ಕರ್ನಾಟಕ ಭಾರತಿ

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕ ಭಾರತಿ ಸೃಜನ, ವಿಮರ್ಶನ, ಸಂಶೋಧನ ಮತ್ತು ವಿಜ್ಞಾನ ಸಾಹಿತ್ಯದ ಅಭಿವೃದ್ಧಿಗಾಗಿ ಮೀಸಲಾಗಿರುವ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟ ವಾಗುತ್ತಿರುವ ತ್ರೈಮಾಸಿಕೆ. ಸ್ವಾತಂತ್ರ್ಯೋತ್ಸವ ದಿನ, ಕನ್ನಡ ರಾಜ್ಯೋದಯ ದಿನ, ಸಂಕ್ರಮಣ ಮತ್ತು ಅಕ್ಷಯತೃತೀಯೆಗಳ ಸಮಯಗಳಲ್ಲಿ ಕ್ರಮವಾಗಿ ಪ್ರಕಟವಾಗುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷಿನಲ್ಲಿ ಸೈನ್ಸ್‌ (1956), ಹ್ಯುಮಾನಿಟೀಸ್ (1957) ಮತ್ತು ಸೋಷಿಯಲ್ ಸೈನ್ಸಸ್ (1965) ಪತ್ರಿಕೆಗಳು ಪ್ರಕಟವಾಗುತ್ತಿವೆ. ಹ್ಯುಮಾನಿಟೀಸ್ ಪತ್ರಿಕೆ ಇಂಗ್ಲಿಷ್ ಲೇಖನಗಳ ಜೊತೆಗೆ ಕೆಲವು ಕನ್ನಡ ಲೇಖನಗಳನ್ನೂ ಒಳಗೊಂಡಿರುತ್ತಿತ್ತು. ಆದರೆ ಪಕ್ರಟಣೆಗೆ ಬರುತ್ತಿದ್ದ ಕನ್ನಡ ಲೇಖನಗಳ ಸಂಖ್ಯೆ ಹೆಚ್ಚಾದಂತೆ ಆ ಪತ್ರಿಕೆಯಲ್ಲಿ ಅವಕ್ಕೆ ಸ್ಥಳ ಸಾಲದಾಯಿತು. ಅಲ್ಲದೆ, ಅದೇ ಹೊತ್ತಿಗೆ ಉತ್ತರ ಕರ್ನಾಟಕದ ಓದುಗರ ಹಾಗೂ ಲೇಖಕರ ಬಳಗಕ್ಕೆ ಆ ಭಾಗದಲ್ಲಿ ಪ್ರೌಢವಾದ ಸಂಶೋಧನ ಹಾಗೂ ಸೃಜನಾತ್ಮಕ ಲೇಖನಗಳನ್ನು ಪ್ರಕಟಿಸಬಲ್ಲ ಉನ್ನತಮಟ್ಟದ ನಿಯಕಾಲಿಕೆಯೊಂದರ ಆವಶ್ಯಕತೆಯಿತ್ತು. ಸಾಹಿತ್ಯದಂತೆಯೇ ವಿಜ್ಞಾನದ ವಿವಿಧ ಶಾಖೆಗಳ ಹಾಗೂ ನಾನಾ ಶಾಸ್ತ್ರಗಳ ಜ್ಞಾನವನ್ನು ಕನ್ನಡ ಮಾಧ್ಯಮದ ಮೂಲಕ ಜನತೆಯಲ್ಲಿ ಹರಡುವ ಮತ್ತು ಭಾಷೆಯನ್ನು ಅದಕ್ಕೆ ಒಗ್ಗಿಸಿ ಪುಷ್ಟಿಗೊಳಿಸುವ ಕಾರ್ಯ ತೀವ್ರಗತಿಯಿಂದ ನಡೆಯಬೇಕಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಈ ಪರಿಸ್ಥಿತಿಯನ್ನು ಮನಗಂಡು, ಕರ್ನಾಟಕ ಭಾರತಿ ಎಂಬ ಹೆಸರಿನಲ್ಲಿ ಷಾಣ್ಮಾಸಿಕ ಪತ್ರಿಕೆಯೊಂದನ್ನು ಪ್ರಕಟಿಸಲು ನಿಶ್ಚಯಿಸಿ, 1968ರ ರಾಜ್ಯೋದಯ ದಿನದಂದು (ನವೆಂಬರ್ 1) ಅದರ ಪ್ರಥಮ ಸಂಚಿಕೆಯನ್ನು ಬಿಡುಗಡೆಗೊಳಿಸಿತು. ಡಿಮೈ ಅಷ್ಟಪತ್ರಾಕಾರದಲ್ಲಿ 200ಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿದ್ದ ಆ ಪತ್ರಿಕೆಯ ಬಿಡಿಸಂಚಿಕೆಯ ಬೆಲೆ ರೂ. 3; ವಾರ್ಷಿಕ ಚಂದಾ ರೂ. 5. ಮೊದಲ ಎರಡು ಸಂಪುಟಗಳ ನಾಲ್ಕು ಸಂಚಿಕೆಗಳು ಪ್ರಕಟವಾದ ಮೇಲೆ, 1970ರ ಆಗಸ್ಟ್‌ 15ರ ಸಂಚಿಕೆಯಿಂದ ಅದು ತ್ರೈಮಾಸಿಕೆಯಾಯಿತು. ಲೇಖನಗಳ ಜೊತೆಗೆ ಗ್ರಂಥಾವಲೋಕನ, ಸಂಪಾದಕೀಯ, ಲೇಖಕರ ಪರಿಚಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗಿರುವ ಗ್ರಂಥಗಳ ಕ್ರಯಪಟ್ಟಿ ಇವನ್ನು ಪ್ರತಿಸಂಚಿಕೆಯೂ ಒಳಗೊಂಡಿರುತ್ತದೆ. ಸಂಪಾದಕ ಮಂಡಲಿಯ ಸದಸ್ಯರು ಬೇರೆ ಬೇರೆ ವ್ಯಾಸಂಗ ವಿಭಾಗಗಳನ್ನು ಪ್ರತಿನಿಧಿಸುತ್ತಾರೆ. ಲೇಖಕರಿಗೆ ಅವರ ಲೇಖನ ಪ್ರಕಟವಾದ ಸಂಚಿಕೆಯೊಂದಿಗೆ ಆ ಲೇಖನದ ಮೇಲಚ್ಚಿನ ಇಪ್ಪತ್ತೈದು ಪ್ರತಿಗಳನ್ನು ಉಚಿತವಾಗಿ ಕೊಡಲಾಗುತ್ತದೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: