ವಿಷಯಕ್ಕೆ ಹೋಗು

ಕರ್ನಾಟಕ ಗತವೈಭವ - ಗ್ರಂಥ ಸಾರಾಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಗತವೈಭವ (ಪುಸ್ತಕ)
ಮುಖ ಪುಟ
ಲೇಖಕರುವೆಂಕಟೇಶ ಭೀಮರಾವ್ ಆಲೂರ
ದೇಶಭಾರತ
ಭಾಷೆಕನ್ನಡ
ಪ್ರಕಾಶಕರುವೆಂಕಟೇಶ ಭೀಮರಾವ್ ಆಲೂರ , ಧಾರವಾಡ
ಪ್ರಕಟವಾದ ದಿನಾಂಕ
೧೯೨೦
ಪುಟಗಳು೪೩+೧೬೯

ಕರ್ನಾಟಕ ಗತವೈಭವ -ಗ್ರಂಥ ಸಾರಾಂಶ

ಕರ್ನಾಟಕ ಗತವೈಭವ ಗ್ರಂಥದ ಲೇಖಕರು, ವೆಂಕಟೇಶ ಭೀಮರಾವ್ ಆಲೂರರವರು. ೧೯೨೦ರಲ್ಲಿ ಪ್ರಕಟಗೊಂಡ ಈ ಗ್ರಂಥವು ಕನ್ನಡ ವಿಕಿಸೋರ್ಸ್ ನಲ್ಲಿ ಲಭ್ಯವಿದೆ. ಆಗಿನ ಕಾಲದ ಭಾಷಾ ಪ್ರಯೋಗ, ಪ್ರಾದೇಶಿಕ ಹೆಸರುಗಳು, ಜನ ಜೀವನ ಮುಂತಾದವುಗಳ ಬಗೆಗಿನ ಕಿರು ಚಿತ್ರಣವನ್ನು ಈ ಗ್ರಂಥದಲ್ಲಿ ಕಾಣಬಹುದು.  ಒಟ್ಟು೧೮ ಪ್ರಕರಣ (ಅಧ್ಯಾಯ)ಗಳನ್ನು ಒಳಗೊಂಡ ಈ ಗ್ರಂಥದ ಸಾರಾಂಶವನ್ನು ಈ ಲೇಖನದಲ್ಲಿ ನೀಡಲಾಗಿದೆ. ಅಂದಿನ ಕನ್ನಡ ಭಾಷಾ ಪ್ರಯೋಗವನ್ನು ತಿಳಿಯಲು ಬಹುತೇಕ ಮಟ್ಟಿಗೆ ಶ್ರೀಯುತ ವೆಂಕಟೇಶ ಭೀಮರಾವ್ ಆಲೂರರವರ ಶೈಲಿಯನ್ನೇ ಈ ಲೇಖನದಲ್ಲಿ ಉಳಿಸಿಕೊಳ್ಳಲಾಗಿದೆ.

ಈ ಗ್ರಂಥ ರಚನೆಯ ಉದ್ದೇಶವನ್ನು ಲೇಖಕರು ಈ ಪ್ರಕರಣದಲ್ಲಿ ವಿವರಿಸಿದ್ದಾರೆ. ನಮ್ಮ ಪೂರ್ವಜರ ಬಗ್ಗೆ ನಮ್ಮಲ್ಲಿ ಯೋಗ್ಯವಾದ ಅಭಿಮಾನ ಹುಟ್ಟಿಸುವದಕ್ಕೂ, ಅವರ ವಿಷಯವಾಗಿ ನಮ್ಮಲ್ಲಿ ನಿಷ್ಕಾರಣವಾಗಿ ನೆಲೆಗೊಂಡಿರುವ ತಪ್ಪು ತಿಳುವಳಿಕೆಗಳು ಮಾಯವಾಗಲಿಕ್ಕೂ, ನಮ್ಮ ದೇಶದ ನಿಜವಾದ ಇತಿಹಾಸವನ್ನು ನಮ್ಮ ಜನರೇ ಅಭಿಮಾನ ಪೂರ್ವಕವಾಗಿ ಬರೆಯುವುದು ರಾಷ್ಟ್ರದ ಪ್ರಗತಿಗೆ ಅತ್ಯಂತ ಅವಶ್ಯವಾದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಗ್ರಂಥ ರಚನೆಯಾಗಿದೆ. 

೧೦೦೦-೧೫೦೦ ವರ್ಷಗಳ ವರೆಗೆ ಅವ್ಯಾಹತವಾಗಿ ಹಿಂದೂ ದೇಶದ ಇತಿಹಾಸದಲ್ಲಿ ವೈಭವದಿಂದ ಮೆರೆದ ರಾಷ್ಟ್ರವೆಂದರೆ ಕರ್ನಾಟಕವೊಂದೇ. ನಮ್ಮ ರಾಜ್ಯವು ವಿಸ್ತಾರವಾಗಿ ಹಬ್ಬಿತ್ತು; ನಮ್ಮ ವೈಭವವು ಅತಿಶಯವಾದ ಘನತೆಗೇರಿತ್ತು; ಕರ್ನಾಟಕದೊಳಗಿರುವಷ್ಟು ದೊಡ್ಡ ಪಟ್ಟಣಗಳು ಹಿಂದೂ ದೇಶದಲ್ಲಿರಲಿಲ್ಲ. ಕರ್ನಾಟಕದಲ್ಲಿರುವಷ್ಟು ವಿದ್ವಾಂಸರು ಬೇರೆ ಕಡೆಯಲ್ಲಿರಲಿಲ್ಲ. ಕರ್ನಾಟಕದಷ್ಟು ಸಂಪನ್ನವಾದ ವಾಙ್ಮಯವೂ ಮಿಕ್ಕ ಕಡೆಯಲ್ಲಿರಲಿಲ್ಲ. ಕರ್ನಾಟಕದಲ್ಲಿರುವಂಥ ಕಟ್ಟಡಗಳು ಹಿಂದೂ ದೇಶದಲ್ಲಿ ಬೇರೆ ಎಲ್ಲೂ ಇರಲಿಲ್ಲ. ಹೀಗೆ ಕರ್ನಾಟಕವು ಸದಾ ಅಭಿವೃದ್ಧಿ ಹೊಂದುತ್ತಿರುವ ಜೀವಂತ ರಾಷ್ಟ್ರವಾಗಿತ್ತು. ಆಗಿನ ರೂಢಿಯಂತೆ, ರಾಜ್ಯವನ್ನು ಕರ್ನಾಟಕ ರಾಷ್ಟ್ರ, ಕರ್ನಾಟಕ ದೇಶವೆಂದು ಲೇಖಕರು ಸಂಬೋಧಿಸುತ್ತಿದ್ದರು.

೯ನೆಯ ಶತಮಾನದಲ್ಲಿ ಕರ್ನಾಟಕದ ಸೀಮೆಯು ಉತ್ತರದಲ್ಲಿ ಗೋದಾವರಿಯಿಂದ ದಕ್ಷಿಣಕ್ಕೆ ಕಾವೇರಿಯವರೆಗೆ ಹಬ್ಬಿತ್ತೆಂಬುದಕ್ಕೆ ನೃಪತುಂಗನ ಕವಿ ರಾಜಮಾರ್ಗದಲ್ಲಿ ಪ್ರಮಾಣವಿದೆ. ೧೬ನೆಯ ಶತಮಾನದಲ್ಲಿಯ ನಂಜುಂಡನೆಂಬ ಕವಿಯು ತನ್ನ ಸರದಾರ ಸೋದರ, ರಾಮನಾಥ ಚರಿತವೆಂಬ ಗ್ರಂಥದ ಎರಡನೆಯ ಸಂಧಿಯಲ್ಲಿ ‘ಕಾವೇರಿಯಿಂದ ಗೋದಾವರಿದಾವರೆಗಮಿರ್ದಾ ವಸುಧಾ ತಳವಳಯ | ಭಾವಿಸೆ ಕರ್ನಾಟಕ ಜನಪದವದನವನೊಲಿದು ಬಣ್ಣಿಸುವನು’ ಎಂದು ವಿವರಿಸಿದ್ದಾನೆ. ವಿಜಯನಗರದ ಸಾಮಾಜ್ಯ ಸ್ಥಾಪಕರಾದ ವಿದ್ಯಾರಣ್ಯರಿಗೆ ‘ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ'ಎಂಬ ಬಿರುದಿತ್ತು. ವಿಜಯನಗರದ ಸಾಮ್ರಾಜ್ಯದ ಕಾಲಕ್ಕೆ ಕರ್ನಾಟಕದ ಸೀಮೆಯು ದಕ್ಷಿಣಕ್ಕೆ ಮುಳಬಾಯಿಯ (ಮುಳಬಾಗಲ)ವರೆಗೆ ಹರಡಿತ್ತೆಂಬುದು ಬುಕ್ಕರಾಯನ ಸೊಸೆಯಾದ ಗಂಗಾದೇವಿಯು ರಚಿಸಿದ ಕಾವ್ಯದೊಳಗಿನ ಒಂದು ಶ್ಲೋಕದಿಂದ ಗೊತ್ತಾಗುವುದು. ಪೂರ್ವಕ್ಕೆ ಕಾವೇರಿ ನದಿಯ ನಡುವಿನಿಂದ ಉತ್ತರಕ್ಕೆ ಸುಮಾರು ಗೋದಾವರಿ ನದಿಯ ಮುಖದವರೆಗೆ ಗೆರೆಯನ್ನಳೆದರೆ ಅದು ಕನ್ನಡನಾಡಿನ ಪೂರ್ವ ಸೀಮೆಯಾಗಿರಬಹುದು. ಈಗಿನ ಮಹಾರಾಷ್ಟ್ರದ ಪೂರ್ವಕ್ಕೆ ತೆಲುಗು ದೇಶದಲ್ಲಿ ಗೋದಾವರಿಯ ತೀರದವರೆಗೆ ಕನ್ನಡನಾಡು ಹಿಂದಕ್ಕೆ ಹಬ್ಬಿರಬಹುದು.  ಮಹಾರಾಷ್ಟ್ರ ಭಾಷೆಯಲ್ಲಿ ಊರಿನ ಹೆಸರುಗಳು ಬಹುತರವಾಗಿ ಕನ್ನಡದ ಹೆಸರುಗಳೇ ಇರುತ್ತವೆ. 'ಕೆಂದೂರು' ಎಂಬ ಶುದ್ಧ ಕನ್ನಡ ಹೆಸರಿನ ಊರು, ಪುಣೆಯ ಹತ್ತಿರ ಇರುತ್ತದೆ. ಇದಲ್ಲದೆ, ಠಾಣಾ, ಕುಲಾಬಾ, ರತ್ನಾಗಿರಿ ಮುಂತಾದ ಮರಾಠಿ ಜಿಲ್ಲೆಗಳಲ್ಲಿಯೂ, ಕನ್ನಡ ಹೆಸರಿನ ಗ್ರಾಮಗಳು ತುಂಬಿರುತ್ತವೆ. ಉದಾಹರಣೆಗಾಗಿ- ಪೊಯನಾಡು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತಿಗೆರೆ, ಮೊಸಳೆ, ನೇರೂರು, ಪಾಳೆ, ದೇವೂರು, ಡೋಣಿ, ನಿರ್ಗುಡ, ಕಣಕವಲ್ಲಿ, ಬ್ರಮನಾಳ, ಗಾಣಗಾಪೂರ, ಕುರಡೀವಾಡೀ, ಕಳಸ, ಇವೇ ಮುಂತಾದ ಗ್ರಾಮಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ. ಮಹಾರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡವಿರುತ್ತವೆಂದು ಮಹಾರಾಷ್ಟ್ರದ ಪ್ರಸಿದ್ದ ಇತಿಹಾಸ ಸಂಶೋಧಕರಾದ ಶ್ರೀ ರಾಜವಾಡೆಯವರು ಹೇಳಿದ್ದಾರೆ. ಮುಂಬೈ ಸುತ್ತು ಮುತ್ತಿನ ದೇಶವನ್ನು ಆಳುತ್ತಿದ್ದ ಶಿಲಾಹಾರ ಅರಸರು ಕನ್ನಡಿಗರಾಗಿದ್ದರೆಂದು ಮುಂಬಯಿ ಗ್ಯಾಜಟಿಯರ್ ನಲ್ಲಿ ಉಲ್ಲೇಖವಿದೆ. ನಡು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಸವಡ ಎಂಬ ಗ್ರಾಮದಲ್ಲಿ ಕನ್ನಡ ಶಿಲಾಶಾಸನಗಳೂ, ವೀರಗಲ್ಲುಗಳೂ ದೊರೆತಿವೆ, ಎಂದು ಕರ್ನಾಟಕದ ವಿಸ್ತಾರವನ್ನು ಲೇಖಕರು ಬಣ್ಣಿಸುತ್ತಾರೆ.

ಕರ್ನಾಟಕದ ಮಹಾಮಹಿಮ ವ್ಯಕ್ತಿಗಳನ್ನು ಕರ್ನಾಟಕದ ವಿಭೂತಿಗಳೆಂದು ಲೇಖಕರು ವರ್ಣಿಸಿದ್ದಾರೆ.  ಗಂಗ, ಕದಂಬ, ಚಾಲುಕ್ಯ, ರಾಷ್ಟ ಕೂಟ, ಹೊಯ್ಸಳ, ಯಾದವ, ವಿಜಯನಗರ ಮುಂತಾದ ಅರಸರು ಭಿನ್ನ ಭಿನ್ನ ಕಾಲಕ್ಕೆ ಬೇರೆ ಬೇರೆ ಹೆಸರುಗಳನ್ನು ಧರಿಸಿಕೊಂಡಿದ್ದರೂ, ಅವರೆಲ್ಲರೂ ಕನ್ನಡಿಗರೇ.  ಪೂರ್ವದ ಚಾಲುಕ್ಯರ ರಾಜಧಾನಿಯಾದ ಬಾದಾಮಿಯೂ, ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡವೂ, ಕೊನೆಯ ಚಾಲುಕ್ಯ ವಂಶದ ರಾಜಧಾನಿಯಾದ ಕಲ್ಯಾಣವೂ ವಿಜಯನಗರ ಅರಸರ ರಾಜಧಾನಿಯಾದ ವಿಜಯನಗರವೂ ಇವೆಲ್ಲ ಕೇವಲ ಕರ್ನಾಟಕದ ಪಟ್ಟಣಗಳೇ. ಇಂದಿಗೆ ಜಗತ್ತಿನಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲ್ಪಟ್ಟಿರುವ ಆದೈತ, ವಿಶಿಷ್ಟಾದ್ವತ, ದೈತಗಳೆಂಬ ಮೂರು ಮತಗಳ ಸ್ಥಾಪನಾಚಾರ್ಯರಿಗೆ ಈ ಪವಿತ್ರ ಭೂಮಿ ಕರ್ನಾಟಕವೇ ಕಾರ್ಯಕ್ಷೇತ್ರವಾಗಿತ್ತು. ಶಂಕರಾಚಾರ್ಯರ ಶೃಂಗೇರಿ, ಕೂಡಲಿ, ಹಂಪೆ, ಸಂಕೇಶ್ವರ, ಶಿವಗಂಗಾ ಮುಂತಾದ ಮಠಗಳು ಈ ಕರ್ನಾಟಕದಲ್ಲಿಯೇ ಇರುತ್ತವೆ, ಚೋಳ ರಾಜರ ಅನಿವಾರ್ಯವಾದ ಹಿಂಸೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಶ್ರೀರಾಮಾನುಜಾಚಾರ್ಯರು ಕನ್ನಡ ಅರಸನಾದ ವಿಷ್ಣುವರ್ಧನನ್ನು ಆಶ್ರಯಿಸಿ ತಮ್ಮ ಮತ ಪ್ರಸಾರಣೆಯನ್ನು ಮಾಡಿದರು. ಮಧ್ವಾಚಾರ್ಯರಿಗೆ ಕರ್ನಾಟಕವೇ ತವರುಮನೆಯು, ವೀರಶೈವ ಮತೋದ್ಧಾರಕರಾದ ಬಸವೇಶ್ವರರಂತೂ ಶುದ್ಧ ಕನ್ನಡಿಗರೇ. ಜೈನ ಮತದ ಪ್ರಖ್ಯಾತ ಗುರುಗಳಾದ ಪೂಜ್ಯ ಪಾದ, ಜಿನಸೇನ, ಗುಣಭದ್ರ ಮುಂತಾದವರು ಈ ನಮ್ಮ ಕನ್ನಡ ನಾಡಿನಲ್ಲಿಯೇ ಬಾಳಿ ಬದುಕಿದರು; ಚಾಲುಕ್ಯ ವಿಕ್ರಮಾದಿತ್ಯನ ದರಬಾರಿನಲ್ಲಿ ‘ವಿದ್ಯಾಪತಿ’ ಯಾಗಿದ್ದ ಬಿಲ್ಲಣನೂ ಧರ್ಮಶಾಸ್ತ್ರಕಾರನಾದ ವಿಜ್ಞಾನೇಶ್ವರನೂ, ಪ್ರಸಿದ್ಧ ವೇದಾಂತಿಯಾದ ಸಾಯಣನೂ ಪ್ರಖ್ಯಾತ ಜ್ಯೋತಿಷಿಯಾದ ಭಾಸ್ಕರಾಚಾರ್ಯನೂ, ಇವರೆಲ್ಲರಿಗೂ ಮುಕುಟ ಮಣಿಯಂತಿರುವ ಕರ್ನಾಟಕ 'ಸಿಂಹಾಸನ ಸ್ಥಾಪನಾಚಾರ್ಯ'ರೆಂಬ ಬಿರುದುಳ್ಳ ಜಗದ್ವಿಖ್ಯಾತರಾದ ಶ್ರೀ ವಿದ್ಯಾರಣ್ಯರೂ, ಇವರೆಲ್ಲರೂ ಕನ್ನಡ ತಾಯಿಯ ಮಕ್ಕಳು. ಕರ್ನಾಟಕ ವಾಙ್ಮಯ ಗಗನ ಮಂಡಲದೊಳಗೆ ದಿವ್ಯ ನಕ್ಷತ್ರಗಳಂತೆ ಬೆಳಗುತ್ತಿರುವ ಆದಿಪಂಪ, ಪೊನ್ನ, ರನ್ನ, ಜನ್ನ, ಮೊದಲಾದ ವಾಙ್ಮಯ ಪ್ರಭುಗಳು ಕನ್ನಡಿಗರೇ.  ಪರಮ ಭಗವದ್ಭಕ್ತರಾದ ಪುರಂದರದಾಸ, ಕನಕದಾಸ ಮುಂತಾದ ದಾಸ ಶ್ರೇಷ್ಠರಿಗೆ ಈ ನಮ್ಮ ಕರ್ನಾಟಕವೇ ಜನ್ಮಭೂಮಿ. ಅನೇಕ ಅರಸರು ಸ್ವಂತ ಕವಿಗಳಾಗಿದ್ದರು. ಗಂಗ ಅರಸರಲ್ಲಿ ಮಾಧವ, ದುರ್ವಿನೀತ ಮುಂತಾದ ಅನೇಕ ರಾಜರು ಅಶ್ವಶಾಸ್ತ್ರ, ಗಜಶಾಸ್ತ್ರ, ಕಿರಾತಾರ್ಜುನ ಟೀಕೆ, ದತ್ತಕ ಸೂತ್ರ ಮುಂತಾದ ಮಹತ್ವದ ಪುಸ್ತಕಗಳನ್ನು ಬರೆದಿರುವರು. ರಾಷ್ಟ್ರಕೂಟದ ಪ್ರಖ್ಯಾತ ಆರಸನಾದ ನೃಪತುಂಗನು 'ಕವಿರಾಜಮಾರ್ಗ' ಎಂಬ ಸುಪ್ರಸಿದ್ಧವಾದ ಅಲಂಕಾರಶಾಸ್ತ್ರದ ಗ್ರಂಥವನ್ನು ಬರೆದಿರುವನು, ಚಾಲುಕ್ಯವಂಶದ ಅರಸನಾದ ಸೋಮೇಶ್ವರನೆಂಬುವನು ‘ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥಚಿಂತಾಮಣಿ”’ ಎಂಬ ರಾಜಕೀಯ ಗ್ರಂಥವನ್ನು ಬರೆದನು. ಪಂತ, ಮುಕೇಶ್ವರರು, ಕೃಷ್ಣದೇವರಾಯನೇ ನಮ್ಮ ಅಕಬರನು, ಹೊನ್ನಮ್ಮ ಗಿರಿಯಮ್ಮ ಇವರೇ ಮುಕ್ತಾಬಾಯಿ ಮಾರಾಬಾಯಿಯವರು, ವಿಜಯಮಹಾ ದೇವಿ, ಮೈರಳದೇವಿಯವರೇ ನಮ್ಮ ತಾರಾಬಾಯಿ ಅಹಲ್ಯಾಬಾಯಿಯವರು, ಅಕ್ಕಾದೇವಿ, ಕಿತ್ತೂರಿನ ಚನ್ನಮ್ಮ ಇವರೇ ನಮ್ಮ ಝಾಂಸಿ ಲಕ್ಷ್ಮಿ ಬಾಯಿಯವರು. ಈ ವಿಧವಾಗಿ ನಮ್ಮ ಪ್ರಾಚೀನ ಇತಿಹಾಸವು ಮಹಾಪುರುಷರಿಂದಲೂ, ಮಹಾ ಸತಿಯರಿಂದಲೂ ತುಂಬಿಕೊಂಡಿತ್ತು. ನಮ್ಮ ಕರ್ನಾಟಕದ ಅರಸರು ಈ ದೇಶದಲ್ಲಿ ಮಾತ್ರವೇ ಪ್ರಖ್ಯಾತರೆಂತಲ್ಲ.  ಪುಲಿಕೇಶಿಯು ತನ್ನ ರಾಯಭಾರಿಗಳನ್ನು ಇರಾಣದ ಅರಸರ ಕಡೆಗೆ ಕಳುಹಿಸಿದ್ದನು. ಅಲ್ಲದೆ, ಇರಾಣದ ಅರಸನು ತನ್ನ ರಾಯಭಾರಿಗಳನ್ನು ನಮ್ಮ ಬಾದಾಮಿಯ ಪುಲಿಕೇಶಿಯ ಒಡೋಲಗಕ್ಕೆ ಕಳುಹಿದ್ದನು. ಸುಮಾರು ೧೩೦೦ ವರ್ಷಗಳ ಹಿಂದಿನ ಇದರ ಹಳೆಯ ಪ್ರತ್ಯಕ್ಷ ಚಿತ್ರವು ಉತ್ತರದಲ್ಲಿರುವ ಅಜಂತೆಯ ಗವಿಯೊಳಗೆ ಈಗಲೂ ಸ್ಪಷ್ಟವಾಗಿ ಕಂಗೊಳಿಸುತ್ತಿದೆ. ಜಗತ್ತಿನೊಳಗಿನ ಸೋಜಿಗವಾದ ಮತ್ತು ಅದ್ಭುತವಾದ, ಕಲ್ಲಿನೊಳಗೆ ಕೊರೆದ ಅಖಂಡ ದೇವಾಲಯವೆಂದರೆ, ವೇರೂಳದ ಕೈಲಾಸ ದೇವಾಲಯವು, ಈ ದೇವಾಲಯವನ್ನು ಕನ್ನಡಿಗ ರಾಷ್ಟ್ರಕೂಟದ ಅರಸನಾದ ಕೃಷ್ಣನೆಂಬೊಬ್ಬ.  ಬಾದಾಮಿಯ ಮೇಣಬಸ್ತಿಗಳೂ, ಕಾರ್ಲೆಯ ಅತ್ಯಂತ ಮನೋಹರವಾದ ಚೈತ್ಯಾಲಯವೂ, ಅಜಂತೆಯೊಳಗಿನ ನಿತಾಂತ ಸುಂದರವಾದ ಚಿತ್ರಗಳೂ, ಇವೆಲ್ಲವೂ ನಿಮ್ಮ ಕನ್ನಡನಾಡಿನ ಕಲ್ಲುಕುಟಿಗರ ಕೈಗಾರಿಕೆಗಳೇ. ಶ್ರವಣಬೆಳಗುಳದ ಗೋಮಠೇಶ್ವರನ ಭವ್ಯವೂ ರಮಣೀಯವೂ ಆದ ಮೂರ್ತಿಯು ಕರ್ನಾಟಕದಲ್ಲಿದೆ.  ಜಗದೊಳಗೆಲ್ಲ ಸೌಂದರ್ಯಾತಿಶಯದಿಂದ ಮೆರೆಯುತ್ತಿರುವ ಬೇಲೂರಿನ ಚನ್ನಕೇಶವನ ದೇವಾಲಯವನ್ನೂ, ಒಂದೇ ಸಮವಾಗಿ ೮೬ ವರ್ಷಗಳವರೆಗೆ ಕಟ್ಟಿದರೂ ಪೂರ್ಣವಾಗದೆ ಇರುವ ಅತ್ಯಂತ ಸುಂದರವಾದ ಹೊಯ್ಸಳೇಶ್ವರನ ಗುಡಿಯನ್ನೂ, ಕನ್ನಡಿಗರ ಅಲ್ಲಿಯ ಅತಿ ಕುಶಲವಾದ ಕುಸುರು ಕೆಲಸವನ್ನೂ ಕಂಡು, ಆ ಕಾಲದ ವೈಭವವನ್ನೂ, ಬುದ್ದಿವಂತಿಕೆಯನ್ನೂ ಅಳೆಯಬಹುದು. ನಮ್ಮ ಇತಿಹಾಸದಲ್ಲಿ ಮತ್ತೊಂದು ವಿಶೇಷವುಂಟು. ಯಾವುದೆಂದರೆ, ಮಿಕ್ಕ ಭಾಷಾ ಪ್ರಾಂತಗಳಲ್ಲಾಗಿರುವಂತೆ ನಮ್ಮ ಭಾಷೆಯಲ್ಲಿ ಅದಲು ಬದಲುಗಳಾಗಿಲ್ಲ, ಹಿಂದಕ್ಕೆ ನಮ್ಮ ಅರಸರೂ ವಿದ್ವಾಂಸರೂ ಆಡುತ್ತಿದ್ದ ಭಾಷೆಯನ್ನೇ ನಾವೀಗ ಆಡುತ್ತೇವೆ.

ಕರ್ನಾಟಕ ಇತಿಹಾಸದ ಮೊದಲನೆಯ ಸಾಧನವೆಂದರೆ ‘ಶಿಲಾಶಾಸನಗಳು’. ಅವುಗಳ ಮಹತ್ವವನ್ನರಿತವರಾದ ಸರ್ ಜಾರ್ಜ್ ಇಲಿಯೊಟ್‌, ಡಾ.ಫ್ಲೀಟ್, ಡಾ.ರೈಸ್ ಇವರಂಥವರು ಸಾವಿರಾರು ಲಿಪಿಗಳನ್ನು ಶ್ರಮಪಟ್ಟು ಉದ್ಧರಿಸಿದ್ದಾರೆ.

ಎರಡನೆಯ ಸಾಧನವೆಂದರೆ ‘ತಾಮ್ರಪಟ’. ದಪ್ಪ ತಾಮ್ರದ ತಗಡುಗಳ ಮೇಲೆ ಸುವಾಚ್ಯವಾದ ಅಕ್ಷರಗಳು ಕೆತ್ತಲ್ಪಟ್ಟು, ನಾಲ್ಕಾರು ತಗಡುಗಳಲ್ಲಿ ರಂಧ್ರ ಕೊರೆದು ತಾಮ್ರದ ಬಳೆಯು ಪೋಣಿಸಲ್ಪಟ್ಟಿರುತ್ತದೆ.

ಮೂರನೆಯ ಸಾಧನ ‘ವೀರಗಲ್ಲು’ಗಳೂ, ‘ಮಹಾಸತಿ ಕಲ್ಲು’ಗಳು. ವೀರಗಲ್ಲುಗಳೆಂದರೆ ವೀರರು ಮಡಿದ ಸ್ಥಳದಲ್ಲಿ ಅವರ ಸ್ಮಾರಕಕ್ಕೆಂದು ನೆಡಿಸಿದ ಕಲ್ಲುಗಳು. ಇವುಗಳ ಮೇಲೆ ಆಯಾ ವೀರರ ಮೂರ್ತಿಗಳನ್ನು ಕೆತ್ತಿದ್ದು, ದೇವದೂತರು ಅವರನ್ನು ವಿಮಾನಗಳಲ್ಲಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ತೋರಿಸಿರುತ್ತದೆ. ಕೆಲವು ವೀರಗಲ್ಲುಗಳ ಮೇಲೆ ನಡು ನಡುವೆ ಅಕ್ಷರಗಳಿರುತ್ತವೆ. ಮಹಾಸತಿಗಲ್ಲುಗಳೆಂದರೆ ಪತಿವ್ರತೆಯರು ವೀರರಾದ ತಮ್ಮ ಪತಿಗಳೊಡನೆ ಸಹಗಮನ ಮಾಡಿದ ಸ್ಥಳದಲ್ಲಿ ಅವರ ಸ್ಮಾರಕಾರ್ಥವಾಗಿ ನಿಲ್ಲಿಸಿದ ಕಲ್ಲುಗಳು. ಇವಕ್ಕೆ ಹಳ್ಳಿವಾಡ ಜನರು ‘ನಾಸ್ತಿಕಲ್ಲು’ ಎಂದೆನ್ನುತ್ತಾರೆ.

ನಾಲ್ಕನೆಯ ಸಾಧನವೆಂದರೆ ‘ನಾಣ್ಯ’ಗಳು. ಈ ನಾಣ್ಯಗಳಿಂದ ಆಯಾಕಾಲದ ಅರಸರ ಹೆಸರು ಇತ್ಯಾದಿಗಳು ವ್ಯಕ್ತವಾಗುತ್ತವೆ.

ಐದನೆಯ ಮಹತ್ವದ ಸಾಧನವೆಂದರೆ ಪೂರ್ವಕಾಲದ ಕಟ್ಟಡಗಳು. ಈ ಕಟ್ಟಡಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಂಥ ಗುಡಿಯು ಸುಮಾರು ಇಂಥ ಅರಸನ ಆಳಿಕೆಯಲ್ಲಿಯೇ ಹುಟ್ಟಿತೆಂದು ನಿರ್ಧರಿಸಲಿಕ್ಕೆ ಬರುತ್ತದೆಂದು ಡಾ. ಫರ್ಗೂಸನ್ ಇವರು ಹೇಳುತ್ತಾರೆ. ಆ ಗುಡಿಗಳ ಮೇಲೆ ಕೊರೆದಿರುವ ಚಿತ್ರಗಳಿಂದ ಆ ಕಾಲದ ಜನರ ಕಲಾಕೌಶಲ್ಯ, ಉಡಿಗೆ ತೊಡಿಗೆ, ಸಮಾಜ ಸ್ಥಿತಿ, ಆಯುಧ, ವಾಹನ ಇವೇ ಮೊದಲಾದುವುಗಳು ತಿಳಿದುಬರುತ್ತವೆ.

ಆರನೆಯ ಸಾಧನವೆಂದರೆ ‘ವಾಙ್ಮಯ’. ತಾಳೆಯೋಲೆಗಳನ್ನೇ ಆಗಿನ ಕಾಲಕ್ಕೆ ಬರಹಕ್ಕೆ ಬಳಸುತ್ತಿದ್ದುದರಿಂದ, ನಮ್ಮ ವಾಙ್ಮಯವೆಲ್ಲವೂ ತಾಳೆಯೋಲೆಗಳಲ್ಲಿ ಅಡಕವಾಗಿದೆ.

ಏಳನೆಯ ಸಾಧನವೆಂದರೆ ‘ವಿದೇಶೀಯ ಪ್ರವಾಸಿಕರು ಬರೆದಿಟ್ಟ ಬರಹಗಳು’ ಟಾಲೇಮಿ, ಹುಯೆನ್ಸಾಂಗ, ಫಾಹೈನ್, ಅಲಬುರ್ನಿ, ಇಬ್ನಬತೂತ, ಮಾರ್ಕೊಪೋಲೋ, ಅಬ್ದುಲರಜಾಕ, ಮುಂತಾದವರ ಉಲ್ಲೇಖಗಳಿಂದ ನಮ್ಮ ಇತಿಹಾಸ ಜ್ಞಾನಕ್ಕೆ ಹೆಚ್ಚು ಬೆಳಕು ದೊರೆಯುವುದು. ಚೀನ ದೇಶದ ಪ್ರವಾಸಿಯಾದ ಹುಯೆನ್ಸಾಂಗನು ಬರೆದ ಬಾದಾಮಿಯ ೨ನೆಯ ಪುಲಕೇಶಿಯ ವರ್ಣನೆಯನ್ನೂ ಅಬ್ದುಲರಜಕರು ಬರೆದ ವಿಜಯನಗರದ ವರ್ಣನೆಯನ್ನೂ ಓದಿದರೆ, ಕರ್ನಾಟಕದ ವೈಭವದ ಪರಿಚಯವಾಗುತ್ತದೆ.

ಎಂಟನೆಯ ಸಾಧನವೆಂದರೆ ‘ಪರಂಪರಾಗತವಾದ ಕಥೆಗಳು’.  ಸ್ಥಳ ಮಹಾತ್ಮೆಗಳು, ಆಚಾರಗಳು ಮತ್ತು ಧಾರ್ಮಿಕ ವಿಚಾರಗಳು, ಇವುಗಳು ಅತ್ಯಂತ ಮಹತ್ವವುಳ್ಳದ್ದು. ಪ್ರತಿಯೊಂದು ಪ್ರಸಿದ್ಧವಾದ ಸ್ಥಳಕ್ಕೆ 'ಸ್ಥಳ-ಪುರಾಣ' ವೊಂದು ಇದ್ದೇ ಇರುತ್ತದೆ.

(೫ನೆಯ ಶತಕದವರೆಗೆ )

ರಾಮಾಯಣ ಕಾಲದಲ್ಲಿ ನರ್ಮದೆಯ ದಕ್ಷಿಣಕ್ಕೆ ದಂಡಕಾರಣ್ಯವೆಂಬ ಮಹಾ ಕಾಂತಾರವಿತ್ತು. ಕರ್ನಾಟಕದಲ್ಲಿ ಆಗ ಬೆಳೆದ ಅಡವಿಗೆ ಮತಂಗವನವೆಂದು ಹೆಸರು, ಅದರಲ್ಲಿ, ಮತಂಗ, ಗಾಲವ, ಜಮದಗ್ನಿ ಮುಂತಾದ ಖುಷಿಗಳು ತಪಶ್ಚರ್ಯೆ ಮಾಡುತ್ತಿದ್ದರು. ಆದರೆ ಆ ಕಾಲದಲ್ಲಿ ಕೂಡ ಸುಗ್ರೀವನ ರಾಜಧಾನಿಯಾದ ಕಿಷ್ಕಿಂಧಾ ಪಟ್ಟಣವು ಭರಭರಾಟಿಯಲ್ಲಿ ಇತ್ತು. ಈಗಿನ ಹಂಪೆ ಅಥವಾ ಪಂಪಾಪಟ್ಟಣವೇ ಆ ಕಿಷ್ಕಿಂಧೆ. ಈಗಿನಂತೆ ಆಗಲೂ ಕೂಡ ಅದೊಂದು ಪವಿತ್ರ ಕ್ಷೇತ್ರವಾಗಿತ್ತು. ವಿಜಯನಗರವೆಂದರೂ ಇದೇ. ಕರ್ನಾಟಕ ವೈಭವದ ಸಮಾಧಿಯೂ ಇಲ್ಲಿಯೇ ಆಯಿತು. ಯಾಕೆಂದರೆ, ಕನ್ನಡನಾಡಿನ ಕೊನೆಯ ಅರಸರಾದ ವಿಜಯನಗರದ ರಾಜರು ಇದೇ ಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳಿದರು. ೧೫೬೫ರಲ್ಲಿ ತಾಳಿಕೋಟೆ ಕಾಳಗದಲ್ಲಿ ಅವರು ಸೋತುದರಿಂದ ಅವರ ವೈಭವವೆಲ್ಲವೂ ಮಣ್ಣು ಪಾಲಾಯಿತು. ಶಾಲಿವಾಹನ ಶಕದ ೧೨ನೆಯ ಶತಮಾನದಲ್ಲಿಯೂ, ಹಾನಗಲ್ಲಿಗೆ ‘ವಿರಾಟಕೋಟೆ’ಯೆಂಬ ಹೆಸರಿತ್ತೆಂದು ಆ ಕಾಲದ ಶಿಲಾಲಿಪಿಗಳಿಂದ ತಿಳಿಯುತ್ತದೆ. ಕೌರವ ಪಾಂಡವರ ಕಾಲದಲ್ಲಿ ಗೋಮಂತಕ, ಮತ್ಸ, ತ್ರಿಗರ್ತ ಈ ಮೂರು ರಾಷ್ಟ್ರಗಳೂ ಕರ್ನಾಟಕದಲ್ಲಿದ್ದವು ಎಂದು ತಿಳಿಯುತ್ತದೆ. ಆನಿಗೊಂದಿಯೆಂಬುದೇ ಮಹಾಭಾರತದಲ್ಲಿಯ ಉಪಪ್ಲಾವ್ಯ. ಮಹಾಭಾರತದ ಭೀಷ್ಮ ಪರ್ವದಲ್ಲಿ ಕರ್ನಾಟಕದ ಹೆಸರು ಬಂದಿದೆ.ಇಜಿಪ್ತ ದೇಶದಲ್ಲಿ 'ಟಾಲೆಮಿ' ಎಂಬೊಬ್ಬ ಗ್ರಂಥಕರ್ತನು ಕ್ರಿ.ಶ. ೧೫೦ನೆಯ ವರ್ಷದಲ್ಲಿ ಇದ್ದನು. ಅವನು ಆ ಕಾಲಕ್ಕೆ ವ್ಯಾಪಾರಕ್ಕೋಸ್ಕರ ಹಿಂದುಸ್ಥಾನದ ಪಶ್ಚಿಮ ಸಮುದ್ರ ತೀರಕ್ಕೆ ಬರುತ್ತಿದ್ದ ವರ್ತಕರನ್ನು ಕೇಳಿ ‘ಆರ್ಯಕ’ ಎಂಬ ದೇಶದೊಳಗಿನ ೨೫ ಗ್ರಾಮಗಳ ಹೆಸರನ್ನು ಬರೆದಿಟ್ಟಿದ್ದಾನೆ, ಅವು ಯಾವುವೆಂದರೆ- ಬದಯಾಮೇಯಿ, ಇಂಡಿ, ಕಲ್ಲಿಗೇರಿ, ಮೋದೂಗಲ್ಲ, ಪೆತರ್ಗಲ, ಇವು ಕ್ರಮವಾಗಿ ಬಾದಾಮಿ, ಇಂಡೀ, ಕಲಕೇರಿ, ಮುದಗಲ್ಲ ಮತ್ತು ಪಟ್ಟದಕಲ್ಲು. ಬನವಾಸಿಯ ಹೆಸರೂ ಹೊನ್ನಾವರ ಮತ್ತು ಮಿರ್ಜಾನ್ ಬಂದರಗಳ ಹೆಸರೂ ಅದರಲ್ಲಿ ಉಕ್ತವಾಗಿದೆ. ಎರಡನೆಯ ಶತಮಾನದಲ್ಲಿ ಬರೆದ ಅಹನಾನೂರ ಎಂಬ ತಮಿಳು ಗ್ರಂಥದಲ್ಲಿ ಎರುಮೈ ನಾಡಿನ ಎಂದರೆ ಮಹಿಷ ಮಂಡಲ (ಮೈಸೂರ) ದೇಶದ ಅರಸನು ಪಾಂಡ್ಯ ರಾಜನೊಡನೆ ಯುದ್ದವಾಡಿದಂತೆ ಉಲ್ಲೇಖವಿದೆ.  

ಮೌರ್ಯವಂಶದ ಚಂದ್ರಗುಪ್ತನು ಚಾಣಕ್ಯನೆಂಬವನ ಸಹಾಯದಿಂದ ರಾಜ್ಯ ಪದವನ್ನು ಪಡೆದು ಕ್ರಿ.ಪೂ. ೩೨೧ ಕ್ರಿ.ಪೂ. ೧೮೪ರವರೆಗೆ ಆಳಿತು, ಚಂದ್ರಗುಪ್ತನ ಮೊಮ್ಮಗನೇ ಅಶೋಕನು. ಅವನು ಕ್ರಿ. ಪೂರ್ವದಲ್ಲಿ ೨೭೩ರಿಂದ ೨೩೨ರ ವರೆಗೆ ಅಂದರೆ ೪೧ ವರ್ಷ ಆಳಿದನು. ಇವನ ಕಾಲಕ್ಕೆ ರಾಜ್ಯ ವಿಸ್ತಾರವು ಅತಿಶಯ ದೊಡ್ಡದಾಗಿತ್ತು, ಉತ್ತರ ಹಿಂದುಸ್ಥಾನವೆಲ್ಲಾ ಇವನ ವಶದಲ್ಲಿ ಇದ್ದುದಲ್ಲದೆ ಪಶ್ಚಿಮಕ್ಕೆ ಅಫಗಾನಿಸ್ಥಾನವೂ ಇವನ ಆಧೀನದಲ್ಲಿಯೇ ಇತ್ತು, ದಕ್ಷಿಣದಲ್ಲಿ ಮೈಸೂರ ಪ್ರಾಂತದವರೆಗೆ ಇವನ ರಾಜ್ಯವು ಹಬ್ಬಿತ್ತು, ಈ ಹೆಸರಾದ ಅಶೋಕನ ವಂಶದವನಾದ ಬೃಹದ್ರಥನನ್ನು ಕೊಂದು, ಪುಷ್ಯಮಿತ್ರನೆಂಬ ಅವನ ಬ್ರಾಹ್ಮಣ ಸೇನಾಪತಿಯು 'ಸುಂಗ'ವಂಶವನ್ನು ಸ್ಥಾಪಿಸಿದನು, ಈ ವಂಶವು ಕ್ರಿ.ಪೂ.ದ ೧೮೪ ರಿಂದ ೭೨ರ ವರೆಗೆ ಆಳಿತು. ಆ ಮೇಲೆ ಆಂದ್ರರೆಂಬ ತೆಂಕಣಿಗರು ಅಲ್ಲಿ ಅಳುತ್ತಿದ್ದರು. ಕ್ರಿ.ಶ. ೩ ನೆಯ ಶತಮಾನದ ನಂತರ ಇವರ ಉಲ್ಲೇಖವಿಲ್ಲ. ಈ ಅವಧಿಯಲ್ಲಿಯೇ ಪೇಶಾವರದಲ್ಲಿ ಕಾನಿಷ್ಕನೆಂಬ ಅರಸನು ಕ್ರಿ.ಶ. ೧೨೩ ರವರೆಗೆ ಆಳಿದನು. ಮುಂದೆ ಉತ್ತರದಲ್ಲಿ ಚಂದ್ರಗುಪ್ತನೆಂಬುವನು ೩೨೦ ನೆಯ ಇಸ್ವಿಯಲ್ಲಿ ಗುಪ್ತ ವಂಶವನ್ನು ಸ್ಥಾಪಿಸಿದನು. ಈ ಗುಪ್ತ ವಂಶದ ಸಮುದ್ರ ಗುಪ್ತನು ಅತ್ಯಂತ ಪರಾಕ್ರಮಿ. ಇವನನ್ನು ಹಿಂದುಸ್ಥಾನದ ನೇಪೋಲಿಯನ್ನನೆಂದು ಹೇಳುತ್ತಾರೆ. ಅವನು ೩೭೫ ರಲ್ಲಿ ಮರಣ ಹೊಂದಿದನು. ಈ ಗುಪ್ತ ವಂಶವು ಉತ್ತರದಲ್ಲಿ ೪೮೦ ನೆಯ ಇಸ್ವಿಯ ವರೆಗೆ ಪ್ರಬಲವಾಗಿತ್ತು. ಈ ಗುಪ್ತ ವಂಶವು ಪರದೇಶಿಯ ಹೂಣರಿಂದ ಹಾಳಾಯಿತು. ಮುಂದೆ ಉತ್ತರದಲ್ಲಿ ಸಾರ್ವಭೌಮನಾದ ಅರಸನೆಂದರೆ ಕನೋಜದ ಶೀಲಾದಿತ್ಯ ಹರ್ಷವರ್ಧನನೇ. ಇವನು ಕ್ರಿ.ಶ. ೬೦೬ ರಿಂದ ೬೪೭ರವರೆಗೆ ಆಳಿದನು. ಅವನನ್ನು ಕರ್ನಾಟಕದ ೨ನೆಯ ಪುಲಿಕೇಶಿಯು ಸೋಲಿಸಿದನು.

ಅಶೋಕನ ಕಾಲದಲ್ಲಿ ಕರ್ನಾಟಕ ದೇಶವು ಅವನ ಅಧೀನದಲ್ಲಿತ್ತೆಂಬುದನ್ನು ಇಲ್ಲಿ ದೊರೆಯುವ ಅವನ ಶಿಲಾಶಾಸನಗಳೇ ಹೇಳುತ್ತವೆ. ಆ ಶಾಸನಗಳು ಮೊಳಕಾಲ್ಮುರು ತಾಲುಕಿನಲ್ಲಿಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಂಗರಾಮೇಶ್ವರ ಗುಡ್ಡಗಳಲ್ಲಿ ಮತ್ತು ರಾಯಚೂರ ಜಿಲ್ಲೆಯ ಲಿಂಗಸೂರ ತಾಲುಕಿನ ‘ಮಸ್ತಿ’ ಎಂಬಲ್ಲಿಯೂ ದೊರೆತಿರುತ್ತವೆ. ಅಶೋಕನ ಕಾಲಕ್ಕೆ ಬನವಾಸಿಯಲ್ಲಿ ಕದಂಬ ಅರಸರಿದ್ದರು. ಅಶೋಕನು (ಕ್ರಿ. ಪೂ, ೨೩೧) ರಕ್ಷಿತನೆಂಬ ಧರ್ಮೋಪದೇಶಕನನ್ನು ಬನವಾಸಿಗೂ ಮಹಾದೇವನೆಂಬುವನನ್ನು ಮಹಿಷಮಂಡಲಕ್ಕೂ ಕಳುಹಿಸಿರುವುದಾಗಿ ಆಧಾರವು ದೊರೆಯುತ್ತದೆ. ನಾಲ್ಕನೆಯ ಶತಮಾನದಲ್ಲಿ, ಗುಪ್ತ ವಂಶದ ಸಮುದ್ರಗುಪ್ತನೆಂಬುವನು ಹಿಂದುಸ್ಥಾನವನ್ನೆಲ್ಲ ಪಾದಾಕ್ರಾಂತ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ದಕ್ಷಿಣಕ್ಕೆ ಕಂಚಿಯವರೆಗೆ ಹೋಗಿ ಕರ್ನಾಟಕದೊಳಗಿನ ೧೧ ರಾಜ್ಯಗಳಲ್ಲಿ ಹಾಯ್ದು ಉತ್ತರಕ್ಕೆ ತೆರಳಿದನು. ಸಮುದ್ರಗುಪ್ತನ ತರುವಾಯ ಕರ್ನಾಟಕಕ್ಕೆ ಸಂಬಂಧಪಟ್ಟ ಉತ್ತರದ ಸಾರ್ವಭೌಮ ರಾಜನೆಂದರೆ ಹರ್ಷವರ್ಧನನೇ. ಕರ್ನಾಟಕದ ಪ್ರಖ್ಯಾತ ರಾಜನಾದ ೨ನೆಯ ಪ್ರಲಕೇಶಿಯು ಕ್ರಿ.ಶ. ೬೩೪ರಲ್ಲಿ ಸೋಲಿಸಿದ ಹರ್ಷವರ್ಧನನೇ ಇವನು.  

ಕ್ರಿ.ಶ.ದ ಪ್ರಾರಂಭಕ್ಕೆ ಈ ದಕ್ಷಿಣಾ ಪಥದ ಕೆಲವು ಭಾಗದಲ್ಲಿ ಆಂಧ್ರಭೃತ್ಯರು ಆಳುತ್ತಿದ್ದರು. ಇವರ ರಾಜ್ಯವು ಕೃಷ್ಣಾ ಮತ್ತು ಗೋವಾವರೀ ನದಿಗಳ ಮುಖದವರೆಗೆ ಹಬ್ಬಿತ್ತು. ರಾಷ್ಟ್ರಕೂಟ, ಪಲ್ಲವ, ಗಂಗ, ಬಾಣ, ಕದಂಬ ಮುಂತಾದ ಚಿಕ್ಕ ಚಿಕ್ಕ ರಾಜ್ಯಗಳು ಆಗ ಈ ದೇಶದಲ್ಲಿ ಆಳುತ್ತಿದ್ದಂತೆ ತೋರುತ್ತದೆ. ಆಂಧ್ರಭೃತ್ಯರು ಕ್ರಿ.ಶ. ೨೨೫ರವರೆಗೆ ಆಳಿದರು. ಮುಂದೆ ಸುಮಾರು ೧೦೦ ವರ್ಷಗಳ ಇತಿಹಾಸವು ಚೆನ್ನಾಗಿ ಗೊತ್ತಾಗಿರುವುದಿಲ್ಲ. ಆಗ ಕ್ಷತ್ರಪರೆಂಬ ಪರದೇಶಸ್ಥರು ಪ್ರಬಲವಾದಂತೆ ತೋರುತ್ತದೆ, ಮುಂದೆ ೫ನೆಯ ಶತಮಾನದಲ್ಲಿ ಚಾಲುಕ್ಯರು ತಲೆಯೆತ್ತಿದರು. ಈ ಚಾಲುಕ್ಯರು ಮುಂದೆ ಇಡೀ ಕರ್ನಾಟಕವನ್ನೆಲ್ಲ ತಮ್ಮ ಸ್ವಾಧೀನಕ್ಕೆ ತೆಗೆದು ಕೊಂಡದ್ದರಿಂದ ಕರ್ನಾಟಕದ ವೈಭವದ ಇತಿಹಾಸವು ಅಲ್ಲಿಂದ ಪ್ರಾರಂಭವಾಗುತ್ತದೆ.

ಕದಂಬರ ಮೂಲ ಪುರುಷನು ಮಯೂರಶರ್ಮನು. ಇವನು ಸೊರಬ ತಾಲುಕ ಸ್ಥಾನಗುಂಡೂರ ಅಥವಾ ತಾಳಗುಂದ ಎಂಬಲ್ಲಿಯ ಬ್ರಾಹ್ಮಣನು. ಇವನು ಕಂಚಿಗೆ ವೇದಾಧ್ಯಯನಕ್ಕಾಗಿ ಹೋದಾಗ ಅಲ್ಲಿಯ ಪಲ್ಲವ ಅರಸನಿಂದ ಅವಮಾನಿತನಾದುದರಿಂದ ಕ್ಷತ್ರಿಯ ಧರ್ಮವನ್ನು ಸ್ವೀಕರಿಸಿ ಬನವಾಸಿಯಲ್ಲಿ ಕದಂಬರಾಜ್ಯವನ್ನು ಸ್ಥಾಪಿಸಿದನು. ಈ ಕದಂಬರು ೩ ನೆಯ ಶತಮಾನದಿಂದ ೬ನೆಯ ಶತಮಾನದವರೆಗೆ ಸ್ವತಂತ್ರವಾಗಿ ಆಳಿದರು. ಈ ವಂಶದಲ್ಲಿ ಕಾಕುಸ್ಥವರ್ಮ, ಕೃಷ್ಣವರ್ಮ ಮುಂತಾದ ಅರಸರು ಪ್ರಬಲರಾಗಿದ್ದರು. ಮುಂದೆ ಚಾಲುಕ್ಯರು ೬ನೆಯ ಶತಮಾನದಲ್ಲಿ ಇವರ ಸ್ವಾತಂತ್ರಹರಣ ಮಾಡಿದರು.

ಗಂಗರು ಮೈಸೂರಿನಲ್ಲಿ ೨ನೆಯ ಶತಮಾನದಿಂದ ೧೧ನೆಯ ಶತಮಾನದವರೆಗೆ ಆಳಿದರು. ಅವರ ರಾಜ್ಯಕ್ಕೆ ಗಂಗವಾಡಿ ಎಂದು ಹೆಸರು. ಕೋಲಾರ, ತಳಕಾಡುಗಳೇ ಅವರ ರಾಜಧಾನಿಗಳು, ಮಾಧವ ಅಥವಾ ಕೊಂಗುಣಿವರ್ಮನು ಇವರ ಮೂಲಪುರುಷನು. ಈ ವಂಶದಲ್ಲಿ ಹರಿವರ್ಮ, ಅವನೀತ, ದುರ್ವಿನೀತ, ಶಿವಮಾರ, ಶ್ರೀ ಪುರುಷ ಮುಂತಾದ ಅರಸರು ಪ್ರಬಲರಾಗಿದ್ದರು. ಅವರಲ್ಲಿ ಶ್ರೀ ಪುರುಷನೇ ಶ್ರೇಷ್ಠನು (೭೨೬-೭೭೬). ಈ ವಂಶದಲ್ಲಿ ಅನೇಕ ಅರಸರು ಗ್ರಂಥಕರ್ತರಾಗಿದ್ದರು. ರಾಚಮಲ್ಲನೆಂಬ ಈ ವಂಶದ ಅರಸನ ಕಾಲದಲ್ಲಿ ಅವನ ಮಂತ್ರಿಯಾದ ಚಾಮುಂಡರಾಯನು ಶ್ರವಣಬೆಳಗುಳದ ಅತ್ಯಂತ ಭವ್ಯವಾದ ಗೋಮಟೇಶ್ವರ ಜೈನಮೂರ್ತಿಯನ್ನು ೯೮೩ ರಲ್ಲಿ ಸ್ಥಾಪಿಸಿದನು. ಗಂಗರು ನಡುನಡುವೆ ಚಾಲುಕ್ಯ ರಾಷ್ಟ್ರಕೂಟರಿಗೆ ಮಾಂಡಲಿಕರಾಗಿದ್ದರು. ಮುಂದೆ ಈ ರಾಜ್ಯವು ಚೋಳ ರಾಜ್ಯದಲ್ಲಿ ಲೀನವಾಯಿತು.

ಚಾಲುಕ್ಯರೇ ಇಡೀ ಕರ್ನಾಟಕಕ್ಕೆ ಸಾರ್ವಭೌಮರಾಗಿ ಮೊದಲು ಆಳಿದ ಅರಸರು, ಈ ವಂಶದ ೯ ಜನ ಅರಸರು ಬಾದಾಮಿಯಲ್ಲಿ ಬಹು ವೈಭವದಿಂದ ಸುಮಾರು ೨೦೦ ವರ್ಷಗಳವರೆಗೆ ಆಳಿದರು. ಹಾರೀತ ಖುಷಿಯು ದೇವತೆಗಳಿಗೆ ಅರ್ಘ್ಯೋದಕವನ್ನು ಕೊಡುವಾಗ, ಅವನ ಬೊಗಸೆಯೊಳಗಿಂದ ಒಬ್ಬ ವೀರಪುರುಷನು ಹುಟ್ಟಿದನಂತೆ. ಚಾಲುಕ್ಯರು ತಾವು ಆ ವೀರ ಪುರುಷನ ವಂಶಜರೆಂದು ಹೇಳಿಕೊಳ್ಳುತ್ತಾರೆ. ಆದುದರಿಂದ ಇವರಿಗೆ 'ಆಹಾರೀತ ಪುತ್ರ'ರೆಂದೆನ್ನುತ್ತಾರೆ. ಇವರ ಗೋತ್ರ ಮಾನವ್ಯ: ಕುಲದೇವತೆ ವಿಷ್ಣು ; ವಂಶ ಚಂದ್ರವಂಶ. ಇವರು ಮೊದಲು ಉತ್ತರದವರು. ನರ್ಮದೆಯನ್ನು ದಾಟಿ ಮೊದಲು ಬಂದವನು ಜಯಸಿಂಹನು. ಇವನು ರಾಷ್ಟ್ರಕೂಟರ ಅರಸನಾದ ಇಂದ್ರನನ್ನು ಸೋಲಿಸಿ, ಮುಂದೆ ದಕ್ಷಿಣಕ್ಕೆ ಸಾಗಿ, ಕಂಚಿಯಲ್ಲಿರುವ ಪಲ್ಲವ ವಂಶದ ತ್ರಿಲೋಚನ ಪಲ್ಲವನೊಡನೆ ಕಾದಿದನು. ಆದರೆ ಆ ಯುದ್ಧದಲ್ಲಿ ತಾನೇ ಮಡಿದನು, ಆಗ, ಗರ್ಭಿಣಿಯಾಗಿದ್ದ ಅವನ ಹೆಂಡತಿಯು ವಿಷ್ಣು ಸೋಮಯಾಜಿಯೆಂಬ ಒಬ್ಬ ಬ್ರಾಹ್ಮಣನನ್ನು ಆಶ್ರಯಿಸಿದಳು. ಅಲ್ಲಿ ಅವಳಿಗೆ ರಾಜಸಿಂಹನೆಂಬ ಮಗನು ಹುಟ್ಟಿದನು. ಅವನು ದೊಡ್ಡವನಾದ ಬಳಿಕ ಪಲ್ಲವರೊಡನೆ ಕಾದಿ, ಅವರನ್ನು ಸೋಲಿಸಿ, ಆ ವಂಶದ ರಾಜಪುತ್ರಿಯನ್ನು ಮದುವೆಯಾದನು. ಇವನ ಮಗನಾದ ಪುಲಿಕೇಶಿಯೇ ಈ ಚಾಲುಕ್ಯ ವಂಶದ ಮೊದಲನೆಯ ಪ್ರಖ್ಯಾತ ರಾಜನು, ಇವನ ರಾಜಧಾನಿಯು ಮೊದಲು 'ಇಂದುಕಾಂತ' ಅಥವಾ ಅಜಂತೆಯಲ್ಲಿದ್ದಿತು. ಮುಂದೆ ಈ ಪುಲಿಕೇಶಿಯು ಪಲ್ಲವರನ್ನು ಸೋಲಿಸಿ ವಾತಾಪಿ, ಅಥವಾ ಬಾದಾಮಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.

ಇವನು ಸಾರ್ವಭೌಮತ್ವ ಸೂಚಕವಾದ ಅಶ್ವಮೇಧ ಯಜ್ಞವನ್ನು ಮಾಡಿ ದಿಗಂತ ಕೀರ್ತಿಯನ್ನು ಪಡೆದನು. ಇವನ ಮಗನಾದ ಮಂಗಳೇಶನು (೫೯೭-೬೦೮) ಬಾದಾಮಿಯಲ್ಲಿಯ ಎಲ್ಲಕ್ಕೂ ದೊಡ್ಡದಾದ ಮೂರನೆಯ ವೈಷ್ಣವ ಗವಿಯನ್ನು ಕೊರೆಯಿಸಿದನು. ಇವನ ತರುವಾಯ ೨ನೆಯ ಪುಲಿಕೇಶಿಯು ಪಟ್ಟವೇರಿದನು (೬೦೯-೬೪೨). ಇವನು ಕರ್ನಾಟಕದ ಗಂಗ, ಕದಂಬ, ಪಲ್ಲವ ಮುಂತಾದ ಅರಸರನ್ನು ಗೆದ್ದುದಲ್ಲದೆ, ಕರ್ನಾಟಕವನ್ನು ದಾಟಿ ಹೋಗಿ, ಉತ್ತರದಲ್ಲಿ ಆಳುತ್ತಿದ್ದ ಕೋಸಲ, ಕಲಿಂಗ, ಮೌರ್ಯ ಮುಂತಾದ ಅರಸರನ್ನೂ, ದಕ್ಷಿಣದಲ್ಲಿಯ ಪಾಂಡ್ಯ, ಚೋಳ, ಕೇರಳ ಮೊದಲಾದ ಅರಸರನ್ನೂ ಪಾದಾಕ್ರಾಂತರನ್ನಾಗಿ ಮಾಡಿದನು. ನೂರು ಹಡಗುಗಳುಳ್ಳ ಪಡೆಯೊಂದಿಗೆ ಪಶ್ಚಿಮ ಸಮುದ್ರದಲ್ಲಿ ಸೈನ್ಯವನ್ನು ಸಾಗಿಸಿ, ಉತ್ತರಕ್ಕೆ ಮುಂಬಯಿ ಹತ್ತರ ಇರುವ 'ಪರಿ' ಎಂಬ ಪಟ್ಟಣವನ್ನು ತೆಗೆದುಕೊಂಡನು. ಈ ಪುಲಿಕೇಶಿಯು ಮಾಡಿದ ಎಲ್ಲಕ್ಕೂ ಮಹತ್ವದ ಕಾರ್ಯವೆಂದರೆ, ಉತ್ತರ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವರ್ತಿಯಾಗಿದ್ದ ಕನೋಜದ ಅರಸನಾದ 'ಹರ್ಷವರ್ಧನ' ನನ್ನು ನರ್ಮದೆಯ ದಂಡೆಯ ಮೇಲೆ ಸಂಪೂರ್ಣವಾಗಿ ಸೋಲಿಸಿದುದೇ. ಆಗ ಇವನು 'ಪರಮೇಶ್ವರ' ಎಂಬ ಬಿರುದನ್ನು ಧರಿಸಿ, ಅಶ್ವಮೇಧ ಯಾಗವನ್ನು ಮಾಡಿದನು. ಅಂದಿನಿಂದ ಉತ್ತರ ಹಿಂದುಸ್ಥಾನದ ಇತಿಹಾಸವು ಮುಗ್ಗಿತು. ಕರ್ನಾಟಕದ ಇತಿಹಾಸಕ್ಕೆ ಕಳೆಯೇರುತ್ತ ಹೋಯಿತು. ಇವನ ರಾಜ್ಯ ವಿಸ್ತಾರವು ನರ್ಮದೆಯಿಂದ ದಕ್ಷಿಣಕ್ಕೆ ಇಡೀ ದಕ್ಷಿಣಾ ಪಥವನ್ನೇ ಆಕ್ರಮಿಸಿತ್ತು, ಪೂರ್ವ, ಪಶ್ಚಿಮ, ದಕ್ಷಿಣ ಸಮುದ್ರದ ನಡುವಿನ ನಾಡೆಲ್ಲವೂ ಇವನ ಕೈ ಸೇರಿತ್ತು. ಹ್ಯುವೆನ್ತ್ಸಂಗ್ ಎಂಬ ಚೀನ ದೇಶದ ಪ್ರವಾಸಿಯು ೬೩೯ ನೆಯ ಇಸ್ವಿಯ ಸುಮಾರಿಗೆ ಈ ಪುಲಿಕೇಶಿಯ ರಾಜ್ಯದೊಳಗೆ ಸಂಚಾರ ಮಾಡಿದನು. ಅವನು ಕರ್ನಾಟಕವನ್ನೂ, ಪುಲಿಕೇಶಿಯ ಆಗಿನ ಪ್ರಜೆಗಳನ್ನೂ, ಅವರ ನಡೆ ನುಡಿಗಳನ್ನೂ ಅತ್ಯಂತ ಸುಂದರವಾಗಿ ವರ್ಣಿಸಿದ್ದಾನೆ.

ಪುಲಿಕೇಶಿಯ ವರ್ಚಸ್ಸು ಇರಾಣ ಮುಂತಾದ ಪರರಾಷ್ಟ್ರಗಳ ಮೇಲೆಯೂ ಇತ್ತು. ಆರಬೀ ಭಾಷೆಯ ಒಂದು ಪುಸ್ತಕದಲ್ಲಿ ಈತನು ಇರಾಣದ ಅರಸನಾದ 'ಖುಸ್ತು'ವಿನ ಕಡೆಗೆ ತನ್ನ ರಾಯಭಾರಿಯನ್ನು ಕಳುಹಿಸಿದ್ದನೆಂದು ಉಲ್ಲೇಖವಿದೆ. ಮೇಲಾಗಿ, ಇರಾಣದ ರಾಯಭಾರಿಗಳು ಇವನ ಒಡ್ಡೋಲಗಕ್ಕೆ ಬಂದಿದ್ದರೆಂಬುದು 'ಅಜಂತೆ' ಯಲ್ಲಿಯ ಗವಿಯೊಳಗಿನ ಒಂದು ಚಿತ್ರದಿಂದ ಗೊತ್ತಾಗುತ್ತದೆ. ಇವನ ಕಾಲದಲ್ಲಿ ಇವನ ಹಿರೆಯ ಸೊಸೆಯಾದ ವಿಜಯಭಟ್ಟಾರಿಕಾ ಎಂಬವಳು ಸಾವಂತವಾಡಿಯನ್ನಾಳಿದಳು. ಪುಲಿಕೇಶಿಯ ಮಗನ ಆಳ್ವಿಕೆಯಲ್ಲಿ ದಕ್ಷಿಣ ಗುಜರಾಥದಲ್ಲಿ ಚಾಲುಕ್ಯರದೊಂದು ಶಾಖೆಯು ಸ್ಥಾಪಿಸಲ್ಪಟ್ಟಿತು. ಈ ಮಹಾಪುಲಿಕೇಶಿಯಿಂದ ನಾಲ್ಕನೆಯ ತಲೆಯವನಾದ ೨ನೆಯ ವಿಕ್ರಮಾದಿತ್ಯನು ತನ್ನ ವಂಶಕ್ಕೆ ಪೂರ್ವದಿಂದಲೂ ಶತ್ರುಗಳಾದ ಪಲ್ಲವರೊಡನೆ ಹೋರಾಡಿ, ಮಾಣಿಕ್ಯದ ರಾಶಿಯನ್ನೂ, ಗಜ-ತುರಗಗಳನ್ನೂ, ಯಥೇಚ್ಚವಾಗಿ ತೆಗೆದುಕೊಂಡು ಅವರ ರಾಜಧಾನಿಯಾದ ಕಂಚಿಯನ್ನು ಹೊಕ್ಕನು.  ಆದರೆ ಈ ವಿಕ್ರಮಾದಿತ್ಯನು ಮಿಕ್ಕವರಂತೆ, ಆ ಪಟ್ಟಣವನ್ನು ಹಾಳುಮಾಡದೆ, ದೇವ ಬ್ರಾಹ್ಮಣರಿಗೂ ಬಡಬಗ್ಗರಿಗೂ ಅನೇಕ ದಾನ ಮುಂತಾದವುಗಳನ್ನು ಮಾಡಿ, ಅಲ್ಲಿಯ ರಾಜಸಿಂಹೇಶ್ವರ ಮುಂತಾದ ದೇವಾಲಯಗಳನ್ನು ಉದ್ಧರಿಸಿದನು. ಇವನ ಹೆಂಡತಿಯಾದ ಲೋಕಮಹಾದೇವಿಯು ಈತನ ಈ ಜಯದ ಸೂಚನಾರ್ಥವಾಗಿ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷನ ಅತಿ ವಿಸ್ತಾರವಾದ ದೇವಾಲಯವನ್ನು (೬೫೬ಶಕ) ಕಟ್ಟಿಸಿದಳು. ಇವಳು ಆ ಕಾಲದಲ್ಲಿ 'ಕಿಸುವೊಳಲ್' ಎಂದರೆ ಪಟ್ಟದಕಲ್ಲಿನಲ್ಲಿ ಆಳುತ್ತಿದ್ದಳು. ಆದರೆ, ಇವನ ಮಗನ ಕಾಲಕ್ಕೆ, ರಾಷ್ಟ್ರಕೂಟದ ಅರಸನಾದ ದಂತಿದುರ್ಗನೆಂಬವನು ಇವನ ರಾಜ್ಯವನ್ನು ಸೆಳೆದುಕೊಂಡು, ರಾಷ್ಟ್ರಕೂಟವಂಶವನ್ನು ಸ್ಥಾಪಿಸಿದನು.

ದಂತಿದುರ್ಗನ ತರುವಾಯ, ಕೃಷ್ಣರಾಜ ಅಥವಾ ಶುಭತುಂಗನು (೭೬೦-೭೭೦) ಪಟ್ಟವನ್ನೇರಿ, ಚಾಲುಕ್ಯರನ್ನು ಪುನಃ ಸಂಪೂರ್ಣವಾಗಿ ಸೋಲಿಸಿ, ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ದೃಢವಾಗಿ ನಿಲ್ಲಿಸಿದನು. ಜಗತ್ತಿನೊಳಗಿನ ಪ್ರವಾಸಿಕರೆಲ್ಲರನ್ನು ಅತಿಶಯವಾಗಿ ಬೆರಗುಗೊಳಿಸುವಂಥ ವೇರೂಳಿನಲ್ಲಿಯ ಅತ್ಯದ್ಭುತವಾದ 'ಕೈಲಾಸ'ವೆಂಬ ಅಖಂಡವಾದ ಕಲ್ಲಿನ ಗುಡಿಯನ್ನು ನಿರ್ಮಿಸಿದನು. ಇವನ ತರುವಾಯದಲ್ಲಿ ಧ್ರುವನು ಹೆಸರುವಾಸಿಯಾದ ಅರಸನು. ಇವನಿಗೆ 'ನಿರುಪಮ', 'ಕಲಿವಲ್ಲಭ' ಎಂದೂ ಹೆಸರುಗಳಿದ್ದುವು. ಇವನು ಪಲ್ಲವರನ್ನೂ ಗಂಗರನ್ನೂ ಗೆದ್ದು ಅವರಿಂದ ಕಪ್ಪವನ್ನು ತೆಗೆದುಕೊಂಡದ್ದಲ್ಲದೆ ಉತ್ತರದಲ್ಲಿ ಅಲ್ಲಾಬಾದದ ಹತ್ತರವಿರುವ ಕೌಸಾಂಬಿಯಲ್ಲಿ ಆಳುತ್ತಿದ್ದ ವತ್ಸ ಅರಸನ ಮೇಲೆ ದಂಡೆತ್ತಿ ಹೋಗಿ, ಅವನನ್ನು ಕಾಡಿಗೆ ಅಟ್ಟಿ ಅವನಿಂದ ರಾಜ ಛತ್ರಗಳನ್ನು ಕಸಿದುಕೊಂಡನು.

ಮೂರನೆಯ ಗೋವಿಂದನು ರಾಷ್ಟ್ರಕೂಟ ಅರಸರೊಳಗೆ ಅತ್ಯಂತವಾಗಿ ಶೂರನಾದ ಅರಸನು. ಈತನ ಕಾಲಕ್ಕೆ ರಾಷ್ಟ್ರಕೂಟರ ರಾಜ್ಯ ವಿಸ್ತಾರವು ಉತ್ತರದಲ್ಲಿ ಮಾಳವಾದೇಶದಿಂದ ದಕ್ಷಿಣಕ್ಕೆ ಕಂಚಿಯವರೆಗೆ ಹಬ್ಬಿತ್ತು. ನರ್ಮದೆಯಿಂದ ತುಂಗಭದ್ರೆಯವರೆಗಿನ ಪೂರ್ವ ಪಶ್ಚಿಮ ಸಮುದ್ರಗಳ ನಡುವಿನ ಪ್ರದೇಶ ಈತನ ಆಧೀನದಲ್ಲಿಯೇ ಇತ್ತು. ಮಿಕ್ಕ ಪ್ರದೇಶದಲ್ಲಿ ಈತನ ವರ್ಚಸ್ಸು ನಡೆಯುತ್ತಿತ್ತು.

ಗೋವಿಂದನ ಮಗನೇ ಕನ್ನಡಿಗರೆಲ್ಲರಿಗೂ ಪರಿಚಿತನಾದ ಅಮೋಘು ವರ್ಷ ಅಥವಾ ನೃಪತುಂಗ. ಉಪಲಬ್ಧವಿರುವ ಕನ್ನಡ ಗ್ರಂಥಗಳಲ್ಲಿ ಎಲ್ಲಕ್ಕೂ ಹಳೆಯದಾದ 'ಕವಿರಾಜಮಾರ್ಗ' ಎಂಬ ಪ್ರಖ್ಯಾತ ಗ್ರಂಥದ ಕರ್ತನು ಈತನೇ. ಈ ಅಮೋಘವರ್ಷನು ಮಳಖೇಡದಲ್ಲಿ ಕರ್ನಾಟಕ ಸಿಂಹಾಸನದ ಮೇಲೆ ಒಟ್ಟಿಗೆ ೬೩ ವರ್ಷಗಳ ವರೆಗೆ ಕುಳಿತು ಅತ್ಯಂತ ವೈಭವದಿಂದ ರಾಜ್ಯವಾಳಿದನು.

ಮುಂದೆ ಚಾಲುಕ್ಯರು ಪ್ರಬಲರಾಗಿ, ಅವರಲ್ಲಿ ತೈಲಪನೆಂಬವನು ರಾಷ್ಟ್ರಕೂಟವಂಶದ ಅರಸನಾದ ಕರ್ಕನೆಂಬವನನ್ನು ಸಂಪೂರ್ಣವಾಗಿ ಸೋಲಿಸಿ, ಪುನಃ ಚಾಲುಕ್ಯ ವಂಶವನ್ನು ಸ್ಥಾಪಿಸಿದನು (೯೭೨). ಈ ಮೇರೆಗೆ ನೃಪತುಂಗ ಅಥವಾ ಅಮೋಘವರ್ಷನ ತರುವಾಯ ಸುಮಾರು ನೂರು ವರ್ಷಗಳಲ್ಲಿಯೇ ಈ ವಂಶವು ಲಯ ಹೊಂದಿತು.

ಕಲ್ಯಾಣಚಾಲುಕ್ಯರ ಕಾಲದಲ್ಲಿ ಕನ್ನಡಿಗರ ಕೀರ್ತಿಯು ದಶದಿಕ್ಕುಗಳಲ್ಲಿ ಹಬ್ಬಿತು. ಕನ್ನಡಿಗರ ಧ್ವಜಪತಾಕೆಯು ಈಶಾನ್ಯಕ್ಕೆ ಅಸಾಮ ಪ್ರಾಂತದಲ್ಲಿ ಊರಲ್ಪಟ್ಟಿತು, ಕರ್ನಾಟಕ ಅರಸರು ಅನೇಕ ಕವಿ ಪುಂಗವರಿಗೂ ವಿದ್ವಜ್ಜನರಿಗೂ ಆಶ್ರಯದಾತರಾದರು. ಈ ಚಾಲುಕ್ಯ ವಂಶದ ಮೂಲಪುರುಷನು ತೈಲಪನು. ಇವನು ಚೋಳ ಅರಸನನ್ನೂ ಚೇದಿ (ಬುಂದೇಲಖಂಡ) ಅರಸನನ್ನೂ ಗೆದ್ದನು. ಈ ತೈಲಪನು ಗುಜರಾಥ ಚಾಲುಕ್ಯ ವಂಶದ ಮೂಲಪುರುಷನಾದ ಮೂಲರಾಜನ ಮೇಲೆ ಬಾರಪ್ಪ ನೆಂಬವನನ್ನು ಕಳಿಸಿದನು. ಆತನು ಮೂಲರಾಜನನ್ನು ಸೋಲಿಸಿದನು. ಆ ಮೇಲೆ ತೈಲಪನು ಮಾಳವದೇಶದ ಮೇಲೆ ದಾಳಿಯಿಟ್ಟನು. ಭಾರತೀಯರಿಗೆಲ್ಲರಿಗೂ ಅತಿ ಪರಿಚಿತನಾದ ಪ್ರಸಿದ್ದ ಭೋಜರಾಜನ ಚಿಕ್ಕಪ್ಪನಾದ ಮುಂಜನೆಂಬವನೇ ಆಗ ಮಾಳವಾಧಿಪತಿಯಾಗಿದ್ದನು. ಈ ಮುಂಜನು ದೊಡ್ಡ ಸೈನ್ಯದೊಂದಿಗೆ ಗೋದಾವರಿಯನ್ನು ದಾಟಿ ಬಂದು ತೈಲಪನನ್ನು ಕೆಣಕಿದನು. ಆದರೆ ತೈಲಪನು ಅವನನ್ನು ಸೋಲಿಸಿ ಸೆರೆಹಿಡಿದನು. ಮುಂಜನು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದರಿಂದ ತೈಲಪನು ಆತನ ತಲೆ ಹಾರಿಸಿದನು. ಈತನ ಮಾಂಡಲಿಕನೊಬ್ಬನು ಸವದತ್ತಿಯಲ್ಲಿ ಜೈನಗುಡಿಗೆ ಭೂಮಿದಾನ ಕೊಟ್ಟಿರುತ್ತಾನೆ. ತೈಲಪನ ಹೆಂಡತಿಯ ಹೆಸರು ಜಾಕವ್ವ, ಇವಳು ತೈಲಪನು ಸೋಲಿಸಿದ ರಾಷ್ಟ್ರಕೂಟವಂಶದ ರಾಜಪುತ್ರಿ.

ತೈಲಪನ ತರುವಾಯ (೧೦೪೦) ಈ ವಂಶದ ದೊಡ್ಡ ಅರಸನು ಸೋಮೇಶ್ವರ ಅಹವಮಲ್ಲನು. ಪಟ್ಟವೇರಿದ ಕೂಡಲೆ ಇವನು ಚೋಳರಾಜನೊಡನ ಕಾದಬೇಕಾಯಿತು. ಅವನನ್ನು ಗೆದ್ದ ನಂತರ ಉತ್ತರಕ್ಕೆ ತೆರಳಿ ಭೋಜನ ರಾಜಧಾನಿಯಾದ ಧಾರಾ ಪಟ್ಟಣವನ್ನು ತೆಗೆದುಕೊಂಡನು. ಚೇದಿ ಅರಸನಾದ ಕರ್ಣನನ್ನು ಹಿಡಿದು ಕೊಂದನು. ಅಲ್ಲಿಂದ ಹೊರಟು ಪಶ್ಚಿಮ ಸಮುದ್ರದ ಕಡೆಗೆ ತಿರುಗಿ ಅಲ್ಲಿಯ ಅರಸನನ್ನು ಗೆದ್ದು, ವಿಜಯಸ್ತಂಭವನ್ನು ಊರಿ, ಸಮುದ್ರ ಮಾರ್ಗದಿಂದ ದಕ್ಷಿಣಕ್ಕೆ ಇಳಿದುಬಂದನು. ಮುಂದೆ ಚೋಳರ ರಾಜಧಾನಿಯಾದ ಕಂಚಿಯನ್ನು ತೆಗೆದುಕೊಂಡು, ಆ ಅರಸನನ್ನು ಓಡಿಸಿದನು. ಈ ಸೋಮೇಶ್ವರನು ಉತ್ತರದಲ್ಲಿ ಕನ್ಯಾಕುಬ್ಜ ಅಂದರೆ ಕನೋಜದ ಅರಸನನ್ನು ಗೆದ್ದನು. ಇವನು ಕಲ್ಯಾಣ ಪಟ್ಟಣವನ್ನು ಸ್ಥಾಪಿಸಿ ಅದನ್ನು ರಾಜಧಾನಿಯನ್ನಾಗಿ ಮಾಡಿದನು. ಇವನಿಗೆ ಸೋಮೇಶ್ವರ, ವಿಕ್ರಮಾದಿತ್ಯ, ಮತ್ತು ಜಯಸಿಂಹ ಹೀಗೆ ಮೂರು ಮಂದಿ ಮಕ್ಕಳು. ೨ನೆಯ ಮಗನಾದ ವಿಕ್ರಮಾದಿತ್ಯನು ಇವರೆಲ್ಲರೊಳಗೆ ಚತುರನೂ ವಿದ್ವಾಂಸನೂ ಆಗಿದ್ದನು. ಅವನನ್ನೇ ಯುವರಾಜನನ್ನಾಗಿ ಮಾಡಬೇಕೆಂದು ಸೋಮೇಶ್ವರನ ಇಚ್ಛೆ, ಆದರೆ ವಿಕ್ರಮಾದಿತ್ಯನು ತನ್ನ ಅಣ್ಣನ ಹಕ್ಕನ್ನು ಕಸಿದುಕೊಳ್ಳಲು ಇಚ್ಚಿಸಲಿಲ್ಲ. ಆದರೂ ತಂದೆಗೆ ಆತನ ಸಮರ ಸಾಹಸಗಳಲ್ಲಿ ಸಹಾಯ ಮಾಡಿದವನು ವಿಕ್ರಮನೇ. ಈ ವಿಕ್ರಮನು ಮೊದಲು ಚೋಳರನ್ನು ಗೆದ್ದು ಆ ರಾಜ್ಯವನ್ನು ತನ್ನ ರಾಜ್ಯಕ್ಕೆ ಕೂಡಿಸಿಕೊಂಡನು. ಮಾಳವದ ಅರಸನಿಗೆ ಸಹಾಯ ಮಾಡಿ, ಅವನು ಕಳೆದುಕೊಂಡ ಪಟ್ಟವನ್ನು ಅವನಿಗೆ ಕೊಡಿಸಿದನು. ಬಂಗಾಲ ಅಸಾಮು ಪ್ರಾಂತಗಳ ಮೇಲೆ ದಾಳಿ ಇಟ್ಟನು. ಕೇರಳರನ್ನು ಕೆಣಕಿದನು, ಸಿಂಹಳ ದ್ವೀಪದ ಅರಸನು ಇವನಿಗೆ ಶರಣಾಗತನಾದನು. ಕಂಚಿಯನ್ನು ಕೈವಶ ಮಾಡಿ ಕೊಂಡನು. ಅಲ್ಲಿಂದ ವೆಂಗಿದೇಶ ಅಂದರೆ ತೆಲುಗು ದೇಶದ ಕಡೆಗೆ ಹೊರಳಿದನು. ಹೀಗೆ ವಿಕ್ರಮಾದಿತ್ಯನು ಒಂದೇ ಸಮನೆ ರಾಜ್ಯಗಳನ್ನು ಗೆಲ್ಲುತ್ತ ಸಾಗಿರಲು, ಇತ್ತ ಅವನ ತಂದೆಯಾದ ಸೋಮೇಶ್ವರನಿಗೆ ವಿಷಮ ಜ್ವರ ಹುಟ್ಟಿತು. ಇನ್ನು ತನಗೆ ಬದುಕುವ ಆಶೆಯಿಲ್ಲವೆಂದು ತಿಳಿದ ಕೂಡಲೆ ಅವನು ತುಂಗಭದ್ರೆಯ ಬದಿಗೆ ಬಂದು, ಸುವರ್ಣದಾನ ಮೊದಲಾದುವುಗಳನ್ನು ಮಾಡಿ ನದಿಯಲ್ಲಿ ಹೋಗಿ ಮುಳುಗಿ ಸತ್ತು ಹೋದನು, ಇವನ ತರುವಾಯ ಇವನ ಹಿರಿಯ ಮಗನಾದ ೨ನೆಯ ಸೋಮೇಶ್ವರನು ಪಟ್ಟವೇರಿದನು. ಇವನಿಗೆ ಭುವನೈಕಮಲ್ಲನೆಂದು ಹೆಸರು.  ಸೋಮೇಶ್ವರನ ಆಳ್ವಿಕೆಯು ಪ್ರಜೆಗಳಿಗೆ ಸುಖಕರವಾಗಲಿಲ್ಲ. ಮನಬಂದಂತೆ ವರ್ತಿಸಿ ಪ್ರಜೆಗಳನ್ನು ಅಸಂತುಷ್ಟ ಪಡಿಸಿದನು. ಇಷ್ಟೇ ಅಲ್ಲ, ತನ್ನ ತಮ್ಮನಾದ ವಿಕ್ರಮಾದಿತ್ಯನಿಗೆ ವಿರುದ್ಧವಾಗಿಯೇ ನಡೆದನು. ಈ ಸಂಗತಿಯನ್ನು ತಿಳಿದುಕೊಂಡು, ವಿಕ್ರಮಾದಿತ್ಯನು ದೊಡ್ಡದೊಂದು ಸೈನ್ಯದೊಡನೆ ತನ್ನ ತಮ್ಮನಾದ ಜಯಸಿಂಹನನ್ನು ಕರೆದುಕೊಂಡು ರಾಜಧಾನಿಯನ್ನು ಬಿಟ್ಟನು. ಸೋಮೇಶ್ವರನು ತಮ್ಮನನ್ನು ಹಿಡಿಯಲಿಕ್ಕೆ ಸೈನ್ಯ ಕಳುಹಿದನು. ಆದರೆ ವಿಕ್ರಮನು ಅದನ್ನು ನುಚ್ಚು ನೂರಾಗಿ ಮಾಡಿದನು. ಅನಂತರ ವಿಕ್ರಮನು ಕದಂಬರನ್ನು ಕೂಡಿಕೊಂಡು, ಅವರ ಅರಸನಾದ ಜಯಕೇಶಿಯಿಂದ ವಿಪುಲವಾಗಿ ಧನಕನಕಾದಿಗಳನ್ನು ತೆಗೆದುಕೊಂಡು ಚೋಳರಾಜ್ಯದ ಕಡೆಗೆ ತಿರುಗಿದನು. ಸೋಮೇಶ್ವರನ ಆಳಿಕೆಗೆ ಜನರು ಮೊದಲೇ ಬೆಸತ್ತದರಿಂದ, ವಿಕ್ರಮನು ಹೋದ ಹೋದಲ್ಲಿ, ಮಾಂಡಲಿಕ ಅರಸರು ಅವನನ್ನು ಗೌರವಿಸುತ ಬಂದರು. ಆಳುಪ ಕೇರಳ ಮುಂತಾದ ರಾಜ್ಯಗಳ ಅರಸರು ಈ ಬಗೆಯಾಗಿ ವಿಕ್ರಮನಿಗೆ ನೆರವಾದುದರಿಂದ, ಅವನು ಧೈರ್ಯದಿಂದ ಚೋಳರಾಜ್ಯದ ದಾರಿ ಹಿಡಿದು ಅಲ್ಲಿಗೆ ಬಂದು ಸೈನ್ಯದೊಂದಿಗೆ ತಲ್ಪಿದನು. ಅಲ್ಲಿಯ ಅರಸನು ವಿಕ್ರಮನೊಡನೆ ಸಂಧಿಯನ್ನು ಮಾಡಬೇಕೆಂದು ಆ ಚೋಳರಾಜ ಪುತ್ರಿಯನ್ನು ಮದುವೆ ಮಾಡಿಕೊಂಡು ಅವಳೊಂದಿಗೆ ತುಂಗಭದ್ರಾ ನದಿಯ ತೀರಕ್ಕೆ ಬಂದು ತಳ ಊರಿದನು. ಕೆಲವು ದಿವಸಗಳಲ್ಲಿಯೇ ಚೋಳ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಯಿತು. ವಿಕ್ರಮನ ಮಾವನು ಮಡಿದನು, ಒಡನೆಯೆ ವಿಕ್ರಮನು ಕಂಚಿಗೆ ಹೋಗಿ ತನ್ನ ಬೀಗನನ್ನು ಪಟ್ಟಕ್ಕೆ ಕುಳ್ಳಿರಿಸಿದನು. ಆದರೆ ವಿಕ್ರಮನು ಮರಳಿ ಬಂದ ಕೂಡಲೆ, ವೆಂಗಿದೇಶದ ಅರಸನಾದ ಕುಲೋತ್ತುಂಗ ಅಥವಾ ರಾಜಿಗನೆಂಬ ಮಹಾ ಪ್ರತಾಪಿಯು ವಿಕ್ರಮನ ಬೀಗನನ್ನು ಗಾದಿಯಿಂದ ತಳ್ಳಿ ಚೋಳ ಸಿಂಹಾಸನವನ್ನು ಆಕ್ರಮಿಸಿದನು. ಇನ್ನು ವಿಕ್ರಮನು ತನ್ನ ಮೇಲೆ ಏರಿಬರುವನೆಂದು ತಿಳಿದು ಆ ರಾಜಿಗನು ವಿಕ್ರಮನ ಅಣ್ಣನಾದ ಸೋಮೇಶ್ವರನ ಕಿವಿಯೂದಿ ಅವನನ್ನು ವಿಕ್ರಮನಿಗೆ ವಿರುದ್ಧವಾಗಿ ನಿಲ್ಲಿಸಿದನು. ಈ ಹೊತ್ತಿನಲ್ಲಿ ವಿಕ್ರಮನು ತೋರಿಸಿದ ಶೌರ್ಯ ಧೈರ್ಯಗಳು ಅಸಾಧಾರಣವಾಗಿತ್ತು. ಅತ್ತ ಮೇಲ್ಗಡೆಯಿಂದ ತನ್ನ ಅಣ್ಣನಾದ ಸೋಮೇಶ್ವರನು ಬೆನ್ನಟ್ಟಿ ಬರುತ್ತಿದ್ದನು. ಇತ್ತ ರಾಜಿಗನ ಸೈನ್ಯವು ದಕ್ಷಿಣದಿಂದ ವಿಕ್ರಮನ ಮೇಲೆ ಧಾಳಿ ಮಾಡಿತು. ಆದರೆ ವಿಕ್ರಮನು ತನ್ನ ಅಣ್ಣನನ್ನು ಅಲಕ್ಷಿಸಿ, ರಾಜಿಗನ ಸೈನ್ಯವನ್ನು ಸೋಲಿಸಬೇಕೆಂದು ದಕ್ಷಿಣಕ್ಕೆ ಸಾಗಿದನು. ರಾಜಿಗನ ಸೈನ್ಯದ ಹತ್ತಿರ ಬಂದು ತಲ್ಪುವಷ್ಟರಲ್ಲಿ ಅಣ್ಣನ ಸೈನ್ಯವು ವಿಕ್ರಮನ ಸೈನ್ಯದ ಬೆನ್ನು ಹಿಂದೆ ಬಂದು ನಿಂತಿತು. ವಿಕ್ರಮನು ಈ ಆತ್ಮಘಾತಕತನದ ಕೃತ್ಯವು ಸರಿಯಲ್ಲವೆಂದು ತನ್ನ ಅಣ್ಣನಿಗೆ ಉಪದೇಶಿಸಿದನು. ಆದರೆ ಸೋಮೇಶ್ವರ ಒಪ್ಪಲಿಲ್ಲ.  ಆದುದರಿಂದ ನಿರುಪಾಯನಾಗಿ, ಅತ್ಯಂತ ಧೈರ್ಯ ತಾಳಿ, ಬೆನ್ನ ಹಿಂದಿನ ಮತ್ತು ಬೆನ್ನ ಮುಂದಿನ – ಹೀಗೆ ಎರಡೂ ಕಡೆಯ ಸೈನ್ಯಗಳೊಂದಿಗೆ ಒಮ್ಮೆಲೆ ಯುದ್ದ ಮಾಡುವುದನ್ನೇ ನಿಶ್ಚಯಿಸಿದನು. ಮತ್ತು ರಾಜಿಗನ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದನು. ಇತ್ತ ಸೋಮೇಶ್ವರನನ್ನು ಸೆರೆಯಾಳಾಗಿ ಹಿಡಿದನು. ಮುಂದೆ ಅವನನ್ನು ಸಿಂಹಾಸನದಿಂದ ತಳ್ಳಿ ತಾನೇ ಪಟ್ಟವೇರಿ ರಾಜ್ಯವಾಳಲು ಪ್ರಾರಂಭಿಸಿದನು.

ಈ ಬಗೆಯಾಗಿ ಈ ವಿಕ್ರಮನು ತಮ್ಮ ತಂದೆಯ ಕಾಲಕ್ಕೂ ಅಣ್ಣನ ಕಾಲಕ್ಕೂ ತಾನೇ ಯಾವತ್ತು ಶೂರಕೃತ್ಯಗಳನ್ನು ಮಾಡಿ ಹೆಸರುವಾಸಿಯಾಗಿ ೧೦೭೬ ನೇ ಇಸವಿಯಲ್ಲಿ ಪಟ್ಟವೇರಿದನು. ಬಿಲ್ಲಣನು ಇವನ ಆಸ್ಥಾನದಲ್ಲಿ ವಿದ್ಯಾಪತಿ ಯಾಗಿದ್ದನು, ಅವನೇ 'ವಿಕ್ರಮಾಂಕ ದೇವಚರಿತ' ವೆಂಬ ಇವನ ವಿಷಯವಾದ ಕಾವ್ಯವನ್ನು ಬರೆದಿರುವನು. ಮಿತಾಕ್ಷರಿಯ ಕರ್ತನಾದ ವಿಜ್ಞಾನೇಶ್ವರನು ಇವನ ಹತ್ತಿರವೇ ಇದ್ದನು. ಈ ವಿಕ್ರಮನಿಗೆ ಚಾಲುಕ್ಯ ವಿಕ್ರಮ ಅಥವಾ ತ್ರಿಭುವನಮಲ್ಲನೆಂದು ಹೆಸರು. ಕಲಿವಿಕ್ರಮ ಅಥವಾ ಪರ್ಮಾಡಿರಾಯನೆಂದೂ ಬಿರುದುಗಳುಂಟು. ಈತನು ತಾನು ಪಟ್ಟವೇರಿದ ಕೂಡಲೇ, ತನ್ನದೊಂದು ಬೇರೆ ಶಕವನ್ನು ಪ್ರಾರಂಭಿಸಿದನು.  ವಿಕ್ರಮನು ಅರಸನಾದ ನಂತರ, ಕರಾಡಕ್ಕೆ ಹೋಗಿ ಅಲ್ಲಿಯ ಅರಸನ ಮಗಳಾದ ಚಂದ್ರ ಲೇಖಾ ಅಥವಾ ಚಂದಲಾದೇವಿಯನ್ನು ಮದುವೆಯಾದನು. ವಿಕ್ರಮನು ಪಟ್ಟವೇರಿದ ನಂತರ, ಅವನ ತಮ್ಮನಾದ ಜಯಸಿಂಹನಿಗೆ ದುರಾಶೆ ಹುಟ್ಟಿ ಅವನು ಅಣ್ಣನಿಗೆ ವಿರುದ್ದವಾಗಿ ಬನವಾಸಿಯಲ್ಲಿ ಒಳಸಂಚು ಹೂಡಿದನು, ಚಾಲುಕ್ಯ ವಿಕ್ರಮನು ಅವನಿಗೆ ಹಾಗೆ ಮಾಡಬೇಡವೆಂದು ಒಳ್ಳೆಯ ರೀತಿಯಿಂದ ಹೇಳಿ ನೋಡಿದರೂ ಅವನು ಕೇಳಲಿಲ್ಲ. ಜಯಸಿಂಹನು ತನ್ನದೊಂದು ಸೈನ್ಯವನ್ನೇ ಸಿದ್ಧ ಪಡಿಸಿ ಕೃಷ್ಣೆಯ ದಡಕ್ಕೆ ಬಂದು ತಳ ಊರಿದನು, ಅಲ್ಲಿ ಅಣ್ಣ ತಮ್ಮಂದಿರ ನಡುವೆ ಭಯಂಕರ ಕಾಳಗವೆಸಗಿತು. ಜಯಸಿಂಹನು ಓಡಿ ಅಡವಿಯ ಪಾಲಾದನು. ಮುಂದೆ ವಿಕ್ರಮನ ಸೈನ್ಯದವರು ಅವನನ್ನು ಹಿಡಿದು ವಿಕ್ರಮನೆದುರಿಗೆ ತಂದರು. ವಿಕ್ರಮನು ಅವನನ್ನು ಕ್ಷಮಿಸಿ ಬಿಟ್ಟು ಕೊಟ್ಟನು. ಮುಂದೆ ಅನೇಕ ವರ್ಷಗಳವರೆಗೆ ವಿಕ್ರಮನು ಶಾಂತಿಯಿಂದ ರಾಜ್ಯವಾಳಿದನು. ಅವನ ಆಳಿಕೆಯ ಕೊನೆಯ ಭಾಗದಲ್ಲಿ ಹೊಯ್ಸಳರ ವಿಷ್ಣು ವರ್ಧನನೆಂಬವನು ಬಂಡಾಯವನ್ನೆಬ್ಬಿಸಿದನು. ಆದರೆ ವಿಕ್ರಮನ ಸರದಾರನಾದ ಅಚ್ಚ ಅಥವಾ ಅಚ್ಚಿಗನೆಂಬವನು ಆ ಬಂಡಾಯವನ್ನು ತಗ್ಗಿಸಿ, ಪಾಂಡ್ಯ, ಕೊಂಕಣ ಮುಂತಾದ ಅರಸರನ್ನು ಸೋಲಿಸಿದನು. ಚೋಳ ಅರಸನ ಕೂಡ ವಿಕ್ರಮನು ಸ್ವಂತ ತಾನೇ ಯುದ್ಧ ಮಾಡಿ ಅವನನ್ನು ಸೋಲಿಸಿದನು, ಆನಂತರ ಕಲ್ಯಾಣಕ್ಕೆ ಬಂದು ವಿಕ್ರಮಪುರವೆಂಬ ತನ್ನ ಹೆಸರಿನದೊಂದು ಪಟ್ಟಣವನ್ನು ಸ್ಥಾಪಿಸಿದನು, ಇವನಿಗೆ ೧೬ ಮಂದಿ ಮಾಂಡಲಿಕ ರಾಜರಿದ್ದರು.

ಬಿಜ್ಜಳನು ಮೊದಲು ರಾಷ್ಟ್ರಕೂಟರ ಮಹಾಮಂಡಲೇಶ್ವರನಾಗಿದ್ದಂತೆ ತೋರುತದೆ. ಈತನು ಚಾಲುಕ್ಯರ ಕೊನೆಯ ಅರಸನಾದ ತೈಲಪನನ್ನು ಓಡಿಸಿ ಸಾರ್ವಭೌಮನಾದ. ಕಲ್ಯಾಣದಲ್ಲುಂಟಾದ ಧರ್ಮಕ್ರಾಂತಿಯ ಗೊಂದಲದಲ್ಲಿ ಅವನು ತನ್ನ ಜೀವ ತೆರಬೇಕಾಯಿತು. ವಿಜಾಪುರ ಜಿಲ್ಲಾ ಬಾಗೇವಾಡಿಯಲ್ಲಿ ಮಂಡಿಗೆಯ ಮಾದಿರಾಜನೆಂಬೊಬ್ಬ ಆರಾಧ್ಯ ಬ್ರಾಹ್ಮಣನಿದ್ದನು. ಅವನ ಮಗನೇ ಬಸವನು. ಬಿಜ್ಜಳನ ಮಂತ್ರಿಯಾದ ಬಲದೇವನು ಈ ಬಸವನ ಸೋದರಮಾವನು. ಬಸವನು ಬಲದೇವನ ಮಗಳಾದ ಗಂಗಾಂಬಿಕೆ ಎಂಬವಳನ್ನು ಮದುವೆಯಾಗಿದ್ದನು. ಬಲದೇವನು ಮರಣಹೊಂದಿದ ಬಳಿಕ, ಬಿಜ್ಜಳನು ಬಸವನನ್ನು ತನ್ನ ಮಂತ್ರಿಯನ್ನಾಗಿ ನಿಯಮಿಸಿಕೊಂಡನು. ಬಸವನಿಗೆ ನಾಗಾಂಬಿಕಾ ಎಂಬೊಬ್ಬ ಅಕ್ಕನಿದ್ದಳು. ಇವಳ ಮಗ ಚನ್ನಬಸವೇಶನು. ಬಸವನು ಲಿಂಗಾಯತ ಧರ್ಮವನ್ನು ಬೆಳೆಯಿಸಿ, ಬಹು ಜನ ಜೈನರನ್ನು ತನ್ನ ಮತಕ್ಕೆ ಸೇರಿಸಿಕೊಂಡುದರಿಂದ ಬಿಜ್ಜಳನಿಗೂ ಅವನಿಗೂ ಬೇಸರುಂಟಾಯಿತು. ಬಸವನ ಗುರುವಾದ ಅಲ್ಲಮಪ್ರಭು ಶ್ರೀಶೈಲಕ್ಕೆ ಹೋಗಿ ಐಕ್ಯನಾಗಲು, ಬಸವನು ಸಹ ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯಗೊಂಡನು. ಬಳಿಕ ಬಿಜ್ಜಳನು ಚನ್ನಬಸವೇಶನಿಗೆ ಮಂತ್ರಿಪದವನ್ನು ಕೊಟ್ಟನು. ಲಿಂಗಾಯತ ಮತಸ್ಥರಾದ ಹಳ್ಳಯ್ಯ ಮಧುವಯ್ಯ ಎಂಬಿಬ್ಬರು ಬೇರೆ ಬೇರೆ ಕುಲದವರು ಪರಸ್ಪರ ಬಾಂಧವ್ಯವನ್ನು ಬೆಳಿಸಿದರೆಂಬ ಕಾರಣದಿಂದ ಬಿಜ್ಜಳನು ಅವರನ್ನು ಆನೆಯ ಕಾಲಿಗೆ ಕಟ್ಟಿ ಎಳಿಸಲು, ದೊರೆಯನ್ನು ಶಿಕ್ಷಿಸಬೇಕೆಂದು ಜಗದೇವ ಬೊಮ್ಮಯ್ಯರು ಸಂಕಲ್ಪಿಸಿ, ಚನ್ನಬಸವೇಶನ ಅಪ್ಪಣೆಯನ್ನು ಪಡೆದು, ದೊರೆಯ ಬಳಿಯಲ್ಲಿ ದೀವಟಿಗೆಯ ಉದ್ಯೋಗವನ್ನು ಸ್ವೀಕರಿಸಿದರು. ಮುಂದೆ ಸಮಯ ಸಾಧಿಸಿ, ಜಗದೇವ-ಮಲ್ಲಯ್ಯ-ಬೊಮ್ಮಯ್ಯರು ಅರಸನನ್ನು ಇರಿದು ಕೊಂದರು. ಇದರಿಂದ ಪಟ್ಟಣದಲ್ಲಿ ಹಾಹಾಕಾರವೆದ್ದಿತು. ಈ ಸುದ್ದಿಯನ್ನು ಕೇಳಿ, ಚನ್ನಬಸವನು ಇಲ್ಲಿರುವುದು ಸರಿಯಲ್ಲವೆಂದೆಣಿಸಿ, ಶಿವಶರಣರೊಡನೆ ಉಳುವಿಗೆ ಹೊರಟನು. ಆಳಿಯ ಬಿಜ್ಜಳನು ಮಹಾಸೇನೆಯೊಡನೆ ಬಂದು, ಅವರ ಮೇಲೆ ಬಿದ್ದು ಅಪಜಯವಪಟ್ಟು ಹಿಂದಿರುಗಿದನು. ಬಳಿಕ ಚನ್ನಬಸವನು ತನ್ನ ಸಂಗಡಿಗರೊಡನೆ ಉಳುವಿಯ ಮಹಾಮನೆಗೆ ಹೋಗಿ ಅಲ್ಲಿಯೇ ಬಯಲಾದನು. ಜೈನರ ಕಥೆಯು ಇದರಿಂದ ಭಿನ್ನವಾಗಿದೆ. ಅವರು ಬಿಜ್ಜಳನನ್ನು ಕೊಂದ ದೋಷವನ್ನು ಬಸವನ ಮೇಲೆ ಹೊರಿಸುತ್ತಾರೆ. ಬಿಜ್ಜಳನ ಮರಣದ ನಂತರ ಈ ಕಲಚೂರ್ಯ ವಂಶವು ಬಹಳ ದಿವಸ ಬಾಳಲಿಲ್ಲ.

ಚಾಲುಕ್ಯ ವಂಶವು ಅಡಗಿ, ಕಲಚೂರಿವಂಶವು ಕೂಡ ನಷ್ಟವಾಗಿ, ರಾಜ್ಯದಲ್ಲಿ ಗೊಂದಲವೆದ್ದಾಗ, ವಿಷ್ಣುವರ್ಧನನ ಮೊಮ್ಮಗನಾದ ವೀರಬಲ್ಲಾಳನು ಬೊಮ್ಮನೊಡನೆ ಕಾಳಗವಾಡಿ, ಕೆಲವು ಸೀಮೆಯನ್ನು ತೆಗೆದುಕೊಂಡನು. ಇದೇ ಸಂಧಿಯನ್ನು ಸಾಧಿಸಿ, ಉತ್ತರದಲ್ಲಿಯೂ ಯಾದವರು ಸುತ್ತ ಮುತ್ತಲೂ ತಮ್ಮ ಕಾಲು ಚಾಚಿದರು. ಭಿಲ್ಲಮನು ರಾಜ್ಯ ವಿಸ್ತಾರವನ್ನು ಮಾಡಿ ಕಲ್ಯಾಣದ ಅರಸೊತ್ತಿಗೆಯನ್ನು ಎತ್ತಿ ಹಾಕಿದನು. ಅವನು ಕೃಷ್ಣೆಯ ಉತ್ತರಕ್ಕಿರುವ ಸೀಮೆಗೆಲ್ಲಾ ಅರಸನಾಗಿ, ೧೧೮೭ ನೆಯ ಇಸವಿಯಲ್ಲಿ ದೇವಗಿರಿ ಪಟ್ಟಣವನ್ನು ಸ್ಥಾಪಿಸಿ ಅಲ್ಲಿ ಆಳತೊಡಗಿದನು. ಇತ್ತ ಹೊಯ್ಸಳ ಅರಸನಾದ ವೀರಬಲ್ಲಾಳನು ಉತ್ತರಕ್ಕೆ ಕೈಚಾಚುತ್ತಿದ್ದನು. ಈ ಮೇರೆಗೆ ಹೊಯ್ಸಳ ಯಾದವರಿಗೂ ದೇವಗಿರಿ ಯಾದವರಿಗೂ ಕೃಷ್ಣೆಯ ಹತ್ತಿರವಿರುವ ಸೀಮೆಯ ಒಡೆತನಕ್ಕಾಗಿ ಮೇಲೆ ಮೇಲೆ ಕಾಳಗಗಳೆದ್ದವು. ಕೊನೆಗೆ ಲಕ್ಕುಂದಿಯಲ್ಲಾದ ದೊಡ್ಡ ಕಾಳಗದಲ್ಲಿ, ಹೊಯ್ಸಳ ಅರಸನಾದ ವೀರಬಲ್ಲಾಳನು, ಭಿಲ್ಲಮನ ಮಗನಾದ ಜೈತೃ ಸಿಂಹನನ್ನು ಸಂಪೂರ್ಣವಾಗಿ ಸೋಲಿಸಿ, ಕುಂತಳ ದೇಶಕ್ಕೆ ಅಧಿಪತಿಯಾದನು. ಭಿಲ್ಲಮನ ತರುವಾಯ ೧೧೧೩ ನೆಯ ಶಕದಲ್ಲಿ, ಅವನ ಮಗನಾದ ಜೈತೃ ಪಾಲನು ಅಥವಾ ಜೈತುಗಿಯು ಪಟ್ಟವೇರಿದನು. ಪ್ರಸಿದ್ಧ ಜ್ಯೋತಿಷ್ಯನಾದ ಭಾಸ್ಕರಾಚಾರ್ಯರ ಮಗನಾದ ಲಕ್ಷ್ಮೀಧರನು ಈ ಜೈತೃಪಾಲನ ಆಸ್ಥಾನದಲ್ಲಿ ಪಂಡಿತನಾಗಿದ್ದನು. ಅನಂತರ ಅವನ ಮಗನಾದ ಸಿಂಘಣನು ಅರಸನಾದನು. ದೇವಗಿರಿ ಯಾದವರೊಳಗೆ ಇವನೇ ಶ್ರೇಷ್ಟನು. ಈತನು ಮಾಳವ ಮುಂತಾದ ಅರಸರನ್ನು ಗೆದ್ದನು. ಮಧುರೆಯ ಮತ್ತು ಕಾಶಿಯ ಅರಸರು ಇವನಿಂದ ಕೊಲ್ಲಲ್ಪಟ್ಟರು. ಈತನು ಹೊಯ್ಸಳರನ್ನು ಗೆದ್ದು ಉತ್ತರಸೀಮೆಯನ್ನು ಸೆಳೆದುಕೊಂಡನು. ಸಿಂಘಣನು ಗುಜರಾಥದ ಮೇಲೂ ಅನೇಕಾವರ್ತಿ ದಾಳಿಯನ್ನು ಮಾಡಿದನು. ಈ ಸಿಂಘಣನ ಮಗನಾದ ರಾಮನು, ಗುಜರಾಥದಲ್ಲಿ ಆಳುತ್ತಿರುವಾಗ ಒಂದು ಕಾಳಗದಲ್ಲಿ ಮಡಿದನು. ಆಗ ಅವನ ಮಗನು ಚಿಕ್ಕವನಾಗಿದ್ದುದರಿಂದ, ಅವನ ತಂಗಿಯಾದ ಲಕ್ಷ್ಮಿಯು ಆ ದೇಶವನ್ನು ಕೆಲವು ಕಾಲಪರ್ಯಂತ ಆಳಿದಳು. ಸಂಘಣನು 'ಚಿಕ್ಕ' ನೆಂಬವನ ಮಗನಾದ ಬಿಜ್ಜಣ್ಣನನ್ನು ದಕ್ಷಿಣದೇಶಕ್ಕೆ ಅಧಿಕಾರಿಯನ್ನಾಗಿ ನೇಮಿಸಿದ್ದನು. ಈ ಬಿಜ್ಜಣ್ಣನು ರಟ್ಟರನ್ನೂ, ಕದಂಬರನ್ನೂ, ಗುತ್ತರನ್ನೂ, ಪಾಂಡ್ಯರನ್ನೂ ಗೆದ್ದು, ಕಾವೇರೀ ನದಿಯ ದಡದಲ್ಲಿ ತನ್ನ ವಿಜಯ ಸ್ತಂಭವನ್ನೂರಿದನು. ಆದುದರಿಂದ, ಈ ಸಿಂಘಣನ ಕಾಲದಲ್ಲಿ ಕೆಲವು ಕಾಲ ರಾಜ್ಯಗಳ ವಿಸ್ತಾರವು ಅತಿಶಯವಾಗಿ ಇದ್ದಂತೆ ತೋರುತ್ತದೆ. ಸಿಂಘಣನಿಗೆ ಪೃಥ್ವಿ ವಲ್ಲಭನೆಂದು ಬಿರುದು ಇತ್ತು. ದೇವಗಿರಿ ಯಾದವರು ತಾವು ವಿಷ್ಣು ವಂಶೋದ್ಭವರೆಂದೂ, ದ್ವಾರಾವತೀ ಪುರವರಾಧೀಶ್ವರರೆಂದೂ ಹೇಳಿಕೊಳ್ಳುವರು. ಭಾಸ್ಕರಾಚಾರ್ಯರ ಮೊಮ್ಮಗನಾದ ಚಂಗದೇವನು ಸಿಂಘಣನ ಆಸ್ಥಾನದಲ್ಲಿ ಜ್ಯೋತಿಷ್ಯನಾಗಿದ್ದನು.ಅನಂತರದಲ್ಲಿ ಮಹಾದೇವನೇ ಹೆಸರಾದ ಅರಸನು. ಈತನು ತಲುಂಗ, ಗುರ್ಜರ, ಕರ್ಣಾಟ, ಕೊಂಕಣ ಮುಂತಾದ ಅರಸರನ್ನು ಗೆದ್ದನು. ಕರ್ಣಾಟರೆಂದರೆ ಹೊಯ್ಸಳ ಅರಸರು.

ಈ ವಂಶದ ಕೊನೆಯ ಅರಸನು ರಾಮಚಂದ್ರನು (೧೨೭೧-೧೩೦೯). ರಾಮಚಂದ್ರನ ರಾಜ್ಯವು ಮೈಸೂರಿನವರೆಗೆ ಹಬ್ಬಿತ್ತು. ಪ್ರಸಿದ್ಧ ಧರ್ಮಶಾಸ್ತ್ರ ಕಾರನಾದ ಹೇಮಾದ್ರಿಯು, ಮಹಾದೇವ ಮತ್ತು ರಾಮಚಂದ್ರ ಇವರ ಆಳಿಕೆಯಲ್ಲಿ ಮಂತ್ರಿಯಾಗಿದ್ದನು. ೧೨೯೬ನೆಯ ಇಸವಿಯಲ್ಲಿ ಅಲ್ಲಾವುದ್ದೀನ ಖಿಲಜಿಯು ರಾಮಚಂದ್ರನನ್ನು ಸೋಲಿಸಿದನು. ಅನಂತರ ಮಲಿಕ ಕಾಫರನು ರಾಮಚಂದ್ರನನ್ನು ಕೊಂದು ದೇವಗಿರಿಯನ್ನು ವಶಮಾಡಿಕೊಂಡನು.

ಚೋಳರು ಗಂಗ ರಾಜರನ್ನು ೧೦೦೪ರಲ್ಲಿ ಸೋಲಿಸಿದ ನಂತರ ಮೈಸೂರಿನ ಪಶ್ಚಿಮದಲ್ಲಿ ಹೊಯ್ಸಳರು ತಲೆಯೆತ್ತಿದರು. ಮುಂದೆ ಅವರು ೧೧೧೬ರಲ್ಲಿ ಚೋಳರನ್ನು ಗೆದ್ದು ತಾವೇ ರಾಜರಾಗಿ ೧೪ನೆಯ ಶತಮಾನದವರೆಗೆ ಆಳಿದರು. ಈ ವಂಶದ ಮೂಲಪುರುಷನು ಸಳನೆಂಬವನು. ಆತನು ಸುದತ್ತನೆಂಬೊಬ್ಬ ಬ್ರಾಹ್ಮಣ ಯತಿಯಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದಾಗ, ಒಮ್ಮೆ ವಾಸಂತಿಕಾದೇವಿಯ ಗುಡಿಗೆ ಪೂಜೆಗೆ ಹೋಗಿದ್ದನು. ಆಗ ಅಲ್ಲಿ ಒಂದು ದೊಡ್ಡ ಹುಲಿಯು ಬಂದಿತು. ಕೂಡಲೆ ಆ ಯತಿಯು, ತನ್ನ ಕೈಯೊಳಗಿನ ಬೆತ್ತವನ್ನು ಅವನಿಗೆ ಕೊಟ್ಟು ಆ ಹುಲಿಯನ್ನು 'ಹೊಯ್ಯ' ಕ್ಕೆ ಹೇಳಿದನು. ಸಳನು ಆ ಮೇರೆಗೆ ಅದನ್ನು ಕೊಂದನು. ಅಂದಿನಿಂದ ಅವನ ವಂಶಕ್ಕೆ ಹೊಯ್ಸಳವೆಂದು ಹೆಸರು ಬಂತು. ಈ ಸಳನು ಹುಲಿ ಹೊಡೆಯುವ ಚಿತ್ರಗಳನ್ನೊಳಗೊಂಡ ಕಟ್ಟಡಗಳೆಲ್ಲವೂ ಈ ವಂಶದವರವೇ.

ಕೆಳಗೆ ತಂಜಾವರದಿಂದ ಮೇಲ್ಗಡೆ ಸೊಲ್ಲಾಪುರದವರೆಗೆ ಈ ವಂಶದ ಲೇಖಗಳು ದೊರೆಯುತ್ತವೆ. ಹೊಯ್ಸಳರು ಮೊದಲು ಕಲ್ಯಾಣ ಚಾಲುಕ್ಯರ ಮಾಂಡಲಿಕರಾಗಿದ್ದರು. ಆದರೆ ಮುಂದೆ ವಿಷ್ಣು ವರ್ಧನನ ಕಾಲದಲ್ಲಿ ಇವರು ಸ್ವತಂತ್ರರಾಗಿ ಆಳುತ್ತಿದ್ದರು. ಇವರ ರಾಜಧಾನಿಯು ಮೊದಲು ಬೇಲೂರು, ಅನಂತರ ಹಳೇಬೀಡು ಅಥವಾ ದ್ವಾರಸಮುದ್ರ.

ಈ ವಂಶದಲ್ಲಿ ವಿನಯಾದಿತ್ಯ, ವಿಷ್ಣು ವರ್ಧನ ಇವರೇ ಬಲವಾದ ಅರಸರು, ಬಿಟ್ಟಿದೇವ ಅಥವಾ ವಿಷ್ಣುವರ್ಧನನು ಈ ವಂಶಕ್ಕೆ ಮೊದಲು ಪೂರ್ಣ ಸ್ವಾತಂತ್ರವನ್ನು ಕೊಟ್ಟವನು. ಇವನು ರಾಮಾನುಜಾಚಾರ್ಯರ ಉಪದೇಶದಿಂದ ಜೈನಮತವನ್ನು ಬಿಟ್ಟು ವೈಷ್ಣವ ಮತವನ್ನಂಗೀಕರಿಸಿದನು. ಈತನು ಮೈಸೂರು ಪ್ರಾಂತದಿಂದ ಚೋಳರನ್ನು ಹೊಡೆದಟ್ಟಿದನು. ಈತನು ತಲಕಾಡು, ಉಚ್ಚಂಗಿ, ಬನವಾಸಿ ಮುಂತಾದ ನಾಡುಗಳ ಅರಸರನ್ನು ಗೆದ್ದನು. ತಳಕಾಡು, ದ್ವಾರಸಮುದ್ರ, ಬಂಕಾಪುರ ಮುಂತಾದುವುಗಳು ಬೇರೆ ಬೇರೆ ಕಾಲಕ್ಕೆ ಈತನ ರಾಜಧಾನಿಗಳಾಗಿದ್ದುವು. ೨ನೆಯ ಬಲ್ಲಾಳ ಅಥವಾ ವೀರಬಲ್ಲಾಳನೇ ಈತನ ತರುವಾಯದ ಪ್ರಸಿದ್ಧ ರಾಜನು. ಈತನು ೧೧೭೩ ನೆಯ ಇಸವಿಯ ಜುಲೈ ೨೨ನೆಯ ದಿವಸ ದ್ವಾರಸಮುದ್ರದಲ್ಲಿ ಪಟ್ಟವೇರಿದನು. ಈತನು ಚಂಗಾಳ ಉಚ್ಚಂಗಿಯ ಪಾಂಡ್ಯ ಕಲಚೂರ್ಯ ಮುಂತಾದ ಅರಸರನ್ನು,  ದೇವಗಿರಿ ಯಾದವರ ದೊಡ್ಡ ಸೈನ್ಯವನ್ನು ಸೊರಟೂರಿನಲ್ಲಿ ಸೋಲಿಸಿದನು. ೧೧೯೩ರಲ್ಲಿ ಇವನು ಲಕ್ಕುಂದಿಯಲ್ಲಿ ವಾಸವಾಗಿದ್ದನು. ಆದರೆ ಮುಂದೆ ರಾಣೇಬೆನ್ನೂರ ತಾಲುಕಿನಲ್ಲಿರುವ ಹುಲ್ಲೂರ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು, ಈತನು ೪೭ ವರ್ಷಗಳ ವರೆಗೆ ವೈಭವದಿಂದ ಆಳಿ ೧೨೨೦ರಲ್ಲಿ ಮಡಿದನು.

ಈತನ ತರುವಾಯದಲ್ಲಿ ಪಟ್ಟವೇರಿದ ೨ನೆಯ ನರಸಿಂಹನು ಅನೇಕ ರಾಜ್ಯಗಳನ್ನು ಗೆದ್ದು ರಾಮೇಶ್ವರದಲ್ಲಿ ವಿಜಯ ಸ್ತಂಭವನ್ನೂರಿದನು. ಈತನು ದೇವಗಿರಿ ಯಾದವರನ್ನು ಸೋಲಿಸಿದನು.

ಈ ನರಸಿಂಹನ ಮಗನಾದ ಸೋಮೇಶ್ವರನ ನಂತರ ಈ ರಾಜ್ಯದಲ್ಲಿ ಎರಡು ಭಾಗಗಳಾಗಿ ಕನ್ನಡ ರಾಜ್ಯವು ೩ನೆಯ ನರಸಿಂಹನ ಪಾಲಿಗೆ ಬಂದಿತು. ತಮಿಳು ರಾಜ್ಯವು ರಾಮನಾಥನೆಂಬ ಅವನ ತಮ್ಮನ ಪಾಲಿಗೆ ಹೋಯಿತು. ೩ನೆಯ ನರಸಿಂಹನು ದೇವಗಿರಿ ಯಾದವರನ್ನು ಬೆಳವಡಿಯಲ್ಲಿ ಸೋಲಿಸಿದನು. ಆದರೆ ಮುಂದೆ ೩ ನೆಯ ಬಲ್ಲಾಳನ ಕಾಲಕ್ಕೆ ಇವರ ರಾಜ್ಯದಲ್ಲಿ ಮುಸಲ್ಮಾನರ ಪ್ರವೇಶವಾಗಿ ಇವರ ವಂಶವು ನಷ್ಟ ವಾಯಿತು.

ರಾಷ್ಟ್ರಕೂಟರ ಕಾಲಕ್ಕೂ ಚಾಲುಕ್ಯರ ಕಾಲಕ್ಕೂ ಪ್ರಾಬಲ್ಯಕ್ಕೆ ಬಂದ ಕೆಲವು ಮಾಂಡಲಿಕ ರಾಜವಂಶಗಳಲ್ಲಿ ಇವರೊಬ್ಬರು. ಒಟ್ಟು ಶಿಲಾಹಾರ ಮನೆತನಗಳು ಮೂರು. ಅವೆಲ್ಲ ರಾಷ್ಟ್ರಕೂಟರ ಕಾಲದಲ್ಲಿ ತಲೆಯೆತ್ತಿದುವು. ಉತ್ತರ ಕೊಂಕಣದಲ್ಲಿ ೧೪೦೦ ಹಳ್ಳಿಗಳಿದ್ದು, ಪುರಿ ಎಂಬುದು ಈ ಉತ್ತರ ಕೊಂಕಣದ ಶಿಲಾಹಾರವಂಶದ ರಾಜಧಾನಿಯು. ರಾಷ್ಟ್ರಕೂಟರ ಅರಸನಾದ ಅಮೋಘವರ್ಷ ಅಥವಾ ನೃಪತುಂಗ (೮೧೫-೮೭೭) ನ ಕಾಲಕ್ಕೆ ಅಲ್ಲಿ ಫುಲ್ಲಶಕ್ತಿಯೆಂಬವನು ಅವನ ಮಾಂಡಲಿಕನಾಗಿ ಆಳುತ್ತಿದ್ದನು. ದಕ್ಷಿಣ ಕೊಂಕಣದ ಶಿಲಾಹಾರರ ರಾಜಧಾನಿಯು ಖಾರೆ ಪಟ್ಟಣವಾಗಿತ್ತು. ಈ ಶಿಲಾಹಾರರು ಅಷ್ಟು ಪ್ರಸಿದ್ಧರಾಗಿರಲಿಲ್ಲ. ಕೊಲ್ಲಾಪುರದ ಶಿಲಾಹಾರ ವಂಶವೇ ಮೂರನೆಯ ಶಿಲಾಹಾರ ವಂಶ. ಕೊಲ್ಲಾಪುರ, ಮಿರಜ, ಕರ್ಹಾಡ ಪ್ರಾಂತಗಳು ಇವರ ವಶದಲ್ಲಿದ್ದುವು. ಇದು ಎಲ್ಲಕ್ಕೂ ಈಚೆಯ ಮನೆತನವು. ರಾಷ್ಟ್ರಕೂಟ ವಂಶವು ಹಾಳಾಗುವ ಕೊನೆ ಕೊನೆಗೆ ಈ ಮನೆತನವು ಉದಯಕ್ಕೆ ಬಂದಿತು.

ರಾಷ್ಟ್ರಕೂಟರ ಕಾಲದಲ್ಲಿಯೂ ಚಾಲುಕ್ಯರ ಕಾಲದಲ್ಲಿಯೂ ರಟ್ಟರು ಮಾಂಡಲಿಕ ರಾಜರಾಗಿದ್ದರು. ಮುಂದೆ ಕೆಲವು ದಿವಸ ಸ್ವತಂತ್ರರಾಗಿ ಆಳಿದರು. ಅನಂತರ ದೇವಗಿರಿಯ ಯಾದವರಿಗೆ ತುತ್ತಾದರು. ಇವರ ರಾಜಧಾನಿಯು ಮೊದಲು ಸುಗಂಧವರ್ತಿ ಅಥವಾ ಸವದತ್ತಿಯಲ್ಲಿ ಇತ್ತು. ಮುಂದೆ ವೇಣುಗ್ರಾಮ ಅಥವಾ ಬೆಳಗಾಂವಿಗೆ ಅದನ್ನು ನೂಕಿಸಿದರು. ಇವರ ಶಿಲಾಲೇಖಗಳು ಸೊಗಲ, ನೇಸರ್ಗಿ ಕೊಣ್ಣೂರ, ರಾಯಬಾಗ ಮುಂತಾದ ಊರುಗಳಲ್ಲಿ ದೊರೆಯುತ್ತವೆ. ಇವರು ಲತ್ತನೂರ ಪುರವರಾಧೀಶ್ವರರೆಂದು ಹೇಳಿಕೊಳ್ಳುತ್ತಾರೆ. ಇವರು ಜೈನರು. ಸುವರ್ಣ ಗರುಡ ಧ್ವಜವು ಇವರ ಪತಾಕೆಯು. ಇವರು ಸಿಂದೂರ ಲಾಂಛನರು.

ಕರ್ನಾಟಕದ ಕೊನೆಯ ಮನೆತನವೇ ವಿಜಯನಗರವು. ಬಾದಾಮಿಯ ಚಾಲುಕ್ಯರನ್ನು ಕರ್ನಾಟಕ-ಸಿಂಹಾಸನ-ಸ್ಥಾಪನಾಚಾರ್ಯರೆಂದು ಹೇಳಬಹುದು. ಯಾಕೆಂದರೆ, ಚಾಲುಕ್ಯರಿಗಿಂತ ಮೊದಲು ಕದಂಬ, ಗಂಗ ಮುಂತಾದ ಬೇರೆ ಬೇರೆ ರಾಜ್ಯಗಳು ಕರ್ನಾಟಕದಲ್ಲಿ ಆಳಿಹೋಗಿದ್ದರೂ, ಇಡೀ ಕರ್ನಾಟಕವು ಒಬ್ಬನೇ ಅರಸನ ಏಕಛತ್ರಾಧಿಪತ್ಯಕ್ಕೆ ಬಾದಾಮಿಯ ಚಾಲುಕ್ಯರ ಕಾಲದಲ್ಲಿಯೇ ಒಳಪಟ್ಟಿತು. ಆಗ ಸ್ಥಾಪಿತವಾದ ಏಕಛತ್ರಾಧಿಪತ್ಯವು ರಾಷ್ಟ್ರಕೂಟರ ಕಾಲಕ್ಕೂ ಪುನಃ ಕಲ್ಯಾಣ-ಚಾಲುಕ್ಯರ ಕಾಲಕ್ಕೂ ಅವಿಚ್ಛಿನ್ನವಾಗಿ ನಡೆಯಿತು. ಮುಂದೆ ಅದು ಎರಡು ಹೋಳುಗಳಾಗಿ, ಉತ್ತರದ ಅರ್ಧ ಭಾಗವು ದೇವಗಿರಿ ಯಾದವರ ವಶವಾಯಿತೆಂದೂ ದಕ್ಷಿಣದ ಅರ್ಧ ಭಾಗವು ಹೊಯ್ಸಳ ಯಾದವರ ವಶಕ್ಕೆ ಹೋಯಿತೆಂದೂ ಹೇಳಬಹುದು. ಮುಂದೆ ಮುಸಲ್ಮಾನರು ದೇವಗಿರಿ ಯಾದವರನ್ನು ಸೋಲಿಸಿ ಉತ್ತರದ ಅರ್ಧ ಭಾಗವನ್ನು ನುಂಗಿದರು. ದಕ್ಷಿಣದ ಅರ್ಧ ಭಾಗವನ್ನು ನುಂಗುವ ಹಂಚಿಕೆಯಲ್ಲಿದ್ದರು. ಮುಸಲ್ಮಾನರ ಮೊದಲನೆಯ ಪ್ರಹಾರವು ದೇವಗಿರಿ ಯಾದವರಿಗೂ ವರಂಗಲ್ಲ ಕಾಕತೀಯ ಅರಸರಿಗೂ ತಗುಲಿತು. ಆ ಪೆಟ್ಟು ತಗಲುವವರೆಗೆ ಮಿಕ್ಕ ಅರಸರು, ಎಚ್ಚರಗೊಳ್ಳಲಿಲ್ಲ. ಆದರೆ ಆ ಪಟ್ಟು ಬಡಿದ ಕೂಡಲೆ ದಕ್ಷಿಣ ಹಿಂದುಸ್ಥಾನದಲ್ಲಿ ಹಾಹಾಕಾರವೆದ್ದಿತು. ಮುಸಲ್ಮಾನರು ಪ್ರಬಲರಾದ ಶತ್ರುಗಳಾದುದರಿಂದ, ಒಬ್ಬೊಬ್ಬರೇ ಅವರಿದಿರಿಗೆ ನಿಂತರೆ ನಡೆಯಲಾರದೆಂದು ಬಗೆದು, ಎಲ್ಲರೂ ಒಕ್ಕಟ್ಟಾಗಿ ನಿಲ್ಲುವುದು ಅವಶ್ಯವೆಂಬ ಕಲ್ಪನೆಯು ಆಗ ಉದ್ಭವಿಸಿತು. ಈ ಕಲ್ಪನೆಯ, ಮೂಲೋತ್ಪಾದಕರೇ ಶ್ರೀ ವಿದ್ಯಾರಣ್ಯರು. ಚದರಿಹೋದ ಚಿಕ್ಕ ಚಿಕ್ಕ ರಾಜ್ಯಗಳನ್ನು ಒಟ್ಟುಗೂಡಿಸಿ, ಮುಸಲ್ಮಾನರಿದಿರಿಗೆ ಒಕ್ಕಟ್ಟಿನಿಂದ ನಿಲ್ಲುವಂತೆ ಮಾಡಿದುದೇ ಶ್ರೀ ವಿದ್ಯಾರಣ್ಯರು. ಪರದೇಶೀಯ ಶತ್ರುಗಳಿಗೆ ಇದಿರಾಗಬೇಕಾದರೆ ನಾವು ನಮ್ಮ ಒಳ ಜಗಳಗಳನ್ನೆಲ್ಲವನ್ನೂ ಮರೆತು ಬಿಡಬೇಕೆಂಬ ತತ್ವವನ್ನು ಹಿಂದುಸ್ಥಾನದ ಇತಿಹಾಸದಲ್ಲಿ ಎಲ್ಲಕ್ಕೂ ಮೊದಲಿಗೆ ಶ್ರೀ ವಿದ್ಯಾರಣ್ಯರೇ ಕಲಿಸಿದವರು. ಇದರಿಂದ ಮುಸಲ್ಮಾನರು ವಿಜಯನಗರದ ಬಲಾಡ್ಯರಾದ ಅರಸರೊಡನೆ ಸುಮಾರು ಎರಡು ಶತಮಾನಗಳವರೆಗೆ ಎಡೆಬಿಡದೆ ಕಾದಬೇಕಾಯಿತು. ಈ ದೃಷ್ಟಿಯಿಂದ ನೋಡಲು, ವಿಜಯನಗರ ರಾಜ್ಯವು ಹಿಂದಿನ ರಾಜ್ಯಗಳಷ್ಟು ವಿಸ್ತಾರವನ್ನು ಹೊಂದಿರದಿದ್ದರೂ ಅದಕ್ಕಿಂತ ಹೆಚ್ಚು ಮಹತ್ವವುಳ್ಳದ್ದಾಗಿದೆ. ಶ್ರೀ ವಿದ್ಯಾರಣ್ಯರು ಆಗ ಶೃಂಗೇರಿಯಲ್ಲಿ ಶಂಕರಾಚಾರ್ಯರ ಸ್ಥಾನಾಪನ್ನರಾಗಿದ್ದರು. ಆದರೆ ದೇಶಕ್ಕೆ ಇಂಥ ವಿಪತ್ತು ಬಂದೊದಗಿದಾಗ ಸುಮ್ಮನೆ ಮೂಗು ಹಿಡಿದುಕೊಂಡು ಕುಳ್ಳಿರುವುದು ಮಾತ್ರವೇ ತಮ್ಮ ಕರ್ತವ್ಯವಲ್ಲವೆಂದೂ ಆ ತಮ್ಮ ಧರ್ಮ ರಕ್ಷಣಾರ್ಥವಾಗಿಯೇ ಸ್ವರಾಜ್ಯವನ್ನು ಸ್ಥಾಪಿಸುವುದು ತಮ್ಮ ಆದ್ಯ ಕರ್ತವ್ಯವೆಂದೂ ಆಲೋಚಿಸಿ, ಅವರು ವಿಜಯನಗರದಲ್ಲಿ ರಾಜ್ಯವನ್ನು ಸ್ಥಾಪಿಸಿದರು.

ವಿಜಯನಗರದಲ್ಲಿ ಒಟ್ಟು ಮೂರು ವಂಶಗಳು ಆಳಿದವು. ಮೊದಲನೆಯ ವಂಶವು ಸಂಗಮವಂಶವು, ಇದರಲ್ಲಿ ೯ ಜನ ಅರಸರು ಆಗಿಹೋದರು. ಇವರು ಯಾದವರು. ಇವರ ಕುಲದೇವತೆ ವಿರೂಪಾಕ್ಷನು. ಬುಕ್ಕರಾಯನೇ ಈ ವಂಶದಲ್ಲಿ ಪ್ರಬಲನಾದ ಮೊದಲನೆಯ ರಾಜನು (೧೩೫೪-೧೩೭೭). ವಿಜಯನಗರ ದಲ್ಲಿಯ ಕೋಟೆ ಕೊತ್ತಳಗಳನ್ನು ಕಟ್ಟಿಸಿದವನು ಇವನೇ. ಇವನಿಗೆ “ಭಾಷೆಗೆ ತಪ್ಪುವ ರಾಯರ ಗಂಡ”, “ ಪೂರ್ವ- ಪಶ್ಚಿಮ-ದಕ್ಷಿಣ ಸಮುದ್ರಾಧೀಶ್ವರ” ಎಂಬ ಬಿರುದುಗಳಿದ್ದು ವು. ಈ ಬುಕ್ಕರಾಯನ ಸೊಸೆಯಾದ ಗಂಗಾದೇವಿಯೆಂಬವಳು "ವೀರಕಂಪಣರಾಯ ಚರಿತ"ವೆಂಬ ಅತ್ಯಂತ ಸರಸವಾದ ಸಂಸ್ಕೃತ ಕಾವ್ಯವೊಂದನ್ನು ರಚಿಸಿದ್ದಾಳೆ. ಬುಕ್ಕರಾಯ ಪಟ್ಟಣ ಮುಂತಾದ ಇವನ ಹೆಸರಿನ ಊರುಗಳೂ ಈಗಲೂ ಪ್ರಸಿದ್ದ ವಿರುತ್ತವೆ. ಇವನ ಮಗನಾದ ಹರಿಹರನು ವಿದ್ವಾಂಸರಿಗೆ ಬಹಳ ಆಶ್ರಯ ಕೊಡುತಿದ್ದನು. ಈ ೨ನೆಯ ಹರಿಹರರಾಯನನ್ನು “ಕರ್ನಾಟಕ ವಿದ್ಯಾವಿಲಾಸ” ವೆಂದು ಕರೆಯುತ್ತಿದ್ದರು. ಹರಿಹರನು ೩೦-೮-೧೪೦೪ ನೆಯ ಇಸವಿಯಲ್ಲಿ ಮರಣಹೊಂದಿದನು.

೨ನೆಯ ದೇವರಾಯನಿಗೆ ಪ್ರೌಢದೇವರಾಯನೆಂದೂ ಹೆಸರುಂಟು. ತನ್ನ ಸೈನ್ಯದಲ್ಲಿ ಮುಸಲ್ಮಾನರನ್ನಿಟ್ಟುಕೊಂಡು, ತನ್ನ ಸೈನಿಕರಿಗೆ ಅವರ ಯುದ್ಧಕಲೆಯನ್ನು ಕಲಿಸಿದನು. ಈತನು ೨೪-೫-೧೪೪೬ರಲ್ಲಿ ಸತ್ತನು. ಇವನ ತರುವಾಯ ಈ ಸಂಗಮವಂಶವು ಕುಗ್ಗಿತು. ಮುಂದೆ ವಿಜಯನಗರದ ೨ನೆಯ ವಂಶವು ಏಳಿಗೆಗೆ ಬಂದಿತು.

ಸಂಗಮ ಮನೆತನದ ಕೊನೆಯ ಆರಸನಾದ ವಿರೂಪಾಕ್ಷನ ಮುಖ್ಯ ಸರದಾರನಾದ ಸಾಳ್ವನರಸಿಂಹನು ವಿಜಯ ನಗರದ ಪಟ್ಟವನ್ನು ಸೆಳೆದುಕೊಂಡು ಅರಸನಾದನು. ಮುಸಲ್ಮಾನರಿಗೂ, ವಿಜಯನಗರದ ಅರಸರಿಗೂ ಕೃಷ್ಣಾ-ತುಂಗಭದ್ರಾ ನದಿಗಳ ನಡುವಿನ ಸೀಮೆಗಾಗಿ ಆಗಾಗ ಯುದ್ಧಗಳಾಗುತ್ತಿದ್ದುವು. ಈ ಯುದ್ಧಗಳಲ್ಲಿ ಸಾಳ್ವ ನರಸಿಂಹನು ಪರಾಕ್ರಮವನ್ನು ತೋರಿಸಿ ಅತ್ಯಂತ ಪ್ರಬಲನಾಗಿದ್ದನು. ಆದರೆ ಈತನ ವಂಶಜರು ಬಹಳ ದಿವಸ ಆಳಲಿಲ್ಲ. ಈತನ ಮಗನಾದ ಇಮ್ಮಡಿ ನರಸಿಂಹ ನನ್ನು ನರಸ ಅಥವಾ ನರಸಿಂಗನೆಂಬ ಅವನ ಸೇನಾಧಿಪತಿಯು ೧೪೯೬ನೆಯ ಇಸ್ವಿಯಲ್ಲಿ ಕೊಂದು ಹಾಕಿದಂತೆ ತೋರುತ್ತದೆ.

ಈ ನರಸನು ತುಳವನು; ಬಲು ಶೂರನು, ಈತನು ಚೇರ-ಚೋಳ- ಪಾಂಡ್ಯ ದೇಶಗಳನ್ನು ಗೆದ್ದನು. ಈತನ ತರುವಾಯ ಈತನ ಮೂರು ಮಂದಿ ಮಕ್ಕಳು ಒಬ್ಬರ ಹಿಂದೊಬ್ಬರು ಪಟ್ಟವೇರಿದರು. ಆದರೆ ಅವರಲ್ಲಿ ೨ನೆಯವನಾದ ಕೃಷ್ಣ ದೇವರಾಯನೇ ಅತ್ಯಂತ ಪ್ರತಾಪಶಾಲಿಯು, ಈತನು ಪಟ್ಟವೇರಿದಕೂಡಲೇ ಮುಸಲ್ಮಾನರೊಡನೆ ಕಾಳಗಕ್ಕೆ ನಿಂತನು. ಈತನ ಆಳಿಕೆಯಲ್ಲಿ ಮುಸಲ್ಮಾನರು ಇವನೊಡನೆ ಅನೇಕ ಕಾಳಗ ಗಳನ್ನು ಮಾಡಿದರೂ, ಅವರಿಗೆ ಒಂದರಲ್ಲಿಯೂ ಜಯವು ಸಿಕ್ಕಲಿಲ್ಲ. ಕೃಷ್ಣರಾಯನು ಮಹಾ ಪರಾಕ್ರಮಿಯಾಗಿದ್ದು ದಲ್ಲದೆ, ವಿದ್ಯೆ- ಕಲಾಕೌಶಲ್ಯ-ಔದಾರ್ಯ ಗಳಲ್ಲಿಯೂ ಬಹು ವಿಖ್ಯಾತನಾಗಿದ್ದನು. ಈತನು ಸ್ವತಃ ತೆಲುಗು ಭಾಷೆಯಲ್ಲಿ ಗ್ರಂಥವನ್ನು ಬರೆದಿರುವನು. ಇವನಿಗೆ ಆಂಧ್ರಭೋಜನೆಂದು ಕರೆಯುತ್ತಿದ್ದರು. ಇವನು ತೆಲುಗು ಮನುಷ್ಯನೆಂದು ಕೆಲವರ ಕಲ್ಪನೆ. ಆದರೆ, ಇದು ತಪ್ಪೆಂದು ತೋರುತ್ತದೆ. ಇವನು ತೆಲುಗು ಭಾಷೆಯಲ್ಲಿ 'ಅಮುಕ್ತ ಮಾಲ್ಯದ' ಅಥವಾ 'ವಿಷ್ಣು ಚಿತ್ತೀಯ' ಎಂಬ ಗ್ರಂಥವನ್ನು ರಚಿಸಿರುವನೆಂಬುದರಿಂದ ಇವನು ತೆಲುಗು ಮನುಷ್ಯನೆಂದು ಜನರು ಊಹಿಸುವಂತೆ ತೋರುತ್ತದೆ. ಆದರೆ ಆ ಪುಸ್ತಕವು ಏಕೆ ಬರೆಯಲ್ಪಟಿತೆಂಬುದಕ್ಕೆ ಅದರ ಪ್ರಾರಂಭದಲ್ಲಿ ಕೊಟ್ಟ ಕಥೆಯನ್ನು ಓದಿದರೆ ಅವನು ನಿಜವಾಗಿಯೇ ಕನ್ನಡ ಮನುಷ್ಯನೆಂದು ಹೇಳಲಿಕ್ಕೆ ಆಸ್ಪದವಿದೆ.

ಕೃಷ್ಣರಾಯನು ಶ್ರೀಕುಲವೆಂಬ ಗ್ರಾಮಕ್ಕೆ ಹೋದಾಗ ಅಲ್ಲಿಯ ಆಂಧ್ರ ವಿಷ್ಣು ದೇವರು ಏಕಾದಶಿಯ ದಿವಸ ಆ ರಾಜನ ಕನಸಿನಲ್ಲಿ ಬಂದು, ಆತನಿಗೆ ತೆಲುಗು ಭಾಷೆಯಲ್ಲಿ ಒಂದು ಕಾವ್ಯವನ್ನು ಬರೆದು ಅದನ್ನು ತಿರುಪತಿಯ ಶ್ರೀ ವೆಂಕಟರಮಣ ದೇವರಿಗೆ ಸಮರ್ಪಿಸಲಿಕ್ಕೆ ಹೇಳಿದನಂತೆ. ಆಗ ತೆಲುಗು ಭಾಷೆಯಲ್ಲಿಯೇ ಈ 'ಕನ್ನಡರಾಯ'ನು ಏಕೆ ಗ್ರಂಥವನ್ನು ಬರೆಯಬೇಕೆಂಬುದಕ್ಕೆ ಆ ದೇವರು ಕೆಲವು ಕಾರಣಗಳನ್ನು ಹೇಳಿದನು. ಅವು ಯಾವುವೆಂದರೆ:- (೧) ಇದು ತೆಲುಗುದೇಶ, (೨) ನಾನು ತೆಲುಗು ದೇವರು, (೩) ತೆಲುಗು ಭಾಷೆ ಸಾಮಾನ್ಯ ಭಾಷೆಯಲ್ಲ, (೪) ಅನೇಕ ದೇಶಭಾಷೆಗಳನ್ನು ಬಲ್ಲವನಾದ ನಿನಗೆ ತೆಲುಗು ಭಾಷೆಯು ಲೇಸಾದ ಭಾಷೆಯೆಂಬುದು ಗೊತ್ತುಂಟು. ಆದರೆ, ಇಷ್ಟರಿಂದ ಆತನ ಮಾತೃ ಭಾಷೆಯು ತೆಲುಗು ಆಗಿತ್ತೆಂದು ಊಹಿಸಲಾಗದು, ತದ್ವಿರುದ್ದವಾಗಿ (೧) ಆ ತೆಲುಗು ದೇವರು ಆತನಿಗೆ 'ಕನ್ನಡರಾಯ' ನೆಂದು ಕರೆದಿರುವನು, (೨) ಕೃಷ್ಣರಾಯನು ತೆಲುಗು ಭಾಷೆಯವನೇ ಆಗಿದ್ದರೆ ಆತನಿಗೆ ತೆಲುಗು ಭಾಷೆಯಲ್ಲಿಯೇ ಗ್ರಂಥವನ್ನು ಬರೆಯಬೇಕೆಂದು ಬೇರೆ ಹೇಳುವ ಪ್ರಮೇಯವಿರಲಿಲ್ಲ, (೩) ವಿಜಯನಗರ ರಾಜ್ಯವು ಬಹುತರವಾಗಿ ಕನ್ನಡ ರಾಜ್ಯವು, (೪) ರಾಜಧಾನಿಯಾದ ವಿಜಯನಗರ ಪಟ್ಟಣದ ಮುಖ್ಯ ಭಾಷೆ ಕನ್ನಡವು, (೫) ಕೃಷ್ಣರಾಯನಿಗೆ 'ಕನ್ನಡ ರಾಜ್ಯ ರಮಾರಮಣ’ ಎಂದು ಬಿರುದಿತ್ತು. ಇವೇ ಮುಂತಾದ ಕಾರಣಗಳ ಮೂಲಕ ಆ ರಾಯನ ಮಾತೃಭಾಷೆಯು ಕನ್ನಡವೇ ಆಗಿತ್ತೆಂದು ಊಹಿಸಲಿಕ್ಕೆ ಬಲವಾದ ಆಸ್ಪದವುಂಟಾಗಿದೆ. ಇವನ ಕಾಲಕ್ಕೆ ವಿಜಯನಗರದ ಸಾಮ್ರಾಜ್ಯವು ಪರಮಾವಧಿಯ ಘನತೆಗೇರಿತ್ತು. ಆದರೆ ನಮ್ಮ ಮಿಕ್ಕ ರಾಜ್ಯಗಳಂತೆ ಇದಕ್ಕೂ ಮುಂದೆ ಬಲಾಡ್ಯರಾದ ರಾಜರು ದೊರೆಯದುದರಿಂದ, ಇದು ಒಮ್ಮೆಲೆ ನೆಲಕ್ಕೆ ಕುಕ್ಕರಿಸಿತು. ಈ ಕೃಷ್ಣರಾಜನು ಅತ್ಯಂತ ಉದಾತ್ತ ಗುಣಗಳುಳ್ಳವನಾದುದರಿಂದ ತನ್ನ ದೇಶದಲ್ಲಿಯ ಮುಸಲ್ಮಾನ ಪ್ರಜೆಗಳು ತನಗೆ ಸಲಾಂ ಮಾಡಲಿಕ್ಕೆ ಹಿಂದುಮುಂದೆ ನೋಡಿಯಾರೆಂದು ಬಗೆದು, ತನ್ನಿದಿರಿಗೆ ಒಂದು ಕುರಾನವನ್ನು ಇಟ್ಟು, ಅದಕ್ಕೆ ಪೂಜ್ಯ ಭಾವವನ್ನು ತೋರಿಸಿದರೆ ಸಾಕೆಂದು ಹೇಳಿದ್ದನು, ಈತನ ದರಬಾರಿನಲ್ಲಿ ಅಷ್ಟ ದಿಗ್ಗಜಗಳೆಂಬ ಎಂಟು ಮಂದಿ ಮಹಾ ಪಂಡಿತರಿದ್ದರು. ತೆನ್ನಾಲಿ ರಾಮಕೃಷ್ಣನೂ, ಅಪ್ಪಯ್ಯ ದೀಕ್ಷಿತರೂ ಅವರೊಳಗಿನವರೇ. ಈತನ ಕಾಲಕ್ಕೆ ಪರದೇಶಿಯ ಪ್ರವಾಸಿಕರು ವಿಜಯನಗರದ ವೈಭವವನ್ನು ಬಲು ಸುಂದರವಾಗಿ ವರ್ಣಿಸಿದ್ದಾರೆ.  ಆದರೆ ಅವನ ತರುವಾಯ ವಿಜಯನಗರದ ರಾಜ್ಯವು ಬಹಳ ದಿವಸ ಬಾಳಲಿಲ್ಲ. ಕಡೆಯಲ್ಲಿ, ಸದಾಶಿವರಾಯನ ಆಳಿಕೆಯಲ್ಲಿ ಕೃಷ್ಣ ದೇವರಾಯನ ಅಳಿಯನಾದ ರಾಮರಾಜನೆಂಬವನ ಕೈಯಲ್ಲಿ ರಾಜ್ಯ ಸೂತ್ರಗಳಿದ್ದುವು. ವಿಜಾಪುರ, ಗೋವಳ ಕೊಂಡ, ಅಹಮ್ಮದನಗರ, ಬೀದರ, ಈ ನಾಲ್ಕು ರಾಜ್ಯಗಳ ಬಾದಶಹಗಳೂ ಒಕ್ಕಟ್ಟಾಗಿ ಒಳಸಂಚು ಮಾಡಿ ಅವನೊಡನೆ ಯುದ್ಧಕ್ಕೆ ಅನುವಾದರು. ರಾಮರಾಜನು ಅತ್ಯಂತ ಶೂರನಾಗಿದ್ದನು, ಅವನಿಗೆ ಆಗ ೯೬ ವರುಷವಾಗಿತ್ತು. ಇಂಥ ಮುಪ್ಪಿನ ಮುದುಕನಾದರೂ ಅವನು ೩೦ ವರುಷದ ತರುಣನಂತೆ ಉತ್ಸಾಹವುಳ್ಳವನಾಗಿದ್ದನಂತೆ ! ಅವನು ತನ್ನ ದೊಡ್ಡ ಸೈನ್ಯದೊಂದಿಗೆ ತಾಳಿಕೋಟೆಯಲ್ಲಿ ಮುಸಲ್ಮಾನರ ಒಕ್ಕಟ್ಟಾದ ಮಹಾಸೈನ್ಯಕ್ಕೆ ಇದಿರಾದನು. ಅಲ್ಲಿ ೧೫೬೫ ನೆಯ ಇಸವಿಯ ಜನವರಿ ೨೩ ರಲ್ಲಿ ಅತ್ಯಂತ ತುಮುಲ ಕಾಳಗವೆಸಗಿತು. ರಾಮರಾಜನ ಪಕ್ಷದ ವೆಂಕಟಾದ್ರಿಯೂ, ಇಳೋತ್ತಮ ರಾಜನೂ ಬಹು ಪರಾಕ್ರಮದಿಂದ ಹೋರಾಡಿ ಹಗೆಗಳನ್ನು ಓಡಿಸುವ ಸಂಧಿಯಲ್ಲಿ, ರಾಮರಾಜನು ತಾನು ಮೇನೆಯಲ್ಲಿ ಕುಳಿತು ತನ್ನ ಸೈನ್ಯದವರಿಗೆ ಧೈರ್ಯ ಕೊಡುವುದಕ್ಕಾಗಿ ತಿರುಗಾಡುತ್ತಿದ್ದನು. ಅಷ್ಟರೊಳಗೆ ಶತ್ರುಗಳ ಮದ್ದಾನೆ ಮೈಮೇಲೆ ಬಿದ್ದುದನ್ನು ನೋಡಿ ಬೋಯಿಗಳು ಅಂಜಿ ತಮ್ಮ ಜೀವದಾಶೆಯಿಂದ ಮೇನೆಯನ್ನು ಚೆಲ್ಲಿ ಓಡಿ ಹೋಗಲಾಗಿ, ನಿಜಾಮ ಶಹನು ರಾಮರಾಜನನ್ನು ಸೆರೆಹಿಡಿದು ಅಲ್ಲಿಯೇ ಅವನ ತಲೆಯನ್ನು ಕೊಯ್ದು ಭಲ್ಯಕ್ಕೆ ಚುಚ್ಚಿ ಸೈನ್ಯದೊಳಗೆ ತಿರುಗಿಸಿದನು. ಅದನ್ನು ನೋಡಿ ವಿಜಯನಗರದ ದಂಡಿನವರು ಧೈರ್ಯಗುಂದಿ ಬೆನ್ನು ತೋರಿಸಿದರು. ಆಗ ಮುಸಲ್ಮಾನರು ಮಾಡಿದ ಕೊಲೆಗೆ ಅಳವಿಲ್ಲ; ರಕ್ತದ ಕಾಲುವೆಗಳು ಹರಿದುವು. ಈ ಮೇರೆಗೆ ಜಯವಾದ ಕೂಡಲೆ ಮುಸಲ್ಮಾನರು ನೆಟ್ಟಗೆ ವಿಜಯನಗರಕ್ಕೆ ಸಾಗಿ, ತಮಗೆ ಜಯವು ಸಿಕ್ಕೇ ಸಿಕ್ಕುವುದೆಂಬ ಭರವಸದಿಂದ ಮೈ ಮರೆತಿದ್ದ ಪಟ್ಟಣದ ನಿವಾಸಿಗಳನ್ನಲ್ಲಿ ಕೈಗೆ ಸಿಕ್ಕಿದಂತೆ ಕೊಂದು, ಪಟ್ಟಣವನ್ನು ಯಥೇಚ್ಚವಾಗಿ ಸುಲಿಗೆಮಾಡಿದರು. ಈ ಮೇರೆಗೆ ಸುಮಾರು ೨೩೦ ವರ್ಷ ಘನತೆಯಿಂದ ಮೆರೆದ ವೈಭವ ಸಂಪನ್ನರಾಷ್ಟ್ರವು ಆಕಸ್ಮಿಕ ಕಾರಣದಿಂದ ಅರ್ಧ ನಿಮಿಷದಲ್ಲಿ ಮಾಯವಾಯಿತು.

ನಮ್ಮ ಕರ್ನಾಟಕದ ರಾಜರನ್ನೂ, ಪಟ್ಟಣಗಳನ್ನೂ ಕುರಿತು ಪರದೇಶೀಯ ಪ್ರವಾಸಿಕರೂ ಪ್ರಾಚೀನಕಾಲದ ಕವಿಗಳೂ ಮಾಡಿದ ವರ್ಣನೆಗಳನ್ನು ಇಲ್ಲಿ ಕೊಡಲಾಗಿದೆ. ಕರ್ನಾಟಕದಲ್ಲಿ ಎಲ್ಲಕ್ಕೂ ಹಳೆಯ ಅರಸು ಮನೆತನವು ಕದಂಬರದು. ಇವರ ರಾಜಧಾನಿಯು ಬನವಾಸಿ. ಕದಂಬರಾಳಿದ ದೇಶವನ್ನು ಬನವಾಸಿ ದೇಶವೆಂದೂ ಕರೆಯುತ್ತಿದ್ದರು. ಈ ಬನವಾಸಿ ದೇಶವನ್ನು ಕನ್ನಡ ಭಾಷೆಯ ಪ್ರಖ್ಯಾತ ಕವಿಯಾದ ಆದಿಪಂಪನು ತನ್ನ ಭಾರತದಲ್ಲಿ ಈ ಬಗೆಯಾಗಿ ವರ್ಣಿಸಿರುವನು.

 
ತೆಂಕಣ ಗಾಳಿ ಸೋಂಕಿದೊಡಮೊಳ್ಳುತಿಗೆಯೊಡಮಿಪನಾಳ ಗೇ |
ಯಂ ಕಿವಿವೊಕ್ಕಡಂ ಬಿರಿದ ಮಲ್ಲಿಗೆಗಂದೊಡಮಾದ ಕೆಂದಂ ||
ಪಂ ಕೆಳೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ |
ರಂಕುಸವಿಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ ||

ಬಾದಾಮಿಯ ಚಾಲುಕ್ಯವಂಶದ ಪ್ರಖ್ಯಾತ ರಾಜನಾದ ೨ನೆಯ ಪುಲಿಕೇಶಿಯ ಆಳಿಕೆಯಲ್ಲಿ ಹುಎನ್ ತ್ಸಾಂಗ ಎಂಬೊಬ್ಬ ಚೀನ ಪ್ರವಾಸಿಯು, ೬೨೯ ರಿಂದ ೬೪೫ ನೆಯ ಇಸವಿಯವರೆಗೆ ಹಿಂದುಸ್ಥಾನದಲ್ಲೆಲ್ಲಾ ಸಂಚರಿಸಿದನು. ಆತನು ಪುಲಿಕೇಶಿಯ ರಾಜ್ಯವನ್ನೂ ಪ್ರಜೆಗಳನ್ನೂ ಕುರಿತು ಬರೆದಿರುವುದೇನೆಂದರೆ…’ ಈ ಮಹಾರಾಷ್ಟ್ರ (ದೊಡ್ಡ ರಾಷ್ಟ) ದ ರಾಜ್ಯದ ಸುತ್ತಳತೆಯು ಸುಮಾರು ೬೦೦೦ ಲಾಯಿ (೧೨೦೦ ಮೈಲು) ಉಂಟು. ರಾಜಧಾನಿಯು ಪಶ್ಚಿಮಭಾಗದಲ್ಲಿ ಒಂದು ದೊಡ್ಡ ಹೊಳೆಯ ಸಮೀಪದಲ್ಲಿ ಇರುತ್ತದೆ. (ಇದು ಬಾದಾಮಿಯೇ ಎಂದು ಡಾ. ಬರ್ಗೆಸ ಇವರು ಅಭಿಪ್ರಾಯಪಟ್ಟಿರುತ್ತಾರೆ. ಮಲಪ್ರಭೆಯೇ ಆ ಹೊಳೆಯು). ಭೂಮಿಯು ಕಸುವುಳ್ಳದ್ದೂ ಫಲವತ್ತಾಗಿಯೂ ಇದ್ದು ಅದರಲ್ಲಿ ಧಾನ್ಯಗಳು ವಿಪುಲವಾಗಿ ಬೆಳೆಯುತ್ತವೆ. ಹವೆಯು ಉಷ್ಣ; ಜನರು ನಿಷ್ಕಪಟಿಗಳೂ ಸಜ್ಜನರೂ ಸತ್ಯವಂತರೂ ಆಗಿರುತ್ತಾರೆ; ಇವರ ನಿಲುವಿಕೆ ಎತ್ತರ; ನಡತೆಯಲ್ಲಿ ಛಲವೂ ಅಭಿಮಾನವೂ ಹೆಚ್ಚು ; ಮಾಡಿದ ಉಪಕಾರವನ್ನೆಮದಿಗೂ ಮರೆಯರು. ಅಪಕಾರ ಮಾಡಿದವರನ್ನು ಮಾತ್ರ ಮೆಟ್ಟದೆ ಬಿಡರು. ಅಪಮಾನವನ್ನು ಪರಿಹರಿಸುವುದಕ್ಕಾಗಿ ತಮ್ಮ ಜೀವವನ್ನೂ ಲೆಕ್ಕಿಸರು. ಸಂಕಟಕಾಲದಲ್ಲಿ ಮರೆ ಹೊಕ್ಕವರನ್ನು ಸಂರಕ್ಷಿಸುವುದಕ್ಕಾಗಿ ಯತ್ನಿಸುವಾಗ ಇವರು ತಮ್ಮನ್ನೂ ಕೂಡ ಮರೆತು ಬಿಡುವರು. ಹಗೆ ತೀರಿಸುವುದಿದ್ದಾಗ ಇವರು ಮೊದಲು ಆ ಹಗೆಗೆ ಸೂಚನೆಯನ್ನು ಕೊಡಲಿಕ್ಕೆ ಎಂದೂ ಮರೆಯುವುದಿಲ್ಲ. ಆ ಸೂಚನೆಯನ್ನು ಕೊಟ್ಟ ಬಳಿಕ ಇಬ್ಬರೂ ಜಗಳವಾಡತಕ್ಕವರು ಢಾಲು- ಭಾಲೆಗಳನ್ನು ತೆಗೆದುಕೊಂಡು, ಜಗಳಕ್ಕೆ ಹೊರಡುವರು. ರಣಭೂಮಿಯಿಂದ ಓಡಿಹೋಗುವವರನ್ನು ಇವರು ಬೆನ್ನಟ್ಟುವರು. ಆದರೆ ಮೊರೆ ಹೊಕ್ಕವರನ್ನು ಕಡಿಯುವುದಿಲ್ಲ. ದಳವಾಯಿಯು ಯುದ್ದದಲ್ಲಿ ಸೋತುಬಂದರೆ, ಅರಸನು ಅವನಿಗೆ ದೇಹ ದಂಡನೆಯನ್ನು ಮಾಡುವುದಿಲ್ಲ, ಸೀರೆಯನ್ನುಡಿಸಿ ಮೆರೆಸುವನು. ಅದರಿಂದ ಆ ಸೋತ ದಳವಾಯಿಯು ತಾನಾಗಿಯೇ ಪ್ರಾಣಕೊಡುವನು. ಈ ಸಂಸ್ಥಾನದಲ್ಲಿ ಎದೆಗುಂದದ ವೀರಾಳುಗಳು ಸಾವಿರಾರು ಮಂದಿಯುಂಟು....... ಇವರು ಮುಂಭಾಗದಲ್ಲಿಯ ರಣಭೇರಿಯ ನಾದವನ್ನನುಸರಿಸಿ ಹೆಜ್ಜೆಯಿಕ್ಕುವರು. ಸಾವಿರಾರು ಮದ್ದಾನೆಗಳಿಂದಲೂ ಕಾಲಾಳುಗಳಿಂದಲೂ ಕೂಡಿದ ಈ ಸೇನಾ ಸಮೂಹವನ್ನು ಇದಿರುವ ಎದೆ ಯಾರಿಗುಂಟು? ……’

ಚಾಲುಕ್ಯರ ಅನಂತರದಲ್ಲಿ ರಾಷ್ಟ್ರಕೂಟವಂಶದ ರಾಜಧಾನಿಯಾದ ಮಳಖೇಡ ಪಟ್ಟಣದ ವರ್ಣನೆಯನ್ನು ಇಲ್ಲಿ ಕೊಡುವೆವು, ವರ್ಧಾ ಮತ್ತು ಕರ್ಹಾಡಗಳಲ್ಲಿ ಸಿಕ್ಕಿದ ತಾಮ್ರ ಶಾಸನಗಳಲ್ಲಿ ಈ ದೊರೆತ ಶ್ಲೋಕಗಳ ಭಾವಾರ್ಥ ಈ ರೀತಿ ಇದೆ.

"ತನ್ನ ಮಹಾಸೈನ್ಯದಿಂದ ಅಹಿರಾಜನನ್ನು ಹಣ್ಣಿಗೆ ತಂದಂಥ ಮತ್ತು ನೃಪತಿಗಳಿಂದ ನಮಿಸಲ್ಪಡುವಂಥ ಅವನ ಮಗ ನಾದ ನೃಪತುಂಗದೇವನು- ದೇವತೆಗಳ ಗರ್ವವನ್ನು ಖಂಡಿಸುವ ಉದ್ದೇಶದಿಂದಲೋ ಏನೋ, ತನ್ನ ರಾಜಧಾನಿಯಾದ ಮಾನ್ಯಖೇಟ (ಮಳಖೇಡ) ಪುರವನ್ನು ದೇವತೆಗಳ ಅಮರಾವತಿಯ ಪಟ್ಟಣವನ್ನು ಕೂಡ ನಾಚಿಸುವಂತೆ ಬೆಳಿಸಿದನು”

ಭಾರತದ ಪ್ರಸಿದ್ಧ ಪುರಾತನ ಕಲೆ, ಶಿಲ್ಪಶಾಸ್ತ್ರ, ಕಟ್ಟಡಗಳ ಬಗ್ಗೆ ಪಾಂಡಿತ್ಯ ಹೊಂದಿದ್ದ ಶ್ರೀ ಇ.ಬಿ.  ಹ್ಯಾವೆಲ್ ರವರು ಈ ರೀತಿ ಹೇಳಿದ್ದಾರೆ.

‘ಹಿಂದೂದೇಶದ ಕಟ್ಟಡಗಳಲ್ಲಿ ವಿಶೇಷವಾಗಿ ಆಶ್ಚರ್ಯ ವಡತಕ್ಕ ಸಂಗತಿಯೇನೆಂದರೆ - ಚಿತ್ರಗಳಲ್ಲಿ ಅತಿಸೂಕ್ಷವಾದ ಕೆತ್ತಿಗೆಯ ಕೆಲಸವು ಕಂಡುಬರುತ್ತದೆ, ಆದರೆ ಈ ಕೆತ್ತಿಗೆಯ ಕೆಲಸವು ಆಯಾ ಚಿತ್ರಕ್ಕೆ ಒಪ್ಪುವಂತೆ, ಯೋಗ್ಯವಾದ ಸ್ಥಳದಲ್ಲಿಯೇ ಕೊರೆಯಲ್ಪಟ್ಟಿರುವುದರಿಂದ ಆ ಚಿತ್ರದ ಒಟ್ಟು ಸೌಂದರ್ಯಕ್ಕೆ ಅದರಿಂದ ತಿಲ ಪ್ರಾಯವೂ ಕುಂದುಂಟಾಗಿರುವುದಿಲ್ಲ. ಹೀಗೆ ಮಾಡುವುದರಲ್ಲಿ ಅವರು ತೋರಿಸಿದ ಚಾತುರ್ಯವೂ ಕಲ್ಪಕತೆಯ ಉತ್ತಮ ನಾಗಿವೆ.

ದಕ್ಷಿಣ ಹಿಂದುಸ್ಥಾನದಲ್ಲಿಯ ಪರಂಪರಾಗತವಾದ ಕೈಗಾರಿಕೆಯ ಕೆಲಸಗಳು ಉಚ್ಚ ಸುಧಾರಣೆಯ ಉತ್ತಮವಾದ ಸಾಕ್ಷಿಗಳಾಗಿವೆ. ಆ ಬಗ್ಗೆ ಇಡೀ ಜಗತ್ತೇ ಅವುಗಳಿಗೆ ಅತ್ಯಂತ ಋಣಿಯಾಗಿದೆ. ಪ್ರಾಚೀನ ಸುಧಾರಣೆಯಲ್ಲಿಯೇ ಆಗಲಿ, ಅರ್ವಾಚೀನ ಸುಧಾರಣೆಯಲ್ಲಿಯೇ ಆಗಲಿ, ಅಷ್ಟೊಂದು ಉನ್ನತವಾದ ಸಂಸ್ಕೃತಿಯನ್ನು ಬೇರಾವುದೂ ಹುಟ್ಟಿಸಿರುವುದಿಲ್ಲ; ಧರ್ಮವನ್ನು ಆಯುಷ್ಯದ ಇತಿ ಕರ್ತವ್ಯತೆಯಾಗಿ ಮಾಡುವುದರಲ್ಲಿ ಅದರಷ್ಟು ಸಿದ್ಧಿಯನ್ನು ಬೇರಾವ ಸುಧಾರಣೆಯೂ ಪಡೆದಿರುವುದಿಲ್ಲ; ಅಲ್ಲದೆ, ಮಾನವ ಜ್ಞಾನ ಭಾಂಡಾರಕ್ಕೆ ಅದರಿಂದಾದಷ್ಟು ಸಹಾಯವು ಬೇರಾವುದರಿಂದಲೂ ಆಗಿರುವುದಿಲ್ಲ.

ಇಂತಹುದೇ ಖ್ಯಾತಿಯ ರಸ್ಕಿನ್ ರವರು ‘ಶಿಲ್ಪ ಕಲೆಯೆಲ್ಲವೂ ರಾಷ್ಟ್ರೀಯ ಜೀವನದ ಮತ್ತು ರಾಷ್ಟ್ರ ಸ್ವಭಾವದ ಆದರ್ಶವೇ ಆಗಿರುತ್ತದೆ.’ ಎಂದಿದ್ದಾರೆ.

ಜೈನ ಮತ್ತು ಬುದ್ದರ ಕಾಲದಲ್ಲಿ ವಿಹಾರಗಳನ್ನೂ ಚೈತ್ಯಾಲಯಗಳನ್ನೂ ಕಲ್ಲುಗಳಲ್ಲಿ ಕೊರೆಯುವ ಸಂಪ್ರದಾಯವಿತ್ತು. ಈ ಕೊರೆದ ಗುಡಿಗಳು ನಮ್ಮ ದೇಶದಲ್ಲಿ ವಿಪುಲವಾಗಿರುವುವು. ಹಿಂದುಸ್ಥಾನದಲ್ಲಿರುವ ಈ ತರದ ಗುಡಿಗಳಲ್ಲಿ ಹತ್ತರಲ್ಲಿ ಒಂಬತ್ತು ಪಾಲು ಗುಡಿಗಳು ಈ ಪಶ್ಚಿಮ ಹಿಂದುಸ್ಥಾನದಲ್ಲಿಯೇ ಇರುವುವು. ಪಶ್ಚಿಮ ಘಟ್ಟದ ಮಾರ್ಗಗಳ ನೆರೆಯಲ್ಲಿಯ ಗುಡ್ಡದ ಸಾಲುಗಳಲ್ಲಿ ಇಂಥ ಗುಡಿಗಳು ನೂರಾರು ಇರುವುವು. ನಾಶಿಕ, ಕಾರ್ಲೆ, ಅಜಂತಾ, ಕಾನ್ಹೆರಿ, ಭಾಜಾ, ನಾನಘಾಟ ಕೂಡ, ಜುನ್ನರ ಮುಂತಾದ ಸ್ಥಳಗಳಲ್ಲಿ ಈ ಮಾದರಿಯ ಗುಡಿಗಳು ತುಂಬಿವೆ. ಈ ತರದ ಹಲವು ಕೊರೆದ ಗುಡಿಗಳಲ್ಲಿ ಲಿಪಿಗಳೂ ದೊರೆಯುತ್ತವೆ. ಕಾರ್ಲೆ ಮತ್ತು ನಾಸಿಕ ಗುಡಿಗಳೇ ಅತ್ಯಂತ ಪ್ರಾಚೀನವಾದುವುಗಳು.

ಇವುಗಳ ತರುವಾಯದ ಗುಡಿಗಳೆಂದರೆ, ಇದೇ ಗವಿಗಳ ಮಾದರಿಯ ಮೇಲೆ ಕಟ್ಟಿದ ಗುಡಿಗಳು. ಈ ತರದ ಗುಡಿಗಳು ಐಹೊಳೆ, ಪಟ್ಟದಕಲ್ಲು, ಬಾದಾಮಿಗಳಲ್ಲಿ ದೊರೆಯುತ್ತವೆ. ಇವು ಪೂರ್ಣ ಗುಡಿಗಳೂ ಅಲ್ಲ, ಗವಿಗಳೂ ಅಲ್ಲ. ಈ ಅಖಂಡವಾದ ಕಲ್ಲುಗುಡಿಗಳಲ್ಲಿ ಕಾರ್ಲೆ, ಕಾನ್ಹೇರಿ ಅಜಂತಾ ಇವುಗಳಲ್ಲಿಯ ಹಲವು ಗುಡಿಗಳು ನಮ್ಮ ಕರ್ನಾಟಕ ರಾಜರ ಆಳಿಕೆಯಲ್ಲಿಯೇ ಕೊರೆಯಲ್ಪಟ್ಟಿವೆ. ಕಾರ್ಲೆಯೊಳಗಿನ ದೊಡ್ಡ ಸುಂದರವಾದ ಚೈತ್ಯಾಲಯವನ್ನು ಕದಂಬ ಅರಸರ ಆಳಿಕೆಯಲ್ಲಿ ಧನಶೆಟ್ಟಿಯೆಂಬೊಬ್ಬ ಧನವಂತನು ಕಟ್ಟಿಸಿದನಂತೆ.

ಪೂರ್ವಚಾಲುಕ್ಯರು ಪ್ರಾರಂಭಿಸಿದ ಶಿಲ್ಪಶಾಸ್ತ್ರವು ಹೊಯ್ಸಳ ಬಲ್ಲಾಳರ ಕಾಲಕ್ಕೆ ಪರಿಣತಿಯನ್ನು ಹೊಂದಿತೆಂದು ಹೇಳಬಹುದು. ಹಳೇಬೀಡು ಅಥವಾ ದ್ವಾರಸಮುದ್ರ ಮತ್ತು ಬೇಲೂರಿನಲ್ಲಿಯ ದೇವಾಲಯಗಳೆಂದರೆ ಇಡೀ ಹಿಂದುಸ್ಥಾನದಲ್ಲಿ ಅಲ್ಲದೆ ಇಡೀ ಪೃಥ್ವಿಯಲ್ಲಿ ಇರುವ ಗುಡಿಗಳಲ್ಲಿ ಅತ್ಯಂತ ಸುಂದರವಾದವುಗಳೆಂದು ವರ್ಣಿಸಲಾಗಿದೆ.  ಡಾ| ಫರ್ಗ್ಯುಸನ್ನನು ಇವುಗಳ ವಿಷಯವಾಗಿ ಬರೆದಿರುವುದೇನೆಂದರೆ -

‘… ಹಿಂದುಸ್ಥಾನದಲ್ಲಿ, ಸೃಷ್ಟಿಯಲ್ಲಿಯ ಮಿಕ್ಕ ಗುಡಿಗಳನ್ನು ಅತ್ಯಂತ ಸೂಕ್ಷವಾದ ಕೆಲಸದಲ್ಲಿ ಮೀರಿಸುವಂಥ ಅನೇಕ ಗುಡಿಗಳುಂಟು. ಅವುಗಳಲ್ಲಿಯೂ ಬೇಲೂರ ಮತ್ತು ಹಳೇಬೀಡುಗಳಲ್ಲಿಯ ಗುಡಿಗಳೇ ಶ್ರೇಷ್ಠವಾದುವುಗಳು. ಇಷ್ಟು ಕುಸುರಿನ ಕೆಲಸವು ಸೃಷ್ಟಿಯಲ್ಲಿಯ ಮಿಕ್ಕ ಯಾವ ಗುಡಿಯಲ್ಲಿಯೂ ಕಂಡುಬರುವುದಿಲ್ಲ.

ಹಂಪೆ ಅಥವಾ ವಿಜಯನಗರವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು, ಅಲ್ಲಿ ಸುಮಾರು ೨೦೦೦ ಗುಡಿಗಳಿದ್ದುವಂತೆ ! ಆ ಪಟ್ಟಣದೊಳಗಿನ ಅತ್ಯಂತ ಪ್ರಸಿದ್ಧವಾದ ವಿಜಯ ವಿಠಲ ಗುಡಿಯು ವೇರಳದ ಕೈಲಾಸ ಗುಡಿಯನ್ನು ಹೋಲುತ್ತದೆ. ಈ ದೇವಾಲಯವನ್ನು ಕಟ್ಟುವ ಕೆಲಸವು ಕೃಷ್ಣ ದೇವರಾಯನ ಕಾಲಕ್ಕೆ ಪ್ರಾರಂಭವಾಯಿತು. ಮುಂದೆ ಅಚ್ಯುತರಾಯ ಮತ್ತು ಸದಾಶಿವರಾಯನ ಕಾಲದಲ್ಲಿಯೂ ಆ ಕಟ್ಟಡದ ಕೆಲಸವು ನಡೆಯುತ್ತಲೇ ಇತ್ತು. ಆದರೆ ೧೫೬೫ ನೆಯ ಇಸವಿಯಲ್ಲಿ ತಾಳೀಕೋಟೆಯ ಕಾಳಗವಾದುದರಿಂದ ಗುಡಿಯ ಕಟ್ಟುವಿಕೆಯು ಅಲ್ಲಿಗೆ ನಿಂತುಹೋಯಿತು. ಜಕಣಾಚಾರ್ಯರು ತುಮಕೂರ ಜಿಲ್ಲೆಯಲ್ಲಿಯ ಕೈದಾಳವೆಂಬ ಗ್ರಾಮದವರು. ಅವರು ಪ್ರಸಿದ್ಧ ಜ್ಯೋತಿಷ್ಯರು. ಅವರಿಗೆ ಮಗನು ಹುಟ್ಟಿದಾಗ ಅವರು ಅವನ ಕುಂಡಲಿಯನ್ನು ಪರೀಕ್ಷಿಸಲು ಆತನು ವ್ಯಭಿಚಾರಕ್ಕೆ ಹುಟ್ಟಿದವನೆಂದು ಅವರಿಗೆ ಅನಿಸಿತು. ಕೂಡಲೆ, ಅವರು ವೈರಾಗ್ಯವನ್ನು ತಾಳಿ ಅವರು ಶಿಲ್ಪಕಲಾ ಪ್ರವೀಣರಾಗಿದ್ದದರಿಂದ, ಹೋದ ಹೋದಲ್ಲಿ ಗುಡಿಗಳನ್ನು ಕಟ್ಟುತ್ತ ಕೊನೆಗೆ ಬೇಲೂರಿಗೆ ಬರಲು, ಅಲ್ಲಿಯ ಅರಸನಾದ ವಿಷ್ಣುವರ್ಧನನು ಅವರಿಂದ ಚೆನ್ನಕೇಶವನ ದೇವಾಲಯವೊಂದನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಚೆನ್ನಕೇಶವನ ಸುಂದರವಾದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಬೇಕೆನ್ನುವಷ್ಟರಲ್ಲಿ, ಹದಿನಾರು ವರುಷದ ಹುಡುಗನೊಬ್ಬನು ಆ ಉತ್ಸವಕ್ಕೆ ಬಂದು, ಆ ಚೆನ್ನಕೇಶವ ಮೂರ್ತಿಯು ಅಶುದ್ಧವಾದ ಕಲ್ಲಿನಿಂದ ಮಾಡಲ್ಪಟ್ಟಿರುವುದೆಂದೂ ಅದು ಪ್ರಾಣ ಪ್ರತಿಷ್ಠಾಪನೆಗೆ ಯೋಗ್ಯವಿಲ್ಲವೆಂದೂ ಪ್ರತಿಪಾದಿಸಿದನು. ಆಗ ಅವರಿಬ್ಬರಲ್ಲಿ ವಾದ ನಡೆಯಿತು. ಅದು ಅಶುದ್ಧ ಎಂದು ತೋರಿಸಿಕೊಟ್ಟರೆ ತಮ್ಮ ಬಲಗೈಯನ್ನೇ ಕಡಿದು ಕೊಂಡುಬಿಡುವೆನೆಂದು ಜಕಣಾಚಾರ್ಯರು ಹೇಳಿದರು. ಆಗ ಆ ಹುಡುಗನು ಆ ಮೂರ್ತಿಯ ನಾಭಿಕಮಲದ ಹತ್ತರ ತುಸು ಮಳಲೂ ನೀರೂ ಒಂದು ಕಪ್ಪೆಯೂ ಇರುವುವೆಂದೂ, ಆದಕಾರಣ ಅದು ಅಶುದ್ಧವೆಂದೂ ಆ ಮೂರ್ತಿಯನ್ನು ಒಡೆದು ಪರೀಕ್ಷಿಸಬಹುದೆಂದೂ ಹೇಳಿದನು. ಆ ಹುಡುಗನ ಮಾತನ್ನು ನಂಬಿ, ಆ ಸುಂದರವಾದ ಮೂರ್ತಿಯನ್ನು ಒಡೆಯುವುದು ಹೇಗೆ ? ಆದುದರಿಂದ ಅವನ ಮಾತನ್ನು ಯಾರೂ ಆಲಿಸಲಿಲ್ಲ. ಆ ಮೂರ್ತಿಯಲ್ಲಿ, ಅವನು ತಾನು ಹೇಳುವಂತೆ ನೀರು ಮುಂತಾದುವು ಇರುವುವೆಂಬ ಬಗ್ಗೆ ತಮಗೆ ವಿಶ್ವಾಸ ಹುಟ್ಟಿಸಿದರೆ ಮಾತ್ರ, ತಾವು ಅದನ್ನು ಒಡೆಯ ಬಹುದೆಂದು ಜನರು ಆ ಹುಡುಗನಿಗೆ ಹೇಳಿದರು. ಆಗ ಆ ಬಾಲಕನು, ತುಸು ವಿಚಾರಮಾಡಿ “ನೀವು ಈ ಮೂರ್ತಿಯ ಶರೀರಕ್ಕೆಲ್ಲ ಗಂಧವನ್ನು ತೊಡೆದು ನೋಡಿರಿ, ಅಂದರೆ ನಾಭಿಕಮಲದ ಹತ್ತಿರ ಒಳಗೆ ನೀರಿರುವುದರಿಂದ ಗಂಧವು ಹಸಿಯುಳಿದು ಮಿಕ್ಕ ಕಡೆಗೆ ಒಣಗುವುದು. ಅಲ್ಲಿ ನೀರಿರುವುದಕ್ಕೆ ಅದೇ ಗುರುತು” ಎಂದು ಉತ್ತರವನ್ನಿತ್ತನು. ಆ ನೆರೆದ ಜನರಿಗೆ ಆ ಮಾತು ಸರಿದೋರಿ ಅವನು ಹೇಳಿದಂತೆ ಮಾಡಿದರು. ನಾಭಿಕಮಲದ ಹತ್ತಿರ ತೊಡೆದ ಗಂಧವು ಆರಲಿಲ್ಲ. ಆಗ ಅವನು ಶಿಲಾಶಾಸ್ತ್ರದಲ್ಲಿ ನಿಪುಣ ನಿರುವನೆಂಬ ಭರವಸೆವುಂಟಾಗಿ ಅವರು ಆ ಮೂರ್ತಿಯ ನಾಭಿಕಮಲವನ್ನು ಒಡೆದು ನೋಡಲಾಗಿ ಅವನು ಹೇಳಿದಂತೆ, ಒಳಗೆ ಕಪ್ಪೆ, ನೀರು, ಮುಂತಾದುವು ಕಂಡುಬಂದವು. ಅಲ್ಲಿಯ ಮಹಾಜನರಿಗೆಲ್ಲರಿಗೂ ಅತ್ಯಂತ ವಿಸ್ಮಯವುಂಟಾಗಿ ಆ ಬಾಲಕನ ಕುಲಗೋತ್ರಗಳನ್ನು ಕೇಳಿದರು. ಅವನು, ತಾನು ಅದೇ ಜಕಣಾಚಾರ್ಯರ ಮಗನಾದ ಡಂಕಣಾಚಾರ್ಯನೆಂದೂ ತಮ್ಮ ತಂದೆಯು ಒಂದು ಜಾಗೆಯಲ್ಲಿ ಜ್ಯೋತಿಷ ಗಣನೆಯಲ್ಲಿ ತಪ್ಪಿ, ನಿಷ್ಕಾರಣವಾಗಿ ತನ್ನ ತಾಯಿಯ ಮೇಲೆ ವ್ಯಭಿಚಾರವನ್ನು ಆರೋಪಿಸಿದರೆಂದೂ ಹೇಳಿದನು. ಆಗ ತಂದೆ ಮಕ್ಕಳಿಬ್ಬರನ್ನೂ ಅರಸನು ಸನ್ಮಾನಿಸಿ, ತಂದೆ ಮಕ್ಕಳಿಬ್ಬರೂ ಕೂಡಿ ತಮ್ಮ ಉಭಯ ಚಾತುರ್ಯದಿಂದ ಹೊಸದೊಂದು ಅತ್ಯಂತ ಸುಂದರವಾದ ಗುಡಿಯನ್ನು ನಿರ್ಮಾಣ ಮಾಡಬೇಕೆಂದು ವಿಜ್ಞಾಪಿಸಿದನು. ಅದಕ್ಕೆ ಒಪ್ಪಿ, ಅವರಿಬ್ಬರೂ ಬೇಲೂರಲ್ಲಿರುವ ಈಗಿನ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಬೇಲೂರಿನಲ್ಲಿ ಈಗ ಎರಡು ಗುಡಿಗಳುಂಟು. ಮೊದಲನೆಯ ಗುಡಿಯಲ್ಲಿಯ ಚೆನ್ನಕೇಶವ ಮೂರ್ತಿಯು ನಾಭಿಕಮಲದ ಹತ್ತರ ಭಿನ್ನವಾಗಿದೆ, ಮತ್ತು ಆ ಗುಡಿಯ ಹತ್ತರವೇ ಈಗಿನ ಹೊಸಗುಡಿಯು ನಿಂತಿದೆ.

ದೇಶಕ್ಕೆ ಸಂಕಟವೊದಗಿದಾಗ, ಸಾಮಾನ್ಯತಃ ಐಹಿಕ ಸುಖದಿಂದ ಅಲಿಪ್ತರಾಗಿರುವವರೇ, ಯೋಗ್ಯ ಜನರಿಗೆ ಕ್ಷಾತ್ರತೇಜವನ್ನು ಪ್ರಕಟಗೊಳಿಸುವಂತೆ ಪ್ರೇರಿಸಿ, ಅವರಿಂದ ರಾಜ್ಯಗಳನ್ನು ಸ್ಥಾಪಿಸಿ ತಾವು ಮಾತ್ರ ವಿಷಯಸುಖದಲ್ಲಿ ತೊಡಕಿಕೊಳ್ಳದೆ ವಿದ್ಯಾವ್ಯಾಸಂಗದಲ್ಲಿ ಜನ್ಮವನ್ನು ಕಳೆಯುತ್ತಿದ್ದರೆಂಬುದು ಕರ್ನಾಟಕದ  ಪೂರ್ವಪರಂಪರೆ. ಕರ್ನಾಟಕದಲ್ಲಿ ಕದಂಬರು ಬಹಳ ಪ್ರಾಚೀನದ ಅರಸು ಮನೆತನದವರು. ಈ ವಂಶದ ಮೂಲಪುರುಷನು ಮಯೂರಶರ್ಮನೆಂಬ ಬ್ರಾಹ್ಮಣನು. ಇವನು ವೇದಾಧ್ಯಯನ ಮಾಡಬೇಕೆಂದು ಕಂಚಿಗೆ ಹೋಗಿರಲು, ಯಾವ ಕಾರಣದಿಂದಲೋ ಅವಮಾನಿತನಾದನು. ಪ್ರತೀಕಾರವಾಗಿ ಅವನು ಕ್ಷತ್ರಿಯ ವೃತ್ತಿಯನ್ನು ಕೈಕೊಂಡನು. ಚಾಲುಕ್ಯರ ಅರಸನಾದ ರಾಜಸಿಂಹನಿಗೆ ಆಶ್ರಯಕೊಟ್ಟವನೂ ವಿಷ್ಣುಗೋಪನೆಂಬ ಬ್ರಾಹ್ಮಣನೇ. ರಾಜಸಿಂಹನ ತಂದೆಯಾದ ಜಯಸಿಂಹನು ಪಲ್ಲವರೊಡನೆ ಕಾದಿ ಮಡಿದ ಕಾಲಕ್ಕೆ, ಅವನ ಹೆಂಡತಿಯು ಬಸುರಾಗಿದ್ದಳು. ಅವಳಿಗೆ ಈ ವಿಷ್ಣು ಗೋಪನು ಆಶ್ರಯವನ್ನಿತ್ತು ರಾಜಸಿಂಹನನ್ನು ದೊಡ್ಡವನನ್ನಾಗಿ ಮಾಡಿದನು. ಈ ರಾಜಸಿಂಹನೇ ಚಾಲುಕ್ಯ ರಾಜ್ಯವನ್ನು ಮರಳಿ ಸ್ಥಾಪಿಸಿದನು. ಮತ್ತು ತನ್ನನ್ನು ರಕ್ಷಿಸಿದ ವಿಷ್ಣುಗೋಪನ ಸ್ಮರಣಾರ್ಥವಾಗಿ ವಿಷ್ಣುವರ್ಧನನೆಂದು ಹೆಸರಿಟ್ಟು ಕೊಂಡನು. ರಾಷ್ಟ್ರಕೂಟರ ಪ್ರಖ್ಯಾತ ರಾಜನಾದ ನೃಪತುಂಗನ ಗುರು, ಆದಿಪುರಾಣದ ಕರ್ತನಾದ ಜಿನಸೇನನೆಂಬವನು. ಹೊಯ್ಸಳ ರಾಜ್ಯವು “ಸುದತ್ತ” ನೆಂಬ ಸನ್ಯಾಸಿಯ ಪ್ರೇರಣೆಯಿಂದಲೇ ಸ್ಥಾಪಿತವಾಯಿತು. ವಿಷ್ಣುವರ್ಧನ ಅಥವಾ ಬಿಟ್ಟಿದೇವನಿಗೆ ರಾಮಾನುಜಾಚಾರ್ಯರೇ ಗುರುಗಳು. ಕಡೆಗೆ, ಶ್ರೀ ವಿದ್ಯಾರಣ್ಯರು ತಮ್ಮ ಜಗದ್ಗುರು ಪೀಠವನ್ನು ಸಹ ತ್ಯಾಗ ಮಾಡಿ, ಹುಕ್ಕಬುಕ್ಕರ ಸಹಾಯಾರ್ಥವಾಗಿ ಧಾವಿಸಿ, ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದ ಸಂಗತಿಯೂ ಈ ತತ್ವವನ್ನೇ ಬಲಪಡಿಸುತ್ತದೆ. ಈ ಕಾರಣದಿಂದಲೇ ಅವರಿಗೆ "ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ"ರೆಂದು ಗೌರವದ ಬಿರುದು ಪ್ರಾಪ್ತವಾಯಿತು.

ಧಾರ್ಮಿಕ ಇತಿಹಾಸದಲ್ಲಿಯ ಎರಡನೆಯ ಮಹತ್ವದ ಸಂಗತಿಯೇನೆಂದರೆ ದ್ವೈತ ಅದ್ವೈತ ವಿಶಿಷ್ಟಾದ್ವೈತ ಮುಂತಾದ ಪ್ರಬಲ ಮತಗಳಿಗೆ ಕರ್ನಾಟಕವೇ ತವರು ಮನೆ. ಕ್ರಿಸ್ತಶಕದ ಪ್ರಾರಂಭಕ್ಕೆ ಇಲ್ಲಿ ಬೌದ್ಧ ಧರ್ಮವು ಪ್ರಬಲವಾಗಿತ್ತೆಂದೂ, ಅನಂತರ ಅನೇಕ ನೂರು ವರ್ಷಗಳವರೆಗೆ ಜೈನ ಧರ್ಮವು ಹಬ್ಬಿಕೊಂಡಿತ್ತೆಂದೂ, ಅನಂತರ ಶೈವಧರ್ಮಕ್ಕೆ ಬಲ ಬಂತೆಂದೂ, ಕೊನೆಗೆ ವೈಷ್ಣವಧರ್ಮವು ಹೆಚ್ಚಿತೆಂದೂ ಸಾಮಾನ್ಯವಾಗಿ ಹೇಳಬಹುದು. ಆದರೆ ದಕ್ಷಿಣ ಹಿಂದುಸ್ಥಾನದಲ್ಲಿ, ಯಾವಾಗಲೂ ಬೌದ್ಧ ಧರ್ಮಕ್ಕಿಂತಲೂ ಜೈನಧರ್ಮವೇ ಪ್ರಬಲವಾಗಿತ್ತು, ಕರ್ನಾಟಕದ ಮೊದಲಿನ ಕವಿಶ್ರೇಷ್ಠರೂ ನೃಪಶ್ರೇಷ್ಠರೂ ಜೈನಧರ್ಮದವರೇ ಆಗಿದ್ದರು.

ಜೈನರ ಪ್ರಮುಖ ಗ್ರಂಥಗಳಿಗೆಲ್ಲ ನೃಪತುಂಗನ ಗುರುವಾದ ಜಿನಸೇನಾಚಾರ್ಯರೇ ಪ್ರಣೇತಾರರು. ತರ್ಕಶಾಸ್ತ್ರಾದಿ ಪಾರಗನಾದ ಲಕುಲೀಶನು ಶೈವೋಪಾಸನೆಯನ್ನು ಪ್ರಚಾರಗೊಳಿಸಿದನು. ಇವನು ಒಂದನೆಯ ಶತಮಾನದಲ್ಲಿದ್ದನೆಂದು ಹೇಳುತ್ತಾರೆ. ಶಂಕರಾಚಾರ್ಯರು ೮ನೆಯ ಶತಕದಲ್ಲಿ ಇದ್ದರು. ೧೨ನೆಯ ಶತಮಾನದಲ್ಲಿ ರಾಮಾನುಜಾಚಾರ್ಯರ ಉದಯವು, ೧೨ನೆಯ ಶತಮಾನದ ಮಧ್ಯಭಾಗದಲ್ಲಿ ವೀರಶೈವಮತವು ಬಸವೇಶ್ವರ ಚನ್ನಬಸವರಿಂದ ಉದ್ಧರಿಸಲ್ಪಟ್ಟಿತು. ೧೩ ನೆಯ ಶತಮಾನದಲ್ಲಿ ಮಧ್ವಾಚಾರ್ಯರು ದ್ವೈತಮತವನ್ನು ಸ್ಥಾಪಿಸಿದರು. ಇದರ ಮೇಲಿಂದ ಈಗ ಭರತಖಂಡದಲ್ಲೆಲ್ಲ ಪ್ರಾಮುಖ್ಯ ಹೊಂದಿ ಪ್ರಚಲಿತವಿರುವ ಮತಗಳು ಮೊದಲು ಕರ್ನಾಟಕದಲ್ಲಿಯೇ ಹುಟ್ಟಿದುವೆಂಬುದು ಹೆಮ್ಮೆಯ ವಿಷಯ.

ಕ್ರಿ.ಶಕದ ೧೫೦ರಲ್ಲಿ ಹಿಂದುಸ್ಥಾನಕ್ಕೆ ಬಂದ ಪ್ರಖ್ಯಾತ ಪ್ರವಾಸಿಯಾದ ಟಾಲೆಮಿಯು ಬಾದಾಮಿ, ಇಂಡಿ, ಕಲಕೇರಿ, ಪಟ್ಟದಕಲ್ಲ, ಇವೇ ಮುಂತಾದ ಕರ್ನಾಟಕದ ಪಟ್ಟಣಗಳ ಹೆಸರುಗಳನ್ನು ಹೇಳಿರುವನು. ಮೇಲ್ಕಂಡ ಹೆಸರುಗಳು ಕನ್ನಡವಾಗಿರುವುದರಿಂದ, ಕನ್ನಡ ಭಾಷೆಯು ಆಗಿನ ಕಾಲದಲ್ಲಿ ಒಳ್ಳೆ ಊರ್ಜಿತ ಸ್ಥಿತಿಯಲ್ಲಿ ಇರುವುದಾಗಿ ಸ್ಪಷ್ಟವಾಗುತ್ತದೆ. ೨ನೆಯ ಶತಮಾನದಲ್ಲಿ ಮಾಮುಲನಾರ ಎಂಬ ಕವಿಯಿಂದ ರಚಿತವಾದ 'ಅಹನಾನೂರ' ಎಂಬ ಗ್ರಂಥದಲ್ಲಿ ಮಹಿಷ ಮಂಡಲವೆಂಬುದಕ್ಕೆ ಪರ್ಯಾಯದಿಂದ 'ಎರಮೈನಾಡು' ಎಂಬ ಮೈಸೂರ ದೇಶದ ಹೆಸರು ಉಕ್ತವಾಗಿದೆ. ಅಲ್ಲದೆ, ಕೆಳಗಣ ಇಜಿಪ್ತ ದೇಶದಲ್ಲಿಯ "ಅಕ್ಸಿರಿಂಕಸ್" ಎಂಬ ಸ್ಥಳದಲ್ಲಿ ದೊರೆತ ಕ್ರಿ.ಶ.೨ನೆಯ ಶತಮಾನದಲ್ಲಿ ರಚಿತವಾದ ಒಂದು ಗ್ರೀಕ್ ನಾಟಕದಲ್ಲಿ ಕೆಲವು ಕನ್ನಡ ಶಬ್ದಗಳುಳ್ಳ ವಾಕ್ಯವು ದೊರೆಯುತ್ತದೆ. ಆ ವಾಕ್ಯವು ಯಾವುದೆಂದರೆ-

"ಬೇರೆ ಕೊಂಚ ಮಧು ಪಾತ್ರಕ್ಕೆ ಹಾಕಿ; ಪಾನಂ ಬೇರೆತ್ತಿ ಕಟ್ಟಿ ಮಧುವಂ ಬೇರೆತ್ತುವೆನ್ "

ನೃಪತುಂಗನ ಕಾಲದಿಂದಲೂ ಕನ್ನಡದೊಳಗೆ ಹಳೆಗನ್ನಡ-ಹೊಸಗನ್ನಡವೆಂಬ ಭೇದವು ಇತ್ತು.  ಈ ಕಾಲಕ್ಕೆ ಕನ್ನಡ ಭಾಷೆಯು ಯಾವದೋ ಒಂದು ಹಳೆಯ ಅವಸ್ಥೆಯಿಂದ ಹೊಸದಾದ ಅವಸ್ಥೆಗೆ ಹೆಜ್ಜೆಯಿಕ್ಕಿತ್ತೆಂದು ಊಹಿಸಲಿಕ್ಕೆ ಅವಕಾಶವಾಗಿದೆ. ಹಳೆಗನ್ನಡವು ಹೋಗಿ ಹೊಸಗನ್ನಡವು ಹುಟ್ಟುವುದಕ್ಕೆ ಮುಂಚೆ ೭-೮ ಶತಮಾನಗಳು ಕಳೆದು ಹೋಗಿರಬೇಕು. ಚಾಲುಕ್ಯರ ಆಳಿಕೆಯಲ್ಲಿಯೂ ಕನ್ನಡ ನುಡಿಯ ಅಭಿವೃದ್ಧಿಯ ಲಕ್ಷಣಗಳು ದೃಗ್ಗೋಚರವಾಗುತ್ತವೆ. ಇವರ ಕಾಲಕ್ಕೆ ಶ್ರೀವರ್ಧದೇವ, ವಿಮಲ, ಉದಯ, ನಾಗಾರ್ಜುನ ಮುಂತಾದ ಕವೀಶ್ವರರು ಜನಿಸಿದರು. ಹಾನಗಲ್ಲ ತಾಲೂಕ ಆಡೂರಿನಲ್ಲಿಯ ಶಿಲಾಲಿಪಿಯ ಕನ್ನಡ ಅಕ್ಷರಗಳು ಅತಿಶಯ ಪ್ರಾಚೀನವಾದುವು. ಅದು ಸುಮಾರು ೫೬೬ನೆಯ ಇಸವಿಯ ಶಿಲಾಲಿಪಿಯು.

ರಾಷ್ಟ್ರಕೂಟರ ಕಾಲಕ್ಕಂತೂ ಕನ್ನಡನುಡಿಗೆ ಮತ್ತಷ್ಟು ಹೆಚ್ಚಿನ ಪ್ರಾಶಸ್ತ್ಯವು ಪ್ರಾಪ್ತವಾಯಿತು. ರಾಷ್ಟ್ರಕೂಟದ ಅರಸನಾದ ನೃಪತುಂಗನು ಸ್ವತಃ ವಾಙ್ಮಯ ಪ್ರಭುವಾಗಿರುವನಲ್ಲದೆ, ಕನ್ನಡಕ್ಕೆ ಒಳ್ಳೆ ಆಶ್ರಯವಾಗಿದ್ದನು. ಇವನು ಬರೆದ 'ಕವಿರಾಜಮಾರ್ಗ' ವೆಂಬ ಅಲಂಕಾರ ಗ್ರಂಥವು ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು (೯ನೆಯ ಶತಕ), ಈ ನೃಪತುಂಗನು ಸಂಸ್ಕೃತದಲ್ಲಿಯೂ 'ಪ್ರಶೋತ್ತರಮಾಲಾ' ಎಂಬ ಗ್ರಂಥವನ್ನು ರಚಿಸಿರುವನು. ಈ ಗ್ರಂಥವು ತಿಬೇಟ ಭಾಷೆಯಲ್ಲಿ ಪರಿವರ್ತಿತವಾಗಿರುವ ಸಂಗತಿಯನ್ನು 'ಸಿಫಸ' ಎಂಬವರು ಗೊತ್ತುಹಿಡಿದಿದ್ದಾರೆ. ಕನ್ನಡನಾಡು, ಕನ್ನಡಿಗರು, ಕನ್ನಡ ಭಾಷೆ ಇವುಗಳ ಬಗ್ಗೆ ನೃಪತುಂಗನಲ್ಲಿರುವ ಆದರಾತಿಶಯವು ಅವನ ಗ್ರಂಥದಿಂದ ಚನ್ನಾಗಿ ತೋರ್ಪಡುತ್ತದೆ. ಇವನ ಕಾಲದಲ್ಲಿದ್ದ ಬಂಕೇಶನೆಂಬ ಸೇನಾಪತಿಯ ಹೆಂಡತಿ 'ವಿಜಯಾ' ಎಂಬವಳು ಒಂದು ಸಂಸ್ಕೃತ ಕಾವ್ಯವನ್ನು ಬರೆದಿರುವುದಾಗಿ ತಿಳಿಯಬರುತ್ತದೆ. ಅನೇಕ ಬಗೆಯ ಶಾಸ್ತ್ರಗಳಿಗೂ ವೇದಗಳಿಗೂ ವ್ಯಾಖ್ಯಾನ ಬರೆದಂಥ ವಿದ್ಯಾರಣ್ಯರು ಜನ್ಮವೆತ್ತಿದರು. ಈ ಕಾಲಕ್ಕೆ ಬಾಳಿದ ಕನ್ನಡ ಕವಿಗಳು- ಮಧುರ, ಮಂಗರಸ, ಗದಗಿನ ಕುಮಾರವ್ಯಾಸ, ನಿತ್ಯಾತ್ಮಶುಕ, ಲಕ್ಕಣ್ಣ ದಂಡೇಶ, ಇವರಲ್ಲದೆ ಪುರಂದರದಾಸ ವ್ಯಾಸರಾಯರಂಥ ಧಾರ್ಮಿಕ ಸತ್ಪುರುಷರು ಉದಯಿಸಿದರು. ಕೃಷ್ಣರಾಯನ ಆಸ್ಥಾನವಂತೂ ಅಷ್ಟದಿಗ್ಗಜಗಳಿಂದ ಶೋಭಿಸುತ್ತಿತ್ತು. ಕರ್ನಾಟಕ ಕವಿಗಳನೇಕರು ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳಲ್ಲಿಯೂ ಪಂಡಿತರಾದುದರಿಂದ ಅವರಿಗೆ ಉಭಯ ಕವಿಚಕ್ರವರ್ತಿ ಎಂದು ಬಿರುದಿತ್ತು ಅನೇಕ ಅರಸರು ಸ್ವತಃ ಕನ್ನಡ ಕವಿಗಳಾಗಿದ್ದರು. ೩ನೆಯ ಶತಮಾನದಲ್ಲಿ ಗಂಗ ಅರಸನಾದ ೨ನೆಯ ಮಾಧವನು “ದತ್ತಕಸೂತ್ರವೃತ್ತಿ” ಎಂಬ ಗ್ರಂಥವನ್ನು ಬರೆದನು. ೫ನೆಯ ಶತಮಾನದಲ್ಲಿ ದುರ್ವಿನೀತನೆಂಬ ಗಂಗ ಅರಸನು ಶಬ್ದಾವತಾರವನ್ನೂ ಪೈಶಾಚ ಭಾಷೆಯಲ್ಲಿದ್ದ ಬೃಹತ್ಕಥೆಗೆ ಸಂಸ್ಕೃತ ಪರಿವರ್ತನವನ್ನೂ ಭಾರವಿಯ ಕಿರಾತಾರ್ಜುನಕ್ಕೆ ಕನ್ನಡ ಟೀಕೆಯನ್ನೂ ಬರೆದನು. ಅಲ್ಲದೆ ಕನ್ನಡದಲ್ಲಿ ಒಂದು ಗದ್ಯಗ್ರಂಥವನ್ನು ಬರೆದಂತೆ ತಿಳಿಯುತ್ತದೆ. ೮ನೆಯ ಶತಮಾನದಲ್ಲಿ ಗಂಗರಸನಾದ ಶ್ರೀಪುರುಷನೆಂಬವನು ಗಜಶಾಸ್ತ್ರವೆಂಬ ಗ್ರಂಥವನ್ನು ರಚಿಸಿದ್ದನಂತೆ! ಅವನ ಮಗನಾದ ಶಿವಮಾರನೆಂಬವನು 'ರಾಜಾಷ್ಟಕ'ವೆಂಬ ಗ್ರಂಥವನ್ನು ರಚಿಸಿದನು. ಇವನು ನಾಟಕಾದಿಗಳಲ್ಲಿ ಪ್ರಮಾಣ ಪ್ರವೀಣನೆಂದೆನಿಸಿಕೊಂಡಿರುವನು. ಅಲ್ಲದೆ, ಆನೆ ಕುದುರೆಗಳನ್ನು ಶಿಕ್ಷಿಸುವುದರಲ್ಲಿಯೂ ಇವನ ಗ್ರಂಥವನ್ನೇ ಪ್ರಮಾಣವಾಗಿ ಹಿಡಿಯುತ್ತಿದ್ದರಂತೆ!

ನಮ್ಮ ಕರ್ನಾಟಕ ಮಹಿಳೆಯರು ವಾಙ್ಮಯಕ್ಕೆ ಮಾಡಿದ ಸೇವೆಯು ಮಿಕ್ಕ ಯಾರಿಗಿಂತಲೂ ಕಡಿಮೆಯಾಗಿರುವುದಿಲ್ಲ. ಕಂತಿ, ಹೊನ್ನಮ್ಮ ಮುಂತಾದ ಕವಯಿತ್ರಿಯರು ಕನ್ನಡಿಗರಿಗೆ ಚಿರಪರಿಚಿತ. ಕರ್ನಾಟರಾಜ ಪ್ರಿಯಾ ಕರ್ಣಾಟೀ, ನಾಗಮ್ಮ ವಿಜ್ಜಕಾ ಮುಂತಾದ ಮಹಿಳೆಯರು ಸಂಸ್ಕೃತ ಕವಯಿತ್ರಿಯರಾಗಿದ್ದರೆಂಬುದು ಅತ್ಯಂತ ಹೆಮ್ಮೆಯ ವಿಷಯ. ವಿಜಯನಗರದ ಬುಕ್ಕಮಹಾರಾಯನ ಹಿರೀ ಸೊಸೆಯಾದ ಗಂಗಾದೇವಿಯೆಂಬವಳೂ ಅತಿಶಯ ಪ್ರತಿಭಾಸಂಪನ್ನಳಾದ ಸಂಸ್ಕೃತ ವಿದ್ವಾಂಸಿನಿಯಾಗಿದ್ದಳು.

ಅನೇಕ ಕನ್ನಡಿಗರು ತೆಲಗು ಭಾಷೆಯಲ್ಲಿ ಪಂಡಿತರಾಗಿ ತೆಲಗು ಭಾಷೆಯಲ್ಲಿ ಗ್ರಂಥಗಳನ್ನು ಬರೆದರೂ ಅವರಿಗೆ ತಾವು ಕರ್ನಾಟಕರೆಂದನಿಸಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತಿದ್ದರು.. ಶ್ರೀನಾಥನೆಂಬ ತೆಲಗು ಕವಿಯು ವಿಜಯನಗರದ ರಾಜನಾದ ಹರಿಹರರಾಯನ ಕಾಲಕ್ಕೆ ಪ್ರಸಿದ್ಧಿಗೆ ಬಂದನು. ಇವನು ತಾನು ಬರೆದ 'ಭೀಮೇಶ್ವರ ಪುರಾಣ' ವೆಂಬ ತೆಲಗು ಗ್ರಂಥದಲ್ಲಿ ಬರೆದಿರುವ ಸಾರಾಂಶವೆಂದರೆ "ನನ್ನ ಕವಿತೆಯ ಪ್ರೌಢಿ ನೋಡಿದರೆ ಅದು ಸಂಸ್ಕೃತ ಭಾಷೆಯೆನ್ನುವರು | ಮಾತಿನ ರೀತಿಯನ್ನು ನೋಡಿದರೆ ತೆಲುಗು ಭಾಷೆ ಎನ್ನುವರು ಯಾರು ಏನೇ ಎನವಲ್ಲರು! ನನಗೇನು ಕೊರತೆ! ನನ್ನ ಕವಿತ್ವವು ನಿಜವಾಗಿ "ಕರ್ನಾಟಕ ಭಾಷೆ"

ಹಿಂದುಸ್ಥಾನವು ಒಂದು ಸಣ್ಣ ಜಗತ್ತೇ ಇರುತ್ತದೆ. ಇದರಲ್ಲಿ ನಾನಾತರದ ಜನಾಂಗಗಳೂ ಭಾಷೆಗಳೂ ಇರುವುದರಿಂದ ಒಂದು ಭಾಗದ ಇತಿಹಾಸವು ಮತ್ತೊಂದು ಭಾಗದ ಇತಿಹಾಸದಲ್ಲಿ ತೊಡಕಿಕೊಂಡಿರುತ್ತದೆ. ಉದಾ – ಮಹಾರಾಷ್ಟ್ರದ ಇತಿಹಾಸವು ನಮ್ಮ ಇತಿಹಾಸದಲ್ಲಿ ತೊಡಕಿಕೊಂಡಿದೆ. ನಮ್ಮ ಇತಿಹಾಸವು ತಮಿಳರ ಇತಿಹಾಸದಲ್ಲಿ ತೊಡಕಿಕೊಂಡಿದೆ. ಆದಕಾರಣ, ಆಯಾ ಭಾಷೆಯ ಜನರು ತಮ್ಮ ಇತಿಹಾಸವನ್ನು ಅಭ್ಯಾಸ ಮಾಡುವುದಲ್ಲದೆ, ಮಿಕ್ಕ ಇತಿಹಾಸವನ್ನೂ ಅಭ್ಯಾಸಮಾಡಬೇಕಾಗುವುದು ಎಂದು ಲೇಖಕರು ವಿವರಿಸಿದ್ದಾರೆ.

ಈ ಮುಂದಿನ ಪ್ರಕರಣಗಳಲ್ಲಿ, ಕರ್ನಾಟಕ ಇತಿಹಾಸ ಸಂಶೋಧನದ ಕಾರ್ಯಕ್ಕೆ ಅವಶ್ಯವಾಗಿ ಗೊತ್ತಿರಬೇಕಾಗಿರುವ ಕೆಲವು ಸಂಗತಿಗಳನ್ನು ಇಲ್ಲಿ ನಿವೇದಿಸಿ, ಸಂಶೋಧಕರು ಯಾವ ಮಾರ್ಗದಿಂದ ಸಾಗಬೇಕೆಂಬ ಬಗ್ಗೆ ಲೇಖಕು ಕೆಲವು ಸೂಚನೆಗಳನ್ನು ಕೊಟ್ಟಿರುವರು.

ಕೆಲವು ಯುರೋಪೀಯ ವಿದ್ವಾಂಸರು ಪುರಾತನ ವಸ್ತು ಸಂಶೋಧನ ಕಾರ್ಯದಲ್ಲಿ ತೊಡಗಿದಾಗ, ಅವರು ಅವುಗಳನ್ನು ಕುತೂಹಲದಿಂದ ಸಂಗ್ರಹಿಸಿರುವರು. ಅವರ ಆ ಪ್ರಯತ್ನಗಳೇ ನಮ್ಮ ಇತಿಹಾಸಾಭ್ಯಾಸಕ್ಕೆ ಮೂಲಾಕ್ಷರಗಳಾಗಿವೆ. ಈ ವಿದ್ವಾಂಸರು ಪುರಾಣವಸ್ತುಗಳನ್ನು ಸಂಶೋಧಿಸುವಾಗ, ಕೆಲವರಿಗೆ ಶಿಲಾಲಿಪಿಗಳು ದೊರೆತವು, ಕೆಲವರ ಲಕ್ಷ್ಯವು ನಮ್ಮಲ್ಲಿಯ ನಾಣ್ಯಗಳ ಕಡೆಗೆ ಎಳೆಯಿತು, ಕಟ್ಟಡಗಳು ಕೆಲವರ ಮನಸ್ಸನ್ನು ಆಕರ್ಷಿಸಿದುವು; ಅವರು ಆಯಾ ವಿಷಯಗಳಲ್ಲಿ ಪರಿಶ್ರಮಪಟ್ಟು ಅನೇಕ ಪುಸ್ತಕಗಳನ್ನು ಬರೆದಿರುವರು. ಯುರೋಪೀಯ ಜನರ ಇತಿಹಾಸದೃಷ್ಟಿಯು ಈ ಮೊದಲೇ ಎಚ್ಚರಗೊಂಡಿರುವುದರಿಂದ, ಮತ್ತು ಹೊಸ ವಸ್ತುಗಳನ್ನು ಕಂಡೊಡನೆಯೇ ಅವುಗಳನ್ನು ಲಕ್ಷ್ಯ ಪೂರ್ವಕವಾಗಿ ಪರಿಶೋಧಿಸುವ ಪರಿಪಾಠವು ಅವರಿಗೆ ಮೊದಲಿನಿಂದ ಇದ್ದುದರಿಂದ, ಅವುಗಳನ್ನು ಶಾಸ್ತ್ರೀಯ ರೀತಿಯಲ್ಲಿ ಅಭ್ಯಾಸಮಾಡಿರುವರು.  ೧೮೭೨ ನೆಯ ಇಸವಿಯಲ್ಲಿ ಡಾ. ಬರ್ಗೆಸ್ ಎಂಬೊಬ್ಬ ವಿದ್ವಾಂಸರು ಇಂಡಿಯನ್ ಆಂಟಿಕ್ವರಿ ಎಂಬ ಸ್ವತಂತ್ರವಾದ ಮಾಸಪತ್ರಿಕೆಯನ್ನು ತೆಗೆದರು. ಆಗಿನಿಂದ ಪುರಾಣವಸ್ತು ಸಂಶೋಧನ ವಿಷಯಕವಾದ ಲೇಖಗಳೆಲ್ಲವೂ ಈ ಮಾಸಪತ್ರಿಕೆಯಲ್ಲಿಯೇ ಹೆಚ್ಚಾಗಿ ಬರುತ್ತಿವೆ. ಎಫಿಗ್ರಾಫಿಯಾ ಇಂಡಿಕಾ ಎಂಬ ಸ್ವತಂತ್ರವಾದ ಪತ್ರಿಕೆಯು ೧೮೯೧ನೆಯ ಇಸಿವಿಯಿಂದ ಪ್ರಕಟಗೊಂಡಿವೆ. ಇವು ಸಂಶೋಧಕರಿಗೆ ಅವಶ್ಯವಾದ ಪುಸ್ತಕಗಳು.

ಶಿಲಾಲಿಪಿಗಳನ್ನು ಓದುವುದು ತುಸ ಕಠಿಣ ಕಾರ್ಯವು. ಆದರೆ ಅವುಗಳನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುವುದು ಅಷ್ಟೊಂದು ಕಠಿಣವಾದ ಕೆಲಸವಲ್ಲ. ಸ್ವಲ್ಪ ಅಭ್ಯಾಸದಿಂದ ಅದನ್ನು ಪ್ರತಿಯೊಬ್ಬನೂ ಕಲಿಯಬಹುದು.

(೧) ಮೊದಲು, ಕಲ್ಲಿನಲ್ಲಿ ಕೂತಂಥ ಮಣ್ಣು, ಸುಣ್ಣ, ಎಣ್ಣೆ ಮುಂತಾದುವನ್ನು ಮೆಲ್ಲನೆ ಮೊಳೆಗಳಿಂದ ತಗೆದು ಕಲ್ಲನ್ನು ಚನ್ನಾಗಿ ತೊಳೆಯಬೇಕು, ಹೀಗೆ ಮಾಡುವಾಗ, ಅಕ್ಷರಗಳು ನಿಚ್ಚಳವಾಗಿ ಕಾಣಬೇಕೆಂದು ಯಾವ ಕಬ್ಬಿಣ ಸಾಮಾನುಗಳನ್ನೂ ಕಲ್ಲಿಗೆ ಒತ್ತಿ ತಿಕ್ಕಬಾರದು, ಅಕ್ಷರಗಳು ನೆಟ್ಟಗೆ ಕಾಣಿಸಬೇಕೆಂದು ಕಲ್ಲಿಗೆ ಮಸಿ ಹಚ್ಚಿ ಕಪ್ಪು ಮಾಡಬಾರದು. ಇದರಿಂದ ಅಕ್ಷರಗಳು ತಿಳಿಯುವುವೆಂದು ನಿಮಗೆ ಮೊದಲು ತೋರಿದರೂ ಅದು ಕಲ್ಲನ್ನು ಕೆಡಿಸಿ ಬಿಡುವುದಲ್ಲದೆ, ಮುಂದೆ, ನೋಡುವವರಿಗೂ ತೊಂದರೆಯುಂಟುಮಾಡಿದಂತಾಗುತ್ತದೆ.

(೨) ಪ್ರಥಮತಃ ವೃತ್ತ ಪತ್ರಿಕೆಗಳಿಗೆ ಬಳಸುವ ಉತ್ತಮತರದ ಕಾಗದವನ್ನು ತೆಗೆದುಕೊಂಡು ಅದನ್ನು ಕೆಲವು ನಿಮಿಷ ನೀರಿನಲ್ಲಿ ತೊಯಿಸಬೇಕು, ಹುರುಬರಕಾದ ಲಿಪಿಗಳಿಗೆ ದೇಶೀಯ ಕಾಗದಗಳನ್ನು ಬಳಸಬೇಕು. ಆ ಕಾಗದವನ್ನು ನೀರಿನಲ್ಲಿ ತೊಯಿಸಲೇ ಬೇಕು, ಫೂಲಸ್ಕೇಪ ಕಾಗದಗಳು ಸಾಮಾನ್ಯವಾಗಿ ಎಲ್ಲ ತರದ ಲಿಪಿಕಲ್ಲುಗಳಿಗೂ ಉಪಯೋಗಕ್ಕೆ ಬರುತ್ತವೆ.

(೩) ಆ ತೊಯಿಸಿದ ಕಾಗದವನ್ನು, ಅತ್ತಿತ್ತ ಸರಿದಾಡದಂತೆ ಒಂದೇ ಸಮನಾಗಿ ಆ ಲಿಪಿಗಲ್ಲಿನ ಮೇಲೆ ಇಡಬೇಕು. ನಡನಡುವೆ ಮಡಿಕೆ ಬೀಳಗೊಡ ಬಾರದು. ಆ ತೊಯಿಸಿದ ಪತ್ರವು ಆಗ ಕಲ್ಲಿಗೆ ಅಂಟಿಕೊಳ್ಳುವುದು.

(೪) ಕೂಡಲೇ, ಬಿರುಸಾದ ಕುಂಚನ್ನಾದರೂ ವಸ್ತ್ರವನ್ನಾದರೂ ತೆಗೆದುಕೂಂಡು ಗಾಳಿಯಿಂದ ಹಾರದೆ ಕಾಗದವು ಕಲ್ಲಿಗೆ ಅಚ್ಚುಕಟ್ಟಾಗಿ ಹತ್ತಿಕೊಳ್ಳುವಂತೆ ಮೆಲ್ಲಗೆ ಜಾಣತನದಿಂದ ಒತ್ತಬೇಕು. ಆ ಕಾಗದವೆಲ್ಲ ಸಂದಿಗೊಂದಿ ಸಹ ಬಿಡದಂತೆ ಕಲ್ಲಿಗೆ ಸರಿಯಾಗುವಂತೆ ಹಗುರಾಗಿ ಒತ್ತುತ್ತಿರಬೇಕು, ಅಕ್ಷರಗಳು ಆಳವಾಗಿ ಕೊರೆಯಲ್ಪಟ್ಟಿದ್ದರೆ ಅಥವಾ ಮೇಲ್ಬದಿಯು ಡೊಂಕಾಗಿದ್ದರೆ ಕಾಗದಕ್ಕೆ ಅನೇಕ ಕಡೆಗೆ ರಂಧ್ರಗಳು ಬೀಳುವುವು. ಹೀಗಾದ ಪಕ್ಷಕ್ಕೆ, ಆ ಕಾಗದದ ಮೇಲೆ ಮತ್ತೊಂದು, ಅದೂ ಹರಿಯ ಹತ್ತಿದರೆ ಮತ್ತೂ ಒಂದು ಕಾಗದವನ್ನು ಮೊದಲಿನಂತೆಯೇ ತೊಯಿಸಿ ಹಾಕಿ ಒತ್ತಬೇಕು.

(೫) ಒತ್ತುವ ಕ್ರಮವು ಮುಗಿದೊಡನೆಯೇ ಕಾಗದವನ್ನು ತೆಗೆಯಬಾರದು. ಒಣಗಿದ ಕೂಡಲೆ ಅದು ತನ್ನಷ್ಟಕ್ಕೆ ತಾನೇ ಕಳಚಿ ಬೀಳುವುದು, ಅದೆಲ್ಲ ಮುಗಿದ ನಂತರ ನಿಮ್ಮ ಕಾಗದವು ಮುದ್ರಿಸಿದಂತಾಗುವುದು. ಈ ಕಾಗದವು ಒಣಗಿರುವ ಕಾರಣ, ಅದು ಬಹು ಬಿರುಸಾಗಿದ್ದು ಎಷ್ಟು ಒತ್ತಿದರೂ ಹಾಗೇ ಇರುತ್ತದೆ. ಆ ಮೇಲೆ ಅದನ್ನು ಸುರುಳಿ ಸುತ್ತಿಟ್ಟು ಅದು ಒದ್ದೆಯಾಗದಂತೆ ಎಚ್ಚರವಿಡಬೇಕು.

(೬) ಕಾಗದವು ಕಲ್ಲಿಗೆಲ್ಲ ಸಾಕಾಗುವಷ್ಟು ದೊಡ್ಡದಾಗಿರದಿದ್ದರೆ, ಮೇಲೆ ಹೇಳಿದ ರೀತಿಯಲ್ಲಿಯೇ ಕಲ್ಲುಗಳ ಒಂದೊಂದೇ ಭಾಗವನ್ನು ಅಳತೆಮಾಡಿ ತೆಗೆದುಕೊಳ್ಳಬೇಕು.ಆದರೆ ಈ ಮುದ್ರಣವಾದ ಕೂಡಲೆ ಆಯಾ ಕಾಗದಗಳಿಗೆ ನಂಬರುಗಳನ್ನು ಹಾಕಿ ಜೋಡಿಸಿ ಅದರಮೇಲೆ ಅದು ಇಂಥ ಗುಡಿಯಲ್ಲಿ ಇಂಥ ದಿಕ್ಕಿಗಿರುವ ಶಿಲಾಲೇಖವೆಂದು ಮುಂತಾಗಿ ಬರೆಯುವುದಕ್ಕೆ ಮರೆಯಬಾರದು.

(೭) ಮಿಕ್ಕ ಯಂತ್ರಗಳ ಕೆಲಸದಂತೆ ಈ ಕೆಲಸವನ್ನು ಮಾಡಲಿಕ್ಕೂ ರೂಢಿಯು ಬೇಕಾಗುತ್ತದೆ. ಪ್ರತಿಯೊಂದರ ಮೂರು ನಾಲ್ಕು ಮುದ್ರಣಗಳನ್ನು ತೆಗೆದುಕೊಂಡರೆ, ಅಕ್ಷರಗಳ ತಪ್ಪುಗಳನ್ನು ತಿಳಿಯಲಿಕ್ಕೂ, ಅವುಗಳನ್ನು ತಿದ್ದಲಿಕ್ಕೂ ಅನುಕೂಲವಾಗುವುದಾದುದರಿಂದ ಬೇರೆ ಬೇರೆ ಮೂರು ನಾಲ್ಕು ಪತ್ರಗಳನ್ನು ಮುದ್ರಿಸಿಕೊಳ್ಳುವುದು ಒಳ್ಳೆಯದು.

ಈ ರೀತಿಯ ಮೇಲಿನಂತೆಯೇ ಇದ್ದರೂ ಯೋಗ್ಯವಾದ ಮತ್ತು ಹದನವಾದ ಉಪಕರಣಗಳೂ ಅನುಭವವೂ ಇದ್ದರೆ ಇದರಲ್ಲಿ ಮುದ್ರೆಗಳು ಹೆಚ್ಚು ಸ್ಫುಟವಾಗಿ ಮೂಡುವುವು, ಮೊದಲು ಮುದ್ರಕರ 'ರೋಲರ್' ಒಂದನ್ನು ತೆಗೆದುಕೊಂಡು ಅದಕ್ಕೆ ಮಸಿ ಹಚ್ಚಿ, ಕಲ್ಲು ಸ್ವಲ್ಪ ತಣ್ಣಗಿರುವಾಗಲೇ (ಆದರೆ ಒದ್ದೆಯಲ್ಲ) ಅದರ ಮೇಲೆ ಉರುಳಿಸಬೇಕು, ಚರ್ಮ ಸಹಿತವಾದ ಉಣ್ಣೆಯ ಕುಂಚಿನಿಂದ ಅದನ್ನು ಮೆಲ್ಲಗೆ ಒತ್ತಿದರೆ, ಮಸಿ ಹತ್ತದಿರುವಲ್ಲಿ ಮಸಿ ಹತ್ತುವುದು, ಮತ್ತು ಮಸಿ ಹೆಚ್ಚು ಹತ್ತಿದ ಸ್ಥಳವು ಬೆಳ್ಳಗಾಗುವುದು, ಇದರಿಂದ ಸೂಕ್ಷ್ಮ ಕೆಲಸವು ಬಹು ಸೊಗಸಾಗುವುದು. ಆಮೇಲೆ, ಪೂರ್ವದಂತೆ, ಕಾಗದವನ್ನು ಕಲ್ಲಿನ ಮೇಲೆ ಒಣಗಿಸಲಿಕ್ಕೆ ಬಿಡಬೇಕು, ಮತ್ತು ಏನಾದೀತೋ ಎಂದು ಸಂಶಯ ತೆಗೆದುಕೊಳ್ಳದೆ ಸುರುಳಿಯಾಗಿ ಸುತ್ತಬೇಕು. ಇದಕ್ಕಾಗಿ ಬೇಕಾಗುವ ಮಸಿಗಾಗಿ, ಪರ್ಸಿಯನ್ ಮಸಿಯನ್ನಾದರೂ, ಕಾಡಿಗೆ ಅಂಟು ಮತ್ತು ನೀರಿನಿಂದ ಕೂಡಿದ ಮಸಿಯನ್ನಾದರೂ ಬಳಸಬಹುದು. ಹೆಚ್ಚು ಮಸಿಯನ್ನು ಹಾಕಿದರೆ ಮುದ್ರೆಯು ಕೆಡುವುದು. ಆದುದರಿಂದ ಸರಿಯಾಗಿ ಬೇಕಾದಷ್ಟು ಮಸಿಯನ್ನೇ ಹಾಕಬೇಕು. ಅದರಂತೆ 'ರೂಲ'ವನ್ನು ಒತ್ತುವಾಗ ಅದನ್ನು ಒಂದೇ ಸಮನಾಗಿ ಉರುಳಿಸಬೇಕು. ಎಂದರೆ ಅಕ್ಷರಗಳ ಸಂದಿಯಲ್ಲಿ ಮಸಿ ಹೋಗದ ಅಕ್ಷರಗಳು ಬೆಳ್ಳಗೆ ಉಳಿಯುವುವು. ಮಿಕ್ಕಕಡೆಗೆ ಮಸಿ ಹತ್ತುವುದು.

ಈ ರೀತಿಯು ಬಹಳ ಸುಲಭವಾಗಿರುತ್ತದೆ. ವಿಶೇಷ ಖರ್ಚೂ ಬೇಡ. ಇದು ಮೇಲಿನ ರೀತಿಯಂತೆಯೇ ಇರುತ್ತದೆ. ಲಿಪಿಗಳಿಗೆ ಒದ್ದೆಯ ಕಾಗದವನ್ನು ಅಂಟಿಸಿ ಬಿರುಸಾದ ಕುಂಚಿನಿಂದ ಮೆಲ್ಲಗೆ ಅಕ್ಷರಗಳ ಮೇಲೆ ಬಡಿಯಬೇಕು. ಅಂದರೆ ಅಕ್ಷರಗಳ ಸಂದಿಯಲ್ಲಿ ಆ ಒದ್ದೆಯ ಕಾಗದವು ಹೋಗಿ ಕೂಡುವುದು, ಕೂಡಲೇ ಚರ್ಮದ ಪ್ಯಾಡ್ ಒಂದನ್ನು ತೆಗೆದು ಕೊಂಡು ಅದಕ್ಕೆ ಎರಡನೆಯ ರೀತಿಯಲ್ಲಿ ಹೇಳಿದಂತೆ ತಯಾರ ಮಾಡಿದ ಕಾಡಿಗೆಯ ಮಸಿಯನ್ನು ಹಚ್ಚಿ, ಆ ಒದ್ದೆಯ ಕಾಗದದ ಮೇಲೆ ಬಡಿಯಬೇಕು, ಹಾಗೆ ಮಾಡಿದರೆ ಅಕ್ಷರಗಳ ಸಂದಿಯಲ್ಲಿ ಕುಳಿತ ಕಾಗದಕ್ಕೆ ಮಸಿಯು ಹತ್ತದೆ ಮಿಕ್ಕ ಕಡೆಗೆಲ್ಲ ಮಸಿ ಹತ್ತುವುದು, ಅಕ್ಷರಗಳು ಬೆಳ್ಳಗಾಗಿ ಕಾಣುವುವು, ಕಾಡಿಗೆಯಲ್ಲಿ ಅಂಟು ಬಹಳ ಹಾಕಬಾರದು. ಕಾಡಿಗೆಯು ಹಾರಿ ಹೋಗಬಾರದೆಂದು ಸ್ವಲ್ಪ ಅಂಟು ಹಾಕಬೇಕಾಗುತ್ತದೆ, ರಬ್ಬರ ಸ್ಟಾಂಪು ಒತ್ತುವಂತೆ ಆ ಒದ್ದೆಯ ಕಾಗದದ ಮೇಲೆ ಮಸಿಯನ್ನು ಮೆಲ್ಲಗೆ ಹಚ್ಚಬೇಕು.

ಮೊದಲು ತಾಮ್ರಪಟವನ್ನು ಸಬಕಾರ ಹಚ್ಚಿ ಚನ್ನಾಗಿ ತೊಳೆಯಬೇಕು, ಅದರಿಂದ ಸ್ವಚ್ಛವಾಗದಿದ್ದರೆ, ನೈಟ್ರಿಕ ಆಸಿಡ್ ನ ನೀರನ್ನು ಸ್ವಲ್ಪ ಹಾಕಬೇಕು. ಈ ನೀರನ್ನು ಹೆಚ್ಚು ಹಾಕಿದರೆ ಶಾಸನವು ಕೆಡುವ ಸಂಭವವದೆ. ಆ ಶಾಸನವು ಒಣಗಿದ ನಂತರ ಮುದ್ರಿಸುವ ಮಸಿಯನ್ನು ಕುಂಚಿನಿಂದ ಮೆಲ್ಲಗೆ ಬಳಿಯಬೇಕು. ಇದಕ್ಕಾಗಿಯೇ ಒಂದು ದೊಡ್ಡ ಕುಂಚವನ್ನು ಮಾಡಿಸಿಡಬೇಕು. ಅಥವಾ ಒಂದು ಕಾಚಿನ ತುಣುಕನ್ನು ತೆಗೆದುಕೊಂಡು, ಅದರ ಮೇಲೆ ಮಸಿಯನ್ನು ಹಾಕಿ, ಅದನ್ನೆಲ್ಲ ಅದಕ್ಕೆ ಚನ್ನಾಗಿ ಒಂದೂ ಕಡೆಗೆ ಬಿಡದಂತೆ ಹಚ್ಚಬೇಕು. ಡ್ರಾಯಿಂಗ್‌ ಪೇಪರ್‌ ದಂಥ ದಪ್ಪಾದ ಮೆತ್ತಗಿನ ಕಾಗದವೇ ಒಳ್ಳೆಯದು. ಕಾಗದವನ್ನು ತಾಮ್ರ ಪಟಕ್ಕಿಂತ ಹೆಚ್ಚು ದೊಡ್ಡದಾಗಿ ಕತ್ತರಿಸಿ, ಸ್ವಲ್ಪ ನೀರು ಚಿಮ್ಮಡಿಸಿ, ಅದರ ಮೇಲ್ಬಾಗವನ್ನು ಶಾಸನದ ಮೇಲೆ ಹಾಕಿ, ಕಾಗದವನ್ನು ಹಿಗ್ಗಲಿಗೆ ಮಡಿಸಬೇಕು. ಹೀಗೆ ಮಾಡಿದರೆ, ಆ ಶಾಸನವು ಅತ್ತಿತ್ತ ಅಲುಗಾಡುವುದಿಲ್ಲ. ಶಾಸನಕ್ಕೆ ಬಳೆಯಿದ್ದರೆ, ಆ ಕಾಗದದೊಳಗೆ ಬಳೆ ಹಾಯುವಂಥದೊಂದು ರಂಧ್ರವನ್ನು ಮಾಡಬೇಕು. ಮೇಲ್ಬಾಗವನ್ನು ಬಿರುಸಾದ ಸ್ವಚ್ಛ ಕಾಗದದಿಂದ ಮೆಲ್ಲನೆ ಒತ್ತಬೇಕು. ಒತ್ತದೆ ಇರುವ ಸ್ಥಳದಲ್ಲಿ ಒಂದು ಹಸೀ ಬಟ್ಟೆಯನ್ನು ಯಾವಾಗಲೂ ಮಡಿಸಿ ಇಡಬೇಕು. ಆಮೇಲೆ, ದಕ್ಕೆಯಾಗದಂತೆ ಕಾಗದವನ್ನು ತೆಗೆದು ಒಣಗಲಿಕ್ಕೆ ಇಡಬೇಕು. ಮುದ್ರೆಗಳು ಹಿಮ್ಮೈ ಆಗಿರುತ್ತವೆ. ಆದರೆ ಫೋಟೋ ತೆಗೆದುಕೊಂಡರೆ ಅವು ಮತ್ತೆ ಹಿಮ್ಮೈ ಆಗುತ್ತವೆ. ಮಸಿಯ ಕಲೆಗಳು ಪೂರ್ಣವಾಗಿ ಹೋಗಬೇಕಾದರೆ ಟರ್ಪಂಟಾಯಿನವನ್ನು ಸ್ವಲ್ಪ ಹಚ್ಚಿ, ಆಮೇಲೆ ಶಾಸನವನ್ನು ಸಬಕಾರದಿಂದ ತೊಳೆಯಬೇಕು. ಹಾಗೆ ಮಾಡಿದರೆ ಅದು ಸ್ವಚ್ಛವಾಗುವದು.