ಕರ್ಕೋಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಕೋಟಕ ಎಂಟು ಮಂದಿ ಸರ್ಪರಾಜರಲ್ಲಿ ಒಬ್ಬ. ದಕ್ಷಬ್ರಹ್ಮನ ಮಗಳಾದ ಕದ್ರು ಹಾಗೂ ಕಶ್ಯಪರ ಮಗ. ನಿಷಧ ದೇಶಾಧಿಪತಿ ನಳ ಚಕ್ರವರ್ತಿ ಪುಷ್ಕರನೊಡನೆ ಜೂಜಾಡಿ ರಾಜ್ಯಭ್ರಷ್ಟನಾಗಿ ಕಾಡು ಸೇರಿ ತನ್ನ ಪತ್ನಿ ದಮಯಂತಿಯನ್ನು ಅಗಲಿ ಹೋಗುತ್ತಿದ್ದಾಗ ನಾರದರ ಶಾಪದಿಂದ ದಾವಾಗ್ನಿಯಲ್ಲಿ ಬಿದ್ದು ಸುಟ್ಟು ಹೋಗುತ್ತಿದ್ದ ಕರ್ಕೋಟಕ ನಳನನ್ನು ಕಂಡು ತನ್ನನ್ನು ದಾವಾಗ್ನಿಯಿಂದ ತಪ್ಪಿಸಿದರೆ ಪ್ರತ್ಯುಪಕಾರ ಮಾಡುವುದಾಗಿ ತಿಳಿಸಲು ನಳ ಮರುಕಗೊಂಡು ಕರ್ಕೋಟಕನನ್ನು ಜ್ವಾಲೆಯಿಂದ ಹೊರಕ್ಕೆ ತೆಗೆದ. ಕೂಡಲೆ ಕರ್ಕೋಟಕ ನಳನನ್ನು ಕಚ್ಚಿದ. ನಳನಿಗೆ ಆ ವಿಷದಿಂದ ವಿಕಾರರೂಪವುಂಟಾಯಿತು. ಅಡ್ಡ ಮೋರೆಯ ಗಂಟು ಮೂಗಿನ ಜಡ್ಡು ದೇಹದ ಗುಜ್ಜು ಗೊರಳಿನ- ಎಂಬ ಕನ್ನಡ ನಳಚರಿತ್ರೆಯ ನಳನ ವರ್ಣನೆಯನ್ನು ಇಲ್ಲಿ ನೆನೆಯಬಹುದು. ಆಗ ನಳ ಇದಲ್ಲವೆ ನೀನು ನನಗೆ ಮಾಡಿದ ಪ್ರತ್ಯುಪಕಾರ ಎನಲಾಗಿ ಕರ್ಕೋಟಕ ಇದೇ ನಾನು ನಿನಗೆ ಮಾಡಿದ ಪರಮೋಪಕಾರ, ಈ ರೂಪಿನಲ್ಲಿ ನಿನ್ನನ್ನು ಯಾರೂ ಗುರುತಿಸಲಾರರು. ನೀನು ಋತುಪರ್ಣ ರಾಜನಲ್ಲಿಗೆ ಹೋಗಿ ಬಾಹುಕನೆಂಬ ಹೆಸರಿನಿಂದ ಆತನ ಸಾರಥಿಯಾಗಿದ್ದು ಅನಂತರ ನಿನ್ನ ರಾಜ್ಯವನ್ನೂ ಪತ್ನಿಯನ್ನೂ ಪಡೆಯುವೆ, ನೀನು ಅಪೇಕ್ಷಿಸಿದಾಗ ನನ್ನನ್ನು ಸ್ಮರಿಸಿಕೊಂಡು ಈ ವಸ್ತ್ರಗಳನ್ನು ಧರಿಸಿಕೊಂಡರೆ ನಿಜರೂಪ ಬರುವುದು ಎಂದು ಹೇಳಿ ಎರಡು ವಸ್ತ್ರಗಳನ್ನು ಕೊಟ್ಟು ಅಂತರ್ಧಾನನಾದ.

"https://kn.wikipedia.org/w/index.php?title=ಕರ್ಕೋಟಕ&oldid=521881" ಇಂದ ಪಡೆಯಲ್ಪಟ್ಟಿದೆ