ಕಲ್ಲುಮಚ್ಚು

ವಿಕಿಪೀಡಿಯ ಇಂದ
Jump to navigation Jump to search

ಕಲ್ಲುಮಚ್ಚು : ಪೂರ್ವಶಿಲಾಯುಗದ ಪ್ರಾರಂಭಕಾಲದಲ್ಲಿ ಆದಿಮಾನವರು ಉಪಯೋಗಿಸುತ್ತಿದ್ದ, ಉಂಡೆಕಲ್ಲುಗಳ ಒಂದು ಪಕ್ಕವನ್ನು ಕೆತ್ತಿ ಮಾಡಿದ ಚೂಪಾದ ಅಂಚುಳ್ಳ ಉಪಕರಣ (ಚಾಪರ್). ಮೊತ್ತಮೊದಲಿಗೆ ಪ್ಲಿಸ್ಟೊಸೀನ್ ಯುಗದ ಆದಿಯಲ್ಲಿ ಕಲ್ಲುಮಚ್ಚು ಆಫ್ರಿಕದ ಪೂರ್ವಮಧ್ಯಭಾಗಗಳಲ್ಲಿ ಬಳಕೆಯಲ್ಲಿತ್ತು. ಇದು ಓಲ್ಡೋವನ್ ಸಂಸ್ಕೃತಿಗೆ ಸೇರುತ್ತದೆ. ಅನಂತರ ಮಧ್ಯ ಪ್ಲಿಸ್ಟೊಸೀನ್ ಕಾಲದಲ್ಲಿ ವಾಯವ್ಯಭಾರತದ ಸೋಹನ್ ನದೀಕಣಿವೆಯಲ್ಲಿದ್ದ ಸೋಹನ್ ಸಂಸ್ಕೃತಿ, ಮಯನ್ಮಾರ್ ಇರವಾಡಿ ನದೀಕಣಿವೆಯ ಅನ್ಯಾಥಿಯನ್ ಸಂಸ್ಕೃತಿ, ಚೀನದ ಪೀಕಿಂಗ್ ಬಳಿಯ ಚೌಕೂಟಿಯನ್ ಗುಹೆಗಳಲ್ಲಿಯ ಸಂಸ್ಕೃತಿ ಮತ್ತು ಜಾವದ ಪಜ್ಜಿಟೀನಿಯನ್ ಸಂಸ್ಕೃತಿ_ಇವುಗಳಲ್ಲಿ ಕಲ್ಲುಮಚ್ಚು ಪ್ರಮುಖ ಆಯುಧವಾಗಿತ್ತು. ಈ ಸಂಸ್ಕೃತಿಗಳನ್ನು ಉಂಡೆಕಲ್ಲಿನ ಉಪಕರಣಗಳ ಸಂಸ್ಕೃತಿಗಳೆಂದು ಕರೆಯಲಾಗಿದೆ. ಪೂರ್ವಮಧ್ಯ ಆಫ್ರಿಕಗಳಲ್ಲಿ ಸ್ವಲ್ಪ ಕಾಲಾನಂತರ ಉಪಕರಣ ತಯಾರಿಕೆಯ ರೀತಿ ಸುಧಾರಿತವಾಗಿ ಕಲ್ಲು ಮಚ್ಚು ಕ್ರಮೇಣ ಕೈಗೊಡಲಿಯಾಗಿ ಮಾರ್ಪಾಟಾಯಿತು. ಆದರೆ ಏಷ್ಯದಲ್ಲಿ ಈ ಸಂಸ್ಕೃತಿಗಳು ದೀರ್ಘಕಾಲ ಅದೇ ಅವಸ್ಥೆಯಲ್ಲುಳಿದಿದ್ದು, ಪ್ಲಿಸ್ಟೊಸೀನ್ ಯುಗದ ಅಂತ್ಯದ ವರೆಗೂ ಬಳಕೆಯಲ್ಲಿದ್ದುವು. ಈ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿದ್ದ ಚಕ್ಕೆಕಲ್ಲಿನ ಉಪಕರಣಗಳು ಕ್ರಮೇಣ ಪ್ರಾಬಲ್ಯ ಹೊಂದಿ ಉಂಡೆಕಲ್ಲಿನ ಉಪಕರಣಗಳ ಸಂಸ್ಕೃತಿಗಳನ್ನು ಅಂತ್ಯಗೊಳಿಸಿದುವು. (ಬಿ.ಕೆ.ಜಿ.)