ಕಣಕುಂಬಿ

ವಿಕಿಪೀಡಿಯ ಇಂದ
Jump to navigation Jump to search

ಕಣಕುಂಬಿ[ಬದಲಾಯಿಸಿ]

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಒಂದು ಗ್ರಾಮ. ಖಾನಾಪುರದಿಂದ 38ಕಿಮೀ ದೂರದಲ್ಲಿದೆ. ಇದು ದಟ್ಟವಾದ ಕಾಡಿನಲ್ಲಿರುವ ಸುಂದರ ಸ್ಥಳ. ಕುಲ್ಲಕ ಎಂಬ ಮುನಿ ಇಲ್ಲಿ ಧ್ಯಾನ ಮಾಡುತ್ತಿದ್ದಾಗ ಅವನ ಕುಂಭದಿಂದ ಪವಿತ್ರ ಜಲ ಹರಿದುದರಿಂದ ಈ ಊರ ಹೆಸರು ಕುಲಕುಂಬಿ ಎಂದಾಯಿತಂತೆ. ಸ್ಥಳೀಯರು ಈಗಲೂ ಇದನ್ನು ಕುಲಕುಂಬಿs ಎಂದೇ ಕರೆಯುವರು. ಈ ಊರ ಹೊರಗೆ ಮಲಪ್ರಭಾ ನದಿಯ ಉಗಮ ಸ್ಥಾನವಿದೆ. ಅಲ್ಲಿ ಮಹಾದೇವ ಮತ್ತು ರಾಮೇಶ್ವರ ದೇವಾಲಯಗಳಿವೆ. ಮಹಾದೇವ ಮಂದಿರ ಇತ್ತಿಚೆಗೆ ನಿರ್ಮಿಸಲ್ಪಟ್ಟಿದ್ದು, ಗರ್ಭಗೃಹ ವಿಶಾಲವಾದ ಪ್ರಾಂಗಣ ಮತ್ತು ಮುಖಮಂಟಪ ಗಳನ್ನೊಳಗೊಂಡಿದೆ. ಗರ್ಭಗೃಹದ ನಾಲ್ಕು ಮೂಲೆಗಳಲ್ಲೂ ಬೆಣಚುಕಲ್ಲಿನ ರಾಷ್ಟ್ರಕೂಟ ಶೈಲಿಯಲ್ಲಿರುವ ಕಂಬಗಳಿದ್ದು, ಅವುಗಳ ಮೇಲೆ ಕಲಶಗಳ ಕೆತ್ತನೆಯಿದೆ. ಅರ್ಧ ವರ್ತುಲಾಕಾರದ ನಕ್ಷೆ ಹೊಂದಿದ ವಣಿ ಈ ಪ್ರಾಂಗಣದಲ್ಲಿದೆ. ನವರಂಗದ ಕಂಬಗಳು ವರ್ತುಲಾಕಾರವಾಗಿದ್ದು, ಕೆಂಪು ಮರುಳುಕಲ್ಲಿನಿಂದ ಕೂಡಿವೆ. ಗರ್ಭಗೃಹದ ಎಡಪ್ರವೇಶ ದ್ವಾರದಲ್ಲಿ ರೇವರಿತು ಖಂಡೋಬಾ, ಕಾಳಭೈರವ ಗಣಪತಿ ಮೂರ್ತಿಗಳಿವೆ. ಪ್ರದಕ್ಷಿಣಾ ಪಥದಲ್ಲಿರುವ ಮಾಡಿನಲ್ಲಿ ದೇವತೆಯ ಕಂಚಿನ ಮೂರ್ತಿ ಇದೆ. ಮುಖಮಂಟಪದ ಹೊರಗೆ ಕೆರೆಯ ಸಮೀಪ ತೆರೆದ ಮಂಟಪವಿದೆ. ಹೊಸದಾಗಿ ಹೆಂಚಿನ ಛಾವಣಿ ಮಾಡಿ ನಿರ್ಮಿಸಲಾಗಿರುವ ಶಾಂತೇರಿ ದೇವಾಲಯದ ಗರ್ಭಗೃಹದಲ್ಲಿ ಗಜಲಕ್ಷ್ಮಿ ಮೂರ್ತಿಯಿದೆ. ಈ ಗರ್ಭಗೃಹದಲ್ಲಿ ಮಹಿಷಮರ್ದಿನಿ, ದುರ್ಗಾಮೂರ್ತಿಗಳ ಎರಡು ವೀರಗಲ್ಲುಗಳೂ ಇವೆ. ಈ ದೇವಾಲಯದ ಮುಂದೆ ಒಂದು ಕೆರೆಯಿದ್ದು ಅದು ಮಲಪ್ರಭಾ ನದಿಯ ಮೂಲವೆಂದು ಪ್ರತೀತಿ. ಕೆರೆಯ ಮುಂದೆ ಗಣಪತಿಯ ದೇವಾಲಯವಿದೆ. ಈ ದೇವಾಲಯದ ಸ್ವಲ್ಪ ಅಂತರದಲ್ಲಿ ತೀರ್ಥವಿರುವ ಸ್ಥಳವಿದ್ದು, ಅಲ್ಲಿ ಚಿಕ್ಕ ಹಳ್ಳವಿದ್ದು ಅದರಲ್ಲಿ ಗುರುವು ಮಕರರಾಶಿ ಪ್ರವೇಶಿಸಿದ ಮುಹೂರ್ತದಲ್ಲಿ ನೀರು ಹಾಲಿನ ಬಣ್ಣದಲ್ಲಿರುವುದೆಂದು ಹೇಳಲಾಗಿದೆ. ಆಗ ಇಲ್ಲಿ ಜಾತ್ರೆ ನಡೆಯುವುದು. ಇಲ್ಲಿನ ನೀರಿನ ಹರಿವು ಅಂತರಗಾಮಿಯಾಗಿದೆ.[೧]

ದೇವಾಲಯಗಳು[ಬದಲಾಯಿಸಿ]

ಮಹಾದೇವ ದೇವಾಲಯದ ಹಿಂಬದಿಯಲ್ಲಿ ರಾಮೇಶ್ವರ ದೇವಾಲಯವಿದ್ದು, ಇದು ಮರಳುಗಲ್ಲಿನ ರಚನೆಯಾಗಿದೆ. ಗರ್ಭಗೃಹ ಮತ್ತು ವಿಶಾಲವಾದ ಅರ್ಧವರ್ತುಲಾಕಾರದ ಚಾವಣಿವುಳ್ಳ ಪ್ರಾಂಗಣವಿದೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ಇಲ್ಲಿಯ ಪ್ರವೇಶದ್ವಾರದ ಬಲಬದಿಗೆ ಗಣಪತಿ ಮೂರ್ತಿ ಮತ್ತು ಮಹಾಸತಿ ಕಲ್ಲುಗಳಿವೆ. ಮಲ್ಲವ್ವಳು ಸತಿ ಹೋದ ಬಗ್ಗೆ ಮಾಹಿತಿ ಇದೆ. ಇದರ ಹಿಂದೆ ಸದ ಎಂಬ ಗ್ರಾಮ ಕಣಕುಂಬಿಯಿಂದ 5ಕಿಮೀ ದೂರದಲ್ಲಿದ್ದು ಖೋರ್ಲಾ ದಾರಿಯಲ್ಲಿದೆ. ಇದು ಅತ್ಯಂತ ಎತ್ತರ ಪ್ರದೇಶವಾಗಿದ್ದು, ಇಲ್ಲಿಯ ಕೋಟೆಯನ್ನು ಶಿವಾಜಿ ಕಟ್ಟಿಸಿದನೆಂದು ಪ್ರತೀತಿ. ಒಂದು ಹಳೆಯ ಪಿsರಂಗಿ ತೋಪು ಕೋಟೆಯೊಳಗೆ ಕಂಡುಬರುತ್ತದೆ. ಇಲ್ಲಿ ಭಗವತಿ ದೇವಾಲಯವಿದೆ. ಇಲ್ಲಿರುವ ಮರಾಠರು ತಮ್ಮ ಕೆಲವು ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆಂದು ತಿಳಿದುಬರುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. https://www.tripadvisor.in/LocationPhotoDirectLink-g737165-d6955918-i130665920-Shree_Mauli_Devi_Temple-Belgaum_Karnataka.html
  2. https://www.tripadvisor.in/LocationPhotoDirectLink-g737165-d6955918-i130665920-Shree_Mauli_Devi_Temple-Belgaum_Karnataka.html
"https://kn.wikipedia.org/w/index.php?title=ಕಣಕುಂಬಿ&oldid=924625" ಇಂದ ಪಡೆಯಲ್ಪಟ್ಟಿದೆ