ಕಲ್ಯಾಣಾನಂದ
ಕಲ್ಯಾಣಾನಂದ (1874–1937) ವಿವೇಕಾನಂದರ ನೇರ ಸಂನ್ಯಾಸಿ ಶಿಷ್ಯರು. ಇವರು ಹರಿದ್ವಾರದ ಹತ್ತಿರ ಕಂಖಾಲ್‍ನಲ್ಲಿ ರಾಮಕೃಷ್ಣ ಮಿಶನ್ ಸೇವಾಶ್ರಮ ಸ್ಥಾಪಿಸಿದರು. ರಾಮಕೃಷ್ಣ ಪಂಥದ ಸಂನ್ಯಾಸಿಯಾಗಿ ತಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಜೀವನಕ್ರಮವಾಗಿ ಅವರು ಮಾನವಕುಲದ ಸೇವೆ ಪ್ರಾರಂಭಿಸಿದರು ಮತ್ತು ಸ್ಥಳೀಯ ನಿವಾಸಿಗಳು ಮತ್ತು ಯಾತ್ರಿಗಳ ಪ್ರಯೋಜನಕ್ಕಾಗಿ ಅದನ್ನು ಆಚರಿಸಿದರು. ಬಡವರು ಮತ್ತು ಪೀಡಿತರ ಸೇವೆಮಾಡಲು ರಾಮಕೃಷ್ಣ ಮಿಶನ್ ಸೇವಾಶ್ರಮದಲ್ಲಿ ಅವರು ಮೂವತ್ತಾರು ವರ್ಷ ಕಳೆದರು. ಆರೋಗ್ಯ ರಕ್ಷಣೆಯ ಲಭ್ಯತೆ ಇಲ್ಲದ ಬಡವರು, ನಿರ್ಗತಿಕರು ಮತ್ತು ಸಂಚಾರಿ ಸಂನ್ಯಾಸಿಗಳಿಗೆ ದೂರಸ್ಥ ಸ್ಥಳದಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ ಪ್ರವರ್ತಕರಲ್ಲಿ ಅವರೂ ಒಬ್ಬರು.[೧]
ಕಲ್ಯಾಣಾನಂದರು ೧೮೭೪ರಲ್ಲಿ ಪೂರ್ವ ಬಂಗಾಳ ಪ್ರಾಂತ್ಯದ ಹನುವಾ ಗ್ರಾಮದಲ್ಲಿ ದಕ್ಷಿಣರಂಜನ್ ಗುಹಾ ಆಗಿ ಜನಿಸಿದರು. ಅವರ ತಂದೆ ಉಮೇಶ್ ಚಂದ್ರ ಗುಹಾ. ಅವರು ತಮ್ಮ ತಂದೆಯನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡರು ಮತ್ತು ತಮ್ಮ ಚಿಕ್ಕಪ್ಪನ ಪಾಲನೆಯಲ್ಲಿ ಶಿಕ್ಷಣ ಪಡೆದರು. ವಿಪರೀತ ಬಡತನದ ಕಾರಣ ಅವರು ವಿಧ್ಯುಕ್ತ ಶಿಕ್ಷಣವನ್ನು ಬಿಟ್ಟುಬಿಡಬೇಕಾಗಿ ಬಂತು.
ದಕ್ಷಿಣರಂಜನ್ ನಿಸ್ವಾರ್ಥ ಜೀವನ ನಡೆಸುವ ಮತ್ತು ಬಡವ ಹಾಗೂ ನಿರ್ಗತಿಕರನ್ನು ದೇವರ ಅಭಿವ್ಯಕ್ತಿಯಾಗಿ ಕಂಡು ಅವರ ಸೇವೆಮಾಡುವ ವಿವೇಕಾನಂದರ ಆದರ್ಶಗಳಿಂದ ಪ್ರೇರಿತರಾದರು. ೧೮೯೮ರಲ್ಲಿ ಅವರು ಬೇಲೂರ್ ಮಠ್ ಸೇರಿದರು. ವಿವೇಕಾನಂದರು ಅವರಿಗೆ ದೀಕ್ಷೆ ಕೊಟ್ಟರು ಮತ್ತು ಅವರು ಕಲ್ಯಾಣಾನಂದ ಎಂಬ ಹೆಸರಿನಲ್ಲಿ ಸಂನ್ಯಾಸ ವಚನಗಳನ್ನು ಸ್ವೀಕರಿಸಿದರು. ಅವರು ರಾಮಕೃಷ್ಣರ ಮತ್ತೊಬ್ಬ ನೇರ ಶಿಷ್ಯರಾದ, ಮರಣ ಶಯ್ಯೆಯಲ್ಲಿದ್ದ ಕಾಯಿಲೆಪೀಡಿತ ಯೋಗಾನಂದರ ಸೇವೆಮಾಡಿದರು.
೧೮೯೯ರಲ್ಲಿ ವಿವೇಕಾನಂದರು ಎರಡನೆ ಬಾರಿಗೆ ಪಶ್ಚಿಮ ದೇಶಗಳಿಗೆ ಹೋದಾಗ, ಕಲ್ಯಾಣಾನಂದರು ತೀರ್ಥಯಾತ್ರೆ ಮತ್ತು ತಪಸ್ಸು ಮಾಡಲು ಹೋದರು. ಬನಾರಸ್‍ನಲ್ಲಿ ಅವರು ಕೇದಾರ್‍ನಾಥ್ ಮೌಲಿಕ್‍ರನ್ನು ಭೇಟಿಯಾದರು. ಕೇದಾರ್‍ನಾಥ್ ಮೌಲಿಕ್ ಮುಂದೆ ಅಚಲಾನಂದರಾಗಿ ಪ್ರಸಿದ್ಧರಾದರು. ಇವರು ಕೂಡ ವಿವೇಕಾನಂದರ ಮತ್ತೊಬ್ಬ ಸಂನ್ಯಾಸಿ ಶಿಷ್ಯರು ಮತ್ತು ರಾಮಕೃಷ್ಣ ಮಿಶನ್ ಸೇವಾಲಯ ಬನಾರಸ್‍ನ ಸ್ಥಾಪಕರು. ಒಟ್ಟಾಗಿ ಅವರಿಬ್ಬರು ಬನಾರಸ್‍ನಲ್ಲಿ ಬಡವರು ಮತ್ತು ನಿರ್ಗತಿಕರ ಸೇವೆ ಮಾಡಿದರು. ಇದರ ಮೂಲಕ ಕಲ್ಯಾಣಾನಂದರು ವಿವೇಕಾನಂದರ ಪ್ರಾಯೋಗಿಕ ವೇದಾಂತದ ದೃಷ್ಟಿಗೆ ಆರಂಭಿಕವಾಗಿ ಒಡ್ಡಲ್ಪಟ್ಟರು. ೧೯೦೧ರಲ್ಲಿ ಅವರು ಪಶ್ಚಿಮದಿಂದ ಮರಳಿದ್ದ ವಿವೇಕಾನಂದರನ್ನು ಭೇಟಿಯಾಗಲು ಹಿಂದಿರುಗಿದರು. ವಿವೇಕಾನಂದರು ಋಷಿಕೇಶ-ಹರಿದ್ವಾರ ಪ್ರದೇಶದ ಸುತ್ತ ರೋಗಗ್ರಸ್ತ ಮತ್ತು ಕಾಯಿಲೆಪೀಡಿತ ಸಂನ್ಯಾಸಿಗಳಿಗಾಗಿ ಕೆಲಸಮಾಡಲು ಅವರನ್ನು ವಿನಂತಿಸಿದರು ಏಕೆಂದರೆ ವಿವೇಕಾನಂದರು ಸ್ವತಃ ಜನರ ದುರವಸ್ಥೆಗೆ ಸಾಕ್ಷಿಯಾಗಿದ್ದರು. ಆ ಪ್ರದೇಶದಲ್ಲಿ ಯಾವುದೇ ಆರೋಗ್ಯರಕ್ಷಣಾ ಸೌಲಭ್ಯವಿರಲಿಲ್ಲ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "Demise of Swami Sarvagatananda". Vedanta Society Providence. Archived from the original on 2016-12-23. Retrieved 2017-06-02.
- ↑ "Genesis of Ramakrishna Mission Sevashrama, Kankhal". Archived from the original on 2017-07-26. Retrieved 2017-06-02.