ವಿಷಯಕ್ಕೆ ಹೋಗು

ಕರಿಹುಂಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕರಿಹುಂಜ : ಗ್ಯಾಲಿಫಾರ್ಮಿಸ್ ಗಣದ ಟೆಟ್ರವೋನಿಡೀ ಕುಟುಂಬಕ್ಕೆ ಸೇರಿದ ಲೈರೂರಸ್ ಟೆಟ್ರಿಕ್ಸ್‌ ಎಂಬ ಶಾಸ್ತ್ರೀಯ ಹೆಸರಿನ ಹಕ್ಕಿಯ ಗಂಡಿಗಿರುವ ಸಾಮಾನ್ಯ ಹೆಸರು. ಹೆಣ್ಣುಹಕ್ಕಿಯನ್ನು ಬೂದುಕೋಳಿ (ಗ್ರೇ ಹೆನ್) ಎಂದು ಕರೆಯುತ್ತಾರೆ. ಗಂಡು ಹೆಣ್ಣುಗಳೆರಡಕ್ಕೂ ಬ್ಲ್ಯಾಕ್ ಗ್ರಾಸ್ ಎಂಬ ಸಾಮಾನ್ಯ ಹೆಸರಿದೆ. ಈ ಜಾತಿಯ ಹಕ್ಕಿ ಯುರೋಪು ಮತ್ತು ಏಷ್ಯದ ಉತ್ತರ ಭಾಗಗಳ ನಿವಾಸಿ. ಗಂಡುಹಕ್ಕಿ ಸು. 2' ಉದ್ದವಿದ್ದು 1 ಕಿಗ್ರಾಂ ಗಿಂತಲೂ ಹೆಚ್ಚು ತೂಗುತ್ತದೆ. ಗಂಡು ಬಹಳ ಚೆಲುವಾದ ಹಾಗೂ ವರ್ಣರಂಜಿತ ಹಕ್ಕಿ. ಮೈ ಹೊಳೆಯುವ ನೀಲಿಮಿಕ್ರ್ರಿತ ಕಪ್ಪು ಬಣ್ಣದ್ದು. ಬಾಲದ ಕೆಳಗೂ ರೆಕ್ಕೆಗಳ ಮೇಲೂ ಬಿಳಿಯ ಪಟ್ಟೆಯಿದೆ. ಬಾಲ ಬೀಸಣಿಗೆಯಂತಿದೆ. ಹಣೆಯ ಮೇಲೆ ಕಡುಗೆಂಪು ಬಣ್ಣದ ಮಾಂಸಲಭಾಗವಿದೆ. ಹೆಣ್ಣು ಹಕ್ಕಿ ಗಂಡಿಗಿಂತ ಚಿಕ್ಕದು. ಇದರ ಮೈಬಣ್ಣ ಕೆಂಗಂದು; ಅಲ್ಲಲ್ಲಿ ಕಪ್ಪು ಪಟ್ಟೆಗಳಿವೆ. ಕುರುಚಲು ಪ್ರದೇಶಗಳು, ಬಂಡೆಗಳಿಂದ ಕೂಡಿದ ಗುಡ್ಡಗಾಡುಗಳು ಮುಂತಾದೆಡೆ ಈ ಹಕ್ಕಿಗಳು ಸಾಮಾನ್ಯ. ಹಣ್ಣುಹಂಪಲು, ಕಾಳುಕಡ್ಡಿ ಇವುಗಳ ಪ್ರಧಾನ ಅಹಾರ. ಕರಿಹುಂಜ ಬಹುಪತ್ನೀಕ. ವಸಂತ ಋತುವಿನಲ್ಲಿ ಒಂದೊಂದು ಗಂಡೂ ಹಲವಾರು ಹೆಣ್ಣುಗಳನ್ನು ಸೇರಿಸಿಕೊಂಡು ವಿಶಿಷ್ಟ ಸ್ಥಳಗಳಲ್ಲಿ ಪ್ರಣಯಸೂಚಕ ನೃತ್ಯಮಾಡುತ್ತದೆ. ಈ ನರ್ತನ ಸ್ಥಳಗಳನ್ನು ಲೆಕ್ ಎನ್ನುತ್ತಾರೆ. ವಿವಿಧ ರೀತಿಯ ಭಾವ ಭಂಗಿಗಳಿಂದ ಕೂಡಿದ ಈ ಕುಣಿತದ ಮೂಲಕ ಗಂಡು ಹೆಣ್ಣುಗಳನ್ನು ಒಲಿಸಿಕೊಳ್ಳುತ್ತದೆ. ಬೆಳಗಿನ ಜಾವ ಆರಂಭ ವಾಗಿ ದಿನವೆಲ್ಲ ನಡೆಯು ತ್ತಲೇ ಇರುತ್ತದೆ. ಈ ಕುಣಿತ. ಕೆಲವು ಸಲ ಇತರ ಗಂಡುಗಳು ಈ ಸ್ಥಳಕ್ಕೆ ಬರುವುದುಂಟು. ಆಗ ಗಂಡುಹಕ್ಕಿಗಳಲ್ಲಿ ಹೆಣ್ಣುಗಳಿಗಾಗಿ ಕಾಳಗ ನಡೆಯುತ್ತದೆ. ಸಾಧಾರಣವಾಗಿ ಇದು ತೋರಿಕೆಯ ಜಗಳವಾದರೂ ಕೆಲವೊಮ್ಮೆ ಇದು ಉಗ್ರವಾಗಿಯೇ ನಡೆದು ಕೆಲವು ಗಂಡುಗಳ ಸಾವಿನಲ್ಲಿ ಪರಿಣಮಿಸಬಹುದು. ಹೆಣ್ಣು ಹಕ್ಕಿ ಒಂದು ಸಲಕ್ಕೆ 6-10 ಮೊಟೆಗಳನ್ನಿಡುತ್ತದೆ. ಸಾಮಾನ್ಯವಾಗಿ ನೆಲದಲ್ಲಿ ಗುಂಡಿಮಾಡಿ ಕಡ್ಡಿಗಳನ್ನು ಹರಡಿ ಗೂಡನ್ನು ಕಟ್ಟುತ್ತದೆ. ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಮಾಡುವುದೂ ಮರಿಗಳ ಪೋಷಣೆಯೂ ಹೆಣ್ಣಿಗೇ ಸೇರಿದ್ದು.

"https://kn.wikipedia.org/w/index.php?title=ಕರಿಹುಂಜ&oldid=658437" ಇಂದ ಪಡೆಯಲ್ಪಟ್ಟಿದೆ