ಕಡ್ಫೀಸಿಸ್ 1
ಪ್ರಾಚೀನ ಭಾರತವನ್ನಾಳುತ್ತಿದ್ದ ಕುಶಾನ[೧]ವಂಶದ ಮೊದಲನೆಯ ಪ್ರಖ್ಯಾತ ದೊರೆ.
ಇತಿಹಾಸ
[ಬದಲಾಯಿಸಿ]ಚೀನೀ ತುರ್ಕಿಸ್ತಾನದ ಭಾಗವಾದ ಕಾನ್ಸುವಿನಿಂದ ಯೂ-ಚಿ ಪಂಗಡದ ನಾಡಿನ ಐದು ಪ್ರಾಂತ್ಯಗಳಲ್ಲೊಂದಾದ ಕೀ-ಷ್ವಾಂಗ್ ಅಥವಾ ಕುಶಾನದ ಒಡೆಯನಾದ[೨] ಕೈಯೊಟ್ಸಿಯೊ-ಕಿಯೊವೇ ಉಳಿದ ನಾಲ್ಕು ಪ್ರಾಂತ್ಯಗಳನ್ನೂ ಹತ್ತಿಕ್ಕಿ ಐದಕ್ಕೂ ಒಡೆಯನಾದ. ಆತನ ಮಗನೇ ಯೆನ್-ಕಾವೊ-ಚಿನ್. ಈತ ಬಹುಶಃ ಈಗಿನ ಪಂಜಾಬ್ ಪ್ರದೇಶವಾದ ಟೀನ್-ಚೌವನ್ನು ಗೆದ್ದು ಅದನ್ನು ಆಳಲು ಅಧಿಕಾರಿಯೊಬ್ಬನನ್ನು ನೇಮಿಸಿದ. ಹೀಗೆ ಪ್ರಬಲವಾದ ಕುಶಾನವಂಶದ ಒಂದನೆಯ ಕಡ್ಫೀಸಿಸನಿಗೆ, ಕುಜುಲ ಕಡ್ಫೀಸಿಸ್, ಕುಜುಲಕರ ಕಡ್ಫೀಸಿಸ್ ಎಂಬ ಹೆಸರುಗಳೂ ಇದ್ದುವು. ಕುಜುಲ ಮತ್ತು ಕುಜುಲಕರ ಎಂಬವು ಈತನ ಬಿರುದುಗಳಿರಬೇಕೆಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಕೈಯೊ-ಟ್ಸಿಯೊ-ಕಿಯೊವೇ ಒಂದನೆಯ ಕಡ್ಫೀಸಿಸ್ ಆಗಿದ್ದಿರಬೇಕೆಂಬ ಅಭಿಪ್ರಾಯವುಂಟು. ಈಚೆಗೆ ಈ ಅಭಿಪ್ರಾಯ ಮಾನ್ಯವಾಗಿಲ್ಲ. ಈತನ ಆಳ್ವಿಕೆಯ ಕಾಲದ ವಿಷಯವಾಗಿಯೂ ಭಿನ್ನಾಭಿಪ್ರಾಯಗಳಿವೆ. ಪ್ರ.ಶ. ೫೦ರ ವೇಳೆಗೆ ಈತನ ಆಳ್ವಿಕೆ ಕೊನೆಗೊಂಡಿತೆಂದು ಕೆಲಮಂದಿ ವಿದ್ವಾಂಸರ ಅಭಿಪ್ರಾಯ.
ಪ್ರ.ಶ. ೧೫-೬೫ರ ವರೆಗೆ ಆಳಿದನೆಂದೂ ಹೇಳಲಾಗಿದೆ. ಕುಜುಲ ಕಡ್ಫೀಸಿಸ್ ಪ್ರಾರಂಭದಲ್ಲಿ ಕಾಬೂಲಿನ ಕೊನೆಯ ಗ್ರೀಕ್ ದೊರೆಯಾದ ಹರ್ಮಿಯಸನ ಅಧೀನರಾಜನಾಗಿ ತನ್ನ ಆಳ್ವಿಕೆ ಪ್ರಾರಂಭಿಸಿದ್ದಿರಬೇಕು. ಹರ್ಮಿಯಸನ ಸಹೋದರಿಯನ್ನು ಕಡಫೀಸಿಸನ ಹಿರಿಯ ಸಂಬಂಧಿಯೊಬ್ಬ ವಿವಾಹವಾಗಿದ್ದನೆಂದು ತಿಳಿದುಬರುತ್ತದೆ. ಹರ್ಮಿಯಸನ ರಾಜ್ಯದ ಮೇಲೆ ಗೊಂಡೋಫನ್ಙೀಸ್ ಎಂಬ ಪಾರ್ಥಿಯನ್ ಆಕ್ರಮಣ ನಡೆಸಿದಾಗ ಹರ್ಮಿಯಸನಿಗೆ ಕಡ್ಫೀಸಿಸ್ ಸಹಾಯ ಮಾಡಿದ್ದಿರಬಹುದು. ಆದರೂ ಹರ್ಮಿಯಸ್ ಸೋತನೆಂದು ಕಾಣುತ್ತದೆ. ಸ್ವಲ್ಪ ಕಾಲದ ಮೇಲೆ, ಬಹುಶಃ ಗೊಂಡೋಫನ್ಙೀಸನ ಅನಂತರ, ಕಾಬೂಲ್ ಕಾಂದಹಾರಗಳೆರಡರಿಂದಲೂ ಪಾರ್ಥಿಯನ್ರನ್ನು ಈತ ಹೊರದೂಡಿ ಅವುಗಳ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದನೆನ್ನಬಹುದು. ಇವನ ರಾಜ್ಯ ಪರ್ಷಿಯ ಸಾಮ್ರಾಜ್ಯದ ಗಡಿಯಿಂದ ಭಾರತದವರೆಗೂ ವಿಸ್ತರಿಸಿತ್ತು. ಈತ ಅಚ್ಚು ಹಾಕಿಸಿದ ಬೆಳ್ಳಿ ಮತ್ತು ತಾಮ್ರಗಳ ನಾಣ್ಯಗಳ ಮೇಲೆ ಗ್ರೀಕ್ ಮತ್ತು ಖರೋಷ್ಠಿ ಲಿಪಿಗಳಲ್ಲಿ ಯವುಗ, ಕುಶಾನ, ಮಹಾರಾಜ, ರಾಜಾಧಿರಾಜ ಎಂಬ ಬಿರುದುಗಳನ್ನು ಕಾಣಬಹುದು.
ಧರ್ಮ
[ಬದಲಾಯಿಸಿ]ಈತ ಹೊಸ ಧರ್ಮವೊಂದನ್ನು - ಬಹುಶಃ ಬೌದ್ಧಧರ್ಮವನ್ನು-ಅವಲಂಬಿಸಿದನೆಂಬುದಕ್ಕೆ ಕೆಲವು ನಾಣ್ಯಗಳಲ್ಲಿ ಸೂಚನೆ ದೊರಕುತ್ತದೆ.
ನಿಧನ
[ಬದಲಾಯಿಸಿ]ಈತ 80ನೆಯ ವಯಸ್ಸಿನಲ್ಲಿ ಕಾಲವಾದ.
ಉಲ್ಲೇಖಗಳು
[ಬದಲಾಯಿಸಿ]- ↑ Rapson, "Indian coins of the British Museum", p.cvi
- ↑ "ಆರ್ಕೈವ್ ನಕಲು". Archived from the original on 2017-01-02. Retrieved 2016-10-20.