ವಿಷಯಕ್ಕೆ ಹೋಗು

ಕಥಾವರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಥಾವರ್ಗ : ಜನಪದಕಥೆಗಳ ವರ್ಗೀಕರಣದಲ್ಲಿ ಆಶಯ (ಮೊಟೀಫ್) ಮತ್ತು ವರ್ಗಗಳು (ಟೇಲ್ ಟೈಪ್) ಮಹತ್ತ್ವದ ಪಾತ್ರ ವಹಿಸಿವೆ. ಜಾನಪದದಲ್ಲಿ ಇವೆರಡರ ಸಂಬಂಧ ಮತ್ತು ವ್ಯತ್ಯಾಸಗಳ ಅಧ್ಯಯನ ಹಲವು ರೀತಿಯಲ್ಲಿ ಸಹಾಯ ಮಾಡಿದೆ. ಅದರಲ್ಲಿಯೂ ಕಥನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದರಲ್ಲಂತು ಇದರಿಂದ ತುಂಬ ಉಪಕಾರವಾಗಿದೆ.

ಹಾ. ಮಾ. ನಾಯಕರು ಹೇಳುವ ಹಾಗೆ ಸ್ಥೂಲವಾಗಿ ಆಶಯ ಕಥೆಯ ವಸ್ತುವನ್ನು ಕುರಿತದ್ದು, ಟೈಪ್ ಅದರ ತಾಂತ್ರಿಕ ಸ್ವರೂಪವನ್ನು ಕುರಿತದ್ದು. ಜನಪದ ಕಥೆಗಳನ್ನು ವರ್ಗ ಮತ್ತು ಆಶಯಗಳ ಆಧಾರದಿಂದ ವರ್ಗೀಕರಿಸುವ ವಿಧಾನವನ್ನು ಮೊಟ್ಟಮೊದಲು ಬಳಕೆಗೆ ತಂದವರೆಂದರೆ ಆಂಟಿ ಆರ್ನೆ ಮತ್ತು ಸ್ಟಿತ್ ಥಾಮ್ಸನ್ ಎಂಬ ವಿದ್ವಾಂಸರು.

ಸ್ವತಂತ್ರ ಅಸ್ತಿತ್ವವುಳ್ಳ ಯಾವುದೇ ಸಾಂಪ್ರದಾಯಿಕ ಕಥೆ ವರ್ಗ ಆಗಬಲ್ಲದು. ಅಂದರೆ ಒಂದು ಅಥವಾ ಹಲವು ಆಶಯಗಳನ್ನೊಳಗೊಂಡ ಸ್ವತಂತ್ರ ಕಥಾನಕವನ್ನು ವರ್ಗವೆಂದು ಗುರುತಿಸುತ್ತೇವೆ. ಇದನ್ನು ಕಥಾ ಸೂಚಕವೆಂದು ಕರೆಯುವುದುಂಟು. ಅಂತು ಯಾವುದೇ ಕಥೆ, ಅದು ಸಂಕೀರ್ಣವಾಗಿರಬಹುದು ಅಥವಾ ಸರಳವಾಗಿರಬಹುದು. ಸ್ವತಂತ್ರ ಕಥನವಾಗಿ ಹೇಳಲ್ಟಟ್ಟಿದರೆ ಸಾಕು. ಅದು ಅರ್ಥದಲ್ಲಿ ಬೇರೆ ಕಥೆಯನ್ನು ಅವಲಂಬಿಸಿದರೆ ತನಗೆ ತಾನೆ ಪೂರ್ಣವಾಗಿರಬೇಕು. ಕೆಲವು ವರ್ಗಗಳು ಹತ್ತಾರು ಆಶಯಗಳನ್ನೊಳಗೊಂಡಂತೆ ದೀರ್ಘವಾಗಿರಬಹುದು. ಇನ್ನು ಕೆಲವು ವರ್ಗಗಳು ಒಂದೇ ಆಶಯಗಳನ್ನೊಳಗೊಂಡ ಚಿಕ್ಕ ಕಥೆಯಾಗಿರಬಹುದು. ಆಶಯಕ್ಕೆ ತಕ್ಕಂಥ ಕಥೆ ಉದ್ದ ಅಥವಾ ಚಿಕ್ಕದಾಗಿರುವುದಂತೂ ಸತ್ಯವಾದ ಮಾತು. ಒಂದೇ ಆಶಯವಿದ್ದಾಗ ಕಥನ ಆಶಯಕ್ಕೂ ಕಥಾವರ್ಗಕ್ಕೂ ವ್ಯತ್ಯಾಸ ಕಂಡು ಬಂದಿರುವುದು ಇಲ್ಲಿನ ಒಂದು ಗಮನಾರ್ಹ ವಿಷಯ. ಪ್ರತಿ ವರ್ಗದಲ್ಲೂ ಆಶಯವಿದ್ದೇ ತೀರಬೇಕು; ಆದರೆ ಪ್ರತಿ ಆಶಯವೂ ವರ್ಗವಾಗಿರಬೇಕೆಂಬ ನಿಯಮವಿಲ್ಲ. ಕಥಾವರ್ಗವೊಂದರಲ್ಲಿ ಒಂದು ಆಶಯವಿದ್ದಾಗ ಮಾತ್ರ ಅದು ಸ್ವತಂತ್ರ ಕಥನವಾಗಿ, ಅಂದರೆ ಕಥಾವರ್ಗವಾಗಿ ನಿಂತುಕೊಳ್ಳುತ್ತದೆ. ಬಹುಸಂಖ್ಯಾತ ಸಾಂಪ್ರದಾಯಿಕ ವರ್ಗಗಳು ಈ ಏಕಾಶಯಗಳನ್ನು ಒಳಗೊಂಡಿರುವಂಥವೇ ಆಗಿವೆ.

ಗೊತ್ತಾದ ಕಥನವೊಂದು ನಿರ್ದಿಷ್ಟವರ್ಗಕ್ಕೆ ಸಂಬಂಧಪಟ್ಟದ್ದೇ ಅಲ್ಲವೇ ಎಂಬುದನ್ನು ಕೆಲವುಸಾರಿ ನಿರಾತಂಕವಾಗಿ ಹೇಳಬಹುದು. ಆದರೆ, ಕಥಾವರ್ಗಗಳ ನಡುವೆ ಗೊಂದಲವುಂಟಾದಾಗ ಅಥವಾ ಗೊತ್ತಾದ ವರ್ಗವೊಂದಕ್ಕೆ ಕಥನವೊಂದು ಸಾಕಷ್ಟು ಸಾದೃಶ್ಯಗಳನ್ನು ಒದಗಿಸದಿದ್ದಾಗ, ಸಹಜವಾಗಿಯೇ ಗಡಿಪ್ರಶ್ನೆಗಳು ಜನ್ಮತಾಳುತ್ತವೆ. ಕಥಾವರ್ಗದ ಈ ವ್ಯತ್ಯಯಗಳು ಕೆಲವು ವಿದ್ವಾಂಸರಲ್ಲಿ, ಅದರಲ್ಲಿಯೂ ಪುರ್ವ ಯುರೋಪಿನವರಲ್ಲಿ, ವರ್ಗಗಳಿಂದ ಕಥೆಗಳನ್ನು ವರ್ಗೀಕರಿಸುವುದರ ಸಪ್ರಮಾಣತೆಯ ಬಗ್ಗೆ ಸಂದೇಹವಾದವನ್ನು ಎಬ್ಬಿಸಿದುವೆಂದು ಸ್ಟಿತ್ಥಾಂಸನ್ ಹೇಳುತ್ತಾನೆ. ಇದಕ್ಕೆ ಕಾರಣಗಳನ್ನು ಸೂಚಿಸುತ್ತ ಆತ, ಈ ಸಂದೇಹವಾದ ಪರಿಶೋಧಕನ ಆಸಕ್ತಿಯಲ್ಲಿನ ಭಿನ್ನತೆಗಳಿಂದ ಉದ್ಭವವಾದುದೆಂದು ಅಭಿಪ್ರಾಯ ಪಡುತ್ತಾನೆ. ಅಂಥ ವಿದ್ವಾಂಸರು ಕಥೆಗಳ ಸಾದೃಶ್ಯಗಳಿಗಿಂತ ಹೆಚ್ಚಾಗಿ ವ್ಯತ್ಯಯಗಳ ನಡುವಣ ಭಿನ್ನತೆಗಳಲ್ಲಿ ಮತ್ತು ನಿರ್ದಿಷ್ಟ ಕಥಾವಕ್ತೃಗಳ ವ್ಯಕ್ತಿತ್ವದಲ್ಲಿ ಆಸಕ್ತರಾಗಿದ್ದರೆಂದೂ ಆತ ಹೇಳುತ್ತಾನೆ. ಕಥಾವರ್ಗವೊಂದಕ್ಕೆ ದೊರೆಯುವ ಭಿನ್ನಪಾಠಗಳನ್ನೆಲ್ಲ ಒಟ್ಟುಗೂಡಿಸಿ, ಅವುಗಳ ಸಾದೃಶ್ಯ ವೈದೃಶ್ಯಗಳ ಮೂಲಕ ನಿರ್ದಿಷ್ಟ ಸ್ವತಂತ್ರ ಕಥಾನಕದ ಮೂಲ ಪ್ರತಿಯನ್ನು ಕಂಡುಹಿಡಿಯುವ ಕೆಲಸ ಇಲ್ಲಾಗುತ್ತದೆ. ಇಂಥ ಸ್ವತಂತ್ರ ಕಥನಗಳುಳ್ಳ ವರ್ಗಗಳು ಯಾವುದೇ ನಿರ್ದಿಷ್ಟ ಸಂಸ್ಕೃತಿಯಲ್ಲಿ ಪರಿಮಿತ ಸಂಖ್ಯೆಯಲ್ಲಿ ಇರುತ್ತವೆ. ಕಥೆಯ ಅಧ್ಯಯನಾಸಕ್ತಿಯನ್ನು ಜಗತ್ತಿನ ಎಲ್ಲ ಭಾಗಗಳಲ್ಲಿನ ವಿವಿಧ ಸಂಸ್ಕೃತಿಗಳಿಗೆ ವಿಸ್ತರಿಸಿದಾಗ ಆಶಯ ಮತ್ತು ವರ್ಗಗಳಿಗೆ ಇರುವ ಕೆಲವು ಸಂಬಂಧ ಮತ್ತು ವ್ಯತ್ಯಾಸಗಳು ಕಾಣಸಿಗುತ್ತವೆ. ಹಾಗೆ ನೋಡಿದಾಗ, ಆಶಯ ಅಂತಾರಾಷ್ಟ್ರೀಯ ಸಂಬಂಧವನ್ನು ಪಡೆದುಕೊಂಡಿರುವುದು ಕಂಡುಬಂದರೆ, ಕಥಾವರ್ಗಗಳು ಪರಿಮಿತ ಭೌಗೋಳಿಕ ಎಲ್ಲೆಯೊಂದಕ್ಕೆ ಮಿತಿ ಕಲ್ಪಿಸಿಕೊಂಡಿರುವ ಹಾಗೆ ಕಾಣಬರುತ್ತದೆ. ವರ್ಗ ಕಥನತಂತ್ರಕ್ಕೆ ಸಂಬಂಧಪಟ್ಟಿದ್ದರಿಂದ, ಕಥೆ ಹೇಳುವ ಪ್ರಾದೇಶಿಕ ಶೈಲಿ, ತಂತ್ರ, ರಚನಾದಿ ವಿಶಿಷ್ಟತೆಗಳಿಂದ ಕೂಡಿಕೊಂಡಿರಲಿಕ್ಕೂ ಸಾಕು. ಆದ್ದರಿಂದ ಕಥನ ಸಾದೃಶ್ಯಗಳು ವಸ್ತುವಿನ ದೃಷ್ಟಿಯಿಂದ ಜಗತ್ತಿನಾದ್ಯಂತ ಕಂಡುಬಂದರೂ ಅವುಗಳ ನಿರೂಪಣಾತಂತ್ರಗಳನ್ನು ಈ ಭೌಗೋಳಿಕ ಹಿನ್ನೆಲೆಯಲ್ಲಿ ಪರಿಭಾವಿಸಬೇಕಾಗುತ್ತದೆ. ಆಶಯಗಳ ತೌಲನಿಕ ಅಧ್ಯಯನದಿಂದ ಅವುಗಳಿಗೆ ಐತಿಹಾಸಿಕ ಸಂಬಂಧವಿಲ್ಲದಿರುವುದು ವ್ಯಕ್ತವಾಗುತ್ತದೆ. ಆದರೆ ಪೂರ್ಣಕಥಾವರ್ಗವೊಂದು ತನ್ನ ವ್ಯತ್ಯಯಗಳ ನಡುವೆ ಐತಿಹಾಸಿಕ ಸಂಬಂಧವೊಂದನ್ನು ಸ್ಥಾಪಿಸಿಕೊಂಡಿರುತ್ತದೆ. ಹೀಗಾಗಿ ಭೌಗೋಳಿಕ ಮತ್ತು ಐತಿಹಾಸಿಕ ದೃಷ್ಟಿಗಳೆಂದು ಕಥಾವರ್ಗದ ಲಕ್ಷಣಗಳೆರಡು ಎಂಬುದನ್ನೂ ಇವೇ ಆಶಯದಿಂದ ವರ್ಗವನ್ನು ಬೇರೆಯಾಗಿಸಿರುವು ದೆಂಬುದನ್ನೂ ಮನಗಾಣಬಹುದು. ಈ ಹಿನ್ನೆಲೆಯಲ್ಲಿ ಕಥೆಗಳ ಭಿನ್ನಪಾಠಗಳಿಂದ ಮೂಲಪ್ರತಿಯನ್ನು ಕಂಡುಹಿಡಿಯಲು ಹೊರಟ ಭೌಗೋಳಿಕ-ಚಾರಿತ್ರಿಕ ವಿಧಾನ ನಿಂತಿದೆ.

ಹೀಗೆ ಕ್ರಮಬದ್ದವಾಗಿ ಅಧ್ಯಯನ ಮಾಡಿದ ಮೇಲೆ ಪ್ರತಿ ಭಾಷೆಯಲ್ಲಿಯೂ ವರ್ಗ ಮತ್ತು ಆಶಯ ಸೂಚಿಗಳನ್ನು ಸಿದ್ದಪಡಿಸಬೇಕಾಗುತ್ತದೆ. ಈ ಸೂಚಿಗಳನ್ನು ಮೊದಲಬಾರಿಗೆ ಸಿದ್ಧಪಡಿಸಿದವರು ಪ್ರಖ್ಯಾತ ಜಾನಪದ ವಿದ್ವಾಂಸರಾದ ಆಂಟಿ ಆರ್ನೆ ಮತ್ತು ಸ್ಟಿತ್ ಥಾಂಸನ್ ಅವರು. ಅವರ ಈ ಅಧ್ಯಯನ ಕಥೆಯ ವರ್ಗೀಕರಣದಲ್ಲಿ ಹೊಸ ಅಧ್ಯಾಯವೊಂದನ್ನೇ ತೆರೆಯಿತು. ಅಲ್ಲದೆ, ಈಗ ಅವರ ಸೂಚಿಗಳು ಎಲ್ಲ ಕಡೆಯೂ ಜನಪ್ರಿಯವಾಗಿ ಬಳಕೆಯಾಗುತ್ತಿವೆ. ಇಂಥ ವ್ಯಾಪಕ ವರ್ಗೀಕರಣದ ಅವಶ್ಯಕತೆಯನ್ನು ಮೊದಲ ಬಾರಿಗೆ ಕಂಡುಕೊಂಡವರು ಕಾರ್ಲೆ ಕ್ರೊಹ್ನ. ಆತ ಇದರ ಪುರ್ಣ ಜವಾಬ್ದಾರಿಯನ್ನು ಆಂಟಿ ಆರ್ನೆಗೆ ವಹಿಸಿದ. ಆರ್ನೆ ದೊರೆತಿರುವ ಎಲ್ಲ ಕಥೆಗಳ ಅಭ್ಯಾಸದಿಂದ ವರ್ಗಗಳನ್ನು ಪಟ್ಟಿಮಾಡಿದ. ಇದರಿಂದ ಕಥೆಗಳ ಮೂಲರೂಪವನ್ನು ನಿರ್ಧರಿಸಲು ಸಾಧ್ಯವಾಯಿತು. ಜನಪದ ಕಥೆಗಳು ಸಮಗ್ರವಾಗಿ ಸಿಕ್ಕುವ ವರೆಗೆ ವರ್ಗಸೂಚಿ (ಟೈಪ್ ಇಂಡೆಕ್ಸ್‌) ಬೆಳೆಯುತ್ತ ಹೋಗುತ್ತದೆ. ಹೊಸದು ಸಿಕ್ಕಿದಂತೆಲ್ಲ ಅದಕ್ಕೆ ಸೇರಿಸುತ್ತ ಹೋಗಬೇಕಾಗುತ್ತದೆ. ಆರ್ನೆ ಬಹಳವಾಗಿ ಶ್ರಮಿಸಿ ಇದನ್ನು ಒಂದು ನೆಲೆಗೆ ತಂದ. ಆದರೆ ಅದನ್ನು ಪ್ರಕಟಪಡಿಸುವ ಮೊದಲೆ, ಫಿನ್ಲೆಂಡಿನ ಈ ವಿದ್ವಾಂಸ 1923ರಲ್ಲಿ ತೀರಿಕೊಂಡ. ಆಮೇಲೆ ಈ ಕೆಲಸವನ್ನು ಸ್ಟಿತ್ ಥಾಂಸನ್ಗೆ ವಹಿಸಿಕೊಡಲಾಯಿತು. ಥಾಂಸನ್ ವರ್ಗಸೂಚಿಯನ್ನು ಇನ್ನಷ್ಟು ವಿಸ್ತರಿಸಿ 1928ರಲ್ಲಿ ದಿ ಟೈಪ್ಸ್‌ ಆಫ್ ದಿ ಪೋಕ್ ಟೇಲ್ ಎಂಬ ಹೆಸರಿನಲ್ಲಿ ಗ್ರಂಥವೊಂದು ಪ್ರಕಟವಾಗಲು ನೆರವಾದ.

ವರ್ಗಸೂಚಿಯಿಂದ ಹಲವು ರೀತಿಯ ಉಪಯೋಗಗಳಿವೆ. ಅಪಾರ ಜನಪದ ಕಥೆಗಳ ಉಗ್ರಾಣವಾಗಿರುವ ನಿಶ್ಚಿತ ಪ್ರದೇಶವೊಂದರ ಸಾಂಪ್ರದಾಯಿಕ ಕಥನ ಪರಿವೀಕ್ಷಣೆಗೆ ಅಡಿಪಾಯ ಹಾಕುವ ಉದ್ದೇಶದಲ್ಲಿ ವರ್ಗಸೂಚಿ ಅವಶ್ಯವಾಗುತ್ತದೆ. ವರ್ಗವೊಂದರ ಎಲ್ಲ ಪಾಠಾಂತರಗಳು ಅನುವಂಶೀಯ ಸಂಬಂಧವನ್ನು ಪಡೆದಿರುವುದನ್ನು ಇದು ಸೂಚಿಸುತ್ತದೆ. ಇದಲ್ಲದೆ ಮೂಲಭೂತವಾಗಿ ಕಥಾವರ್ಗಗಳು ಎಷ್ಟಿವೆ. ಯಾವ ರೀತಿಯಲ್ಲಿವೆ ಎಂಬೆಲ್ಲ ಅಂಶಗಳನ್ನು ಸಾಧಾರಪಡಿಸಲು ವರ್ಗ ಸೂಚಿಯಂಥ ಕೃತಿ ತೀರ ಉಪಯುಕ್ತವಾಗುತ್ತದೆ. ಮುಂದಿನ ಯಾವುದೇ ಅಧ್ಯಯನಕ್ಕೆ ಇದು ಮೂಲಸಾಮಗ್ರಿಗಳನ್ನು ಒದಗಿಸುವ ಆಕರ ಗ್ರಂಥವಾಗಿ ಉಳಿದುಕೊಳ್ಳುತ್ತದೆ

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಥಾವರ್ಗ&oldid=670712" ಇಂದ ಪಡೆಯಲ್ಪಟ್ಟಿದೆ