ಕರ್ಣ (ಚೌಳುಕ್ಯ)

ವಿಕಿಪೀಡಿಯ ಇಂದ
Jump to navigation Jump to search

ಕರ್ಣ (ಚೌಳುಕ್ಯ): ಸು. 1064ರಿಂದ ಸು. 1094ರವರೆಗೆ ಗುಜರಾತ್ ನಲ್ಲಿ ಆಳಿದ ಚೌಳುಕ್ಯ ವಂಶದ ದೊರೆಗಳಲ್ಲೊಬ್ಬ. ಭೀಮನ ಮೂವರು ಗಂಡುಮಕ್ಕಳಲ್ಲಿ ಕೊನೆಯವ. ಮೊದಲನೆಯವನಾದ ಮೂಲರಾಜ ತನ್ನ ತಂದೆಗಿಂತ ಮುಂಚೆಯೇ ಮರಣ ಹೊಂದಿದ. ತನ್ನ ತಾಯಿ ಉತ್ತಮ ಕುಲಜೆಯಲ್ಲವೆಂಬ ಕಾರಣದಿಂದ ಎರಡನೆಯವನಾದ ಕ್ಷೇಮರಾಜ ಸಿಂಹಾಸನವನ್ನೇರಲು ಒಪ್ಪಲಿಲ್ಲ. ಆದ್ದರಿಂದ ಭೀಮ ಸು. 1064ರಲ್ಲಿ ರಾಜ್ಯಾಧಿಕಾರವನ್ನು ಕರ್ಣನಿಗೆ ಒಪ್ಪಿಸಿ ತಾನು ತೀರ್ಥಯಾತ್ರೆ ಹೊರಟ. ಕರ್ಣ ತ್ರೈಲೋಕ್ಯಮಲ್ಲನೆಂಬ ಬಿರುದು ತಳೆದು, ತನ್ನ ರಾಜ್ಯವನ್ನು ಬಲಪಡಿಸಿದುದೇ ಅಲ್ಲದೆ, ಅನೇಕ ಹೊಸ ಪ್ರದೇಶಗಳನ್ನು ಸಂಪಾದಿಸಿದ. ದಕ್ಷಿಣದಲ್ಲಿ ನವಸಾರಿಯವರೆಗೂ ಇವನ ರಾಜ್ಯ ವಿಸ್ತರಿಸಿತು. ಕರ್ನಾಟಕ ವಂಶದ ಅರಸರೊಡನೆ ಸಖ್ಯ ಬೆಳೆಸಿ, ಪರಮಾರ ದೊರೆ ಜಯಸಿಂಹನನ್ನು ಅವರ ಸಹಾಯದಿಂದ ಸೋಲಿಸಿ ಕೊಂದ. ಮಾಳವವನ್ನು ಜಯಿಸಿದ. ಆದರೆ ಅಂತ್ಯದಲ್ಲಿ ಕರ್ಣನನ್ನು ಪರಮಾರ ಉದಯಾದಿತ್ಯ ತನ್ನ ರಾಜ್ಯದಿಂದ ಓಡಿಸಿದ. ಅಷ್ಟೇ ಅಲ್ಲ. ಕರ್ಣನ ಆಳ್ವಿಕೆಯ ಕೊನೆಯ ಕಾಲದಲ್ಲಿ ಪರಮಾರ ದೊರೆ ಜಗದ್ದೇವನಿಂದ ಇವನು ಪರಾಭವವನ್ನನುಭವಿಸಬೇಕಾಯಿತು. ದಕ್ಷಿಣ ಮಾರ್ವಾರದ ಮೇಲೆ ಕರ್ಣ ಕೈಕೊಂಡ ದಂಡಯಾತ್ರೆಯೂ ವಿಫಲವಾಯಿತು. ಅಲ್ಲಿ ಆಳುತ್ತಿದ್ದ ನಾಡೋಲದ ಚಾಹಮಾನ ರಾಜ ಪೃಥ್ವೀಪಾಲ ಇವನನ್ನು ಹಿಮ್ಮೆಟ್ಟಿಸಿದ. ಅಹಮದಾಬಾದಿನ ಬಳಿಯ ಆಶಾಪಲ್ಲೀ (ಈಗಿನ ಅಸವಲ್) ಎಂಬಲ್ಲಿ ಆಳುತ್ತಿದ್ದ ಆಶಾ ಎಂಬ ಭಿಲ್ಲ ನಾಯಕನನ್ನು ಕರ್ಣ ಸೋಲಿಸಿದ. ಗೋವೆಯ ಕದಂಬ ದೊರೆ ಜಯಕೇಶಿಯ ಮಗಳಾದ ಮಯಣಲ್ಲದೇವಿಯನ್ನು ಕರ್ಣ ವಿವಾಹವಾಗಿದ್ದ. ಪ್ರ.ಶ. 1094ರಲ್ಲಿ ಕರ್ಣ ಮರಣಹೊಂದಲು ಅವನ ಅಪ್ರಾಪ್ತ ವಯಸ್ಕ ಪುತ್ರನಾದ ಜಯಸಿಂಹ ಚೌಳುಕ್ಯರಾಜನಾದ. ಸ್ವಲ್ಪಕಾಲ ಮಯಣಲ್ಲ ದೇವಿಯೇ ತನ್ನ ಮಗನ ರಾಜಪ್ರತಿನಿಧಿಯಾಗಿ (ರೀಜೆಂಟ್) ಆಳ್ವಿಕೆ ನಡೆಸಿದಳು.