ವಿಷಯಕ್ಕೆ ಹೋಗು

ಕನ್ನಡಿಗರ ಕರ್ಮಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಕನ್ನಡಿಗರ ಕರ್ಮಕಥೆ' ಅಥವಾ 'ವಿಜಯನಗರ ರಾಜ್ಯದ ನಾಶ' - ಇದು ಗಳಗನಾಥರು ಬರೆದ ಐತಿಹಾಸಿಕ ಕಾದಂಬರಿ ಆಗಿದ್ದು, ವಿಜಯನಗರ ಸಾಮ್ರಾಜ್ಯವು ನಾಶ ಹೊಂದಿದ ಬಗೆಯನ್ನು ಚಿತ್ರಿಸುತ್ತದೆ. ಇದು ಸ್ವತಂತ್ರ ಕಾದಂಬರಿ ಆಗಿರದೆ, ಮರಾಠಿಯಲ್ಲಿನ ಹರಿನಾರಾಯಣ ಆಪಟೆ ಎಂಬವರು ಬರೆದ 'ವಜ್ರಾಘಾತ' ಎಂಬ ಕಾದಂಬರಿಯ ಕನ್ನಡ ರೂಪಾಂತರವಾಗಿದೆ ಎಂದು ತಮ್ಮ ಪ್ರಸ್ತಾವನೆಯಲ್ಲಿ ಗಳಗನಾಥರು ಹೇಳಿದ್ದಾರೆ.

ಕಥಾಹಂದರ

[ಬದಲಾಯಿಸಿ]
  • ವಿಜಯನಗರ ಸಾಮ್ರಾಜ್ಯವು ಖ್ಯಾತಿಯ ಉತ್ತುಂಗಕ್ಕೇರಿದ್ದು ಕೃಷ್ಣದೇವರಾಯನ ಕಾಲದಲ್ಲಿ. ಅವನ ಆಪ್ತ ಸರದಾರರಲ್ಲೊಬ್ಬನಾದ ರಾಮರಾಯನು ಅವನ ಮಗಳನ್ನು ಮದುವೆಯಾಗಿ ಇನ್ನಷ್ಟು ಏಳಿಗೆ ಹೊಂದುತ್ತಾನೆ. ಸದಾಶಿವರಾಯ ನನ್ನು ಹೆಸರಿಗೆ ರಾಜನಾಗಿ ಇಟ್ಟು ನಿಜವಾದ ಅಧಿಕಾರವನ್ನು ತಾನೇ ಚಲಾಯಿಸುತ್ತಾನೆ.
  • ಕೃಷ್ಣದೇವರಾಯನ ಮಗಳನ್ನು ಮದುವೆಯಾಗುವ ಮೊದಲು ಒಬ್ಬ ಮುಸ್ಲಿಂ ಸುಂದರಿಯನ್ನು ಪ್ರೇಮಿಸಿ ಅವಳನ್ನು ತನ್ನ ರಾಣಿಯನ್ನಾಗಿ ಮಾಡುವ ಮಾತು ಕೊಟ್ಟಿದ್ದನು. ಅವನು ಮಾತನ್ನು ಉಳಿಸಿಕೊಳ್ಳದೆ ಇದ್ದಾಗ ಅವಳು ರಾಮರಾಯನ ಮೇಲೆ ಸಿಟ್ಟಿಗೆದ್ದು ಸೇಡಿಗಾಗಿ ಕಾಯುತ್ತಾಳೆ. ಆಕೆಯ ಮಗನೇ ರಣಮಸ್ತಖಾನನು. ಇವನು ಮೊದಲು ವಿಜಾಪುರದ ಪ್ರತಿನಿಧಿಯಾಗಿ ವಿಜಯನಗರದಲ್ಲಿ ಇದ್ದನು.
  • ಅವನು ತನ್ನ ಮಗನೆಂಬ ಮೋಹದಿಂದ ಅವನನ್ನು ತನ್ನತ್ತ ಒಲಿಸಿಕೊಂಡು ತನ್ನ ಸೈನ್ಯದಲ್ಲಿ ಅವನಿಗೆ ಮಹತ್ವದ ಸ್ಥಾನವನ್ನು ಅರಸನಾಗಿ ಅಧಿಕಾರ ಚಲಾಯಿಸುತ್ತಿದ್ದ ರಾಮರಾಯನು ಕೊಟ್ಟನು. ಅವನನ್ನು ತನ್ನ ಅಂಗರಕ್ಷಕನನ್ನಾಗಿಯೂ ಮಾಡಿಕೊಂಡನು. ಆದರೆ ಅವನೋ ತನ್ನ ಪ್ರಿಯತಮೆಗೋಸ್ಕರ ರಾಮರಾಯನ ತಲೆಯನ್ನು ಹಾರಿಸುವ ಪ್ರತಿಜ್ಞೆಯನ್ನು ಮಾಡಿದ್ದು ಅದಕ್ಕಾಗಿ ಕಾಯುತ್ತಿದ್ದಾನೆ!
  • ಆ ವರೆಗೆ ಸುತ್ತಮುತ್ತಲಿನ ಮುಸ್ಲಿಂ ರಾಜರ ಒಡಕಿನ ಲಾಭವನ್ನು ರಾಮರಾಯನು ಪಡೆದಿರುತ್ತಾನೆ. ಈಗ ಸುತ್ತಮುತ್ತಲ ಮುಸ್ಲ್ಲಿಂ ರಾಜರು ಒಕ್ಕಟ್ಟಾಗಿ ದಾಳಿ ಮಾಡುತ್ತಾರೆ. ಅದಾಗಲೇ ೨೦೦-೨೫೦ ವರ್ಷಗಳಿಂದ ಇದ್ದ ವಿಜಯನಗರ ಸಾಮ್ರಾಜ್ಯವು ಬಲಿಷ್ಠವಾಗಿದೆ ಎಂಬ ಭ್ರಮೆಯಲ್ಲಿ ವಿಜಯನಗರದವರು ಇರುತ್ತಾರೆ, ಆದರೆ ಅದು ಒಳಗೊಳಗೇ ಪೊಳ್ಳಾಗಿತ್ತು. ಅವರು ಸುಖವನ್ನು ಅನುಭೋಗಿಸಿ ಸೋಮಾರಿಗಳಾಗಿರುತ್ತಾರೆ.
  • ರಾಮರಾಯನ ಉದ್ಧಟತನದಿಂದಾಗಿ ಅನೇಕ ಮುಸ್ಲಿಮರಲ್ಲದೇ ಸ್ವಜನರೂ ಅವನ ವೈರಿಗಳಾಗಿರುತ್ತಾರೆ. ಕೆಲವರು ರಣಮಸ್ತಖಾನನ ತೀವ್ರ ಏಳಿಗೆಯಿಂದ ಕೆಲವರು, ಹೆಸರಿಗೆ ಮಾತ್ರ ರಾಜನಾಗಿರುವ ಸದಾಶಿವರಾಯನ ಜನರು, ಹೀಗೆ ಅವನ ವೈರಿಗಳು ಹೆಚ್ಚಾಗಿದ್ದರು. ರಣಮಸ್ತಖಾನನು ಬಗೆ ಬಗೆಯಲ್ಲಿ ಸಂಚು ಮಾಡಿ ವಿಜಯನಗರ ಸೈನ್ಯಕ್ಕೆ ಸೋಲಿಗೆ ಕಾರಣನಾದನು.
  • ಅವನು ರಾಮರಾಯನ ತಲೆಯನ್ನೂ ಕತ್ತರಿಸಿದನು. ಮಗನಿಂದ ತಂದೆ ಯಾರೆಂಬುದನ್ನು ಮುಚ್ಚಿಟ್ಟ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಳು. ನಂತರ ರಣಮಸ್ತಖಾನನೂ ಅವನ ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡರು. ಇತ್ತ ವಿಜಯನಗರ ಸೈನ್ಯ ಅಪಾರ ಸಾವು ನೋವು ಕಂಡಿತು. ವಿಜಯನಗರದಲ್ಲಿನ ರಾಜವಂಶಜರು ಸಾಧ್ಯವಾದಷ್ಟು ಸಂಪತ್ತನ್ನು ತೆಗೆದುಕೊಂಡು ಓಡಿಹೋದರು. ಇನ್ನು ಕೆಲವರು ಸ್ಥಳೀಯರು ಲೂಟಿಕೊಳ್ಳೆಯಲ್ಲಿ ಭಾಗವಹಿಸಿದರು. ಮೂರು ದಿನಗಳ ನಂತರ ಬಂದ ಶತ್ರು ಸೈನ್ಯವು ರಾಜಧಾನಿಯನ್ನು ಹಾಳುಗೆಡವಿತು.


ಹೊರಗಿನ ಕೊಂಡಿಗಳು

[ಬದಲಾಯಿಸಿ]