ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಜಾತಿಗಳು ಮತ್ತು ಸಮುದಾಯಗಳ ಉನ್ನತಿಗಾಗಿ ಕರ್ನಾಟಕ ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಆಯೋಗಗಳನ್ನು ರಚಿಸಿದೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹಿಂದುಳಿದ ವರ್ಗಗಳೆಂಬ ಪರಿಕಲ್ಪನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು. ಅದುವರೆಗೂ ಬ್ರಿಟಿಷರ ನೇರ ಅಧೀನದ ಪ್ರಾಂತಗಳಲ್ಲಿ ಮತ್ತು ಸಂಸ್ಥಾನಗಳಲ್ಲಿ ಸರ್ಕಾರಿ ನೌಕರಿಗಳನ್ನು ವಿವೇಚನೆಯ ಮತ್ತು ಅರ್ಹತೆಯ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿತ್ತು. ಇದರಲ್ಲಿ ಶೇ. ಸು.೭೫ರಷ್ಟು ಭಾಗ ಬ್ರಾಹ್ಮಣರೇ ಇರುತ್ತಿದ್ದರು. ಈ ಸಮುದಾಯ ವಿದ್ಯೆಯಲ್ಲಿ ಅದರಲ್ಲೂ ಇಂಗ್ಲಿಷ್ ವಿದ್ಯಾಭ್ಯಾಸದಲ್ಲಿ ಮುಂದಿರುತ್ತಿತ್ತು. ಉಳಿದಂತೆ ಐರೋಪ್ಯ ಅಧಿಕಾರಿಗಳು ಮತ್ತು ಅರಸು ಮನೆತನ ಮೂಲದವರು ಆಡಳಿತದಲ್ಲಿದ್ದರು. ಬ್ರಾಹ್ಮಣ ವರ್ಗ ಆಡಳಿತದ ಎಲ್ಲ ಶಾಖೆಗಳಲ್ಲಿ ಬೇರೂರಿದ್ದಲ್ಲದೆ ರಾಜಕೀಯವಾಗಿಯೂ ಮುಂಚೂಣಿಗೆ ಬಂದಿತು. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲೂ ಬ್ರಾಹ್ಮಣರು ಮುಂದಾಳುಗಳಾಗಿದ್ದರು. ಇದನ್ನು ಗಮನಿಸಿದ ಬ್ರಿಟಿಷ್ ಪ್ರಭುತ್ವ ಸಮಾಜವನ್ನು ಹಿಂದು-ಮುಸ್ಲಿಮ್ ಎಂದು ಬೇರ್ಪಡಿಸಿದ್ದಂತೆ ಬ್ರಿಟಿಷರ ಆಳಿಕೆಯನ್ನು ಪ್ರಶ್ನಿಸುವ ಬ್ರಾಹ್ಮಣರನ್ನು ಇತರ ಬಹುಸಂಖ್ಯಾತ ಸಮುದಾಯಗಳಿಂದ ಬೇರ್ಪಡಿಸಿದರೆ ಸ್ವಾತಂತ್ರ್ಯ ಚಳವಳಿಯನ್ನು ಸಮರ್ಥವಾಗಿ ಹತ್ತಿಕ್ಕಬಹುದೆಂಬ ಚಿಂತನೆ ಮಾಡಿತು. ಜೊತೆಗೆ ಆಗತಾನೇ ಇಂಗ್ಲಿಷ್ ವಿದ್ಯಾಭ್ಯಾಸ ಮಾಡುತ್ತಿದ್ದ ಮುಸ್ಲಿಮರೂ ಸೇರಿದಂತೆ ಹಲವಾರು ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರು ಬ್ರಾಹ್ಮಣರನ್ನು ಸ್ವರ್ಧೆಯಲ್ಲಿ ಸರಿಗಟ್ಟಲು ಸಾಧ್ಯವಾಗದೆ ಚಡಪಡಿಸುತ್ತಿದ್ದರು. ಈ ಅತೃಪ್ತಿ ಪತ್ರಿಕೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗೀ ಸಭೆಗಳ ಮೂಲಕ ಪ್ರಕಟವಾಗತೊಡಗಿತು. ಮಹಾರಾಷ್ಟ್ರದಲ್ಲಿ ಜ್ಯೋತಿಭಾಫುಲೆ ಈ ಚಳವಳಿಗೆ ಒಂದು ರೂಪುಕೊಟ್ಟರೆ, ಮದರಾಸಿನಲ್ಲಿ ಪೆರಿಯಾರ್ ಅವರು ಇದನ್ನು ಸಂಘಟಿಸಿದರು. ಅಲ್ಲಿ ಜಸ್ಟೀಸ್ ಪಾರ್ಟಿ ಎಂಬ ಒಂದು ರಾಜಕೀಯ ಸಂಘಟನೆ ಪ್ರಾರಂಭವಾಗಿ ಅದು ಬ್ರಾಹ್ಮಣೇತರ ಹಿಂದುಳಿದವರಿಗೆ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿತು. ಅಲ್ಲಿ ಕೆಲಸ ಮಾಡಿ ಮೈಸೂರು ಸಂಸ್ಥಾನದ ಸೇವೆಗೆ ಸೇರಿದ ಸಿ.ಆರ್.ರೆಡ್ಡಿ ಮೊದಲಾದ ಹಿಂದುಳಿದ ವರ್ಗದ ಅಧಿಕಾರಿಗಳು ಮೈಸೂರಿನಲ್ಲಿ ಅದಕ್ಕೊಂದು ಸಂಸ್ಥಾರೂಪವನ್ನು ನೀಡಲು ಶ್ರಮಿಸಿದರು. ಒಕ್ಕಲಿಗ ಜನಾಂಗದ ಕೆ.ಎಚ್.ರಾಮಯ್ಯನವರು ಇದೇ ಕಾಲದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದ್ದರು. ಎಂ.ಬಸವಯ್ಯ, ಎಚ್.ಚನ್ನಯ್ಯ, ಗುಲಾಮ್ ಅಹಮ್ಮದ್, ಕಲಾಮಿ ಮೊದಲಾದವರು ಪ್ರಜಾಮಿತ್ರ ಮಂಡಳಿ ಎಂಬ ಪ್ರಥಮ ಹಿಂದುಳಿದವರ ರಾಜಕೀಯ ಸಂಘಟನೆ ಅಸ್ತಿತ್ವಕ್ಕೆ ಬರಲು ಕಾರಣರಾದರು. ೧೯೧೮ರ ಫೆಬ್ರವರಿಯಲ್ಲಿ ಈ ನಿಯೋಗ ಮಹಾರಾಜರನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಿತು.

ಲೆಸ್ಲಿ ಮಿಲ್ಲರ್ ಸಮಿತಿ[ಬದಲಾಯಿಸಿ]

ಹಿಂದುಳಿದ ವರ್ಗದ ಪ್ರತಿನಿಧಿಗಳು ಸರ್ಕಾರಿ ಉದ್ಯೋಗಗಳು, ಶಿಕ್ಷಣ ಪ್ರವೇಶ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ತಮ್ಮ ಸಮುದಾಯಗಳಿಗೆ ಮೀಸಲಾತಿ ಇರಬೇಕೆಂದು ಕೋರಿ ಒತ್ತಾಯಿಸಿದ್ದರು. ಯುವರಾಜ ನರಸಿಂಹರಾಜ ಒಡೆಯರ್ ಈ ಬೇಡಿಕೆ ಬಗ್ಗೆ ಸಹಾನುಭೂತಿ ಉಳ್ಳವರಾಗಿದ್ದರು. ಇದರ ಫಲವಾಗಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಮುಖ್ಯ ನ್ಯಾಯಾಧೀಶರಾಗಿದ್ದ ಲೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವಂತೆ ಸೂಚಿಸಿದರು. ಈ ಅವಧಿಯಲ್ಲಿ ಎಂ.ವಿಶ್ವೇಶ್ವರಯ್ಯನವರು (ನೋಡಿ- ವಿಶ್ವೇಶ್ವರಯ್ಯ ಮೋಕ್ಷಗುಂಡಂ) ದಿವಾನರಾಗಿದ್ದರು. ಅವರು ಮೈಸೂರು ರಾಜ್ಯ ಸರ್ವತೋಮುಖ ಪ್ರಗತಿ ಸಾಧಿಸಬೇಕೆಂದು ಶಿಕ್ಷಣ, ವ್ಯವಸಾಯ, ಕೈಗಾರಿಕೆ - ಈ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು ಮುಂದುವರಿಯುತ್ತಿದ್ದರು. ಮೀಸಲಾತಿಯ ಬಗ್ಗೆ ತಮ್ಮದೇ ಆದ ನಿಲುವು ಹೊಂದಿದ್ದರು. ಹಿಂದುಳಿದ ವರ್ಗದವರನ್ನು ಉತ್ತಮ ಶಿಕ್ಷಣದ ಮೂಲಕ ಹೆಚ್ಚು ಅರ್ಹರನ್ನಾಗಿ ಮಾಡಿ ಸರ್ಕಾರಿ ಸೇವೆಗಳಲ್ಲಿ ನೇಮಿಸುವುದರಿಂದ ಆಡಳಿತದಲ್ಲಿ ದಕ್ಷತೆ ಹೆಚ್ಚುತ್ತದೆ ಹಾಗೂ ಮಿತವಾದ ಮೀಸಲಾತಿಯ ಮೂಲಕ ಹಂತಹಂತವಾಗಿ ಇದನ್ನು ಸಾಧಿಸಿದರೆ ಇತರರಲ್ಲಿ ಅತೃಪ್ತಿ ಕಡಿಮೆ ಪ್ರಮಾಣದಲ್ಲುಳಿದು ಸಾಮರಸ್ಯ ಸಾಧನೆಯೂ ಆಗುತ್ತದೆ ಎಂಬುದು ಅವರ ಖಚಿತ ನಿಲುವಾಗಿತ್ತು. ಆದರೆ ಮಹಾರಾಜರು ಬಹು ಜನಾಭಿಪ್ರಾಯದಂತೆ ಮಿಲ್ಲರ್ ಸಮಿತಿ ನೇಮಿಸಿದ್ದು, ಆ ಸಮಿತಿಗೆ ವಹಿಸಲಾದ ಕಾರ್ಯಸೂಚಿಗಳೂ ಮೊದಲಾದವುಗಳ ಬಗ್ಗೆ ವಿಶ್ವೇಶ್ವರಯ್ಯನವರಿಗೆ ಸಮಾಧಾನವಿರಲಿಲ್ಲ. ವಿಶ್ವೇಶ್ವರಯ್ಯನವರು ಈ ಕಾರಣಕ್ಕಾಗಿ ರಾಜೀನಾಮೆ ಕೊಟ್ಟರು ಎಂಬ ಮಾತು ಅಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬಂದರೂ ಅವರಿಗೆ ರಾಜೀನಾಮೆ ನೀಡಲು ಇನ್ನೂ ಹಲವಾರು ರಾಜಕೀಯ ಒತ್ತಡಗಳು ಕಾರಣವಾಗಿದ್ದವು. ೧೯೧೮ರಲ್ಲಿ ರಚಿತವಾದ ಈ ಸಮಿತಿ ೧೯೧೯ರಲ್ಲಿ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಲೆಸ್ಲಿ ಮಿಲ್ಲರ್ ಸಮಿತಿ ನೀಡಿದ ವರದಿಯಲ್ಲಿ ಮುಂದಿನ ೭ ವರ್ಷಗಳಲ್ಲಿ ಸರ್ಕಾರದ ಸೇಕಡ ೫೦ ರಷ್ಟು ಉನ್ನತ ಹುದ್ದೆಗಳು ಮತ್ತು ಮೂರನೆಯ ಎರಡು ಭಾಗ ಕೆಳದರ್ಜೆಯ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಪ್ರಾಪ್ತವಾಗಬೇಕೆಂಬ ಅಂಶ ಅಡಕವಾಗಿತ್ತು. ಶಿಕ್ಷಣದಲ್ಲಿ ಪ್ರವೇಶ ಮೀಸಲಾತಿ ಮತ್ತು ವಿಶೇಷ ವಿದ್ಯಾರ್ಥಿವೇತನಗಳು ಈ ವರ್ಗಕ್ಕೆ ಲಭ್ಯವಾಗಬೇಕೆಂಬ ಸಲಹೆಗಳಿದ್ದವು. ಈ ವರದಿಯ ಕೆಲವು ಶಿಫಾರಸುಗಳು ೧೯೨೧ರಲ್ಲಿ ಸರ್ಕಾರಿ ಆದೇಶದ ಮೂಲಕ ಅನುಷ್ಠಾನಕ್ಕೆ ಬಂದವು. ಅಂದಿನಿಂದ ಇಂದಿನವರೆಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಆಯೋಗಗಳು ರಚನೆಯಾಗುತ್ತಲೇ ಬಂದಿವೆ.

೧೯೨೦ರ ದಶಕದ ಕೊನೆಯ ಹೊತ್ತಿಗೆ ಬ್ರಾಹ್ಮಣರನ್ನು ಬಿಟ್ಟು ಇತರ ಎಲ್ಲ ವರ್ಗಗಳಿಗೂ ನೀಡಿದ್ದ ಮೀಸಲಾತಿಯ ಅನುಷಾವಿನದಲ್ಲಿ ಪಕ್ಷಪಾತವಾಗಿರುವುದನ್ನು ಗುರುತಿಸಲಾಯಿತು. ಮುಸ್ಲಿಮರು, ವೀರಶೈವರು, ಜೈನರು ಮೊದಲಾದ, ಆಗ ಶಿಕ್ಷಣದಲ್ಲಿ ಸ್ವಲ್ಪ ಹೆಚ್ಚು ಮುಂದಿದ್ದ ಜಾತಿ ವರ್ಗಗಳು ಈ ಸೌಲಭ್ಯದ ಗರಿಷ್ಠ ಲಾಭ ಪಡೆದವೆಂಬ ದೂರು ಕೇಳಿಬರತೊಡಗಿತು. ಇದರ ಪರಿಣಾಮ ಎಷ್ಟಿತ್ತೆಂದರೆ ‘ಪ್ರಜಾಮಿತ್ರ ಮಂಡಳಿಯಿಂದ ಸಿಡಿದುಹೋದ ಒಂದು ಗುಂಪು’ ಪ್ರಜಾಪಕ್ಷವೆಂಬ ಹೊಸ ಪಕ್ಷವನ್ನೇ ಕಟ್ಟಿಕೊಂಡಿತು. ಆದರೆ ರಾಜಕೀಯ ಸಂಘಟನೆಗಾಗಿ ಅವೆರಡೂ ೧೯೩೫ರಲ್ಲಿ ಒಂದಾಗಿ ‘ಪ್ರಜಾಸಂಯುಕ್ತ ಪಕ್ಷ’ ಅಸ್ತಿತ್ವಕ್ಕೆ ಬಂದಿತು.

ಮೀಸಲಾತಿ ಕುರಿತ ವಾದವಿವಾದಗಳು ಮುಂದುವರಿಯುತ್ತಲೇ ಇದ್ದವು. ಆದರೆ ಸಮಾಜದಲ್ಲಿ ಹೊಸ ರಾಜಕೀಯ ಬೆಳೆವಣಿಗೆ ಕಾಣಿಸಿಕೊಂಡಿತು. ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಬ್ರಾಹ್ಮಣರು ಉತ್ಸಾಹದಿಂದ ಭಾಗವಹಿಸುತ್ತಿದ್ದು ತಮಗಾದ ನಷ್ಟವನ್ನು ಮರೆತು ಇತರರೊಂದಿಗೆ ಬೆರೆಯತೊಡಗಿದರು. ಸ್ವಾತಂತ್ರ್ಯ ಚಳವಳಿ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿತು. ೧೯೩೭ರಲ್ಲಿ ‘ಪ್ರಜಾಸಂಯುಕ್ತ ಪಕ್ಷ’ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಯಿತು. ಮುಂದೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಎಲ್ಲ ವರ್ಗದ ಮುಖಂಡರು ಈ ಮೀಸಲಾತಿಯ ಅಸಮಾಧಾನಗಳನ್ನು ಮರೆತು ಭಾವೈಕ್ಯ ತೋರಿದರು. ಬಹುಕಾಲದವರೆಗೆ ಮಿಲ್ಲರ್ ಸಮಿತಿಯ ವರದಿಯ ಶಿಫಾರಸುಗಳೇ ಪ್ರಮುಖ ಮಾರ್ಗದರ್ಶಿ ಸೂತ್ರಗಳಾಗಿ ಮೀಸಲಾತಿ ವ್ಯವಸ್ಥೆ ಅನುಷಾವಿನದಲ್ಲಿತ್ತು.

ನಾಗನ ಗೌಡ ಸಮಿತಿ[ಬದಲಾಯಿಸಿ]

ಸ್ವಾತಂತ್ರ್ಯಾನಂತರದ ಒಂದು ದಶಕ ಸಂವಿಧಾನದ ಅಳವಡಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನ ಮತ್ತು ರಾಜ್ಯಗಳ ಪುನರ್ವಿಂಗಡಣೆಯ ಪ್ರಕ್ರಿಯೆಯಲ್ಲಿ ಕಳೆದುಹೋಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಸಂವಿಧಾನ ನೀಡಿದ ವಿಶೇಷ ಮೀಸಲಾತಿಯಿಂದ ಆ ವರ್ಗಗಳು ಮೀಸಲಾತಿ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಂದ ಬೇರೆಯಾದವು. ಸರ್ಕಾರ ಕೈಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳ ಫಲ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಸಿಕ್ಕಲಿಲ್ಲ. ಭೂರಹಿತ ಕಾರ್ಮಿಕರು ಮತ್ತು ಚಿಕ್ಕ ಪುಟ್ಟ ಉಪಕಸಬುಗಳನ್ನು ಮಾಡುತ್ತಿದ್ದ ಜನರಿಗೆ ಸೂಕ್ತ ಪ್ರಾತಿನಿಧ್ಯವಿಲ್ಲವೆಂಬ ಕೂಗು ಕೇಳಿಬಂತು. ಈ ಹಿನ್ನೆಲೆಯಲ್ಲಿ ೧೯೬೦ರಲ್ಲಿ ಸರ್ಕಾರ ಡಾ.ನಾಗನಗೌಡರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಅದಕ್ಕೆ ಹಿಂದುಳಿದ ವರ್ಗಗಳ ವಿಂಗಡಣೆ ಮತ್ತು ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ವರದಿ ಸಲ್ಲಿಸುವಂತೆ ಕೋರಿತು.

ಈ ಸಮಿತಿ ಅಧ್ಯಯನ ಕೈಗೊಂಡು ಒಂದು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಅದು ಒಟ್ಟು ೩೯೯ ಜಾತಿಗಳನ್ನು ಮೀಸಲಾತಿಗೆ ಅರ್ಹವೆಂದು ಪರಿಗಣಿಸಿತ್ತು. ಈ ಜಾತಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಸೇಕಡ ೪೫ರಷ್ಟು ಮತ್ತು ಶಿಕ್ಷಣ ಪ್ರವೇಶದಲ್ಲಿ ಸೇಕಡ ೫೦ರಷ್ಟು ಮೀಸಲಾತಿ ಇರಬೇಕೆಂದು ಸಲಹೆಮಾಡಿತ್ತು. ಈ ಸಮಿತಿ ಲಿಂಗಾಯತ ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಟ್ಟಿತ್ತು. ವ್ಯವಸಾಯ ಮತ್ತು ಕೈಗಾರಿಕೆ ಅಭಿವೃದ್ಧಿ ಹಾಗೂ ಗೃಹಕೈಗಾರಿಕೆಗಳಿಗಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಹಣಕಾಸು ನೆರವು ನೀಡಲೂ ಈ ಸಮಿತಿ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ವರದಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ೧೯೬೨ರಲ್ಲಿ ಒಂದು ಆದೇಶ ಹೊರಡಿಸಿತು. ಅದರಲ್ಲಿ ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳು ಎಂಬ ಎರಡು ಗುಂಪುಗಳನ್ನು ಮಾಡಲಾಗಿತ್ತು. ಈ ವರ್ಗಗಳಿಗೆ ಅನುಕ್ರಮವಾಗಿ ಶೇಕಡ ೨೮ರಷ್ಟು ಮತ್ತು ಸೇಕಡ ೨೨ರಷ್ಟು ಮೀಸಲಾತಿ ನೀಡಲಾಗಿತ್ತು. ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಅದು ಅನೂರ್ಜಿತಗೊಳಿಸಲ್ಪಟ್ಟಿತು. ಈ ತೀರ್ಪಿನ ಹಿನ್ನೆಲೆಯಲ್ಲಿ ೧೯೬೩ರಲ್ಲಿ ಹಾಗೂ ೧೯೬೮ರಲ್ಲಿ ಮಾರ್ಪಾಡಾದ ಸರ್ಕಾರಿ ಆದೇಶಗಳು ಹೊರಟವು. ಎಲ್ಲ ಹಿಂದುಳಿದ ವರ್ಗಗಳು ಸೇರಿದಂತೆ ಸೇಕಡ ೩೦ರಷ್ಟು ಮೀಸಲಾತಿ ನೀಡಲಾಯಿತು. ಆದಾಯ ಮಿತಿಯನ್ನು ೨೪೦೦ ರೂಪಾಯಿಗಳೆಂದು ನಿಗದಿಗೊಳಿಸಲಾಯಿತು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ಸೇಕಡ ೧೮ರಷ್ಟು ಮೀಸಲಾತಿ ಪ್ರತ್ಯೇಕವಾಗಿ ಮುಂದುವರಿಯಿತು. ಇದಕ್ಕೆ ಆದಾಯ ಮಿತಿ ಇರಲಿಲ್ಲ.

ಹಾವನೂರು ಆಯೋಗ[ಬದಲಾಯಿಸಿ]

೧೯೭೦ರ ದಶಕದ ಪ್ರಾರಂಭದ ಹೊತ್ತಿಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳು ಹೊಸ ತಿರುವನ್ನು ಪಡೆದವು. ಬಡವರ ಏಳ್ಗೆಗಾಗಿ ಶ್ರಮಿಸುವುದು ಸರ್ಕಾರದ ಮುಖ್ಯ ಹೊಣೆ ಎಂಬ ವಿಚಾರ ಪ್ರಚಲಿತ ಮೌಲ್ಯ ಪಡೆಯಿತು. ಆಗಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸು (ನೋಡಿ- ದೇವರಾಜ ಅರಸು, ಡಿ) ಅವರು ಹಿಂದುಳಿದ ವರ್ಗಗಳ ನಾಯಕರಾಗಿ ಪ್ರತಿಬಿಂಬಿಸಲ್ಪಟ್ಟರು. ಅವರು ಈ ವರ್ಗಗಳ ಬಗ್ಗೆ ವಿಶೇಷ ಕಾಳಜಿ ಹೊಂದಿ ಗೇಣಿ ಶಾಸನ, ಲೇವಾದೇವಿ ರದ್ದಾಯಿತಿ ಶಾಸನ, ಬಾಡಿಗೆ ನಿಯಂತ್ರಣ ಕಾಯಿದೆ ಮೊದಲಾದವನ್ನು ಜಾರಿಗೆ ತಂದರು. ಬಡವರಿಗೆ ಮನೆ, ನಿವೇಶನ ನೀಡುವ ಮತ್ತು ಉಪ ಕಸಬುಗಳಿಗೆ ಉತ್ತೇಜನ ನೀಡುವ ಹಲವಾರು ಯೋಜನೆಗಳು ಜಾರಿಗೆ ಬಂದವು. ಹಿಂದುಳಿದ ವರ್ಗಗಳ ಮೀಸಲಾತಿ ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಸಲಹೆ ಮಾಡಲು ನ್ಯಾಯವಾದಿ ಎಲ್.ಜಿ. ಹಾವನೂರ್ ಅವರ ಅಧ್ಯಕ್ಷತೆಯಲ್ಲಿ ೧೯೭೨ರಲ್ಲಿ ಒಂದು ಸಮಿತಿ ರಚಿಸಲಾಯಿತು. ಈ ಸಮಿತಿ ೧೯೭೫ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು.

ಈ ವರದಿಯಲ್ಲಿ ವಿವಿಧ ಬ್ರಾಹ್ಮಣೇತರ ವರ್ಗಗಳನ್ನು ಮೀಸಲಾತಿಯಿಂದ ಕೈಬಿಡಲಾಗಿತ್ತು. ಅವುಗಳಲ್ಲಿ ಲಿಂಗಾಯತ ಅಥವಾ ವೀರಶೈವ, ಜೈನ, ಬಂಟ, ಕ್ರೈಸ್ತ, ಅರಸು ಮತ್ತಿತರ ಸಮುದಾಯಗಳು ಮುಖ್ಯವಾಗಿದ್ದವು. ಈ ವರ್ಗಗಳಿಂದ ಬರಬಹುದಾದ ಪ್ರತಿಭಟನೆಯ ಬಗ್ಗೆ ಆತಂಕಗೊಂಡ ಸರ್ಕಾರ ವರದಿಯ ಅನುಷ್ಠಾನವನ್ನು ಸ್ವಲ್ಪಕಾಲ ಮುಂದೂಡಿತು. ಮುಂದೆ ರಾಷ್ಟ್ರದಲ್ಲಿ ತುರ್ತುಸ್ಥಿತಿ ಜಾರಿಗೆ ಬಂದು ಸರ್ಕಾರ ಹೆಚ್ಚು ಪ್ರಬಲವಾದಾಗ ದೇವರಾಜ ಅರಸು ಅವರು ಈ ವರದಿಯ ಅನುಷ್ಠಾನಕ್ಕೆ ಧೈರ್ಯ ತೋರಿದರು. ಸರ್ಕಾರ ೧೯೭೭ ಫೆಬ್ರವರಿ ೨೨ರಂದು ಈ ವರದಿಯನ್ನು ಅಂಗೀಕರಿಸಿ ಆದೇಶ ಹೊರಡಿಸಿತು. ಅದರಲ್ಲಿ ವಿವಿಧ ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. (೧) ಹಿಂದುಳಿದ ಸಮುದಾಯಗಳು (ಶೇ.೨೦); (೨) ಹಿಂದುಳಿದ ಜಾತಿಗಳು (ಶೇ.೧೦); (೩) ಹಿಂದುಳಿದ ಪಂಗಡಗಳು (ಶೇ.೫). ಇವುಗಳ ಜೊತೆಗೆ ಮುಂದುವರಿದವೆಂದು ಪರಿಗಣಿತವಾದ ವಿವಿಧ ಸಮುದಾಯಗಳ ಬಡವರನ್ನು ವಿಶೇಷ ಗುಂಪೆಂದು ಪರಿಗಣಿಸಿ ಅವುಗಳಿಗೆ ಶೇ.೫ರಷ್ಟು ಮೀಸಲಾತಿಯನ್ನು ನೀಡಲಾಯಿತು. ಈ ಎಲ್ಲ ವರ್ಗಗಳ ಹಿಂದುಳಿದ ಜಾತಿ ಮತ್ತು ಸಮುದಾಯಗಳ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ ೧೦,೦೦೦ ರೂಪಾಯಿಗಳ ಆದಾಯ ಮಿತಿಯನ್ನು ವಿಧಿಸಲಾಯಿತು. ಈ ವರದಿ ಹಿಂದುಳಿದ ವರ್ಗಗಳ ಆಯೋಗಗಳಲ್ಲಿ ಮಾತೃಸ್ಥಾನ ಪಡೆದಿದೆ. ಈ ಆಯೋಗದ ಮಾರ್ಗದರ್ಶಿ ಸಲಹೆಗಳ ಆಧಾರಗಳು ವೈಜ್ಞಾನಿಕವಾದ ಭದ್ರ ಅಂಕಿ-ಅಂಶಗಳಿಂದ ಕೂಡಿದ್ದವು. ಈ ಸಂದರ್ಭದಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಎಂಬ ವಿಚಾರ ಪ್ರಶ್ನೆಯಾಗುಳಿಯದೆ ಹಿಂದುಳಿದ ವರ್ಗಗಳಲ್ಲಿ ಯಾರನ್ನು ಮೀಸಲಾತಿಯಿಂದ ಕೈಬಿಡಬೇಕು ಮತ್ತು ಯಾರನ್ನು ಸೇರಿಸಬೇಕು ಎಂಬ ಪ್ರಶ್ನೆ ಬೃಹದಾಕಾರ ಪಡೆಯಿತು. ಯಾವುದೇ ಮಾನದಂಡದಿಂದ ನೋಡಿದರೂ ಒಂದು ಸಮುದಾಯದಲ್ಲಿ ಹಿಂದುಳಿದ ವ್ಯಕ್ತಿಗಳ ಸಮೂಹ ಇದ್ದೇ ಇರುತ್ತಿತ್ತು. ಮುಖ್ಯಮಂತ್ರಿ ದೇವರಾಜ ಅರಸರಿಗೆ ತಮ್ಮ ಅರಸು ಸಮುದಾಯವನ್ನು ಹಿಂದುಳಿದ ಪಟ್ಟಿಯಿಂದ ಹಾವನೂರ್ ಆಯೋಗ ಕೈಬಿಟ್ಟಿದ್ದು ಸರಿಕಾಣಲಿಲ್ಲ. ಕೆಲವು ಕೈ ಬಿಟ್ಟ ಜನಾಂಗಗಳೊಡನೆ ಅರಸು ಸಮುದಾಯವನ್ನು ಸೇರಿಸಿ ಅರಸು ಸರ್ಕಾರ ಮೀಸಲಾತಿ ಆದೇಶ ಹೊರಡಿಸಿತು.

ಯಥಾಪ್ರಕಾರ ಹಾವನೂರು ಆಯೋಗದ ವರದಿಯನ್ನು ಆಧರಿಸಿದ ಸರ್ಕಾರಿ ಆದೇಶವೂ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿತ್ತು. ನ್ಯಾಯಾಲಯ ಹೊಸದಾಗಿ ಸರ್ಕಾರದಿಂದ ಸೇರಿಸಲಾದ ಸಮುದಾಯಗಳನ್ನು ಅನೂರ್ಜಿತಗೊಳಿಸಿತು. ೧೯೭೯ರಲ್ಲಿ ಈ ಸಂಬಂಧವಾದ ಮರು ಆದೇಶವನ್ನು ಸರ್ಕಾರ ಹೊರಡಿಸಿತು. ಇಡೀ ಹಿಂದುಳಿದ ವರ್ಗಗಳಿಗೆ ಶೇ.೫೦ರಷ್ಟಕ್ಕೆ ಮೀರದಂತೆ ಮೀಸಲಾತಿಯನ್ನು ನಿಗದಿಪಡಿಸಲಾಯಿತು. ಅದರಲ್ಲಿ ಶೇ.೫ರಷ್ಟು ಮೀಸಲಾತಿ ಪಡೆದಿದ್ದ ವಿಶೇಷ ಗುಂಪಿಗೆ ಮೀಸಲಾತಿಯನ್ನು ಶೇ.೧೫ಕ್ಕೆ ಹೆಚ್ಚಿಸಲಾಯಿತು.

ವೆಂಕಟಸ್ವಾಮಿ ಆಯೋಗ[ಬದಲಾಯಿಸಿ]

ಹಿಂದುಳಿದ ವರ್ಗಗಳ ಮೀಸಲಾತಿ ಪ್ರಶ್ನೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಅಲ್ಲಿ ತೋರಿಬಂದ ಕೆಲವು ನ್ಯೂನತೆಗಳ ಸಂಬಂಧವಾಗಿ ಕರ್ನಾಟಕ ಸರ್ಕಾರ ನ್ಯಾಯಾಲಯಕ್ಕೆ ಒಂದು ದೃಢೀಕರಣ ಪತ್ರ ನೀಡಿ ಇನ್ನೊಂದು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲು ತಾನು ಬದ್ಧವಿರುವುದಾಗಿ ತಿಳಿಸಿತು. ೧೯೮೩ರಲ್ಲಿ ರಾಮಕೃಷ್ಣಹೆಗ್ಗಡೆಯವರ ನೇತೃತ್ವದ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ವೆಂಕಟಸ್ವಾಮಿ ಅವರ ಅಧ್ಯಕ್ಷತೆಯ ಎರಡನೆಯ ಹಿಂದುಳಿದ ಆಯೋಗ ಅಸ್ತಿತ್ವಕ್ಕೆ ಬಂದಿತು. ಅದು ೧೭ ವಿವಿಧ ಸೂಚಕಗಳನ್ನು ಪರಿಶೀಲಿಸಿ ವಿವಿಧ ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ೧೯೮೬ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಕೆಲವು ಸಮುದಾಯಗಳನ್ನು ಮೀಸಲಾತಿಯಿಂದ ಕೈಬಿಟ್ಟಿದ್ದರಿಂದ ಉಂಟಾದ ರಾಜಕೀಯ ಒತ್ತಡಕ್ಕೆ ಮಣಿದ ಸರ್ಕಾರ ಕೆಲವು ಕಾರಣಗಳನ್ನು ನೀಡಿ ಈ ಆಯೋಗದ ವರದಿಯನ್ನು ತಿರಸ್ಕರಿಸಿತು.

ಈ ನಡುವೆ ಸರ್ಕಾರ ೧೯೮೬ರ ಅಕ್ಟೋಬರ್ ತಿಂಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಮಧ್ಯಂತರ ಆಜ್ಞೆಯನ್ನು ಹೊರಡಿಸಿತು. ಅದರ ಪ್ರಕಾರ ‘ಎ’, ‘ಬಿ’, ‘ಸಿ’, ‘ಡಿ’ ಮತ್ತು ‘ಈ’ ಗುಂಪುಗಳಾಗಿ ಹಿಂದುಳಿದವರನ್ನು ವಿಂಗಡಿಸಲಾಯಿತು. ಕೊನೆಯದು ಹಿಂದಿನಂತೆ ವಿಶೇಷ ಗುಂಪಾಗಿ ಪರಿಗಣಿತವಾಯಿತು. ಹಾವನೂರು ಆಯೋಗದಲ್ಲಿ ಅವಕಾಶ ಪಡೆಯದಿದ್ದ ಲಿಂಗಾಯತರು ಅಥವಾ ವೀರಶೈವರು ಮತ್ತಿತರರೂ ಇದರಲ್ಲಿ ಅವಕಾಶ ಪಡೆದದ್ದು ಗಮನಾರ್ಹವಾಗಿತ್ತು. ‘ಎ’ ಗುಂಪಿಗೆ ಆದಾಯ ಮಿತಿಯ ನಿರ್ಬಂಧ ತೆಗೆದು ಹಾಕಲಾಯಿತು.

ಚಿನ್ನಪ್ಪರೆಡ್ಡಿ ಆಯೋಗ[ಬದಲಾಯಿಸಿ]

ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳು ಉದ್ಭವಿಸಿದರೂ ಆಯೋಗಗಳಿಗೆ ಪುನರಪಿ ಮರಣ ಪುನರಪಿ ಜನನದ ಅವಸ್ಥೆ ತಪ್ಪಲಿಲ್ಲ. ಮತ್ತೆ ಕರ್ನಾಟಕ ಸರ್ಕಾರ ಚಿನ್ನಪ್ಪರೆಡ್ಡಿಯವರ ನೇತೃತ್ವದಲ್ಲಿ ಮೂರನೆಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತು. ಈ ಆಯೋಗ ಹಿಂದುಳಿದ ವರ್ಗಗಳನ್ನು ಕುರಿತು ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪರಿಶೀಲನೆ ನಡೆಸಿತು. ಈ ಆಯೋಗ ೧೯೬೦ರ ದಶಕದಲ್ಲಿದ್ದಂತೆ ಅತ್ಯಂತ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಹಿಂದುಳಿದವರು ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಈ ವರ್ಗಗಳನ್ನು ವಿಭಜಿಸಿ ಪ್ರಮಾಣಾನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸಿತು. ಆ ಪ್ರಕಾರ ಇಡೀ ವರ್ಗವನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಿತು. ಗರಿಷ್ಠ ಶೇ.೫೦ರಷ್ಟು ಮೀಸಲಾತಿ ನಿಗದಿಪಡಿಸಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಡೆಸುವ ಹಿಂದುಳಿದವರಿಗೆ ಹೇಗೆ ಸರ್ಕಾರ ನೆರವಾಗಬೇಕೆಂಬ ಬಗ್ಗೆಯೂ ಯೋಜನೆ ಹಾಕಿಕೂಟ್ಟಿತು. ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವೆಂದು ಸಲಹೆ ಮಾಡಿತು.

ಈ ಆಯೋಗದ ವರದಿಯನ್ನು ೧೯೯೦ರ ಏಪ್ರಿಲ್ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಯಿತು. ೧೯೯೨ರಲ್ಲಿ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳನ್ನು ಕುರಿತು ವರದಿ ಸಲ್ಲಿಸಲು ನೇಮಿಸಿದ್ದ ಮಂಡಲ್ ಆಯೋಗದ ವರದಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿತು. ಅದನ್ನು ಅನುಸರಿಸಿ ೧೯೯೩ರಲ್ಲಿ ಕೇಂದ್ರ ಸರ್ಕಾರ ಒಂದು ಪರಿಷ್ಕೃತ ಆದೇಶ ಹೊರಡಿಸಿತು. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ನೀಡುವ ಮೀಸಲಾತಿಯೂ ಸೇರಿದಂತೆ ಯಾವುದೇ ಮೀಸಲಾತಿಯೂ ಶೇ.೫೦ಕ್ಕೆ ಮೀರಬಾರದೆಂಬುದು ನ್ಯಾಯಾಲಯದ ನಿರ್ದೇಶನವಾಗಿತ್ತು. ಜೊತೆಗೆ ರಾಜ್ಯ ಸರ್ಕಾರದ ಚಿನ್ನಪ್ಪರೆಡ್ಡಿ ಆಯೋಗ ಹಿಂದುಳಿದವರ ಪಟ್ಟಿಯಿಂದ ಕೈಬಿಟ್ಟಿದ್ದ ಕೆಲವು ಸಮುದಾಯಗಳನ್ನು ಮಂಡಲ್ ಆಯೋಗ ಹಿಂದುಳಿದದ್ದೆಂದು ಪರಿಗಣಿಸಿತ್ತು. ಉದಾಹರಣೆಗೆ, ಕರ್ನಾಟಕದ ಒಕ್ಕಲಿಗ ಸಮುದಾಯ. ಚಿನ್ನಪ್ಪರೆಡ್ಡಿ ಆಯೋಗದ ಅನುಷ್ಠಾನಕ್ಕೆ ಆದೇಶ ಹೊರಟಾಗ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಪ್ರಕಟವಾದವು. ಇದರಿಂದ ವಿಚಲಿತವಾದ ರಾಜ್ಯಸರ್ಕಾರ ಈ ವರದಿಯ ಅನುಷ್ಠಾನವನ್ನು ಹಿಂದಕ್ಕೆ ತೆಗೆದುಕೊಂಡಿತು. ಅನಂತರದಲ್ಲಿ ಮಧ್ಯಂತರ ಆದೇಶವೇ ಅಧಿಕೃತವಾಯಿತು. ಮಧ್ಯಂತರ ಆದೇಶದ ಕಲಂಗಳಿಗೆ ೨ಎ, ೨ಬಿ, ೩ಎ, ೩ಬಿ ಎಂಬ ಉಪವಿಂಗಡನೆಗಳನ್ನೂ ಮಾಡುವ ಮೂಲಕ ಕೆಲವು ಸುದಾಯಗಳಿಗೆ ನಿರ್ದಿಷ್ಟ ಪ್ರಮಾಣದ ಮೀಸಲಾತಿ ನಿಗದಿಪಡಿಸಲಾಗಿದೆ. ಪ್ರತಿಯೊಂದು ಸಮುದಾಯಕ್ಕೂ ಮೀಸಲಾತಿಯ ಸೌಲಭ್ಯ ಒದಗಿಸುವುದೇ ಈ ಒಳವಿಂಗಡನೆಯ ಉದ್ದೇಶ. ಆದರೆ ಹಿಂದುಳಿದ ವರ್ಗಗಳ ವಿಷಯ ಮತ್ತು ವಿಚಾರ ಸದಾ ಪರಿಶೀಲನೆಗೆ ಅರ್ಹವಾದುವೆಂದೂ ಅವುಗಳಿಗೆ ನೀಡಬೇಕಾದ ಸೌಲಭ್ಯಗಳು ಸದಾ ವೀಕ್ಷಣೆಗೆ ಒಳಪಡಬೇಕೆಂದೂ ಸಾರ್ವಜನಿಕ ಅಭಿಪ್ರಾಯ ರೂಪಿತವಾಯಿತು. ಇದನ್ನನುಸರಿಸಿ ಸರ್ಕಾರ ೧೯೯೪ರಲ್ಲಿ ಹಿಂದುಳಿದ ವರ್ಗಗಳ ಖಾಯಂ ಆಯೋಗ ರಚನೆಗೆ ಕ್ರಮಕೈಗೊಂಡಿತು. ಹೀಗೆ ರಚಿತವಾದ ಖಾಯಂ ಆಯೋಗದ ಮೊದಲ ಅಧ್ಯಕ್ಷರು ನಿವೃತ್ತ ನ್ಯಾಯಾಧೀಶರಾಗಿದ್ದ ಕುದೂರು ನಾರಾಯಣಪೈಗಳು.