ವಿಷಯಕ್ಕೆ ಹೋಗು

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸೂರು ಸಾಬೂನು ಮತ್ತು ಶ್ರೀಗಂಧದ ಎಣ್ಣೆ

[ಬದಲಾಯಿಸಿ]
ಇತಿಹಾಸ
ಒಮ್ಮೆ 1916ರಲ್ಲಿ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿನ ಅರಣ್ಯ ಇಲಾಖೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಅವರು ಭೇಟಿ ನೀಡಿದರು. ಅಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧ ಮರದ ತುಂಡುಗಳ ರಾಶಿಯನ್ನು ಕಂಡರು. ಅವರಿಗೆ, ಆ ಮರಗಳಿಂದ ಗಂಧದ ಎಣ್ಣೆ ತೆಗೆಯಬಾರದೇಕೆ ಎಂಬ ಆಲೋಚನೆ ಬಂದಿತು. ಆಗ ದಿವಾನರಾಗಿದ್ದ ಸರ್‌.ಎಂ.ವಿಶ್ವೇಶ್ವರಯ್ಯ ಹಾಗೂ ಸರ್‌ ಆಲ್‌ಫ್ರೆಡ್‌ ಚಾಟರ್‌ಟನ್‌ ಜತೆಗೆ ಚರ್ಚಿಸಿದ ಮಹಾರಾಜರು, ಶ್ರೀಗಂಧದ ಎಣ್ಣೆ ತೆಗೆಯುವುದಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಲು ಸೂಚಿಸಿದರು. ಅದು ಶ್ರೀಗಂಧದ ಎಣ್ಣೆ ತಯಾರಿಕೆಗೆ, ನಂತರ ಮೈಸೂರು ಸ್ಯಾಂಡಲ್‌ ಸೋಪ್ (ಸಾಬೂನು) ಜನ್ಮತಳೆಯಲು ನಾಂದಿ ಹಾಡಿತು.

ಐಐಎಸ್‌ಸಿಯಲ್ಲಿ ಸಂಶೋಧನೆ

[ಬದಲಾಯಿಸಿ]
ಶ್ರೀಗಂಧದ ಮರಗಳ ತುಂಡುಗಳಿಂದ ತೈಲ ತೆಗೆಯುವ ಮೊಟ್ಟ ಮೊದಲ ಪ್ರಯತ್ನ ಹೀಗೆ ಆರಂಭ ಗೊಂಡಿತು. ಬೆಂಗಳೂರಿನ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌’ನ (ಐಐಎಸ್‌ಸಿ) ವಿಜ್ಞಾನಿ ಗಳು ಗಂಧದ ಎಣ್ಣೆ ತೆಗೆಯುವುದಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿದರು. ಪ್ರೊ. ಸದ್ಬರೊ ಮತ್ತು ವ್ಯಾಟ್ಸನ್‌ ನೇತೃತ್ವದ ತಂಡ ಶ್ರೀಗಂಧದ ಮರದಿಂದ ಸುಗಂಧ ತೈಲ ತೆಗೆಯುವ ಪ್ರಯತ್ನದಲ್ಲಿ ಯಶಸ್ವಿಯಾಯಿತು. ಈ ಬಗೆಯಲ್ಲಿ ಸುಗಂಧಭರಿತ ನೈಸರ್ಗಿಕ ತೈಲ ಮೈಸೂರು ಸೇರಿದಂತೆ ಇಡೀ ನಾಡಿಗೆ ಮೊದಲ ಬಾರಿಗೆ ಪರಿಚಯವಾಯಿತು. ಇದರಿಂದ ಮೈಸೂರು ರೇಷ್ಮೆ, ಮೈಸೂರು ಚಿಗುರೆಲೆ ಮೊದಲಾದವುಗಳಿಂದ ಹೆಸರಾಗಿದ್ದ ಮೈಸೂರು ಸಂಸ್ಥಾನದ ಪರಂಪರೆಯ ಹೆಗ್ಗುರುತುಗಳ ಸಾಲಿಗೆ ಶ್ರೀಗಂಧದ ಎಣ್ಣೆಯೂ ಸೇರ್ಪಡೆಯಾಯಿತು.
ಗಂಧದ ಎಣ್ಣೆ-10ಗ್ರಾಂ ರೂ.3600/-2015 ಫೆಬ್ರವರಿ
ಗಂಧದ ಎಣ್ಣೆಯ ತಯಾರಿಕೆಯು ಯಶಸ್ವಿಯಾದ ನಂತರ 1916ರಲ್ಲಿ ಬೆಂಗಳೂರಿನಲ್ಲಿ ಮರದ ತೊಗಟೆ ತೆಗೆದು ಚಿಕ್ಕ ಗಾತ್ರಕ್ಕೆ ಶ್ರೀಗಂಧದ ತುಂಡುಗಳನ್ನು ಸಿದ್ಧಪಡಿಸುವ ಘಟಕ ಆರಂಭವಾಯಿತು.
ಮರುವರ್ಷ, ಅಂದರೆ 1917ರಲ್ಲಿ ಮೈಸೂರಿನ ಅರದನಹಳ್ಳಿ (ಈಗಿನ ಅಶೋಕಪುರಂ) ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಆರಂಭಿಸಿದರು. 36 ಎಕರೆಗಳ ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀಗಂಧದ ಎಣ್ಣೆ ಕಾರ್ಖಾನೆ ಯಲ್ಲಿ ಈಗಲೂ ಶ್ರೀಗಂಧದ ಎಣ್ಣೆ, ಅಗರಬತ್ತಿ ಹಾಗೂ ಧೂಪವನ್ನು ತಯಾರಿಸಲಾಗುತ್ತದೆ.
ಪ್ರೇರಣೆ
1918ರಲ್ಲಿ ಫ್ರಾನ್ಸ್‌ನಿಂದ ಬಂದ ಅತಿಥಿಗಳು, ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಅಪರೂಪದ ಕಾಣಿಕೆ ನೀಡಿದರು. ಯಾವುದು ಆ ಅಪರೂಪದ ಕಾಣಿಕೆ ಎಂದರೆ; ಅವು ಅಮೋಘವಾದ ಸುವಾಸನೆಯ ಸಾಬೂನು ಬಿಲ್ಲೆಗಳಾಗಿದ್ದವು. ಅಚ್ಚರಿಯ ಸಂಗತಿ ಏನೆಂದರೆ, ಭಾರತದಲ್ಲಿ ಸಿದ್ಧಪಡಿಸಿದ ಶ್ರೀಗಂಧ ಎಣ್ಣೆಯನ್ನು ಬಳಸಿಯೇ ಪರಿಮಳದ ಆ ಸಾಬೂನು ಬಿಲ್ಲೆಗಳನ್ನು ಫ್ರಾನ್ಸ್‌ನಲ್ಲಿ ತಯಾರಿಸಲಾಗಿತ್ತು! ಆಗ ಮಹಾರಾಜರು, ‘ನಾವೂ ಏಕೆ ಸಾಬೂನು ತಯಾರಿಸಬಾರದು?’ ಎಂದು ಆಲೋಚಿಸಿದರು.
ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಅವರು, ರಸಾಯನಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದ ಎಸ್‌.ಜಿ.ಶಾಸ್ತ್ರಿ ಅವರನ್ನು ತರಬೇತಿಗಾಗಿ ಲಂಡನ್‌ಗೆ ಕಳುಹಿಸಿದರು. ವಿದೇಶದಿಂದ ಮೈಸೂರಿಗೆ ಮರಳಿದ ಎಸ್‌.ಜಿ.ಶಾಸ್ತ್ರಿ ಅವರು, ಸ್ಥಳೀಯವಾಗಿ ಕೆಲವು ಪ್ರಯೋಗಗಳನ್ನು ನಡೆಸಿದರು. ಕೆಲವು ದಿನಗಳ ನಂತರ ಮೈಸೂರು ಸ್ಯಾಂಡಲ್‌ ಸಾಬೂನು ಜನ್ಮತಳೆಯಿತು.
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನಂತರ ಅವರ ಪುತ್ರ ಜಯಚಾಮರಾಜೇಂದ್ರ ಒಡೆಯರ್‌ ಅವರು ಗಂಧದ ಎಣ್ಣೆ ಕಾರ್ಖಾನೆಯನ್ನು ಮುನ್ನಡೆಸಿದರು. ಪುಟ್ಟ ಗಂಧದ ಮರದ ಮೇಲೆ ಅವರು, ತಮ್ಮ ಪತ್ನಿ ಸತ್ಯ ಪ್ರೇಮಕುಮಾರಿ ಅವರೊಂದಿಗೆ 1938ರಲ್ಲಿ ಇಂಗ್ಲಿಷಿನಲ್ಲಿ ಸಹಿ ಮಾಡಿದ್ದನ್ನು ಈಗಲೂ ಸಂಗ್ರಹಿಸಿಡಲಾಗಿದೆ.
ಮೈಸೂರು ಸ್ಯಾಂಡಲ್‌ ಸಾಬೂನು
(ಮೈಸೂರು ಸ್ಯಾಂಡಲ್‌ ಸೋಪ್)
ಅದು ಉಳಿದ ಸಾಬೂನುಗಳಂತೆ ಸಾಧಾರಣವಾದ ಆಕಾರದಲ್ಲಿ ಇರಬಾರದು ಎಂಬ ಆಲೋಚನೆಯಲ್ಲಿ ತುಸು ಭಿನ್ನವಾದ ಅಚ್ಚು ತಯಾರಿಸಿದರು. ಹೊರಗಿನ ಗಾಳಿ, ಬಿಸಿಲು, ತೇವಾಂಶ, ತಾಪಕ್ಕೆ ಬಣ್ಣಗೆಡದಂತೆ, ಸಾಬೂನು ದೀರ್ಘ ಕಾಲ ಶ್ರೀಗಂಧದ ಪರಿಮಳವನ್ನು ಕಳೆದುಕೊಳ್ಳದಂತೆ ಭದ್ರವಾಗಿರಿಸಲು ವಿಶಿಷ್ಟವಾದ ಹೊರಕವಚವನ್ನೂ ತಯಾರಿಸಲಾಯಿತು. ಹೀಗೆ ಬಹಳ ಮುತುವರ್ಜಿಯಿಂದ ತಯಾರಾದ ‘ಮೈಸೂರು ಸ್ಯಾಂಡಲ್‌ ಸಾಬೂನು’ 1918ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಶ್ರೀ ಜಯಚಾಮರಾಜೇಂದ್ರ ಒಡೆಯರ್‌

[ಬದಲಾಯಿಸಿ]
ಈ ಹಿಂದೆ 200 ಕಾರ್ಮಿಕರು ಈ ಕಾರ್ಖಾನೆ ಯಲ್ಲಿದ್ದರು. ಈಗ ಕೆಲಸ ಕಾಯಂ ಆಗಿರುವ 40 ಕಾರ್ಮಿಕರಿದ್ದಾರೆ. ಗುತ್ತಿಗೆ ಆಧಾರದಲ್ಲಿ 120 ಕಾರ್ಮಿಕರು ದುಡಿಯುತ್ತಿದ್ದಾರೆ’ ಎಂದು ವಿವರಿಸುತ್ತಾರೆ ಶ್ರೀಗಂಧದ ಎಣ್ಣೆ ತಯಾರಿಕೆ ವಿಭಾಗದ ಮುಖ್ಯಸ್ಥ ಕೆ.ಪಿ.ನಾಗೇಂದ್ರ.
  • 1944ರಲ್ಲಿ ಶ್ರೀಗಂಧದ ಎಣ್ಣೆ ತೆಗೆಯುವ ಎರಡನೇ ಘಟಕವನ್ನು ಶಿವಮೊಗ್ಗದಲ್ಲಿ ಆರಂಭಿಸಲಾಯಿತು. 1957ರಲ್ಲಿ ಕಾರ್ಖಾನೆಯನ್ನು ಈಗಿನ ಘಟಕಕ್ಕೆ ಸ್ಥಳಾಂತರಿಸಲಾಯಿತು. 1965 ವಿದೇಶಕ್ಕೆ ರಫ್ತು ಆರಂಭ. 1967ರಲ್ಲಿ ಸುವರ್ಣ ಮಹೋತ್ಸವ

ಕರ್ನಾಟಕ ಸೋಪ್ಸ್‌ ಅಂಡ್ ಡಿಟರ್ಜಂಟ್‌ ಲಿಮಿಟೆಡ್‌

[ಬದಲಾಯಿಸಿ]
  • 1974 ಕಾರ್ಖಾನೆಯ ಉತ್ಪನ್ನಗಳ ಮಾರಾಟಕ್ಕೆ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಅನ್ನು ಏಕೈಕ ಮಾರಾಟ ಪ್ರತಿನಿಧಿಯಾಗಿ ಮಾಡಲಾಯಿತು. 1980ರಲ್ಲಿ ಸೋಪ್‌ ಫ್ಯಾಕ್ಟರಿಯನ್ನು ಸರ್ಕಾರಿ ಸ್ವಾಮ್ಯದ ಉದ್ದಿಮೆಯಾಗಿ 9ನೇ ಜುಲೈನಲ್ಲಿ ‘ಕರ್ನಾಟಕ ಸೋಪ್ಸ್‌ ಅಂಡ್ ಡಿಟರ್ಜಂಟ್‌ ಲಿಮಿಟೆಡ್‌’ (ಕೆಎಸ್‌ಡಿಎಲ್‌) ಎಂದು ನಾಮಕರಣ ಮಾಡಲಾಯಿತು.

ಹೊರದೇಶಗಳಿಗೆ ರಫ್ತು

[ಬದಲಾಯಿಸಿ]

1980ರ ದಶಕಕ್ಕೂ ಮುನ್ನ ಶ್ರೀಗಂಧದ ಎಣ್ಣೆಯನ್ನು ದೇಶದ ವಿವಿಧೆಡೆಗಷ್ಟೇ ಅಲ್ಲದೆ ವಿವಿಧ ದೇಶಗಳಿಗೂ ಬ್ಯಾರೆಲ್‌ಗಳ ಲೆಕ್ಕದಲ್ಲಿ ರಫ್ತು ಮಾಡಲಾಗುತ್ತಿತ್ತು. ಆದರೆ, 1987ರಲ್ಲಿ ರಫ್ತು ವಹಿವಾಟು ಸ್ಥಗಿತಗೊಳಿಸಲಾಯಿತು. ಶ್ರೀಗಂಧದ ಮರಗಳ ಕೊರತೆ ಎದುರಾಗಿದ್ದೇ ಇದಕ್ಕೆ ಕಾರಣ. ಈಗಲೂ ಶ್ರೀಗಂಧದ ಎಣ್ಣೆ ಉತ್ಪಾದಿಸಲಾಗುತ್ತದೆ. ಆದರೆ, ಅದಷ್ಟನ್ನೂ ಸಾಬೂನು ಹಾಗೂ ಶ್ರೀಗಂಧದ ಎಣ್ಣೆ ಮಾರಾಟಕ್ಕೆ ಮಾತ್ರ ಬಳಸಲಾಗುತ್ತದೆ.

ಇದಕ್ಕಾಗಿ ವಾರ್ಷಿಕ 2,300 ಕೆ.ಜಿಗಳಷ್ಟು ಶ್ರೀಗಂಧದ ತುಂಡುಗಳು ಬೇಕಾಗುತ್ತವೆ. ಅಂದರೆ ಸುಮಾರು 70 ಟನ್ ಭಾರದ ಶ್ರೀಗಂಧ ಮರಗಳನ್ನು ಕತ್ತರಿಸಿ ಬರಬೇಕಾಗುತ್ತದೆ. ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಧಾರವಾಡ, ಶಿವಮೊಗ್ಗ ಹಾಗೂ ಮೈಸೂರಿನ ವಿವಿಧ ಭಾಗಗಳಿಂದ ಶ್ರೀಗಂಧದ ಮರಗಳು ಮೈಸೂರಿಗೆ ರವಾನೆ ಆಗುತ್ತವೆ. ಐದು ಗ್ರಾಂ ಶ್ರೀಗಂಧದ ಎಣ್ಣೆಗೆ ಈಗ ರೂ1,800 ಹಾಗೂ 10 ಗ್ರಾಂಗೆ ರೂ3,600 ದರ ನಿಗದಿಪಡಿಸಲಾಗಿದೆ. ;ಮೈಸೋಪು ಹಾಗೂ ಬಟ್ಟೆ ತೊಳೆಯುವ ಸಾಬೂನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೈಗಾರಿಕೆ ಪ್ರದೇಶದಲ್ಲಿಯ ಕಾರ್ಖಾನೆಯಲ್ಲಿ ಸಿದ್ಧಗೊಳ್ಳುತ್ತವೆ.

18 ದೇಶಗಳಿಗೆ ರಫ್ತು
  • ಕಾರ್ಖಾನೆಯ ಉತ್ಪನ್ನಗಳು ಪ್ರಪಂಚದ 18 ದೇಶಗಳಲ್ಲಿ ಗ್ರಾಹಕರನ್ನು ತಲುಪಿವೆ. ಅಮೆರಿಕ, ಯುಎಇ, ಸೌದಿ ಅರೇಬಿಯಾ, ಕೆನಡಾ, ಕುವೈತ್‌, ಬೆಹರಿನ್‌, ಕತಾರ್‌, ಮಲೇಷ್ಯಾ, ಸಿಂಗಪುರ, ದಕ್ಷಿಣ ಆಫ್ರಿಕಾ, ಚೀನಾ, ತೈವಾನ್‌, ಆಸ್ಟ್ರೇಲಿಯಾ, ಯುರೋಪ್‌ ದೇಶಗಳಾದ ಲಂಡನ್‌, ಫ್ರಾನ್ಸ್‌ ಮತ್ತು ಹಂಗೇರಿ ದೇಶಗಳಿಗೆ ₹10.26 ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಯುಎಇಗೆ 2015–16ರಲ್ಲಿ ಒಟ್ಟು ₹3.9 ಕೋಟಿ ಮೊತ್ತದ ಉತ್ನನ್ನಗಳನ್ನು ರಫ್ತು ಮಾಡಲಾಗಿದ್ದರೆ, ಸೌದಿ ಅರೇಬಿಯಾಕ್ಕೆ ₹2.56 ಕೋಟಿ, ಅಮೆರಿಕಕ್ಕೆ ₹1.09 ಕೋಟಿ ಮೌಲ್ಯದ ಉತ್ಪನ್ನ ರಫ್ತಾಗಿದೆ.
ಆರು ಮಾರುಕಟ್ಟೆ ಶಾಖೆಗಳು

ಕಾರ್ಖಾನೆ ತನ್ನ ಮಾರಾಟ ಮತ್ತು ಉತ್ಪನ್ನಗಳ ಪ್ರಚಾರಕ್ಕಾಗಿ ದೇಶದ ಆರು ಕಡೆ ಮಾರುಕಟ್ಟೆ ಶಾಖೆಗಳನ್ನು ಹೊಂದಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌, ಮುಂಬಯಿ, ಕೋಲ್ಕತಾ ಹಾಗೂ ದೆಹಲಿಗಳಲ್ಲಿ ಶಾಖೆಗಳಿವೆ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಎರಡು ವಿಭಾಗಗಳಿವೆ. ಬೆಂಗಳೂರಿನಲ್ಲಿ ಆಡಳಿತ ಕಚೇರಿ ಇದೆ.

2015ರ ಬೆಳವಣಿಗೆ
ಶ್ರೀಗಂಧದ ಮರಗಳ ಸರಬರಾಜಿನ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಶ್ರೀಗಂಧ ಬೆಳೆಸಿ ಸಿರಿವಂತರಾಗಿ ಎನ್ನುವ ಕಾರ್ಯಕ್ರಮ ಜಾರಿಗೆ ಬಂತು. "ಈ ಮೂಲಕ ಶ್ರೀಗಂಧದ ನಾಡು–ಚಂದನದ ಬೀಡು ಎಂದು ಮತ್ತೆ ಸಾಬೀತಾಗಬೇಕು ಎನ್ನುವ ಗುರಿಯೂ ಇದೆ’ ಎನ್ನುತ್ತಾರೆ ಕೆಎಸ್‌ಡಿಎಲ್‌ ಅಧ್ಯಕ್ಷೆ ವೆರೊನಿಕಾ ಕರ್ನೇಲಿಯೊ.
ಹೀಗೆ 97 ವರ್ಷಗಳ ಹಿಂದೆ ಶುರುವಾದ ‘ಮೈಸೂರು ಸ್ಯಾಂಡಲ್‌ ಸಾಬೂನು’ ಯಾತ್ರೆ, ಈಗಲೂ ಮುಂದುವರಿದಿದೆ. ಮೊದಲಿನಷ್ಟು ಇಲ್ಲದೇ ಇದ್ದರೂ ಸಹ ಆ ಶ್ರೀಗಂಧ ಪರಿಮಳದ ಸಾಬೂನು, ಈಗಲೂ ಗರಿಮೆ, ಜನಪ್ರಿಯತೆ ಉಳಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಬಹಳ ವೈವಿಧ್ಯಮಯವಾದ ನೂರಾರು ಸಾಬೂನುಗಳಿದ್ದರೂ ಮೈಸೂರ್‌ ಸ್ಯಾಂಡಲ್‌ ಸೋಪ್‌ ಬಳಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿಯೇ ಇದೆ ಎನ್ನುತ್ತಾ ಹಳೆಯ ಮತ್ತು ಈಗಿನ ದಿನಗಳನ್ನು ಮೆಲಕು ಹಾಕುತ್ತಾರೆ ನಾಗೇಂದ್ರ.
ಈಗಲೂ ಕೂಡಾ ಸಾಬೂನಿನ ಗುಣಮಟ್ಟ ಹೆಚ್ಚಿಸುವ, ಬೇರೆಯದೇ ಆಕಾರ, ಬಣ್ಣ, ಸುವಾಸನೆ ನೀಡುವ ವಿಚಾರದಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ‘ಮೈಸೂರು ಮಿಲೆನಿಯಂ’ ಎಂಬ ವಿಶೇಷ ಗುಣಮಟ್ಟದ ಶ್ರೀಗಂಧ ಪರಿಮಳದ ಸಾಬೂನನ್ನು ತಿಂಗಳುಗಳ ಹಿಂದೆಯೇ ರೂಪಿಸಲಾಗಿದ್ದು, ರೂ720ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಶ್ರೀಗಂಧದ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಸಾಬೂನು ತಯಾರಿಕೆ ವಿಭಾಗದ ಮುಖ್ಯಸ್ಥ.
ವಹಿವಾಟು
2012-13 ರಲ್ಲಿ 322ಕೋಟಿ ರೂ.=ಲಾಭ 21.74ಕೋಟಿ ರೂ;
20113-14ರಲ್ಲಿ 353 ಕೋಟಿರೂ,=ಲಾಭ 32.83ಕೋಟಿ ;
2014-15, 360ಕೋಟಿಯ ಗುರಿ, ಲಾಭ --!
ಉತ್ಪಾದನೆ
ವಾರ್ಷಿಕ 12 ಮೆಟ್ರಿಕ್ ಟನ್ ಉತ್ಪಾದನೆ;
ವಿದೇಶಕ್ಕೆ ಸಾಬೂನು ರಫ್ತಿನಿಂದ ಆದಾಯ 10 ರಿಂದ 12ಕೋಟಿ ರೂ.
ಸೋಪು ಮಾರಾಟ ವರಮಾನ ವಾರ್ಷಿಕ 14 ರ ಪ್ರಗತಿ.
ಮೈಸೂರು ಸ್ಯಾಂಡಲ್ ಗೋಲ್ಡ್ ಸಾಬೂನು ವಾರ್ಷಿಕ ಆದಾಯ ವೃದ್ಧಿ ಶೇ.22 ವೃದ್ಧಿ.

2015–16 ರಲ್ಲಿ

[ಬದಲಾಯಿಸಿ]
  • 2015–16 ರಲ್ಲಿ 333.39 ಟನ್‌ಗಳಷ್ಟು ಟಾಯ್ಲೆಟ್‌ ಸೋಪ್‌ ಉತ್ಪನ್ನ ರಫ್ತಾಗಿದ್ದರೆ, 3.75 ಟನ್‌ ಸೌಂದರ್ಯವರ್ಧಕ ಹಾಗೂ 6.63 ಟನ್‌ ಅಗರ ಬತ್ತಿ ರಫ್ತು ಮಾಡಲಾಗಿದೆ. ಸದ್ಯ ಕಾರ್ಖಾನೆಯಲ್ಲಿ 2017 ರ ಮೇ ವರೆಗೆ ಸಾಕಾಗುವಷ್ಟು ಶ್ರೀಗಂಧದ ಎಣ್ಣೆ ದಾಸ್ತಾನು ಇದೆ. ಸದ್ಯದಲ್ಲೇ 114 ಟನ್‌ ಎಣ್ಣೆ ಉತ್ಪಾದಿಸಲಾಗುತ್ತಿದ್ದು, ಇದು 2019ರ ಜೂನ್‌ವರೆಗೆ ಸಾಕಾಗುತ್ತದೆ.
  • ಶಿವಮೊಗ್ಗದಲ್ಲಿ ಶ್ರೀಗಂಧ ನರ್ಸರಿ: ಸಂಸ್ಥೆ ‘ಹೆಚ್ಚು ಶ್ರೀಗಂಧ ಬೆಳೆಯಿರಿ’ ಶೀರ್ಷಿಕೆಯಡಿ ಶ್ರೀಗಂಧ ಬೆಳೆಯುವ ರೈತರನ್ನು ಪ್ರೋತ್ಸಾಹಿಸುತ್ತಿದೆ. ಶಿವಮೊಗ್ಗದಲ್ಲಿ ಶ್ರೀಗಂಧದ ನರ್ಸರಿ ಮತ್ತು ಗಾರ್ಡನ್‌ ಇದೆ. ಕಾನೂನು ಪ್ರಕಾರ ಶ್ರೀಗಂಧ ಬೆಳೆದು ಪೂರೈಸಲು ನೆರವಾಗುತ್ತಿದೆ.
  • 2014–15 ನೇ ಸಾಲಿನಲ್ಲಿ ರೂ.408 ಕೋಟಿ ವಹಿವಾಟು ನಡೆಸಿದೆ. 2015–16ರಲ್ಲಿ ರೂ.450 ಕೋಟಿ ವಹಿವಾಟು ಗುರಿ ಹೊಂದಲಾಗಿದೆ.

ಪ್ರಶಸ್ತಿಗಳು

[ಬದಲಾಯಿಸಿ]
  • ಕಾರ್ಖಾನೆ ನೂರು ವರ್ಷಗಳಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿದೆ. 2010ರಲ್ಲಿ ಮುಖ್ಯಮಂತ್ರಿಗಳ ರತ್ನ ಅವಾರ್ಡ್, ರಫ್ತು ವಹಿವಾಟಿಗೆ 2006–07 ರಲ್ಲಿ ಕೆಮೆಕ್ಸಿಲ್‌ನಿಂದ ಪ್ರಶಸ್ತಿ ಪಡೆದಿದೆ. 2012ರಲ್ಲಿ ‘ನ್ಯಾಷನಲ್‌ ಅವಾರ್ಡ್‌ ಫಾರ್‌ ಕಾಸ್ಟ್‌ ಮ್ಯಾನೇಜ್‌ ಮೆಂಟ್‌’ ಸಂದಿದೆ. ಗುಣಮಟ್ಟಕ್ಕಾಗಿ ಐಎಸ್ಒ 9001–2008 ಮತ್ತು ಪರಿಸರ ನೀತಿಗಾಗಿ ಐಎಸ್‌ಒ 14001–2004 ಪ್ರಮಾಣ ಪತ್ರಗಳು ಬಂದಿವೆ.

ಶತಮಾನೋತ್ಸವ

[ಬದಲಾಯಿಸಿ]
  • ಕಾರ್ಖಾನೆಗೆ 100 ವರ್ಷ ತುಂಬಿದ ಪ್ರಯುಕ್ತ ಅದ್ದೂರಿಯಿಂದ ಶತಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ.

ಪ್ರಮುಖ ಉತ್ಪನ್ನಗಳು

[ಬದಲಾಯಿಸಿ]
  • 1918ರಲ್ಲಿ ‘ಮೈಸೂರು ಸ್ಯಾಂಡಲ್ ಸೋಪ್‌’ ಬ್ರ್ಯಾಂಡ್‌ ಹೆಸರಿನಲ್ಲಿ ಸೋಪ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ ಲಾಯಿತು. ಕೆಎಸ್‌ಡಿಎಲ್‌ ಮುಖ್ಯವಾಗಿ 5 ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವುಗಳೆಂದರೆ ೧.ಪ್ರೀಮಿಯಂ ೨.ಸೋಪ್‌, ೩.ಪಾಪ್ಯುಲರ್ ಸೋಪ್‌, ೪.ಡಿಟರ್ಜಂಟ್‌, ೫.ಸೌಂದರ್ಯವರ್ಧಕ ಹಾಗೂ ಅಗರಬತ್ತಿಗಳು.
  • ಸದ್ಯ 12 ರೀತಿಯ ಪ್ರೀಮಿಯಂ ಸೋಪ್‌, 5 ಪಾಪ್ಯುಲರ್ ಸೋಪ್‌, 12 ಡಿಟರ್ಜಂಟ್‌, 10 ಸೌಂದರ್ಯವರ್ಧಕ ಮತ್ತು 15 ರೀತಿಯ ಅಗರಬತ್ತಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವುಗಳಲ್ಲದೆ ಸ್ಯಾಂಡಲ್‌ವುಡ್ ಬಿಲ್ಲೆಟ್ಸ್‌ ಮತ್ತಿತರ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ಇದಲ್ಲದೆ ವಿದ್ಯಾರ್ಥಿಗಳಿಗಾಗಿ ‘ಶುಚಿ ಸಂಭ್ರಮ’ ಎಂಬ ಕಿಟ್‌ ಅನ್ನು ಪರಿಚಯಿಸಿದೆ.
  • ಸಮಾಜ ಕಲ್ಯಾಣ ಇಲಾಖೆ ಅಧೀನದ ಹಾಸ್ಟೆಲ್‌ಗಳಿಗೆ, ಮೊರಾರ್ಜಿ ದೇಸಾಯಿ ಮತ್ತು ನವೋದಯ ವಿದ್ಯಾಲಯಗಳ ಹಾಸ್ಟೆಲ್‌ಗಳಿಗೆ ಇದನ್ನು 1994ರಿಂದ ಪೂರೈಸಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ‘ಮಡಿಲು’ ಯೋಜನೆಯಡಿ ನೀಡುವ ಕಿಟ್‌, ಕೆಎಸ್‌ಡಿಎಲ್‌ನ ಹಲವು ಉತ್ಪನ್ನಗಳನ್ನು ಒಳಗೊಂಡಿರುತ್ತದೆ.