ಕಮೋಡೋ

ವಿಕಿಪೀಡಿಯ ಇಂದ
Jump to navigation Jump to search

ಕಮೋಡೋ : ಒಂದು ಜಾತಿಯ ಸರೀಸೃಪ. ಉಡದ ಜಾತಿಗೆ ಹತ್ತಿರದ ಸಂಬಂಧಿ. ಜೀವಂತವಾಗಿರುವ ಹಲ್ಲಿಗಳಲ್ಲಿ ಅತಿ ದೊಡ್ಡದೆನಿಸಿದ ಇದು 12' ಉದ್ದ ಬೆಳೆಯುತ್ತದೆ ಹಾಗೂ 300 ಪೌಂಡು ತೂಗುತ್ತದೆ. ಬಣ್ಣ ಕಪ್ಪು, ಚರ್ಮ ಮೂಳೆಯಷ್ಟು ಗಟ್ಟಿಯಾಗಿದೆ. ಹವಾಗುಣವನ್ನು ಪರೀಕ್ಷಿಸಲು ತನ್ನ ಹಳದಿ ಬಣ್ಣದ ನಾಲ್ಕು ಕವಲುಗಳಾಗಿ ಸೀಳಿದ ನಾಲಗೆಯನ್ನು ಆಗಾಗ ಹೊರಚಾಚುತ್ತದೆ. ಹೀಗೆ ನಾಲಗೆಯನ್ನು ಹೊರಕ್ಕೂ ಒಳಕ್ಕೂ ಆಡಿಸುವಾಗ ಅದು ದೀಪದ ಜ್ವಾಲೆಯ ಹಾಗೆ ಕಾಣುತ್ತದೆ. ಇದು ಮಾಂಸಾಹಾರಿ. ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುವುದಲ್ಲದೆ ಬದುಕಿರುವ ಕೀಟಗಳನ್ನು ಕಶೇರುಕಗಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ನೆಲದಮೇಲೆಯೇ ವಾಸ. ಕೆಲವು ವೇಳೆ ನೀರಿನಲ್ಲಿ ಈಜುವುದು ಉಂಟು. ರಾತ್ರಿಯನ್ನು ಬಿಲಗಳಲ್ಲಿ ಕಳೆಯುತ್ತದೆ. ಕೆಲವು ಸಾರಿ ಬಿಲದಲ್ಲೇ ಹಲವಾರು ದಿನಗಳನ್ನು ಕಳೆಯುವುದು ಉಂಟು. ಈ ಪ್ರಾಣಿಯ ವಿಚಾರ ಬಹಳ ದಿನಗಳವರೆಗೂ ತಿಳಿದಿರಲಿಲ್ಲ. ಕೇವಲ 50ವರ್ಷಗಳಿಂದೀಚೆಗೆ ಇದರ ಇರುವಿಕೆ ಗೊತ್ತಾಗಿದೆ. ಇದರ ಸಂತತಿ ಪ್ಲಿಸ್ಟೋಸಿನ್ ಕಾಲದ ಆದಿಯಿಂದ ಬೆಳೆದುಬಂದಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಸೆಲೆಬಸ್ ದ್ವೀಪದ ದಕ್ಷಿಣಕ್ಕಿರುವ ಸುಂದ ದ್ವೀಪಗಳಲ್ಲಿ ಕಂಡುಬರುತ್ತದೆ.

"https://kn.wikipedia.org/w/index.php?title=ಕಮೋಡೋ&oldid=658441" ಇಂದ ಪಡೆಯಲ್ಪಟ್ಟಿದೆ