೂರುಗಳನ್ನು ಪ್ರತ್ಯೇಕಿಸುವ ಆವಶ್ಯಕತೆ ಉಂಟು. ಇನ್ನು ನಗರಗಳಲ್ಲಿ ದಿನಂಪ್ರತಿ ಸಂಗ್ರಹವಾಗುವ ಕಸ ಮುಂತಾದ ತ್ಯಾಜ್ಯ ವಸ್ತುಗಳಲ್ಲಿ ಸೇರಿರುವ ಲೋಹದ ತುಣುಕುಗಳನ್ನು ಬೇರ್ಪಡಿಸಿ ಉಳಿಯುವ ಕಸವನ್ನು ಉಪಯುಕ್ತ ಗೊಬ್ಬರವನ್ನಾಗಿ ಪರಿವರ್ತಿಸಬಹುದು. ಇಂಥ ಪರಿಸ್ಥಿತಿಗಳಲ್ಲಿ ಕಾಂತ ವಿಘಟಕದ ಉಪಯುಕ್ತತೆ ಹೆಚ್ಚಾಗಿದೆ.
ಕಾಂತವಿಘಟಕದ ರೇಖಾಚಿತ್ರವನ್ನು ಇಲ್ಲಿ ಕೊಟ್ಟಿದೆ. ಇದರಲ್ಲಿರುವ ಕಪ್ಪಿಗೆ (ಪುಲ್ಲಿ) ವಿದ್ಯುತ್ಪ್ರವಾಹದಿಂದ ಕಾಂತಬಲ ಒದಗುತ್ತದೆ. ಇದರಿಂದ ಆಕರ್ಷಿತವಾದ ಕಬ್ಬಿಣದ ಚೂರುಗಳು ಪಟ್ಟಿ ಕಪ್ಪಿಯ ಮೇಲೆ ಚಲಿಸುವವರೆಗೂ ಪಟ್ಟಿಯ ಮೇಲಿದ್ದು ಅದು ಕಪ್ಪಿಯನ್ನು ಬಿಟ್ಟೊಡನೆಯೇ ಕೆಳಗೆ ಬಿದ್ದು ಶೇಖರಗೊಳ್ಳುವುವು.