ಕರ್ನಾಟಕದ ಆರ್ಥಿಕ ಪ್ರಗತಿ

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕದ ಆರ್ಥಿಕ ಪ್ರಗತಿ : ಏಕೀಕರಣದ ಅನಂತರ ಕರ್ನಾಟಕ ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಈ ಲೇಖನದಲ್ಲಿ ವಿವೇಚಿಸಲಾಗಿದೆ. ಕರ್ನಾಟಕದ ಒಟ್ಟು ವರಮಾನ ೧೯೫೬-೫೭ರಲ್ಲಿ ರೂ.೪೯೫ ಕೋಟಿ ಇದ್ದದ್ದು ೧೯೬೮-೬೯ರಲ್ಲಿ ರೂ.೧,೩೬೦ ಕೋಟಿಗೆ ಏರಿತ್ತು. ಸರಾಸರಿ ತಲಾ ವರಮಾನ ರೂ.೨೦೦ ರಿಂದ ರೂ.೫೦೦ಕ್ಕೆ ಅಧಿಕಗೊಂಡಿತ್ತು.

ವ್ಯವಸಾಯ, ನೀರಾವರಿ ಮತ್ತು ವಿದ್ಯುಚ್ಫಕ್ತಿ[ಬದಲಾಯಿಸಿ]

ವ್ಯವಸಾಯ, ನೀರಾವರಿ ಮತ್ತು ವಿದ್ಯುಚ್ಫಕ್ತಿ: ಕರ್ಣಾಟಕದ ಆರ್ಥಿಕ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿವೆ. ಕೈಗಾರಿಕೆಯ ಬೆಳವಣಿಗೆಯಾಗುತ್ತಿದ್ದರೂ ಕರ್ನಾಟಕ ಈಗಲೂ ಭಾರತದ ಇತರ ರಾಜ್ಯಗಳಂತೆಯೇ ವ್ಯವಸಾಯ ಪ್ರಧಾನ ರಾಜ್ಯವಾಗಿದೆ. ೧೯೭೧ರ ಜನಗಣತಿಯ ಪ್ರಕಾರ ಶೇ. ೨೪.೩ರಷ್ಟು ಜನ ಮಾತ್ರ ಪಟ್ಟಣವಾಸಿಗಳಾಗಿದ್ದರು. ಉಳಿದವರು ಗ್ರಾಮವಾಸಿಗಳು. ಇವರ ಕಸಬು ಪ್ರಧಾನವಾಗಿ ವ್ಯವಸಾಯ. ಈ ರಾಜ್ಯದ ಒಟ್ಟು ವರಮಾನದಲ್ಲಿ ವ್ಯವಸಾಯ ಮೂಲದಿಂದ ಬರುವುದು ಅರ್ಧಕ್ಕಿಂತಲೂ ಹೆಚ್ಚು. ಇದ್ದಿತು. ೧೯೬೮-೬೯ರ ಅಂದಾಜಿನ ಪ್ರಕಾರ, ದೇಶದ ಒಟ್ಟು ವರಮಾನದಲ್ಲಿ ಶೇ. ೫೮ರಷ್ಟು ವ್ವವಸಾಯದಿಂದ ಬಂದದ್ದು. ವ್ವವಸಾಯ, ಮೀನುಗಾರಿಕೆ, ಪಶುಪಾಲನೆ ಮತ್ತು ಅರಣ್ಯಸಂಪತ್ತಿನ ವರಮಾನಗಳೆಲ್ಲವನ್ನೂ ಒಟ್ಟಿಗೆ ಸೇರಿಸಿದರೆ ರಾಜ್ಯದ ಒಟ್ಟು ವರಮಾನದಲ್ಲಿ ಇದು ಶೇ. ೬೪ ಆಗುತ್ತಿತ್ತು.

ಪಂಚವಾರ್ಷಿಕ ಯೋಜನೆಯಲ್ಲಿ ವ್ಯವಸಾಯ ಕ್ಷೇತ್ರಕ್ಕೆ ಪ್ರಾಮುಖ್ಯ ಕೊಟ್ಟಿದೆ. ಬೇಸಾಯಕ್ಕೊಳಪಟ್ಟ ಜಮೀನಿನ ವಿಸ್ತೀರ್ಣ ೧೯೫೭-೬೭ರ ದಶಕದಲ್ಲಿ ೦.೦೪ ಕೋಟಿ ಹೆಕ್ಟೇರುಗಳಷ್ಟು ಅಧಿಕವಾಯಿತು. ಆಹಾರ ಧಾನ್ಯಗಳನ್ನು ಬೆಳೆಯುವ ಭೂವಿಸ್ತೀರ್ಣ ಇದೇ ಅವಧಿಯಲ್ಲಿ ೬.೫ ಲಕ್ಷ ಹೆಕ್ಟೇರುಗಳಷ್ಟು ಅಧಿಕವಾಯಿತು. ಆಹಾರ ಧಾನ್ಯದ ಉತ್ಪಾದನೆ ಕಳೆದ ಹತ್ತು ವರ್ಷಗಳಿಂದ ಹೆಚ್ಚಾಗಿದ್ದರೂ ಇದು ಬೇಡಿಕೆಗೆ ಸಮನಾದ ಮಟ್ಟ ಮುಟ್ಟಲಿಲ್ಲ. ೧೯೬೯-೭೦ರಲ್ಲಿ ಆಹಾರಧಾನ್ಯದ ಉತ್ಪಾದನೆ ೫೧.೮ ಲಕ್ಷ ಟನ್ಗಳಷ್ಟಿತ್ತು. ಬೇಸಾಯ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸಲು ಸರ್ಕಾರದವರು ಕಳೆದ ಹತ್ತು ದಶಕಗಳಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಭೂಮಿಯ ಅಭಿವೃದ್ಧಿ, ರಾಸಾಯನಿಕ ಗೊಬ್ಬರದ ಬಳಕೆ, ಉತ್ತಮ ಬಗೆಯ ಬಿತ್ತನೆ ಬೀಜ, ಸಾಲ ನೀಡಿಕೆ, ಸಸಿಗಳ ರೋಗ ನಿವಾರಣೆ, ಒಳ್ಳೆಯ ಕೃಷಿ ವಿಧಾನಗಳ ಅನುಸರಣಿ, ನೀರಾವರಿ ಯೋಜನೆ ಮುಂತಾದವು ಇವುಗಳಲ್ಲಿ ಸೇರಿವೆ. ಸರ್ಕಾರ ವ್ಯವಸಾಯಾಭಿವೃದ್ಧಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡಿದೆ. ಈ ಕಾರ್ಯಗಳಿಗೆ ಪಂಚವಾರ್ಷಿಕ ಯೋಜನೆಗಳಲ್ಲಿ ಕ್ರಮೇಣ ಹೂಡಿಕೆಯನ್ನು ಹೆಚ್ಚಿಸಲಾಯಿತು. ಈ ಎಲ್ಲ ಕಾರ್ಯಕ್ರಮಗಳಿಂದ ಹೆಚ್ಚಿಗೆ ಉತ್ಪಾದನೆ ಮಾಡಲು ರೈತರಿಗೆ ಹೆಚ್ಚು ಅವಕಾಶ ದೊರೆತಿದೆ.

ಬೇಸಾಯ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸಲು ನೀರಿನ ಸರಬರಾಜು ಸಹ ಅತ್ಯಾವಶ್ಯಕ. ಇದಕ್ಕಾಗಿ ಸರ್ಕಾರ ಅನೇಕ ನೀರಾವರಿ ಯೋಜನೆಗಳನ್ನು ಕೈಗೊಂಡಿದೆ. ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸುವ ಮುನ್ನ ಕರ್ನಾಟಕದಲ್ಲಿ ಮಧ್ಯಮ ಮತ್ತು ದೊಡ್ಡ ನೀರಾವರಿ ಯೋಜನೆಗಳಿಂದ ಒಟ್ಟು ೬.೯ ಲಕ್ಷ ಹೆಕ್ಟೇರುಗಳಿಗೆ ಸೌಲಭ್ಯ ಒದಗಿತ್ತು. ಈಗ ಎಲ್ಲ ಬಗೆಯ ಯೋಜನೆಗಳಿಂದ ಸುಮಾರು ೧೨ ಲಕ್ಷ ಹೆಕ್ಟೇರುಗಳಷ್ಟು ಜಮೀನಿಗೆ ನೀರು ಸರಬರಾಜಾಗುತ್ತಿದೆ. ಇದೇ ರೀತಿಯಲ್ಲಿ ವಿದ್ಯುಚ್ಫಕ್ತಿಯ ಉತ್ಪಾದನೆಯೂ ಹೆಚ್ಚಾಗಿದೆ. ಒಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಮತ್ತು ವಿದ್ಯುಚ್ಫಕ್ತಿ ಯೋಜನೆಗಳಿಗೆ ಸರ್ಕಾರ ೩೦ ಕೋಟಿ ರೂ.ಗಳಷ್ಟು ವೆಚ್ಚ ಮಾಡಿತ್ತು. ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ೧೭೫ ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟಿತ್ತು. ಪ್ರಸ್ತುತ ಈ ಬಾಬಿನಲ್ಲಿ ಸಾವಿರಾರು ಕೋಟಿಗಳ ಹೂಡಿಕೆಯಾಗುತ್ತಿದೆ.

ಅರಣ್ಯ ಸಂಪತ್ತು[ಬದಲಾಯಿಸಿ]

ಕರ್ನಾಟಕದ ಅರಣ್ಯದ ವಿಸ್ತೀರ್ಣ ಭಾರತದ ಸರಾಸರಿ ಅರಣ್ಯ ಸಂಪತ್ತಿನ ವಿಸ್ತೀರ್ಣಕ್ಕಿಂತ ಕಡಿಮೆ ಇದೆ. ಭಾರತದ ವಿಸ್ತೀರ್ಣ ಒಟ್ಟು ನೆಲದ ಸು.೨೨% ರಷ್ಟು; ಕರ್ನಾಟಕದಲ್ಲಿ ಸು. ಶೇ. ೧೮ ರಷ್ಟಿದೆ. ಆದರೆ ಈ ಸ್ವಲ್ಪ ಪ್ರದೇಶದಲ್ಲಿಯೇ ಅರಣ್ಯಸಂಪತ್ತು ವಿಪುಲವಾಗುಂಟು. ಒಂದು ಚದರ ಕಿಮೀ. ಅರಣ್ಯದ ವಾರ್ಷಿಕ ವರಮಾನ ಸುಮಾರು ೩,೦೦೦ ರೂ. ೧೯೫೬ಕ್ಕೆ ಮುಂಚೆ ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಸುಮಾರು ೪.೯೭ ಕೋಟಿ ರೂ.ಗಳಷ್ಟು ಉತ್ಪತ್ತಿ ಇತ್ತು. ೧೯೬೮-೬೯ರಲ್ಲಿ ಇದರ ಆದಾಯ ೧೩.೫ ಕೋಟಿ ರೂ.ಗಳಿಗೇರಿತ್ತು. ಪ್ರಸ್ತುತ ಸಾಮಾಜಿಕ ಅರಣ್ಯ ಬೆಳಸುವ ಮೂಲಕ ಮತ್ತು ತೇಗ, ನೀಲಗಿರಿ ಪ್ಲಾಂಟೇಷನ್ಗಳನ್ನು ರೂಪಿಸುವ ಮೂಲಕ ಅರಣ್ಯಗಳ ಉತ್ಪತ್ತಿ ಹೆಚ್ಚಿಸಲಾಗಿದೆ.

ಮೀನುಗಾರಿಕೆ[ಬದಲಾಯಿಸಿ]

ಪಂಚವಾರ್ಷಿಕ ಯೋಜನೆಗಳಲ್ಲಿ ಮೀನುಗಾರಿಕೆಗೆ ಹೆಚ್ಚು ಗಮನ ಸಂದಿದೆ. ಯಂತ್ರದ ದೋಣಿಗಳನ್ನು ಕಟ್ಟಲೂ ಮೀನು ಹಿಡಿಯಲು ಬೇಕಾಗುವ ಯಂತ್ರೋಪಕರಣಗಳನ್ನು ಒದಗಿಸಲೂ ಮೀನುಗಾರಿಕೆಯಲ್ಲಿ ಶಿಕ್ಷಣ ಕೊಡಲೂ ಸಾಕಷ್ಟು ಹಣ ವೆಚ್ಚವಾಗುತ್ತಿದೆ.

ಖನಿಜಸಂಪತ್ತು[ಬದಲಾಯಿಸಿ]

ಕರ್ನಾಟಕದ ಖನಿಜಸಂಪತ್ತು ರಾಜ್ಯದ ಕೈಗಾರಿಕೆಗಳ ಬೆಳೆವಣಿಗೆಗೆ ಅನುಕೂಲಕರ. ಕಬ್ಬಿಣದ ಅದಿರಿನ ಅಭಿವೃದ್ಧಿಗಾಗಿ ರಾಷ್ಟ್ರೀಯ ಖನಿಜಸಂಪತ್ತಿನ ಅಭಿವೃದ್ಧಿ ಸಂಸ್ಥೆ ಒಂದು ಯೋಜನೆಯನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೈಗೊಂಡಿದೆ. ಭಾರತದಲ್ಲಿ ಕಬ್ಬಿಣದ ಅದಿರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ನಾಲ್ಕನೆಯ ಸ್ಥಾನ. ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲೂ ಇರುವ ನಿಕ್ಷೇಪಗಳು ಸೇರಿ ಕರ್ನಾಟಕದಲ್ಲಿ ೧೨೦ ರಿಂದ ೧೫೦ ಕೋಟಿ ಟನ್ಗಳಷ್ಟು ಉತ್ತಮ ದರ್ಜೆಯ ಕಬ್ಬಿಣದ ಅದಿರು ದೊರೆಯುತ್ತದೆಂದು ಅಂದಾಜು ಮಾಡಲಾಗಿದೆ. ಇತ್ತೀಚಿನ ದಶಕಗಳಲ್ಲಿ ಬಳ್ಳಾರಿ ಹಾಗೂ ಕುದುರೆಮುಖ ಗಣಿಗಳಲ್ಲಿ ಹೇರಳ ಅದಿರು ತೆಗೆದು ರಫ್ತು ಮಾಡಿ ಭಾರಿ ವಿದೇಶಿ ವಿನಿಮಯ ಗಳಿಸಲಾಯಿತು. ಆಂತರಿಕ ಬಳಕೆಗೂ ಕಬ್ಬಿಣ ಸುಲಭ ಬೆಲೆಯಲ್ಲಿ ದೊರಕಿತು.

ಕೈಗಾರಿಕೆಗಳು[ಬದಲಾಯಿಸಿ]

ಕರ್ನಾಟಕದ ಕೈಗಾರಿಕೆಯ ಚರಿತ್ರೆ ಗಮನಾರ್ಹವಾದದ್ದು. ಏಕೆಂದರೆ ೧೯ನೆಯ ಶತಮಾನದ ಕೊನೆಯಲ್ಲಿಯೇ ಈ ದೇಶದಲ್ಲಿ ಕೈಗಾರಿಕೆಗಳ ಬೆಳೆವಣಿಗೆ ಪ್ರಾರಂಭವಾಯಿತೆಂದು ಹೇಳಬಹುದು. ೧೮೮೫ರಲ್ಲಿ ಕರ್ನಾಟಕದಲ್ಲಿ ಮೊದಲನೆಯ ಹತ್ತಿಗಿರಣಿ ಪ್ರಾರಂಭವಾಯಿತು. ೧೯೦೨ರಲ್ಲಿ ಶಿವಸಮುದ್ರದಲ್ಲಿ ವಿದ್ಯುಚ್ಫಕ್ತಿಯ ಉತ್ಪಾದನೆ ಮಾಡಲು ಆರಂಭಿಸಿದಾಗಿನಿಂದ ಕರ್ನಾಟಕದ ಕೈಗಾರಿಕಾಭಿವೃದ್ಧಿಗೆ ಬಹಳ ಅನುಕೂಲವಾಯಿತು. ವಿದ್ಯುಚ್ಫಕ್ತಿಯ ಉತ್ಪಾದನೆ ಪ್ರಾರಂಭವಾದ ಹತ್ತು ವರ್ಷಗಳಲ್ಲಿ ಸುಮಾರು ೧೦೦ ಕೈಗಾರಿಕೆಗಳು ಬಂದುವು. ೧೯೧೩ರಲ್ಲಿಯೇ ಆಗಿನ ಮೈಸೂರು ಸರ್ಕಾರ ಉತ್ಪಾದನಾಂಗಗಳ ಸರಬರಾಜಿನ ಅಂದಾಜು ಮಾಡಿ ಅದರಿಂದ ಅನೇಕ ಕೈಗಾರಿಕೆಗಳ ಸ್ಥಾಪನೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿತು. ಸರ್ ಎಂ. ವಿಶ್ವೇಶ್ವಯ್ಯನವರು ಮೈಸೂರು ಸಂಸ್ಥಾನದ ದಿವಾನರಾದ ಮೇಲೆ (೧೯೧೨-೧೮) ಕೈಗಾರಿಕೆಗಳ ನವಯುಗ ಪ್ರಾರಂಭವಾಯಿತು. ಮಹಾರಾಜ ನಾಲ್ವಡಿಕೃಷ್ಣರಾಜ ಒಡೆಯರ ಪ್ರೋತ್ಸಾಹದೊಂದಿಗೆ ಅವರು ಹತ್ತು ಹಲವು ಕೈಗಾರಿಕೆಗಳನ್ನು ಸ್ಥಾಪಿಸಿದರು, ಕೈಗಾರಿಕಾ ತರಬೇತಿ ತೆರೆದರು. ಆಗ ರಾಜ್ಯದಲ್ಲಿ ಅನೇಕ ಕೈಗಾರಿಕೆಗಳು ಜನ್ಮತಾಳಿದುವು. ಅವುಗಳಲ್ಲಿ ಮುಖ್ಯವಾದವೆಂದರೆ ಕಬ್ಬಿಣ, ಚಿನ್ನದ ಗಣಿ, ಹತ್ತಿ, ರೇಷ್ಮೆ, ಕಂಬಳಿ, ಸಕ್ಕರೆ, ರಸಾಯನಿಕ ಗೊಬ್ಬರ ಮತ್ತು ಕಾಗದದ ಕೈಗಾರಿಕೆ. ೧೯೪೫ರ ವೇಳೆಗೆ ಸುಮಾರು ೬೦೦ ದೊಡ್ಡ ಕೈಗಾರಿಕೆಗಳು ಇದ್ದು ಇವುಗಳಲ್ಲಿ ಸುಮಾರು ೮೦,೦೦೦ ಜನ ಕೆಲಸ ಮಾಡುತ್ತಿದ್ದರು. ಬೆಂಗಳೂರು, ಮೈಸೂರು ಮತ್ತು ಕೋಲಾರದ ಚಿನ್ನದ ಗಣಿ ಪ್ರದೇಶಗಳಲ್ಲಿ ವಿದ್ಯುಚ್ಫಕ್ತಿ ಸೌಲಭ್ಯ ಇದ್ದುದರಿಂದ ಕೈಗಾರಿಕೆಗಳು ಅಲ್ಲಿ ಕೇಂದ್ರೀಕೃತವಾದುವು. ಇತ್ತೀಚೆಗೆ ರಾಜ್ಯದ ಹಲವು ಕಡೆಗಳಲ್ಲಿ ಕೈಗಾರಿಕೆಗಳನ್ನು ಏರ್ಪಡಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಸಣ್ಣ ಕೈಗಾರಿಕೆಗಳಲ್ಲಿ ಮುಖ್ಯವಾದುವೆಂದರೆ ಬುಟ್ಟಿ ಹೆಣಿಕೆ, ನೇಯ್ಗೆ, ಮಡಕೆ ಹೆಂಚು ತಯಾರಿಕೆ, ಎಣ್ಣಿ ತೆಗೆಯುವುದು, ಚಿನ್ನ ಬೆಳ್ಳಿ ಸಾಮಾನುಗಳ ತಯಾರಿಕೆ, ಮರದ ಕೆಲಸ, ಚಾಪೆ ಹೆಣಿಕೆ, ಚರ್ಮ, ಬೀಡಿ, ಅಗರಬತ್ತಿ ತಯಾರಿಕೆ ಮುಂತಾದವು. ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಮೊದಲಿನಿಂದಲೂ ವಿಶಿಷ್ಟ ಸ್ಥಾನವನ್ನು ಕೊಡಲಾಗಿದೆ. ಇದರಿಂದ ಲಕ್ಷಾಂತರ ಜನ ಜೀವನ ಸಾಗಿಸುತ್ತಿದ್ದಾರೆ. ವಿಶಾಲ ಕರ್ನಾಟಕ ರಚನೆಯಾದ ಮೇಲೆ ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರಿಕಾಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಕೊಡಲಾಗಿದೆ. ಇದರಿಂದ ಸಾವಿರಾರು ದೊಡ್ಡ, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪಿತವಾದುವು. ಇವು ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳೆರಡಲ್ಲಿಯೂ ಸ್ಥಾಪಿತವಾಗಿವೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕೈಗಾರಿಕಾಭಿವೃದ್ಧಿಗಾಗಿ ನೂರಾರು ಕೋಟಿ ರೂ.ಗಳನ್ನು ಮೀಸಲಿಡಲಾಯಿತು. ಇದರ ಫಲವಾಗಿ ಕರ್ನಾಟಕದ ಒಟ್ಟು ಕಾರ್ಖಾನೆಗಳ ಸಂಖ್ಯೆ ೧೯೫೬-೬೭ರ ಅವಧಿಯಲ್ಲಿ ೧,೬೪೦ ರಿಂದ ೩,೧೦೦ಕ್ಕೆ ಏರಿತು. ಇದೇ ಅವಧಿಯಲ್ಲಿ ಈ ಕಾರ್ಖಾನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ೧.೯೬ ಲಕ್ಷದಿಂದ ೨.೪೨ ಲಕ್ಷಕ್ಕೇರಿತು. ಕೈಗಾರಿಕಾ ಕ್ಷೇತ್ರದ ಉತ್ಪಾದನೆ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಾರಿಗೆ ಮತ್ತು ಸಂಪರ್ಕ: ರಾಜ್ಯದ ಪಂಚವಾರ್ಷಿಕ ಯೋಜನೆಯಲ್ಲಿ ಸಾರಿಗೆ ಸಂಪರ್ಕಗಳ ಅಭಿವೃದ್ಧಿಗಾಗಿಯೂ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇದರ ಫಲವಾಗಿ ೧೯೫೬ರಲ್ಲಿ ೧೦೦೬೦ ಕಿಮೀಗಳ ರಸ್ತೆಗಳಿದ್ದು ೧೯೬೯ರಲ್ಲಿ ೪೫೬೦೦ ಕಿಮೀಗಳಿಗೆ ಹೆಚ್ಚಿತ್ತು. ಎಲ್ಲ ಹಳ್ಳಿಗಳಿಗೂ ಪಟ್ಟಣಗಳಿಗೂ ರಸ್ತೆಯ ಮೂಲಕ ಸಂಪರ್ಕ ಏರ್ಪಡಿಸಿ ಸಾಮಾನು ಸಾಗಾಣಿಕೆಗೂ ವ್ಯಾಪಾರಕ್ಕೂ ಅನುಕೂಲ ಮಾಡುವುದು ಸರ್ಕಾರದ ಉದ್ದೇಶ. ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆ ಈ ವಿಷಯದಲ್ಲಿ ಮಹತ್ತರವಾದ ಕೆಲಸ ಮಾಡುತ್ತಿದೆ. ಹಾಸನ-ಮಂಗಳೂರು ಮತ್ತು ಬೆಂಗಳೂರು-ಸೇಲಂ ರೈಲುದಾರಿಗಳು ಸಾರಿಗೆ ಸಂಪರ್ಕದಲ್ಲಿ ಮಹತ್ವದವಾದವು. ಬೆಂಗಳೂರಿಗೆ ರಾಷ್ಟ್ರದ ಎಲ್ಲ ಮುಖ್ಯ ಪಟ್ಟಣಗಳೊಂದಿಗೂ ರೈಲು ಮತ್ತು ವಿಮಾನ ಸಂಪರ್ಕವುಂಟು. ಸಾರಿಗೆ ಸಂಪರ್ಕಗಳು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸುವರ್ಣ ಚತುರ್ಥ ಯೋಜನೆ ಜಾರಿಗೆ ತಂದಿದೆ. ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ರೂಪಿತವಾಗಿವೆ.

ರಾಜ್ಯದ ರಫ್ತು ವ್ಯಾಪಾರ[ಬದಲಾಯಿಸಿ]

ಪುರಾತನ ಗ್ರೀಸ್ ಮತ್ತು ರೋಂ ನಾಗರಿಕತೆಗಳ ಕಾಲದಿಂದಲೂ ಕರ್ನಾಟಕಕ್ಕೂ ಪಾಶ್ಚಾತ್ಯ ಲೋಕಕ್ಕೂ ಸಂಪರ್ಕವುಂಟು. ಇದೇ ರೀತಿ ದಕ್ಷಿಣ ಏಷ್ಯ ಮತ್ತು ಆಗ್ನೇಯ ಏಷ್ಯ ಪ್ರದೇಶಗಳ ಜೊತೆಯಲ್ಲಿಯೂ ಕರ್ನಾಟಕ ವ್ಯಾಪಾರ ಮತ್ತು ಸಂಸ್ಕೃತಿ ಸಂಬಂಧ ಇಟ್ಟುಕೊಂಡಿದ್ದುದಕ್ಕೂ ಸಾಕಷ್ಟು ನಿದರ್ಶನಗಳಿವೆ. ಅಂತೆಯೇ ಈಗಲೂ ಕರ್ನಾಟಕದ ಪದಾರ್ಥಗಳು ಹೊರದೇಶಗಳಿಗೆ ಹೆಚ್ಚುಹೆಚ್ಚಾಗಿ ರಫ್ತಾಗುತ್ತಿವೆ. ೧೯೬೭-೬೮ರಲ್ಲಿ ಕರ್ನಾಟಕದ ಒಟ್ಟು ರಫ್ತು ಮೌಲ್ಯ ೩೮ ಕೋಟಿ ರೂ.ಗಳಷ್ಟಿತ್ತು. ಇದರಲ್ಲಿ ಕಬ್ಬಿಣದ ಅದುರಿನಿಂದ ೧೩.೯೫ ಕೋಟಿ ರೂ. ಮತ್ತು ಕಾಫಿಯಿಂದ ೧೨.೩೪ ಕೋಟಿ ರೂ. ಆದಾಯ ಬಂದಿತ್ತು. ಎಂಜಿನಿಯರಿಂಗ್ ಪದಾರ್ಥಗಳು ರಾಜ್ಯಕ್ಕೆ ೨.೨೫ ಕೋಟಿ ರೂ.ಗಳಷ್ಟು ಆದಾಯ ನೀಡಿ, ರಫ್ತು ಸಾಮಗ್ರಿಗಳಲ್ಲಿ ಮೂರನೆಯ ಸ್ಥಾನ ಗಳಿಸಿತು. ಗೋಡಂಬಿ, ರೇಷ್ಮೆ, ಹೊಗೆಸೊಪ್ಪು, ರಫ್ತು ವಸ್ತುಗಳಲ್ಲಿ ಪ್ರಾಮುಖ್ಯ ಪಡೆದವು. ಈ ಎಲ್ಲ ವಸ್ತುಗಳ ರಫ್ತು ಮೌಲ್ಯ ರಾಜ್ಯದ ಒಟ್ಟು ರಫ್ತು ಮೌಲ್ಯದ ಶೇ. ೮೫ರಷ್ಟು. ಇತ್ತೀಚೆಗೆ ಎಂಜಿನಿಯರಿಂಗ್ ಸಾಮಾನುಗಳಿಗೆ ಹೊರದೇಶದಿಂದ ಬೇಡಿಕೆ ಹೆಚ್ಚುತ್ತಿದೆ. ಈಗ ರಾಜ್ಯದ ರಫ್ತು ವಸ್ತುಗಳಲ್ಲಿ ಖನಿಜ, ಕಾಫಿ, ಸಂಬಾರ ವಸ್ತುಗಳು ಗೋಡಂಬಿ, ರೇಷ್ಮೆ, ಹತ್ತಿ, ಹೂಗಳು, ಉಡುಪು, ಯಂತ್ರಗಳ ಬಿಡಿಭಾಗಗಳು ಪ್ರಮುಖವಾಗಿವೆ.

ಹಣಕಾಸಿನ ಸಂಸ್ಥೆಗಳು[ಬದಲಾಯಿಸಿ]

ಆರ್ಥಿಕ ಅಭಿವೃದ್ಧಿಗೆ ಅವಶ್ಯವಾದ ಹಣಕಾಸಿನ ಬೇಡಿಕೆ ಪುರೈಸುವ ಉದ್ದೇಶದಿಂದ ಕರ್ನಾಟಕದಲ್ಲಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಉಳಿತಾಯಕ್ಕೆ ಉತ್ತೇಜನ ನೀಡುವುದೂ ಅದನ್ನು ಠೇವಣಿಗಳ ರೂಪದಲ್ಲಿ ಸಂಗ್ರಹಿಸಿ ಉತ್ಪಾದಕ ಕಾರ್ಯಗಳಿಗೆ ಸಾಲನೀಡುವುದೂ ಈ ಸಂಸ್ಥೆಗಳ ಉದ್ದೇಶ. ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳು ಇವುಗಳ ಪೈಕಿ ಬಹಳ ಮುಖ್ಯವಾದವು. ಸಹಕಾರ ಸಂಘಗಳು ಮುಖ್ಯವಾಗಿ ರೈತರಿಗೆ ವ್ಯವಸಾಯಕ್ಕಾಗಿ ಸಾಲ ಕೊಡುವುದಲ್ಲದೆ, ಸುಗ್ಗಿಯ ವೇಳೆಯಲ್ಲಿ ರೈತರು ತಮ್ಮ ಆಹಾರಧಾನ್ಯಗಳನ್ನು ಶೇಖರಿಸಲೂ ಸರಿಯಾದ ಕಾಲದಲ್ಲಿ ಆಹಾರಧಾನ್ಯಗಳನ್ನು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಗೆ ಬಿಕರಿ ಮಾಡಲೂ ಸಹಾಯ ಮಾಡುತ್ತವೆ.

ವಾಣಿಜ್ಯ ಬ್ಯಾಂಕುಗಳ ಸ್ಥಾಪನೆಯಲ್ಲಿಯೂ ಕರ್ನಾಟಕ ಹಿಂದೆ ಬಿದ್ದಿಲ್ಲ. ೧೮೭೦ಕ್ಕಿಂತ ಮುಂಚೆಯೇ ಚಿತ್ರದುರ್ಗದಲ್ಲಿ ಒಂದು ವಾಣಿಜ್ಯ ಬ್ಯಾಂಕು ಸ್ಥಾಪಿತವಾಗಿತ್ತು. ಕೈಗಾರಿಕೆ ವಾಣಿಜ್ಯಗಳಿಗೆ ಹೆಚ್ಚಾಗಿ ಕಿರುಸಾಲ ನೀಡುವ ಮುಖ್ಯ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣವಾದ ಮೇಲೆ ಅವು ವ್ಯವಸಾಯಕ್ಕೂ ಸಣ್ಣ ಕೈಗಾರಿಕೆಗಳಿಗೂ ಸಾಲ ನೀಡುತ್ತಿವೆ. ೧೯೧೩ರಲ್ಲಿ ಸ್ಥಾಪಿತವಾದ ಮೈಸೂರು ಬ್ಯಾಂಕ್ ಪ್ರಥಮ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿವೆ. ಬ್ಯಾಂಕ್ಗಳ ಬ್ಯಾಂಕ್ ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕ್ ಇತರ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಪೋಷಕವಾಗಿವೆ. ಇಂದು ಪ್ರತಿಯೊಂದು ಪಟ್ಟಿಗೂ ಹಾಗೂ ದೊಡ್ಡ ಗ್ರಾಮಗಳನ್ನು ಬ್ಯಾಂಕ್ಗಳ ಸೇವೆ ತಲುಪಿದೆ.

ಜಾಗತೀಕರಣದ ಬೆಳಕಲ್ಲಿ[ಬದಲಾಯಿಸಿ]

ಕರ್ನಾಟಕ ರಾಜ್ಯ ಜಾಗತೀಕರಣದ ಬೆಳಕಲ್ಲಿ ಆರ್ಥಿಕವಾಗಿ ದಾಪುಗಾಲು ಹಾಕುತ್ತಿದೆ. ೧೯೯೦ರ ದಶಕದಲ್ಲಿ ಪ್ರಾರಂಭವಾದ ಜಾಗತೀಕರಣ ಪ್ರಕ್ರಿಯೆ ವಿಶ್ವ ಮಾರುಕಟ್ಟೆಗಳನ್ನು ರಾಜ್ಯದ ನಿಲುಕಿಗೆ ತಂದಿತು. ಮಾಹಿತಿ ಕ್ಷೇತ್ರದಲ್ಲಿ ಆದ ಕ್ರಾಂತಿಯ ಪ್ರಯೋಜನ ಪಡೆಯುವಲ್ಲಿ ರಾಜ್ಯ ಸಫಲವಾಗಿದೆ. ಭಾರತದಲ್ಲಿ ಬೆಂಗಳೂರು ಅತಿದೊಡ್ಡ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿವೆ. ವಿದೇಶಿ ಕಂಪನಿಗಳು ವಿಶೇಷವಾಗಿ ಬೆಂಗಳೂರಿನಲ್ಲೂ ಸಾಮಾನ್ಯವಾಗಿ ಇತರೆಡೆ ಸ್ಥಾಪಿತವಾಗಿವೆ. ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದ ಆದಾಯ ಹರಿದು ಬರುತ್ತಿದೆ. ಇದು ಸಾರಿಗೆ ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಧಿಕ ಆಕರ್ಷಣೆಯ ಅಭಿವೃದ್ಧಿಗೆ ಕಾರಣವಾಗಿದೆ. ತಂತ್ರಜ್ಞರಿಗೆ ಉದ್ಯೋಗ ನೀಡುವಲ್ಲಿ ಬೆಂಗಳೂರು ರಾಷ್ಟ್ರಕ್ಕೇ ಆಕರ್ಷಣೆಯ ಕೇಂದ್ರವಾಗಿದೆ. ಜೈವಿಕ ತಂತ್ರಜ್ಞಾನದಲ್ಲಿನ ಕ್ರಾಂತಿಯು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಿದೆ. ಸೇವಾ ಕ್ಷೇತ್ರದಲ್ಲಿ ಪ್ರಗತಿಯಾಗಿದೆ. ರಾಜ್ಯದ ಸುಶಿಕ್ಷಿತರು, ತಂತ್ರಜ್ಞರು, ವೈದ್ಯರು ವಿದೇಶಗಳಲ್ಲಿ ನೆಲಸಿ ಅಪಾರ ಪ್ರಮಾಣದ ವಿದೇಶಿ ವಿನಿಮಯಗಳನ್ನು ದೇಶದೊಳಗೆ ಹರಿಯಬಿಟ್ಟಿದ್ದಾರೆ. ೨೦೧೨ರ ಮಾರ್ಚ್ನಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಆಯವ್ಯಯದ (ಬಡ್ಜೆಟ್) ಮೊತ್ತ ೧ ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಕೃಷಿ ಕ್ಷೇತ್ರಕ್ಕೆ ೧೯೬೬೦ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ ನಿಗದಿಯಾದ ಮೊತ್ತ ೬೮೯೬ ಕೋಟಿ ರೂ.ಗಳು, ಜಲ ಸಂಪನ್ಮೂಲಕ್ಕೆ ೮೧೦೧ ಕೋಟಿ ರೂ.ಗಳನ್ನು ವೆಚ್ಚ ಮಾಡುವ ಉದ್ದೇಶವಿದೆ. ಶಿಕ್ಷಣದ ಪಾಲು ೧೫೦೭೧ ಕೊಟಿ ರೂ.ಗಳು ಹೀಗೆ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಿದ್ದು ತಲಾದಾಯವೂ ಹೆಚ್ಚಿದೆ. ಅದೇ ವೇಳೆಗೆ ಜೀವನ ವೆಚ್ಚ ಹೆಚ್ಚಿದ್ದು ಆಸ್ತಿ ವ್ಯವಹಾರಗಳ ಮೌಲ್ಯ ಗಗನಕ್ಕೇರಿದೆ. ವಿವಿಧ ಪ್ರಾದೇಶಿಕ ಅಸಮಾನತೆ ಮತ್ತು ವಿವಿಧ ವೃತ್ತಿಗಳ ಆದಾಯ ಸಾಮರ್ಥ್ಯದ ಕೊರತೆ ಸಮಾಜದಲ್ಲಿ ಅಸಮತೋಲನ ಸೃಷ್ಟಿಸುತ್ತದೆ. ಕಪ್ಪುಹಣದ ಸೃಷ್ಟಿ ಅಧಿಕವಾಗುತ್ತಿದೆ. ಈ ಸಮಸ್ಯೆಗಳನ್ನು ನೀಗಿಸಿಕೊಂಡು ಆಗುತ್ತಿರುವ ಆರ್ಥಿಕ ಪ್ರಗತಿ ಸಮಾಜಕ್ಕೆ ಮಾರಕವಾಗದೆ ಪುರಕವಾಗುವಂತೆ ಮಾಡುವ ಹೊಣೆ ಸರ್ಕಾರದ ಮೇಲಿದೆ. (ಎಂ.ಎ.ಎಂ.)