ಕಲ್ಲಪ್ಪ ಜಿ. ಕುಂದಣಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷಾ ಬೆಳವಣಿಗೆಗೆ, ಶಾಸ್ತ್ರೀಯ ಅಧ್ಯಯನಕ್ಕೆ ಕಾರಣರಾದವರು ಸಾಮಾನ್ಯ ಜನರ ಕಣ್ಣಿಗೆ ಕಾಣುವುದೇ ಇಲ್ಲ. ಇನ್ನು ಹಸ್ತ ಪ್ರತಿ ಮತ್ತು ಶಾಸನಗಳ ಅಧ್ಯಯನಕ್ಕೆ ತೊಡಗಿದವರಂತೂ ಯಾರಿಗೂ ಬೇಡ, ಸಾಹಿತ್ಯ ಎಂದರೆ ಕಥೆ ಕಾದಂಬರಿ ಮತ್ತು ಕವನ. ಅವನ್ನು ಬರೆದವರು ಮಾತ್ರ ಭಾಷಾ ಬೆಳವಣಿಗೆಗೆ ಕಾರಣರು ಎಂಬ ಭಾವನೆ ಬಲವಾಗಿ ಬೇರೂರಿದೆ. ಸೃಜನೇತರ ಕಾರ್ಯ ಮಾಡಿದವರು ಎಲೆಯ ಮರೆಯ ಕಾಯಿಯಂತೆ,ಭೂಮಿಯೊಳಗಿನ ಬೇರಿನಂತೆ ಭದ್ರತೆಗೆ ಬೇಕು, ಆದರೆ ಬೆಳಕಿಗೆ ಬರುವುದಿಲ್ಲ.ಆ ವರ್ಗಕ್ಕೆ ಸೇರಿದವರು ಸಂಶೋಧಕರು..ಅವರ ಕಾರ್ಯದ ಮಹತ್ವ ಅಪಾರ ಆದರೆ ಜನಪ್ರಿಯತೆ ಇಲ್ಲ ಪರಿಚಯ ಪರಿಮಿತ. ಇಂತಹ ಗುಂಪಿಗೆ ಸೇರದಿವರಲ್ಲಿ ಪ್ರಮುಖರು ಕೆ.ಜಿ. ಕುಂದಣಗಾರರು. ಅವರ ಹೆಸರು ಕಲ್ಲಪ್ಪ , ತಂದೆಯ ಹೆಸರು ಗಿರಿಮಲ್ಲಪ್ಪ. ಅವರದು ಬಂಗಾರವನ್ನು ಕರಗಿಸಿ ಆಭರಣ ಮಾಡುವ ಕಸುಬು. ಅಂದರೆ ಚಿನ್ನಕ್ಕೆ ಕುಂದಣ ನೀಡುವ ವಿಶ್ವಕರ್ಮರು .ಅದಕ್ಕೆ ಅವರಿಗೆ ಕುಂದಣಗಾರ ಎಂಬುದು ಮನೆತನದ ಹೆಸರು. ಆದ್ದರಿಂದ ಅವರ ಪೂರ್ಣ ಹೆಸರು ಕಲ್ಲಪ್ಪ ಗಿರಿಮಲ್ಲಪ್ಪ ಕುಂದಣಗಾರ.ಅದನ್ನೆ ಚಿಕ್ಕದು ಮಾಡಿದ ಕೆ. ಜಿ. ಕುಂದಣಗಾರ ಎಂಬ ಹೆಸರು ಪ್ರಚಲಿತ. ಅವರದು ಜನಿಸಿದುದು ಮುಂಬಯಿ ಪ್ರಾಂತ್ಯದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕ ಕೌಜಲಿಗೆ ಎಂಬ ಹಳ್ಳಿಯಲ್ಲಿ, ೧೮೯೫ನೆಯ ಆಗಷ್ಟ್ ೧೪ ರಂದು.ಅವರಿಗೆ ಮೂರುಜನ ಒಡ ಹುಟ್ಟಿದವರು.ಹುಟ್ಟಿನಿಂದಲೆ ಕಷ್ಟ ಬೆನ್ನಿಗೆ ಕಟ್ಟಿಕೊಂಡವರು. ಜನಿಸಿದ ಎರಡೇ ವರ್ಷಕ್ಕೆ ತಂದೆ ಮೃತರಾದರು. ಮುಂದೆ ಒಂದೇ ವರ್ಷದಲ್ಲಿ ತಾಯಿ ಶಾಖಾಂಬರಿಯೂ ಗಂಡನ ಹಾದಿ ಹಿಡಿದರು. ತುಸುವೆ ಸಮಯದಲ್ಲಿ ತಮ್ಮ ತಂಗಿಯರೂ ಪರಪಲೋಕ ಸೇರಿದರು. ಅನಾಥರಾದ ಅಕ್ಕ ಮತ್ತು ಕಲ್ಲಪ್ಪರನ್ನುಸಾಕಿದವರು ಅವರ ಚಿಕ್ಕಪ್ಪ. ಆ ಕೆಟ್ಟಕಾಲದಲ್ಲಿ ಬರ ಪೀಡಿತ ಹಳ್ಳಿಯಲ್ಲಿ ಜೋಳ ಸಿಗುವುದೆ ಕಷ್ಟವಿರುವಾಗ ಬಂಗಾದ ದಾಗಿನ ಮಾಡಿಸುವವರು ಯಾರು? ಅಕ್ಕಸಾಲಿಗೆಯಿಂದ ಬದುಕುವುದು ದುಸ್ತರವಾಗಿತ್ತು. ಅದಕ್ಕೆ ಕಕ್ಕ ನಿಂಗಪ್ಪ ಹಳ್ಳಿ ಹಳ್ಳಿ ತಿರುಗಿ ಕೀರ್ತನೆ ಮಾಡಿ ದುಡ್ಡು ದುಡಿಯುವರು. ಅದರಲ್ಲೇ ಅವರ ದೊಡ್ಡ ಸಂಸಾರ ಸಾಗಬೇಕು. ಕಿರಿಯ ಕಲ್ಲಪ್ಪ ಕೌಜಲಗಿಯಲ್ಲೇ ಪ್ರಾಥಮಿಕಶಾಲೆ ಸೇರಿದ. ಮನೆಯಲ್ಲಿ ನಿತ್ಯ ರಾಮಾಯಣ , ಮಹಾಭಾರತ, ಉಪಕಥೆ, ಜಾನಪದ ಗೀತಗಳು ಕಿವಿಗೆ ಬೀಳುತಿದ್ದವು. ಅಲ್ಲದೆ ಕಲ್ಲಪ್ಪನದು ಕುಶಾಗ್ರ ಮತಿ. ನೆನಪಿನ ಶಕ್ತಿ ಬಹಳ .ತುಸು ದೊಡ್ಡವನಾದ ಕೂಡಲೇ ತನ್ನ ಕಕ್ಕನೊಂದಿಗೆ ತಾಳ ತಂಬೂರಿ ಹಿಡಿದು ಪ್ರವಚನಮಾಡಲು ಸಹಾಯಕನಾಗಿ ಹೋಗಲು ಮೊದಲು ಮಾಡಿದ್ದ. ಪರಿಣಾಮವಾಗಿ ಚಿಕ್ಕವಯಸ್ಸಿನಲ್ಲಿಯೇ ಸಾಹಿತ್ಯ ಮತ್ತು ಸಂಗೀತದ ಸಂಸ್ಕಾರ ಮೈಗೂಡಿತು .ಹರಿಶ್ಚಂದ್ರಕಾವ್ಯ, ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತದ ಹಲವಾರು ಪದ್ಯಗಳು ಕಂಠಪಾಠವಾದವು ಜೊತೆಗೆ ಸಾಹಿತ್ಯಾಸಕ್ತಿ , ತಾಳ ಮತ್ತು , ಲಯ ಜ್ಞಾನ ಮೂಡಿದ್ದು ಆಗಲೇ.. ಹೈಸ್ಕೂಲಿಗೆ ಬೆಳಗಾವಿಗೆ ಹೋದ ಹುಡುಗ ಸರಾಫರ ಅಂಗಡಿಯಲ್ಲಿ ಲೆಕ್ಕಬರೆದು ಜೀವನ ಸಾಗಿಸಿದ. ಆದರೆ ಅದು ಬಹುದಿನ ನಡೆಯಲಿಲ್ಲ. ಸಹೃದಯಿ ನಂಟರೊಬ್ಬರ ಸಹಾಯದಿಂದ ಧಾರವಾಡದಲ್ಲಿ ಶಿಕ್ಷಣಮುಂದುವರಿಯಿತು.ಹಗಲು ಸಾಲಿಗೆ ಹೋಗಿ ನಂತರ ಸಂಜೆಯಿಂದ ಕುಲಕಸುಬು ಕಲಿತರು.೧೯೦೯ರಲ್ಲಿ ಮ್ಯಾಟ್ರಿಕ್‌ಪಾಸಾದರು.ಮುಂಬೈಕರ್ನಾಟಕದಲ್ಲಿ ಆಗ ಕಾಲೇಜೇ ಇರಲಿಲ್ಲ. ಅದಕ್ಕಾಗಿ ಪುಣೆಯ ಫರ್ಗ್ಯುಸನ್‌ಕಾಲೇಜು ಸೇರಿದರು. ಆಗ ಶಿಕ್ಷಣ, ಆಂಗ್ಲರ , ಉಳ್ಳವರ , ಅಧಿಕಾರಿಗಳ ಮಕ್ಕಳಿಗೆ ಮಾತ್ರ ಲಭ್ಯ. ಅವರ ಮಧ್ಯ ದೋತರ, ಅಂಗಿ ಟೊಪಿಗೆಯ ಸಣಕಲು ಕಲ್ಲಪ್ಪ ಹಾಸ್ಯದ ವಸ್ತುವಾಗಿದ್ದ. ಹಾಗಿದ್ದರೂ ಇಂಟರ್‌ಮುಗಿಸಿದರು. ಆರೋಗ್ಯವೂ ಕೆಟ್ಟಿತು. ಕಲ್ಲಪ್ಪ ಕೌಜಲಗಿಗೆ ಮರಳಿದರು. ದುಡಿಮೆ ಇಲ್ಲ. ಇದರ ಜೊತೆಗೆ ೧೯೧೪ರಲ್ಲಿ ಮದುವೆ ಬೇರೆ ಆಯಿತು. . ಅನಿವಾರ್ಯವಾಗಿ ಕೆಲಸ ಹುಡುಕುತ್ತಾ ಹೊರಟರು .ಕೊನೆಗೆ ಕೊಲ್ಲಾಪುರ ರಾಜಾರಾಮ್‌ಹೈಸ್ಕೂಲಿನಲ್ಲಿ ಶಿಕ್ಷಕರ ಕೆಲಸ ಸಿಕ್ಕಿತು .ಎರಡು ವರ್ಷದ ನಂತರ ಗೋಕಾದಲ್ಲೆ ಕೆಲಸ ಮುಂದುವರಿಸಿದರು.ಇವರ ಜ್ಞಾನದಾಹ ಅದಮ್ಯ. ಗಳಿಕೆ ಮತ್ತು ಕಲಿಕೆ ಜೊತೆಯಲ್ಲಿಯೇ ಮಾಡಿದರು. ಇಂಗ್ಲಿಷ್‌, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯತೆಗೆದುಕೊಂಡು ಖಾಸಗಿಯಾಗಿ ಅಭ್ಯಾಸ ಮಾಡಿ ೧೯೧೯ರಲ್ಲಿ ಪದವಿ ಪಡೆದರು.ಅವರ ಕಲಿಕೆಯ ಹಸಿವು ಇಂಗಲಿಲ್ಲ ಧಾರವಾಡದ ಮೂರ್ತಾಚಾರ್‌ಕಟ್ಟಿ ಅವರಲ್ಲಿ ಕನ್ನಡ, ಬೆಳಗಾವಿಯ ಬಾಕಿಕರ ದೇಶಪಾಂಡೆಯವರಲ್ಲಿ ಸಂಸ್ಕೃತ ಮತ್ತು ಚೌಗುಲೆ ಅಣ್ಣಾರಾಯರಲ್ಲಿ ಜೈನಶಾಸ್ತ್ರದ ಅಧ್ಯಯನ ನಡೆಸಿದರು. ೧೯೨೫ ರಲ್ಲಿ ಕನ್ನಡ ಎಂಎ. ಪಡೆದರು. ಅವರಿಗೆ ಅದೃಷ್ಟ ಕೈಬೀಸಿ ಕರೆಯಿತು ಎನಿಸಿತು. ಕರ್ನಾಟಕ ಕಾಲೇಜಿನಲ್ಲಿ ೧೯೧೯ ರಲ್ಲಿ ಪ್ರಾರಂಭವಾದರೂ ಕನ್ನಡ ಪ್ರಾದ್ಯಾಪಕರೇ ಇರಲಿಲ್ಲ . ಸಂಸ್ಕೃತ ಪ್ರಾಧ್ಯಾಪಕರೇ ಕನ್ನಡ ಪಾಠ ಮಾಡುತಿದ್ದರು. ಉದ್ಯೋಗ ಸುಲಭ ವಾಗಿ ದೊರೆಯಿತು. ಕರ್ನಾಟಕ ಕಾಲೇಜಿನ ಕನ್ನಡದ ಪ್ರಥಮ ಪ್ರಾಧ್ಯಪಕರೆಂಬ ಕೀರ್ತಿಗೆ ಪಾತ್ರರಾದರು. ಅದರೆ ಅವರ ಸಂತೋಷ ಒಂದೇ ವರ್ಷದಲ್ಲಿ ಮುಕ್ತಾಯವಾಯಿತು. ಯಾರದೋ ದೂರಿನಿಂದ ಇವರು ಪದವಿ ಮಟ್ಟದಲ್ಲಿ ಕನ್ನಡ ಕಲಿತಿಲ್ಲವೆಂಬ ಕಾರಣದ ಮೇಲೆ ಕೆಲಸದಿಂದ ಕಿತ್ತುಹಾಕಿದರು. ಆಗ ಅವರಿಗೆ ಆಸರೆ ಕೊಟ್ಟುದದು ಕೊಲ್ಲಾಪುರ ಸಂಸ್ಥಾನದ ದಿವಾನ ಅಣ್ಣಾಸಾಹೇಬ ಲಠ್ಠೆ. ಅಲ್ಲಿನ ರಾಜಾರಾಮ ಕಾಲೇಜಿನಲ್ಲಿ ಕನ್ನಡ ವಿಭಾಗ ಇಲ್ಲದೇ ಇದ್ದರೂ ಕನ್ನಡ ಪ್ರಾಧ್ಯಾಪಕರೆಂದು ಇವರ ನೇಮಕವಾಯಿತು.ಅ ಪ್ರಾಚ್ಯ ವಸ್ತುವಿಭಾಗದ ಹೊಣೆ ದೊರೆಯಿತು. ಅಲ್ಲಿ ಅವರಿಗೆ ಜೈನ ಸಾಹಿತ್ಯ ಸಂಶೋಧನೆಯ ಅವಕಾಶ ಸಿಕ್ಕಿತು ಜೀವನದ ಉದ್ದಕ್ಕೂ ಜೈನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರನ್ನ ಬಹುತೇಕರು ಜೈನರೆಂದೇ ತಿಳಿದುಕೊಂಡಿದ್ದರು. ಅವರು ತಮ್ಮ ವಿಭಾಗದ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದರು. ಸೇರಿದೊಡನೆ ಸಂಶೋಧನೆ ಶುರು ಮಾಡಿದರು..ಕೊಲ್ಲಾಪುರ ಮಾತ್ರವಲ್ಲದೆ ಧಾರವಾಡ ಬೆಳಗಾವಿ, ವಿಜಾಪುರ, ಕಾರವಾರ ಜಿಲ್ಲೆಗಳಲ್ಲೂ ಕ್ಷೇತ್ರ ಕಾರ್ಯ ಶುರು ಮಾಡಿದರು. ಕಾಲ ನಡಗೆ , ಇಲ್ಲವೆ , ಸೈಕಲ್‌ಸವಾರಿ ಸಿಕ್ಕರೆ ಎತ್ತಿನಗಾಡಿಯಲ್ಲಿ ಹಳ್ಳಿ ಹಳ್ಳಿಗೆಹೋದರು.ಮನೆಮನೆ ಎಡತಾಕಿ ಹಸ್ತಪ್ರತಿ, ತಾಮ್ರ ಪಟ ಸಂಗ್ರಹಣ ಮಾತ್ರವಲ್ಲ, ಶಿಲಾಶಾಸನ ,ಸ್ಮಾರಕ ಮತ್ತು ಪ್ರಾಚ್ಯವಸ್ತುಗಳನ್ನು ಗುರುತಿಸಿದರು. ಸಂಗ್ರಹ ಮತ್ತು ದಾಖಲೆ ಕೆಲಸ ಕೈಕೊಂಡರು. ಅಕ್ಷರಗಳ ಬಗ್ಗೆ ಅನಾಸಕ್ತಿ ಅವರಿಗೆ ಗೊತ್ತೆ ಇತ್ತು. ಅದಕ್ಕೆ ಆಸಕ್ತ ಯುವಕರನ್ನು ಪದವಿ ಶಿಕ್ಷಣಕ್ಕೆ ಕೊಲ್ಲಾಪುರಕ್ಕ ಬರಲು ಉತ್ತೇಜನ ನೀಡಿದರು. ಅಪಾರ ಪ್ರಾಕ್ತನ ವಸ್ತುಗಳು ಲಭ್ಯವಾದವು. ಅದು ಅವರಿಗೆ ಅಪರಿಚಿತ ಕ್ಷೇತ್ರ. ಆದ್ದರಿಂದ . ಅವರು ಮತ್ತೆ ವಿದ್ಯಾರ್ಥಿಯಾದರು. ಲಿಪಿಶಾಸ್ತ್ರ,ನಾಣ್ಯಶಾಸ್ತ್ರ, ಸಂಪಾದನಾಶಾಸ್ತ್ರ ಮತ್ತು ಪುರಾತತ್ತ್ವ ಶಾಸ್ತ್ರಗಳ ಅಧ್ಯಯನ ಮಾಡಿ ವಿಷಯ ಕರಗತ ಮಾಡಿಕೊಂಡರು ಎರಡೇ ವರ್ಷದಲ್ಲಿ ಅವರ ಸಂಗ್ರಹವು ಪ್ರಾಚ್ಯ ವಸ್ತುಸಂಗ್ರಹಾಯ ಎಂದು ಮಾನ್ಯತೆ ಪಡೆಯಿತು. ಪ್ರೊ. ಕುಂದಣಗಾರರು ಕೊಲ್ಲಾಪುರದ ಇತಿಹಾಸ ಬರೆಯುವಾಗ ವ್ಯಾಪಕ ಅಧ್ಯಯನ ಮಾಡಿದರು. ಬೆಳಗಿನ ನಸುಕಿನಲ್ಲಿ ಬ್ರಹ್ಮಪುರ ಬೆಟ್ಟ ಮತ್ತು ಪಂಚಗಂಗಾ ತೀರಕ್ಕೆ ಹೋಗಿ ಉತ್ಖನನ ಮಾಡುವರು.ಅಲ್ಲಿ ಸ್ವತಃ ಗುದ್ದಲಿ ಹಿಡಿದು ಅಗೆಯುತಿದ್ದರು. ಅಲ್ಲಿ ದೊರೆತ ಕಂಚು, ಹಂಚು, ನಾಣ್ಯ ಮತ್ತು ಪ್ರಾಚ್ಯವಸ್ತು ಗಳನ್ನ ಮನಗೆ ತಂದು ಸ್ನಾನ ಊಟ ಮುಗಿಸಿ ಕಾಲೇಜಿಗೆ ಹೋಗುವರು. ರಾತ್ರಿ ಅವುಗಳ ಅಧ್ಯಯನ ಮಾಡುವರು. ಇವರ ಪ್ರಯತ್ನದ ಫಲವಾಗಿ ೧೯೨೭ ರಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯವಾಯಿತು. ಮರಾಠಿಗರಾದ ಡಾ. ಸಂಕಾಳಿಯಾ ಅವರನ್ನು ನಿರ್ದೇಶಕರನ್ನಾಗಿ ಮಾಡಿ ಅದೇತಾನೆ ಪ್ರಾರಂಭವಾದ ಕನ್ನಡ ವಿಭಾಗಕ್ಕೆ ಕುಂದಣಗಾರರನ್ನು ಕಳುಹಿಸಲಾಯಿತು. ಆದರೂ ಅವರು ಬೇಸರ ಮಾಡಿಕೊಳ್ಳದೆ ಮುಂದೆ ೧೩ ವರ್ಷ ಅನಧಿಕೃತವಾಗಿ ಆ ಕೆಲಸವನ್ನೂ ಮಾಡಿದರು. ಕನ್ನಡ ವಿಭಾಗಕ್ಕೆ ಬಂದಮೇಲೆ ಮುಂಬಯಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಅವಕಾಶ ಸಿಕ್ಕಿತು. ಇಲ್ಲಿಗೆ ಓದಲು ಬಂದವರಿಗೆ ಕುಂದಣಗಾರರು ಆಶ್ರಯದಾತರಾದರು.ಅವರಿಂದಾಗಿ ರಾಜಾರಾಮ ಕಾಲೇಜಿಗೆ ಕರ್ನಾಟಕದಿಂದ ಕನ್ನಡ ವಿಭಾಗಕ್ಕೆ ಮಾತ್ರವಲ್ಲ ಬೇರೆ ವಿಭಾಗಗಳಿಗೂ ವಿದ್ಯಾರ್ಥಿಗಳು ಹರಿದುಬಂದರು. ಪ್ರೊ.ಕುಂದಣಗಾರರು ಬಾಲ್ಯದ ಕಷ್ಟ ಮರೆಯಲಿಲ್ಲ. ಅವರದು ಸರಳ ಜೀವನ.ತಮ್ಮವೇತನದ ಕಾಲುಭಾಗ ಬಡಹುಡುಗರ ಫೀ, ಪುಸ್ತಕಕ್ಕೆ, ಕಾಲಭಾಗ ಸಂಶೋಧನೆಗೆ ಮತ್ತು ಕಾಲುಭಾಗ ಪುಸ್ತಕಕೊಳ್ಳಲು ವಿನಿಯೋಗಿಸಿ ಉಳಿದ ಕಾಲುಭಾಗದಲ್ಲಿ ರೊಟ್ಟಿ ಚಟ್ಣಿ ತಿಂದು ಕಾಲಯಾಪನೆ ಮಾಡುವರು.ಕೊಲ್ಲಾಪುರದಲ್ಲಿ ಕುಂದಣಗಾರರ ಮನೆ ಕನ್ನಡನಾಡಿನ ವಿದ್ಯಾರ್ಥಿಗಳ ಪಾಲಿಗೆ ಕಾಶಿಯಾಗಿತ್ತು. ಇದರ ಫಲ ಮುಂಬಯಿ ಕರ್ನಾಟಕದ ಶಾಲೆ ಕಾಲೇಜುಗಳಲ್ಲಿ ಕುಂದಣಗಾರರ ಶಿಷ್ಯರೇ ಕಾಣುತಿದ್ದರು. ಕುಂದಣಗಾರರು ಬಹುಭಾಷಾ ಪಂಡಿತರು ಕನ್ನಡ , ಸಂಸ್ಕೃತ,ಇಂಗ್ಲಿಷ್‌, ಅರ್ಧಮಾಗಧಿ ಮತ್ತು ಮರಾಠಿಗಳ ಮೇಲೆಪ್ರಭುತ್ವ ಇದ್ದಿತು.ಅದರಿಂದ ಕನ್ನಡ ಮತ್ತು ಮರಾಠಿ ಕೃತಿಗಳ ಅನುವಾದ ಸಲೀಸಾಗಿತ್ತು. ಅವರು ಮರಾಠಿಗರಿಗೆ ಬಹು ಆತ್ಮೀಯರು. ಎಲ್ಲ ವಿಷಯದಲ್ಲೂ ಅವರು ಅಣ್ಣಾ., ಅವರ ಸಲಹೆಗೆ ಮೊದಲ ಮರ್ಯಾದೆ. ಪ್ರೊ. ಕುಂದಗಾರರ ಕಾಲದಲ್ಲಿ ಸಂಶೋಧನೆ ಎಂಬುದು ಕನ್ನೆ ನೆಲ. ಮೂಲ ಸಾಮಗ್ರಿಗಳನ್ನೂ ಅವರೇ ಸಂಶೋಧಿಸಬೇಕಿತ್ತು. ಯಾವುದೇ ಸೌಲಭ್ಯ ಅಥವಾ ಒತ್ತಡವಿರಲಿಲ್ಲ. ಹೆಸರು ಮತ್ತು ಹಣದ ಅವಕಾಶವೂ ಇರಲಿಲ್ಲ.ಆದರೂ ಲಾಭಾಂಕಾಂಕ್ಷೆ ಇಲ್ಲದೆ ಸಂಶೋಧನೆಗೆ ವೈಜ್ಞಾನಿಕ ಸ್ವರೂಪ ಕೊಟ್ಟರು ’ Notes on Mahalaxmi temple of Kolhapur” ಅವರ ಮೊದಲ ಸಂಶೋಧನೆ ೧೯೨೯ ರಲ್ಲಿ ಪ್ರಕಟವಾಯಿತು.ಅದು ಶೈವ ಮತಕ್ಕೆ ಸೇರಿರುವುದೆಂದು ಮತ್ತು ಜೈನ ಮೂರ್ತಿ ಅಲ್ಲವೆಂಬ ಅವರ ಭಿಪ್ರಾಯಕ್ಕೆ ವಿರೋದವಿದ್ದರೂ ಸತ್ಯ ದರ್ಶನ ಮಾಡಿಸಿದರೂ ಅದು ವಿವಾದಾತೀತವಲ್ಲ ಎಂದು ಸಾಮಾಜಿಕ ಹೊಣೆ ಮೆರೆದರು... ಅವರ “ Inscriptions of northern Karnataka state and Kolhapur” 1939 ರಲ್ಲಿ ಪ್ರಕಟವಾದ ಕೃತಿ. ಯಾವುದೇ ಸಾಂಸ್ಥಿಕ ನೆರವಿಲ್ಲದೆ ಏಕವ್ಯಕ್ತಿ ಪ್ರಯತ್ನದ ಫಲ.ಇದರಿಂದ ಅವರ ಹೆಸರು ರಾಷ್ಟ್ರಮಟ್ಟದಲ್ಲಿ ರಾರಾಜಿಸಿತು.ಕರ್ನಾಟಕದ ಶ್ರೀಮಂತ ಐತಿಹಾಸಿಕ ಪರಂಪರೆ ಪರಿಚಯ ಮಾಡಿಕೊಟ್ಟಿತು". ಅವರ ಶಾಸನ ಕುರಿತಾದ “ ಉತ್ತರಕರ್ನಾಟಕದ ಶಾಸನಗಳು” ಮತ್ತು ಶಿಲಾಲಿಪಿಗಳ ಮಹತ್ವ” ಲೇಖನಗಳು ಇಂದಿಗೂ ದಾರಿದೀಪವಾಗಿವೆ. ಹೀಗೆ ಹತ್ತಾರು ಶಾಸನ ಸಂಬಂಧಿ ಲೇಖನ ಬರೆದರು ಆದರೆ ಹೆಚ್ಚಿನ ಮಾಹಿತಿ ದೊರೆತೆರೆ ಜಾಣರು ತಿಳಿಸಲಿ ಎಂಬುದು ಅವರ ವಿನಯ ಸೂಚಿಸುತ್ತದೆ. ನಾಣ್ಯಶಾಸ್ತ್ರ ಅಧ್ಯಯನ ಮಾಡಿದ ಮೊದಲ ಕನ್ನಡದ ಅಧ್ಯಾಪಕರು ಎಂಬುದು ಅವರ ಹಿರಿಮೆ .ಅವರದು ಉತ್ಖನನದಲ್ಲಿ ದೊರೆತ ಆಂಧ್ರದ ಸೀಸ, ತಾಮ್ರದಿಂದ ಹಿಡಿದು ಈಸ್ಟ್ ಇಂಡಿಯಾ ಕಂಪನಿಯ ಎಲ್ಲ ನಾಣ್ಯಗಳ ಸಂಗ್ರಹವಿದೆ.ಪ್ರಾಚೀನ ನಾಣ್ಯಗಳಾದ ಮೊಳೆಗಳಿಂದ ಅಚ್ಚುಹಾಕಿದ, (Punch marked)ನಾಣ್ಯ, ಆಂಧ್ರದ ತಾಮ್ರದ ನಾಣ್ಯ, ಪದ್ಮ ಟಂಕಿ,ಬಂಗಾರದ ಬೇಳೆಗಳ ಸವಿವರ ಸಂಶೋಧನೆ ಮಾಡಿ ಅದರ ಮೂಲಕ ಆಂದಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ ರೂಪಿಸುವ ಪ್ರಯತ್ನ ಮಾಡಿರುವರು. ಅದರ ಫಲವಾಗಿ ರಾಷ್ಟ್ರಮಟ್ಟದ ಗೌರವ ದೊರಕಿ ಮುಂಬೈನಲ್ಲಿ ೧೯೪೬ ರಲ್ಲಿ ನಡೆದ “All India Oriental Congress” ದಕ್ಷಿಣ ಭಾರತದ ರಾಜ್ಯಗಳ ಗೋಷ್ಠಿಗೆ ಅಧ್ಯಕ್ಷರಾಗಿದ್ದರು. ಕುಂದಣಗಾರರು ಮೂಲತಃ ಸಾಹಿತ್ಯದ ಪ್ರಾಧ್ಯಾಪಕರಾದ್ದರೂ ಅವರ ಬರಹಗಳಲ್ಲಿ ಮೂರನೆಯ ಒಂದಾಂಶ ಸಂಶೋಧನೆಗೆ ಸಂಬಂಧಿಸಿವೆ. ಶಾಸನ ಪದ್ಯಗಳೂ ಕಾವ್ಯಗಳೇ ಎಂದು ಸಾಧಿಸಿ ತೋರಿಸಿದರು.ಶಾಸ್ತ್ರಸಾಹಿತ್ಯಕ್ಕೆ ಅವರಕೊಡುಗೆ ಗಮನಾರ್ಹ, ಛಂದಸ್ಸು ಹಲವು ಭಾಷೆಗಳ ತೌಲನಿಕ ಅಧ್ಯಯನ,ಆ ಬಗ್ಗೆ ಇಂಗ್ಲಿಷ್‌ಲೇಖನಗಳನ್ನು ಬರೆದಿರುವರು. ಕುಂದಣಗಾರರ ವಂಶ ವೃತ್ತಿ ಪರಿಣತೆಯು,”ಆಧುನಿಕ ಮತ್ತು ಪಂಪನ ಕಾಲದ ಆಭರಣಗಳು”ಮತ್ತು “ಸ್ತ್ರೀ ಪ್ರಸಾದನ” ಸಂಶೋಧನೆಗಳಲ್ಲಿ ವ್ಯಕ್ತವಾಗಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಯುಗ ಧರ್ಮದೊಡನೆ ಹಾಸುಹೊಕ್ಕಾಗಿದೆ.ಅಲ್ಲಿಯೂ ಕುಂದಣಗಾರರ ಸಂಶೋಧನಾ ಕಣ್ಣು ಹಾಯಿಸಿದ್ದಾರೆ. "ಕರ್ನಾಟಕದಲ್ಲಿ ಪಾಶುಪತರು ಮತ್ತು ಶೈವರು” ಸಂಶೋಧನೆಯಲ್ಲಿ ಶಾಸನಗಳ ಆಧಾರದಿಂದ ಪಾಶುಪಥರು ಶೈವರು ಬ್ರಾಹ್ಮಣರು ಎಂದು ಕರೆಸಿಕೊಳ್ಳುತ್ತಿರುವುದನ್ನು ಎತ್ತಿ ತೋರಿಸಿರುವರು. ಕರ್ನಾಟಕದ ನಾಥ ಪಂಥದ ಸ್ಥಳಗಳನ್ನು ಸಂಶೋಧಿಸಿದ್ದಾರೆ, ಅವರ ಲೇಖನ ಮತ್ಸೇಂದ್ರನಾಥರು ಶಂಕರಾಚಾರ್ಯರ ಗುರವಾಗಿಬಹುದೇ ? ಇಂಬ ಪ್ರಶ್ನೆ ಹುಟ್ಟುಹಾಕುತ್ತದೆ. ಕಲೆಗಳ ವಿಷಯದ ಅವರ ಸಂಶೋಧನೆ ಆಸಕ್ತಿದಾಯಕ. ಗುಪ್ತರಕಾಲದ ಕಲೆ ಬೆಳೆದು ಬಂದು ದ್ರಾವಿಡ ಮಿಶ್ರಣವಾಗಿ ಬಾದಾಮಿಯ ಚಾಲುಕ್ಯರ ನಂತರ ಕರ್ನಾಟಕ ಕಲೆಯಾದುದನ್ನು ಪ್ರತಿಪಾದಿಸಿರುವುರು.. ಶಿಲ್ಪಶಾಸ್ತ್ರಕ್ಕೆ ಸಂಬಂಧಿಸದ ಲೇಖನಗಳ ಉಲ್ಲೇಖವಿದೆ. ಎಲ್ಲವೂ ಲಭ್ಯವಿಲ್ಲ. ಅವರ ಸಂಶೋಧನಾ ವ್ಯಾಪ್ತಿ ಸಾಹಿತ್ಯ, ಧರ್ಮ, ಶಾಸನ. ಹಸ್ತಪ್ರತಿ, ನಾಣ್ಯ ಇತಿಹಾಸ, ಮತ್ತು ಕಲಾರಂಗಗಳಲ್ಲಿ ಹರಡಿದೆ. ಅವರ ನೂರಾರು ಲೇಖನಗಳು ವಿವಿಧ ವಿಷಯಗಳಲ್ಲಿ ಪ್ರಕಟವಾಗಿವೆ. ಆದರೆ ಈಗ ದೊರಕಿರುವವು ನೂರಕ್ಕು ಹೆಚ್ಚು ಮಾತ್ರ. ಅಷ್ಟರಿಂದಲೇ ಅವರ ಸಂಶೋಧನೆಯ ಸಮಗ್ರ ಕಲ್ಪನೆ ಬರುವುದು ಸಾಧ್ಯ. ಇತಿಹಾಸ ರಂಗದಲ್ಲಿ ವೈಯುಕ್ತಿಕ ನೆಲೆಯಲ್ಲಿ ಹುಲ್ಲೂರು ಶ್ರೀನಿವಾಸ ಜೋಯಿಸ್, ತಿ.ತಾ. ಶರ್ಮ, ಶ್ರೀಕಂಠ ಶಾಸ್ತ್ರಿಮೊದಲಾದವರು ಕೆಲಸ ಮಾಡಿದ್ದಾರೆ. ಅಂಥ ವಿರಳರ ಸಾಲಿನಲ್ಲಿ ಸಂಶೋಧನಾ ರಂಗದಲ್ಲಿ ಕೆಲಸ ಮಾಡಿದ ಪ್ರೊ. ಕೆ.ಜಿ ಕುಂದಣಗಾರರು ಪ್ರಮುಖರು. ಅವರ ಅಪಾರ ಕೃತಿಗಳಲ್ಲಿ ಉಪಲಬ್ಧವಿರುವವು ಎರಡು ಇಂಗ್ಲಿಷ್ ಮತ್ತು ೧೨ ಕನ್ನಡ ಕೃತಿಗಳು ಮಾತ್ರ. ಸುಮಾರು ೧೦ ಕೃತಿಗಳ ಉಲ್ಲೇಖವೂ ದೊರತಿದೆ . ಉಳಿದವನ್ನುಸಂಶೋಧನೆ ಮಾಡಬೇಕಿದೆ. ಗ್ರಂಥಸಂಪಾದನಾ ರಂಗದಲ್ಲಿ ಅವರ ಕೊಡುಗೆ ಗಣನೀಯ.ಇವರ ಕೃತಿಗಳೆಲ್ಲ ಆಕರ ಗ್ರಂಥಗಳೆ. ಕರ್ನಾಟಕ ಸರ್ಕಾರದ ಕನ್ನಡ –ಇಂಗ್ಲಿಷ್‌ನಿಘಂಟು ಮತ್ತು ಸಾಹಿತ್ಯ ಪರಿಷತ್ತಿನ ಕನ್ನಡ –ಕನ್ನಡ ನಿಘಂಟು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಛಂದಸ್‌ಶಾಸ್ತ್ರದಲ್ಲಿ ಅವರ ಸೇವೆ ಸಂದಿದೆ. ಅವರ ಮಾರ್ಗದರ್ಶನದಲ್ಲಿ ಬಂದ “ ಕನ್ನಡ ಜನಪದ ಗೀತೆಗಳು” ಮಹಾಪ್ರಬಂಧವು ಇಡೀ ಕರ್ನಾಟಕ್ಕೇ ಮೊಟ್ಟಮೊದಲ ಜಾನಪದ ಕುರಿತು ಬಂದ ಪಿ.ಎಚ್‌ಡಿ ಸಂಪ್ರಬಂಧ.ಅವರ ಮಾರ್ಗದರ್ಶನದಲ್ಲಿ ಬಂದ ಡಿ ಎಸ್‌. ಕರ್ಕಿಯವರ ಕನ್ನಡ ಛಂದೋವಿಕಾಸ ಇಂದಿಗೂ ಅಧಿಕೃತ ಆಕರಗ್ರಂಥ. ದೇಶೀ ಛಂದಸ್ಸಿನ ಅವರ ವಿಚಾರಗಳು ಇಂದಿಗೂ ಪ್ರಸ್ತುತ ಎನಿಸಿವೆ. ಅವರು ಹಳಗನ್ನಡದ ರಕ್ಷಕರಾಗಿ ಹೊಸಗನ್ನಡದ ಹರಿಕಾರರಾಗಿ ಕನ್ನಡ ಉಳಿಸಿ ಬೆಳಸುವಲ್ಲಿ ಅಪಾರ ಕೆಲಸ ಮಾಡಿರುವುರು.ಅವರು ಕರ್ನಾಟಕ ವಿಶ್ವ ವಿದ್ಯಾಲಯವೂ ಸೇರಿದಂತೆ ಹಲವು ಕಡೆ ಕನ್ನಡ ಬೆಳಸಲು ಅಪಾರ ಪ್ರಯತ್ನ ಮಾಡಿದರು. ಆರಂಭ ಕಾಲದಲ್ಲಿ ಎಲ್ಲ ಉನ್ನತ ಶಿಕ್ಷಣದ ಪಠ್ಯ ಕ್ರಮ ರೂಪಿದವರು ಅವರೇ. ಅನಿವಾಸಿ ಕನ್ನಡಿಗರಾಗಿ ಯಾವ ಸಾಂಸ್ಥಿಕ ಸಹಾಯವಿಲ್ಲದೆ , ಸೂಕ್ತ ಮಾರ್ಗದರ್ಶನ ಮತ್ತು ಸೌಲಭ್ಯಗಳಿಲ್ಲದೆ ಕಡು ಬಡತನದಲ್ಲಿ ಅವರು ಮಾಡಿದ ಕೆಲಸಗಳ ಅಗಾಧತೆ ಬೆರಗು ಹುಟ್ಟಿಸುವುದು. ಅವರಿಗೆ ಸಂದ ಗೌರವ ಮತ್ತು ಸನ್ಮಾನಗಳು ವಿರಳ. ಗದಗಿನಲ್ಲಿ 1೧೯೬೫ ರಲ್ಲಿ ನಡೆದ ೪೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ದೊರಕಿತ್ತು. ಪ್ರಾಧ್ಯಾಪಕ ಹದ್ದೆಯಿಂದ ನಿವೃತ್ತರಾದ ಮೇಲೆ ಬೆಳಗಾವಿಯಲ್ಲಿ ಪತ್ನಿಸಮೇತರಾಗಿ ನೆಲೆಸಿದರು. ಅವರ ಸರಳ ಮತ್ತು ಪ್ರಾಮಾಣಿಕ ಜೀವನ ಕೊನೆಯವರೆಗೂ ಬಡತನದಲ್ಲೇ ಇಟ್ಟಿತು. ಪ್ರಾಧ್ಯಾಪಕರಾದರೂ ಆದಾಯದ ಬಹಳಪಾಲು ದಾನ, ಪುಸ್ತಕ, ಸಂಶೋಧನೆಗಾಗಿಯೇ ಖರ್ಚಾಗುತಿತ್ತು. ಕೊನೆಗಾಲದಲ್ಲಿ ಪಿಂಚನಿಯಿಂದ ಜೀವನ ನಡೆಬೇಕಿತ್ತು.. ಅಪಾರ ಹಣ ಖರ್ಚು ಮಾಡಿ ಸಂಗ್ರಹಿಸಿದ್ದ ಪುಸ್ತಕಗಳನ್ನು ಅವರ ನಂತರ ಪಡೆಯಲು ಕರ್ನಾಟಕ ವಿಶ್ವವಿದ್ಯಾಲಯ ಹಣ ನೀಡಲುಬಂದರೂ, ಸರಸ್ವತಿಯನ್ನು ಮಾರಲಾರೆ ಎಂದು ಹಣ ನಿರಾಕರಿಸಿದರು. ಇದ್ದ ಒಬ್ಬ ಮಗನೂ ಅವರ ಎದುರೇ ಕಣ್ಣು ಮುಚ್ಚಿದ. ರಾಜರಾಮ ಕಾಲೇಜಿಗೆ ಬರಿಗೈನಲ್ಲಿ ಹೋದವರು ನಿವೃತ್ತರಾಗಿ ಬರಿಗೈನಲ್ಲಿಯೇ ಮರಳಿದರು.ರಾಣಿ ಪಾರ್ವತಿ ದೇವಿ ಕಾಲೇಜಿನವರು ಕೊಡಮಾಡಿದ ಚಿಕ್ಕನಿವೇಶನದಲ್ಲಿ ಪುಟ್ಟಮನೆಯಲ್ಲಿ ವೃದ್ಧ ದಂಪತಿಗಳು ನೆಲೆಸಿದರು.ಅದಕ್ಕಾಗಿ ಅಲ್ಲಿ ಗೌರವ ಅಧ್ಯಾಪಕರಾಗಿ ಕೆಲಸ ಮಾಡಿದರು. ಬರುತಿದ್ದ ೭೫ ರೂ. ನಿವೃತ್ತಿವೇತನದಲ್ಲಿ ಕಾಲಯಾಪನೆ ಮಾಡಬೇಕಾಗಿತ್ತು. ಆದರೆ ಅವರು ಸ್ವಾಭಿಮಾನಿ ಹಣಕ್ಕಾಗಿ ಅಭಿಮಾನಬಿಡಲಿಲ್ಲ. ಇನ್ನೊಬ್ಬರೆದುರು ಕೈಒಡ್ಡಲಿಲ್ಲ. ದಾರುಣ ಬಡತನದಲ್ಲಿಯೇ ಮುಖದನಲ್ಲಿ ನಗೆ ಮಾಸದಂತೆ ಕೊನೆಯವರೆಗೂ ಜೀವಿಸಿದರು. ಸಾಧಕ, ಶ್ರಮಜೀವಿ ಕನ್ನಡದ ಕಟ್ಟಾಳು ಎಪ್ಪತ್ತನೆಯ ವಯಸ್ಸಿನಲ್ಲಿ ಅಂದರೆ ೧೯೬೫ ರಲ್ಲಿ ಆಗಷ್ಟ್ ೫ ರಂದು ಗತ ಇತಿಹಾಸದ ಭಾಗವಾದರು.