ಕಡಲ ಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಕಡಲ ಹಕ್ಕಿ

ಕಡಲ ಹಕ್ಕಿ[ಬದಲಾಯಿಸಿ]

ಪೆಲಿಕನಿಫಾರ್ಮಿಸ್ ಗಣದ ಸೂಲಿಡೀ ಕುಟುಂಬಕ್ಕೆ ಸೇರಿದ ಮೋರಸ್ ಎಂಬ ಒಂದು ಸಮುದ್ರವಾಸಿ ಪಕ್ಷಿಜಾತಿ. ರೂಢಿಯಲ್ಲಿವನ್ನು ಗ್ರ್ಯಾನೆಟ್ ಎನ್ನುತ್ತಾರೆ. ಈ ಜಾತಿಯಲ್ಲಿ ಮೂರು ಪ್ರಮುಖ ಪ್ರಭೇದಗಳಿವೆ. ಇವುಗಳಲ್ಲಿ ಮೋರ್ಯಸ್ ಬಸಾನಸ್ ಎಂಬ ಪ್ರಭೇದ ಮುಖ್ಯವಾದುದು. ಬ್ರಿಟನಿನ ಉತ್ತರ ಭಾಗ, ಐಸ್ಲೆಂಡ್, ಪೆರು ಮುಂತಾದಲ್ಲಿ ಇದು ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತದೆ. ಇದು ಗಾತ್ರದಲ್ಲಿ ಬಹು ದೊಡ್ಡದಾದ ಹಕ್ಕಿ. 0.9144 ಮೀ ಉದ್ದ ಇದೆ. ಬಲಿಷ್ಠವೂ ಹೌದು. ಬಣ್ಣ ಕಣ್ಣಿಗೆ ತಿವಿಯುವಷ್ಟು ಬಿಳುಪು. ರೆಕ್ಕೆ ಅಗಲಿಸಿದಾಗ ತುದಿಯಿಂದ ತುದಿಗೆ 1.8288 ಮೀ ಅಗಲ. ತಲೆಯ ಮೇಲ್ಭಾಗ ಹಳದಿ. ಕಂಠಪ್ರದೇಶ ಮತ್ತು ರೆಕ್ಕೆಗಳ ತುದಿಯಲ್ಲಿ ನೀಳಾಕೃತಿಯ ಮಚ್ಚೆಗಳಿವೆ. ಕೊಕ್ಕು ಉದ್ದವಾಗಿ, ಶಕ್ತಿಯುತವಾಗಿ ಈಟಿಯ ಮೊನೆಯಂತೆ ಹರಿತವಾಗಿದೆ. ಜಾಲ ಪಾದವಿರುವುದರಿಂದ ಹಕ್ಕಿ ಚೆನ್ನಾಗಿ ಈಜುತ್ತದೆ. ಚಳಿಗಾಲದಲ್ಲಿ ದಕ್ಷಿಣದಿಂದ ಉತ್ತರ ಮತ್ತು ಪಶ್ಷಿಮ ಆಫ್ರಿಕಗಳ ಸಮುದ್ರ ಹಾಗೂ ಮೆಕ್ಸಿಕೊ ಕೊಲ್ಲಿಗಳತ್ತ ಇದು ಧಾವಿಸುವುದುಂಟು. ತನ್ನ ಹಾಗೂ ಮರಿಗಳ ವಾಸಕ್ಕಾಗಿ ಕಡಲಿನ ಜೊಂಡು, ಹಲ್ಲು ಮುಂತಾದುವುಗಳ ನೆರವಿನಿಂದ ಎತ್ತರವಾದ ಕಲ್ಲಿನ ಮೇಲೆ ಇದು ಗೂಡು ಕಟ್ಟುತ್ತದೆ. ಗೂಡಿನ ನಿರ್ಮಾಣ ಕಾರ್ಯದಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ ಭಾಗವಹಿಸುತ್ತವೆ. ಕಡಲ ಹಕ್ಕಿ ಮಾಂಸಾಹಾರಿ. ಕಡಲಿನಲ್ಲಿ ದೊರೆಯುವ ಮೀನುಗಳೇ ಇದರ ಆಹಾರ. ಇದರ ದೃಷ್ಟಿ ಅತ್ಯಂತ ತೀಕ್ಷ್ಣವಾದುದು. ತೀರ ಎತ್ತರದಲ್ಲಿ ಹಾರುತ್ತಿರುವಾಗಲೇ ನೀರಿನಲ್ಲಿ ಸಂಚರಿಸುವ ಮೀನುಗಳನ್ನು ಗುರುತಿಸುತ್ತದೆ. ನೀರಿನಿಂದ ಸು. 30.48 ಮೀಗಳ ಎತ್ತರದಿಂದ, ರೆಕ್ಕೆಗಳನ್ನು ಅರೆಮುಚ್ಚಿ ಬಂದೂಕಿನ ಗುಂಡಿನಂತೆ ರಭಸದಿಂದ ನೇರವಾಗಿ ನುಗ್ಗಿ ಮೀನುಗಳನ್ನು ಹಿಡಿಯುವ ದೃಶ್ಯ ರಮಣೀಯವಾಗಿರುತ್ತದೆ. ಈ ಕ್ರಿಯೆಯಲ್ಲಿ ಇದು ಮೀಂಚುಳ್ಳಿಯನ್ನು (ಕಿಂಗ್ ಫಿಷರ್) ಹೋಲುತ್ತದೆ. ಆಹಾರಕ್ಕಾಗಿ ಇದು ತನ್ನ ನಿವಾಸಸ್ಥಾನದಿಂದ ಸು. 160.9344 ಕಿಮೀ ಗಳಷ್ಟು ದೂರ ಸಂಚರಿಸುತ್ತದೆ. ಇದರ ಹಾರಾಟದಲ್ಲಿ ರಾಜಗಾಂಭೀರ್ಯವಿದೆ. ಇದು ಸಾಮಾನ್ಯವಾಗಿ ಅಕ್ಟೋಬರ್ 10ನೆಯ ತಾರೀಖಿನ ಸುಮಾರಿಗೆ ವಲಸೆ ಹೋಗುತ್ತದೆ. ಮೂರು ವರ್ಷ ತುಂಬಿದ ಹೆಣ್ಣುಹಕ್ಕಿ ಗರ್ಭ ಧರಿಸುತ್ತದೆ. ವಸಂತಮಾಸದ ಪ್ರಾರಂಭದಲ್ಲಿ ಒಂದು ಅಥವಾ ಎರಡು ತಿಳಿನೀಲಿ ಬಣ್ಣದ ಮೊಟ್ಟೆಗಳನ್ನಿಡುತ್ತದೆ. ಗಂಡು ಮತ್ತು ಹೆಣ್ಣು ಒಂದಾದ ಮೇಲೊಂದರಂತೆ 44 ದಿನಗಳ ಕಾಲ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ತಂದೆತಾಯಿಗಳಿಗಿಂತ ಮರಿಹಕ್ಕಿಗೆ ವಲಸೆಹೋಗುವ ಗೀಳು ಹೆಚ್ಚು.[೧]

ಮೋರಸ್ ಕೆಪೆನ್ಸಿಸ್[ಬದಲಾಯಿಸಿ]

ಕಡಲ ಹಕ್ಕಿಯ ಇನ್ನೊಂದು ಬಗೆಯಾದ ಮೋರಸ್ ಕೆಪೆನ್ಸಿಸ್ ಎಂಬುದು ದಕ್ಷಿಣ ಅಮೆರಿಕದಲ್ಲಿ ವಾಸಿಸುತ್ತದೆ. ಇವಲ್ಲದೆ ಸೂಲಿಡೀ ಕುಟುಂಬದ ಸೂಲ ಜಾತಿಯ ಪ್ರಭೇದಗಳಿಗೂ ಕಡಲ ಹಕ್ಕಿ ಎನ್ನುವ ರೂಢಿಯಿದೆ. ಬೂಬಿಗಳೆಂದೂ ಕರೆಯಲಾಗುವ ಇವುಗಳಲ್ಲಿ ಸೂಲ ನೆಬುಕ್ಸಿಯೈ (ನೀಲಿ ಪಾದದ ಬೂಬಿ), ಸೂಲ ಲ್ಯೂಕೊಗ್ಯಾಸ್ಟರ್ (ಕಂದುಬೂಬಿ), ಸೂಲ ಸೂಲ (ಕೆಂಪು ಪಾದದ ಬೂಬಿ) ಮತ್ತು ಸೂಲ ಬೋಟಿ ಎಂಬುವು ಮುಖ್ಯವಾದುವು. ಇವುಗಳಲ್ಲಿ ಕೊನೆಯದು ಮೊಟ್ಟೆಯಿಡಲು ಹಿಂದೂ ಮಹಾಸಾಗರದ ಅಸಂಪ್ಷನ್ ಮತ್ತು ಕ್ರಿಸ್ಮಸ್ ದ್ವೀಪಗಳಿಗೆ ಹೋಗುತ್ತದೆ.[೨][೩]

ಉಲ್ಲೇಖಗಳು[ಬದಲಾಯಿಸಿ]

  1. http://www.int-res.com/articles/meps/127/m127p001.pdf
  2. https://www.ncbi.nlm.nih.gov/pmc/articles/PMC515296/
  3. http://www.sciencedirect.com/science/article/pii/S1055790303000988?via%3Dihub