ಕಲಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲಹಾ : ಸ್ಕಾಂದ ಪುರಾಣದಲ್ಲಿ ಉಲ್ಲೇಖಿತಳಾದ ಒಬ್ಬ ಬ್ರಾಹ್ಮಿಣಿ. ಸೌರಾಷ್ಟ್ರ ನಗರದ ಭಿಕ್ಷು ಎಂಬ ಬ್ರಾಹ್ಮಣನ ಹೆಂಡತಿ. ಪತಿಗೆ ವಿಧೇಯಳಾಗಿರದೆ ಯಾವಾಗಲೂ ಅವನಲ್ಲಿ ಕಲಹವನ್ನೇ ಮಾಡುತ್ತಿದ್ದಳು, ಪುರಾಣಪ್ರಸಿದ್ಧಳಾದ ಚಂಡಿಯಂತೆ. ಗಂಡನಿಗೆ ಸುಳಿವು ಕೊಡದಂತೆ ರುಚಿಕರವಾದ ತಿಂಡಿತಿನಿಸುಗಳನ್ನು ಮಾಡಿ ತಾನೊಬ್ಬಳೇ ತಿನ್ನುತ್ತಿದ್ದಳು. ತಾನು ಉದ್ದೇಶಿಸಿದ ಯಾವುದೇ ಧರ್ಮಕಾರ್ಯಕ್ಕೂ ಈಕೆ ಹೀಗೆ ಪ್ರತಿಕೂಲಿಸುತ್ತಿದ್ದ ಕಾರಣ ಭಿಕ್ಷು ಅನುಕೂಲಳಾದ ಮತ್ತೊಬ್ಬ ಕನ್ಯೆಯನ್ನು ಮದುವೆ ಮಾಡಿಕೊಳ್ಳಲು ಯತ್ನಿಸಿದ. ಅದಕ್ಕೆ ಕ್ರೋಧಗೊಂಡ ಕಲಹಾ ವಿಷಪಾನಮಾಡಿ ಪ್ರಾಣಬಿಟ್ಟಳು ; ಎಸಗಿದ ದುರಾಚಾರ ಮತ್ತು ತಂದುಕೊಂಡ ದುರ್ಮರಣದ ನಿಮಿತ್ತವಾಗಿ ಅನೇಕ ಹೀನ ಜನ್ಮಗಳನ್ನು ಎತ್ತಿ ಅನಂತರ ಪ್ರೇತ ಶರೀರಿಣಿಯಾದಳು. ಐದುನೂರು ವರ್ಷಗಳ ಅನಂತರ ಹಸಿವು ಬಾಯಾರಿಕೆಗಳಿಂದ ಬಳಲಿದ ಈಕೆ ವರ್ತಕನೊಬ್ಬನ ದೇಹವನ್ನು ಹೊಕ್ಕಳು. ಆ ವರ್ತಕ ಕೃಷ್ಣಾನದಿಯಲ್ಲಿ ಸ್ನಾನ ಮಾಡಿದ್ದರಿಂದ ಅವನಲ್ಲಿರಲಾರದೆ ಸಹ್ಯಾದ್ರಿಯ ಪರಿಸರದಲ್ಲಿದ್ದ ಕರವೀರಪುರವನ್ನು ಸೇರಿದಳು. ಅಲ್ಲಿ ಧರ್ಮದತ್ತನೆಂಬ ಬ್ರಾಹ್ಮಣ ಒಮ್ಮೆ ವಿಷ್ಣುವ್ರತಗಳಲ್ಲೊಂದಾದ ಕಾರ್ತಿಕ ವ್ರತವನ್ನಾಚರಿಸಿ ಜಾಗರಣೆ ಮಾಡಲು ತೀರ್ಥಾದಿಗಳೊಡನೆ ಹರಿಮಂದಿರಕ್ಕೆ ಹೋಗುವಾಗ ಅವನ ಕಣ್ಣಿಗೆ ಬಿದ್ದಳು. ಇವಳ ವಿಕೃತ ರೂಪವನ್ನು ಕಂಡು ಬ್ರಾಹ್ಮಣ ಕೈಲಿದ್ದ ಪೂಜಾದ್ರವ್ಯಗಳನ್ನು ಇವಳ ಮೇಲೆ ಎಸೆಯಲು ಅವುಗಳ ಪ್ರಭಾವದಿಂದ ಪೂರ್ವಜನ್ಮಸ್ಮೃತಿ ಬರಲಾಗಿ ತಾನು ಅದುವರೆಗೂ ಎತ್ತಿದ, ಮುಂದೆ ಎತ್ತಬೇಕಾದ ತಿರ್ಯಕ್ ಜನ್ಮಗಳನ್ನು ನೆನೆದು ಪಶ್ಚಾತ್ತಾಪಗೊಂಡು ಗೋಳಿಟ್ಟು ಬ್ರಾಹ್ಮಣನಲ್ಲಿ ಧರ್ಮಯಾಚನೆ ಮಾಡಿದಳು. ಕನಿಕರಗೊಂಡ ಧರ್ಮದತ್ತ ತಾನು ಎಸಗಿದ ಕಾರ್ತಿಕ ವ್ರತದಲ್ಲಿ ಒಂದು ಜನ್ಮದ ಅರ್ಧಫಲವನ್ನು ಈಕೆಗೆ ಧಾರೆಯೆರೆದು ಕೊಟ್ಟ. ಅದರಿಂದ ಶಾಪವಿಮುಕ್ತಳಾದ ಕಲಹಾ ಮುಂದೆ ಕೈಕೆಯಾಗಿ ಹುಟ್ಟಿ ದಶರಥನಾಗಿ ಹುಟ್ಟಿದ ಧರ್ಮದತ್ತನನ್ನು ವರಿಸಿದಳು. ಈ ವೃತ್ತಾಂತ ಕೈಕೆಯ ಗುಣಶೀಲಗಳ ಮೇಲೆ ಬೆಳಕು ಬೀರುವುದರಿಂದ ಮುಖ್ಯವೆನಿಸಿದೆ. (ಎನ್.ಎಸ್.ಆರ್.ಬಿ.)

"https://kn.wikipedia.org/w/index.php?title=ಕಲಹಾ&oldid=615510" ಇಂದ ಪಡೆಯಲ್ಪಟ್ಟಿದೆ