ಕವಿಗಾಯಕರು

ವಿಕಿಪೀಡಿಯ ಇಂದ
Jump to navigation Jump to search

ಕವಿಗಾಯಕರು : ೧೧ ರಿಂದ ೧೩ನೆಯ ಶತಕದ ವರೆಗಿನ ಕಾಲದಲ್ಲಿ ದಕ್ಷಿಣ ಫ್ರಾನ್ಸಿನಲ್ಲಿ ದೇಶೀಯ (ಲ್ಯಾಂಗ್ ಡಿ ಓಕ್) ಭಾಷೆಯಲ್ಲಿ ಹೊಸ ಬಗೆಯ ಹಾಡುಗಬ್ಬಗಳನ್ನು ರಚಿಸಿದ ಕವಿಗಾಯಕರಿಗೆ ಟ್ರೂಬೆಡೂರರು ಎಂದು ಹೆಸರು. ಉತ್ತರ ಫ್ರಾನ್ಸಿನಲ್ಲೂ (ಈ ಸ್ಫೂರ್ತಿಯಿಂದ) ಇದೇ ಮಾದರಿಯ ಹಾಡುಗಬ್ಬಗಳನ್ನು (ಲ್ಯಾಂಗ್ ಡಿ ಯೀಲ್) ಭಾಷೆಯಲ್ಲಿ ರಚಿಸಿದ ಕವಿಗಾಯಕರಿಗೆ ಟ್ರೂವೇರರು ಎಂದು ಹೆಸರು. ಉತ್ತರ ಇಟಲಿ ಮತ್ತು ಉತ್ತರ ಸ್ಪೇನಿನಲ್ಲೂ ಈ ಕಾವ್ಯಗಾಯನ ಪದ್ಧತಿ, ಸುಮಾರು ಇದೇ ಕಾಲಾವಧಿಯಲ್ಲಿ ಪ್ರಚಲಿತವಾಗಿತ್ತು.

ಟ್ರೂಬೆಡೂರರು -ಟ್ರೂಬೆಡೂರ್ ಎಂಬ ಶಬ್ದ ಸೃಜಿಸು, ಕಂಡುಹಿಡಿ ಎಂಬ ಅರ್ಥ ಬರುವ ಟ್ರೊಬಾರ್-ಟ್ರೊಬೇರ್-ಟ್ರೂವೇರ್ ಎಂಬ ಪದದಿಂದ ನಿಷ್ಪನ್ನವಾದುದು. ಹೊಸ ಬಗೆಯ ಹಾಡನ್ನು ರಚಿಸುವವನು, ಕವಿಗಾಯಕ ಎಂಬ ಅರ್ಥ ಈ ಪದಕ್ಕೆ ಅಳವಟ್ಟಿತು. ಜನತೆಯ ಮೇಲೆ ಈ ಗೀತೆಗಳಿಂದಾದ ಪ್ರಭಾವ ಮಧ್ಯಯುಗದ ಕಾವ್ಯ ಚರಿತ್ರೆಯಲ್ಲೇ ಅಭೂತಪೂರ್ವವಾದುದು. ರಿಚರ್ಡ್ ಕ್ಯೋರ್ ಡಿಲಯನನಂಥ ರಾಜಕುವರನಿಂದ ಹಿಡಿದು ಯಾವ ಸ್ಥಾನಮಾನವೂ ಇಲ್ಲದ ಸಾಹಸಿ ಚಾರಣರ ವರೆಗೂ ಈ ಪಂಥದ ಕವಿಗಾಯಕರು ಆಗಿಹೋದರು. ಕೆಲವರು ತಾವೇ ಹಾಡಬಲ್ಲವರಾಗಿದ್ದರು. ಇನ್ನು ಕೆಲವರು ತಮ್ಮ ಕಬ್ಬಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡಬಲ್ಲ ಜೋಗ್ಲಾರ್ ಎಂಬ ಗಾಯಕರನ್ನು ಜೊತೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಎರಡು ಶತಕಗಳ ಅವಧಿಯಲ್ಲಿ ಹಾಡುಗಬ್ಬಗಳನ್ನು ರಚಿಸಿದ ಕವಿಗಾಯಕರ ಸಂಖ್ಯೆ ನಾಲ್ಕುನೂರು ಎಂದು ತಿಳಿದುಬಂದಿದೆ. ೧೩ನೆಯ ಶತಕದ ವೇಳೆಗೆ ಈ ಹಾಡುಗಳ ಪ್ರಾಶಸ್ತ್ಯ ಕಡಿಮೆಯಾಗ ತೊಡಗಿತು. ಕ್ರೈಸ್ತ ವಿರೋಧಿಗಳಾಗಿದ್ದ ಆಲ್ಬಿಜೆನ್ಸಿಯಾದವರ ಮೇಲೆ ಕ್ರೈಸ್ತ ಮತಾವಲಂಬಿಗಳಾಗಿದ್ದ ರೋಮನರು ನಡೆಸಿದ ಕ್ರೂಸೇಡ್ (ಧರ್ಮ ಯುದ್ಧ)ಗಳಲ್ಲಿ ಆಲ್ಬಿಜೆನ್ಸೀಸರು ಪರಾಜಿತರಾದುದೇ ಈ ಕಾವ್ಯದ ಅವನತಿಗೆ ಮುಖ್ಯ ಕಾರಣ. ಕವಿಗಾಯಕರಿಗೆ ಆಶ್ರಯ ಕೊಟ್ಟಿದ್ದ ಪಾಳೆಯಪಟ್ಟುಗಳೆಲ್ಲ ಆಲ್ಬಿಜೆನ್ಸೀಸರ ಬೆಂಬಲಿಗರಾಗಿದ್ದರು. ರೋಮಿನ ವಿಜಯವೂ ಇವರ ಅವನತಿಗೆ ಕಾರಣವಾಯಿತು. ಯುರೋಪಿನ ಹೊಸ ಭಾವಗೀತೆಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಈ ಕಾವ್ಯ ಪ್ರವಾಹ ಎಷ್ಟು ಆಕಸ್ಮಿಕವಾಗಿ ಉಕ್ಕಿಬಂದಿತೊ ಹಾಗೆಯೇ ತಗ್ಗಿ ಮರೆಯಾಯಿತು. ಚಾನ್ಸನಿಯರ್ಸ್‌ (ಹಾಡುಗಳ ಪುಸ್ತಕ) ಎನ್ನುವ ಹಸ್ತಪ್ರತಿಗಳಲ್ಲಿ ಈ ಹಾಡುಗಬ್ಬಗಳ ಹಲವಾರು ಮಾದರಿಗಳಿವೆ. ಕಾನ್ ಜೊ಼ ಎಂಬುದು ಐದೊ ಆರೊ ಚರಣಗಳ ಒಂದು ಹಾಡು. ಅದಕ್ಕೊಂದು ಒಪ್ಪವಾದ ಮುಕ್ತಾಯವೂ ಉಂಟು. ಇದರ ವಸ್ತು ಸಾಮಾನ್ಯವಾಗಿ ಪ್ರಣಯ. ಹೆಚ್ಚು ಬಳಕೆಯಲ್ಲಿದ್ದ ಮಾದರಿಯೆಂದರೆ ಇದೇ. ಕವಿತೆಯ ವಸ್ತು ರಾಜಕೀಯ ವಿಚಾರವೊ ವಿಡಂಬನೆಯೊ ಆಗಿದ್ದರೆ ಸರ್ವೇಂಟಿಸ್ ಎಂಬ ಮತ್ತೊಂದು ಮಾದರಿ ಆಗುತ್ತದೆ. ಬ್ಯಾಲೆಡ ಅಥವಾ ಡಾನ್ಸಾ ಎಂಬುದು ನೃತ್ಯ ಗೀತೆ. ಮುಗ್ಧ ಕುರುಬ ಕನ್ಯೆಯಲ್ಲಿ ವೀರಯೋಧನೊಬ್ಬನ ಪ್ರೇಮಯಾಚನೆ ಹಾಡಿನ ವಸ್ತುವಾದರೆ ಪ್ಯಾಸ್ಟೊರೆಲಾ ಎನಿಸಿಕೊಳ್ಳುತ್ತದೆ. ಆಲ್ಬಾ (ಬೆಳಗಿನ ಹಾಡು) ಎಲ್ಲಕ್ಕಿಂತ ಮನೋಹರವಾದ ಮಾದರಿ. ಕಾಪಿನವರು ಬೆಳಗಾಯಿತೆಂದು ಪ್ರಣಯಿಗಳನ್ನು ಎಚ್ಚರಿಸುವ ಗೀತೆ. ಧಾರ್ಮಿಕ ಭಾವನೆಯ ಉದಯಗೀತೆಗಳೂ ಇವೆ. ಆಲ್ಬಾಕ್ಕೆ ಪ್ರತಿಯಾಗಿ ಸೆರಿನಾ (ಸಂಧ್ಯಾಗೀತೆ) ಎಂಬ ಇನ್ನೊಂದು ಬಗೆ ಆಮೇಲೆ ಹುಟ್ಟಿಕೊಂಡಿತು. ಟೆನ್ಸನ್ ಮತ್ತು ಪಾರ್ಟಿಮನ್ (ಯೋಕ್ ಪಾರ್ಲಿಟ್) ಎಂಬ ಗೀತೆಗಳು ತುಂಬ ಸ್ವಾರಸ್ಯವಾಗಿರುತ್ತವೆ. ಅವುಗಳಲ್ಲಿ ಇಬ್ಬರು ಮೂವರು ಕೂತು ಪ್ರಣಯದ ಪ್ರಕರಣವೊ ಧಾರ್ಮಿಕ ವಿಚಾರವೊ ವೇದಾಂತವೊ ಕಡೆಗೆ ಲೌಕಿಕ ವಿಡಂಬನೆಯೊ-ಇಂಥ ಯಾವುದಾದರೊಂದು ವಿಚಾರದ ಬಗ್ಗೆ ನಡೆಸುವ ಸ್ವಾರಸ್ಯವಾದ ಚರ್ಚೆ, ಸಂಭಾಷಣೆ ಭಾವ ಗೀತಾತ್ಮಕವಾಗಿ ಹರಿಯುತ್ತದೆ.

ಭಾವಗೀತಾತ್ಮಕತೆಯೇ ಈ ಎಲ್ಲ ಮಾದರಿಯ ಹಾಡುಗಬ್ಬಗಳ ಜೀವನಾಡಿ. ನಾಲ್ಕುನೂರು ಕವಿಗಾಯಕರಲ್ಲಿ ಕೇವಲ ನೂರಹನ್ನೊಂದು ಜನರ ಜೀವನ ಚರಿತ್ರೆಗಳು ಹಸ್ತಪ್ರತಿಯಲ್ಲಿ ದೊರಕಿವೆ. ೧೬ನೆಯ ಶತಕದಲ್ಲಿ ಈ ಚರಿತ್ರೆಗಳ ಸಂಗ್ರಹ ಕಾರ್ಯ ನಡೆಯಿತು. ಈ ಕವಿಜೀವನಕಥೆಗಳಲ್ಲಿ ತಥ್ಯ ಎಷ್ಟು ಮಿಥ್ಯ ಎಷ್ಟು ಎಂದು ನಿರ್ಣಯಿಸುವುದೇ ೧೯ ಮತ್ತು ೨೦ನೆಯ ಶತಮಾನಗಳ ಮುಖ್ಯ ಸಂಶೋಧನಾಕಾರ್ಯವಾಗಿದೆ. ಕೇವಲ ಇಪ್ಪತ್ತು ಪ್ರಮುಖ ಕವಿಗಳ ಸಂಕ್ಷಿಪ್ತ ಪರಿಚಯವನ್ನು ಬ್ರಿಟಾನಿಕ ವಿಶ್ವಕೋಶ ಮಾಡಿಕೊಡುತ್ತದೆ.

೧೦೭೧-೧೧೨೭ರಲ್ಲಿ ಬಾಳಿದ ಏಳನೆಯ ಗಿಲ್ಹೆಮ್, ಅಕ್ವಿಟೇನಿನ ಡ್ಯೂಕ್ ೯ನೆಯ ವಿಲಿಯಂ ಕವಿಗಾಯಕರ ಆಶ್ರಯದಾತನೂ ಸ್ವತಃ ಪ್ರಥಮ ಕವಿಗಾಯಕನೂ ಆಗಿದ್ದ. ಮೇರೆ ಮೀರಿದ ಶೃಂಗಾರ ಇವನ ಹಾಡುಗಳ ಲಕ್ಷಣ.

ಗ್ಯಾಸ್ಕೋನ್ ಮಾರ್ಕಾಬ್ರನ್ ಈ ಕಾವ್ಯಪದ್ಧತಿಯಲ್ಲಿ ಹೊಸ ಪ್ರಯೋಗಗಳನ್ನೂ ಅನೇಕ ಸುಧಾರಣೆಗಳನ್ನೂ ಮಾಡಿದ. ಈತನ ಹಾಡುಗಳಲ್ಲಿ ಒರಟು ಸೌಂದರ್ಯವಿದೆ. ತುಂಬ ಕಟ್ಟುನಿಟ್ಟಾದ ಸಾಂಪ್ರದಾಯಿಕ ಗೀತೆಗಳ ಪರಂಪರೆಯ ಪ್ರವರ್ತಕ ಈತ.

ಮೊದಲು ಫ್ರಾನ್ಸಿನ ರಾಣಿಯಾಗಿದ್ದು ಅನಂತರ ಇಂಗ್ಲೆಂಡಿನ ರಾಣಿಯಾದ ಅಕ್ವಿಟೇನಿನ ಎಲಿಯನೋರ್ ಕವಿಗಾಯಕರಿಗೆ ಉದಾರವಾದ ಆಶ್ರಯವಿತ್ತು ಪ್ರೋತ್ಸಾಹಿಸಿದಳು. ಕೀರ್ತಿಶಿಖರಕ್ಕೇರಿದ ಬೆರ್ನಾಟ್ ಡಿ ಮೆಂಟಾಡೊರ್ ರಾಣಿಯ ಆಸ್ಥಾನ ಕವಿಯಾಗಿದ್ದ.

೧೨-೧೩ನೆಯ ಶತಕದಲ್ಲಿ ಆರ್ನಾಟ್ ಡಿ ಮಾರ್ಯೂಯಿಲ್ ಹಾಡುಗಬ್ಬಗಳಲ್ಲಿ ಸಾಲ್ಯುಟ್ ಎಂಬ ಪ್ರೇಮಪತ್ರದ ಮಾದರಿಯನ್ನೂ ಎನ್ಸೆನ್ ಹಾಮೆನ್ ಎಂಬ ಧರ್ಮಬೋಧನ ಮಾದರಿಯನ್ನೂ ರೂಢಿಗೆ ತಂದ.

ರೇಮ್ ಬಾಟ್ ಡಿ ವಾಕ್ವೇರಸ್ ಪ್ರೊವೆನ್ಸಿನ ಮಾಂಟ್ ಫೆರಟ್ ಆಸ್ಥಾನದಲ್ಲಿ ವರಿಷ್ಠ ಕವಿಗಾಯಕನೆನಿಸಿದ್ದ. ಮಾಕಿರ್ವ್‌ಸ್ ಬಾನಿಫೇಸನ ಸೋದರಿ ಬೀಟ್ರೈಸ್ ಈ ಕವಿಗೆ ಸ್ಫೂರ್ತಿದಾಯಿನಿ. ಈಕೆಯ ಮರಣದಿಂದ ದುಃಖಿತನಾಗಿ ಕವಿ ರಚಿಸಿದ ಶೋಕ ಗೀತೆ ಹೃದಯವಿದ್ರಾವಕವಾಗಿದೆ. ವಾರ್ ಆಫ್ ದಿ ಲೇಡೀಸ್ ಎಂಬ ಹರ್ಷ ಉಕ್ಕುವ ಗೀತೆ ಲೋಕಪ್ರಸಿದ್ಧವಾಗಿದೆ.

ಟುಲೌಸ್ ನ ಹೆಸರಾಂತ ಕವಿಗಾಯಕ ಪಿಯರೆ ವಿಡಲ್. ಯಾರಿಗೂ ಹೆದರದ, ಯಾರನ್ನೂ ಲಕ್ಷಿಸದ ಕವಿ ಎಂದೂ ಪ್ರಪಂಚದಲ್ಲಿ ಇವನಷ್ಟು ಹುಚ್ಚರು ಬೇರಿಲ್ಲ ಎಂದೂ ಹೆಸರಾಗಿದ್ದ. ಇವನ ಪ್ರಣಯದ ಹುಚ್ಚಾಟದ ಕಥೆಗಳು ಜನಜನಿತವಾಗಿದ್ದುವು.

ಪಿಯರೆ ಕಾರ್ಡಿನಲ್ ಅಗ್ರಪಂಕ್ತಿಯ ಕವಿ. ಲೆ ಪೈ ಪ್ರಾಂತ್ಯದವ. ನೀತಿಬೋಧಕ ಸೆರ್ವೆಂಟಿಸ್ ಹಾಡುಗಳ ಜನಕ. ಧರ್ಮಬೋಧಕರನ್ನು ವಿಡಂಬಿಸುವ ಈತನ ಹಾಡುಗಳಂತೂ ಬಿಚ್ಚು ಮಾತಿನ ವಿಶಿಷ್ಟ ಮಾದರಿಗಳಾಗಿವೆ.

ಬೆಟಾರ್ರ್‌ನ್ ಡಿ ಬೋರ್ನ್, ಆರ್ನಾಟ್ ಡೇನಿಯಲ್, ಗಿರಾಟ್ ಡಿ ಬೋರ್ನೆಲ್ಹ್‌ ಮತ್ತು ಸೊರ್ಡೆಲ್ಲೊ-ಈ ಪ್ರಸಿದ್ಧ ಕವಿಗಾಯಕರ ಹೆಸರುಗಳನ್ನು ಡಾಂಟೆ ತನ್ನ ಮಹಾಕಾವ್ಯದಲ್ಲಿ ಪ್ರಸ್ತಾಪಿಸಿದ್ದಾನೆ. ಇವರೆಲ್ಲರನ್ನೂ ಮೃತ್ಯುಲೋಕದಲ್ಲಿ ತಾನು ಸಂಧಿಸಿದ ಹಾಗೆ ಚಿತ್ರಿಸಿದ್ದಾನೆ.

ಗಿಲ್ಹೆಮ್ ಫಿಗ್ಯೂಯಿರಾ ೧೩ನೆಯ ಶತಕದ ಮಧ್ಯಭಾಗದಲ್ಲಿ ಹೆಸರಾದ ಕವಿಗಾಯಕ. ಧರ್ಮವಿರೋಧಿಯಾದ ಈತ ಕೆಥೊಲಿಕ್ ಮಠಗಳ ಮೇಲೆ ಪ್ರಚಂಡ ಟೀಕೆಯ ಮಳೆಗರೆದ. ಹಾಡುಗಬ್ಬಗಳ ಉತ್ಕರ್ಷ ಈತನ ಸಾವಿನೊಂದಿಗೆ ಮುಗಿಯಿತು. ದಕ್ಷಿಣದ ಆಶ್ರಯಸ್ಥಾನಗಳೆಲ್ಲ ಖಿಲವಾದುವು.

ಗಿರಾಟ್ ರಿಕ್ವಿಯರ್ (೧೨೩೦-೯೪) ಕವಿಗಾಯಕರಲ್ಲಿ ಕೊನೆಯವ. ಕ್ಯಾಸ್ಟೈಲಿನ ಪ್ರಾಜ್ಞ ಆಲ್ಫಾನ್ಸೋನ ಆಶ್ರಯ ಈತನಗೆ ದೊರಕಿತ್ತು. ಈತ ರಚಿಸಿದ ಸೆರ್ವೆಂಟಿಸ್ ಒಂದರಲ್ಲಿ ಹಾಡುಗಬ್ಬಗಳ ಲೋಕವನ್ನಾಗಲೇ ಆವರಿಸುತ್ತಿದ್ದ ಕತ್ತಲೆಯ ಅರಿವು ವ್ಯಕ್ತವಾಗುತ್ತದೆ. ಕವಿಗಾಯಕನಾಗಿರುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ; ಯಾವ ಮನ್ನಣೆಯೂ ಇಲ್ಲ-ಎಂಬುದನ್ನು ಈತ ಗ್ರಹಿಸಿದ್ದ. ‘ಹಾಡು ನಲಿವನ್ನುಕ್ಕಿಸಬೇಕು. ಆದರೆ ನೋವು ನನ್ನ ಹೃದಯವನ್ನು ಹಿಂಡುತ್ತಿದೆ. ನಾನು ತೀರ ತಡವಾಗಿ ಹುಟ್ಟಿದೆ’-ಎಂದು ತನ್ನ ದಾರುಣವಾದ ವ್ಯಥೆಯನ್ನು ಒಂದು ಹಾಡಿನಲ್ಲಿ ತೋಡಿಕೊಳ್ಳುತ್ತ ಹಾಡುಗಬ್ಬಗಳ ಬಹು ದೊಡ್ಡ ಪರಂಪರೆಗೆ ಮಂಗಳ ಹಾಡಿ ಕಣ್ಮರೆಯಾದ, ಈ ಕವಿ. ಲೋಕ ಮತ್ತೆ ಈ ಪಂಥದ ಕವಿಗಾಯಕರನ್ನು ನೋಡಲಿಲ್ಲ. ಟ್ರೂವೇರರು : ದಕ್ಷಿಣದ ಟ್ರೂಬೆಡೂರರ ಪ್ರಭಾವ ಮತ್ತು ಸ್ಫೂರ್ತಿಯಿಂದ ಫ್ರಾನ್ಸಿನ ಮಧ್ಯಪ್ರಾಂತ್ಯ, ಉತ್ತರ ಪ್ರಾಂತ್ಯಗಳಲ್ಲಿ ಬೆಳೆದ ಹಾಡುಗಬ್ಬಗಳ ಕವಿಗಳಿವರು. ಇವರ ಹಾಡುಗಳ ಭಾಷೆ ಲ್ಯಾಂಗ್ ಡಿ ಯೀಲ್, ವಸ್ತು ನಾಗರಿಕ ಪ್ರಣಯ. ಟ್ರೂವೆರ್ಸ್‌ ಕಾವ್ಯ ಪಂಥ ೧೧೩೭ರಿಂದ ಈಚಿನದು. ೧೨-೧೩ನೆಯ ಶತಕಗಳಲ್ಲಿದ್ದು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಖ್ಯಾತನಾದ ಟ್ರೂಬೆಡೂರನೊಬ್ಬನ ಮೊಮ್ಮಗಳಾದ ಅಕ್ವಿಟೇನಿನ ಎಲಿಯನೋರ್ ಏಳನೆಯ ಲೂಯಿಯ ಪಟ್ಟದ ರಾಣಿಯಾಗಿ ಫ್ರಾನ್ಸಿಗೆ ಬಂದಾಗ ದಕ್ಷಿಣದ ಕವಿಗಾಯಕರ ಪ್ರಭಾವವನ್ನೂ ಜೊತೆಗೆ ತಂದಳು. ಆಕೆ ಫ್ರಾನ್ಸಿನ ರಾಣಿಯಾಗಿದ್ದ ೧೫ವರ್ಷ ಕಾಲ ಟ್ರೂವೇರರ ಹಾಡುಗಬ್ಬಗಳಿಗೆ ಎಣೆಯಿಲ್ಲದ ಪ್ರೋತ್ಸಾಹ, ಪೋಷಣೆ ಸಿಕ್ಕವು. ದಕ್ಷಿಣದವರ ಹಾಡುಗಳಿಂದ ಸ್ಫೂರ್ತಿತರಾದರೂ ಟ್ರೂವೇರರು ಅನುಕರಣೆಗೆ ಹೋಗದೆ ತಮ್ಮ ಪ್ರತಿಭೆಯಿಂದ ಹೊಸ ಗೀತೆಗಳನ್ನು ರಚಿಸಿ ಹಾಡಿದರು. ಆದರೆ ಟ್ರೂಬೆಡೂರರ ಹಾಡುಗಳ ಸೊಗಸು, ನಯನಾಜೂಕು ಇವರ ಹಾಡುಗಳಿಗೆ ಬರಲಿಲ್ಲ. ನವೀನತೆಯಲ್ಲಿ ವೈವಿಧ್ಯದಲ್ಲಿ ಟ್ರೂಬೆಡೂರ್ ಕವಿಗಳ ಸಾಧನೆ ಇವರಿಗಿಂತ ಬಹಳ ಹೆಚ್ಚು.

ಕೊನೊನ್ ಡಿ ಬೆಥ್ಯೂನ್, ಹ್ಯೂಗ್ಯೂ ಡಿಬೆರ್ಜ್ ಮೊಟ್ಟಮೊದಲ ಟ್ರೂವೇರ್ ಕವಿಗಾಯಕರು. ಅವರ ಪ್ರಣಯಗೀತೆಗಳಲ್ಲಿ ದಕ್ಷಿಣದ ಪ್ರಭಾವ ವಿಪುಲವಾಗಿದೆ.

ಔತ್ತರೇಯ ಹಾಡುಗಬ್ಬಗಳಲ್ಲಿ ಮುಖ್ಯವಾದ ಮಾದರಿಗಳು ಮೂರು: ೧. ರೋಟ್ರುಯೆಂಜ್: ಪಲ್ಲವಿಯಿರುವ ಹಾಡು. ೨. ಸೆರ್ವೆಂಟೋಯ್: ದಕ್ಷಿಣದ ಸೆರ್ವೆಂಟಿಸ್ಗೂ ಇದಕ್ಕೂ ತುಂಬ ವ್ಯತ್ಯಾಸ. ಈ ಹಾಡಿನ ವಸ್ತುವೂ ಪ್ರಣಯವೇ ಆದರೂ ಇದರ ರೀತಿ ಹೆಚ್ಚು ಅಶ್ಲೀಲ. ೩. ಎಸ್ಟ್ರಾಬೊಟ್: ಇಟಲಿಯ ಸ್ಟ್ರ್ಯಾಂಬೊಟ್ಟೊಗೂ ಇದಕ್ಕೂ ನಿಕಟ ಸಂಬಂಧ.

ಷಾಂಪೆನನ ರಾಜರಕ್ಷಕಿ ಮೇರಿ, ಆಕೆಯ ಸೋದರಿ ಏಲಿಸ್, ಏಳನೆಯ ಲೂಯಿಯ ಎರಡನೆಯ ರಾಣಿ ಏಲಿಸ್ ಇವರ ಅತಿಶಯವಾದ ಪ್ರೋತ್ಸಾಹದಿಂದ ಟ್ರೂವೇರರ ಕಾವ್ಯಕ್ಕೆ ಸಮೃದ್ಧವಾದ ಬೆಳೆವಣಿಗೆ, ವೈಭವ ಲಭಿಸಿದುವು. ಶ್ರೇಷ್ಠ ಕವಿಗಳಾದ ಗೌಟಿಯರ್ ಡಿ ಅರಾಸ್, ಲೆ ಚಾಟ್ಲೇನ್ ಡಿ ಕಾನ್ಸಿ, ಕೊನೋನ್ ಡಿ ಬೆಥ್ಯೂನ್-ಇವರು ಬ್ಲಾಯಿಸ್ ಮತ್ತು ಪ್ಯಾರಿಸ್ ನಗರಗಳಲ್ಲಿ ಆಸ್ಥಾನಕವಿಗಳಾಗಿದ್ದರು. ಗೈಡಿ ಪೋಂಥ್ಯೂ, ಫಿಲಿಪ್ ಫ್ಲಾಂಡರ್ಸ್‌ ಆಸ್ಥಾನದ ಕವಿಗಾಯಕರಾಗಿದ್ದುದಲ್ಲದೆ ತಮ್ಮ ಪೋಷಕರಿಗೆ ಪಾಠ ಹೇಳುವ ಗುರುಗಳೂ ಆಗಿದ್ದರು.

ಮೂರನೆಯ ಕ್ರೂಸೇಡ್ ಕಾಲದಲ್ಲಿ ಆರಂಭವಾದ ಟ್ರೂವೇರರ ಕಾವ್ಯಪರಂಪರೆ ನಾಲ್ಕನೆಯ ಕ್ರೂಸೇಡ್ ಸಮಯಕ್ಕೆ ಜನಪ್ರಿಯತೆಯ ಶಿಖರವನ್ನೇರಿತು. ಅಂದರೆ ೧೩ನೆಯ ಶತಕದ ಮೊದಲ ೪೦ ವರ್ಷ ಈ ಪರಂಪರೆಯ ಸುವರ್ಣಕಾಲ. ಕೇವಲ ಶ್ರೀಮಂತರ ಹವ್ಯಾಸವಾಗಿದ್ದ ಹಾಡುಗಬ್ಬಗಳ ರಚನೆ ಕ್ರಮೇಣ ಯುವ ಸಾಮಾನ್ಯರ ಶ್ರದ್ಧಾಸಕ್ತಿಯನ್ನೂ ಸೆಳೆಯಿತು. ನವರ್ರೆಯ ನಾಲ್ಕನೆಯ ಥಿಬಾಟ್, ಬ್ಲಾಯಿಸ್ ನ ಲೂಯಿ, ಜೆರುಸಲೆಮಿನ ಜಾನ್ ಕಿಂಗ್ ಮೊದಲಾದ ಟ್ರೂವೇರರು ರಾಜ ಮನೆತನದವರಾಗಿದ್ದರು. ೧೨೩೦ರ ವೇಳೆಗೆ ಕೆಲವು ಶ್ರೀಮಂತರೂ ಕವಿಗಾಯಕರಾದರು. ಪ್ಯಾರಿಸ್ ಮತ್ತು ಬ್ಲಾಯಿಸ್ನ ರಾಜಾಶ್ರಯ ತಪ್ಪಿದ ಕೂಡಲೆ ಈ ಕಾವ್ಯಪದ್ಧತಿ ಅಳಿಯಿತು.

ಟ್ರೂವೇರ್ ಕಾವ್ಯಸೃಷ್ಟಿಗೆ ಆರ್ರಾಸ್ ಕೇಂದ್ರವಾಗಿತ್ತು. ಜಾಕ್ವೆಸ್ ಬ್ರಾಟೆಲ್, ಆಡಮ್ ಡಿ. ಲಾ. ಹಾಲ್ಲೆ ಚತುರ ಕವಿಗಳಾಗಿದ್ದರು. ೧೨೮೦ರಲ್ಲಿ ಈ ಕಾವ್ಯಪರಂಪರೆ ಹಠಾತ್ತನೆ ಅದೃಶ್ಯವಾಯಿತು. ಅದೊಂದು ಶಾಸ್ತ್ರ, ಅದೊಂದು ಧರ್ಮ ಎಂಬ ಹಾಗೆ ಪ್ರೇಮಾರಾಧನೆಯನ್ನೇ ಅನುಲ್ಲಂಘನೀಯ ವಿಧಿನಿಯಮಗಳಿಂದ ನಡೆಸಬೇಕಾದ ಒಂದು ಸಂಪ್ರದಾಯವನ್ನಾಗಿ ಸ್ಥಾಪಿಸಿದ ಪ್ರಣಯ-ಕವಿಗಳ ಈ ಕಾವ್ಯಕ್ಕೆ ಅಭಿನ್ನವಾದ ಅಂಗ ಎಂಬಷ್ಟು ಅನ್ಯೋನ್ಯ ಸಹಚರಿಯಾಯಿತು, ಸಂಗೀತ. ಈ ಹಾಡುಗಬ್ಬಗಳ ಸಂಗೀತ ಮಾಧುರ್ಯ ಪ್ರಾಚೀನ ಫ್ರೆಂಚ್ ಸಂಗೀತದಿಂದ ಉಗಮವಾದುದೆಂದು ಹೇಳುತ್ತಾರೆ. ಮಾಂಟ್ ಪೆಲಿಯರ್ನ ವೈದ್ಯ ವಿದ್ಯಾಪೀಠದಲ್ಲಿ ಸುಮಾರು ೩೪೫ ಟ್ರೂವೆರ್ ಹಾಡುಗಬ್ಬಗಳ ಹಸ್ತಪ್ರತಿಗಳನ್ನು ರಕ್ಷಿಸಿ ಇಟ್ಟಿದ್ದಾರೆ. (ಕೆ.ಬಿ.ಪಿ.)