ಕಡೆತದ ಯಂತ್ರ
ಕಡೆತದ ಯಂತ್ರ
[ಬದಲಾಯಿಸಿ]ಪದಾರ್ಥವನ್ನು ಕಡೆಯಲು ಉಪಯೋಗಿಸುವ ಯಂತ್ರ : ಸಂರೂಪಣ (ಶೇಪಿಂಗ್) ಬೈರಿಗೆ ಮುಂತಾದ ಇನ್ನೂ ಅನೇಕ ಕಾರ್ಯಗಳನ್ನು ಮಾಡಬಲ್ಲುದು (ಲೇದ್). ಚರಕಿಯಂತ್ರ ಪರ್ಯಾಯ ಪದ, ಸಾಮಾನ್ಯ ಯಂತ್ರವನ್ನು ಪುನರಾವೃತ್ತಿಯ (ರೆಪಿಟಿಷನ್) ಕಾರ್ಯಗಳಿಗೆ ಉಪಯೋಗಿಸುವುದಿಲ್ಲ. ವಸ್ತುವನ್ನು ಎರಡು ಕೇಂದ್ರಗಳ ನಡುವೆ ಹಿಡಿದು ಅನೇಕ ಸುತ್ತು ಬಿಗಿದ ಹುರಿಯ ಚಲನೆಯಿಂದ ತಿರುಗಿಸಿ ಆಯುಧವನ್ನು ವಸ್ತುವಿಗೆ ಹಿಡಿದು ಕಡೆಯುವ ಕ್ರಿಯೆಯನ್ನು ಮೊದಲ ಕಾಲದಲ್ಲಿ ಜರುಗಿಸುತ್ತಿದ್ದರು. ಕ್ರಮೇಣ ವಿದ್ಯುತ್ ಮೋಟಾರಿನ ಸಹಾಯದಿಂದ ಚಲನೆಯನ್ನು ಪಡೆಯುವುದು ವಾಡಿಕೆಯಾಯಿತು. ಆಯುಧಗಳನ್ನು ಕೈಯಲ್ಲಿ ಹಿಡಿದರೂ ಅವನ್ನು ಒರಗಿನ ಮೇಲೆ ಆನಿಸುವಂತೆ ಸೂಕ್ತ ಮಾರ್ಪಾಡಾಯಿತು; ಅನೇಕ ಜವಗಳನ್ನು (ಸ್ಪೀಡ್ಸ್) ಪಡೆಯಲು ಮೆಟ್ಟಲುರಾಟೆಗಳು ಬಂದುವು (ಸ್ಟೆಪ್ಡ್ ಪುಲ್ಲೀಸ್). ಹೀಗೆಯೇ ಮುಂದುವರಿದು ಸ್ಕ್ರೂ ಕಡೆಯಲು ಮತ್ತು ಇತರ ಕ್ರಿಯೆಗಳನ್ನು ನಡೆಸಲು ಸೂಕ್ತ ಮಾರ್ಪಾಡಾಯಿತು. ಒಂದೇ ರೀತಿಯ ವಸ್ತುವನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚು ಶೀಘ್ರವಾಗಿ ಹಾಗೂ ಕರಾರುವಾಕ್ಕಾಗಿ ತಯಾರಿಸಲು ಕ್ಯಾಪ್ಸ್ಟನ್, ಟರೆಟ್ ಶೀರ್ಷಿಕೆಗಳ ಜೋಡಣೆಯಾಯಿತು. ಅಂದರೆ ಕಡೆತ ಯಂತ್ರದ ವ್ಯಾಪ್ತಿ, ಅನುಕೂಲತೆ ಮತ್ತು ನಿಖರತೆ ಹೆಚ್ಚಿದಂತೆ ಅದರ ಸಂಕೀರ್ಣತೆಯೂ ಹೆಚ್ಚಿತು.
ಕಡೆತಯಂತ್ರದ ವಿವರಗಳು
[ಬದಲಾಯಿಸಿ]ಕಡೆತಯಂತ್ರದ ಪೀಠವನ್ನು ಎರಕದ ಕಬ್ಬಿಣದಲ್ಲಿ ಹೊಯ್ದು ಅದರ ಮೇಲ್ಭಾಗವನ್ನು ನುಣುಪು ಮಾಡುತ್ತಾರೆ. ಪೀಠದ ಎಡಭಾಗದ ಕೊನೆಯಲ್ಲಿ ಅಚಲ ಶೀರ್ಷಕ ಮತ್ತು ಬಲತುದಿಯಲ್ಲಿ ಚಲಶೀರ್ಷಕವೆಂಬ ಭಾಗಗಳಿವೆ. ಇವುಗಳ ನಡುವೆ ಮುಂದೊಯ್ಯುವ ಸ್ಕ್ರೂವಿನ ಸಹಾಯದಿಂದ ಪೀಠದ ಉದ್ದಕ್ಕೂ ಚಲಿಸಬಲ್ಲ ಹಲ್ಲಣವೆಂಬ (ಸ್ಯಾಡಲ್) ಭಾಗವಿದೆ.
ಅಚಲ ಶೀರ್ಷಕ
[ಬದಲಾಯಿಸಿ]ಇದರಲ್ಲಿ ಮೆಟ್ಟಲು ರಾಟೆಗಳು, ದಂಡ (ಸ್ಪಿಂಡಲ್) ಮುಂತಾದ ಭಾಗಗಳು ಇವೆ. ವಿದ್ಯುತ್ ಮೋಟಾರಿನಿಂದ ಬೆಲ್ಟಿನ ಮೂಲಕ ಮೆಟ್ಟಲುರಾಟೆ ಚಲನೆಯನ್ನು ಪಡೆದು ಅದನ್ನು ದಂಡಕ್ಕೆ ವರ್ಗಾಯಿಸುತ್ತದೆ. ಇದನ್ನು ಗ್ರಾಹಕ ತಟ್ಟೆ ಪಡೆದು, ದಂಡದ ಕೊನೆಗಿರುವ ಚಲಕೇಂದ್ರಕಕ್ಕೆ ಜೋಡಿಸಿರುವ ಕಾಯಕವಸ್ತುವನ್ನು ತಿರುಗಿಸುತ್ತದೆ. ಗ್ರಾಹಕ ತಟ್ಟೆಯ ಬದಲು ಚಕ್ಕನ್ನು ಉಪಯೋಗಿಸಬಹುದು.
ಚಲ ಶೀರ್ಷಕ
[ಬದಲಾಯಿಸಿ]ಇದು ಪೀಠದ ಉದ್ದಕ್ಕೂ ಚಲಿಸಬಲ್ಲುದು. ಈ ಶೀರ್ಷಕ ಕಾಯಕ ವಸ್ತುವಿನ ಇನ್ನೊಂದು ತುದಿಯನ್ನು ಹಿಡಿದುಕೊಂಡರೂ ತಿರುಗುವಿಕೆಗೆ ಅಡ್ಡಿ ಮಾಡುವುದಿಲ್ಲ. ಕಡತ ಯಂತ್ರದಲ್ಲಿ ಚಲಶೀರ್ಷಕ ಕೈ ಬಿಡಲಾರದ ಭಾಗವೇನೂ ಅಲ್ಲ. ಇದರ ಅಕ್ಷವನ್ನು ಯಂತ್ರದ ಅಕ್ಷದಿಂದ ಸರಿಯುವಂತೆ ಮಾಡಿ ಸಂವಾಟ ಕಡೆಯುವಿಕೆಯನ್ನು ಮಾಡಬಹುದು.
ಹಲ್ಲಣ
[ಬದಲಾಯಿಸಿ]ಜಾರು ಪೀಠ (ಕ್ರಾಸ್ಸ್ಲೈಡ್) ಮತ್ತು ಆಯುಧ ಪೀಠವನ್ನು ಒಳಗೊಂಡಿರುವ ಭಾಗ. ಜಾರುಪೀಠ ಯಂತ್ರ ಪೀಠಕ್ಕೆ ಅಡ್ಡಲಾಗಿ ಚಲಿಸಬಲ್ಲುದು. ಆಯುಧವನ್ನು ಅಗತ್ಯಕ್ಕೆ ತಕ್ಕಂತೆ ಕಾಯಕದ ಪದಾರ್ಥದೊಳಕ್ಕೆ ದಬ್ಬಲು ಅನುಕೂಲತೆ ಇದೆ. ಆಯುಧವನ್ನು ಯಾವುದೇ ಕೋನಕ್ಕಾದರೂ ಬದಲಾಯಿಸುವ ಏರ್ಪಾಡು ಉಂಟು.
ಸ್ಕ್ರೂಗಳನ್ನು ಕಡೆಯಲು ಹಲ್ಲಣದಲ್ಲಿರುವ ಕ್ಲಚ್ಚನ್ನು ಮುಂದೊಯ್ಯುವ ಸ್ಕ್ರೂಗೆ ಒತ್ತಿದಾಗ ಹಲ್ಲಣಕ್ಕೆ ಸ್ವಯಂಚಾಲಿತ ಚಲನೆ ದೊರೆಯುತ್ತದೆ. ಕಡೆಯಬೇಕಾಗಿರುವ ಸ್ಕ್ರೂನಲ್ಲಿರಬೇಕಾದ ಹುರಿಗಳ (ತ್ರೆಡ್) ಸಂಖ್ಯೆಗನುಗುಣವಾಗಿ ಸೂಕ್ತ ಗೇರುಗಳನ್ನು ಜೋಡಿಸಬೇಕು. ಇವುಗಳ ಜೋಡಣೆಯಿರುವ ಭಾಗಕ್ಕೆ ಗೇರುಗಳ ಪೆಟ್ಟಿಗೆ ಎಂದು ಹೆಸರು. ಸಾಮಾನ್ಯ ಕಡತಯಂತ್ರದ ಕೆಲವು ಮುಖ್ಯ ಅಳತೆಗಳು ಎರಡು-1 ಕಡೆತಯಂತ್ರದ ಕೇಂದ್ರಗಳ ನಡುವೆ ಪಡೆಯಬಹುದಾದ ಗರಿಷ್ಠ ಅಂತರ, 2 ಕಡೆತ ಯಂತ್ರದ ಕೇಂದ್ರದಿಂದ ಪೀಠದ ಮೇಲ್ಭಾಗಕ್ಕಿರುವ ಅಂತರ, ಅಚಲ ಶೀರ್ಷಕದ ಕೆಳಗೆ ಪೀಠವನ್ನು ಕತ್ತರಿಸಿ ಇದನ್ನು ಹೆಚ್ಚಿಸಬಹುದು.
ವಿವಿಧ ಕಡೆತದ ಯಂತ್ರಗಳ ಹೆಸರುಗಳು ಹೀಗಿವೆ-ಮರ ಕಡಿಯುವ ಯಂತ್ರ; ಸಾಮಾನ್ಯ ಯಂತ್ರ; ಜಾರು, ಪೃಷ್ಠಕ ಮತ್ತು ಸ್ಕ್ರೂ ಕಡೆಯುವ ಯಂತ್ರ; ಸ್ವಯಂಚಾಲಿತ ಯಂತ್ರ; ಟಿರೆಟ್ ಯಂತ್ರ; ಕ್ಯಾಪ್ಸ್ಟನ್ ಯಂತ್ರ[೧][೨]
ಉಲ್ಲೇಖಗಳು
[ಬದಲಾಯಿಸಿ]- ↑ https://books.google.co.uk/books?id=8muzBgAAQBAJ&pg=PA903&lpg=PA903&dq=John+Wilkinson+First+Boring&source=bl&ots=XYMH7aafk5&sig=LeuXPCpykAgR3suLTml6pLYikrs&hl=en&sa=X&ved=0CDcQ6AEwCDgKahUKEwiau9jb3qfIAhVCVhQKHcCEBjs#v=onepage&q=John%20Wilkinson%20First%20Boring&f=false Archived 2015-10-09 ವೇಬ್ಯಾಕ್ ಮೆಷಿನ್ ನಲ್ಲಿ.
- ↑ https://en.wikipedia.org/wiki/Boring_(manufacturing)#CITEREFKalpakjian2001