ಕರ್ನಾಟಕದಲ್ಲಿ ವೈದ್ಯ

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕದಲ್ಲಿ ವೈದ್ಯ :- ಕರ್ನಾಟಕದ ವೈದ್ಯಕೀಯ (ಎಂದರೆ ಆಯುರ್ವೇದದ) ಇತಿಹಾಸವನ್ನು ಮೂರು ಯುಗಗಳಾಗಿ ವಿಂಗಡಿಸಬಹುದು:

  • ೧. ಆದಿಯುಗ ಪ್ರ.ಶ.ಪೂ. ೨೬೦ - ಪ್ರ.ಶ. ೧೩೦೦;
  • ೨. ಮಧ್ಯಯುಗ ೧೩೦೦ - ೧೮೦೦;
  • ೩. ಆಧುನಿಕ ಯುಗ ೧೮೦೦ ರಿಂದೀಚೆಗೆ.

ಆದಿಯುಗ[ಬದಲಾಯಿಸಿ]

ಕರ್ನಾಟಕದ ಉತ್ತರ ಭಾಗ ಅಶೋಕನ ರಾಜ್ಯದಲ್ಲಿದ್ದುದರಿಂದ ಆತ ಸ್ಥಾಪಿಸಿದ್ದ ಮನುಷ್ಯರ ಮತ್ತು ಪಶುಗಳ ಔಷಧಾಲಯಗಳು ಈ ಪ್ರದೇಶದಲ್ಲಿ ಇದ್ದಿರಬಹುದೆಂದು ಊಹಿಸಿ ಕರ್ನಾಟಕದ ವೈದ್ಯ ಇತಿಹಾಸವನ್ನು ಪ್ರ.ಶ.ಪೂ. ೨೬೦ ರಿಂದ ಪ್ರಾರಂಭಿಸಬಹುದು. ರಸಾಯನ ಮತ್ತು ಲೋಹಶಾಸ್ತ್ರಗಳ ಪಿತನೆಂಬ ಗೌರವಕ್ಕೆ ಪಾತ್ರನಾಗಿದ್ದ, ಸಾತವಾಹನರ ಕಾಲದ ಬೌದ್ಧಬಿಕ್ಷು ನಾಗಾರ್ಜುನ ಶ್ರೀಶೈಲ ಪರ್ವತದಲ್ಲಿ ವಾಸವಾಗಿದ್ದು ರಸಾಯನ ಪ್ರಯೋಗಗಳಲ್ಲಿ ತೊಡಗಿದ್ದ. ರಸರತ್ನಾಕರ, ಲೋಹಶಾಸ್ತ್ರ ಮುಂತಾದ ವೈದ್ಯಗ್ರಂಥಗಳನ್ನು ಬರೆದ ಈತನನ್ನು ಕರ್ನಾಟಕದ ಪ್ರಥಮ ವೈದ್ಯವ್ಯಕ್ತಿ ಎನ್ನಬಹುದಾಗಿದೆ. ಸಾತವಾಹನರ ಅನಂತರ ರಾಜ್ಯ ಕಟ್ಟಿದ ಗಂಗರು ಜೈನಧರ್ಮಾವಲಂಬಿಗಳಾಗಿದ್ದರು. ಗಂಗರಸ ದುರ್ವಿನೀತನ (೬೦೫-೬೫೦) ಗುರುವಾಗಿದ್ದ ದಿಗಂಬರಜೈನ ಯತಿ ಪುಜ್ಯಪಾದ ವೈದ್ಯಶಾಸ್ತ್ರದಲ್ಲಿಯೂ ಪಂಡಿತನಾಗಿದ್ದ. ಇವನು ಬರೆದ ಕಲ್ಯಾಣಕಾರಕ ಎಂಬ ಸಂಸ್ಕೃತ ವೈದ್ಯಗ್ರಂಥವನ್ನು ಮುಂದಿನ ಎಲ್ಲ ವಿದ್ವಾಂಸರೂ ಗೌರವದಿಂದ ಸ್ಮರಿಸಿದ್ದಾರೆ. ಈತನ ಸೋದರಳಿಯ ಸಿದ್ಧ ನಾಗಾರ್ಜುನ (೬೯೦) ರಸಾಯನ ಮತ್ತು ಲೋಹವಿದ್ಯೆಗಳಲ್ಲಿ ಖ್ಯಾತಿಯನ್ನು ಪಡೆದಿದ್ದ. ರಸೇಂದ್ರ ಮಂಗಳ, ಕಕ್ಷಪುಟತಂತ್ರ, ನಾಗಾರ್ಜುನತಂತ್ರ ಮುಂತಾದುವು ಈತನ ಕೃತಿಗಳು. ಕರ್ನಾಟಕದ ದಕ್ಷಿಣಭಾಗದ ಬನ್ನೂರಿನಲ್ಲಿ ರಾಜ್ಯವಾಳುತ್ತಿದ್ದ ಗಂಗರಾಜ ಶ್ರೀಪುರುಷ(೭೭೫) "ಗಜಶಾಸ್ತ್ರ"ವನ್ನೂ ಆತನ ಮಗನಾದ ಸೈಗೊಟ್ಟ ಶಿವಮಾರ "ಗಜಾಷ್ಟಕ'ವನ್ನೂ ಬರೆದಿದ್ದಾರೆ (೮೦೦). ಶಿವಮಾರನ ಗಜಾಷ್ಟಕ ಕನ್ನಡಭಾಷೆಯ ಪ್ರಥಮಶಾಸ್ತ್ರಗ್ರಂಥ. ರಾಷ್ಟ್ರಕೂಟ ರಾಜ ನೃಪತುಂಗನ (೮೧೫-೮೭೧) ಆಸ್ಥಾನದಲ್ಲಿದ್ದ ಉಗ್ರಾದಿತ್ಯನೆಂಬ ಜೈನ ವೈದ್ಯ ಕಲ್ಯಾಣಕಾರಕ ಎಂಬ ಗ್ರಂಥವನ್ನು ಬರೆದಿದ್ದಾನೆ. ಜೈನಧರ್ಮದ ನಿಷ್ಠೆಯನ್ನು ಪಾಲಿಸಿರುವ ಈ ಗ್ರಂಥದಲ್ಲಿ ಮದ್ಯ, ಮಾಂಸ ಮತ್ತು ಮಧುಗಳನ್ನು ಔಷಧಾರ್ಥವಾಗಿಯೂ ವರ್ಜಿಸಿರುವುದು ಒಂದು ವೈಶಿಷ್ಟ್ಯ. ಚಾಲುಕ್ಯರಾಜ ಇಮ್ಮಡಿ ಜಯಸಿಂಹನ (೧೦೧೫-೧೦೪೨) ಆಸ್ಥಾನದ ಬ್ರಾಹ್ಮಣ ಕವಿ ಚಾವುಂಡರಾಯ ತನ್ನ ಕನ್ನಡ ಗ್ರಂಥವಾದ "ಲೋಕೋಪಕಾರದಲ್ಲಿ" ಆಯುರ್ವೇದ ಶಾಸ್ತ್ರವನ್ನು ವಿಸ್ತಾರವಾಗಿ ವಿವರಿಸಿದ್ದಾನೆ.

ಚಂದ್ರರಾಜನ (೧೦೭೯) "ಮದನತಿಲಕ", ಕೀರ್ತಿವರ್ಮನ (೧೧೨೫) ಗೋವೈದ್ಯ, ಚಾಳುಕ್ಯ ಚಕ್ರವರ್ತಿ ಸೋಮೇಶ್ವರನ (೧೧೨೬-೩೮) "ಮಾನಸೋಲ್ಲಾಸ"ದಲ್ಲಿನ ಆಯುರ್ವೇದದ ವಿವರಣೆ ಮತ್ತು ಜೈನ ವೈದ್ಯ ಜಗದ್ದಳ ಸೋಮನಾಥನ (೧೧೫೦) ಕರ್ಣಾಟಕ ಕಲ್ಯಾಣಕಾರಕ, ದೇವೇಂದ್ರ ಮುನಿಯ (೧೨೦೦) ಬಾಲಗ್ರಹ ಚಿಕಿತ್ಸೆ, ಕೇಶವ ಪಂಡಿತನ (೧೨೪೦) ಸಿದ್ಧಮಂತ್ರ, ಬೋಪದೇವನ (೧೨೬೩) ಸಿದ್ಧ ಮಂತ್ರ ಪ್ರಕಾಶ, ವೈದ್ಯಶತಕ, ಹೃದಯ ದೀಪಿಕ ನಿಘಂಟು, ಯಾದವರಾಜ ಮಹಾದೇವನ ಮುಖ್ಯಮಂತ್ರಿಯಾಗಿದ್ದ ಹೇಮಾದ್ರಿಯ (೧೨೬೦-೧೩೦೯) ಆಯುರ್ವೇದ ರಸಾಯನವೆಂಬ ಅಷ್ಟಾಂಗ ಹೃದಯದ ಮೇಲಿನ ವ್ಯಾಖ್ಯಾನ, ಅಮೃತನಂದಿಯ ಅಕಾರಾದಿ ನಿಘಂಟು - ಇವು ಈ ಯುಗದ ಕೆಲವು ಮುಖ್ಯ ವೈದ್ಯಗ್ರಂಥಗಳು.

ಆಯುರ್ವೇದದ ಅಧ್ಯಯನ ಅಧ್ಯಾಪನಗಳು ದೇವಾಲಯಗಳಲ್ಲಿ ಇರುತ್ತಿದ್ದ ಪಾಠ ಶಾಲೆಗಳಲ್ಲಿ ನಡೆಯುತ್ತಿದ್ದವು. ಅವುಗಳ ನಿರ್ವಹಣೆಗಾಗಿ ರಾಜರು ಭೂಮಿ ಮತ್ತು ಗ್ರಾಮಗಳನ್ನು ದೇವಾಲಯಗಳ ಹೆಸರಿನಲ್ಲಿ ದಾನ ಮಾಡುತ್ತಿದ್ದರು. ಶಾಸ್ತ್ರಜ್ಞರಾದ ವೈದ್ಯರನ್ನು ರಾಜಾಸ್ಥಾನದಲ್ಲಿ ನೇಮಕ ಮಾಡಲಾಗುತ್ತಿತ್ತು. ವೈದ್ಯರು ತಾವೇ ಗಿಡಮೂಲಿಕೆಗಳಿಂದ ಔಷಧಗಳನ್ನು ಬೇಕಾದಾಗ ತಯಾರಿಸಿ ಉಚಿತವಾಗಿ ರೋಗಿಗಳಿಗೆ ಕೊಡುತ್ತಿದ್ದರು. ಕಾಷ್ಠೌಷಧಿಗಳು ಅದರಲ್ಲೂ ಗಿಡಮೂಲಿಕಾ ಪ್ರಯೋಗಗಳೇ ಪ್ರಾಮುಖ್ಯ ಪಡೆದಿದ್ದುವು. ಕೆಲವು ದೇವಾಲಯಗಳಲ್ಲಿ ಸಹ ಔಷಧಿಗಳನ್ನು ಜನರಿಗೆ ಉಚಿತವಾಗಿ ನೀಡಲಾಗುತ್ತಿತ್ತು. ವೈದ್ಯರಿಗೆ ಸಮಾಜದಲ್ಲಿ ಗೌರವಾದರಗಳು ದೊರಕುತ್ತಿದ್ದುವು. ವಸ್ತುರೂಪವಾದ ಸಂಭಾವನೆಯೇ ಹೆಚ್ಚಾಗಿದ್ದರೂ ಕೆಲವು ವೇಳೆ ಧನರೂಪ ಸಂಭಾವನೆ ವೈದ್ಯರಿಗೆ ದೊರಕುತ್ತಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಶಾಸ್ತ್ರಜ್ಞರಾದ ಅರ್ಚಕರು, ಜ್ಯೋತಿಷಿಗಳು ವೈದ್ಯ ವೃತ್ತಿಯನ್ನು ನಡೆಸುತ್ತಿದ್ದರು.

ಮಧ್ಯಯುಗ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯದ ದಕ್ಷ ಆಡಳಿತ ಈ ಯುಗದ ಪ್ರಮುಖ ಘಟನೆ. ಈ ಅರಸರು ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿ ಮಾಡಿದ ಕಾರ್ಯಗಳಿಂದ ಪ್ರಾಚೀನ ವಿದ್ಯೆಗಳು ಬದುಕಿಕೊಂಡುವು. ವಿದ್ಯಾರಣ್ಯರ ತತ್ತ್ವಶಾಸ್ತ್ರ ಗ್ರಂಥಗಳು, ಸಾಯಣರ ಚತುರ್ವೇದ ಭಾಷ್ಯಗಳು ಸಮಾಜದಲ್ಲಿ ಹಿಂದೂ ಧರ್ಮವನ್ನು ಸ್ಥಿರಗೊಳಿಸಿದುವು. ಪರಧರ್ಮ ಸಹಿಷ್ಣುಗಳಾಗಿದ್ದ ರಾಯರು ಅವನ್ನೂ ಪೋಷಿಸಿದರು. ವಿಜಯನಗರದ ಅಧಿರಾಜನಾಗಿದ್ದ ಮುಗಳೀಪುರದ ಅರಸ ಮಂಗರಾಜ (೧೩೬೦) ವಿಷ ಚಿಕಿತ್ಸೆಯಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದ. ಈತನ ಖಗೇಂದ್ರ ಮಣಿದರ್ಪಣ ಕನ್ನಡ ಶಾಸ್ತ್ರ ಸಾಹಿತ್ಯದಲ್ಲಿ ಶ್ರೇಷ್ಠ ಗ್ರಂಥ. ಒಂದನೆಯ ಬುಕ್ಕರಾಯನ (೧೩೫೬-೭೬) ಆಸ್ಥಾನ ವೈದ್ಯ ವಿಷ್ಣುದೇವನ ರಸರಾಜಲಕ್ಷ್ಮಿ, ಇಮ್ಮಡಿ ಬುಕ್ಕರಾಯನ (೧೪೦೪-೨೪) ಆಸ್ಥಾನ ವೈದ್ಯ ಲಕ್ಷ್ಮಣಪಂಡಿತನ ವೈದ್ಯರಾಜ ವಲ್ಲಭ, ಅಭಿನವ ಚಂದ್ರನ (೧೪೦೦) ಅಶ್ವಶಾಸ್ತ್ರ, ವಲ್ಲಭೇಂದ್ರನ (೧೪೩೫) ವೈದ್ಯ ಚಿಂತಾಮಣಿ, ಕಲ್ಲರಸನ (೧೪೫೦) ಜನವಶ್ಯವೆಂಬ ಕಾಮಶಾಸ್ತ್ರ ಗ್ರಂಥ, ಕವಿಲಿಂಗನ (೧೪೯೦) ಕಾಮಶಾಸ್ತ್ರದ ಪದಗಳು, ದಾಮೋದರ ಪಂಡಿತನ ಆರೋಗ್ಯ ಚಿಂತಾಮಣಿ, ಭಟ್ಟನರಹರಿಯ ವಾಗ್ಭಟ ಮಂಡನ, ಶ್ರೀಧರ ದೇವನ (೧೫೦೦) ವೈದ್ಯಾಮೃತ, ಬಾಚರಸನ (೧೫೦೦) ಅಶ್ವವೈದ್ಯ, ಮೂರನೆಯ ಮಂಗರಸನ (೧೫೦೮) ಸೂಪಶಾಸ್ತ್ರ, ಸಾಳ್ವನ (೧೫೫೦) ವೈದ್ಯಸಾಂಗತ್ಯ, ರಘುನಾಥ ಸೂರಿಯ, ಭೋಜನ ಕುತೂಹಲ, ಯಳಂದೂರು ಚನ್ನರಾಜನ (೧೫೭೦) ವೈದ್ಯಸಾರ ಸಂಗ್ರಹ, ವೀರಭದ್ರರಾಜನ (೧೬೦೦) ಹಸ್ತಾಯುರ್ವೇದ ಟೀಕೆ, ರಾಮಚಂದ್ರ ಪಂಡಿತನ (೧೬೨೫) ಅಶ್ವಶಾಸ್ತ್ರ, ಪದ್ಮಣ ಪಂಡಿತನ (೧೬೨೭) ಹಯಸಾರ ಸಮುಚ್ಚಯ, ಬಿಜಾಪುರದ ಇಮ್ಮಡಿ ಆದಿಲ್ ಷಾ (೧೬೨೬-೫೬) ಆಸ್ಥಾನದಲ್ಲಿದ್ದ ಲೋಲಂಬರಾಜನ ಸದ್ವೈದ್ಯಜೀವನ ಮತ್ತು ವೈದ್ಯಾವತಂಸಗಳು, ಕೊಟ್ಟೂರು ಬಸವರಾಜನ (೧೬೭೦) ಶಿವತತ್ತ್ವರತ್ನಾಕರದಲ್ಲಿ ಆಯುರ್ವೇದದ ವಿವರಣೆ, ಶ್ರೀಕಂಠ ನಂದಿಯ ಪರ್ಯಾಯ ಮಂಜರಿ, ಶ್ರೀಕಂಠ ಪಂಡಿತನ ವೈದ್ಯಸಾರ ಸಂಗ್ರಹ, ಶ್ರೀಪಂಡಿತನ ಯೋಗಶತಕ, ಕೃಷ್ಣಾರ್ಯನ ಸಿದ್ಧಯೋಗ ಸಮುಚ್ಚಯ, ಸಲಾದು ಮಾಧವಾಚಾರ್ಯನ ಚಿಕಿತ್ಸಾಸಾರ ಸಂಗ್ರಹ, ಗಂಗಾಧರನ ಭೇಷಜ ಕಲ್ಪ, ಕಳಲೆಯ ವೀರರಾಜನ (೧೭೨೦) ಸಕಲ ವೈದ್ಯ ಸಂಹಿತಾ ಸಾರಾರ್ಣವ, ನಂಜರಾಜನ (೧೭೪೦) ವೈದ್ಯಸಾರಸಂಗ್ರಹ, ತಿಮ್ಮರಾಜ ಗೌಡನ (೧೭೫೦) ಸ್ತ್ರೀ ವೈದ್ಯ, ಇಮ್ಮಡಿ ಕೃಷ್ಣರಾಜ ಒಡೆಯನ (೧೭೫೯) ಬಾಹಟ ಟೀಕೆ, ಲಕ್ಷ್ಮಣಪಂಡಿತನ (೧೭೭೫) ಅಕಾರಾದಿ ನಿಘಂಟು- ಈ ಯುಗದ ಮುಖ್ಯ ವೈದ್ಯಗ್ರಂಥಗಳು.

ಹದಿನೈದನೆಯ ಶತಮಾನದವರೆಗೆ ದಕ್ಷಿಣ ಭಾರತದಲ್ಲಿ ಏಕೈಕ ವೈದ್ಯ ಪದ್ಧತಿಯಾಗಿದ್ದ ಆಯುರ್ವೇದಕ್ಕೆ ಎದುರಾಳಿಗಳಾಗಿ ಯುನಾನಿ ಪದ್ಧತಿ ಹದಿನಾರನೆಯ ಶತಮಾನದಲ್ಲೂ ಐರೋಪ್ಯ ಪದ್ಧತಿ ಹದಿನೇಳನೆಯ ಶತಮಾನದಲ್ಲೂ ಕ್ರಮೇಣ ನೆಲೆಯೂರಿದುವು. ಮುಸ್ಲಿಂ ಸುಲ್ತಾನರ ಕಾಲದಲ್ಲಿ ಯುನಾನಿ ಹಕೀಮರು ರಾಜಾಸ್ಥಾನ ಮತ್ತು ಸಮಾಜದಲ್ಲಿ ವೈದ್ಯವೃತ್ತಿಯನ್ನಾರಂಭಿಸಿದರು. ಹಿಂದೂಶಾಸ್ತ್ರಜ್ಞರು ಮುಸ್ಲಿಂ ದಾಳಿಕಾರರ ಹೆದರಿಕೆಯಿಂದ ತಮ್ಮಲ್ಲಿದ್ದ ಗ್ರಂಥಗಳನ್ನು ತೆಗೆದುಕೊಂಡು ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋದರು. ತತ್ಪರಿಣಾಮವಾಗಿ ಶಾಸ್ತ್ರೀಯ ಅಧ್ಯಯನವಿಲ್ಲದೆ ಕುಹಕವೈದ್ಯರು ಸಮಾಜದಲ್ಲಿ ಹೆಚ್ಚಿ ಜನರ ನಿಂದೆಗೆ ಗುರಿಯಾದರು. ಸುಲಭವಾದ ಮೂಲಿಕಾವೈದ್ಯಕ್ಕೆ ಬದಲಾಗಿ ರಸಾಯನ ಪ್ರಯೋಗಗಳಿಂದ ಔಷಧಿಗಳನ್ನು ತಯಾರಿಸುವ ಕ್ರಮ ಹೆಚ್ಚು ರೂಢಿಗೆ ಬಂದುದು ಈ ಯುಗದ ಮತ್ತೊಂದು ಪ್ರಮುಖ ಘಟನೆ.

ಆಧುನಿಕ ಯುಗ[ಬದಲಾಯಿಸಿ]

ಬ್ರಿಟಿಷ್ ಆಡಳಿತ ಭಾರತದ ಆದ್ಯಂತ ಕ್ರಮ ಕ್ರಮವಾಗಿ ಹರಡಿದ ಪರಿಣಾಮವಾಗಿ ಯುರೋಪಿನ ವೈದ್ಯಪದ್ಧತಿ ರಾಜಮಾನ್ಯತೆಯನ್ನು ಪಡೆಯಿತು. ಜನಾರೋಗ್ಯ ರಕ್ಷಣಾಕ್ಷೇತ್ರದಲ್ಲಿ ಪ್ರಥಮವಾಗಿ ಕಾರ್ಯನಿರತವಾದ ಈ ಪದ್ಧತಿ ದಿನೇ ದಿನೇ ಬೆಳೆಯುತ್ತ ಇಂದು ಎಲ್ಲೆಲ್ಲಿಯೂ ರೂಢಮೂಲವಾಗಿದೆ. ಪ್ರಾಚೀನ ಆಯುರ್ವೇದಕ್ಕೆ ಇದರಿಂದ ಬಹುಮಟ್ಟಿನ ಧಕ್ಕೆ ತಗುಲಿತಾದರೂ ತನ್ನ ಅಂತಃಸತ್ತ್ವದಿಂದ ಅದು ಇಂದಿಗೂ ಉಳಿದು ತನ್ನ ವೈಶಿಷ್ಟ್ಯದಿಂದ ಜನತಾಸೇವೆಯನ್ನು ಯಥಾಶಕ್ತಿ ಸಲ್ಲಿಸುತ್ತಿದೆ. ಪ್ರಾಚೀನ ಸಂಸ್ಕೃತಿವತ್ಸಲರಾದ ಮೈಸೂರು ರಾಜಮನೆತನದ ಒಡೆಯರು ಇದರ ಏಳಿಗೆಗಾಗಿ ಪ್ರಯತ್ನಗಳನ್ನು ಮಾಡಿದ್ದಾರೆ. ಆಯುರ್ವೇದಾಧ್ಯಯನವನ್ನು ವ್ಯವಸ್ಥೆಗೊಳಿಸುವ ಉದ್ದೇಶದಿಂದ ಮಹಾರಾಜ ಚಾಮರಾಜ ಒಡೆಯರು ಮೈಸೂರು ನಗರದ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ ೧೯೦೮ರಲ್ಲಿ ಆಯುರ್ವೇದ ವಿಭಾಗವೊಂದನ್ನು ಸ್ಥಾಪಿಸಿದರು. ೧೯೩೦ರಲ್ಲಿ ಪ್ರತ್ಯೇಕವಾದ ವಿದ್ಯಾಶಾಲೆಯೊಂದು ಏರ್ಪಟ್ಟು ಇಂದಿನವರೆಗೆ ಸಾವಿರಾರು ವಿದ್ಯಾರ್ಥಿಗಳನ್ನು ವೈದ್ಯರನ್ನಾಗಿ ಮಾಡಿದೆ. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯುರ್ವೇದಾಭಿವೃದ್ಧಿ ಗಾಗಿ ಅನೇಕ ಯೋಜನೆಗಳನ್ನು ಕೈಗೊಂಡಿವೆ. (ಕೆ.ಆರ್.ಎಸ್.)