ಕರುಳುಹುಳು ನಿರೋಧಕಗಳು

ವಿಕಿಪೀಡಿಯ ಇಂದ
Jump to navigation Jump to search

ಕರುಳುಹುಳು ನಿರೋಧಕಗಳು: ಮನುಷ್ಯ, ಹಂದಿ, ಕುದುರೆ, ನಾಯಿ, ದನಗಳಲ್ಲಿ ಸೇರಿಕೊಂಡು ಬೆಳೆಯುವ ಉಪಜೀವಿಗಳಾದ ಜಂತುಹುಳು ಮತ್ತಿತರ ಪರಪಿಂಡಿಗಳನ್ನು ಹೋಗಲಾಡಿಸಲು ಬಳಸುವ ಮದ್ದುಗಳಿವು (ಏಂಟ್ ಹೆಲ್ಮಿಂಟಿಕ್ಸ್‌).

ಈ ಹುಳುಗಳು ಅಂಗಗಳಲ್ಲಿ ಸೇರಿದ್ದರೆ ತಲೆನೋವು, ದುರ್ಬಲತೆ, ರಕ್ತಕೊರೆ, ಚರ್ಮರೋಗಗಳು, ಶ್ವಾಸರೋಗಗಳು, ಜ್ವರ, ಅಜೀರ್ಣ, ಹೊಟ್ಟೆನೋವು, ಗಂತಿಗಳು ಮುಂತಾದುವು ಕಾಣಿಸಿಕೋಳ್ಳುತ್ತವೆ. ಪ್ರಪಂಚದಲ್ಲಿ ಪ್ರಾಯಶಃ ಶೇ. 50ರಷ್ಟು ಜನರು ಈ ಹುಳುರೋಗಗಳಿಂದ ತೊಂದರೆ ಪಡುತ್ತಿದ್ದಾರೆ. ಮುಖ್ಯವಾಗಿ ಬಡತನ, ಅವಿದ್ಯೆ, ಜೌಗುಪ್ರದೇಶ, ಕೊಳಕುತನ, ಶುದ್ಧವಾದ ನೀರು ಸರಬರಾಜು ಇಲ್ಲದಿರುವುದೇ ಇದರ ಕಾರಣಗಳು.

ಮುತ್ತುಗದ ಹಸಿರಾದ ಎಲೆ ಮತ್ತು ಬೀಜ, ಪರಂಗಿಯ ಹಣ್ಣು ಮತ್ತು ಅದರಿಂದ ಬರುವ ಹಾಲು, ಬಾಳೆದಿಂಡು ಮತ್ತು ಅದರ ಹೂವು, ಕೆಸವಿನ ದಂಟುಗಳನ್ನು ಮನೆಗಳಲ್ಲಿ ಜಂತುಹುಳು ನಿರೋಧಕಳಾಗಿ ಬಳಸುತ್ತಾರೆ.

ಈ ಹುಳುನಿರೋಧಕಗಳು ಬೇರೆ ಬೇರೆ ರೀತಿಯಾದ ಕ್ರಿಯೆಗಳಿಂದ ಆ ಹುಳುಗಳನ್ನು ಕರುಳಿನಿಂದ ಹೊರದೂಡುತ್ತವೆ. ಹುಳುಗಳಲ್ಲಿರುವ ಕೋಲೀನ್ ಎಸ್ಟರೇಸ್ ಎಂಬ ಅಜೈವಿಕ ಕಿಣ್ವದ ಮೇಲೆ ಪೈಪರ್ ಜೀನ್ ಕೆಲಸಮಾಡಿ ಸ್ನಾಯುಗಳು ದುರ್ಬಲವಾಗುವಂತೆ ಮಾಡಿ ಹುಳುಗಳನ್ನು ನಾಶಮಾಡುತ್ತದೆ. ಕೆಲವು ಮದ್ದುಗಳು ಆಹುಳುಗಳ ಉಪಾಪಚಯ (ಮೆಟಬಾಲಿಸಂ) ಮೇಲೆ ವರ್ತಿಸಿ ಅವನ್ನು ಸಾಯಿಸುತ್ತವೆ. ಬೇರೆ ಕೆಲವು ಮದ್ದುಗಳು ಆ ಹುಳುಗಳ ಪಿಸಿತೊಗಲಿನ (ಕ್ಯೂಟಿಕಲ್) ಮೇಲೆ ವರ್ತಿಸಿ, ಆ ಹುಳುಗಳು ಕರುಳುಗಳಲ್ಲಿಯೇ ಜೀರ್ಣವಾಗುವಂತೆ ಮಾಡುತ್ತವೆ. ಹುಳುನಿರೋಧಕಗಳ ಸೇವನೆಯ ಮೊದಲು ತಿಳಿಯಬೇಕಾದ ಸಾಮಾನ್ಯ ನಿಯಮಗಳು: ಮದ್ದನ್ನು ಬರಿಯ ಹೊಟ್ಟೆಯಲ್ಲಿ ಸೇವಿಸಬೇಕು. ಆ ಔಷಧಿಗಳನ್ನು 3-4 ಬಾರಿ, 15 ಮಿನಿಟುಗಳ ಅಂತರದಲ್ಲಿ ಸೇವಿಸಬೇಕು. ಹುಳುನಿರೋಧಕಗಳನ್ನು ಸೇವಿಸಿದ ಮೇಲೆ (ಸರಿಯಾದ, ಬೇಕಾದಷ್ಟು ವಯಸ್ಸಿಗೆ ತಕ್ಕ ಪ್ರಮಾಣದಲ್ಲಿ) ವಿರೇಚನ ಔಷಧಿಯನ್ನು ಕುಡಿಯಬೇಕು. ಹರಳೆಣ್ಣೆಯನ್ನು ಸೇವಿಸಕೂಡದು. ಹಿಟ್ಟಿನ ಪದಾರ್ಥ ಅಥವಾ ಸಕ್ಕರೆಯನ್ನು ವಿಶೇಷವಾಗಿ ತಿನ್ನಬೇಕು. ವಿಸರ್ಜನೆಯಾದ ಮಲದಲ್ಲಿ ಹುಳುಗಳು ಅವುಗಳ ಮೊಟ್ಟೆಗಳು ಇವೆಯೇ ಎಂದು ಪರೀಕ್ಷಿಸಬೇಕು. ಹುಳುನಿರೋಧಕಗಳ ಹೆಚ್ಚು ಸೇವನೆಯಿಂದ ಓಕರಿಕೆ, ವಾಂತಿಭೇದಿ, ಹೊಟ್ಟೆ ನೋವು, ತಲೇ ತಿರುಗು, ದುರ್ಬಲತೆ, ಅಗ್ನಿಮಾಂದ್ಯ, ಅನ್ನ ಸೇರದಿರುವುದು, ಸ್ನಾಯುಗಳ ಸರಿಯಾದ ಹೊಂದಾಣಿಕೆ ಕ್ರಿಯೆ ಇಲ್ಲದಿರುವುದು, ದೃಷ್ಟಿಯ ತೊಂದರೆಗಳು, ತಲೆನೊವು, ಪಿತ್ತವತಜನಕಾಂಗ, ಶ್ವಾಸಕೋಶದ ರೋಗಗಳು, ಮಂಕಾಗಿರುವಿಕೆಯೇ ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ. (ಎಸ್.ಕೆ.ಎಚ್.; ಎಂ.ಎಸ್.ಎನ್.)