ಕರ್ಟ್ ಕೊಬೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಟ್ ಡೊನಾಲ್ಡ್ ಕೊಬೈನ್(ಫೆಬ್ರುವರಿ ೨೦ ೧೯೬೭-ಎಪ್ರಿಲ್ ೫ ೧೯೯೪) ಅಮೇರಿಕ ಸಂಯುಕ್ತ ಸಂಸ್ಥಾನದ ಸಿಯಾಟಲ್ ನಗರದ ಗ್ರಂಜ್ ಶೈಲಿಯ ರಾಕ್ ಸಂಗೀತ ತಂಡವಾದ ನಿರ್ವಾಣದ ಮುಖ್ಯ ಗಿಟಾರ್ ವಾದಕ ಮತ್ತು ಹಾಡುಗಾರ. ಕೊಬೈನ್ ನಾಯಕತ್ವದ ನಿರ್ವಾಣ ಸಂಗೀತ ತಂಡ ತನ್ನ ಪ್ರಭಾವಶಾಲಿ ವರ್ಚಸ್ಸಿನಿಂದ ಗ್ರಂಜ್ ಶೈಲಿಯ ರಾಕ್ ಸಂಗೀತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿತು. ನಿರ್ವಾಣತಂಡದ ನೆವರ್‌ಮೈಂಡ್ ಧ್ವನಿಸುರುಳಿ ಜನಪ್ರಿಯ ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಇವರನ್ನು ಯಶಸ್ಸಿನ ತುದಿ ಮುಟ್ಟಿಸಿತು. ಕೊಬೈನ್‌ರ ಸ್ಮೆಲ್ಸ್ ಲೈಕ್ ಟೀನ್ ಸ್ಪಿರಿಟ್ ಹಾಡು ಅತೀವ ಜನಪ್ರಿಯತೆ ಕಂಡು ಹೊಸ ಪೀಳಿಗೆಯ ಸ್ತುತಿಗೀತೆ ಎಂದು ಕರೆಸಿಕೊಂಡಿತು. ಯಶಸ್ಸಿನ ಜೊತೆ ಬರುವ ಜನಪ್ರಿಯತೆ ಮತ್ತು ಜವಾಬ್ದಾರಿ ಎದುರಿಸಲು ತಾವು ಸಮರ್ಥರಲ್ಲ ಎಂದು ಹೇಳಿಕೊಂಡಿದ್ದ ಕೊಬೈನ್ ಜೀವನದಲ್ಲಿ ತೀವ್ರ ಒತ್ತಡ ಮತ್ತು ವ್ಯಾಕುಲತೆಯಿಂದ ಬಳಲಿದರು. ದೈಹಿಕ ಮತ್ತು ಮಾನಸಿಕ ಅನಾರೋಗ್ಯ ಮತ್ತು ಹೆರಾಯಿನ್‌ ಸೇವನೆಯ ಚಟದೊಂದಿಗೆ ಹೋರಾಡಿದ ಕೋಬೈನ್ ಎಪ್ರಿಲ್ ೫ ೧೯೯೪ರೊಂದು ತಮ್ಮ ೨೭ನೆ ವಯಸ್ಸಿನಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಎಡಗೈ ಗಿಟಾರ್ ವಾದಕ ಕೊಬೈನ್ ತಮ್ಮ ಅಧ್ಯಾತ್ಮಿಕ ಹಾಗು ತತ್ವಭರಿತ ಸಾಹಿತ್ಯ ಮತ್ತು ವಿಶಿಷ್ಟ ಚಾಪಿನ ಸಂಗೀತದಿಂದ ಇಂದಿಗೂ ಪ್ರಭಾವಶಾಲಿ ಸಂಗೀತಗಾರರೆಂದು ಪರಿಗಣಿಸಲಾಗುತ್ತಾರೆ. ಕಮ್ ಆಸ್ ಯು ಆರ್, ಲಿಥಿಯಮ್, ಎಬೌಟ್ ಎ ಗರ್ಲ್, ಆಲ್ ಅಪಾಲಜೀಸ್, ಹಾರ್ಟ್ ಶೇಪ್ಡ್ ಬಾಕ್ಸ್, ಇನ್ ಬ್ಲೂಮ್, ಪಾಲಿಮತ್ತು ವಿವಾದ ಸೃಷ್ಟಿಸಿದ ರೇಪ್ ಮಿ ಇವರ ಹಾಗು ಇವರ ತಂಡದ ಕೆಲವು ಜನಪ್ರಿಯ ಗೀತೆ. ಕೊಬೈನ್ ಪತ್ನಿ ಕೊರ್ಟ್ನಿ ಲವ್ ಕೂಡ ರಾಕ್ ಸಂಗೀತಗಾರ್ತಿ.