ಕಥೆಯೊಳಗಣ ಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಥೆಯೊಳಗಣ ಕಥೆ : ದೊಡ್ಡ ಕಥೆಯನ್ನು ಹೇಳುತ್ತಿರುವಾಗ ಮಧ್ಯೆ ಮಧ್ಯೆ ಬರುವ ಚಿಕ್ಕ ಕಥೆಗಳು. ಅಂತರ್ಗತ ಕಥಾವಳಿ ಎಂದೂ ಕರೆಯಬಹುದು.

ಎಲ್ಲೆಲ್ಲಿ[ಬದಲಾಯಿಸಿ]

ಬಲು ಹಿಂದಿನಿಂದಲೂ ಇವು ಬಳಕೆಯಲ್ಲಿವೆ. ನೀತಿಯನ್ನು ಸಾರುತ್ತಲೊ ಹೇಳಿಕೆಗೆ ದೃಷ್ಟಾಂತವಾಗಿಯೊ ವಾದವೊಂದರ ಸಮರ್ಥನೆಗಾಗಿಯೊ ಖಂಡನಕ್ಕಾಗಿಯೊ ಇವು ಬಂದಿರಬಹುದು.

ನಯಸೇನೆನ ಧರ್ಮಾಮೃತದಲ್ಲಿ ಇಂಥವಿವೆ. ಇವು ಸಾಧಾರಣವಾಗಿ ಚಿಕ್ಕವು. ಅದೇ ಬಾಣನ ಕಾದಂಬರಿಯಲ್ಲಿ ಬರುವ ಒಳಕಥೆಗಳು ಸುದೀರ್ಘವಾದುವು.

ಪಾಶ್ಚಾತ್ಯರ ರೋಮಾನ್ಸ್‌ ಮತ್ತು ನಾವೆಲ್ಗಳಲ್ಲಿ ಕಾಣಬರುವಂತೆ ಅಷ್ಟು ದೊಡ್ಡವೂ ಅಷ್ಟು ಚಿಕ್ಕವೂ ಅಲ್ಲದ ಕಥೆಗಳೂ ಉಂಟು. 17 ಮತ್ತು 18ನೆಯ ಶತಮಾನದ ಫ್ರಾನ್ಸಿನಲ್ಲಿ ಅದ್ಭುತವಾಗಿ ಮಾರಾಟವಾಗುತ್ತಿದ್ದ ರೋಮಾನ್ಸುಗಳಲ್ಲಿ ಒಳ ಕಥೆಯ ಉಪಯೋಗ ಪ್ರಾರಂಭವಾಯಿತು. ಸ್ಕೂಡೆರಿ, ಮೆರಿವೊ ಮೊದಲಾದವರಿಗೆ ಅದು ಇಲ್ಲದಿದ್ದರೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲದೆ ಅವರಲ್ಲಿ ಕಥೆಯೊಳಗೆ ಬಂದ ಕಥೆಯೊಳಕ್ಕೆ ಇನ್ನೊಂದು ಕಥೆ ಬಂದು ಸೇರುವುದೂ ಉಂಟು. 18, 19ನೆಯ ಶತಮಾನಗಳ ಅನೇಕ ಕಾದಂಬರಿಕಾರರು ಒಳಕಥೆಯ ನೆರವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ.

ಕಥೆಗಾರನ ಕುಶಲತೆ[ಬದಲಾಯಿಸಿ]

ಕಥೆಯೊಳಗೆ ಕಥೆಯನ್ನು ಕೂಡಿಸುವುದಕ್ಕೆ ಕಥೆಗಾರ ಕುಶಲನಾಗಿರಬೇಕು.

  1. ಮೂಲಕಥೆಯ ಸರಣಿಗೆ ಒಳಕಥೆ ಆಂಗಿಕವಾಗಿ ಹೊಂದಿಕೊಂಡಿರಬೇಕು; ಆದ್ದರಿಂದ ಇದು ಸಹಜವಾಗಿ ತರ್ಕಸಮ್ಮತವಾಗಿ ಒಪ್ಪಾಗಿ ಎದ್ದು ಬಂದಂತಿರಬೇಕು. ಅಷ್ಟಾಗಿ ಇದು ಮುಖ್ಯವಲ್ಲ, ಗೌಣ ಎಂಬ ಸೂತ್ರವನ್ನು ಎಂದೂ ಉಲ್ಲಂಘಿಸಬಾರದು.
  2. ಒಳಕಥೆಯನ್ನು ಓದುವಾಗ ಮೂಲಕಥೆಯ ನೆನಪು ಮಾಸಬಾರದು.
  3. ಒಳಕಥೆ ತನ್ನ ಉದ್ದೇಶಸಾಧನೆಗೆ ಎಷ್ಟು ಬೇಕೋ ಅಷ್ಟೇ ಲಂಬವಾಗಿರಬೇಕು. ನಿಧಾನವಾದ ನಡೆಗಾಗಲಿ ವಿಳಂಬ ವರ್ಣನೆಗಾಗಲಿ ಇಳಿದು ಮೂಲಕಥೆಗೆ ಅಡಚಣೆಯಾಗಬಾರದು.
  4. ಆದರಿಂದ ಸಾಕಷ್ಟು ವೈವಿಧ್ಯ ಉಂಟಾಗಿ ಚಿತ್ತಾಹ್ಲಾದ ಹೆಚ್ಚಬೇಕು. ಒಳಕಥೆಯನ್ನು ಹೇಳುವ ಪಾತ್ರಕ್ಕೂ ಸಮಯ ಸನ್ನಿವೇಶಕ್ಕೂ ಅದು ಸಮಂಜಸವಾಗಿ ಇದ್ದಲ್ಲಿ ಮೂಲಕಥೆಯ ಧಾಟಿಯಿಂದ ಸ್ವಲ್ಪ ಭಿನ್ನತೆ ಕಂಡು ಬಂದು ಒಟ್ಟು ರಚನೆ ರಂಜಕವಾಗುತ್ತದೆ.
  5. ಒಳಕಥೆಯ ವಿಚಾರದಲ್ಲಿ ಮಿತಿ ಮತ್ತು ಔಚಿತ್ಯಗಳು ಹೊನ್ನ ನೇಮ.

ಚೌಕಟ್ಟಿನೊಳಗಣ ಕಥೆಯೊಂದಿಗಿನ ವ್ಯತ್ಯಾಸ[ಬದಲಾಯಿಸಿ]

ಕಥೆಯೊಳಗಿನ ಕಥೆಗೂ ಚೌಕಟ್ಟಿನೊಳಗಣ ಕಥೆಗೂ (ಸ್ಟೋರಿ ವಿದಿನ್ ಎ ಫ್ರೇಮ್; ಫ್ರೇಮ್-ಸ್ಟೋರಿ) ಸ್ಪಷ್ಟ ವ್ಯತ್ಯಾಸವಿದೆ. 1001 ರಾತ್ರಿಗಳು, ಬೇತಾಳ ಪಂಚವಿಂಶತಿ, ಚಾಸರನ ಕ್ಯಾಂಟರ್ಬರಿ ಟೇಲ್ಸ್‌, ಬೊಕ್ಯಾಕ್ಚಿಯೊವಿನ ಡೆಕಮೆರಾನ್, ದಶಕುಮಾರಚರಿತೆ ಮುಂತಾದವು ಒಂದು ಚೌಕಟ್ಟಿನೊಳಗೆ ಹಿಡಿದಿಟ್ಟಿರುವ ನಾನಾ ಕಥೆಗಳ ಸಂಕಲನ. ಕಥೆಗಳನ್ನು ಕೂಡಿಸಿರುವ ವಿಧಾನ ಚಮತ್ಕಾರವಾಗಿರಬಹುದು. ಆದರೂ ಆ ಕಥೆಗಳು ಬೇರೆ ಬೇರೆ. ತಮ್ಮ ತಮ್ಮ ಸ್ವಂತಿಕೆಯಿಂದಲೇ ಅವು ರುಚಿಕರ.

ಕಾದಂಬರಿಪ್ರಕಾರದೊಡನೆ ವ್ಯತ್ಯಾಸ[ಬದಲಾಯಿಸಿ]

ಕಾದಂಬರಿಯ (ನಾವೆಲ್) ಇನ್ನೊಂದು ಪ್ರಕಾರದಿಂದಲೂ ಕಥೆಯೊಳಗಿನ ಕಥೆ ವಿಭಿನ್ನ. ಕೆಲವು ಕಾದಂಬರಿಗಳಲ್ಲಿ ಎರಡೊ ಮೂರೊ ಕಥಾವಸ್ತು (ಡಬಲ್ ಪ್ಲಾಟ್, ಟ್ರಿಬಲ್ ಪ್ಲಾಟ್) ಸಂಯೋಜಿತವಾಗುತ್ತವೆ. ಒಂದಕ್ಕೊಂದು ಸಾದೃಶ್ಯವಾಗಿಯೊ ವ್ಯತಿರಿಕ್ತ ವಾಗಿಯೊ ಇವು ಜರುಗಿ ಸಮಷ್ಟಿಯನ್ನು ಸಂಕೀರ್ಣಗೊಳಿಸುತ್ತವೆ. ಇವನ್ನು ಕಥೆಯೊಳಗಿನ ಕಥೆಯನ್ನಾಗಿ ಭಾವಿಸಲಾಗದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: