ಕವಳೆಗವಿಗಳು
ಕವಳೆಗವಿಗಳು: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನಲ್ಲಿ ಹಳಿಯಾಳದಿಂದ ೩೦ಕಿಮೀ ದೂರದಲ್ಲಿ ಅಂಬಿಕಾನಗರದ ಬಳಿ ಇರುವ ನಾಗಝರಿ ವಿದ್ಯುದುತ್ಪಾದನಾ ಕೇಂದ್ರದ ಎದುರಿಗಿನ ಗವಿಗಳನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಎತ್ತರದ ಬೆಟ್ಟದ ಏಣಿನಲ್ಲಿರುವ ಈ ಗುಹೆಗಳು ಪ್ರಕೃತಿರಮ್ಯ ದೃಶ್ಯಗಳ ನಡುವೆ ಅಡಗಿವೆ. ಇಲ್ಲಿಗೆ ತಲುಪಲು ಎರಡು ಮಾರ್ಗಗಳಿವೆ. ಒಂದು, ನಾಗಝರಿ ತೊರೆಹಾಯ್ದು ಮೆಟ್ಟಿಲುಗಳನ್ನು ಹತ್ತಿ ಬರುವ ಮಾರ್ಗ. ಇನ್ನೊಂದು, ಪಣಸೊಳ್ಳಿ ಮಾರ್ಗದಲ್ಲಿ ದಾಂಡೇಲಿ ಮೃಗಧಾಮವನ್ನು ದಾಟಿ ಬರುವ ಮಾರ್ಗ. ಈ ಮಾರ್ಗದಲ್ಲಿ ಬಂದರೆ ೧೨ಕಿಮೀ ದೂರ ಕ್ರಮಿಸಬೇಕು ಹಾಗೂ ಮೆಟ್ಟಿಲುಗಳನ್ನು ಹತ್ತಬೇಕು. ಕಡಿದಾದ ಬಂಡೆಯ ಮಧ್ಯದಲ್ಲಿ ಸುಂದರ ಗವಿಗಳ ಸಮೂಹ ಗೋಚರಿಸುತ್ತದೆ. ಇದರ ಪ್ರವೇಶದ್ವಾರ ೪ಮೀ ಎತ್ತರ ಮತ್ತು ಅಷ್ಟೇ ಸುತ್ತಳತೆ ಹೊಂದಿದೆ. ಆದರೆ ನಿಜವಾದ ಕಿಂಡಿ ಕೇವಲ ೯೦ಸೆಂಮೀನಷ್ಟು ಎತ್ತರದ್ದಾಗಿದ್ದು, ಇದರ ಮೂಲಕ ಎಚ್ಚರಿಕೆಯಿಂದ ಸು.೯ಮೀನಷ್ಟು ತೆವಳಿಕೊಂಡು ಕ್ರಮಿಸಿದರೆ ಒಂದು ಹಜಾರದಂತಹ ಜಾಗಕ್ಕೆ ತಲುಪಬಹುದು. ಅಲ್ಲಿ ಮಧ್ಯದಲ್ಲಿ ಒಂದು ದೊಡ್ಡ ಶಿವಲಿಂಗವಿದೆ. ಇದು ಸುಮಾರು ಒಂದು ಮೀಟರ್ನಷ್ಟು ಎತ್ತರವಾಗಿದೆ. ಇದನ್ನು ಸ್ಥಳೀಯರು ಕವಳೆಲಿಂಗ ಎಂದು ಕರೆಯುತ್ತಾರೆ. ಇದಕ್ಕೆ ನಿತ್ಯ ಪೂಜೆ ನಡೆಯುತ್ತದೆ. ಶಿವಲಿಂಗದ ಹಿಂಭಾಗದಲ್ಲಿ ಒಂದು ಪ್ರತ್ಯೇಕ ಗವಿಯಿದ್ದು ಇಲ್ಲಿಂದ ಹೊರಗೆ ಹೋಗಬಹುದು. ಈಗ ಗವಿಯೊಳಗೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ಈ ಸ್ಥಳಕ್ಕೆ ಪುರಾಣ, ಐತಿಹ್ಯಗಳೂ ಇವೆ. ಒಮ್ಮೆ ಶಿವ ಶನಿಯಿಂದ ಪೀಡಿಸಲ್ಪಟ್ಟಾಗ ಇಲ್ಲಿಗೆ ಬಂದು ಅಡಗಿದ್ದನಂತೆ. ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದು ಈ ಶಿವಲಿಂಗವನ್ನು ಪೂಜಿ ಸಿದ್ದರೆಂದು ಐತಿಹ್ಯ. ಇತ್ತೀಚೆಗೆ ಗವಿಯ ಹೊರಗಡೆ ಗಣಪತಿ ಹಾಗೂ ಕಾರ್ತಿಕೇಯನ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. (ಎಸ್.ಎಚ್ಇ.)