ಕವಲಾಹಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಲಾಹಾರ : ಕವಲ (ಕವಳ) ಎಂದರೆ ತುತ್ತು. ಆಹಾರವನ್ನು ತೆಗೆದುಕೊಳ್ಳವಾಗ ಒಂದು ಊಟದಲ್ಲಿ ಎಷ್ಟು, ಕವಲಗಳಿರಬೇಕೆಂಬುದನ್ನು ಧಾರ್ಮಿಕವಾಗಿ ಇಲ್ಲಿ ಪರಿಶೀಲಿಸಿದೆ. ಕವಾಲಾಹಾರದಲ್ಲಿ ಎರಡು ಬಗೆಯುಂಟು_ಆಧಿಹರ ಮತ್ತು ವ್ಯಾಧಿಹರ ಎಂಬುದಾಗಿ. ಮನಸ್ಸು, ಬುದ್ಧಿ, ಜೀವಗಳಿಗೆ ಸಂಬಂಧವಾದ ನೋವುಗಳನ್ನು ತೆಗೆದು ಅವುಗಳ ಮೂಲಕ ಸುಖಹೇತುವಾದುದು ಆಧಿಹರ. ದೇಹ, ಇಂದ್ರಿಯಗಳಲ್ಲಿ ಒದಗುವ ನೋವನ್ನು ತೆಗೆದು ಆ ಮೂಲಕ ಸುಖಕಾರಿಯಾಗುವುದು ವ್ಯಾಧಿಹರ. ಒಬ್ಬ ಜೀವಿ ದೇಹ, ಇಂದ್ರಿಯ, ಮನಸ್ಸು, ಬುದ್ಧಿ, ಜೀವಗಳ ಸಮಷ್ಟಿಯಾಗಿಯೇ ಬಾಳಬೇಕಾದುದರಿಂದ ಎರಡೂ ಬಗೆಯ ಕವಲಾಹಾರ ಅವನಿಗೆ ಬೇಕಾಗುವುದು. ಆ+ಹ್ರಿಯತೆ ಇತಿ ಆಹಾರಃ ; ಅಂದರೆ ಮನಸ್ಸು, ಬುದ್ಧಿ, ಇಂದ್ರಿಯ ಮತ್ತು ದೇಹಗಳಿಂದ ತನ್ನೆಡೆಗೆ ಯಾವುದನ್ನು ವ್ಯಕ್ತಿ ಸೆಳೆದುಕೊಳ್ಳುವನೋ ಅದು. ಇದು ಹಿತಕರವೂ ಕೇವಲ ಪ್ರಿಯಕರವೂ ಆಗಬಹುದು. ಹಿತಕರವನ್ನು ಮಾತ್ರ ಇಲ್ಲಿ ಹೇಳಿದೆ. ಇದು ಶ್ರುತಿ, ಸ್ಮೃತಿ, ಸಂಪ್ರದಾಯಗಳಂತೆಯೂ ಬೇರೆ ಸಂಪ್ರದಾಯಗಳಂತೆಯೂ ಎರಡೂ ಬಗೆಯಾಗಿ ಕಾಣಬರುತ್ತದೆ. ಸಾಧಾರಣವಾಗಿ ಮುನಿಯಾಗಿ ಅಂದರೆ ಮನನಶೀಲನಾಗಿ ಬಾಳುವವನಿಗೆ ಅವನ ನಿಸರ್ಗದ ತಾತ್ತ್ವಕವಾದ ಒಳಗುಟ್ಟನ್ನು ಚಿಂತಿಸಲು ಸಪ್ತಧಾತುಮಯ ಮತ್ತು ತ್ರಿದೋಷಮಯ ತ್ರಿನಾಡೀಮಯವಾದ ಈ ದೇಹ ಯಾವ ಬಗೆಯಲ್ಲಿದ್ದರೆ ಮಾತ್ರ ತನ್ನ ಮುಖ್ಯ ಲಕ್ಷ್ಯವಾದ ಮನನಕಾರ್ಯ ಸಾಗೀತು ಎಂಬುದನ್ನು ಆಳವಾಗಿ ಅಧ್ಯಯನ ಮಾಡಿ ಅದಕ್ಕೆ ಹೊಂದಿಕೊಳ್ಳುವ ತೆರದಲ್ಲಿ ಯಥೋಚಿತವಾದ ಕ್ಲುಪ್ತಾಹಾರ, ವಿಹಾರಗಳು ಅನಿವಾರ್ಯವಾಗುವುದು.

ಅಲ್ಲಿ ಸಾಮಾನ್ಯವಾಗಿ ಅಷ್ಟಾ ಗ್ರಾಸಾಃ ಮುನೇಃ ಭಕ್ಷ್ಯಾಃ_ಅಂದರೆ ಎಂಟು ಕವಲುಗಳು ಮಾತ್ರ ಮುನ್ಯಾಹಾರವಾಗುವುದು. ಅಲ್ಲದೇ ವಿಶೇಷವಾಗಿ ಚಾಂದ್ರಾಯಣ ಎಂಬ ವ್ರತಕ್ಕೆ ಸಂಬಂಧಪಟ್ಟಂತೆ ಮುನಿಯ ಕವಲಾಹಾರ ಕೃಷ್ಣಪಕ್ಷ ಪ್ರಥಮಾ ತಿಥಿಯಂದು ೧೫ ಕವಲದಿಂದ ಪ್ರಾರಂಭವಾಗಿ ಪ್ರತಿದಿನ ಒಂದೊಂದು ತುತ್ತು ಕಡಿಮೆಯಾಗುತ್ತ ಅಮಾವಾಸ್ಯೆಯಂದು ಅನಾಹಾರವಾಗಿದ್ದು ಮತ್ತೆ ಶುಕ್ಲಪಕ್ಷ ಪ್ರಥಮಾ ತಿಥಿಯಂದು ಒಂದು ಕವಲದಂತೆ ಪ್ರಾರಂಭಾಗಿ ಪ್ರತಿದಿನ ಒಂದೊಂದು ತುತ್ತು ಹೆಚ್ಚುತ್ತ ಪೂರ್ಣಿಮೆಯಂದು ೧೫ ಕವಲವಾಗಿ ಮೂವತ್ತು ದಿನಗಳಲ್ಲಿ ಈ ವ್ರತ ಸಮಾಪ್ತಿಯಾಗುವುದು. ಇದು ಪಿಪೀಲಿಕಾಮಧ್ಯ ಚಾಂದ್ರಾಯಣ. ಅಂದರೆ ಇರುವೆಯ ದೇಹಾಕೃತಿಯಂತೆ ಮಧ್ಯೆ ಕ್ಷೀಣವಾಗಿರುವುದು. ಅಂತೆಯೇ ಶುಕ್ಲಪಕ್ಷ ಪ್ರಥಮೆಯಂದು ಒಂದು ಕವಲದಿಂದ ಪ್ರಾರಂಭಿಸಿ ದಿನವೂ ಒಂದೊಂದು ಕವಲ ಹೆಚ್ಚುತ್ತ ಪೂರ್ಣಿಮೆಯಂದು ೧೫ ಕವಲ ಪುರ್ತಿ ಸ್ವೀಕರಿಸಿ ಮತ್ತೆ ಒಂದೊಂದು ಕವಲವಾಗಿ ಕ್ಷೀಣವಾಗುತ್ತ ಅಮಾವಾಸ್ಯೆಯಂದು ನಿರಾಹಾರವಾಗಿರುವುದು. ಇದು ಯವಮಧ್ಯಚಾಂದ್ರಾಯಣ. ಅಂದರೆ ಯವದಂತೆ (ಗೋಧಿ) ಮಧ್ಯಭಾಗ ಸ್ಥೂಲವಾಗುವುದು.

  • ಮಾಸಸ್ಯ ಕೃಷ್ಣಪಕ್ಷಾದೌ ಗ್ರಾಸಾನದ್ಯಾಚ್ಚತುರ್ದಶ |
  • ಗ್ರಾಸಾಪಚಯಭೋಜೀ ಸ್ಯಾತ್ ಪಕ್ಷಶೇಷಂ ಸಮಾಪಯೇತ್ ||
  • ಏವಂ ಹಿ ಶುಕ್ಲಪಕ್ಷಾದೌ ಗ್ರಾಸಮೇಕಂ ತು ಭಕ್ಷಯೇತ್ |
  • ಗ್ರಾಸೋಪಚಯಭೋಜೀ ಸ್ಯಾತ್ ಪಕ್ಷಶೇಷಂ ಸಮಾಪಯೇತ್ || (ವಸಿಷ್ಠಸ್ಮೃತಿ)

ಅಂತೆಯೇ ಜೈನ ಸಂಪ್ರದಾಯದ ಪ್ರಕಾರ ಆಹಾರವನ್ನು ಹೀಗೆ ಆರು ಬಗೆಯಾಗಿ ವಿಂಗಡಿಸಲಾಗಿದೆ: ನೋಕರ್ಮಾಹಾರ, ಕರ್ಮಾಹಾರ, ಓಜಾಹಾರ, ಮಾನಸಾಹಾರ, ಲೇಪ್ಯಾಹಾರ ಮತ್ತು ಕಬಲಾಹಾರ. ಶರೀರಗಳನ್ನು ಮೂರು ಬಗೆಯಾಗಿ ವಿಂಗಡಿಸಲಾಗಿದೆ-ಔದರಿಕ, ಕಾರ್ಮಣ, ತೈಜಸ ಎಂದು. ಆಯಾ ಶರೀರಗಳಿಗೆ ಯೋಗ್ಯವಾದ ಪುದ್ಗಲ ಪಿಂಡವನ್ನು ಗ್ರಹಿಸುವುದೇ ಆಹಾರ. ಸಮಸ್ತ ಜೀವರಾಶಿಗಳಿಗೂ ಮೊದಲ ಎರಡು ಆಹಾರ ಬೇಕಾಗುತ್ತದೆ. ಏಕೇಂದ್ರಿಯ ಮಾತ್ರದಿಂದ ಬಾಳುವ ಜೀವಿಗಳಿಗೆ ಲೇಪ್ಯಾಹಾರ ಗ್ರಾಹ್ಯ. ಅಂಡಾವಸ್ಥೆಯಲ್ಲಿ ಬೆಳೆಯುವ ಜೀವಿಗಳಿಗೆ ಓಜಾಹಾರ ಅವಶ್ಯ. ದೇವತೆಗಳಿಗೆಲ್ಲ ಮಾನಸಾಹಾರ ಗ್ರಾಹ್ಯ. ಸಿದ್ಧರೆಲ್ಲ ನಿರಾಹಾರಿಗಳು. ಅವರಿಗೆ ಆಹಾರ ನಿವೃತ್ತಿಯಾಗುವುದು. ಇನ್ನು ನಾರಕಿಗಳು, ತಿರ್ಯಕ್ಕುಗಳು, ಮನುಷ್ಯರು ಇವರಿಗೆಲ್ಲ ಕವಲಾಹಾರ ಬೇಕಾಗುತ್ತದೆ. ಅವರಲ್ಲಿ ಮುಕ್ತಿಗಾಗಿ ಸಮ್ಯಜ್ಞಾನ, ಸಮ್ಯದ್ದರ್ಶನ, ಸಮ್ಯಕ್ಚಾರಿತ್ರಗಳಲ್ಲಿ ತೊಡಗಿದ ವ್ರತಿಮುನಿಗಳಿಗೆ ಕವಲಾಹಾರದ ನಿಯಮ ಅವಜರ್ಯ್‌ವಾಗುತ್ತದೆ. ಇಲ್ಲಿ ಕವಲಾಹಾರ ಮತ್ತು ಮುನ್ಯಾಹಾರಗಳು ಪರ್ಯಾಯ ಪದಗಳು. ಈ ಬಗ್ಗೆ ಭಗವತೀ ಸೂತ್ರವೆಂಬ ಜೈನಾಗಮ ಗ್ರಂಥದಲ್ಲಿ ಹೀಗೆ ಹೇಳಿದೆ; ಮುನಿಯಾದವನಿಗೆ ಅತ್ಯಧಿಕವಾದ ಆಹಾರವೆಂದರೆ ಮೂವತ್ತೆರಡು ಕವಲಗಳು. ಅದೇ ಸಾಧ್ವಿಯಾದವಳಿಗೆ (ಆರ್ಯಿಕಾ) ಇಪ್ಪತ್ತೆಂಟು ಕವಲಗಳು. ಒಂದೊಂದು ಕವಲದಲ್ಲಿ ೫೦ ಅಗುಳುಗಳು ಮಾತ್ರ ಇರತಕ್ಕುದು. ಶ್ವೇತಾಂಬರ ಮತ್ತು ದಿಗಂಬರ ಜೈನ ಸಂಪ್ರದಾಯಗಳಲ್ಲಿನ ಮೂರು ಭೇದಗಳಲ್ಲಿ ಇದು ಒಂದಾಗಿದೆ.

ಇನ್ನು ವ್ಯಾಧಿಹರ ಕವಲಾಹಾರದ ವಿಷಯ. ಆಯುರ್ವೇದದಲ್ಲಿ ವಾತ, ಪಿತ್ತ ಮತ್ತು ಕಫಗಳ ಪ್ರಕೋಪದಿಂದ ಒದಗುವ ದೋಷಗಳನ್ನೂ ನಿವಾರಿಸಲು ಈ ಆಹಾರವನ್ನು ಚಿಕಿತ್ಸೆಯಾಗಿ ಹೇಳಿದೆ. ಅದಕ್ಕೆ ಯೋಗ್ಯವಾದ ದ್ರವ್ಯಗಳನ್ನು ಬಾಯಲ್ಲಿಟ್ಟುಕೊಂಡು ಚೆನ್ನಾಗಿ ಅಗಿದು ಅನಂತರ ಉಗಿಯಬೇಕು. ಈ ಕ್ರಿಯೆ ನಾಲಗೆಯ ಅರೋಚಕತ್ವವನ್ನು ಕಳೆದು ಒಳ್ಳೆಯ ಹಸಿವು ಬಾಯಾರಿಕೆಗಳನ್ನುಂಟು ಮಾಡಿ, ಮುಖ ಶುದ್ಧಿಯನ್ನು ದೊರಕಿಸಿ, ಹಲ್ಲುಗಳಲ್ಲಿ ದಾಢರ್ಯ್‌ವನ್ನು ಕೊಡುತ್ತದೆಯೆಂದು ಹೇಳಿದೆ. ವಾತಪಿತ್ತಕಫಘ್ನಸ್ಯ ದ್ರವ್ಯಸ್ಯ ಕವಲಂ ಮುಖೇ |

  • ಅರ್ಧಂ ನಿಕ್ಷಿಪ್ಯ ಸಂಡವರ್ಯ್‌ ನಿಷ್ಠೀವೇತ್ ಕವಲೇ ವಿಧಿಃ ||
  • ಕವಲಃ ಕುರುತೇ ಕಾಂಕ್ಷಾಂ ಭಕ್ಷೇಷು, ಹರತೇ ಕಫಂ |
  • ತೃಷ್ಣಾಂ ಶೌಚಂ ಚ ವೈರಸ್ಯಂ ದಂತಚಾಲಂ ಚ ನಾಶಯೇತ್ ||
  • ಅತಿಕೃಚ್ಛ್ರಾದಿ ಕೆಲವು ಕಠಿಣ ವ್ರತಗಳಲ್ಲೂ ನಿಯಮಿತ ಆಹಾರದ ಕಟ್ಟಲೆ ಇದೆ. (ನೋಡಿ- ಕಠಿಣ ವ್ರತಗಳು) (ಎನ್.ಎಸ್.ಆರ್.ಬಿ.)
"https://kn.wikipedia.org/w/index.php?title=ಕವಲಾಹಾರ&oldid=615416" ಇಂದ ಪಡೆಯಲ್ಪಟ್ಟಿದೆ