ಕವಿಶಿಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕವಿಶಿಕ್ಷೆ : ಪ್ರತಿಭೆಯೊಂದೇ ಕಾವ್ಯಬೀಜವಾದರೂ ಅದರ ಅಭಿವ್ಯಕ್ತಿಗೆ ಫಲವತ್ತಾದ ಭೂಮಿಕೆಯೊಂದಿರಬೇಕು. ಇಂಥ ಭೂಮಿಕೆಯನ್ನು ಸಂಸ್ಕಾರಗೊಳಿಸಿ ಸಿದ್ಧಪಡಿಸುವ ಮಾರ್ಗವೇ ಕವಿಶಿಕ್ಷೆ_ಕವಿಗೆ ಕೊಡಬೇಕಾದ ಶಿಕ್ಷಣ, ತರಬೇತು.

ವ್ಯುತ್ಪತ್ತಿ, ನಿಪುಣತೆ, ಶ್ರುತಿ, ಅಮಂದಾಭಿಯೋಗ (ಅಭ್ಯಾಸ) ಮುಂತಾಗಿ ಆಲಂಕಾರಿಕರು ಹೇಳುವ ಉಪಕಾರಣಗಳು ಕವಿಯಲ್ಲಿ ನೈಸರ್ಗಿಕವಾಗಿ ಇರುವ ಪ್ರತಿಭೆಯನ್ನು ನಿಶಿತಗೊಳಿಸುತ್ತವೆ; ಕೆಲವರಲ್ಲಿ ಯತ್ಕಿಂಚಿತ್ತಾದರೂ ಪ್ರತಿಭೆಯಿದ್ದರೆ ಅದನ್ನು ಹೊಮ್ಮಿಸುತ್ತವೆ. ಆದುದರಿಂದ ಇವನ್ನು ಹದಗೊಳಿಸಲು ಆಲಂಕಾರಿಕರು ಕವಿಯಶಃಪ್ರಾರ್ಥಿಗಳಾದವರಿಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ. ಇದೇ ಕವಿಶಿಕ್ಷೆ.

ಕವಿಯಾಗಬೇಕಾದವ ಶಬ್ದಾಭಿದೇಯಜ್ಞರ ಉಪಾಸನೆಮಾಡಿ ಶಬ್ದಾರ್ಥಗಳನ್ನು ತಿಳಿದುಕೊಳ್ಳಬೇಕು; ಲೋಕದ ನಡವಳಿಕೆ, ವೇದ ಮತ್ತು ಶಾಸ್ತ್ರಾದಿಗಳ ಪರಿಚಯ ಮಾಡಿಕೊಳ್ಳಬೇಕು; ಕಾವ್ಯಜ್ಞರಿಂದ ಉಪದೇಶ ಪಡೆದುಕೊಳ್ಳಬೇಕು; ಇದಕ್ಕಾಗಿ ಸತತವಾದ ಅಭ್ಯಾಸ (ಅಮಂದಾಭಿಯೋಗ) ಮಾಡಬೇಕು- ಎಂದು ಮೊದಲಿಗರಾದ ಭಾಮಹ, ದಂಡಿ ಮುಂತಾದವರು ಹೇಳುತ್ತಾರೆ. ಇದನ್ನೇ ಸಂಕ್ಷೇಪವಾಗಿ ಕನ್ನಡ ಆಲಂಕಾರಿಕರು ವೃದ್ಧಸೇವಾನುರಾಗ, ಕಾವ್ಯವಿದ್ಯಾಪ್ರಚಯಪರಿಚಯ ಮತ್ತು ಸತತಾಭ್ಯಾಸ ಪ್ರಯತ್ನ- ಇವು ಕವಿಯಾಗಬೇಕಾದವನಿಗೆ ಆವಶ್ಯಕವೆನ್ನುತ್ತಾರೆ. ಈ ವಿಷಯವಾಗಿ ಮುಂದೆ ಪ್ರತ್ಯೇಕ ಗ್ರಂಥಗಳೇ ಸೃಷ್ಟಿಯಾದುವು. ಕ್ಷೇಮೇಂದ್ರನ ಕವಿಕಂಠಾಭರಣ ಈ ಗುಂಪಿಗೆ ಸೇರಿದೆ. ರಾಜಶೇಖರನ ಕಾವ್ಯಮೀಮಾಂಸೆಯ ‘ಕವಿಚರ್ಯಾ’ ಎಂಬ ದಶಮಭಾಗವೂ ಕವಿಶಿಕ್ಷಣಕ್ಕೆಂದೇ ಹೊರಟದ್ದು. ಅವನು ಕವಿಗೆ ಹೇಳುವ ಸೌಲಭ್ಯಗಳು ಕವಿರಾಜನಾದ ಅವನಂಥವನಿಗೆ ಮಾತ್ರ ದೊರಕುವಂಥವು. ಅಮರಚಂದ್ರನ ‘ಕಾವ್ಯಕಲ್ಪಲತಾ’ ಮುಂತಾದವು ಕೂಡ ಕವಿಶಿಕ್ಷೆಗೆ ಮೀಸಲಾದವೇ.

ಅಂತು, ಕವಿಯಾಗಬೇಕಾದವನು ಸಕಲ ಕಲೆಗಳಲ್ಲೂ ವಿದ್ಯೆಗಳಲ್ಲೂ ಪರಿಶ್ರಮ ಪಡೆಯಬೇಕೆಂಬುದೇ ಕವಿಶಿಕ್ಷೆಯ ಉದ್ದೇಶ. (ಸಿ.ಜಿ.ಪಿ.)