ಕಡಿಮೆ ಸಿಲಿಕಾಂಶಶಿಲೆಗಳು
ಅತ್ಯಲ್ಪ ಸಿಲಿಕಾಂಶಶಿಲೆಗಳು ೪೫% ಕ್ಕಿಂತ ಕಡಿಮೆ ಸಿಲಿಕಾಂಶವಿರುವ ಶಿಲೆಗಳಿಗೆ ಕಡಿಮೆ ಸಿಲಿಕಾಂಶಶಿಲೆ ಎಂಬ ಹೆಸರಿದೆ (ಅಲ್ಟ್ರ ಬೇಸಿಕ್ ರಾಕ್ಸ್ ಅಥವಾ ಅಲ್ಟ್ರಾಮಫಿಕ್ ರಾಕ್ಸ್). ಸಾಮಾನ್ಯವಾಗಿ ಈ ಶಿಲೆಗಳ ಬಣ್ಣ ಕಪ್ಪು. ಇವುಗಳಲ್ಲಿ ಫೆಲ್ಸ್ಪ್‍ರ್ ಖನಿಜಗಳಿರುವುದಿಲ್ಲ. ಒಂದು ವೇಳೆ ಇದ್ದರೂ ಪ್ರಮಾಣ ಬಹಳ ಅಲ್ಪ. ಕ್ಯಾಲ್ಸಿಯಂ ಅಧಿಕವಿರುವ ವಿಧಗಳು ಮಾತ್ರ ಇರುತ್ತವೆ. ಈ ವರ್ಗದ ಶಿಲೆಗಳಲ್ಲಿ ಮುಖ್ಯವಾಗಿ ಆಲಿವೀನ್ ಪೈರಾಕ್ಸೀನ್ ಮತ್ತು ಅದುರು ಖನಿಜಗಳಿವೆ. ಹಾರನ್‍ಬ್ಲೆಂಡ್ ಮತ್ತು ಅಭ್ರಕಗಳು ಕೆಲವು ಬಗೆಯಲ್ಲಿರುತ್ತವೆ. ನೆಫೆಲೀನ್, ಮೆಲಿಲೈಟ್-ಮುಂತಾದ ಫೆಲ್ಸ್ಪ್‍ತಾಯಿಡಲ್ ಖನಿಜಗಳು ಇರುವುದುಂಟು. ರೂಪಾಂತರಗೊಂಡ ಶಿಲೆಗಳಲ್ಲಿ ಸರ್ಪೆಂಟೇನ್ ಮತ್ತು ಟಾಲ್ಕ್, ಕ್ಲೋರೈಟ್ ಮತ್ತು ಟ್ರೆಮೊಲೈಟ್-ಮುಂತಾದ ಜಲಸಂಯೋಜಿತ ಖನಿಜಗಳೂ ಇರುತ್ತವೆ.
ವಿಧಗಳು
[ಬದಲಾಯಿಸಿ]ಮೇಲೆ ತಿಳಿಸಿದ ಬೇರೆ ಬೇರೆ ಖನಿಜಗಳಿರುವ ಅಥವಾ ಖನಿಜಗಳು ವಿವಿಧ ಪ್ರಮಾಣದಲ್ಲಿರುವ ಶಿಲೆಗಳಿಗೆ ಬೇರೆ ಬೇರೆ ಹೆಸರಿದೆ. ಈ ಗುಂಪಿನ ಶಿಲೆಗಳಲ್ಲಿ ಸ್ಥೂಲಕಣಶಿಲೆಗಳು. ಸೂಕ್ಷ್ಮಕಣಶಿಲೆಗಳು ಎಂದು ಎರಡು ಗುಂಪು. ಸ್ಥೂಲಕಣಶಿಲೆಗಳಲ್ಲಿ 1. ಡನೈಟ್, 2. ಪೆರಿಡೊಟೈಟ್, 3. ಪೈರಾಕ್ಸಿನೈಟ್, 4. ಫೆಲ್ಸ್ಪ್‍ತಾಯಿಡಲ್ ಖನಿಜಗಳಿರುವ ಶಿಲೆಗಳು ಮತ್ತು 5. ಸರ್ಪೆಂಟಿನೈಟ್ ಇವು ಮುಖ್ಯವಾಗಿವೆ.
ರಚನೆ
[ಬದಲಾಯಿಸಿ]ಅತ್ಯಲ್ಪ ಸಿಲಿಕಾಂಶಶಿಲೆಗಳು ರೂಪುಗೊಳ್ಳುವಿಕೆ ಈ ರೀತಿಯಲ್ಲಿ ಆಗುತ್ತದೆ. ಅತ್ಯಲ್ಪ ಸಿಲಿಕಾಂಶಶಿಲೆಗಳು ಸಾಮಾನ್ಯವಾಗಿ ದಪ್ಪವಾದ ಸಿಲ್‍ಗಳ (ಉದಾ: ಗ್ರೀನ್‍ಲೆಂಡಿನಲ್ಲಿರುವುವು) ಮತ್ತು ಲ್ಯಾಕೊಲಿತ್‍ಗಳ ಹರವಿನ ತಳಭಾಗದಲ್ಲಿ (ಉದಾ: ದಕ್ಷಿಣ ಆಫ್ರಿಕ ಪ್ರದೇಶದಲ್ಲಿರುವ ಪ್ರಖ್ಯಾತವಾದ ಬುಷಾವೆಲ್ಡ್ ಶಿಲಾತೊಡಕು, ಉತ್ತರ ಅಮೆರಿಕದಲ್ಲಿರುವ ಸ್ಟಿಲ್‍ವಾಟರ್ ತೊಡಕು ಮತ್ತು ಒರಿಸ್ಸಾದಲ್ಲಿರುವ ಕಿಯೊಂಜಹಾರ್ ಶಿಲಾತೊಡಕು-ಮುಂತಾದುವು) ರೂಪುಗೊಳ್ಳುತ್ತವೆ. ಶಿಲಾರಸ ಸ್ಫಟಿಕೀಕರಿಸುವಾಗ ಮೊದಲು ರೂಪುಗೊಂಡ ಹರಳುಗಳು ತಳದಲ್ಲಿ ಶೇಖರವಾಗುವುದರಿಂದ ಇವು ಆಗಿವೆ. ಮೊದಲು ಸ್ಫಟಿಕೀಕರಿಸಿ ಶೇಖರವಾದ ಪದರುಗಳು ಪುನಃ ದ್ರವಿಸಿ ಬೇರೆ ಬೇರೆ ಕಡೆ ಡೈಕುಗಳ ರೂಪದಲ್ಲಿ ನಿಂತಾಗ ಇನ್ನೂ ಕೆಲವು ರೂಪುಗೊಂಡವು. ಉಳಿದ ಕೆಲವು ಮೊದಲೆ ರೂಪುಗೊಂಡಿದ್ದ ಮತ್ತು ಅಧಿಕ ಸಿಲಿಕಾಂಶಗಳಿರುವ ಶಿಲೆಗಳ ಮೆಟಸೊಮ್ಯಾಟಿಕ್ ರೂಪಾಂತರದಿಂದಾದುವು. ಮಸೂರಾಕಾರದ ದೊಡ್ಡ ಸರ್ಪೆಂಟಿನೈಟ್ ಹರವುಗಳು ಪರ್ವತೋತ್ಪತ್ತಿ ಕಾರ್ಯಾಚರಣೆಯ ಪ್ರಾರಂಭ ದೆಸೆಯಲ್ಲಿ ಅಂತಸ್ಸರಣವಾದ ಡನೈಟ್ ಮತ್ತು ಪೆರಿಡೊಟೈಟ್‍ಗಳ ರೂಪಾಂತರದಿಂದಾದುವು. ಇದರಿಂದ ಈ ಶಿಲಾವರ್ಗದ ಹರವಿಗೂ ಪರ್ವತಪಂಕ್ತಿಗಳ ಓಟಕ್ಕೂ ಇರುವ ನಿಕಟ ಸಂಬಂಧವನ್ನು ಬೆನ್ಸನ್ ಮತ್ತು ಹೆಸ್ ತಿಳಿಸಿರುವರು. ಡಾ.ಎಂ.ಎಸ್.ಕೃಷ್ಣನ್ ಭಾರತದಲ್ಲಿರುವ ಅತ್ಯಲ್ಪ ಸಿಲಿಕಾಂಶಶಿಲಾಹರವನ್ನು ವಿವರಿಸುತ್ತ, ಅವು 5 ಪರ್ವತೋತ್ಪತ್ತಿ ಕಾಲಗಳನ್ನು ಸೂಚಿಸುತ್ತವೆಂದು ತಿಳಿಸಿರುವರು. ಭಾರತದಲ್ಲಿ ಈ ಶಿಲೆಗಳು ಮಯನ್ಮಾರ್-ಭಾರತದ ಗಡಿ ಪ್ರದೇಶ ಹಾಗೂ ಪೂರ್ವಉತ್ತರ ಭಾರತದಲ್ಲಿ ಕಂಡುಬರುತ್ತದೆ.[೧]
ಉಲ್ಲೇಖ
[ಬದಲಾಯಿಸಿ]