ವಿಷಯಕ್ಕೆ ಹೋಗು

ಕರುಳಿನ ಆತಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರುಳಿನ ಆತಂಕ: ಸೇವಿಸಿದ ಆಹಾರವಸ್ತುಗಳು ಕರುಳಿನಲ್ಲಿ ಎಂದಿನಂತೆ ಮುಂದೆ ಸಾಗದಂತೆ ಆಗುವ ಅಡಚಣೆ (ಕರುಳಿನ ತಡೆ). ತಿಂದದ್ದು ಅರಗಿ, ರಕ್ತಗೂಡಿ, ಉಳಿದುದು ಹೊರಬೀಳುವುದಕ್ಕೆ ಇದರಿಂದ ತಡೆಯಾಗುವುದು. ಇದು ಇದ್ದಕ್ಕಿದ್ದಹಾಗೋ ನಿಧಾನವಾಗಿ ಕೆಲವು ದಿನಗಳಲ್ಲೋ ಆಗಬಹುದು. ತಡೆಯುಂಟಾದ ಕರುಳಿನಲ್ಲಿ ರಕ್ತ ಸಂಚಾರವಿಲ್ಲದೆ ಕೊಳೆತುಹೋಗಿ ಶಸ್ತ್ರಕ್ರಿಯೆ ಆಗದಿದ್ದಲ್ಲಿ ಪ್ರಾಣಕ್ಕೆ ಅಪಾಯ ಒದಗಬಹುದು.

ಕಾರಣಗಳು

[ಬದಲಾಯಿಸಿ]

ಇವು ಕರುಳಿನ ಒಳಗೋ ಅದರ ಗೋಡೆಯಲ್ಲೋ ಹೊರಗೋ ಇರಬಹುದು. ಕೂಸಿನಲ್ಲಿ ಹುಟ್ಟಿನಿಂದಲೇ ಗುದನಾಳದ ಕಂಡಿ ಇಲ್ಲವಾಗುವುದುಂಟು. ಹಾಗೇ ಸಣ್ಣ ಕರುಳಿನ ಕೆಲವು ಭಾಗಗಳು ಕೂಡ ಬೆಳೆದು ವಿಕಾಸವಾಗದೆ ಇಂಗಿ ಹೋಗಿರಬಹುದು. ಒಂದಂಗುಲದಷ್ಟೋ ಇನ್ನೂ ಸಣ್ಣ ಭಾಗವೋ ಹೀಗಾಗಿ ದಪ್ಪ ಹುರಿಯಂತಾಗಿರುವುದೇ ಸಾಮಾನ್ಯ. ಆಗ ಹುಟ್ಟಿದ ಹಸುಗೂಸಿನಲ್ಲಿ ಕರುಳು ವಿಕಾಸವಾಗದಿರಲು ಕೆಲವು ಕಾರಣಗಳಿವೆ. ಪಿಂಡದಲ್ಲಿ ಕರುಳು ಬೆಳೆವಾಗ ಎಂದಿನ ನಿಲುವಿಗೆ ತಿರುಗದಿರುವುದು. ಹುಟ್ಟುತ್ತಲೇ ಬೆಳೆದಿರುವ ಅಂಟುವ ಪಟ್ಟಿಗಳು (ಅಡ್ಹಿಸಿವ ಬ್ಯಾಂಡ್ಸ್‌), ಸಣ್ಣ ಕರುಳಿನ ಮೊದಲ ಭಾಗವನ್ನು ಬಿಗಿ ಹಿಡಿದಿರುವುದು, ಪಿಂಡಗೂಸಿನಲ್ಲಿ ಮಾತ್ರ ಇರುವ ಹೊಕ್ಕುಳಿಗೂ ಕರುಳಿಗೂ ನಡುವಣ ಸಾಗುನಾಳ ಮುಚ್ಚಿಹೋಗದೆ ಹಾಗೇ ತಿರುಚೀಲವಾಗಿ (ಡೈವರ್ಟಿಕ್ಯುಲಂ) ಉಳಿದು ಬಿಡುವುದು. ಸಾಮಾನ್ಯವಾಗಿ ಮಗುವಾದ್ದಾಗಲೇ ಇವು ಮೊಟ್ಟಮೊದಲು ತಲೆದೋರುತ್ತವೆ.

ಕರುಳುಗಳಲ್ಲಿ ಜಂತುಹುಳು, ಕೊಕ್ಕೆಹುಳುಗಳು ವಿಪರೀತವಾಗಿ ಸೇರಿಕೊಂಡು ತಿರಿಗಟ್ಟಿ ಉಂಡೆಯಾಗಿ ಕರುಳಿನ ಆತಂಕವಾಗುವುದು ತೀರ ಸಾಮಾನ್ಯ. ಗೋಲಿ, ಮೊಳೆ, ಮಣಿ, ಕಲ್ಲು, ಸೂಜಿ ಮೊದಲಾದ ನುಂಗಬಾರದ ವಸ್ತುಗಳನ್ನು ನುಂಗಿದಾಗಲೂ ಕರುಳಿನಲ್ಲಿ ಅಡಚಣೆಯಾಗಬಹುದು. ಸುಲಭವಾಗಿ ಅರಗದ, ಮಿತಿಮೀರಿ ತಿಂದ ತಿಂಡಿ, ಉಣಿಸೂ ಬಲು ದೊಡ್ಡದಾಗಿ ಬೆಳೆದು ಪಿತ್ತಕೋಶದಲ್ಲಿ ತೂತಿಟ್ಟು ಕೊಂಡು ಕರುಳಿಗೆ ಬಂದು ಬಿದ್ದ ಪಿತ್ತಗಲ್ಲುಗಳೂ (ಫೀಕೋಲಿತ್ಸ್‌) ಕರುಳಿನೊಳಗಡೆ ಅಡ್ಡಬಿದ್ದು ಆಹಾರ ಸಾಗಣೆಗೆ ಅಡ್ಡಿಯಾಗಬಹುದು.

ಕರುಳಿನ ಗೋಡೆಯಲ್ಲಿ ಉಂಟಾಗುವ ರೋಗಗಳಿಂದ ಕರುಳಿನ ಒಂದು ಭಾಗ ಮಿತಿ ಮೀರಿ ಬೆಳೆದು ಒಳನಾಳ ತೀರ ಕಿರಿದಾಗಿ ಕೊನೆಗೆ ದಾರಿ ಮುಚ್ಚಿದಂತಾಗಬಹುದು. ಹೆಗ್ಗರುಳಿನ ಮೊದಲಲ್ಲಿರುವ ಮೂಗರುಳಲ್ಲಿ (ಸೀಕಂ) ಪುಪ್ಪುಸಕ್ಷಯ ರೋಗಾಣುಗಳ ಸೋಂಕು ಹತ್ತುವುದು ಸಾಮಾನ್ಯ. ಮುಂದೆ ಇದು ಸಣ್ಣ ಕರುಳಿಗೂ ಹರಡಬಹುದು. ಈ ರೋಗದಲ್ಲಿ ಕರುಳಿನ ಸುರುಳಿಗಳು ಒಂದಕ್ಕೊಂದು ಅಂಟಿಕೊಂಡು ಗಂಟುಹಾಕಿಕೊಂಡ ಹಾಗಾಗಲೂ ಬಹುದು. ಬೇರೆ ರೋಗಗಳ ಸೋಂಕುಗಳಿಂದಲೂ ಹೀಗಾಗಬಹುದು. ಕರುಳುಗಳ ಗೋಡೆಯಲ್ಲಿ ಎಲ್ಲಾದರೂ ಏಡಿಗಂತಿ (ಕ್ಯಾನ್ಸರ್) ತೆರನಯಾವುದಾದರೂ ವಿಷಮಗಂತಿ ಎದ್ದು ಅವುಗಳ ಒಳಗಣ ದಾರಿಯನ್ನು ಕಿರಿದು (ಸ್ಟ್ರಿಕ್ಚರ್) ಮಾಡಬಹುದು. ಹೊಟ್ಟೆಗೆ ತಗಲುವ ಗಾಯ, ಪೆಟ್ಟುಗಳು ವಾಸಿಯಾದರೂ ಕರುಳಿನಲ್ಲಿ ಅಡೆತಡೆಯಾಗಬಹುದು. 45 ವಯಸ್ಸು ದಾಟಿದಾಗ ಹೆಗ್ಗರುಳಲ್ಲಿ ವಿಷಮಗಂತಿಗಳುಂಟಾಗಬಹುದು.

ಕರುಳಿನ ಸುರುಳಿಯಂತಿರುವ ಭಾಗಗಳು ಹುರಿಯಂತೆ ತಿರಿಚಿಕೊಂಡಾಗಲೂ ಕರುಳಿನಲ್ಲಿ ತಡೆಯುಂಟಾಗುತ್ತದೆ.

ಸಾಮಾನ್ಯವಾಗಿ ವರ್ಷ ಮೀರಿದ ಹಸುಳೆಗಳಲ್ಲಿ ಕರುಳಿನ ಒಂದು ಭಾಗ ಮಡಿಸಿಕೊಂಡು ಅದರ ಹಿಂದಿನ ಇಲ್ಲವೇ ಮುಂದಿನ ಭಾಗದೊಳಕ್ಕೆ ತೂರುವುದಕ್ಕೆ ಒಳತೂರಿಕೆ (ಇಂಟ್ರಸಸೆಪ್ಷನ್) ಎಂದಿದೆ. ಹೀಗಾದಾಗ ಒಳತೂರಿದ ಭಾಗದ ಕರುಳಿನ ರಕ್ತನಾಳಗಳಿಗೆ ಅಡಚಣೆಯಾಗುವುದು. ತಡಮಾಡದೆ ಶಸ್ತ್ರಕ್ರಿಯೆಯಿಂದ ಬಿಡಿಸದಿದ್ದರೆ ಆ ಭಾಗವೆಲ್ಲ ಸತ್ತು ಕೊಳೆಯುತ್ತದೆ. ರೋಗಿಗೆ ಪ್ರಾಣಾಪಾಯ ಹೆಚ್ಚುತ್ತದೆ. ಹಸುಗೂಸುಗಳಲ್ಲಿ ಹೀಗಾಗುವುದಕ್ಕೆ ನಿಜವಾದ ಕಾರಣ ಗೊತ್ತಿಲ್ಲವಾದರೂ ಎರಡು ವರ್ಷ ಮೀರಿದವರಲ್ಲೂ ದೊಡ್ಡವರಲ್ಲೂ ಅಪುರ್ವವಾಗಿ ಕರುಳಿನೊಳಗೆ ಬೆಳೆವ ಹಲಪಾದಿ (ಪಾಲಿಪ್), ವಸೆಗಂತಿ (ಲೆಪೋಮ), ಏಡಿಗಂತಿಗಳು ಕಾರಣಗಳಾಗಿ ತೋರುತ್ತವೆ.

ಕರುಳಿನ ಒಳಗಡೆ ಆಗುವ ಹಾಗೇ ಕರುಳಿನ ಹೊರಗಿಂದಲೂ ಏನಾದರೂ ಬೆಳೆದೋ ಅಂಟಿಕೊಂಡೋ ಕರುಳಿನ ಚಲನೆಗೆ ಅಡ್ಡಿಯಾಗಬಹುದು. ಕರುಳಿನಿಂದ ಕರುಳಿಗೋ ಅಕ್ಕಪಕ್ಕದ ಅಂಗಗಳಿಗೋ ಅಂಟಿಸಿ ಬಿಗಿಸುವಂತೆ ಕಲೆಗಟ್ಟು ವುದರಿಂದ (ಸ್ಕಾರಿಂಗ್) ಆ ಭಾಗ ಇರುಕಿಸಿ ಸಿಕ್ಕಿ ಕೊಂಡಂತಾಗುತ್ತದೆ. ಸಾಮಾನ್ಯವಾಗಿ ಪಿತ್ತಕೊಶ, ಕರುಳುಬಾಲ (ಅಪೆಂಡಿಕ್ಸ್‌), ಗರ್ಭನಾಳಗಳೇ ಮುಂತಾದವಲ್ಲಿ ಉರಿತವೆದ್ದು (ಇನ್ಫ್ಲಮೇಷನ್) ಕೀವುಗೂಡಿ ನೋವಾಗುವುದುಂಟು. ಕೆಲವೇಳೆ ಹೊಟ್ಟೆಯೊಳಗೆ ನಡೆಸಿದೆ ಶಸ್ತ್ರಕ್ರಿಯೆಯಿಂದಲೂ ಹೀಗೆ ಅಂಟುವ ಪಟ್ಟಿಗಳಾಗಬಹುದು. ಶಸ್ತ್ರಕ್ರಿಯೆ ಕೈಗೊಳ್ಳುವಾಗ ಶಸ್ತ್ರವೈದ್ಯರು ಹಾಕಿಕೊಳ್ಳುವ ಕೈಗವುಸುಗಳಲ್ಲಿ ಕೈಗಳನ್ನು ಸರಾಗವಾಗಿ ತೂರಿಸಲೋಸುಗ ಬಿಂಗಾರದ ಪುಡಿಯನ್ನು (ಟಾಲ್ಕಂಪೌಡರ್) ಚಿಮುಕಿಸುತ್ತಿದ್ದರು. ಈ ಪುಡಿ ಹೊಟ್ಟೆಯಲ್ಲಿ ಕರುಳುಗಳ ಮೇಲೆ ಅಕಸ್ಮಾತ್ತಾಗಿ ಬಿದ್ದಾಗ ಕರುಳುಗಳು ಒಂದಕ್ಕೊಂದು ಅಂಟುವುದರಿಂದಲೇ ಹೊಟ್ಟೆಯ ಶಸ್ತ್ರಕ್ರಿಯೆಗೆ ಗುರಿಯಾದವರಲ್ಲಿ ಕೆಲಕಾಲಾನಂತರ ಕರುಳಿನಲ್ಲಿ ತಡೆಯಾಗುತ್ತಿತ್ತು. ಈಗ ಆ ಪುಡಿಯನ್ನು ಬಳಸುತ್ತಿಲ್ಲ.

ಹೊಟ್ಟೆಯ ಗೋಡೆಯಲ್ಲಿ ಎಲ್ಲಾದರೂ ಏಳುವ ಬೂರುಗಳಲ್ಲಿ (ಹರ್ನಿಯಾಸ್) ಕರುಳೂ ಒಳಸೇರಿದ್ದಾಗ ಇದ್ದಕ್ಕಿದ್ದಹಾಗೆ ಬಟ್ಟಿಬಿದ್ದರೆ (ರಪ್ಚರ್) ಕರುಳಿನಲ್ಲಿ ತಡೆಯಾಗಿ ತೊಂದರೆಯಾಗುವುದು. ಹೊಟ್ಟೆಯ ಬೂರುಗಜ್ಜಲಿನಲ್ಲಿ (ಇಂಗ್ಸೈನಲ್), ವಪೆಯಲ್ಲಿ (ಡಯಫ್ರಾಗ್ಮಾಟಿಕ್), ಕರುಳಿನ ನಡುಪೊರೆಯಲ್ಲಿ (ಮೆಸೆಂಟರಿಕ್), ಇಲ್ಲವೇ ತೊಡೆಯಲ್ಲಿ (ಫೆಮಾರಲ್) ಕಾಣಿಸಿಕೊಳ್ಳಬಹುದು. ಇವಲ್ಲದೆ ಪೆಟ್ಟಾದ್ದರಿಂದ ಹೊಟ್ಟೆ ಗೋಡೆಗಳ ಮೊದಲ ಭಾಗಗಳ ಹೊರಗಡೆ ಬೆಳೆದು ಅಮುಕುವ ದೊಡ್ಡಗಂತಿಯಿಂದಲೂ ಕರುಳು ಪುರ್ತಿ ಒತ್ತಿದಂತಾಗಿ ಮುಚ್ಚಿಹೋಗಬಹುದು.

ಕರುಳಿನ ನರಗಳ ಕೆಲಸ ಕೆಟ್ಟು ಕರುಳು ಚಲಿಸದೆ ನಿಂತು ಅಡ್ಡಿಯಾದಾಗ ಕರುಳ ತಡೆ (ಐಲಿಯಸ್) ಎನ್ನಿಸಿಕೊಳ್ಳುತ್ತದೆ. ಆಗ ಕರುಳಿಗೆ ಏನೋ ಅಡ್ಡಗಟ್ಟಿರುವ ಹಾಗೇ ಹೊರದೋರುವುದು. ಸಾಮಾನ್ಯ ಕಾರಣ ಹೊರಬಿಗಿಪೊರೆಯುರಿತ (ಪೆರಿಟೊನೈಟಿಸ್). ಕಾಲರದಲ್ಲಿ ಆಗುವಂತೆ ವಿಪರೀತ ವಾಂತಿ, ಉಚ್ಚಾಟಗಳಾಗಿ ರಕ್ತದಲ್ಲಿನ ನೀರು, ಸೋಡಿಯಂ, ಪೊಟಾಸಿಯಂ, ಕ್ಲೋರೈಡುಗಳ ಮಟ್ಟ ಏರುಪೇರಾದಾಗಲೂ ಅರನಾರಿ ಕರುಳಾತಂಕ ಆಗಬಹುದು. ಕೊರೆಯಾಗಿರುವ ಈವಸ್ತುಗಳನ್ನು ಕೂಡಲೇ ರಕ್ತಕ್ಕೆ ತುಂಬುವುದೇ ಇದರ ಚಿಕಿತ್ಸೆ.

ಕರುಳಿಗೆ ಸಂಬಂಧಿಸಿದ ಧಮನಿಗಳು (ಆರ್ಟರೀಸ್), ಸಿರಗಳಲ್ಲಿ (ವೆಯ್ನ್‌ಸ್) ರಕ್ತ ಹೆಪ್ಪುಗಟ್ಟುವುದರಿಂದ ಆ ಭಾಗದ ಕರುಳು ಸತ್ತು ಕೊಳೆತು ಕರುಳಿನ ರೋಗ ಆಗಬಹುದು.

ಪರಿಣಾಮಗಳು

[ಬದಲಾಯಿಸಿ]

ಕರುಳಿನಲ್ಲಿ ಅಡೆತಡೆಯಾಗಲು ಬೇರೆ ಬೇರೆ ಕಾರಣಗಳಿದ್ದರೂ ರೋಗ ಮಾತ್ರ ಎರಡು ಮಾದರಿಗಳಲ್ಲಿ ತೋರುವುದು : ಕರುಳಿನ ಗೋಡೆಯಲ್ಲಿ ಏನಾದರೂ ಬೆಳೆದಾಗ ಆಗುವ ಅದರ ನಾಳಗಂತಿಯ ಸರಳ ತಡೆ ಒಂದು; ಕರುಳಿನ ಯಾಂತ್ರಿಕ ತಡೆಯೊಂದಿಗೆ ಕರುಳಿನ ರಕ್ತನಾಳ ಪುರೈಕೆಯ ಅಡಚಣೆ ಇನ್ನೊಂದು. ಜಠರದ ಹತ್ತಿರವೇ, ಕರುಳಿನ ಮೊದಲ ಭಾಗದಲ್ಲಿ ತಡೆಯಾದರೆ ಪಿತ್ತಗೂಡಿದ ಹಳದಿ ಹಸುರು ವಾಂತಿಯಾಗಿ ಕರುಳಲ್ಲಿನ ನೀರೂ ಲವಣಗಳೂ ಕಳೆದು ಬಲು ತೊಂದರೆಯಾಗುವುದು. ಆದರೆ, ಸಣ್ಣ ಕರುಳಿನ, ಹೆಗ್ಗರುಳಿನ ಕೆಳ ಕೊನೆಗಳಲ್ಲಿ ಆತಂಕವಾದರೆ ಹೊಟ್ಟೆ ಉಬ್ಬರಿಸಿಕೊಳ್ಳುವುದು. ಅಲ್ಲದೆ, ಹೆಗ್ಗರುಳಲ್ಲಿ ಮಾತ್ರ ಆತಂಕವಾಗಿದ್ದರೆ ಅದಕ್ಕೂ ಸಣ್ಣ ಕರುಳಿಗೂ ನಡುವೆ ಕವಾಟ ಇರುವುದರಿಂದ ಹೆಗ್ಗರುಳಲ್ಲೇ ಗಾಳಿ ಉಳಿದುಬಿಟ್ಟು ಉಬ್ಬರಿಸಿಕೊಳ್ಳುವುದು. ಕೆಟ್ಟ ನಾತದ ಮಲಗೂಡಿದ ವಾಂತಿಯೂ ಆಗುತ್ತದೆ. ಮುಂಗರುಳು ಹಿರಿಹಿಗ್ಗಿ ಒಡೆದುಕೊಳ್ಳುವ ಅಪಾಯವು ಇದೆ. ಕರುಳಿನ ಆತಂಕದ ಕೆಟ್ಟ ಪರಿಣಾಮಗಳಿಗೆ ಮುಖ್ಯ ಕಾರಣಗಳು ಎರಡು; ವಿಪರೀತ ವಾಂತಿಯಾಗಿ ಕರುಳಿನ ನೀರು ಮತ್ತು ಲವಣಗಳ ಕೊಳೆತ; ಒಂದೇ ಸಮನೆ ಊದಿಕೊಂಡಿರುವುದರಿಂದ ಕರುಳಿನ ಭಾಗ ಸತ್ತು ಕೊಳೆವಂತಾಗುವುದು. ಕರುಳಿನ ಸಿರಗಳಲ್ಲಿನ ರಕ್ತದ ಒತ್ತಡಕ್ಕಿಂತಲೂ ಹೆಚ್ಚಾಗಿ ಕರುಳಿನೊಳಗೆ ಒತ್ತಡವೇರಿದರೆ ಕರುಳಿನ ಪುಷ್ಟಿಗೆ ಅಡ್ಡಬರುವುದು. ರಕ್ತ ಮುಂದೆ ಹರಿಯದೆ ಆಮ್ಲಜನಕ ಕೊರೆಯಾಗುವುದರಿಂದ ಕರುಳು ಕೆಡುವುದು. ಹೀಗೆ ಕೆಟ್ಟಿರುವ ಕರುಳಿನ ನಾಳದೊಳಗಿನ ವಿಷಕರ ವಸ್ತುಗಳು ಸಾಮಾನ್ಯವಾಗಿ ಅಡ್ಡಗಟ್ಟುವ ಕರುಳಿನ ಲೋಳೆಪೊರೆಯನ್ನು (ಮ್ಯೂಕೋಸ) ದಾಟಿಕೊಂಡು ಕರುಳಿನಾಚೆ ಬಂದು ಹೊರಬಿಗಿಪೊರೆಯ ಪೊಳ್ಳಿಗೆ ಸೇರಿ ರಕ್ತಗೂಡಿ ರಕ್ತವಿಷವೇರಿಸುವುವು. ಕರುಳಿನ ಆತಂಕದಲ್ಲಿ ನೀರಡಿಕೆ ಸಾಮಾನ್ಯ. ಮೈಯಲ್ಲಿನ ನೀರು ಮಿತಿಮೀರಿ ಕಳೆದುಹೋದಾಗ ಕಣ್ಣುಗಳು ಗುಳಿಬಿದ್ದು, ನಾಲಗೆ, ಚರ್ಮ ಒಣಗಿ ರೋಗಿ ಸಣಕಲಾಗುವನು. ಮೂತ್ರಸುರಿಕೆ ತಗ್ಗುವುದು. ಕರುಳು ಕೆಟ್ಟಿದ್ದರೆ ಜ್ವರ ಬರುವುದು. ಕೆಲವೇಳೆ ರೋಗಿ ಸುಸ್ತಾಗಿ ತಣ್ಣಗಾಗುವುದುಂಟು. ಬಲವಾಗಿ ಮಲಗಟ್ಟಿರುತ್ತದೆ. ಹೂಸು ಬಿಡುವುದೂ ರೋಗಿಯಿಂದಾಗದು.

ನಿದಾನ

[ಬದಲಾಯಿಸಿ]

ಆಗ ಹುಟ್ಟಿದ ಹಸುಗೂಸು ದಿನವೆಲ್ಲ ಕಳೆದರೂ ಮಲ ಹಾಕಿಲ್ಲವೆಂದರೆ, ಗುದನಾಳವೇ ಇಲ್ಲವೆಂದೋ ಕರುಳಿನ ವಿಕಾಸ ಆಗಿಲ್ಲವೆಂದೋ ಅನುಮಾನಿಸಬಹುದು. ಬಹುಪಾಲು ಕರುಳಿನ ಆತಂಕಗಳಲ್ಲಿ ಹೊಟ್ಟೆನುಲಿತದಿಂದ ಕರುಳು ಹಿಂಡುವುದರಿಂದ ಹೊಟ್ಟೆನೋವು, ಉದರಶೂಲೆ ಇದ್ದೇ ಇರುವುದು. ನೋವು ಮೊದಲು ಹೊಕ್ಕುಳಿನ ಸುತ್ತ ತೋರಿ, ಆಮೇಲೆ ಒಡಲೆಲ್ಲ ಹರಡಿಕೊಳ್ಳತ್ತದೆ. ಆಗ್ಗಾಗ್ಗೆ ಇಳಿದು ಹೋಗುತ್ತದೆ. ಆದರೂ ಮೊಂಡು ನೋವು ಇದ್ದೇ ಇರುತ್ತದೆ. ಹೊಟ್ಟೆಶೂಲೆ, ಕರುಳಿನ ಕುಗ್ಗುಗಳೊಂದಿಗೆ ಒಳಗಡೆ ಗುಳುಗುಳು ಸದ್ದಾಗುವುದು. ಕೆಲವೇಳೆ ಹತ್ತಿರ ನಿಂತಿದ್ದವರಿಗೂ ಈ ಸದ್ದು ಕೇಳಿಸಬಹುದು. ಆದರೆ, ಸ್ಟೆತಸ್ಕೋಪಿನಿಂದ ಸುಲಭವಾಗಿ ಇದನ್ನು ಕೇಳಿಸಿಕೊಳ್ಳಬಹುದು. ತಿಂದದ್ದು ಹೆಚ್ಚಾಗಿ ಭೇದಿಗೆ ತೆಗೆದುಕೊಂಡಾಗಲೂ ಹೀಗೆ ಕೇಳಬಹುದಾದರೂ, ಆಗ ಹೊಟ್ಟೆ ಉಬ್ಬರ, ಶೂಲೆ ಇರವು. ಕೇವಲ ಕರುಳಿನ ಆತಂಕವಲ್ಲದೆ ಬೂರಿನಲ್ಲಿ ಕರುಳು ಸಿಕ್ಕಿಹಾಕಿಕೊಂಡಿದ್ದರೆ ಹೊಟ್ಟೆಯನ್ನು ಎಲ್ಲಿ ಮುಟ್ಟಿದರೂ ನೋಯುತ್ತಿರುವುದು. ಆಗ ಹೊಟ್ಟೆಮೇಲೆ ಬೆರಳುಗಳಿಂದ ಮೆಲ್ಲನೆ ಬಡಿದರೆ ಒಳಗೆ ಗಾಳಿ ತುಂಬಿ ಉಬ್ಬರವಾಗಿರುವ ಸದ್ದೇಳುವುದು. ರೋಗಿಯನ್ನು ನೆಟ್ಟಗೆ ನಿಲ್ಲಿಸಿ ಸರಳ ಎಕ್ಸ್‌ಕಿರಣ ಚಿತ್ರ ತೆಗೆದು ನೋಡಿದರೆ, ಹೊಟ್ಟೆಯಲ್ಲಿ ಅಲ್ಲಲ್ಲಿ ನೀರೂ ಗಾಳಿಯೂ ಗೂಡುಗಳಲ್ಲಿ ಇರುವಂತೆ ತೋರುವುದು. ಹೆಗ್ಗರುಳಲ್ಲಿ ಉಬ್ಬರವಾಗಿದ್ದರೆ, ಅದರ ಮಡಿಕೆಗಳು ಕಾಣದಾಗುತ್ತವೆ. ಕರುಳಿನ ಆತಂಕದಲ್ಲಿ ಮುಖ್ಯವಾಗಿ ಗುದದ ಮೂಲಕ ಹೆಗ್ಗರುಳನ್ನು ವೈದ್ಯ ಪರೀಕ್ಷಿಸಬೇಕು. ಆತಂಕ ಕಾರಣ ಕೆಲವೇಳೆ ಇದರಿಂದ ತಿಳಿಯುವುದು. ಒಟ್ಟಿನಲ್ಲಿ ಕರುಳಿನ ಆತಂಕ ಇರುವುದೇ, ಕರುಳು ತಿರುಚಿದಂತಾಗಿರುವುದೇ, ಸುಮ್ಮನೆ ಒಳಗಡೆ ಬಿದ್ದಿರುವ ಅಡಚಣೆಯೇ, ಕರುಳು ಅವುಚಿಕೊಂಡಿರುವುದೇ, ಆತಂಕವಾಗಿದ್ದರೆ ಎಲ್ಲಿ ಆಗಿದೆ ಇವನ್ನೆಲ್ಲ ವೈದ್ಯ ಮೊದಲು ನಿರ್ಧರಿಬೇಕು. ಈ ನಿರ್ಧಾರಕ್ಕೆಂದೇ ಕೆಲವೇಳೆ ಒಡಲಿನ ಶಸ್ತ್ಯಕ್ರಿಯ ಆಗಬೇಕಾಗುತ್ತದೆ. ಹೊಕ್ಕುಳ ಮಟ್ಟದಲ್ಲಿ ಹೊಟ್ಟೆಯ ಸುತ್ತಳತೆಯನ್ನು ಮೇಲಿಂದಮೇಲೆ ಗುರುತಿಸುತ್ತಿದ್ದರೆ ಅನುಕೂಲ. ಚಿಕಿತ್ಸೆ: ಹೊಟ್ಟೆ ಉಬ್ಬರವನ್ನು ಹೋಗಲಾಡಿಸಿ, ಕರುಳಿನ ಸಾಗುನಾಳದಲ್ಲಿ ಆಹಾರವಸ್ತುಗಳು ಸರಾಗವಾಗಿ ಮುಂದೆ ಸಾಗುವಂತೆ ಮಾಡುವುದೇ ಚಿಕಿತ್ಸೆಯ ಮುಖ್ಯ ಗುರಿ. ವಾಂತಿ ವಿಪರೀತವಾಗಿದ್ದಾಗ, ಕಳೆದುಹೋದ ನೀರು, ಲವಣಗಳನ್ನು ರಕ್ತನಾಳದ ಮೂಲಕ ಬೇಗನೆ ಉಪ್ಪುನೀರಿನೊಂದಿಗೆ ತುಂಬಿಸಬೇಕು. ರೋಗಿಗೆ ಬಾಯಿ ಮೂಲಕ ಏನೂ ಕೊಡದಂತಿರಿಸಿ, ಜಠರದೊಳಕ್ಕೆ ಒಂದು ರಬ್ಬರ್ ಕೊಳವೆಯನ್ನು ತೂರಿಸಿ ಇಳಿಬಿಟ್ಟು ಅಲ್ಲಿ ಸೇರುವ ನೀರನ್ನು ಹೀರಿ ಹೊರಹಾಕುತ್ತಿರಬೇಕು. ರೋಗದ ಗುರುತು ಹಚ್ಚಿ ಮುಂದಿನ ಚಿಕಿತ್ಸೆಗೆ ಯೋಜಿಸಿಕೊಂಡು ನೋವು ಹರಿಸುವ ಮದ್ದನ್ನೂ ವೈದ್ಯ ಬೇಗನೆ ಕೊಡುವನು. ಎಲ್ಲಕ್ಕೂ ಮುಖ್ಯವಾಗಿ ಒಂದಿಲ್ಲೊಂದು ಬಗೆಯ ಶಸ್ತ್ರಕ್ರಿಯೆ ಆಗಲೇಬೇಕಾಗುತ್ತದೆ. ರೋಗಿಯ ಸ್ಥಿತಿಕೆಡುವುದರೊಳಗಾಗಿ, ಎಷ್ಟು ಬೇಗನೆ ಶಸ್ತ್ರಕ್ರಿಯೆಯಾದರೆ ಅಷ್ಟೂ ಚೆನ್ನಾಗಿ ರೋಗಿಯನ್ನು ಉಳಿಸಿಕೊಳ್ಳಬಹುದು. ಬಾಯ ಮೂಲಕ ತೂರಿಸುವ, ಕರುಳಿನೊಳಹೊಗುವ ನೀಳವಾದ ತೆಳು ರಬ್ಬರ್ ಕೊಳವೆಯನ್ನು ಹಾಕಿಟ್ಟು ಒಳಗಿನದನ್ನೆಲ್ಲ ಹೀರಿಹಾಕುತ್ತಿದ್ದರೆ, ಎಷ್ಟೋ ವೇಳೆ ಕರುಳಿನ ಆತಂಕ ಕಳೆದು ಉಬ್ಬರವೂ ಇಳಿಯುವುದು. ಕರುಳಿನ ಉರಿತಗಳು, ಅರನಾರಿ, ಸೆಡೆತ, ಕರುಳಿನ ಅಂಟಿಕ ಪಟ್ಟಿಗಳಿಂದ ಆತಂಕವಾಗದ್ದಿರೂ ಈ ಚಿಕಿತ್ಸೆಯಿಂದ ಮೇಲಾಗುತ್ತದೆ. ಏನಾದರೂ 12 ತಾಸುಗಳೊಳಗಾಗಿ ಹೀಗೆ ಮಾಡಿದ್ದರಿಂದ ಗುಣ ಕಾಣದಿದ್ದಲ್ಲಿ ಶಸ್ತ್ರಕ್ರಿಯೆಗೆ ಸಿದ್ಧವಾಗಿರಲೇಬೇಕು. ಆಗ ಹುಟ್ಟಿದ ಹಸುಗೂಸಿನಲ್ಲಿ ಗುದನಾಳ ಇಲ್ಲದಿದ್ದಾಗ ಹೊಸದೊಂದು ಕಂಡಿಯನ್ನು ಶಸ್ತ್ರವೈದ್ಯ ರಚಿಸಬೇಕು. ಕರುಳು ನುಲುಚಿಕೊಂಡಿರುವ ಬೂರುವಿನ ಶಸ್ತ್ರಕ್ರಿಯೆ ಕೂಡಲೇ ಆಗಬೇಕು. ಬೂರುವಿನಲ್ಲಿಕರುಳು ಸಿಕ್ಕಿಹಾಕಿಕೊಂಡಿದ್ದರೆ ಶಸ್ತ್ರಕ್ರಿಯೆಯಿಂದ ಬಿಡಿಸಬಹುದು. ಹೊಟ್ಟೆಯ ಶಸ್ತ್ರಕ್ರಿಯೆ ಮಾಡುವಾಗ ಕರುಳಿನಲ್ಲಿ ಎಲ್ಲಾದರೂ ಗುಣವಾಗದಷ್ಟು ಕೆಟ್ಟು ಕೊಳೆತಿದ್ದರೆ ಆ ಭಾಗವನ್ನು ಕತ್ತರಿಸಿ ತೆಗೆದು ಹಾಕಿ, ಉಳಿದ ಕೊನೆಗಳನ್ನು ಒಂದುಗೂಡಿಸಬೇಕಾಗಬಹುದು. ಅರನಾರಿ ಕರುಳಾತಂಕಕ್ಕೆ ಶಸ್ತ್ರಕ್ರಿಯೆ ಬೇಕಿಲ್ಲ; ಮದ್ದುಗಳಿಂದ ಮೇಲಾಗುತ್ತದೆ. ಹೊಟ್ಟೆಯಲ್ಲಿ ಜಂತುಹುಳು, ಕೊಕ್ಕೆಹುಳು ವಿಪರೀತವಾಗಿದ್ದರೆ ಕೇವಲ ಮದ್ದುಗಳಿಂದ ವಾಸಿಮಾಡ ಬಹುದು. ಕರುಳಿನ ಆತಂಕವನ್ನು ಎಳೆಯದರಲ್ಲೇ ಗುರುತಿಸುವುದು, ಆತಂಕದಿಂದೇಳುವ ಕೆಡಕುಗಳ ಹೆಚ್ಚಿನ ಅರಿವು, ಸರಿಯಾದ ಶಸ್ತ್ರಕ್ರಿಯೆ, ಕರುಳೊಳಕ್ಕೆ ರಬ್ಬರ್ ಕೊಳವೆಗಳನ್ನು ಬೇಗನೆ ಚೆನ್ನಾಗಿ ಹಾಕಿರಿಸಿ ಒಳಗಿನದನ್ನೆಲ್ಲ ಈಚೆಗೆ ತೆಗೆದು ಹಾಕುವುದು, ಇವುಗಳಿಂದ ಕರುಳಿನ ಆತಂಕದಿಂದ ರೋಗಿ ಬಿಡುಗಡೆಯಾಗುವ ಅವಕಾಶ ಹೆಚ್ಚಿದೆ. ರಕ್ತನಾಳ ಕೆಟ್ಟಿದ್ದು ಕರುಳಿನ ಆತಂಕವಾಗಿದ್ದರೆ ರೋಗಿಗೆ ಹೆಚ್ಚು ಅಪಾಯಕರ. (ಬಿ.ಎಂ.ಎ.)