ಕರ್ನಾಟಕ ಮಹಾವಿದ್ಯಾಲಯ, ಧಾರವಾಡ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ (೧೯೧೭) ಅಥವಾ ಕರ್ನಾಟಕ ಕಲೆ ಮತ್ತು ವಿಜ್ಞಾನ ಕಾಲೇಜು ಬಿ.ಎ, ಬಿ.ಕಾಮ್ ಮತ್ತು ಬಿ.ಎಸ್ಸಿ ಪದವಿಗಳನ್ನು ನೀಡುತ್ತಿರುವ ಕರ್ನಾಟಕದ ಅತ್ಯಂತ ಹಳೆಯ ಉನ್ನತ ವಿದ್ಯಾಸಂಸ್ಥೆಗಳ ಪೈಕಿ ಒಂದು. ಈ ಶಿಕ್ಷಣ ಸಂಸ್ಥೆ ಕಾಲೇಜು ರಸ್ತೆ,ಧಾರವಾಡ ನಗರದಲ್ಲಿದೆ. ಕರ್ನಾಟಕ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿರುವ ಅತ್ಯಂತ ಹಳೆಯ ಕಾಲೇಜು. ಆರಂಭದಲ್ಲಿ ಇದು ಮುಂಬಯಿ ವಿಶ್ವವಿದ್ಯಾಲಯದ ಭಾಗವಾಗಿತ್ತು.ಇಲ್ಲಿ ಕಿರಿಯ ಮಹಾವಿದ್ಯಾಲಯ ಕೂಡ ಇದೆ, ಅಂದರೆ ಕರ್ನಾಟಕ ರಾಜ್ಯದ ಪದವಿ ಪೂರ್ವ ಪರೀಕ್ಷಾ ಮಂಡಳಿ ಅನುಮೋದಿತ ಮೊದಲನೇ ಹಾಗೂ ದ್ವಿತೀಯ ಪದವಿಪೂರ್ವ ತರಗತಿಗಳನ್ನು ನಡೆಸಲಾಗುತ್ತದೆ.ಕರ್ನಾಟಕ ಮಹಾವಿದ್ಯಾಲಯದಲ್ಲಿ ಶ್ರೇಷ್ಠ ಪ್ರಾಧ್ಯಾಪಕರು ಸೇವೆ ಸಲ್ಲಿಸಿದ್ದಾರೆ ಮತ್ತು ಉನ್ನತ ಶ್ರೇಣಿಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.ಲಕ್ಷಾಂತರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆದಿದ್ದಾರೆ.ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಪದವಿ ಶಿಕ್ಷಣದ ಕೇಂದ್ರ ಬಿಂದು ಕರ್ನಾಟಕ ಮಹಾವಿದ್ಯಾಲಯ.