ವಿಷಯಕ್ಕೆ ಹೋಗು

ಕಲಾದಗಿ ಶ್ರೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲಾದಗಿ ಶ್ರೇಣಿ : ಕರ್ನಾಟಕ ರಾಜ್ಯದ ಬೆಳಗಾಂವಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಕಾಣುವ ಪ್ರೀಕೇಂಬ್ರಿಯನ್ ಯುಗದ ಶಿಲಾ ಶ್ರೇಣಿಯ ಶಿಲಾಸ್ತರಗಳು ಕಲಾದಗಿಯ ಬಳಿ ಅತ್ಯುತ್ತಮವಾಗಿ ಕಂಡುಬರುವುದರಿಂದ ಈ ಹೆಸರು ಬಂದಿದೆ. ಇವನ್ನು ಮೊತ್ತಮೊದಲಿಗೆ ವೀಕ್ಷಿಸಿದ (೧೮೭೬) ರಾಬರ್ಟ್ ಬ್ರೂಸ್ಫುಟ್ ಇವಕ್ಕೆ ಆ ಊರಿನ ಹೆಸರಿಟ್ಟು ಕರೆದ. ಆಗ ಈ ಊರು ಜಿಲ್ಲಾ ಕೇಂದ್ರವಾಗಿತ್ತು. ಶಿಲಾಶ್ರೇಣಿ ಅನನುರೂಪ್ಯವಾಗಿ ಇದಕ್ಕಿಂತ ಹಿರಿಯದಾದ ಧಾರವಾಡ ಪದರು ಶಿಲೆಗಳು ಮತ್ತು ಗ್ರಾನಿಟೆಕ್ ಶಿಲೆಗಳ ಮೇಲೆ ಸಂಚಿತವಾಗಿದೆ. ಪಶ್ಚಿಮದತ್ತ ಬೆಳಗಾವಿಯಿಂದ ಹಿಡಿದು ಪೂರ್ವಕ್ಕೆ ಅಮೀನ್ಗಡದ ವರೆಗೆ ಸುಮಾರು (೧೨೦) ಮೈಲಿ ಉದ್ದಕ್ಕೂ ಈ ಶ್ರೇಣಿ ಹಬ್ಬಿದೆ. ಇದರ ಅಗಲ ೩೮-೭೦ ಕಿಮೀ. ಇದಲ್ಲದೆ ಇದಕ್ಕಿಂತ ಕಿರಿಯದೆನಿಸಿದ ದಖ್ಖನ್ ಲಾವಾಸ್ತರಗಳ ನಡುವೆಯೂ ಈ ಶ್ರೇಣಿಯ ಸಣ್ಣಪುಟ್ಟ ಅಂತಶ್ಯಾಯಿಗಳನ್ನು (ಇನ್ಲೈಯರ್ಸ್) ನೋಡಬಹುದು. ನಮ್ಮ ರಾಜ್ಯದಲ್ಲೇ ಅಲ್ಲದೇ ನೆರೆಯ ಮಹಾರಾಷ್ಟ್ರದ ರತ್ನಗಿರಿ ಮತ್ತು ಸಾವಂತವಾಡಿಗಳಲ್ಲೂ ಈ ಬಗೆಯ ಪ್ರಸ್ತರಗಳಿವೆ. ನಮ್ಮ ರಾಜ್ಯದ ಅಂತಶ್ಯಾಯಿಗಳಲ್ಲಿ ಜಮಖಂಡಿ ಮತ್ತು ಮುಧೋಳ್ ಸಮೀಪದವು ಅತ್ಯಂತ ವಿಶಾಲವಾದವು. ಅದರಲ್ಲೂ ಜಮಖಂಡಿಯ ಒಳಚಾಚು ಬಹು ದೊಡ್ಡದು. ಅಲ್ಲದೆ ಗೋಕಾಕ್, ಸವದತ್ತಿ ಮತ್ತು ಇತರ ಕೆಲವೆಡೆಗಳಲ್ಲಿ ಈ ಶ್ರೇಣಿಯ ಪ್ರಮುಖ ಬಹಿಶ್ಯಾಯಿಗಳೂ (ಔಟ್ಲೈಯರ್ಸ್) ಇವೆ. ಇಲ್ಲಿ ಶಿಲಾಸ್ತರಗಳು ಅನನುರೂಪ್ಯವಾಗಿ ಆರ್ಕೇಯನ್ ಗೀರು ಮತ್ತು ಪದರು ಶಿಲೆಗಳ ಮೇಲೆ ಸಂಚಿತವಾಗಿವೆ.

ಕಲಾದಗಿ ಬಳಿ ಶ್ರೇಣಿ ಅತ್ಯಂತ ಮಂದವಾಗಿದ್ದು (೩೩೫೨-೪೫೭೨ ಮೀ) ಕೆಳ ಮತ್ತು ಮೇಲಿನ ಶ್ರೇಣಿಗಳೆಂದು ವಿಭಜಿತವಾಗಿದೆ.

ಮೇಲಿನ ಶ್ರೇಣಿ

  • (೬) ಜೇಡುಶಿಲೆ, ಸುಣ್ಣಶಿಲೆ ಮತ್ತು ಹಿಮಟೈಟ್ ಪದರುಶಿಲೆ - (೬೦೮ ಮೀ) ಮಂದ
  • (೫) ಬೆಣಚುಶಿಲೆ, ಪೆಂಟಶಿಲೆ ಮತ್ತು ಬ್ರೆಕ್ಷಾ - (೩೬೫-೫೪೮ ಮೀ) ಮಂದ ಕೆಳಶ್ರೇಣಿ
  • (೪) ಸುಣ್ಣಶಿಲೆ, ಜೇಡು ಮತ್ತು ಜೇಡುಶಿಲೆ}
  • (೩) ಮರಳುಶಿಲೆ ಮತ್ತು ಜೇಡುಶಿಲೆ} - (೪೫೭೨-೫೪೮೬ ಮೀ) ಮಂದ
  • (೨) ಸಿಲಿಕಾಂಶಯುಕ್ತ ಸುಣ್ಣಶಿಲೆ ಮತ್ತು ಚೆರ್ಟ್ ಬ್ರೆಕ್ಷಾ}
  • (೧) ಬೆಣಚುಶಿಲೆ, ಪೆಂಟಶಿಲೆ ಮತ್ತು ಮರಳುಶಿಲೆ}- (೯೧೪-೧೫೨೩ ಮೀ) ಮಂದ

ಕೆಳಶ್ರೇಣಿ

[ಬದಲಾಯಿಸಿ]

ಶ್ರೇಣಿಯ ಕೆಳವಿಭಾಗದಲ್ಲಿ ಅಡಿಯ ಪೆಂಟಶಿಲೆ, ಬೆಣಚುಶಿಲೆ ಮತ್ತು ಮರಳುಶಿಲೆಗಳಿವೆ. ಕಲಾದಗಿ ಇಳಕಲು (ಬೇಸಿನ್) ಪ್ರದೇಶದ ವಾಯುವ್ಯ ಭಾಗದಲ್ಲಿನ ಅಂಡಮುರ್ನಾಳಿನ ಬಳಿ (೫.೫೦ ಮೀ)ಗಳಿಗಿಂತಲೂ ಹೆಚ್ಚು ಮಂದವಾಗಿರುವ ಪೆಂಟಶಿಲೆಯ ಸ್ತರಗಳಿವೆ. ಹೆರಕಲ್ ಸಮೀಪ ಜಾಸ್ಪರ್ಯುಕ್ತ ಹಿಮಟೈಟಿನ ಪೆಂಟಿಗಳು ಕಬ್ಬಿಣಾಂಶದಿಂದ ಕೂಡಿದ ಮಾತೃಕೆಯಲ್ಲಿ ಹುದುಗಿರುವುದನ್ನು ನೋಡಬಹುದು. ಬಾಗಲಕೋಟೆ ಬಳಿಯ ಸಾಲಗುಂದಿ, ಮಲ್ಲಾಪುರ ಮತ್ತು ಅನಗವಾಡಿ ಬಳಿ ಕಂಡುಬರುವ ಮರಳುಶಿಲೆ ಮತ್ತು ಬೆಣಚುಶಿಲೆಗಳಲ್ಲಿ ಪ್ರವಾಹಸ್ತರಗಳು, ಬಿಸಿಲ ಬಿರಿತಗಳು ಮತ್ತು ಅಲೆಯ ಗುರುತುಗಳಿವೆ. ಶ್ರೇಣಿಗೆ ಸೇರಿದ ಅತ್ಯುತ್ತಮ ಬೆಣಚುಶಿಲಾಸ್ತರಗಳನ್ನು ಗೋಕಾಕ್ ಹತ್ತಿರ ನೋಡಬಹುದು. ಇವು (೫೪ ಮೀ) ಎತ್ತರದ ಕಡಿದಾದ ಬಂಡೆಯೋಪಾದಿಯಲ್ಲಿದ್ದು ಅಲ್ಲಿ ಘಟಪ್ರಭಾನದಿಯ ಗೋಕಾಕ್ ಜಲಪಾತವಿದೆ. ಮಲಪ್ರಭಾನದಿಯ ನವಿಲುತೀರ್ಥ ಎಂಬ ಕಂದರ ಸಹ ಈ ಶಿಲಾಪ್ರಸ್ತರಗಳಲ್ಲಿದೆ. ಬಾದಾಮಿಯ ಬಳಿ ಇರುವ ಬೆಣಚುಶಿಲೆಗಳಲ್ಲಿ ಅತ್ಯುತ್ತಮ ಪ್ರವಾಹಸ್ತರಗಳನ್ನು ಗುರುತಿಸಬಹುದು. ಶಿಲೆಗಳನ್ನು ಕೊರೆದು ಇತಿಹಾಸಪ್ರಸಿದ್ಧವಾದ ಗುಹಾಂತರ್ದೇವಾಲಯಗಳನ್ನು ಪುರಾತನರು ನಿರ್ಮಿಸಿದ್ದಾರೆ. ಅಲ್ಲದೆ ಭೂಸವೆತದಿಂದ ಕೆಲವೆಡೆ ಶಿಲೆಗಳನ್ನು ಚಿತ್ರವಿಚಿತ್ರವಾದ ವಿವಿಧ ಆಕೃತಿಗಳನ್ನು ತಳೆದುನಿಂತಿವೆ.

ಕಲಾದಗಿ ಇಳುಕಲಿನ ಪೂರ್ವ ಮತ್ತು ದಕ್ಷಿಣ ಪಾರ್ಶ್ವಗಳಲ್ಲಿ ಅಧಿಕ ಸಿಲಿಕಾಂಶದಿಂದ ಕೂಡಿದ ಸುಣ್ಣಶಿಲೆಗಳಿವೆ. ಅಲ್ಲಲ್ಲೇ ಸಿಲಿಕಾಂಶ ಅಧಿಕಗೊಂಡ ಕಾರಣ ಇವು ಹಾರ್ನ್ಸ್ಟೋನ್ (ಕೊಂಬುಶಿಲೆ) ಅಥವಾ ಚೆರ್ಟ್ಬ್ರೆಕ್ಷಾಗಳಾಗಿ ಮಾರ್ಪಟ್ಟಿರುವುದೂ ಉಂಟು. ಮಹಾಕೂಟ ಬೆಟ್ಟದ ಸಾಲಿನಲ್ಲಿ ಈ ಶಿಲೆಗಳು ಅತ್ಯುತ್ತಮ ರೀತಿಯಲ್ಲಿ ಕಂಡುಬಂದಿವೆ. ಸವದತ್ತಿ ಮತ್ತು ಪಾರಸ್ಗಡಗಳ ಬಳಿ ವಿಸ್ತಾರವಾದ ಅಡಿಯ ಬೆಣಚು ಶಿಲಾಸ್ತರಗಳು ಧಾರವಾಡ ಪದರುಶಿಲೆಗಳು ಮತ್ತು ಗ್ರ್ಯಾನಿಟಿಕ್ ನೈಸ್ ಶಿಲೆಗಳ ಮೇಲೆ ಹರಡಿವೆ. ಸವದತ್ತಿಯ ಉತ್ತರಕ್ಕೆ ಇದಕ್ಕೆ ಸಂಬಂಧಿಸಿದ ಸ್ತರಭಂಗ ರೇಖೆಯನ್ನೂ ಗುರುತಿಸಲು ಸಾಧ್ಯ. ಕಲಾದಗಿಯ ಸುತ್ತಮುತ್ತ ಬಹುಮಟ್ಟಿಗೆ ಸುಣ್ಣಶಿಲೆ ಮತ್ತು ಜೇಡುಶಿಲಾ ಸ್ತರಗಳಿಂದ ಕೂಡಿದ ನಾಲ್ಕನೆಯ ಹಂತವಿದೆ. ಲೋಕಾಪುರದ ಬಳಿ ಅತ್ಯಂತ ಮಂದವಾದ ಸುಣ್ಣಶಿಲಾಸ್ತರಗಳಿವೆ. ಇವುಗಳ ಜಾಡು ಸುಮಾರು ೧೨-೧೬ ಕಿಮೀ ಉದ್ದವಾಗಿಯೂ ೮-೯.೬೬ ಕಿಮೀ ಅಗಲವಾಗಿಯೂ ಮತ್ತು ೪೫೭೨-೫೪೮೬ ಮೀ ಮಂದವಾಗಿಯೂ ಇದೆ. ಇಲ್ಲಿ ಉತ್ತಮ ದರ್ಜೆಯ ಸುಣ್ಣಶಿಲೆ, ಡಾಲೊಮೈಟ್ ಮತ್ತು ಜೇಡುಶಿಲಾಸ್ತರಗಳಿವೆ. ಚಿಕ್ಕ ಶಿಳ್ಳಕೇರಿ, ಕಲಾದಗಿ, ಲೋಕಾಪುರ, ಖಜ್ಜಿದೋಣಿ, ಗದ್ದನಕೇರಿ, ಯಾದವಾಡ ಮತ್ತು ಔರ್ವಾಡಗಳ ಬಳಿ ಸಿಮೆಂಟ್ ತಯಾರಿಕೆಗೆ ಅತ್ಯಂತ ಉಪಯುಕ್ತವೆನಿಸಿದ ಸುಣ್ಣಶಿಲಾನಿಕ್ಷೇಪಗಳಿವೆ. ಅಧಿಕ ಕ್ಯಾಲ್ಸಿಯಂ ಅಂಶದಿಂದ ಕೂಡಿದ ಸುಣ್ಣಶಿಲಾನಿಕ್ಷೇಪಗಳು ಲೋಕಾಪುರ, ಖಜ್ಜಿದೋಣಿ, ಗದ್ದನಕೇರಿ, ಚಿಕ್ಕಶಿಳ್ಳಕೇರಿ ಮತ್ತು ಯಾದವಾಡಗಳ ಬಳಿ ಇದ್ದು ಇವನ್ನು ಹೊಸಪೇಟೆಯಲ್ಲಿ ಸ್ಥಾಪಿತವಾಗಿರುವ ಉಕ್ಕು ತಯಾರಿಕಾ ಕಾರ್ಖಾನೆಯಲ್ಲಿ ಬಳಸಲಾಗುತ್ತಿದೆ. ಖಜ್ಜಿದೋಣಿ, ಲೋಕಾಪುರ, ಚಿಕ್ಕಶಿಳ್ಳಕೇರಿ, ದೊಡ್ಡಶಿಳ್ಳಕೇರಿ-ಇವುಗಳ ಸುತ್ತಮುತ್ತ ಉತ್ತಮ ಸ್ಲೇಟುಶಿಲೆಯ ಅರೆಗಳನ್ನು ನೋಡಬಹುದು. ವಿಗ್ರಹಗಳ ಕೆತ್ತನೆಗೆ ಯೋಗ್ಯವಾದ ಶಿಲೆ ಚಿಕ್ಕಶಿಳ್ಳಕೇರಿಯ ಬಳಿ ಸಿಗುತ್ತದೆ. ಕೆಲವೆಡೆ ಅಲಂಕಾರ ಶಿಲೆಗಳಾಗಲು ಯೋಗ್ಯವೆನಿಸಿದ ವಿವಿಧ ಛಾಯೆಯ ಸುಣ್ಣ ಶಿಲಾಸ್ತರಗಳು ಇವೆ.

ನಾಲ್ಕನೆಯ ಹಂತದ ಸುಣ್ಣಶಿಲಾಸ್ತರಗಳೂ ಭೂ ಚಟುವಟಿಕೆಗಳಿಗೊಳಗಾಗಿ ಹಲವಾರು ರೀತಿಯಲ್ಲಿ ಮಡಿಕೆ ಬಿದ್ದಿರುವುದನ್ನು ಅಲ್ಲಲ್ಲೇ ಗುರುತಿಸಬಹುದು (ಚಿತ್ರ ೧). ಈ ಮಡಿಕೆಗಳಲ್ಲಿ ಸಮುಖಾವನತ (ಸಿನ್ಕ್ಲೈನ್ಸ್‌) ಮಡಿಕೆಗಳೇ ಹೆಚ್ಚು. ಇದು ತನಕ ಪ್ರೀಕೇಂಬ್ರಿಯನ್ ಯುಗದ ಈ ಶಿಲಾಸ್ತರಗಳಲ್ಲಿ ಜೀವ್ಯವಶೇಷಗಳ ಕುರುಹೇ ಇಲ್ಲವೆಂಬ ಅಭಿಪ್ರಾಯವಿತ್ತು. ಆದರೆ ಈಚಿನ ಸಂಶೋಧನೆಗಳಿಂದ ಲೋಕಾಪುರ, ಆಲಗುಂದಿ, ಚಿತ್ರಭಾನುಕೋಟೆ ಮುಂತಾದೆಡೆ ಇರುವ ಡಾಲೊಮೈಟ್ ಮತ್ತು ಸುಣ್ಣಶಿಲಾಸ್ತರಗಳಲ್ಲಿ ಸ್ಟ್ರೋಮ್ಯಾಟೊಲೈಟ್ ವರ್ಗದ ಜೀವ್ಯವಶೇಷಗಳನ್ನು ಗುರುತಿಸಲಾಗಿದೆ (ಚಿತ್ರ ೨).

ಮೇಲಿನ ಶ್ರೇಣಿ

[ಬದಲಾಯಿಸಿ]

ಈ ವಿಭಾಗದಲ್ಲಿ ಬೆಣಚುಶಿಲೆ, ಪೆಂಟಿಶಿಲೆ, ಸುಣ್ಣಶಿಲೆ ಮತ್ತು ಹಿಮಟೈಟ್ ಪದರುಶಿಲೆಗಳಿವೆ. ಶ್ರೇಣಿಯ ಮಂದ ಸು. ೧೩೭೧ ಮೀ. ಇವು ವಯಸ್ಸಿನಲ್ಲಿ ಹಿರಿಯದಾದ ಕೆಳವಿಭಾಗದ ಶಿಲಾಸ್ತರಗಳ ಮೇಲೆ ಅನುರೂಪ್ಯವಾಗಿ ಸಂಚಿತವಾಗಿವೆ. ಈ ಮೇಲಿನ ಶ್ರೇಣಿಯ ಸ್ತರಗಳನ್ನು ಬಹುಮಟ್ಟಿಗೆ ಇಳುಕಲಿನ ಈಶಾನ್ಯ ಭಾಗದಲ್ಲಿ ನೋಡಬಹುದು. ಅಲ್ಲಿಯೂ ಇವು ಅಷ್ಟು ವಿಸ್ತಾರವಾಗಿ ಹರಡಿಲ್ಲ. ಅಲ್ಲದೆ ಇವುಗಳ ಹರವು ಸಾಮಾನ್ಯವಾಗಿ ಸಮುಖಾವನತ ಮಡಿಕೆಗಳಿಗೆ ಸೀಮಿತವಾಗಿದೆ. ಈ ಶ್ರೇಣಿಯ ಹಲವೆಡೆ ದೊರೆಯುವ ಹಿಮಟೈಟ್ ಪದರುಶಿಲೆಗಳು ಕಬ್ಬಿಣದ ಉತ್ತಮ ಅದಿರೆನಿಸಿವೆ.

ಕಲಾದಗಿ ಶ್ರೇಣಿಯ ಶಿಲಾಸ್ತರಗಳು ಹಲವಾರು ಸಣ್ಣಪುಟ್ಟ ಇಳುಕಲುಗಳಿಂದಾದ ಮಹಾ ಇಳುಕಲೊಂದರಲ್ಲಿ ರೂಪುಗೊಂಡವೆಂದು ಭಾವಿಸಲಾಗಿದೆ. ಇವುಗಳಲ್ಲಿ ಮುಖ್ಯವಾದವು ಅರಕೇರಿ, ಸೀಖಕೇರಿ ಮತ್ತು ಲೋಕಾಪುರ ಇಳುಕಲುಗಳು. ಅರಕೇರಿ ಇಳುಕಲು ಸುಮಾರು (೨೪) ಮೈಲಿ ಉದ್ದವಿದ್ದು ಅತ್ಯಂತ ದೊಡ್ಡದೆನಿಸಿದೆ. ಲೋಕಾಪುರ ಇಳುಕಲಿನಲ್ಲಿ (೬) ಡಾಲರೈಟ್ ಶಿಲಾ ಒಡ್ಡುಗಳನ್ನು ಗುರುತಿಸಲಾಗಿದೆ.

ಅನೇಕ ಕಡೆ ಕಲಾದಗಿ ಶಿಲಾಸ್ತರಗಳು ಡೆಕ್ಕನ್ ಲಾವಾ ಪ್ರವಾಹದಿಂದ ಆವೃತವಾಗಿವೆ. ಮುಧೋಳ್, ಮಹಾಲಿಂಗಪುರ, ಬಿಮೂಡ್, ಸೋಪದ್ಲೆ, ಸಾಲಹಳ್ಳಿ ಮತ್ತು ಚಂದರ್ಗಿ-ಇವುಗಳ ಬಳಿ ಲಾವಾಸ್ತರಗಳ ಮಂದ (೫೦-೧೦೦').

ಶ್ರೇಣಿಯ ಸ್ತರಗಳನ್ನು ಅವುಗಳ ಶಿಲಾಸಂಯೋಜನೆ ಮತ್ತು ಇತರ ಲಕ್ಷಣಗಳ ಆಧಾರದ ಮೇಲೆ ಭಾರತದ ಪ್ರೀಕೇಂಬ್ರಿಯನ್ ವರ್ಗದ ಮೇಲಿನ ಕಡಪ ಹಂತದೊಡನೆ ಸರಿದೂಗಿಸಲಾಗಿದೆ. ಇಲ್ಲಿ ದೊರೆಯುವ ಮರಳುಶಿಲೆ ಮತ್ತು ಸ್ಲೇಟುಶಿಲೆಗಳನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟಡನಿರ್ಮಾಣದಲ್ಲಿ ಬಳಸುತ್ತಾರೆ. ಕೆಲವು ಸುಣ್ಣಶಿಲೆಗಳು ಉತ್ತಮ ಅಲಂಕಾರ ಶಿಲೆಗಳೆನಿಸಿವೆ. ಸುಣ್ಣಶಿಲಾನಿಕ್ಷೇಪಗಳು ಸಿಮೆಂಟಿನ ತಯಾರಿಕೆಗೆ ಅಗತ್ಯ ಅಲ್ಲದೇ ಉತ್ತಮ ದರ್ಜೆಯವು. ಉಕ್ಕು ತಯಾರಿಕೆಗೆ ಬೇಕೇ ಬೇಕು.