ವಿಷಯಕ್ಕೆ ಹೋಗು

ಕಡಲ ಸೌತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಲ ಸೌತೆ

ಕಡಲ ಸೌತೆ[ಬದಲಾಯಿಸಿ]

ಕಂಟಕ ಚರ್ಮಿವಂಶದ ಹೋಲೋತುರಾಯ್ಡಿಯ ವರ್ಗದ ಪ್ರಾಣಿಗಳಿಗಿರುವ ಜನಪ್ರಿಯ ಹೆಸರು (ಸೀ ಕುಕುಂಬರ್). ಇವುಗಳ ದೇಹ ಮೃದು, ನೀಳ ಹಾಗೂ ಸ್ನಾಯುಮಯವಾದದ್ದು ಆಕಾರ ಸೌತೆಕಾಯಿಯಂತೆ. ಹೆಚ್ಚು ಚಟುವಟಿಕೆಗಳನ್ನು ತೋರಿಸದೆ ಸಾಗರದ ತಳದಲ್ಲಿ ಜಡವಸ್ತುವಿನಂತೆ ಇದು ಬಿದ್ದಿರುತ್ತದೆ. ಮಣ್ಣಿನಲ್ಲಿ ಬಿಲ ತೋಡಿ ಹುದುಗಿರುವುದೂ ಉಂಟು. ಬಣ್ಣ ಸಾಮಾನ್ಯವಾಗಿ ಆಕರ್ಷಕವಲ್ಲದ ಕಪ್ಪು, ಬೂದು, ಕಂದು. ಅಪರೂಪಕ್ಕೆ ಉಜ್ವಲ ವರ್ಣದಿಂದ ಕೂಡಿರುವುದೂ ಉಂಟು. ದೇಹದ ಒಂದು ಕೊನೆಯಲ್ಲಿ ಬಾಯಿ, ಅದಕ್ಕೆ ಅಭಿಮುಖವಾಗಿ ಮತ್ತೊಂದು ಕೊನೆಯಲ್ಲಿ ಗುದ. ಬಾಯಿ ಸುತ್ತ ಒಳಕ್ಕೆ ಎಳೆದುಕೊಳ್ಳಬಹುದಾದ ಕೋಡುಬಳ್ಳಿಗಳಿವೆ. ಈ ಬಳ್ಳಿಗಳು ಗಭೀರ ಸಾಗರದ ಅಡಿಯಲ್ಲಿ ವಾಸಿಸುವ ಎಲಾಸಿಪೋಡದ ಸರಳ ನಳಿಕೆ ಪಾದಗಳಂತಿವೆ. ಆದರೆ ಬೇರೆ ಕಡಲ ಸೌತೆಗಳಲ್ಲಿ ಅವು ಹೆಚ್ಚು ಕವಲುಗಳಿಂದ ಕೂಡಿರುತ್ತವೆ. ಕೋಡುಬಳ್ಳಿಗಳು ವಾಸ್ತವವಾಗಿ ಮಾರ್ಪಾಟಾದ ನಳಿಕೆ ಪಾದಗಳೇ. ದೇಹದ ಮೇಲೆ ಐದು ಜೊತೆ ನಳಿಕೆಪಾದಗಳು ಐದು ಸಾಲುಗಳಲ್ಲಿ ಒಂದು ಕೊನೆಯಿಂದ ಮತ್ತೊಂದು ಕೊನೆಯ ವರೆಗೆ ಹಬ್ಬಿರುತ್ತವೆ ಇವುಗಳೇ ಚಲನೆಯಲ್ಲಿ ನೆರವಾಗುವ ಅಂಗಗಳು. ದೇಹದ ಗೋಡೆ ಮೃದು, ಸ್ನಾಯುಮಯ. ಸ್ನಾಯುಗಳಲ್ಲಿ ಸಣ್ಣ ಸಣ್ಣ ಸೂಕ್ಷ್ಮದರ್ಶೀಯ ಸ್ಪಿಕ್ಯೂಲುಗಳು ಹುದುಗಿರುತ್ತವೆ. ಈ ಗುಂಪಿನ ವರ್ಗೀಕರಣದಲ್ಲಿ ಸ್ಪಿಕ್ಯೂಲುಗಳು ಹೆಚ್ಚು ಸಹಾಯಕಾರಿಯಾಗಿವೆ. ಸೀಲೋಮ್ ಎಂಬ ದೇಹಾವಕಾಶ ವಿಸ್ತಾರವಾಗಿದೆ. ರೆಕ್ಟಮಿನ ಗೋಡೆಯಿಂದ ಎರಡು ದೊಡ್ಡ ಶ್ವಾಸನವೃಕ್ಷಗಳು ಬೆಳೆದಿರುತ್ತವೆ. ಕಡಲ ಸೌತೆಗಳು ಆಹಾರ ಸೇವಿಸುವಾಗ ಪರಿಸರದ ಮಣ್ಣನ್ನು ನುಂಗುವುದರಿಂದ ಪಚನನಾಳದಲ್ಲಿ ಮಣ್ಣು ತುಂಬಿರುತ್ತದೆ.[೧][೨][೩]

ಉಪಯೋಗಗಳು[ಬದಲಾಯಿಸಿ]

ಚೀನ, ಮಲಯ, ಫಿಲಿಪೀನ್ಸ್‌, ಆಸ್ಟ್ರೇಲಿಯಗಳಲ್ಲಿ ಇವುಗಳಿಂದ ಖಾದ್ಯವಸ್ತುಗಳನ್ನು ಹೆಚ್ಚಾಗಿ ಸಾರನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಇವನ್ನು ಮೊದಲು ಹದಮಾಡಿ ಉಪ್ಪುನೀರಿನಲ್ಲಿ ಕುದಿಸಿ ಒಣಗಿಸಿಟ್ಟುಕೊಂಡಿದ್ದು ಊಟಕ್ಕೆ ಬಡಿಸುವ ಮುನ್ನ ಮತ್ತೆ ಬೇಯಿಸುತ್ತಾರೆ.[೪][೫]

ಉಲ್ಲೇಖಗಳು[ಬದಲಾಯಿಸಿ]

  1. http://docsdrive.com/pdfs/ansinet/pjbs/2003/2068-2072.pdf
  2. "ಆರ್ಕೈವ್ ನಕಲು". Archived from the original on 2011-09-03. Retrieved 2016-10-21.
  3. http://journals.plos.org/plosone/article?id=10.1371/journal.pone.0033311
  4. "ಆರ್ಕೈವ್ ನಕಲು". Archived from the original on 2011-09-03. Retrieved 2016-10-21.
  5. http://journals.plos.org/plosone/article?id=10.1371/journal.pone.0033311