ಕಡಲ ಚಿಟ್ಟೆ

ವಿಕಿಪೀಡಿಯ ಇಂದ
Jump to navigation Jump to search
ಒಂದು ಜಾತಿಯ ಕಡಲ ಚಿಟ್ಟೆ
ಕಡಲ ಚಿಟ್ಟೆ

ಕಡಲ ಚಿಟ್ಟೆ[ಬದಲಾಯಿಸಿ]

ತೇಲುಜೀವನಕ್ಕೆ ಹೊಂದಿಕೊಂಡು ಸಾಗರದಲ್ಲಿ ಸ್ವೇಚ್ಛೆಯಾಗಿ ಈಜಾಡುವ ಹಲವಾರು ಜಾತಿಯ ಜಠರಪಾದಿ ಮೃದ್ವಂಗಿಗಳು (ಸೀ ಬಟರ್ಫ್ಲೈ). ಗ್ಯಾಸ್ಟ್ರಪೊಡ ವರ್ಗದ ಒಪಿಸ್ತೊಬ್ರಾಂಕಿಯ ಗಣದಲ್ಲಿನ ಟಿರಾಪೊಡ ಉಪಗಣಕ್ಕೆ ಸೇರಿವೆ. ಈ ಉಪಗಣ ಮೃದ್ವಂಗಿಗಳ ಗುಂಪಿನಿಂದ ಬೇರೆಯಾದುದೆಂದು ಒಂದು ಕಾಲದಲ್ಲಿ ಭಾವಿಸಲಾಗಿತ್ತು. ಆದರೆ ಕಡಲ ಚಿಟ್ಟೆಗಳಲ್ಲಿ ಮೃದ್ವಂಗಿ ವಂಶದ ಕೆಲವು ಲಕ್ಷಣಗಳನ್ನು ಕಂಡುಹಿಡಿದ ಮೇಲೆ ಇವನ್ನು ಒಪಿಸ್ತೊಬ್ರಾಂಕಿಯ ಗಣಕ್ಕೆ ಸೇರಿಸಲಾಯಿತು. ಅಲ್ಲದೆ ಇವಕ್ಕೂ ಕಡಲ ಮೊಲಗಳಿಗೂ (ನೋಡಿ) ಹಲವಾರು ಸಮಾನ ಗುಣಲಕ್ಷಣಗಳಿವೆ.[೧]

ಕಡಲ ಚಿಟ್ಟೆಲಕ್ಷಣಗಳು[ಬದಲಾಯಿಸಿ]

ಕಡಲ ಚಿಟ್ಟೆಗಳ ವಿಶಿಷ್ಟ ಲಕ್ಷಣವೆಂದರೆ ಅವುಗಳ ಬಾಯಿ ಮತ್ತು ಕುತ್ತಿಗೆಯ ಇಕ್ಕಡೆಗಳಲ್ಲಿ ಈಜುರೆಕ್ಕೆಗಳಾಗಿ ಮಾರ್ಪಾಟಾಗಿರುವ ಅಗಲವಾದ ಎರಡು ಪಾಶರ್ವ್‌ ಪಾದಗಳು (ಪ್ಯಾರಪೋಡಿಯ). ಚಿಟ್ಟೆಯ ರೆಕ್ಕೆಯಂತಿರುವ ಇವುಗಳ ನೆರವಿನಿಂದ ಕಡಲ ಚಿಟ್ಟೆಗಳು ನೀರಿನಲ್ಲಿ ಸರಾಗವಾಗಿ ಈಜಬಲ್ಲವು. ಅಲ್ಲದೆ ಇವಕ್ಕೆ ಸುಂದರವಾದ ಬಣ್ಣವೂ ಇದೆ. ಈ ಕಾರಣಗಳಿಂದಾಗಿ ಇವಕ್ಕೆ ಕಡಲ ಚಿಟ್ಟೆಗಳೆಂಬ ಹೆಸರು ಬಂದಿದೆ. ಕಡಲ ಚಿಟ್ಟೆಗಳಿಗೆ ಸಾಗರದ ಸೂಕ್ಷ್ಮಜೀವಿಗಳೇ ಆಹಾರ.ಈಜುರೆಕ್ಕೆಗಳ ಮೇಲಿರುವ ಸೂಕ್ಷ್ಮವಾದ ಕೂದಲುಗಳ (ಸಿಲಿಯ) ಚಲನೆಯಿಂದ ಆಹಾರವನ್ನು ತಮ್ಮ ಬಳಿಗೆ ಸೆಳೆದುಕೊಳ್ಳುತ್ತವೆ. ಕೆಲವು ಕಡಲ ಚಿಟ್ಟೆಗಳಲ್ಲಿ ತೆಳು ಹಾಗೂ ಪಾರದರ್ಶಕವಾದ ಚಿಪ್ಪಿದೆ. ಉಳಿದವುಗಳಲ್ಲಿ ಇಲ್ಲ. ಇದರ ಆಧಾರದ ಮೇಲೆ ಟಿರಾಪೊಡ ಉಪಗಣವನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಟಿರಾಪೊಡ ತೀಕೊಸೊಮ್ಯಾಟ ಮತ್ತು ಟಿರಾಷೊಡ ಜಿಮ್ನೊಸೊಮ್ಯಾಟ.[೨]

ಟಿರಾಪೊಡ ತೀಕೊಸೊಮ್ಯಾಟ[ಬದಲಾಯಿಸಿ]

ಟಿರಾಪೊಡ ತೀಕೊಸೊಮ್ಯಾಟದ ಪ್ರಾಣಿಗಳಲ್ಲಿ ಮ್ಯಾಂಟಲ್ ಕುಹರ, ಚಿಪ್ಪು ಮತ್ತು ಒಂದು ಜೊತೆ ಕ್ಷೀಣವಾದ ಕೋಡುಬಳ್ಳಿಗಳು (ಟೆಂಟಕಲ್ಸ್‌) ಇವೆ. ಆದರೆ ತಲೆಯಾಗಲಿ ಕಣ್ಣುಗಳಾಗಲಿ ಸ್ಪಷ್ಟವಾಗಿಲ್ಲ. ಈಜುರೆಕ್ಕೆಗಳ ಅಂಚು ದೇಹದ ಮುಂತುದಿಯಲ್ಲಿ ಪರಸ್ಪರ ಕೂಡಿಕೊಂಡಿವೆ. ಉಸಿರಾಟದ ಅಂಗವಾಗಿ ಒಂದೇ ಒಂದು ಟಿನಿಡಿಯಮ್ (ಅಥವಾ ಕಿವಿರು) ಇದೆ. ಗುದದ್ವಾರ ಮ್ಯಾಂಟಲ್ ಕುಹರದ ಬಲಭಾಗದಲ್ಲಿದೆ. ಈ ಗುಂಪಿನ ಪ್ರಾಣಿಗಳು ಮುಖ್ಯವಾಗಿ ಸಾಗರದ ಸೂಕ್ಷ್ಮ ಜೀವಿಗಳನ್ನು ತಿಂದು ಬದುಕುತ್ತವೆ. ಇವನ್ನು ಲಿಮಾನಿಸಿಡೀ, ಕ್ಯಾವೊಲಿನಿಡೀ ಮತ್ತು ಸಿಂಬುಲಿಡೀ ಎಂಬ ಮೂರು ಕುಟುಂಬಗಳಾಗಿ ವಿಂಗಡಿಸಿದ್ದಾರೆ. ಲಿಮಾನಿಸಿಡೀ ಕುಟುಂಬದ ಪ್ರಾಣಿಗಳಲ್ಲಿ ಚಿಪ್ಪು ಎಡಕ್ಕೆ ಸುರುಳಿ ಸುತ್ತಿಕೊಂಡಿರುವುದೂ ಅದಕ್ಕೆ ಮುಚ್ಚಳವಿರುವುದೂ ಮ್ಯಾಂಟಲ್ ಕುಹರ ದೇಹದ ಹಿಂಭಾಗದಲ್ಲಿರುವುದೂ ಮುಖ್ಯ ಲಕ್ಷಣಗಳು. ಉದಾಹರಣೆ : ಲಿಮಾಸಿನ. ಕ್ಯಾವೊಲಿನಿಡೀ ಕುಟುಂಬದ ಪ್ರಾಣಿಗಳ ಚಿಪ್ಪು ನೀಳವಾಗಿ ಎರಡು ತಟ್ಟೆಗಳಿಂದ ಕೂಡಿದೆ. ಉದಾಹರಣೆ: ಕ್ಯಾವೊಲಿನಿಯ. ಸಿಂಬುಲಿಡೀ ಕುಟುಂಬದಲ್ಲಿ ವಯಸ್ಕ ಪ್ರಾಣಿಗೆ ಚಿಪ್ಪು ಇಲ್ಲ. ಆದರೆ ಸಂಯೋಜಿ ಅಂಗಾಂಶ (ಕನೆಕ್ಟಿವ್ ಟಿಷ್ಯು :) ಚರ್ಮದ ತಳದಲ್ಲಿ ಗಟ್ಟಿಯಾಗಿ ಮಿಥ್ಯಶಂಖವಾಗಿ ಮಾರ್ಪಟ್ಟಿದೆ. ಉದಾಹರಣೆ: ಸಿಂಬುಲಿಯ.[೩][೪]

ಟಿರಾಷೊಡ ಜಿಮ್ನೊಸೊಮ್ಯಾಟ[ಬದಲಾಯಿಸಿ]

ಟಿರಾಪೊಡದ ಎರಡನೆಯ ಗುಂಪಾದ ಟಿರಾಪೊಡ ಜಿಮ್ನೊಸೊಮ್ಯಾಟದಲ್ಲಿ ಮ್ಯಾಂಟಲ್ ಕುಹರ ಮತ್ತು ಚಿಪ್ಪು ಇಲ್ಲ. ತಲೆ ಸುಸ್ಪಷ್ಟವಾಗಿದೆ. ಅದರ ಮೇಲೆ ಎರಡು ಜೊತೆ ಕೋಡುಬಳ್ಳಿಗಳಿವೆ. ಈಜುರೆಕ್ಕೆಗಳಿಗೂ ತಲೆಗೂ ಸಂಬಂಧವಿಲ್ಲ. ಈ ಗುಂಪಿನ ಪ್ರಾಣಿಗಳು ಮುಖ್ಯವಾಗಿ ಮಾಂಸಾಹಾರಿಗಳು. ಈ ಗುಂಪಿನಲ್ಲಿ ನಾಲ್ಕು ಮುಖ್ಯ ಕುಟುಂಬಗಳಿವೆ: ನ್ಯೂಮೋಡರ್ಮಾಟಿಡೀ, ಕ್ಲಿಯೊಸೋಪ್ಸಿಡೀ, ನೋಟೊಬ್ರಾಂಕಿಡೀ ಮತ್ತು ಕ್ಲಿಯೋನಿಡೀ. ನ್ಯೂಮೋಡರ್ಮಾಟಿಡೀಯಲ್ಲಿ ಮೂಲಕಿವಿರು ಇಲ್ಲ. ಆದರೆ ದೇಹದ ಹಿಂಭಾಗದಲ್ಲಿ ಅನುಷಂಗಿಕ ಕಿವಿರು ಇವೆ. ಕ್ಲಿಯೋನಿಡೀ ಕುಟುಂಬದ ಪ್ರಾಣಿಗಳಲ್ಲಿ ಯಾವ ಬಗೆಯ ಕಿವಿರುಗಳೂ ಇಲ್ಲ. ಇವುಗಳ ಗಾತ್ರ ಸಾಮಾನ್ಯವಾಗಿ ಸಣ್ಣದು. ಕೆಲವನ್ನಂತೂ ಸೂಕ್ಷ್ಮದರ್ಶಕ ದಲ್ಲೇ ನೋಡಬೇಕು. ಉದಾಹರಣೆ : ನ್ಯೂಮೋಡರ್ಮ ಮತ್ತು ಕ್ಲಿಯೋನ್ ಇತ್ಯಾದಿ.[೫]

ಸಾಗರದ ಕೆಲವೆಡೆ ಕಡಲ ಚಿಟ್ಟೆಗಳು ಅತ್ಯಧಿಕ ಸಂಖ್ಯೆಯಲ್ಲಿ ಕಂಡುಬರುತ್ತವೆ. ಇಂಥಲ್ಲಿ ಇವು ರಾತ್ರಿಯ ವೇಳೆ ಮೇಲ್ಪದರದ ನೀರಿನಲ್ಲಿದ್ದು ಹಗಲು ಬಿಸಿಲಿದ್ದಾಗ ತಳಭಾಗಕ್ಕೆ ಸೇರುತ್ತವೆ. ಹೆರ್ರಿಂಗ್ ಮೀನುಗಳಿಗೆ ತಿಮಿಂಗಿಲಗಳಿಗೆ ಆಹಾರ ಇವು. ತೀಕೊಸೊಮ್ಯಾಟದ ಕಡಲ ಚಿಟ್ಟೆಗಳು ಅಸಂಖ್ಯಾತವಾಗಿರುವ ಕಡೆಗಳಲ್ಲಿ ಅವು ಸತ್ತು ಹೋದ ಮೇಲೆ ಅವುಗಳ ಚಿಪ್ಪುಗಳು ಸಾಗರದ ತಳಭಾಗದಲ್ಲಿ ಸಂಗ್ರಹವಾಗಿ ಟಿರಾಪೊಡ ಊಜ್ó ಅಥವಾ ಕಡಲ ಚಿಟ್ಟೆಯ ದಿಣ್ಣೆಗಳಾಗಿ ಪರಿಣಮಿಸುತ್ತವೆ.[೬] ==ಉಲ್ಲೇಖಗಳು

  1. https://en.wikipedia.org/wiki/Euthecosomata
  2. https://books.google.co.in/books?id=yIAfwz5cxPMC&pg=PA6&redir_esc=y
  3. https://books.google.co.in/books?id=yIAfwz5cxPMC&pg=PA6&redir_esc=y
  4. http://www.ourbreathingplanet.com/sea-butterfly/
  5. http://www.ourbreathingplanet.com/sea-butterfly/
  6. http://www.ourbreathingplanet.com/sea-butterfly/