ಕಲ್ಲುಗುಡ್ಡೆ ಸಮಾಧಿಗಳು
ಗೋಚರ
ಕಲ್ಲುಗುಡ್ಡೆ ಸಮಾಧಿಗಳು : ಸತ್ತವರ ಸಮಾಧಿಗಳ ಮೇಲೆ ಕಲ್ಲುಚೂರುಗಳ ಗುಡ್ಡೆಯನ್ನು (ಕೇರ್ನ್ಸ್ ) ಏರಿಸುವುದು ಬಹು ಪ್ರಾಚೀನ ಕಾಲದಿಂದಲೂ ಬಂದ ಒಂದು ಸಂಪ್ರದಾಯ. ಇಂಥ ಸಮಾಧಿಗಳಲ್ಲಿ ಹೆಣವನ್ನು ಆಳವಾದ ಹಳ್ಳದಲ್ಲಿ ಹುಗಿದು ನೆಲಮಟ್ಟದವರೆಗೆ ಮಣ್ಣು ಮುಚ್ಚಿ, ಮೇಲೆ ಹಳ್ಳದ ಸುತ್ತಲೂ ದೊಡ್ಡ ಗುಂಡುಗಳನ್ನು ವರ್ತುಲಾಕಾರವಾಗಿ ಇಟ್ಟು, ಮಧ್ಯದ ಜಾಗದಲ್ಲಿ ಕಲ್ಲು ಚೂರುಗಳನ್ನು ಗೋಪುರಾಕಾರವಾಗಿ ತುಂಬುತ್ತಿದ್ದರು. ಇಂಥ ಸಮಾಧಿಗಳು ಬ್ರಿಟನ್ನಿನಿಂದ ಹಿಡಿದು ದಕ್ಷಿಣ ಭಾರತದವರೆಗೆ ಯುರೋಪ್ ಮತ್ತು ಏಷ್ಯದ ಹೆಚ್ಚಿನ ದೇಶಗಳಲ್ಲಿ ಬೆಳಕಿಗೆ ಬಂದಿವೆ. ಯುರೋಪ್ ಮತ್ತು ಏಷ್ಯದ ಈ ರೀತಿಯ ಬಹುತೇಕ ಸಮಾಧಿಗಳು ನವಶಿಲಾ ಮತ್ತು ಕಂಚಿನ ಯುಗಗಳಿಗೆ ಸೇರಿದವುಗಳಾದರೆ ಭಾರತದಲ್ಲಿ ಕಬ್ಬಿಣಯುಗಕ್ಕೆ ಸೇರಿದವು.
ಬಾಹ್ಯ ಲಕ್ಷಣ
[ಬದಲಾಯಿಸಿ]- ಈ ಕಲ್ಲುಗುಡ್ಡೆ ಸಮಾಧಿಗಳ ವ್ಯಾಪ್ತಿಯ ಪ್ರದೇಶ ಮತ್ತು ಕಾಲ ಬಹು ವಿಸ್ತಾರವಾಗಿರುವುದರಿಂದ ಪ್ರದೇಶ ಪ್ರದೇಶಕ್ಕೂ ಕಾಲ ಕಾಲಕ್ಕೂ ಇವುಗಳ ರೀತಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬರುತ್ತವೆ. ಯುರೋಪ್ ಮತ್ತು ಉತ್ತರ ಏಷ್ಯದ ಸಮಾಧಿಗಳೆಲ್ಲ ಒಬ್ಬೊಬ್ಬ ವ್ಯಕ್ತಿಗೇ ಮೀಸಲಾದವು ಗಳಾಗಿದ್ದು, ಅವುಗಳಲ್ಲಿ ಹೆಣದ ಜೊತೆಗೆ ಅನೇಕ ಪಾತ್ರೆ, ಪದಾರ್ಥಗಳು, ಕೆಲವೊಮ್ಮೆ ಅವನು ಉಪಯೋಗಿಸುತ್ತಿದ್ದ ಆಯುಧಗಳು, ರಥ ಮುಂತಾದ ಸಲಕರಣೆಗಳನ್ನೂ ಹುಗಿದಿರುವುದು ಕಂಡು ಬರುತ್ತದೆ. ಕೆಲವು ವೇಳೆ ಹೆಣವನ್ನು ಮರದ ಪೆಟ್ಟಿಗೆಗಳಲ್ಲಿ ಹಾಕಿ, ಹಳ್ಳದಲ್ಲಿಟ್ಟಿದ್ದುದೂ ಉಂಟು. *ಆದರೆ ಭಾರತದ ಕಲ್ಲುಗುಡ್ಡೆ ಸಮಾಧಿಗಳಲ್ಲಿ ಸತ್ತ ವ್ಯಕ್ತಿಯ ದೇಹ ಪೂರ್ಣವಾಗಿ ಇರುವುದೇ ಅಪರೂಪ. ಇದುವರೆಗೆ ಪರೀಕ್ಷಿಸಿರುವ ಪುರಾತನ ಸಮಾಧಿಗಳಲ್ಲಿ ಸಾಮಾನ್ಯವಾಗಿ ಹೆಣವನ್ನು ಬೇರೆಲ್ಲಿಯೋ ಇಟ್ಟಿದ್ದು ಕೆಲವು ದಿನಗಳ ಅನಂತರ ಅದರಲ್ಲುಳಿದ ಕೆಲವು ಎಲಬುಗಳನ್ನಷ್ಟೇ ತಂದು ಈ ಸಮಾಧಿಗಳಲ್ಲಿ ಹೂತಿಟ್ಟಂತೆ ಕಾಣುತ್ತದೆ. ಕೆಲವೊಮ್ಮೆ ಒಂದೇ ಸಮಾಧಿಯಲ್ಲಿ ಅನೇಕ ವ್ಯಕ್ತಿಗಳ ಎಲಬುಗಳು ಇರುವುದೂ ಉಂಟು. ಭಾರತದ ಕಲ್ಲುಗುಡ್ಡೆ ಸಮಾಧಿಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದಲ್ಲಿ ಕಂಡುಬಂದಿವೆ.
- ಇಲ್ಲಿಯ ಕಲ್ಲುಗುಡ್ಡೆ ಸಮಾಧಿಗಳಲ್ಲಿ ವ್ಯಕ್ತಿಯ ಅವಶೇಷಗಳನ್ನು ಬರಿಯ ಹಳ್ಳದಲ್ಲೋ ಕೆಲವು ಸಲ ಶಿಲಾತೊಟ್ಟಿಗಳಲ್ಲೋ ಒಮೊಮ್ಮೆ ಮಣ್ಣಿನ ಜಾಡಿಗಳಲ್ಲೋ ಇಟ್ಟಿರುವುದುಂಟು. ಮೇಲ್ಭಾಗದಲ್ಲಿ ಕಲ್ಲುಗುಡ್ಡೆಯನ್ನು ಸುತ್ತುವರಿದ ಶಿಲಾವರ್ತುಲ ಸಾಮಾನ್ಯವಾಗಿ ಕಂಡುಬಂದರೂ ಕೆಲವು ಸಂದರ್ಭದಲ್ಲಿ ವರ್ತುಲವಿಲ್ಲದೆ ಬರಿಯ ಕಲ್ಲುಗುಡ್ಡೆಯಷ್ಟೇ ಇರುವುದೂ ಉಂಟು. ಈಗಲೂ ಕೆಲವು ಪಂಗಡಗಳವರು ಸಮಾಧಿಗಳ ಮೇಲೆ ಚಿಕ್ಕ ಕಲ್ಲುಗಳನ್ನು ಪೇರಿಡುವ ರೂಢಿ ಈ ಪ್ರಾಚೀನ ಸಂಪ್ರದಾಯದ ಅವಶೇಷವಿದ್ದಂತೆ ಕಾಣುತ್ತದೆ. (ಎಸ್.ಎನ್.)
- ಈಜಿಪ್ಟಿನ ಮಮ್ಮಿ ಪಿರಮಿಡ್ಡುಗಳ ಮೂಲ ಇವುಗಳಿರಬಹುದೆಂದು ನಂಬಲಾಗಿದೆ. ಸಮಾಧಿ ಕಟ್ಟುವುದು ಗೊತ್ತಿರದ ಕಾಲದಲ್ಲಿ ಇಂತಹ ಸಮಾಧಿಗಳು ಸಾಕಷ್ಟು ಕಡೆ ಇರುವುದು ಗೋಚರಿಸುತ್ತವೆ.