ಕರ್ನಾಟಕದ ಮೂರ್ತಿಶಿಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಮೂರ್ತಿಶಿಲ್ಪ : ಕರ್ನಾಟಕದಲ್ಲಿ ಪ್ರ.ಶ.ಪೂ. ೩ನೆಯ ಶತಮಾನದಲ್ಲಿ ರೂಢಿಗೆ ಬಂದ ಬೌದ್ಧಧರ್ಮ ಪ್ರಭಾವದಿಂದ ಮೂರ್ತಿ ಶಿಲ್ಪ ಹುಟ್ಟಿಕೊಂಡಿತೆಂಬ ವಾದವಿದೆ. ಅನಂತರ ಸಾತವಾಹನರ ಕಾಲದಲ್ಲಿ ಪ್ರೋತ್ಸಾಹ ದೊರಕಿದರೂ ಅವರೂ ಕದಂಬರೂ ವೈದಿಕ ಧರ್ಮಾನುಯಾಯಿಗಳಾದ್ದರಿಂದ ಕ್ರಮೇಣ ಆ ಧರ್ಮ ಪ್ರಬಲಿಸಿ, ಬೌದ್ಧರ ವರ್ಚಸ್ಸು ನಶಿಸಿತು. ಆದರೂ ಕೆಲಪ್ರದೇಶಗಳಲ್ಲಿ- ಗುಲ್ಬರ್ಗಾ ಜಿಲ್ಲೆಯ ಸನ್ನತಿ (ನೋಡಿ- ಸನ್ನತಿ), ಬನವಾಸಿ ಪ್ರದೇಶಗಳಲ್ಲಿ-ಅವರ ಪ್ರಭಾವವಿದ್ದಿತು. ೧೦೬೫ರಲ್ಲಿ ಬಳ್ಳಿಗಾವೆಯಲ್ಲಿ ಸ್ಥಾಪಿತವಾದ ತಾರಾಭಗವತಿಯ ಮಂದಿರದ ತಾರಾಮೂರ್ತಿ ಸರ್ವಾಭರಣಭೂಷಿತೆಯಾಗಿ ಬಹಳ ಸುಂದರಳಾಗಿ ನಿರೂಪಿತಳಾಗಿದ್ದಾಳೆ.

ಕರ್ನಾಟಕದಲ್ಲಿ ಜೈನರ ಪ್ರಭಾವ ಹೆಚ್ಚು. ಗಂಗ, ಚಾಳುಕ್ಯ, ರಾಷ್ಟ್ರಕೂಟ ಮತ್ತು ಹೊಯ್ಸಳರ ಕಾಲದಲ್ಲಿ ಜೈನರು ಪ್ರಬಲರಾಗಿದ್ದು ಅವರ ಅಮೋಘವಾದ ಶಿಲ್ಪಗಳು ನಿರ್ಮಿತವಾದುವು. ಆದರೆ ಮೂರ್ತಿಶಿಲ್ಪಕ್ಕೆ ಪ್ರಾಶಸ್ತ್ಯ ದೊರಕಿದುದು ಹಿಂದೂ ಧರ್ಮದ ಆಶ್ರಯದಲ್ಲಿ. ಗಂಗ, ಚಾಳುಕ್ಯ, ರಾಷ್ಟ್ರಕೂಟರ ಕಾಲಗಳಲ್ಲಿ ಕ್ರಮೇಣ ವರ್ಧಿಸುತ್ತ ಬಂದ ಈ ಕಲೆ ಹೊಯ್ಸಳರ ಆಶ್ರಯದಲ್ಲಿ ಅತ್ಯುನ್ನತ ಶಿಖರವನ್ನು ಮುಟ್ಟಿತು. ಆ ಕಾಲದ ಶಿಲ್ಪಗಳನ್ನು ಅವುಗಳ ಅಲಂಕರಣ ವಿಧಾನಗಳನ್ನು ವಿದ್ವಾಂಸರು ಚಿನ್ನದಲ್ಲಿ ಅಕ್ಕಸಾಲಿಗರು ಮಾಡಬಹುದಾದ ಕುಸುರಿ ನಕಾಶೆ ಕೆಲಸಗಳಿಗೆ ಹೋಲಿಸಿದ್ದಾರೆ. ಮೂರ್ತಿಶಿಲ್ಪಗಳ ನೈಜತೆ ಮತ್ತು ಸೌಂದರ್ಯ ಅತ್ಯಮೋಘವಾಗಿವೆ. ಅನಂತರ ವಿಜಯನಗರ ಕಾಲದಲ್ಲಿ ಈ ನಯಗಾರಿಕೆ ಕಂಡು ಬರದಿದ್ದರೂ ಕಂಬಗಳ ಮೇಲೆ ಕುದುರೆ ಸವಾರರ, ದೇವತೆಗಳ ಮತ್ತು ಪುರಾಣದೃಶ್ಯಗಳ ಚಿತ್ರಣಗಳು ತಮ್ಮದೇ ಆದ ಘನತೆ ಸೌಂದರ್ಯಗಳನ್ನು ಸೂಸುತ್ತವೆ. ಇಕ್ಕೇರಿ ಮತ್ತು ಮೈಸೂರರಸರ ಆಶ್ರಯದಲ್ಲಿ ಹಲಕೆಲವು ಶಿಲ್ಪಗಳು ನಿರ್ಮಿತವಾದರೂ ಅವು ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತವೆ.

ಕರ್ನಾಟಕದಲ್ಲಿ ದೊರಕುವ ಅತ್ಯಂತ ಪುರಾತನ ಶಿಲ್ಪವೆಂದರೆ ಬನವಾಸಿಯ (ನೋಡಿ- ಬನವಾಸಿ) ಮಧುಕೇಶ್ವರ ದೇವಾಯಲದಲ್ಲಿ ರಕ್ಷಿಸಿಟ್ಟಿರುವ ನಾಗಶಿಲ್ಪ. ಇದು ಕ್ರಿ.ಶ. ೨ನೆಯ ಶತಮಾನಕ್ಕೆ ಸೇರುತ್ತದೆ. ೩ನೆಯ ಶತಮಾನಕ್ಕೆ ನಿರ್ದೇಶಿಸ ಬಹುದಾದ ತ್ರಿಮೂರ್ತಿ ಶಿಲ್ಪ ವೊಂದು ಗೋಕಾಕ ಜಲಪಾತದ ಬಳಿ ಇದೆ. ಗುಲ್ಬರ್ಗಾ ಜಿಲ್ಲೆಯ ಸನ್ನತಿಯಲ್ಲಿ ಸುಣ್ಣಕಲ್ಲಿನಲ್ಲಿ ಮಾಡಿದ ಶಿಲ್ಪಗಳಿದ್ದು ಅವುಗಳ ಮೇಲೆ ೧ ರಿಂದ ೩ನೆಯ ಶತಮಾನಗಳಿಗೆ ನಿರ್ದೇಶಿಸಬಹುದಾದ ಶಾಸನ ಗಳಿವೆ. ಅಮರಾವತಿ, ನಾಗಾರ್ಜುನ ಕೊಂಡಗಳ ಶೈಲಿಯ ಈ ಶಿಲ್ಪಗಳು ಸಮಕಾಲೀನ ಜನಜೀವನದ ಮೇಲೆ ಬೆಳಕು ಬೀರುತ್ತವೆ. ಆದಿಕಾಲದ ಕದಂಬ ಶೈಲಿಯ ಶಿಲ್ಪಗಳಾವುವೂ ಈವರೆಗೆ ದೊರಕಿಲ್ಲ. ಗಂಗರ ಕಾಲದ ಹಲವಾರು ಶಿಲ್ಪಗಳು ದೊರಕಿವೆ. ಶ್ರವಣಬೆಳಗೊಳದ ದೊಡ್ಡ ಬೆಟ್ಟದ ಮೇಲಿನ ಗೊಮ್ಮಟಮೂರ್ತಿ ಇವುಗಳಲ್ಲಿ ಅತ್ಯಂತ ಸುಂದರವಾದುದು. ಇದಕ್ಕೂ ಮೊದಲ ಕಾಲಕ್ಕೆ ನಿರ್ದೇಶಿತವಾಗಬಹುದಾದ ಚಂದ್ರಗಿರಿ ಬಸದಿಗಳ ಪಾಶರ್ವ್‌ನಾಥ, ಪದ್ಮಾವತಿ, ಕೂಷ್ಮಾಂಡಿನಿ, ಧರಣೀಂದ್ರ ಯಕ್ಷ, ಚಂದ್ರಪ್ರಭ ಮುಂತಾದುವೂ ಅನಂತರ ಕಾಲದ ಕೂಗೆಬ್ರಹ್ಮದೇವರ ಕಂಬದ ಬ್ರಹ್ಮ, ತ್ಯಾಗದಬ್ರಹ್ಮದೇವರ ಕಂಬದ ಚಾವುಂಡರಾಯ ಶಿಲ್ಪಗಳೂ ಸುಂದರವಾಗಿವೆ. ದೊಡ್ಡ ಬೆಟ್ಟದ ಗೊಮ್ಮಟಮೂರ್ತಿ ೯೮೩ರಲ್ಲಿ ಗಂಗರಸ ರಾಚಮಲ್ಲನ (೯೭೪-೯೯) ಮಂತ್ರಿ ಚಾವುಂಡರಾಯನಿಂದ ನಿರ್ಮಿತವಾಯಿತು. ೫೮ ಅಡಿ ಎತ್ತರದ ಈ ಶಿಲ್ಪ ಏಕಶಿಲೆಯಲ್ಲಿ ಕೆತ್ತಲ್ಪಟ್ಟು ಸೌಂದರ್ಯ, ಸೌಮ್ಯತೆಗಳ ಪ್ರತೀಕವಾಗಿದೆ. ಶಿಲ್ಪದ ಕೆಳಭಾಗದಲ್ಲಿ ಬಂಡೆಯನ್ನು ಕೆತ್ತದೆ ಹುತ್ತದಾಕಾರವಾಗಿ ಉಳಿಸಿ ಅದರಿಂದ ಹಾವುಗಳು ಹರಿದು ಬರುತ್ತಿರುವಂತೆ ತೋರಿಸಲಾಗಿದೆ. ವಿಸ್ತಾರವಾದ ಎದೆ ಭುಜ ಮತ್ತು ನೀಳವಾಗಿ ಇಳಿಬಿದ್ದಿರುವ ತೋಳುಗಳಿಂದ ಕೂಡಿದ ಈ ಭವ್ಯ ಬೆತ್ತಲೆಮೂರ್ತಿಯ ಕೈಕಾಲುಗಳಿಗೆ ಮಾಧವೀಲತೆ ಸುತ್ತಿಕೊಂಡಿದೆ. ಪ್ರಪಂಚದ ಏಕಶಿಲಾ ವಿಗ್ರಹಗಳಲ್ಲೆಲ್ಲ ಹಿರಿದಾದ ಈ ಅಪೂರ್ವ ಮಹಾಮೂರ್ತಿ ತನ್ನ ಸ್ಥಾನವಿಶೇಷ ಮತ್ತು ಗಾತ್ರಗಳಿಂದ ಈಜಿಪ್ಟಿನ ರ್ಯಾಮ್ಸೆಸ್ ವಿಗ್ರಹಗಳಿಗಿಂತಲೂ ಆಕರ್ಷಣೀಯವಾಗಿದೆ. ಈ ವಿಶ್ವವಿಖ್ಯಾತ ಮೂರ್ತಿಯ ಮುಗುಳ್ನಗೆಯ ಪ್ರಸನ್ನ ಮುಖ ಮುದ್ರೆ, ಗುಂಗುರು ತಲೆಕೂದಲು ಮನೋಹರವಾಗಿವೆ. ಜೈನತತ್ತ್ವಗಳಾದ ತ್ಯಾಗ, ವೈರಾಗ್ಯಗಳನ್ನು ಈ ಶಿಲ್ಪ ಎತ್ತಿ ತೋರುತ್ತದೆ. ಇಮ್ಮಡಿ ಭೂತುಗನ ಕಾಲದ (೯೫೦) ಆತಕೂರುಶಾಸನದ ಮೇಲಿರುವ ನಾಯಿ ಮತ್ತು ಹಂದಿಗಳ ಶಿಲ್ಪ ನೈಜವಾಗಿಯೂ ದೊಡ್ಡಹುಂಡಿ ಶಾಸನದ ಮೇಲಿರುವ ನೀತಿಮಾರ್ಗನ ಸಾವಿನ ಶಿಲ್ಪಕರುಣರಸಭರಿತವಾಗಿಯೂ ಇವೆ. ಶ್ರವಣಬೆಳಗೊಳ (ನೋಡಿ- ಶ್ರವಣಬೆಳಗೊಳ) ಮಠದ ೨ ಅಡಿಗಳೆತ್ತರದ ಕಂಚಿನ ಜಿನಮೂರ್ತಿ ಗಂಗರಾಜ ಮಾರಸಿಂಹನ ಸೋದರಿ ಕುಂದಣ ಸೋಮಿದೇವಿಯ ನಿರ್ಮಾಣವೆಂದು ಕಾಣುತ್ತದೆ. ಗಂಗಶಿಲ್ಪದ ಪ್ರಭಾವ ಕಂಬದಹಳ್ಳಿ (ನೋಡಿ- ಕಂಬದಹಳ್ಳಿ) ಆದಿನಾಥ ಬಸದಿ, ನಂದಿಯ ಭೋಗ ನಂದೀಶ್ವರ ಮತ್ತು ನರಸಮಂಗಲದ ರಾಮೇಶ್ವರ ದೇವಾಲಯಗಳ ಶಿಲ್ಪಗಳ ಮೇಲೂ ಕಂಡುಬರುತ್ತದೆ.

ಬಾದಾಮಿ ಚಳುಕ್ಯರ ಕಾಲದಲ್ಲಿ ಕರ್ಣಾಟಕದ ಶಿಲ್ಪಸಂಪ್ರದಾಯ ತನ್ನ ವಿಶಿಷ್ಟ ಶೈಲಿಯನ್ನು ಬೆಳೆಸಿಕೊಂಡಿತು. ಬಾದಾಮಿ (ನೋಡಿ- ಬಾದಾಮಿ) ಗುಹೆಗಳಲ್ಲಿನ ಶಿಲ್ಪಗಳು ರಮಣೀಯವಾಗಿವೆ. ೧ನೆಯ ಗುಹೆಯ ೧೮ ಕೈಗಳ ನಟರಾಜ, ೨' ೨" ಎತ್ತರ ಅರ್ಧನಾರೀಶ್ವರ, ಹಾರುತ್ತಿರುವ ಗಂಧರ್ವರು ಮನುಷ್ಯ ತಲೆಯ ಮೇಲೆ ೫ ಹೆಡೆಗಳುಳ್ಳ ಸುರುಳಿಯಾದ ದೇಹವುಳ್ಳ ನಾಗ ಶಿಲ್ಪಗಳು ನಾಜೂಕಾಗಿ ಕೆತ್ತಲ್ಪಟ್ಟಿವೆ ೨ನೆಯ ಗುಹೆಯಲ್ಲಿನ ಭವ್ಯ ಭೂವರಾಹ, ರಾಕ್ಷಸನೊಬ್ಬನನ್ನು ಮೆಟ್ಟುತ್ತಿರುವ ತ್ರಿವಿಕ್ರಮ ಶಿಲ್ಪಗಳೂ ೩ನೆಯ ಗುಹೆಯಲ್ಲಿನ ೧೧ ಅಡಿಗಳೆತ್ತರದ ನರಸಿಂಹ, ಹರಿಹರ, ಆಸನಸ್ಥ ವಿಷ್ಣುಶಿಲ್ಪಗಳೂ, ೪ನೆಯ ಗುಹೆಯ ಪದ್ಮಾವತಿ, ಆದಿನಾಥ ಮತ್ತು ಮಾಧವೀಲತೆಗಳಿಂದ ಆವೃತನಾದ ಗೊಮ್ಮಟಮೂರ್ತಿಗಳೂ ಸತ್ತ್ವಪೂರ್ಣ ಸುಂದರಕೃತಿಗಳು. ಚಾಳುಕ್ಯರ ಕಲಾದೇಗುಲವೆನಿಸಿದ ಐಹೊಳೆಯಲ್ಲಿ (ನೋಡಿ- ಐಹೊಳೆ) ವಿಷ್ಣು ಮತ್ತು ಶಿವನ ಅನೇಕ ಅವತಾರಗಳು ಕೆತ್ತಲ್ಪಟ್ಟಿವೆ. ೨ ರಿಂದ ೧೮ ಕೈಗಳಿರುವ ನಟರಾಜ ಮೂರ್ತಿಗಳೂ ಗೋವರ್ಧನಧಾರಿಕೃಷ್ಣ, ರಾಮಾಯಣ, ಭಾಗವತ, ಹರಿವಂಶಗಳ ದೃಶ್ಯಗಳೂ ಶಿವ-ಪಾರ್ವತಿಯರ ಕಲ್ಯಾಣ ಮುಂತಾದ ಶಿಲ್ಪಗಳೂ ಜೀವಂತ ಸತ್ತ್ವಪೂರ್ಣ ಕೃತಿಗಳಾಗಿವೆ. ಈ ಶಿಲ್ಪಗಳ ಚಪ್ಪಟೆಯಾದ ಮುಖ, ತುಂಬುಗಲ್ಲ, ಚೈತನ್ಯ ಭರಿತ ಮುಖಭಾವಗಳಿಂದ ಇವನ್ನು ಸಮಕಾಲೀನ ಪಲ್ಲವ ಮತ್ತು ಇತರ ಕೃತಿಗಳಿಂದ ಪ್ರತ್ಯೇಕಿಸಬಹುದಾಗಿದೆ. ಇವರ ಮತ್ತೊಂದು ಕಲಾಕೇಂದ್ರವಾದ ಪಟ್ಟದಕಲ್ಲಿನ (ನೋಡಿ- ಪಟ್ಟದಕಲ್ಲು) ಅನೇಕ ಶಿಲ್ಪಗಳು ಸದೃಢವಾಗಿಯೂ ಸ್ಫುಟವಾಗಿಯೂ ನಾಜೂಕಾಗಿಯೂ ಕೆತ್ತಲ್ಪಟ್ಟಿವೆ. ಇಲ್ಲಿನ ತ್ರೈಲೋಕೇಶ್ವರ ದೇವಾಲಯದ ಕಂಬಗಳಲ್ಲಿ ಪಂಚತಂತ್ರದ ಕಥೆಗಳು ನಿರೂಪಿತವಾಗಿವೆ. ವಿರೂಪಾಕ್ಷ ದೇವಾಲಯದ ಶಿವ, ನಾಗ ಮತ್ತು ರಾಮಾಯಣ ಶಿಲ್ಪಗಳ ವಿಷಯವಾಗಿ ಬರೆಯುತ್ತ ಪರ್ಸಿ ಬ್ರೌನ್ ಕಟ್ಟಡ ಶೈಲಿಯೊಂದಿಗೆ ಮಿಳಿತವಾದ ಈ ಶಿಲ್ಪಗಳು ಅಮೋಘವೆಂದಿದ್ದಾನೆ. ಈ ರೀತಿಯಾಗಿ ಚಳುಕ್ಯರ ಮೂರ್ತಿ ಶಿಲ್ಪದಲ್ಲಿ ಪೌರಾಣಿಕ ವ್ಯಕ್ತಿಗಳ, ದೇವ ದೇವಿಯರ ವಿಗ್ರಹಗಳನ್ನೂ ಸತ್ತ್ವಪೂರ್ಣವಾಗಿ ನಿರೂಪಿಸಲಾಗಿದೆ.

ರಾಷ್ಟ್ರಕೂಟರ ಕಾಲದಲ್ಲಿ ಶಿಲ್ಪಕಲೆ ವೃದ್ಧಿ ಹೊಂದಿ ಆ ಕಾಲದ ಮಹೋನ್ನತ ನಿದರ್ಶನವಾಗಿ ಎಲ್ಲೋರದ (ನೋಡಿ- ಎಲ್ಲೋರ) ಕೈಲಾಸನಾಥ ಮಂದಿರದ ಶಿಲ್ಪಗಳು ಉಳಿದು ಬಂದಿವೆ. ಈ ಶೈವ ಮಂದಿರದಲ್ಲಿ ಅರ್ಧನಾರೀಶ್ವರ, ಹರಿಹರ, ಗಂಗಾ, ಯಮುನಾ ಮತ್ತು ಶಿವ-ಪಾರ್ವತಿಯರು ಪಗಡೆಯಾಡುವ, ರಾವಣನು ಕೈಲಾಸವೆತ್ತುವ ಶಿಲ್ಪಗಳಿವೆ. ಇವುಗಳಲ್ಲಿ ಕಡೆಯ ಶಿಲ್ಪದಲ್ಲಿ ಕೈಲಾಸವನ್ನೇ ಎತ್ತಲು ಪ್ರಯತ್ನಿಸುವ ಆವೇಶಭರಿತ ರಾವಣ, ಭಯಗ್ರಸ್ತ ಪರ್ವತವಾಸಿಗಳು, ನಿಶ್ಚಲ ಶಾಂತಿಪೂರ್ಣ ಶಿವ ಇವುಗಳ ಚಿತ್ರಣ ಅಮೋಘವಾಗಿವೆ. ಮಾಮಲ್ಲಪುರದ ಶಿಲ್ಪಗಳ ಪ್ರಭಾವ ಇಲ್ಲಿ ಎದ್ದು ಕಾಣುತ್ತದೆ. ಇದಲ್ಲದೆ ಇಲ್ಲಿರುವ ಹಿಂದೂ ಮತ್ತು ಜೈನ ಗುಹೆಗಳ ಶಿಲ್ಪಗಳೂ ಗಮನಾರ್ಹ. ಈ ಶೈಲಿಗೆ ಸೇರಿದ ಕೊನೆಯ ನಿರ್ಮಾಣವೆಂದರೆ ಮುಂಬಯಿ ಬಳಿಯ ಎಲಿಫೆಂಟ (ನೋಡಿ- ಎಲಿಫೆಂಟ್) ದ್ವೀಪದ ಶಿಲ್ಪಗಳು. ಇಲ್ಲಿನ ಗುಹಾಂತರದೇವಾಲಯದಲ್ಲಿ ಬೃಹದಾಕಾರದ ಹತ್ತು ಶಿವನ ಮೂರ್ತಿಗಳಿವೆ. ಇವುಗಳಲ್ಲಿ ಉತ್ತರ ದ್ವಾರದ ಎದುರಿರುವ ತ್ರಿಮೂರ್ತಿಶಿಲ್ಪ ಅಮೋಘವಾದುದು; ಮಧ್ಯದಲ್ಲಿ ಶಿವಮಹಾದೇವ. ಎರಾಡದಲ್ಲಿ ಅಘೋರ ಭೈರವ ಮತ್ತು ಬಲಭಾಗದಲ್ಲಿ ಶಾಂತ ಉಮೆಯ ಮುಖಗಳಿರುವ ಈ ತ್ರಿಮೂರ್ತಿ ಶಿಲ್ಪ ಜಗತ್ತಿನ ಶ್ರೇಷ್ಠ ಕಲಾಕೃತಿಗಳಲ್ಲೊಂದು. ಅನಂತರ ಕಾಲದಲ್ಲಿ ಕಲ್ಯಾಣದ ಚಾಳುಕ್ಯರ ಆಶ್ರಯದಲ್ಲಿ ನಿರ್ಮಿತವಾದ ಹಲವಾರು ದೇವಾಲಯಗಳಲ್ಲಿನ ವಿಗ್ರಹಗಳು ಗಮನಾರ್ಹವಾಗಿವೆ. ಬಳ್ಳಿಗಾವೆಯ ಐದು ದೇವಾಲಯಗಳಲ್ಲಿ ಕೆಲವು ಉತ್ತಮ ಶಿಲ್ಪಗಳಿವೆ (ಕಾಲ ೧೦೬೦). ಹೊಯ್ಸಳ ಕಾಲದ ಶಿಲ್ಪಗಳಿಗೆ ಇವು ತಳಹದಿಯೆಂದು ಪಿ. ವೆಂಕೋಬರಾಯರು ತಿಳಿಸುತ್ತಾರೆ. ಇಲ್ಲಿನ ತ್ರಿಪುರಸಂಹಾರ, ನಾಗಕನ್ಯೆಯರು, ನರ್ತಕಿಯರು ಮತ್ತು ಪಂಚತಂತ್ರದ ಶಿಲ್ಪಗಳೂ ಸತ್ತ್ವಪೂರ್ಣವಾಗಿವೆ. ಬಳ್ಳಾರಿ, ಧಾರವಾಡ ಮತ್ತು ಹೈದರಾಬಾದು ಕರ್ಣಾಟಕ ಜಿಲ್ಲೆಗಳ ದೇವಾಲಯಗಳ ಬಾಗಿಲುವಾಡಗಳ ಶಿಲ್ಪಗಳು ಸುಂದರವಾಗಿವೆ. ಲೊಕ್ಕುಂಡಿಯ ಕಾಶೀವಿಶ್ವೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ಮತ್ತು ಇಟಗಿಯ (ನೋಡಿ- ಇಟಗಿ) ಮಹಾದೇವ ಮಂದಿರಗಳಲ್ಲಿನ ಕೆತ್ತನೆ ಕೆಲಸ ಅಸಾಧಾರಣವಾಗಿವೆ. ಕುರುವತ್ತಿ ದೇವಾಲಯದ ಮದನಿಕೆ ವಿಗ್ರಹಗಳು ಮೋಹಕವಾಗಿವೆ. ಇಲ್ಲಿನ ಗೋಪುರದಲ್ಲಿನ ಕಪಿಗಳ ಗುಂಪು ಆಕರ್ಷಕವಾಗಿದೆ. ಬಳ್ಳಿಗಾವೆಯ ಗಂಡಭೇರುಂಡ ಸ್ತಂಭದ ಮೇಲಿನ ಅರ್ಧಮಾನವ, ಅರ್ಧ ಪಕ್ಷಿಯಾಕಾರದ ಗಂಡಭೇರುಂಡ ವಿಗ್ರಹ ನೈಜ ಸೌಂದರ್ಯದ ಪ್ರತೀಕವಾಗಿದೆ.

ಹೊಯ್ಸಳರ ಕಾಲದ ಮಂದಿರಗಳಲ್ಲಿ ಮೂರ್ತಿಶಿಲ್ಪ ಕಲೆ ಅತ್ಯಚ್ಚಶೃಂಗ ಮುಟ್ಟುತ್ತದೆ. ಇವರು ಉಪಯೋಗಿಸಿದ ನಯವಾದ ಬಳಪಕಲ್ಲಿನ ಶಿಲ್ಪಗಳು ವರ್ಣನಾತೀತವಾದುವೆಂದೂ ಬೆಂಜಮಿನ್ ರೋಲಂಡ್ ಹೇಳುತ್ತಾನೆ. ೮೦ಕ್ಕೂ ಮೀರಿದ ಹೊಯ್ಸಳ ಕಾಲದ ಗುಡಿಗಳಲ್ಲಿ ಬೇಲೂರು (ನೋಡಿ- ಬೇಲೂರು), ಹಳೇಬೀಡು (ನೋಡಿ- ಹಳೇಬೀಡು), ಸೋಮನಾಥಪುರ (ನೋಡಿ- ಸೋಮನಾಥಪುರ) ಮಂದಿರಗಳ ಶಿಲ್ಪಗಳು ಹೆಚ್ಚು ಪ್ರಖ್ಯಾತವಾದುವು. ಚಿನ್ನಬೆಳ್ಳಿಯ ಕುಸುರಿ ಕೆಲಸಕ್ಕೆ ಹೋಲಿಸಲಾಗಿರುವ ಹಳೇಬೀಡಿನ ಕೆತ್ತನೆ, ಜೀವಚಿತ ಸೌಂದರ್ಯಖನಿಗಳೆನಿಸಿರುವ ಬೇಲೂರಿನ ಶಿಲಾಬಾಲಿಕೆಯರು, ದೇವದೇವಿಯರ, ಪ್ರಾಣಿಪಕ್ಷಿಗಳ ಹೂ ಬಳ್ಳಿಗಳ ಶಿಲ್ಪಗಳು, ಕರ್ಣಾಟಕ ರೂವಾರಿಗಳ ದಿವ್ಯಕೌಶಲದ ಪ್ರತೀಕಗಳಾಗಿವೆ. ಹೊಯ್ಸಳ ಮಂದಿರಗಳಲ್ಲಿ ಕೆತ್ತಿರುವ ನೂರಾರು ಆನೆಗಳು ಸತ್ತ್ವಪೂರ್ಣ, ನೈಜ, ವೈವಿಧ್ಯಮಯ ಶಿಲ್ಪಗಳು. ಹೊರಗೋಡೆಗಳ ಮೇಲೆ ಕೆತ್ತಿರುವ ದೇವತಾ ಮೂರ್ತಿಗಳು ಅದ್ಭುತವಾಗಿವೆ. ಪ್ರಾಯಶಃ ಹೊಯ್ಸಳ ರಾಣಿ, ನಾಟ್ಯ ಪ್ರವೀಣೆ ಶಾಂತಲೆಯ ಪ್ರತಿಕೃತಿಗಳೆನಿಸಿರುವ, ಅಥವಾ ನಾಟ್ಯ ಮೋಹಿನಿಯ ವಿವಿಧ ಭಂಗಿಗಳಾಗಿರಬಹುದಾದ ಶಿಲಾಬಾಲಿಕೆಯರ ಪ್ರತಿಮೆಗಳು ಮಾನವ ಕೈಚಳಕದ ಅನುಪಮ ಕೃತಿಗಳು. ಪರ್ಸಿಬ್ರೌನ್ ಹೊಯ್ಸಳ ಮಂದಿರಗಳನ್ನು ವಾಸ್ತುಶಿಲ್ಪಗಳೆನ್ನುವುದಕ್ಕಿಂತ ಅನ್ವಯಿಕ ಕಲಾರೀತಿಯೆಂದು ಹೊಗಳಿದ್ದಾನೆ. ಆ ಮಂದಿರಗಳ ನವರಂಗಗಳ ಭುವನೇಶ್ವರಿ, ಕಂಬ, ಅವುಗಳ ಮೇಲಿನ ಕೆತ್ತನೆ, ಹೊರಗೋಡೆಗಳ ಮೇಲಿನ ಅಲಂಕರಣ ಇವುಗಳಿಗೆ ಹೋಲಿಕೆಗಳಿಲ್ಲ. ಈ ಕಾಲದ ಜೈನಶಿಲ್ಪಗಳೂ ಗಮನಾರ್ಹ. ಬಸ್ತಿಹಳ್ಳಿಯಲ್ಲಿ ಪಾಶರ್ವ್‌, ಆದಿ ಮತ್ತು ಶಾಂತಿನಾಥರ ವಿಗ್ರಹಗಳಿದ್ದು, ಮೊದಲನೆಯದು ಮತ್ತು ಮೂರನೆೆಯದು ೧೪ ಅಡಿ ಎತ್ತರವಾಗಿವೆ. ಮೂರೂ ಬಹಳ ಸುಂದರ ವಿಗ್ರಹಗಳಾಗಿವೆ. ಈ ಕಾಲಕ್ಕೆ ಸೇರುವ ನಂಜನಗೂಡು (ನೋಡಿ- ನಂಜನಗೂಡು) ದೇವಾಲಯದ ಉಚ್ಚಿಷ್ಠ ಗಣಪತಿ, ಹಳೇಬೀಡಿನ ನೃತ್ಯಸರಸ್ವತಿ, ನೃತ್ಯಗಣಪತಿ, ನುಗ್ಗಿಹಳ್ಳಿಯ (ನೋಡಿ- ನುಗ್ಗೆಹಳ್ಳಿ) ಗೋವರ್ಧನಧರ ಕೃಷ್ಣ ಮತ್ತು ಹಯಗ್ರೀವ- ಇವು ಪ್ರಸಿದ್ಧ ಕೃತಿಗಳು.

ವಿಜಯನಗರ ಕಾಲದಲ್ಲಿ ಶಿಲ್ಪಕಲೆ ಹೊಸದಿಕ್ಕಿನಲ್ಲಿ ಪ್ರವಹಿಸಿತು. ಪ್ರಸಿದ್ಧ ಕಲಾಭಿಜ್ಞರೊಬ್ಬರು ಹೇಳುವಂತೆ ಪರಿಷ್ಕೃತವಾದ ಮುಗಿತಾಯದಲ್ಲೂ ಸೂಕ್ಷ್ಮ ವಿವರಗಳ ನಿಷ್ಕೃಷ್ಟತೆಯಲ್ಲೂ ಹೊಯ್ಸಳಕಲೆ, ಪ್ರಮಾಣಬದ್ಧತೆಯಲ್ಲೂ ಘನತೆ ಗಾಂಭೀರ್ಯಗಳಲ್ಲೂ ಪಲ್ಲವಕಲೆ ಅಸಾದೃಶ್ಯವಾಗಿದ್ದರೆ, ನಯವಾದ ಸತ್ತ್ವಪೂರ್ಣ ಭಾವ ನಿರೂಪಣದಲ್ಲಿ ವಿಜಯನಗರ ಶಿಲ್ಪ ಅವನ್ನು ಮೀರಿಸುತ್ತವೆ. ಬೃಹದಾಕಾರದ ೨೨ ಅಡಿಗಳ ಏಕಶಿಲಾ ಮೂರ್ತಿ ನರಸಿಂಹ ಮತ್ತು ಹನುಮಂತನ ಶಿಲ್ಪಗಳಲ್ಲಿ ಭಯಂಕರತೆ ಎದ್ದು ಕಾಣುತ್ತದೆ. ಹಂಪಿಯ (ನೋಡಿ- ಹಂಪೆ) ಹಜಾರ ರಾಮಸ್ವಾಮಿಯ ಅಂಗಳದ ಗೋಡೆಗಳ ಮೇಲಿನ ರಾಮಾಯಣ ಶಿಲ್ಪಗಳು ಜೀವಂತ ಸತ್ತ್ವಶಾಲಿ ಸುಂದರ ಕೃತಿಗಳು. ವಿಠಲ ಸ್ವಾಮಿಯ ದೇವಾಲಯದ ಮುಖಮಂಟಪದ ಜಗತಿಯಲ್ಲಿರುವ ವಿಪುಲ ಶಿಲ್ಪಗಳೂ ಕಂಬಗಳ ಮೇಲಿನ, ದೊಡ್ಡ ಅಳತೆಯ ವಿಗ್ರಹಗಳೂ ಭಾವಪೂರ್ಣವಾಗಿದ್ದು ಸೌಂದರ್ಯದ ಪ್ರತೀಕಗಳಾಗಿವೆ. ಈ ಕಾಲದ ಕೆತ್ತನೆಗಳಲ್ಲಿ ಕಾಣುವ ಮೃಗ ಪಕ್ಷಿಗಳ ಕೆತ್ತನೆ ಮುಖ್ಯವಾಗಿ ಆನೆ ಕುದುರೆಗಳ ಶಿಲ್ಪಗಳು ಕಣ್ಸೆಳೆಯುತ್ತವೆ. ಕರ್ಣಾಟಕದ ಹೊರಗಿದ್ದರೂ ವಿಜಯನಗರದ ಅರಸರ ಆಶ್ರಯದಲ್ಲಿ ನಿರ್ಮಿತವಾದ ತಾಡಪತ್ರಿ, ಲೇಪಾಕ್ಷಿ (ನೋಡಿ- ಲೇಪಾಕ್ಷಿ) ವಿರಿಂಚಿ ಪುರಗಳ ಶಿಲ್ಪವೈಭವವನ್ನು ಸ್ಮರಿಸದಿರಲು ಸಾಧ್ಯವಿಲ್ಲ. ತಾಡಪತ್ರಿಯ ಶಿಲ್ಪಗಳು ಈ ಕಾಲದ ಉಳಿದೆಲ್ಲ ಕೃತಿಗಳಿಗಿಂತಲೂ ಹೆಚ್ಚು ಕಲಾಭಿರುಚಿಯನ್ನು ಪ್ರದರ್ಶಿಸುತ್ತವೆಂದು ಜೇಮ್ಸ್‌ ಫಗುರ್ಯ್‌ಸನ್ ತಿಳಿಸುತ್ತಾನೆ. ಈ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಿತವಾದ ಕಾರ್ಕಳದ (ನೋಡಿ- ಕಾರ್ಕಳ) ವೇಣೂರಿನ ಗೊಮ್ಮಟ ಮೂರ್ತಿಗಳೂ ಮೈಸೂರು ಜಿಲ್ಲೆಯ ಶ್ರಮಣರ ಗುಡ್ಡದ ಗೊಮ್ಮಟ ಮೂರ್ತಿಯೂ ಜೈನಶಿಲ್ಪದ ಸುಂದರ ಕೃತಿಗಳಾಗಿವೆ. ಅನಂತರ ಕಾಲದ ಇಕ್ಕೇರಿ ಶಿಲ್ಪಶೈಲಿಯಲ್ಲಿ ಹೊಯ್ಸಳ ಮತ್ತು ವಿಜಯನಗರ ಶಿಲ್ಪಗಳ ಛಾಯೆಯಿದ್ದರೂ ಅವುಗಳ ಪ್ರೌಢಿಮೆ ಕಾಣಬರುವುದಿಲ್ಲ. ವೀರಭದ್ರ ಮಂದಿರದ ಭುವನೇಶ್ವರಿ ದೇವಾಲಯದ ಗೋಡೆಗಳ ಮೇಲಿನ ಆಲಂಕಾರಿಕ ನೃತ್ಯಕಾರ, ಸಂಗೀತಕಾರರ ಶಿಲ್ಪಗಳೂ ಐತಿಹಾಸಿಕ ಪ್ರಾಮುಖ್ಯ ಪಡೆದಿವೆ. ಕಂಬಗಳ ಮೇಲಿನ ಯಕ್ಷ-ಯಕ್ಷಿಯರ ಸುಂದರ ಪ್ರತಿಮೆಗಳು ಹಂಸ ಮತ್ತು ಸಿಂಹಗಳ ಶಿಲ್ಪಗಳೂ ಆಕರ್ಷಕವಾಗಿವೆ.

ವಿಜಯನಗರ ಕಾಲದಿಂದ ಮೈಸೂರು ರಾಜ್ಯ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪ ಕಲೆ ಹೊಯ್ಸಳ ಮತ್ತು ದ್ರಾವಿಡ ಶೈಲಿಗಳ ಮಿಲನದಿಂದ ಹೊಸ ರೂಪುರೇಖೆಗಳನ್ನು ಪಡೆಯುತ್ತವೆ. ಶೃಂಗೇರಿಯ (ನೋಡಿ- ಶೃಂಗೇರಿ) ವಿದ್ಯಾಶÀಂಕರ (೧೩೫೬), ಕೋಲಾರ ಜಿಲ್ಲೆಯ ವಿರೂಪಾಕ್ಷಪುರದ ವಿರೂಪಾಕ್ಷ (೧೪೨೦) ಗುಡಿಗಳ ಶಿಲ್ಪಗಳು ಈ ಹೊಸ ಶೈಲಿಯ ನಿದರ್ಶನಗಳಾಗಿವೆ. ವಿದ್ಯಾಶಂಕರ ದೇವಾಲಯವಂತೂ ಪ್ರತಿಮಾಗೃಹವೆಂದು ಕರೆಯಲರ್ಹವಾಗಿದೆ. ಇಲ್ಲಿನ ದೇವವಿಗ್ರಹಗಳೂ ಪೌರಾಣಿಕ ದೃಶ್ಯಗಳೂ ಕಲ್ಲಿನ ಶಿಲ್ಪಗಳೂ ಉನ್ನತ ಕೃತಿಗಳಾಗಿವೆ. ೧೬ನೆಯ ಶತಮಾನದ ಆವನಿಯ (ನೋಡಿ- ಆವನಿ) ದೇವಸ್ಥಾನಗಳ ಹೊರಗೋಡೆಗಳ ಮೇಲಿನ ಶಿಲ್ಪಗಳೂ ಭುವನೇಶ್ವರಿಯ ಅಷ್ಟದಿಕ್ಪಾಲಕ ಶಿಲ್ಪಗಳೂ ಸುಂದರ ಕೃತಿಗಳು. ೧೫೬೦ರ ಕೃಷ್ಣರಾಜ ಸಾಗರದ ಗೋಪಾಲಕೃಷ್ಣ ಗುಡಿಯ ಮೂಲ ಮೂರ್ತಿ ಆರಡಿ ಎತ್ತರವಾಗಿದ್ದು, ದೇವತೆ, ಮುನಿ, ಗೋಪಗೋಪಿಯರು ಮತ್ತು ಹಸುಗಳಿಂದ ಸುತ್ತುವರಿದ ಬಹಳ ಸುಂದರ ಕೃತಿ. ೧೭ನೆಯ ಶತಮಾನದ ತೆರಕಣಾಂಬಿಯ ದೇವಾಲಯದ ಕಂಬಗಳ ಮೇಲಿರುವ ದೇವತಾವಿಗ್ರಹಗಳಲ್ಲಿ ಭಾರ್ಹುತ್ ಶಿಲ್ಪಗಳ ಛಾಯೆ ಕಂಡುಬರುತ್ತದೆ. ಕುದುರೆ ಸವಾರಿ ಮಾಡುತ್ತಿರುವ ನಾಲ್ಕು ಕೈಗಳ ವಿಷ್ಣುಮೂರ್ತಿ ಅಪೂರ್ವವಾದುದು. ಈ ಕಾಲದ (೧೬೬೪) ಚಾಮುಂಡಿಬೆಟ್ಟದ ೧೧ ಅಡಿ ಎತ್ತರದ ಬಸವ ಕಲಾಪೂರ್ಣವಾದ ಸುಂದರ ಕೃತಿ. ೧೭ನೆಯ ಶತಮಾನದಲ್ಲಿ ಮೈಸೂರರಸರ ಆಶ್ರಯದಲ್ಲಿ ನಿರ್ಮಿತವಾದ ಗುಂಡ್ಲುಪೇಟೆಯ ಪರವಾಸುದೇವ ಮಂದಿರದಲ್ಲಿನ ಶಿಲ್ಪಗಳು ಗಮನಾರ್ಹವಾಗಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನೂರಾರು ಮೂರ್ತಿಶಿಲ್ಪಗಳು ಸೃಷ್ಟಿಯಾದವು. ನಂಜನಗೂಡಿನಲ್ಲಿರುವ ಶೈವಪುರಾತನರ ಮೂರ್ತಿಗಳ ಸಾಲು, ಭಕ್ತರ ವಿಗ್ರಹಗಳು ಇವಕ್ಕೆ ಮಾದರಿಗಳು. ಅನಂತರ ಕಾಲದಲ್ಲಿ ಅನೇಕ ದೇವಾಲಯಗಳೂ ಮೂರ್ತಿಶಿಲ್ಪಗಳೂ ನಿರ್ಮಿತವಾಗಿದ್ದರೂ ಅವುಗಳ ಕಾಣಿಕೆ ಗಮನಾರ್ಹವಾಗಿಲ್ಲ. ಈಚಿನ ಮೈಸೂರು ಅರಮನೆಯ ಅಲಂಕರಣಕ್ಕೆ ಮಾಡಲ್ಪಟ್ಟ ಶಿಲ್ಪಕೃತಿಗಳಲ್ಲಿ ವಿವಿಧ ಕಾಲಗಳ ಶಿಲ್ಪಿಗಳ ಮತ್ತು ಆಧುನಿಕ ಯುಗದ ವರ್ಣಚಿತ್ರಗಳ ಪ್ರಭಾವವಿದ್ದು ಕಲಾತ್ಮಕವಾಗಿವೆಯೆಂದು ವಿನ್ಸೆಂಟ್. ಎ. ಸ್ಮಿತ್ ಅಭಿಪ್ರಾಯಪಡುತ್ತಾನೆ. ವರ್ತಮಾನ ಕಾಲದ ಸುಪ್ರಸಿದ್ಧ ಶಿಲ್ಪಿಗಳಾಗಿದ್ದ ಸಿದ್ಧಲಿಂಗ ಸ್ವಾಮಿಗಳ ಶಿಲ್ಪಗಳೂ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಶಿಲ್ಪಗಳ ಸಂತತಿಯೂ ಈ ಗುಂಪಿಗೆ ಸೇರಿದ್ದು ಪುರಾತನ ಸಂಪ್ರದಾಯದ ಆಧುನಿಕ ಅನುಕರಣೆಯ ನಿದರ್ಶನಗಳಾಗಿವೆ. (ಎಸ್.ಕೆ.ಆರ್.)