ವಿಷಯಕ್ಕೆ ಹೋಗು

ಕಲ್ಲುಗಳು, ವೈದ್ಯದಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಲುಗಳು, ವೈದ್ಯದಲ್ಲಿ: ರಾಸಾಯನ ಕ್ರಿಯೆಯ ವೈಪರೀತ್ಯಗಳಿಂದಾಗಿ ದೇಹದ ಅನೇಕ ಭಾಗಗಳಲ್ಲಿ ಕಲ್ಲುಗಳಂತೆ ಗಟ್ಟಿಯಾಗಿ ಪ್ರಕಟವಾಗುವ ಲವಣ ಶೇಖರಣೆಗಳು (ಕ್ಯಾಲ್ಕುಲಸ್). ಕಲ್ಲುಗಳು ಮೂತ್ರಜನಕಾಂಗ, ಪಿತ್ತಕೋಶ, ಮೇದೋಜೀರಕ ಗ್ರಂಥಿಯಲ್ಲಿ ಕಾಣಿಸಿಕೊಳ್ಳಬಹುದು. ಅದೇ ತೆರನಾಗಿ ಜೊಲ್ಲುಗ್ರಂಥಿ, ಶುಕ್ಲಗ್ರಂಥಿ ಮತ್ತು ಶ್ವಾಸನಾಳಗಳಲ್ಲಿ ಉಂಟಾಗಬಹುದು. ಮೂತ್ರ ಕಲ್ಲು : ಮೂತ್ರಜನಕಾಂಗ, ಮೂತ್ರನಾಳ, ಮೂತ್ರಕೋಶ ಇಲ್ಲವೇ ಮೂತ್ರ ವಿಸರ್ಜನಾ ನಾಳದಲ್ಲಿ ಇದು ತಲೆದೋರಬಹುದು, ಇಲ್ಲವೇ ಮೂತ್ರಜನಕಾಂಗದಲ್ಲಿ ಉಂಟಾದ ಕಲ್ಲುಗಳು ಉಳಿದೆಲ್ಲ ಭಾಗಗಳಿಗೆ ಹರಿದು ಬರಬಹುದು. ಅದೇ ಸಾಮಾನ್ಯವಾಗಿ ಕಂಡುಬರುವ ರೀತಿ.

ಮೂತ್ರಜನಕಾಂಗದಲ್ಲಿ ಕಲ್ಲು

[ಬದಲಾಯಿಸಿ]

ಆಹಾರದಲ್ಲಿ ವಿಟಮಿನ್ ಎ ಯ ಅಭಾವದಿಂದಾಗಿ ಮೂತ್ರಜನಕಾಂಗದ ಒಳಮೈಯ ಮೇಲ್ಪದರ ಹಾನಿಯಾಗಿ ಕಲ್ಲು ತಲೆದೋರಲು ಬುನಾದಿಯನ್ನು ಒದಗಿಸುತ್ತದೆ. ಮೂತ್ರದಲ್ಲಿ ಸಿಟ್ರೇಟಿನ ಅಂಶದ ಇಳುವರಿ, ಸ್ಟ್ರೆಪ್ಟೊಕಾಕಸ್, ಸ್ಟೆಫೈಲೋಕಾಕಸ್, ಪ್ರೋಟಿಯಸ್ ಮತ್ತು ಇ, ಕೋಲೈ ಜೀವಾಣುಗಳ ಬೆಳವಣಿಗೆ, ಮೂತ್ರದ ಚಲನೆಗೆ ಉಂಟಾಗುವ ಅಡ್ಡಿ, ಧೀರ್ಘಕಾಲ ಹಾಸಿಗೆ ಹಿಡಿದು ಮಲಗಿದಾಗ ಮೂಳೆಗಳಲ್ಲಿ ಕ್ಯಾಲ್ಸಿಯಮಿನ ಮಟ್ಟ ಕಡಿಮೆಯಾಗಿ ಮೂತ್ರದಲ್ಲಿ ಅದರ ಅಂಶದ ಏರಿಕೆ ಮತ್ತು ಥೈರಾಯ್ಡ್‌ ಗ್ರಂಥಿಯ ಕಾರ್ಯದಲ್ಲಿ ಹೆಚ್ಚಳ-ಇವು ಕಲ್ಲಿನ ಬೆಳೆವಣಿಗೆಗೆ ಚಾಲನೆಯನ್ನು ಕೊಡುತ್ತವೆ. ಇಲ್ಲಿನ ಕಲ್ಲುಗಳಲ್ಲಿ ಆಕ್ಸಲೇಟ್, ಫಾಸ್ಫೇಟ್, ಯೂರಿಕ್ ಆಮ್ಲ ಮತ್ತು ಸಿಸ್ಟಿನ್ ಕಲ್ಲುಗಳು ಮುಖ್ಯವಾದವು.

ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ಒರಟಾಗಿ, ಮೊನಚಾದ ಮೇಲ್ಮೈಯನ್ನು ಹೊಂದಿ ಉಪ್ಪುನೇರಳೆಯಂತೆ ತೋರಿಬರುತ್ತವೆ. ಅದರಿಂದಾಗಿ ರಕ್ತನಾಳಗಳಿಗೆ ಧಕ್ಕೆಯುಂಟಾಗಿ ಸಾಮಾನ್ಯವಾಗಿ ರಕ್ತೋದ್ರೇಕ ಉಂಟಾಗುವುದು. ರಕ್ತದ ಅಂಶಗಳು ಕಲ್ಲಿನ ಮೇಲೆ ಸೇರ್ಪಡೆಯಾಗುತ್ತವೆ. ಎಕ್ಸ್‌ಕಿರಣ ಚಿತ್ರದಲ್ಲಿ ಅದರ ನೆರಳು ಕಾಣಿಸುವುದು. ಈ ಕಲ್ಲು ಗಟ್ಟಿಯಾಗಿದ್ದು ಕತ್ತರಿಸಿದಾಗ ಪದರಗಳನ್ನು ತೋರಿಸುವುದು. ಫಾಸ್ಫೇಟ್ ಕಲ್ಲುಗಳು ಹೆಚ್ಚಾಗಿ ಕ್ಯಾಲ್ಸಿಯಂ ಫಾಸ್ಫೇಟಿನಿಂದ ಉಂಟಾಗಿರುತ್ತವೆ. ಅಮೋನಿಯಂ-ಮ್ಯಾಗ್ನೀಸಿಯಂ ಫಾಸ್ಫೇಟ್ ಕೆಲವು ಬಾರಿ ಸೇರಿರುತ್ತದೆ. ಇದರ ಹೊರಮೈ ಮೃದು, ಬಣ್ಣ ಬಿಳಿಯ ಮಾಸಲು, ಮೂತ್ರ ಕ್ಷಾರಗೊಂಡಾಗ ಅದರ ಬೆಳೆವಣಿಗೆ ತೀವ್ರವಾಗುವುದಲ್ಲದೆ ಸಾರಂಗದ ಕೊಂಬಿನ ರೂಪವನ್ನು ತಳೆಯುವುದು. ಈ ಕಲ್ಲು ಯಾವುದೇ ಲಕ್ಷಣಗಳನ್ನು ಪ್ರಕಟಿಸದೆ ದೀರ್ಘಕಾಲ ಇರಬಹುದು. ಎಕ್ಸ್‌ಕಿರಣ ಚಿತ್ರದಲ್ಲಿ ಇದನ್ನು ಗುರುತಿಸಬಹುದು. ಯೂರಿಕ್ ಆಮ್ಲದಿಂದ ಸಿದ್ಧವಾಗುವ ಕಲ್ಲು ಯೂರೇಟ್ ಕಲ್ಲು. ಈ ಕಲ್ಲುಗಳ ಸಂಖ್ಯೆ ವಿಪುಲ. ಆಕೃತಿ ರತ್ನದ ಮೈಯಂತೆ. ಬಲು ಗಟ್ಟಿ. ಬಣ್ಣ ಹಳದಿ ಇಲ್ಲವೆ ಕಂದು. ಇವುಗಳಲ್ಲಿ ಕ್ಯಾಲ್ಸಿಯಂ ಸೇರಿಕೊಂಡಾಗ ಅದನ್ನು ಎಕ್ಸ್‌ಕಿರಣ ಚಿತ್ರದಲ್ಲಿ ಗುರುತಿಸಬಹುದು; ಅದು ಸೇರದಿರುವಾಗ ಗುರುತಿಸುವುದು ಕಷ್ಟ. ಮೂತ್ರ ಜನಕಾಂಗದಲ್ಲಿನ ಕೊಳವೆಯಲ್ಲಿ ಸಿಸ್ಟಿನ್ ಮರಳಿ ಹೀರಲ್ಪಡದಾದಾಗ ಅದು ಕಲ್ಲಿನ ರೂಪದಲ್ಲಿ ಉಳಿಯುತ್ತದೆ. ಅದಕ್ಕೆ ಷಟ್ಕೋಣಾಕೃತಿ ಇರುವುದು. ಅದು ದರ್ಶಕ. ಆಮ್ಲ ಮೂತ್ರದಲ್ಲಿ ಈ ಕಲ್ಲಿನ ಬೆಳೆವಣಿಗೆ ವಿಶೇಷ. ಸಂಖ್ಯೆ ಹೆಚ್ಚು. ಈ ಕಲ್ಲುಗಳು ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಇರುವುವು.

ಲಕ್ಷಣಗಳು

[ಬದಲಾಯಿಸಿ]

ಮೂತ್ರ ಕಲ್ಲುಗಳು (೩೦-೫೦) ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹೆಂಗಸರಿಗಿಂತ ಗಂಡಸರಲ್ಲಿ ಇವು ಉಂಟಾಗುವುದು ಹೆಚ್ಚು. ಇವುಗಳ ಲಕ್ಷಣಗಳು ಒಂದೇ ನಿಯಮಕ್ಕೆ ಒಳಪಡುವುದಿಲ್ಲ. ಅನೇಕ ಬಾರಿ ಕಲ್ಲುಗಳ ಇರುವಿಕೆ ಎಕ್ಸ್‌ಕಿರಣದಲ್ಲಿ ಮಾತ್ರ ತೋರಿಬರಬಹುದು. ಫಾಸ್ಫೇಟ್ ಕಲ್ಲುಗಳು ಅನೇಕ ವರ್ಷಗಳ ಪರ್ಯಂತ ಗೋಪ್ಯವಾಗಿ ಬೆಳೆಯುತ್ತ ಮೂತ್ರಜನಕಾಂಗದ ಅಂಗಭಾಗಗಳನ್ನು ಧ್ವಂಸಗೊಳಿಸಿ ಮೂತ್ರಜನಕಾಂಗದ ಸೋಲುವಿಕೆಯ ಲಕ್ಷಣಗಳನ್ನು ಪ್ರಕಟಿಸಬಹುದು. ಅಲ್ಲಿ ಜೀವಾಣುಗಳ ಬೆಳವಣಿಗೆಗೆ ವಿಶೇಷ ಅವಕಾಶವನ್ನು ಒದಗಿಸಬಲ್ಲವು.

ಹೆಚ್ಚು ಜನರಲ್ಲಿ ತೋರಿಬರುವ ಪ್ರಮುಖ ಲಕ್ಷಣ ನೋವು. ಬೆನ್ನ ಮೇಲೆ ಮೂತ್ರಜನಕಾಂಗದ ಮೂಲೆಯಲ್ಲಿ ಅದು ಪ್ರಾರಂಭವಾಗುವುದು. ಹೊಟ್ಟೆಯ ಮೇಲೆ ಎದೆಯ ಪಂಜರದ ಕೆಳಗೆ ಸಹ ಅದು ಪ್ರಕಟವಾಗುವುದು. ನಡೆದಾಡಿದರೆ ನೋವು ಹೆಚ್ಚು.. ಈ ನೋವು ತೀವ್ರತೆರನಾದ ಶೂಲೆಯಂತೆ ಪ್ರಾಣಸಂಕಟವನ್ನು ಉಂಟುಮಾಡಬಹುದು. ನೋವು ಟೊಂಕದಿಂದ ತೊಡೆ ಸಂದಿನವರೆಗೂ ಹರಡಿ ರೋಗಿ ಮಂಡಿಯನ್ನು ಮೇಲಕ್ಕೆಳೆದುಕೊಂಡು ಉರುಳಾಡುವನು. ನಾಡಿಯ ಬಡಿತ ತೀವ್ರವಾಗುವುದು. ದೈಹಿಕ ಉಷ್ಣತೆ ಕಡಿಮೆಯಾಗುವುದು. ಅನೇಕಬಾರಿ ವಾಂತಿ, ವಿಪರೀತ ಬೆವರು, ಕೆಲವೊಂದು ತೊಟ್ಟು ರಕ್ತಮಿಶ್ರಿತ ಮೂತ್ರ ವಿಸರ್ಜನೆ ಆಗುತ್ತದೆ. ನೋವು ಪದೇ ಪದೇ ಮರುಕಳಿಸುತ್ತದೆ. ಅದು ೨೪ ಗಂಟೆಗಳ ಪರ್ಯಂತವೂ ಇರಬಹುದು. ಕಲ್ಲು ಮೂತ್ರನಾಳದೊಳಕ್ಕೆ ಇಳಿಯುವಾಗ ಮತ್ತು ಮೂತ್ರಜನಕಾಂಗನಾಳದ ಸಂಪರ್ಕ ಸ್ಥಳದಲ್ಲಿ ಅಡ್ಡಿಯುಂಟಾದಾಗ ನೋವು ತಲೆದೋರುತ್ತದೆ. ಆಗ ಪರೀಕ್ಷೆ ಮಾಡಿದರೆ ಹೊಟ್ಟೆಯ ಪಕ್ಕದ ಸ್ನಾಯುಗಳು ಬಿರುಸಾಗಿ ತೋರುತ್ತವೆ. ನೋವು ಮಾಯವಾದ ಮೇಲೆ ಯಾವ ವೈಪರೀತ್ಯವೂ ತೋರಬಾರದು. ಮೂತ್ರಜನಕಾಂಗದ ಕೊನೆಯಲ್ಲಿ ಒತ್ತಿದಾಗ ವೇದನೆಯುಂಟಾಗಬಹುದು. ಕಲ್ಲು ಮೂತ್ರನಾಳದಲ್ಲಿಯೇ ಉಳಿದು ಮೂತ್ರದ ಸಂಚಾರಕ್ಕೆ ಅಡ್ಡಿಯನ್ನುಂಟುಮಾಡಿದಾಗ ಮೂತ್ರಜನಕಾಂಗದಲ್ಲಿ ನೀರು ಅಥವಾ ಕೀವು ಸಂಗ್ರಹಗೊಂಡು ಉಬ್ಬಿ ಸ್ಪರ್ಶ ಸಾಧ್ಯವಾಗುವುದು. ಕೆಲವುಬಾರಿ ಹೆಚ್ಚು ರಕ್ತ ಮೂತ್ರದಲ್ಲಿ ವಿಸರ್ಜನೆಯಾಗಿ ಕಲ್ಲಿನ ಇರುವಿಕೆಯನ್ನು ತೋರ್ಪಡಿಸಬಹುದು. ಎಕ್ಸ್‌ಕಿರಣದಿಂದ ಕಲ್ಲಿನ ಇರುವಿಕೆಯ ಛಾಯೆಯನ್ನು ತಿಳಿಯಬಹುದು. ಪಾರದರ್ಶಕವಲ್ಲದ ವಸ್ತುವನ್ನು ದೇಹದೊಳಸೇರಿಸಿ ಎಕ್ಸ್‌ಕಿರಣದ ನೆರವಿನಿಂದ ಕಲ್ಲಿನ ಇರುವಿಕೆಯನ್ನು ದೃಢಪಡಿಸಿಕೊಳ್ಳಬಹುದು. ಅಲ್ಲದೇ ಆ ಚಿತ್ರ ಇನ್ನೊಂದು ಮೂತ್ರಜನಕಾಂಗ ಚೆನ್ನಾಗಿ ಕೆಲಸಮಾಡುವುದರ ಬಗ್ಗೆಯೂ ತಿಳಿಸುವುದು. ಉದರದ ಅಲ್ಟ್ರಾಸಾಂಡ್ ಪರೀಕ್ಷೆ ಕಲ್ಲಿನ ಇರುವಿಕೆಯನ್ನು ಸೂಚಿಸುವುದು. ಶಸ್ತ್ರಚಿಕಿತ್ಸೆಯಿಂದ ಮೂತ್ರದ ಕಲ್ಲುಗಳನ್ನು ತೆಗೆಯಬೇಕು. ರೋಗಾಣುಗಳ ಬೆಳವಣಿಗೆಯಿದ್ದಾಗ ಜೀವಾಣುರೋಧಕಗಳನ್ನು ಕೊಡಬೇಕು. ಬೆನ್ನಮೂಲಕ ನಡೆಯುವ ಶಸ್ತ್ರಕ್ರಿಯೆಯಲ್ಲಿ ಕಲ್ಲನ್ನು, ಕಲ್ಲಿನ ಸಮೇತ ಮೂತ್ರಜನಕಾಂಗದ ಸ್ವಲ್ಪ ಭಾಗವನ್ನು ಇಲ್ಲವೇ ಇಡೀ ಮೂತ್ರಜನಕಾಂಗವನ್ನು ಅದು ಕೆಟ್ಟಿದ್ದರೆ ತೆಗೆಯಬೇಕು. ಕಲ್ಲುಗಳನ್ನು ಕರಗಿಸುವುದು ಸಾಮಾನ್ಯವಾಗಿ ಅಸಾಧ್ಯ. ಹೆಚ್ಚು ನೀರನ್ನು ಸೇವಿಸುವುದರಿಂದ, ಮೂತ್ರವನ್ನು ಕ್ಷಾರಗೊಳಿಸುವುದರಿಂದ ಮತ್ತು ಸೋಡಿಯಂ ಸಿಟ್ರೇಟ್ ಮಿಶ್ರಣದ ಸೇವನೆಯಿಂದ ಕೆಲವುಬಾರಿ ಇವನ್ನು ಕರಗಿಸಬಹುದು.

ಮೂತ್ರನಾಳದಲ್ಲಿ ಕಲ್ಲು

[ಬದಲಾಯಿಸಿ]

ಈ ಕಲ್ಲುಗಳು ಮೂತ್ರಜನಕಾಂಗದಲ್ಲಿ ಉಂಟಾಗಿರುತ್ತವೆ. ಅವುಗಳ ಆಕೃತಿ ದುಂಡಗೆ ಇಲ್ಲವೇ ದೀರ್ಘಕಾಲ ಅಲ್ಲಿಯೇ ಉಳಿದಾಗ ಅವುಗಳ ಬೆಳವಣಿಗೆ ಹೆಚ್ಚಾಗಿ ಅವು ಉತ್ತುತ್ತೆಯ ರೂಪವನ್ನು ತಳೆಯಬಹುದು. ಅವು ಮೂತ್ರನಾಳದಲ್ಲಿ ಇಳಿಯುತ್ತಿರುವಾಗ ನೋವು ತೋರಿಬರುವುದು. ಈ ನಾಳದಲ್ಲಿ ಅನೇಕ ಕಡೆ ತಡೆಯಿದೆ. ಆಗ ತೋರಿಬರುವ ನೋವು ಸೊಂಟದಿಂದ ಜನನೇಂದ್ರಿಯ ಮತ್ತು ತೊಡೆಯ ಮೇಲ್ಭಾಗದ ವರೆಗೂ ಪಸರಿಸುವುದು. ಅದು ಕೆಳಕ್ಕಿಳಿದು ಒಂದೇ ಕಡೆ ವಿಚಲಿತವಾಗದೆ ನಿಂತರೆ ತೀವ್ರತರನಲ್ಲದ ನೋವು ಸದಾಕಾಲ ಕೆಳಹೊಟ್ಟೆಯಲ್ಲಿ ತೋರಿಬರುವುದು. ಶ್ರಮದ ಅನಂತರ ನೋವು ಹೆಚ್ಚು. ವಿಶ್ರಾಂತಿಯಿಂದ ಅದು ಕಡಿಮೆಯಾಗುವುದು. ಕಲ್ಲುಗಳ ಇರುವಿಕೆಯನ್ನು ಎಕ್ಸ್‌-ಕಿರಣ ಚಿತ್ರ ಮತ್ತು ರಕ್ತನಾಳಾಂತರ ಮೂತ್ರಜನಕಾಂಗದ ಚಿತ್ರಣದಿಂದ ತಿಳಿಯಬೇಕು. ಮೂತ್ರಕೋಶದರ್ಶಕದಿಂದ ನೋಡಿದಾಗ ಈ ನಾಳದ ಬಾಯ್ದೆರೆಯುವ ಪ್ರದೇಶ ಉಬ್ಬಿರುವುದು ಗೋಚರಿಸುತ್ತದೆ. ಇದು ಮೂತ್ರದ ಚಲನೆಗೆ ಅಡ್ಡಿಪಡಿಸಿ ತನ್ಮೂಲಕ ಮೂತ್ರಜನಕಾಂಗದ ಕಾರ್ಯಚಟುವಟಿಕೆಗೆ ವ್ಯತ್ಯಯವನ್ನುಂಟುಮಾಡಬಲ್ಲದು. ಅನೇಕ ಕಲ್ಲುಗಳು ಯಾವ ತೊಂದರೆಯೂ ಇಲ್ಲದೆ ಕೆಳಕ್ಕಿಳಿಯುತ್ತವೆ. ನೀರನ್ನು ಜಾಸ್ತಿ ಕುಡಿಯಬೇಕು. ಸೆಡೆತರೋಧಕಗಳು ನೋವಿನ ಶಮನವನ್ನುಂಟು ಮಾಡುತ್ತವೆ. ಮುಂದೆ ಚಲಿಸದೆ ಉಳಿಯುವ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕಾಗುವುದು. ಈ ಮುಂಚೆ ಮೂತ್ರನಾಳ ಕಲ್ಲುಗಳನ್ನು ಹಿಂಬದಿಯಿಂಂದ ಅದರೇಳಕ್ಕೆ ಬುಟ್ಟಿಯೊಂದನ್ನು ತೂರಿಸಿ ಅದರ ಮೂಲಕ ಕಲ್ಲು ತೆಗೆಯಲಾಗುತ್ತಿದ್ದಿತು. ಇಂದು ಮೂತ್ರಪಿಂಡ, ಮೂತ್ರನಾಳದಲ್ಲಿರುವ ಕಲ್ಲುಗಳನ್ನು ದೇಹದ ಹೊರಗಿನಿಂದ ನೀಡುವ ಆಘಾತದಿಂದ ಭಗ್ನಗೊಳಿಸಬಹುದು. ನಂತರ ಅದರ ಪುಡಿ ಮೂತ್ರದ ಮೂಲಕ ಹೊರಬರುವುದು. ಅದರ ಬದಲು ಮೂತ್ರಪಿಂಡದ ನಾಭಿಯಲ್ಲಿ ಉಳಿದಿರುವ ಕಲ್ಲನ್ನು ಮೂತ್ರದ ದರ್ಶಕವನ್ನು ಹೋಲುವ ಉಪಕರಣವನ್ನು ಬೆನ್ನಕಡೆಯಿಂದ ಒಳಸೇರಿಸಿ ಹೊರತೆಗೆಯಬೇಕಾಗುವುದು.

ಮೂತ್ರಕೋಶದಲ್ಲಿ ಕಲ್ಲು

[ಬದಲಾಯಿಸಿ]

ಮೂತ್ರಜನಕಾಂಗದಿಂದ ಕೆಳಕ್ಕಿಳಿಯುವ ಕಲ್ಲು ಮೂತ್ರಕೋಶದಲ್ಲಿ ಉಳಿಯಬಹುದು ಅಥವಾ ಅದು ಅಲ್ಲಿಯೇ ಬೆಳೆಯಬಹುದು. ಈ ಕಲ್ಲುಗಳು ಅನೇಕ ವಸ್ತುಗಳ ಸಮ್ಮಿಲನದಿಂದ ಉಂಟಾಗಿರುತ್ತವೆ. ಹೆಚ್ಚಾಗಿ ಆಕ್ಸಲೇಟಿನಿಂದ ಬೆಳೆಯುತ್ತವೆ. ಇವುಗಳ ಬಣ್ಣ ಕಂದು ಅಥವಾ ಕಪ್ಪೂ. ಬೆಳೆವಣಿಗೆ ನಿಧಾನ. ಅವುಗಳ ಹೊರಮೈ ನುಣುಪಾಗಿರುವುದಿಲ್ಲ. ಯೂರಿಕ್ ಆಮ್ಲದ ಕಲ್ಲುಗಳು ಎಕ್ಸ್‌ಕಿರಣಕ್ಕೆ ಗೋಚರಿಸುವುದಿಲ್ಲ. ಅವು ದುಂಡಗೆ, ನಯವಾಗಿರುತ್ತವೆ. ರೋಗಾಣುಗಳ ಬೆಳೆವಣಿಗೆಯಿದ್ದಾಗ, ಅವನ್ನು ಕೇಂದ್ರ ಬಿಂದುವಾಗಿ ಪಡೆದು ಕ್ಯಾಲ್ಸಿಯಂ, ಮ್ಯಾಗ್ನೀಸಿಯಂ, ಅಮೋನಿಯಂ ಫಾಸ್ಫೇಟ್ ಲವಣಗಳು ಕಲ್ಲಿನ ಬೆಳೆವಣಿಗೆಯನ್ನು ತೋರ್ಪಡಿಸುತ್ತವೆ. ಅವುಗಳ ಬಣ್ಣ ಮಾಸಲು ಬಿಳುಪೂ. ಅವು ತೀವ್ರವಾಗಿ ಬೆಳೆದು ದೊಡ್ಡ ಆಕೃತಿಯನ್ನು ಪಡೆಯುತ್ತವೆ, ಮೂತ್ರಕೋಶದ ಕಲ್ಲುಗಳು ಅತ್ತಿಂದಿತ್ತ ಚಲಿಸುತ್ತವೆ. ಅವು ಕೆಳಭಾಗದಲ್ಲಿ ಹೆಚ್ಚು. ಅನೇಕಬಾರಿ ಈ ಕಲ್ಲುಗಳು ಯಾವ ತೊಂದರೆಯನ್ನೂ ತೋರ್ಪಡಿಸುವುದಿಲ್ಲ. ರೋಗಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಾನೆ. ರಾತ್ರಿಕಾಲದಲ್ಲಿ ಆ ತೆರೆನಾದ ಮೂತ್ರವಿಸರ್ಜನೆಯಿರುವುದಿಲ್ಲ. ಮೂತ್ರವಿಸರ್ಜನೆಯಾದ ಮೇಲೂ ವ್ಯಕ್ತಿಯ ಮೂತ್ರಕೋಶ ಖಾಲಿಯಾದಂತೆ ತೋರಿಬರುವುದಿಲ್ಲ. ಆಗ ನೋವು ತೋರಿಬರುವುದು. ಶ್ರಮದ ಅನಂತರ ನೋವು ಹೆಚ್ಚು. ವಾಹನ ಸಂಚಾರಕಾಲದಲ್ಲಿ ಅದು ಜಾಸ್ತಿ. ಮಲಗಿದ್ದಾಗ ನೋವು ಕಡಿಮೆಯಾಗುತ್ತದೆ. ಆಗ ಸ್ಪರ್ಶಶಕ್ತಿಯಿಲ್ಲದಿರುವ ಮೂತ್ರಕೋಶದಲ್ಲಿನ ಭಾಗದತ್ತ ಕಲ್ಲು ಹಿಂದೆ ಸರಿಯುವುದರಿಂದ ನೋವು ತೋರಿಬರದು. ಆಗಾಗ್ಗೆ ರಕ್ತಮಿಶ್ರಿತ ಮೂತ್ರ ವಿಸರ್ಜನೆಯಾಗುತ್ತದೆ. ಮೂತ್ರಪ್ರವಾಹ ಏಕಾಏಕಿಯಾಗಿ ನಿಲುಗಡೆಯಾಗಬಹುದು. ಈ ರೀತಿಯ ಕಲ್ಲುಗಳ ಇರುವಿಕೆಯನ್ನು ಗುದದ್ವಾರದೊಳಕ್ಕೆ ಬೆರಳನ್ನಿಟ್ಟುಕೊಂಡು ತಿಳಿದುಕೊಳ್ಳಬಹುದು. ಎಕ್ಸ್‌ಕಿರಣ ಚಿತ್ರ ಮತ್ತು ಮೂತ್ರಕೋಶದರ್ಶಕದ ಮೂಲಕ ಅವನ್ನು ಖಚಿತಪಡಿಸಿಕೊಳ್ಳಬಹುದು. ಕಲ್ಲನ್ನು ಕತ್ತರಿಸುವ ಸಾಧನದ ಮೂಲಕ ಇವುಗಳ ಗಾತ್ರವನ್ನು ಕಿರಿದುಗೊಳಿಸಿ ಅದರ ವಿಸರ್ಜನೆಗೆ ಸಹಾಯಮಾಡಬಹುದು, ಇಲ್ಲವೆ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಂದ ಹೊರತೆಗೆಯಬಹುದು.

ಮೂತ್ರವಿಸರ್ಜನೆ ನಾಳದಲ್ಲಿ ಕಲ್ಲು ಉಳಿದು ಮೂತ್ರದ ಪ್ರವಾಹಕ್ಕೆ ಅಡ್ಡಿಯನ್ನುಂಟುಮಾಡಬಲ್ಲದು. ಅದನ್ನು ಚಿಮುಟದ ಸಹಾಯದಿಂದ ತೆಗೆಯಬೇಕು.

ಪಿತ್ತಕಲ್ಲು

[ಬದಲಾಯಿಸಿ]

ಪಿತ್ತಕೋಶದಲ್ಲಿ ಕಂಡುಬರುವ ಕಲ್ಲುಗಳ ರಚನೆ ವಿವಿಧ ತೆರೆನಾದುದು. ಅದು ಬರಿಯ ಕೊಲೆಸ್ಟಿರಾಲ್ ಅಥವಾ ಕ್ಯಾಲ್ಸಿಯಂ ಬಿಲಿರುಬಿನೇಟ್ನಿಂದಾಗಿರಬಹುದು. ಹೆಚ್ಚಾಗಿ ಇವೆರಡೂ ಅಂಶಗಳು ಒಂದರ ಅನಂತರ ಮತ್ತೊಂದು ಪದರಿನಲ್ಲಿ ಸೇರ್ಪಡೆಗೊಂಡಿರುವ ಕಲ್ಲುಗಳ ರಚನೆಯೇ ಸಾಮಾನ್ಯ. ಇವುಗಳಲ್ಲದೆ ಕೊಲೆಸ್ಟಿರಾಲ್, ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಫಾಸ್ಫೇಟಿನಿಂದ ಕಲ್ಲುಗಳ ರಚನೆಯೂ ಆಗಿರುತ್ತದೆ.

ಈ ರೀತಿಯ ಕಲ್ಲುಗಳ ರಚನೆ ಪಿತ್ತಲವಣದಲ್ಲಿ ಕೊಲೆಸ್ಟಿರಾಲ್ ಕರಗುವಿಕೆಯ ಪ್ರಮಾಣವನ್ನವಲಂಬಿಸಿದೆ. ಸಾಮಾನ್ಯವಾಗಿ ಪಿತ್ತಲವಣ ಮತ್ತು ಕೊಲೆಸ್ಟಿರಾಲಿನ ಪ್ರಮಾಣ ೨೫:೧ ರಷ್ಟು. ಇದರಲ್ಲಿ ಪಿತ್ತಲವಣದ ಅಂಶ ಅರ್ಧದಷ್ಟು ಕಡಿಮೆಯಾದರೆ ಕೊಲೆಸ್ಟರಾಲ್ ಗಟ್ಟಿಯಾಗಿ ಶಿಲೆಯಾಗುತ್ತದೆ. ಆಹಾರದಲ್ಲಿ ಹೆಚ್ಚು ಸಕ್ಕರೆ ಸೇವನೆ, ವಿಟಮಿನ್ ‘ಂ’ ಅಭಾವ, ಜೀವಾಣುಗಳ ಬೆಳೆವಣಿಗೆ ಮತ್ತು ಪಿತ್ತದ ಮುಂಚಲನೆಗೆ ತಡೆ-ಇವು ಕಲ್ಲಿನ ಬೆಳೆವಣಿಗೆಗೆ ಪುರಕವಾಗಬಲ್ಲವು. ರಕ್ತನಾಳಾಂತರವಾಗಿ ಮತ್ತು ಹಾಲುರಸನಾಳದ ಮೂಲಕ ಜೀವಾಣುಗಳು ಪಿತ್ತಕೋಶವನ್ನು ಸೇರಿ ಅಲ್ಲಿನ ಲೋಳೆಪೊರೆಯನ್ನು ನಾಶಗೊಳಿಸಿ ಅಲ್ಲಿ ಕಲ್ಲು ಉಂಟಾಗುವಂತೆ ಮಾಡುವುದು. ಸತ್ತ ಜೀವಾಣುಗಳ ಸ್ಮಾರಕವಾಗಿ ನಿರ್ಮಿಸಿದ ಸಮಾಧಿ ಕಲ್ಲುಗಳು ಇವೆಂಬ ನುಡಿ ಪ್ರಚಲಿತವಿದೆ. ಪಿತ್ತಕಲ್ಲುಗಳನ್ನು ಕೊಲೆಸ್ಟರಾಲ್ ಕಲ್ಲು, ರಂಗಿನ ಕಲ್ಲು ಮತ್ತು ಮಿಶ್ರ ಕಲ್ಲುಗಳೆಂದು ವಿಂಗಡಿಸಲಾಗಿದೆ. ಕೊಲೆಸ್ಟರಾಲ್ ಕಲ್ಲು ದುಂಡಗಿದ್ದು, ಹಗುರಾಗಿ, ತಿಳಿಹಳದಿ ವರ್ಣವನ್ನು ಪಡೆದಿರುತ್ತವೆ. ಪಿತ್ತವರ್ಣ ಅದರ ಮೇಲೆ ಸೇರ್ಪಡೆಯಾಗಿ ಅದರ ಹೊರಮೈಯ ಮೃದುತ್ವ ಕಳೆದುಹೋಗುತ್ತದೆ. ಕ್ಯಾಲ್ಸಿಯಂ ಬಿಲಿರುಬಿನೇಟಿನಿಂದ ಆಗುವ ಕಲ್ಲುಗಳು ರಂಗಿನ ಕಲ್ಲುಗಳು. ಇವುಗಳ ಬಣ್ಣ ಸಾಮಾನ್ಯವಾಗಿ ಕಪ್ಪೂ. ಇವುಗಳ ಗಾತ್ರ ಮತ್ತು ಆಕೃತಿ ವಿವಿಧ ತೆರೆನಾದುದು. ಇವು ಪಿತ್ತ ಸಾಗುನಾಳದಲ್ಲಿ ಇರುತ್ತವೆ.

ಸಾಮಾನ್ಯವಾಗಿ ಮಿಶ್ರಕಲ್ಲುಗಳೇ ಹೆಚ್ಚು. ಅವುಗಳ ಸಂಖ್ಯೆ ನೂರಾರು ಬೇಕಾದರೂ ಇರಬಹುದು. ಅವುಗಳ ಹೊರಮೈ ಹಳ್ಳ ತಿಟ್ಟಿನಿಂದ ಕೂಡಿರುತ್ತದೆ. ಈ ಕಲ್ಲುಗಳ ಕೇಂದ್ರಬಿಂದು ಜೀವಾಣು ಮತ್ತು ಜೀವಕಣಗಳ ಕೊಳೆ. ಅನಂತರ ಅದರ ಮೇಲೆ ಕೊಲೆಸ್ಟರಾಲ್, ಕ್ಯಾಲ್ಸಿಯಂ ಬಿಲಿರುಬಿನೇಟ್ ಅಥವಾ ಕ್ಯಾಲ್ಸಿಯಂ ಕಾರ್ಬೊನೇಟ್ ಪದರು ಪದರಾಗಿ ಸೇರ್ಪಡೆಗೊಳ್ಳುತ್ತದೆ. ಬೊಜ್ಜು ದೇಹವುಳ್ಳ, ಪದೇ ಪದೇ ಗರ್ಭ ತಳೆಯುವ (೫೦) ವರ್ಷ ವಯಸ್ಸಿನ ಹೆಂಗಸರು ಸಾಮಾನ್ಯವಾಗಿ ಪಿತ್ತಕಲ್ಲಿನ ರೋಗಕ್ಕೆ ಈಡಾಗಬಲ್ಲರು. ಈ ಕಲ್ಲುಗಳು ಪಿತ್ತಕೋಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಕೆಲಮಟ್ಟಿಗೆ ಅವು ಪಿತ್ತನಾಳದಲ್ಲಿರುತ್ತವೆ. ಅಷ್ಟೆಲ್ಲ ಕಲ್ಲುಗಳಿದ್ದರೂ ಅವುಗಳಲ್ಲಿ ಒಂದು ಕಲ್ಲು ಮಾತ್ರ ರೋಗದ ಗುಣಲಕ್ಷಣಗಳಿಗೆ ಕಾರಣೀಭೂತವಾಗುತ್ತದೆ. ಸಾಮಾನ್ಯವಾಗಿ ಕಲ್ಲುಗಳು ಯಾವ ತೊಂದರೆಯನ್ನೂ ಉಂಟುಮಾಡದೆ ಇರಬಲ್ಲವು. ಆಹಾರದ ಅಪಚನ, ನೋವು, ತೀವ್ರತೆರನಾದ ವೇದನೆಗೆ ಅವು ಕಾರಣೀಭೂತವಾಗಿ ಪಿತ್ತಕೋಶದ ಉರಿಗೆ ಆಸ್ಪದವೀಯಬಲ್ಲವು. ಪಿತ್ತನಾಳದಲ್ಲಿ ತಡೆಯನ್ನುಂಟುಮಾಡಿ ಕಾಮಾಲೆ ಮತ್ತು ಕಲಿಜದ ಸೋಲುವಿಕೆಯ ಲಕ್ಷಣಗಳನ್ನು ತೋರಿಸಬಲ್ಲದು.

ಅಪಚನ, ಅಜೀರ್ಣ, ಊಟದ ಅನಂತರ ಹೊಟ್ಟೆ ತುಂಬಿದ ಭಾವನೆ, ತೇಗು, ಎದೆಯ ಉರಿಯನ್ನು ಕಲ್ಲುಗಳು ಉಂಟುಮಾಡಬಲ್ಲವು. ನೋವು ಏಕಾ ಏಕಿಯಾಗಿ ತೀವ್ರತೆರನಾದ ಹೊಟ್ಟೆಯ ಬಲಪಾಶರ್ವ್‌ದಲ್ಲಿ ಮತ್ತು ಹೊಟ್ಟೆಯ ಗುಂಡಿಯಲ್ಲಿ ಕಂಡುಬರುತ್ತದೆ. ನೋವು ಬಲಗಡೆ ಬೆನ್ನು ಮತ್ತು ಭುಜದವರೆಗೆ ಹಬ್ಬಬಹುದು. ಈ ನೋವಿನಿಂದ ಗಂಟೆಗಟ್ಟಲೆ ವೇದನೆ ಪಟ್ಟುಕೊಂಡು ರೋಗಿ ಉರುಳಾಡುತ್ತಾನೆ. ನೋವು ರಾತ್ರಿಯ ವೇಳೆಯಲ್ಲಿ ಹೆಚ್ಚಾಗಿ ಬರುವುದು. ವಾಂತಿಯೂ ಆಗಬಹುದು. ಒಂಬತ್ತನೆಯ ಬಲಮೃದ್ವಸ್ತಿಯ ತುದಿಯ ಪ್ರದೇಶದಲ್ಲಿ ಒತ್ತಿದರೆ ನೋವು ತೋರಿಬರುವುದು. ಅದು ಮರ್ಫಿಯ ಚಿಹ್ನೆ. ನೇರ ಎಕ್ಸ್‌ಕಿರಣ ಚಿತ್ರದಲ್ಲಿ ಕೆಲಬಾರಿ ಈ ಕಲ್ಲುಗಳು ಕಾಣಿಸಬಹುದು. ಉಳಿದವನ್ನು ಅಪಾರದರ್ಶಕ ರಾಸಾಯನಿಕವನ್ನಿತ್ತು ಪಿತ್ತಕೋಶ ಚಿತ್ರತೆಗೆದು ಗುರುತಿಸಬಹುದು. ನೋವು ತೀವ್ರ ಎದ್ದಾಗ ೧೦೦ ಮಿಗ್ರಾಂ. ಫೆಥೆಡೀನ್ ಕೊಡಬೇಕು. ರಕ್ತನಾಳಾಂತರವಾಗಿ ೬೦ ಮಿಗ್ರಾಂ. ಕೋಡೀನ್ ಫಾಸ್ಫೇಟ್ ಕೊಟ್ಟರೆ ನೋವಿನ ಶಮನವಾಗುವುದು. ರೋಗದ ಲಕ್ಷಣಗಳು ಮತ್ತೆ ಮತ್ತೆ ಕಂಡುಬರುತ್ತಿದ್ದರೆ ಪಿತ್ತಕೋಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಬೇಕು. ಸಾಕಷ್ಟು ಕ್ಯಾಲ್ಸಿಯಂ ಇರುವ ಪಿತ್ತಕಲ್ಲಿನ ಇರುವಿಕೆಯನ್ನು ಉದರದ ಎಕ್ಸ್‌ ಕಿರಣ ಚಿತ್ರ ತೋರಿಸಬಲ್ಲದು. ಪಿತ್ತಕೋಶದ ಸೋನೋಗ್ರಾಫಿಯಿಂದ ಅಲ್ಲಿರುವ ಚಿಕ್ಕ ಚಿಕ್ಕ ಕಲ್ಲುಗಳನ್ನು ಗುರುತಿಸಬಹುದು. ಯಾವ ಲಕ್ಷಣಗಳನ್ನು ತೋರಿಸದೇ ಇರುವ ಪಿತ್ತಕಲ್ಲುಗಳನ್ನು ಹಾಗೆಯೇ ಬಿಟ್ಟಿರುವುದು ಉಚಿತ.

ಪಿತ್ತನಾಳದಲ್ಲಿ ಸ್ನಾಯುವಿಲ್ಲದಿರುವುದರಿಂದ ಈ ಕಲ್ಲುಗಳ ವಿಸರ್ಜನೆ ಕಷ್ಟ. ಅಲ್ಲಿ ಅವುಗಳ ತಡೆಯುಂಟಾಗಿ ಲಕ್ಷಣಗಳು ತೋರಬಹುದು. ಆ ಸ್ಥಳದಲ್ಲಿ ದೀರ್ಘಾವಧಿಕಾಲ ಕಲ್ಲುಗಳು ಉಳಿದು ನೋವು, ಕಾಮಾಲೆಯನ್ನು ಉಂಟುಮಾಡುತ್ತವೆ. ಆಗಾಗ್ಗೆ ಕಾಮಾಲೆ, ಪದೇ ಪದೇ ನೋವು ಮತ್ತು ಜ್ವರ ಪ್ರಮುಖ ಲಕ್ಷಣಗಳು. ಶಸ್ತ್ರಚಿಕಿತ್ಸೆಯಿಂದ ಈ ನಾಳದಲ್ಲಿನ ಕಲ್ಲುಗಳನ್ನು ಹೊರಕ್ಕೆ ತೆಗೆಯಬೇಕು. ಈ ಬಗೆಯ ಶಸ್ತ್ರಕ್ರಿಯೆಯನ್ನು ಕಲ್ಲು ೩ಸೆಂ.ಮೀಗೂ ಹೆಚ್ಚು ದೊಡ್ಡದಿದ್ದಾಗ ಮಾಡಬೇಕಾಗುವುದು. ಉಳಿದ ಕಲ್ಲುಗಳಲ್ಲಿ ಲೆಪರೋಸ್ಕೋಪನ್ನು ಬಳಸಿ, ಕಲ್ಲು ಸಮೇತ ಪಿತ್ತಕೋಶವನ್ನು ಹೊರತೆಗೆಯಲಾಗುತ್ತದೆ. ಕೆಲವೊಮ್ಮೆ ಪಿತ್ತಕಲ್ಲುಗಳನ್ನು ದೇಹದ ಹೊರಗಿನಿಂದ (ಎಕ್ಟ್ರಾಕಾರ್ಪೊರಿಯಲ್) ಕೊಡುವ ಅಘಾತ ಅಲೆಗಳಿಂದ ಭಗ್ನಗೊಳಿಸಬಹುದು.

ಮೇದೋಜೀರಕ ಕಲ್ಲು

[ಬದಲಾಯಿಸಿ]

ಪದೇ ಪದೇ ಮರುಕಳಿಸುವ ಮೇದೋಜೀರಕ ಗ್ರಂಥಿಯ ಉರಿಗೆ ಅಲ್ಲಿನ ನಾಳದಲ್ಲಿನ ಕಲ್ಲುಗಳೇ ಕಾರಣ. ಈ ರೋಗ ಕೇರಳ ರಾಜ್ಯದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಚಿಕ್ಕವಯಸ್ಸಿನಲ್ಲಿಯೇ ರೋಗ ತೋರಿ ಬಂದು ಸಿಹಿಮೂತ್ರರೋಗವನ್ನುಂಟುಮಾಡುತ್ತದೆ. ಮೇದೋಜೀರಕ ನಾಳದಲ್ಲಿನ ಅಡ್ಡಿ ಗ್ರಂಥಿಯ ಉರಿಗೆ ಕಾರಣ. ತೀವ್ರತೆರೆನಾದ ನೋವು, ವಾಂತಿ, ಆಹಾರ ಸೇವನೆಯ ಅನಂತರ ವೇದನೆ ಪ್ರಮುಖ ಲಕ್ಷಣಗಳು. ಇಲ್ಲಿನ ನಾಳಗಳು ಅಗಲಗೊಂಡು ರಸವೆಲ್ಲ ಶಿಲೆಯಾಗಿ ಕ್ಯಾಲ್ಸಿಯಂ ಮಿಶ್ರಣದಿಂದ ಮುಂಚಲಿಸದೆ ಉಳಿಯುತ್ತವೆ. ಎಕ್ಸ್‌ಕಿರಣಚಿತ್ರದಿಂದ ಅವನ್ನು ಗುರುತಿಸಬಹುದು. ಮೂತ್ರದಲ್ಲಿ ಸಕ್ಕರೆಯ ವಿಸರ್ಜನೆಯಾಗುತ್ತದೆ.

ಜೊಲ್ಲು ಕಲ್ಲು

[ಬದಲಾಯಿಸಿ]

ಜೊಲ್ಲು ಕಲ್ಲುಗಳ ತಯಾರಿಕೆ ಕೆಳದವಡೆಯ ಗ್ರಂಥಿಗಳಲ್ಲಿ ಹೆಚ್ಚು. ಅವು ಅದರ ನಾಳದಲ್ಲಿ ತಡೆಯನ್ನುಂಟುಮಾಡುತ್ತವೆ. ಊಟದ ವೇಳೆಯಲ್ಲಿ ಗ್ರಂಥಿಯ ಸ್ಥಳದಲ್ಲಿ ಬಾವು ಮತ್ತು ನೋವು ಕಂಡುಬರುತ್ತವೆ. ಬಾಯಲ್ಲಿ ಜೊಲ್ಲುನಾಳ ಬಾಯ್ದೆರೆಯುವ ಕಡೆ ಜೊಲ್ಲು ಹೊರಬರುವುದಿಲ್ಲ. ಕಲ್ಲಿನ ಇರುವಿಕೆಯನ್ನು ಬೆರಳಿನಿಂದ ಒತ್ತಿ ತಿಳಿಯಬಹುದು. ಇದರ ಗಾತ್ರ ಜೋಳದ ಕಾಳಿನಷ್ಟು. ಕ್ಯಾಲ್ಸಿಯಂ, ಮೆಗ್ನೀಸಿಯಂ ಫಾಸ್ಫೇಟಿನಿಂದ ಉಂಟಾಗಿರುತ್ತವೆ. ಗ್ರಂಥಿಯ ಮೂಲಕ ಶಸ್ತ್ರಕ್ರಿಯೆಮಾಡಿ ಕಲ್ಲುಗಳನ್ನು ಹೊರತೆಗೆಯಬೇಕು. (ಪಿ.ಎಸ್.ಎಸ್.)